Wednesday, 5th August 2020

ಗುಣಮುಖರಾದ ಮೂವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಹಬ್ಬದ ವಾತಾವರಣ, ಚಪ್ಪಾಳೆ ತಟ್ಟಿದ ವೈದ್ಯರು, ಸಿಬ್ಬಂದಿ…

ಬಳ್ಳಾರಿ:
ಬಳ್ಳಾರಿ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಹಬ್ಬದ ವಾತಾವರಣ, ಕೊರೊನಾ ಆಸ್ಪತ್ರೆಯಾಗಿನಿಂದ ಇದ್ದ ಆತಂಕ,ದುಗುಡ,ಭಯದ ವಾತಾವರಣ ಮಾಯವಾಗಿ ಯುದ್ದಗೆದ್ದ ಸಂಭ್ರಮದ ರೀತಿಯಲ್ಲಿ ವೈದ್ಯರು,ವೈದ್ಯಕೀಯ ಸಿಬ್ಬಂದಿ ಅತ್ತಿಂದಿತ್ತ..ಇತ್ತಿಂದತ್ತ ಓಡಾಡುತ್ತಿದ್ದರು;ಇನ್ನೂ ಕೆಲವರು ಸಾಲಾಗಿ ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಲು ಸಿಬ್ಬಂದಿಯನ್ನು ರೆಡಿಮಾಡಿಸುತ್ತಿದ್ದರು.ಮತ್ತೆ ಕೆಲವರು ಹೂಗುಚ್ಛ,ರೇಷನ್ ಕಿಟ್ಟ್ ಇನ್ನೀತರ ಪರಿಕರಗಳನ್ನು ಒಪ್ಪವಾಗಿ ಜೋಡಿಸಲು ತಲ್ಲೀನರಾಗಿದ್ದರು…

ಇದು ಕಂಡುಬಂದಿದ್ದು, ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತನೆಯಾಗಿರುವ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ. ಕೊರೊನಾ ಪಾಸಿಟಿವ್ ಬಾಧಿತರಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರಲ್ಲಿ ಗುಣಮುಖ ಹೊಂದಿದ 3 ಜನರನ್ನು ಇನ್ನೂರಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆಗಳ ಸುರಿಮಳೆಯನ್ನು ಸುರಿಸುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ಗುಣಮುಖಹೊಂದಿದ 3 ಜನರು ಸಾವನ್ನೇ ಗೆದ್ದ ಸಂಭ್ರಮದ ರೀತಿಯಲ್ಲಿ ಹಾಗೂ ಚಿಕಿತ್ಸೆ ನೀಡಿದ ವೈದ್ಯರನ್ನು ಅತ್ಯಂತ ಧನ್ಯತಾ ಭಾವದಿಂದ ಕೈಮುಗಿದು “ನೀವಿಲ್ಲದಿದ್ದರೇ ನಾವಿರುತ್ತಿರಲಿಲ್ಲ; ನಿಮ್ಮೆಲ್ಲರ ಋಣ ನಾವು ತೀರಿಸಲಾರೇವು” ಎಂದು ಹೇಳುತ್ತ ಬರುತ್ತಿದ್ದರೇ;ಮತ್ತೊಂದೆಡೆ ಡಿಎಚ್‍ಒ,ಜಿಲ್ಲಾ ಶಸ್ತ್ರಚಿಕಿತ್ಸಕ ಸೇರಿದಂತೆ ವೈದ್ಯರು ಸಹ ಚಿಂತೆ ಬೇಡ ನಾವಿದ್ದೇವೆ;ಅರಾಮವಾಗಿರಿ,ಏನೇ ಆರೋಗ್ಯ ಸಮಸ್ಯೆಯಾದ್ರೂ ನಮ್ಮ ಗಮನಕ್ಕೆ ತನ್ನಿ ಅಂತ ಹೇಳುತ್ತಿರುವುದು ಕಂಡುಬಂದಿತು.

ಕೊರೊನಾ ಸೊಂಕಿಗೆ ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಿ-89,ಪಿ-91 ಮತ್ತು ಪಿ-141ರನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆ ಸಂದರ್ಭದಲ್ಲಿ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸುವುದರ ಜತೆಗೆ ಮರದ ಸಸಿಯೊಂದು ನೆನಪಿನ ಕಾಣಿಕೆಯಾಗಿ ನೀಡಲಾಯಿತು.

ಪಿ-89,ಪಿ-91 ಮತ್ತು ಪಿ-141ರಿಗೆ ಸಂಬಂಧಿಸಿದಂತೆ ಕೋವಿಡ್-19 ಟೆಸ್ಟ್‍ಗಳನ್ನು ಮಾಡಲಾಗಿದ್ದು, ಇವರ ಟೆಸ್ಟ್ ವರದಿ ನೆಗೆಟಿವ್ ಬಂದಿರುವ ಕಾರಣ ಮತ್ತು ಈ ಪರೀಕ್ಷೆಯ ವರದಿಯ ಆಧಾರದ ಮೇರೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಶಾಸ್ತ್ರ ವಿಭಾದ ವೈದ್ಯರು ರೋಗಿಗಳಿಗೆ ಫಿಟ್ ಇರುವುದಾಗಿ ಒಪ್ಪಿದೆಯೆಂದು ತಿಳಿಸಿದ್ದರಿಂದ ಡಿಸ್ಟಾರ್ಚ್ ಮಾಡಲು ನಿರ್ಧರಿಸಲಾಯಿತು. ಇವರೆಲ್ಲರು ಆರೋಗ್ಯಯುತವಾಗಿದ್ದಾರೆ. ಉಳಿದವರ ಆರೋಗ್ಯವು ಸುಧಾರಣೆಯಾಗುತ್ತಿದೆ. ಜಿಲ್ಲಾಡಳಿತ, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸುವುದಾಗಿ ಡಿಎಚ್‍ಒ ಡಾ.ಜನಾರ್ಧನ್ ಮತ್ತು ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದರು.
ಇವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಪ್ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ರ್ಯಾಪಿಡ್ ರಿಸ್ಪಾನ್ಸ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಿವೆ ಎಂದು ಅವರು ವಿವರಿಸಿದರು.

ಜಿಲ್ಲಾಡಳಿತದ ಪರವಾಗಿ ತಹಸೀಲ್ದಾರ್ ನಾಗರಾಜ ಅವರು ಮಾಸ್ಕ್,ಸ್ಯಾನಿಟೈಸರ್ಜ್ ಹಾಗೂ ಇನ್ನೀತರ ವೈದ್ಯಕೀಯ ಸಾಮಗ್ರಿಗಳು ಹಾಗೂ ರೇಶನ್‍ಕಿಟ್ ಈ ಸಂದರ್ಭದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ವಿಮ್ಸ್ ನಿರ್ದೇಶಕ ಡಾ. ದೇವಾನಂದ, ಐಎಂಎ ಅಧ್ಯಕ್ಷ ಡಾ.ಅರುಣ, ಪ್ರತಿನಿಧಿ ಡಾ.ಬಿ.ಕೆ. ಸುಂದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಡಾ. ಮರಿಯಂಬಿ, ಡಾ.ಇಂದ್ರಾಣಿ, ಡಾ.ಅನಿಲಕುಮಾರ್, ಈಶ್ವರ್ ದಾಸಪ್ಪನವರ್ ಸೇರಿದಂತೆ ಚಿಕಿತ್ಸೆ ನೀಡಿದ ವೈದ್ಯರು, ಆರೋಗ್ಯ ಸಿಬ್ಬಂದಿ ಮತ್ತಿತರರು.

Leave a Reply

Your email address will not be published. Required fields are marked *