Thursday, 5th August 2021

ಕಟ್ಟುನಿಟ್ಟಿನ ಕ್ರಮಕ್ಕೆ ಸುರೇಶ್ ಕುಮಾರ್ ಸೂಚನೆ

ಚಾಮರಾಜನಗರ

ಜಿಲ್ಲೆಯಲ್ಲಿ ಕೋವಿಡ್-19ರ ತಡೆಗಾಗಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಮುಂದುವರೆಸುವಂತೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರು ಸೂಚನೆ ನೀಡಿದರು.

ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕಿನ ವಿವಿಧೆಡೆ ಕೋವಿಡ್-19ರ ತಡೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಹಿನ್ನೆಲೆಯಲ್ಲಿ ವಿವಿಧಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಕೊಳ್ಳೇಗಾಲ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರ ಆರೋಗ್ಯದ ಕಾಳಜಿಯಿಂದ ಘೋಷಿಸಲಾಗಿರುವ ಲಾಕ್‍ಡೌನ್‍ನ್ನು ಅತ್ಯಂತ ಪರಿಣಾಮಕಾರಿಯಾಗಿ ಮುಂದುವರೆಸಬೇಕು. ಆದರೆ ಇದೇ ಸಂದರ್ಭದಲ್ಲಿ ಜನರ ದಿನಬಳಕೆಯ ವಸ್ತುಗಳು, ಔಷಧ, ಆಹಾರಕ್ಕಾಗಿ ಯಾವುದೇ ಕೊರತೆ ಉಂಟಾಗಬಾರದು. ರಸಗೊಬ್ಬರ, ಕೃಷಿ ಪರಿಕರಗಳ ವ್ಯಾಪಾರಕ್ಕೆ ಅವಕಾಶ ಮುಂದುವರೆಸಬೇಕೆಂದರು.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರು ಲಭ್ಯವಾಗುತ್ತಿಲ್ಲವೆಂಬ ದೂರು ಕೇಳಿ ಬರುತ್ತಿದೆ. ನರ್ಸ್‍ಗಳ ಸೇವಾ ಕೊರತೆ ಬಗ್ಗೆಯೂ ಕೆಲವರು ತಮ್ಮ ಗಮನಕ್ಕೆ ತಂದಿದ್ದಾರೆ. ಇನ್ನುಮುಂದೆ ಇಂತಹ ಆರೋಪ, ದೂರುಗಳಿಗೆ ಅವಕಾಶವಾಗಬಾರದು. ಎಲ್ಲಾ ಸಮಯದಲ್ಲಿಯೂ ವೈದ್ಯರ ಸೇವೆ ಸಾರ್ವಜನಿಕರಿಗೆ ಲಭ್ಯವಾಗಬೇಕೆಂದು ಸಚಿವರು ಸೂಚನೆ ನೀಡಿದರು.

ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗಬಾರದು. ದಿನಬಳಕೆಯ ಸಾಮಗ್ರಿಗಳ ಬೆಲೆ ಏರಿಕೆಯಾಗಬಾರದು. ಪ್ರತಿ ಅಂಗಡಿಗಳಲ್ಲಿ ಸಾಮಗ್ರಿಗಳ ದರವನ್ನು ಪ್ರದರ್ಶಿಸಬೇಕು ಎಂದು ಉಸ್ತುವಾರಿ ಸಚಿವರಾದ ಸುರೇಶ್‍ಕುಮಾರ್ ತಿಳಿಸಿದರು.

ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ ಹನೂರು, ರಾಮಾಪುರ ಭಾಗಗಗಳಲ್ಲಿ ಕೆಲ ಔಷಧಗಳ ಕೊರತೆಯಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಹೀಗಾಗಿ ಅಗತ್ಯ ವಾಹನಗಳಿಗೆ ತೊಂದರೆಯಾಗಬಾರದು. ಪಡಿತರ ವಿತರಣೆಯೂ ಸಮರ್ಪಕವಾಗಿ ಸಿಗಬೇಕು ಎಂದು ತಿಳಿಸಿದರು.

ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ ಮಾಸ್ಕ್, ಸ್ಯಾನಿಟ್ಯಸರ್ ಕೊರತೆ ಇದೆ. ಈ ಎಲ್ಲವು ಸರಿಯಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅವಶ್ಯಕ ದಿನಬಳಕೆಯ ಸಾಮಗ್ರಿಗಳು ಜನರಿಗೆ ದೊರೆಯಬೇಕು. ಜನರ ಅಗತ್ಯ ಸೇವೆಗಳಿಗೆ ತೊಂದರೆ ಉಂಟಾಗಬಾರದು ಎಂದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ಅರ್. ರವಿ ಅವರು ದಿನಬಳಕೆಯ ವಸ್ತುಗಳು ಲಭ್ಯವಾಗಲು ಕ್ರಮ ವಹಿಸಲಾಗಿದೆ. ಅವಶ್ಯಕ ವಸ್ತುಗಳು ಕೃಷಿ ಉತ್ಪನ್ನ ಸಾಗಣಿಕೆಗೆ ಅವಕಾಶ ಮಾಡಕೊಡಲಾಗಿದೆ. ಕೃಷಿ ಪರಿಕರಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಮಾತನಾಡಿ ಇಂದಿರಾ ಕ್ಯಾಂಟಿನ್‍ನಲ್ಲಿ ಒಂದೇ ತೆರನಾದ ಉಪಹಾರ ನೀಡದೇ ಮೆನು ಬದಲಾಯಿಸಬೇಕು. ಜನರಿಗೆ ಎಲ್ಲಾ ರೀತಿಯ ಉಪಹಾರ ದೊರೆಯುವಂತಾಗಬೇಕು ಎಂದು ತಿಳಿಸಿದರು.
ಜನರ ಆರೋಗ್ಯ, ಆಹಾರ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಎಲ್ಲಾ ಸೌಕರ್ಯ ಒದಗಿಸಬೇಕು. ಯಾವುದೇ ಉದಾಸೀನ ಬೇಡ. ಒಟ್ಟಾರೆ ಕೊರೊನಾ ವೈರಸ್ ತಡೆಗಾಗಿ ಮುಂಜಾಗರೂಕತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಉಸ್ತುವಾರಿ ಸಚಿವರಾದ ಸುರೇಶ್‍ಕುಮಾರ್ ಅವರು ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಚ್.ಡಿ. ಆನಂದಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಉಪವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ ಇತರರು ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *