Tuesday, 27th October 2020

ಏಳು ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದವರ ಬಿಡುಗಡೆ :ಜಿಲ್ಲಾಧಿಕಾರಿ ದೀಪಾ ಚೋಳನ್

ಧಾರವಾಡ
ಸರ್ಕಾರದ ಪರಿಷ್ಕತ ಮಾರ್ಗಸೂಚಿಗಳ ಪ್ರಕಾರ ಅತಿಹೆಚ್ಚು ಪ್ರಕರಣಗಳಿರುವ ರಾಜ್ಯಗಳಿಂದ ಆಗಮಿಸುವ ಜನರನ್ನು ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ ನಂತರ ಏಳುದಿನಗಳ ಹೋಂ ಕ್ವಾರಂಟೈನ್ ನಲ್ಲಿರಿಸಲಾಗುವುದು. ಇತರ ರಾಜ್ಯಗಳಿಂದ ಬರುವ ಜನರನ್ನು ನೇರವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗುವುದು.ಜಿಲ್ಲೆಯ ಸಾಂಸ್ಥಿಕ ಹಾಗೂ ಹೋಟೆಲ್ ಕ್ವಾರಂಟೈನ್ ನಲ್ಲಿ ಏಳುದಿನಗಳ ಅವಧಿ ಪೂರ್ಣಗೊಳಿಸಿರುವ ವ್ಯಕ್ತಿಗಳನ್ನು ಮತ್ತೊಂದು ಬಾರಿ ಕೋವಿಡ್ ತಪಾಸಣೆಗೊಳಪಡಿಸಿ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಸಾಂಸ್ಥಿಕ ಕ್ವಾರಂಟೈನ್ ಅವಧಿಯಲ್ಲಿ ಇಳಿಕೆಯಾಗಿದೆ. ಗರ್ಭಿಣಿಯರು,80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸೇರಿದಂತೆ,ವೈದ್ಯಕೀಯ ವೃತ್ತಿಪರರು, ರಕ್ಷಣಾ ಪಡೆಗಳ ಸಿಬ್ಬಂದಿಗೆ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲಾಗಿದೆ.ಈ ಮಾರ್ಗಸೂಚಿಗಳನ್ವಯ ಜಿಲ್ಲೆಗೆ ಮೇ.22 ರವರೆಗೆ ಆಗಮಿಸಿರುವ 1515 ಜನರಲ್ಲಿ ಏಳು ದಿನಗಳ ಸಾಂಸ್ಥಿಕ  ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ , ಕೋವಿಡ್ ನೆಗೆಟಿವ್ ಬಂದಿರುವ ಜನರನ್ನು ಬಿಡುಗಡೆ ಮಾಡಿ ಉಳಿದ ಏಳು ದಿನಗಳ ಹೋಂ ಕ್ವಾರಂಟೈನ್ ಪಾಲನೆಗೆ ಕ್ರಮವಹಿಸಬೇಕು ಎಂದರು.
ಖಾಸಗಿ ಆಸ್ಪತ್ರೆ,ಔಷಧಿ ಅಂಗಡಿಗಳ ವರದಿ ಆಧಾರದಲ್ಲಿ ಲಭ್ಯವಾಗುತ್ತಿರುವ ನೆಗಡಿ,ಕೆಮ್ಮು, ಜ್ವರ,ತೀವ್ರ ಉಸಿರಾಟದ ತೊಂದರೆ ಉಳ್ಳ ವ್ಯಕ್ತಿಗಳನ್ನು  ಕೋವಿಡ್ ತಪಾಸಣೆಗೆ ಒಳಪಡಿಸಿ, ಹೆಲ್ತ್ ವಾಚ್ ಆ್ಯಪ್ ಗೆ ಅಳವಡಿಸಬೇಕು. ಆರೋಗ್ಯ ಸೇತು ಆ್ಯಪ್ ನಲ್ಲಿ ದಾಖಲಾಗುವ ರೋಗಲಕ್ಷಣ ಇರುವ ವ್ಯಕ್ತಿಗಳನ್ನು ಗುರುತಿಸಿ ಪರೀಕ್ಷಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ, ಹು-ಧಾ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮದ್ ಜುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ , ಕಿಮ್ಸ್ ನ ಡಾ.ಲಕ್ಷ್ಮೀಕಾಂತ ಲೋಕರೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *