Tuesday, 26th May 2020

ಚೀನಾದ ಜೈಲಿನಲ್ಲಿ 33 ವರ್ಷ ಘನಘೋರ ಚಿತ್ರಹಿಂಸೆ ಅನುಭವಿಸಿದವನ ಮುಂದೆ ಲಾಕ್ ಡೌನ್ ಯಾವ ಲೆಕ್ಕಾ?

ನೂರೆಂಟು ವಿಶ್ವ

– ವಿಶ್ವೇಶ್ವರ ಭಟ

ಪಾಲ್ಡೆನ್ ಗ್ಯಾತ್ಸೋ !

ನನಗೇಕೆ ಈ ಸಮಯದಲ್ಲಿ ಈತನ ನೆನಪಾಯಿತು ಎಂದು ತುಸು ಆಶ್ಚರ್ಯವಾಯಿತು. ನಾನು ಇವನನ್ನು ಮರೆತೇ ಬಿಟ್ಟಿದ್ದೆ. ಆದರೆ ಈ ಲಾಕ್ ಡೌನ್ ಕಾಲದಲ್ಲಿ ಮೊನ್ನೆ ದಕ್ಷಿಣ ಆಫ್ರಿಕಾದ ’ಮಹಾತ್ಮಾ ಗಾಂಧಿ’ ಎಂದೇ ಪ್ರಸಿದ್ಧರಾದ ನೆಲ್ಸನ್ ಮಂಡೇಲಾ ಅವರನ್ನು ನೆನಪಿಸಿಕೊಳ್ಳುವಾಗ, ಈ ಪಾಲ್ಡೆನ್ ಗ್ಯಾತ್ಸೋ ಅಚಾನಕ್ ಆಗಿ ನೆನಪಾದ.

ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಗೆ ನಾವು ಪಡಬಾರದ ಹಿಂಸೆ ಅನುಭವಿಸುತ್ತಿದ್ದೇವೆ, ಆದರೆ ವರ್ಣಭೇದ ನೀತಿ ವಿರುದ್ಧ ಹೋರಾಡಿದ ಮಂಡೇಲಾ ಸತತ ಇಪ್ಪತ್ತೇಳು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದರು. ಆರಡಿ ಎಂಟಡಿ ಜೈಲು ಕೋಣೆಯಲ್ಲಿ ತಮ್ಮ ಯೌವನದ ಬಹುಮುಖ್ಯ ಅವಧಿಯನ್ನು ಕಳೆದರು. ಅಲ್ಲಿ ಒಂದು ಫೋನ್, ಫ್ಯಾನ್, ಪುಸ್ತಕ, ಪೆನ್ನು, ರೇಡಿಯೋ, ಟಿವಿ ಏನೇನೂ ಇರಲಿಲ್ಲ. ಅಂಥ ಭಯಾನಕ ಜೈಲು ಕೋಣೆಯಲ್ಲಿ ಅವರು ಇಪ್ಪತ್ತೇಳು ವರ್ಷಗಳನ್ನು ಕಳೆದರು. ಆ ಜೈಲಾದರೂ ಎಲ್ಲಿತ್ತು ? ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರದಿಂದ ಏಳು ಕಿಮಿ ದೂರದ ಒಂದು ದ್ವೀಪದಲ್ಲಿ. ಬೋಟಿನಲ್ಲಿಯೇ ಹೋಗಬೇಕು. ಅದು ಭೀಕರ ಸಾಂಕ್ರಾಮಿಕ ರೋಗಗಳಿಂದ ಬಳಲುವವರನ್ನು ಪ್ರತ್ಯೇಕವಾಗಿ ಕೂಡಿಡುವ ಐಸೋಲೇಷನ್ ಕ್ಯಾಂಪ್. ಜೈಲಿಂದ ಹೊರಬಂದರೂ ತಪ್ಪಿಸಿಕೊಂಡು, ಓಡಿ ಹೋಗಲು ಸಾಧ್ಯವಿಲ್ಲ. ಅಂಥ ಜೈಲು ಕೋಣೆಯಲ್ಲಿ ಮಂಡೇಲಾ, ಕಾಲು ಶತಮಾನದ ಮೇಲೆ ಇನ್ನೂ ಎರಡು ವರ್ಷ ಜಾಸ್ತಿ ಅವಧಿ ಕಳೆದರು.

ನಮಗೆ ನಮ್ಮ ಮನೆಯಲ್ಲಿ ಎಲ್ಲಾ ಸೌಲಭ್ಯಗಳಿವೆ, ಮೊಬೈಲ್, ಟಿವಿ, ಏಸಿ, ಫ್ರಿಜ್, ಕಂಪ್ಯೂಟರ್, ಐಪ್ಯಾಡ್.. ಹೀಗೆ ಎಲ್ಲಾ ರೀತಿಯ ಸುವಿಧಾ, ಸೌಲಭ್ಯಗಳಿವೆ, ಕಾಲಕಾಲಕ್ಕೆ ತಿಂಡಿ – ತಿನಿಸುಗಳನ್ನು ಸಿದ್ಧ ಮಾಡಿಕೊಡುವ ಹೆಂಡತಿ – ತಾಯಿ, ಸಹೋದರಿಯರಿದ್ದಾರೆ, ಹಾಗಿದ್ದರೂ ನಾವು ಕೇವಲ ಈ ಇಪ್ಪತ್ತೊಂದು ದಿನ ಕಳೆಯುವ ಹೊತ್ತಿಗೆ ಹೈರಾಣಾಗಿ ಹೋದೆವು. ಇದೇ ಮಹಾ ನರಕ, ಶಿಕ್ಷೆ ಎಂದು ಅಂದುಕೊಳ್ಳುವವರು ಮಂಡೇಲಾ ಅವರನ್ನು ಒಂದು ಕ್ಷಣ ಯೋಚಿಸಿ, ಅದರ ಮುಂದೆ ನಿಮ್ಮೆಲ್ಲಾ ವೇದನೆಗಳು ಮೇಣದಬತ್ತಿ ದೀಪದಂತೆ ‘ಉಫ್‘ ಎಂದು ಆರಿ ಹೋಗುತ್ತದೆ ಎಂದು ಬರೆದಿದ್ದೆ.

ಈ ಸಂದರ್ಭದಲ್ಲಿಯೇ ಪಾಲ್ಡೆನ್ ಗ್ಯಾತ್ಸೋ ನೆನಪಾಗಿದ್ದು ಕೂಡ ಕಾಕತಾಳೀಯವೇ. ಗ್ಯಾತ್ಸೋಗೂ, ಜಗತ್ತಿನಾದ್ಯಂತ ಭೀಕರ ಕರೋನಾ ವೈರಸ್ ಹರಡಲು ಕಾರಣವಾದ ಚೀನಾಕ್ಕೂ ಭಾರಿ ಭಾರಿ ಸಂಬಂಧ. ಹೀಗಾಗಿ ಈ ಸಂದರ್ಭದಲ್ಲಿ ಗ್ಯಾತ್ಸೋ ನೆನಪಾಗಿದ್ದು ಸಕಾಲಿಕ ಮತ್ತು ತೀರಾ ವಿಚಿತ್ರ ಎನಿಸಿತು. ಅದರಲ್ಲೂ ಅವನ ಕತೆ ಕೇಳಿದರೆ, ಅವನ ಮುಂದೆ ಮಂಡೇಲಾ ಕತೆಯೇ ಎಷ್ಟೋ ವಾಸಿ ಎನಿಸಬಹುದು. ಅಷ್ಟೇ ಅಲ್ಲ, ಗ್ಯಾತ್ಸೋ ಕತೆ ತನಗಾಗದವರನ್ನು ಚೀನಾ ಅದೆಷ್ಟು ಕ್ರೂರವಾಗಿ, ಅಮಾನವೀಯವಾಗಿ, ನಿರ್ದಯವಾಗಿ ನಡೆಸಿಕೊಳ್ಳುತ್ತದೆ ಎಂಬ ಕಥಾನಕವೂ ಹೌದು. ಒಬ್ಬ ಮನುಷ್ಯ ಮಾತ್ರದವನನ್ನು ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳಲು ಸಾಧ್ಯವಾ ಎಂದು ಊಹಿಸಲೂ ಆಗದಷ್ಟು ಭೀಭತ್ಸವಾಗಿ ನಡೆಸಿಕೊಂಡ ಚೀನಾದ ಪೈಶಾಚಿಕತೆ ಸಾರುವ ಕರುಣಾಜನಕ ಕತೆಯೂ ಹೌದು. ಆ ಎಲ್ಲಾ ಕಷ್ಟಗಳನ್ನು ಅನುಭವಿಸಿ ಗೆದ್ದು ಬಂದವನ ಧೀರೋದಾತ್ತ, ಯಶೋಗಾಥೆಯೂ ಹೌದು.

ನಾನು ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ, ಒಂದು ದಿನ ನನಗೆ ದಿವಂಗತ ಅನಂತಕುಮಾರ ಅವರು ಒಂದು ಪುಸ್ತಕವನ್ನು ಓದಲು ಕೊಟ್ಟಿದ್ದರು. ‘ಭಟ್ರೇ, ಈ ಪುಸ್ತಕವನ್ನು ಓದಿ. ನಿಮಗೆ ಕಷ್ಟಗಳು ಎದುರಾದಾಗಲೆಲ್ಲಾ, ಇನ್ನು ಈ ಬದುಕು ಸಾಕು ಎಂದೆನಿಸಿದಾಗಲೆಲ್ಲಾ ಪಾಲ್ಡೆನ್ ಗ್ಯಾತ್ಸೋನನ್ನು ನೆನಪಿಸಿಕೊಳ್ಳಿ. ಆಗ ನಿಮಗೆ ನಿಮ್ಮ ಕಷ್ಟಗಳೆಲ್ಲ ಬಹಳ ಯಃಕಶ್ಚಿತ ಎಂದೆನಿಸುತ್ತದೆ. ಒಬ್ಬ ಮನುಷ್ಯ ಅನುಭವಿಸಿದ ಕಷ್ಟಗಳ ಸಂಕೋಲೆ ಮತ್ತು ಒಂದು ದೇಶ ಮನಸ್ಸು ಮಾಡಿದರೆ ಎಷ್ಟು ಕೆಟ್ಟದಾಗಿ ಒಬ್ಬನನ್ನು ನಡೆಸಿಕೊಳ್ಳಬಹುದು ಎಂಬುದಕ್ಕೆ ಈ ಪುಸ್ತಕದಲ್ಲಿ ಉತ್ತರಗಳಿವೆ’ ಎಂದು ಹೇಳಿ ಅವರು ಆ ಪುಸ್ತಕವನ್ನು ಕೊಟ್ಟಿದ್ದರು. ಅಂದ ಹಾಗೆ ಆ ಪುಸ್ತಕದ ಹೆಸರು – Fire Under The Snow : True Story Of A Tibetan Monk.

ಈ ಕೃತಿಯನ್ನು ಒಂದೇ ಬೈಠಕ್ಕಿನಲ್ಲಿ ಓದಿ ಮುಗಿಸಿದ್ದೆ. ಅನಂತಕುಮಾರ ಹೇಳಿದ ಮಾತುಗಳು ಅಕ್ಷರಶಃ ನಿಜವಿದ್ದವು. . ಆದರೆ ನನಗೆ ಜೀವನದಲ್ಲಿ ಆತ ಎದುರಿಸಿದಷ್ಟು ಕಷ್ಟಗಳು ಎದುರಾಗಲಿಲ್ಲ. ಹೀಗಾಗಿ ಅವನನ್ನು ಆಗಾಗ ನೆನಪಿಸಿಕೊಳ್ಳುವ ಪ್ರಸಂಗ ಬರಲಿಲ್ಲ. ಆದರೆ ಮೊನ್ನೆ ಮಂಡೇಲಾ ಅವರನ್ನು ನೆನಪಿಸಿಕೊಳ್ಳುವಾಗ ಗ್ಯಾತ್ಸೋ ಯಾಕೋ ಹಠಾತ್ ನೆನಪಾದ. ಆತನ ಕತೆ ಓದಿದರೆ ಚೀನಾದ ಕ್ರೌರ್ಯ, ಅಲ್ಲಿನ ಆಡಳಿತಗಾರರ ದರ್ಪ, ಸರಕಾರದ ಸರ್ವಾಧಿಕಾರಿ ಮನೋಭಾವ ಅರ್ಥವಾದೀತು. ಚೀನಾ ಸರಕಾರವನ್ನು ಮುನ್ನಡೆಸುವವರು ಕಾಲಕಾಲಕ್ಕೆ ಬದಲಾಗಿರಬಹುದು, ಆದರೆ ಅವರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಗ್ಯಾತ್ಸೋ ಕತೆಯನ್ನು ಕೇಳಿದರೆ ಈ ಮಾತು ಇನ್ನಷ್ಟು ಸ್ಪಷ್ಟವಾದೀತು.

ಮೂಲತಃ ಗ್ಯಾತ್ಸೋ ಟಿಬೆಟಿನ ಒಬ್ಬ ಧರ್ಮಗುರು ಅಥವಾ ಬೌದ್ಧ ಸನ್ಯಾಸಿ. ಅದರಲ್ಲೂ ಗ್ಯಾತ್ಸೋ ಬಾಲ ಸನ್ಯಾಸಿ. ತನ್ನ ಎಂಟನೇ ವಯಸ್ಸಿನಲ್ಲಿ ಟಿಬೆಟಿನ ಧರ್ಮಗುರುಗಳ ತಂಡ ಈತನಲ್ಲಿ ಅಸಾಧಾರಣ ಶಕ್ತಿಯಿದೆ ಎಂದು ಮನಗಂಡು ಅವನನ್ನು ಲಾಮಾನನ್ನಾಗಿ ಮಾಡಿದರೆ ಹೇಗೆ ಎಂದು ಯೋಚಿಸಿ, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಿದ್ದರು. ಈಗಿನ (ಹದಿನಾಲ್ಕನೇ) ದಲೈ ಲಾಮಾ ಇದ್ದಾರಲ್ಲ, ಅವರು ಲಾಸಾದಲ್ಲಿರುವ ಮೊನಾಸ್ಟರಿಗೆ ಅವನನ್ನು ಕರೆದುಕೊಂಡು ಬಂದು ವಿದ್ಯಾಭಾಸಕ್ಕೆ ಸೇರಿಸಿದರು. ಅದಾಗಿ ಸುಮಾರು ಹತ್ತು ವರ್ಷಗಳ ಕಾಲ ಗ್ಯಾತ್ಸೋ ಅಲ್ಲಿಯೇ ದೀಕ್ಷೆ ಪಡೆದು ಜೀವನವಿಡೀ ಸನ್ಯಾಸಿಯಾಗಿಯೇ ಇರುವ ಸಂಕಲ್ಪತೊಟ್ಟರು.

1959 ರ ಸಮಯ. ಚೀನಾ ಟಿಬೆಟಿನ ದಾಳಿ ಮಾಡಿತು. ಧರ್ಮಗುರುಗಳು ಬೀಡು ಬಿಟ್ಟ ಆಶ್ರಮಗಳನ್ನು ಧ್ವಂಸ ಮಾಡಿತು. ಆಶ್ರಮಗಳ ಮೇಲೆ ಚೀನಾ ಸೈನಿಕರು ಗುಂಡಿನ ದಾಳಿಗರೆದರು. ಬಾಂಬನ್ನು ಎಸೆದರು. ಹಲವು ಧರ್ಮಗುರುಗಳನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿತು. ದಲೈ ಲಾಮಾ ರಾತ್ರೋ ರಾತ್ರಿ ಭಾರತದ ಸಹಾಯ ಬಯಸಿದರು. ಭಾರತ ಸಮ್ಮತಿಸದೇ ಹೋಗಿದ್ದರೆ, ಅವರನ್ನು ಜೀವಸಹಿತ ಬಿಡುತ್ತಿರಲಿಲ್ಲ. ಇಂದಿಗೂ ಚೀನಾಕ್ಕೆ ಭಾರತದ ಮೇಲೆ ಕೋಪವಿರಲು ಇದೂ ಒಂದು ಕಾರಣ. ದಲೈ ಲಾಮಾ ಟಿಬೆಟ್ ಬಿಟ್ಟು ಓಡಿ ಹೋಗಿ ಧರ್ಮಶಾಲಾದಲ್ಲಿ ಅಡಗಿಕೊಂಡರು. ಅವರ ಜತೆಯಲ್ಲೇ ಗ್ಯಾತ್ಸೋ ಸಹ ಹೋಗಬೇಕಿತ್ತು. ಆದರೆ ಬೇರೆ ಧರ್ಮಗುರುಗಳನ್ನು ಬಚಾವ್ ಮಾಡುವುದರಲ್ಲಿ ನಿರತರಾಗಿದ್ದ ಗ್ಯಾತ್ಸೋ ಅವರನ್ನು ಬಂಧಿಸಿದರು. ಅದಕ್ಕಿಂತ ಹೆಚ್ಚಾಗಿ ಗ್ಯಾತ್ಸೋ ಭಾರತದ ಗೂಢಚಾರರಾಗಿ ಕೆಲಸ ಮಾಡುತ್ತಿರಬಹುದು ಎಂಬ ಸಂದೇಹ ಅವರದಾಗಿತ್ತು. ಇದೊಂದೇ ಕಾರಣಕ್ಕೆ ಚೀನಾದ ಸೈನಿಕರು ಅವರನ್ನು ಮನಸೋ ಇಚ್ಛೆ ಥಳಿಸಿದರು. ಭಾರತದ ಜತೆಗಿನ ಸಂಬಂಧವನ್ನು ಬಾಯಿಬಿಡುವಂತೆ ಅಬ್ಬರಿಸಿದರು. ಅದಕ್ಕಿಂತ ಮುಂಚೆ ಬಂಧಿತರಾದ ಕೆಲವು ಸನ್ಯಾಸಿಗಳು ಗ್ಯಾತ್ಸೋ ಮೇಲಿನ ದ್ವೇಷದಿಂದ ಅವರು ಭಾರತದ ಗೂಢಚಾರ ಎಂಬ ವಿಷಯವನ್ನು ಚೀನಾ ಸೈನಿಕರಿಗೆ ಹೇಳಿ ತಾವು ಬಚಾವ್ ಆಗಿದ್ದರು.

ಗ್ಯಾತ್ಸೋ ಬಾಯಿಬಿಡಲಿಲ್ಲ. ಆದರೆ ಚೀನಾ ಸೈನಿಕರ ಅಟ್ಟಹಾಸ ಹೇಗಿತ್ತೆಂದರೆ, ಎಲೆಕ್ಟ್ರಿಕ್ ಬಲ್ಬ ಥರ ಅವರನ್ನು ನಾಲ್ಕು ದಿನ ತಲೆಕೆಳಗೆ ಮಾಡಿ ನೇತು ಹಾಕಿದ್ದರು. ಆದರೂ ಗ್ಯಾತ್ಸೋ ಬಾಯಿಬಿಡಲಿಲ್ಲ. ನಾಲ್ಕು ದಿನ ಅವರನ್ನು ಉಪವಾಸ ಕೆಡವಿದ ಸೈನಿಕರು, ಭಾರವಾದ ಟೈಯರ್ ನ್ನು ಅವರ ಮೇಲೆ ಹತ್ತಿಸಿದರು. ಆಗಲೇ ಉಪವಾಸದಿಂದ ಕಂಗಾಲಾಗಿದ್ದ ಅವರಿಗೆ ತೊಟ್ಟು ನೀರನ್ನು ಕೊಡದೇ ನಿತ್ರಾಣರನ್ನಾಗಿಸಿದ್ದರು. ಆದರೂ ಗ್ಯಾತ್ಸೋ ಬಾಯಿ ಬಿಡಲಿಲ್ಲ. ಅವರ ಎರಡೂ ಕೈ – ಕಾಲುಗಳನ್ನು ಕಟ್ಟಿ ಹಾಕಿ ಉಪವಾಸ ಕೆಡವಿದರು. ಅವರನ್ನು ಆಗಾಗ ನೋಡಲು ಬರುತ್ತಿದ್ದ ಸೈನಿಕರು ಕಪಾಳಕ್ಕೆ ಹೊಡೆದು ಹೋಗುತ್ತಿದ್ದರು. ಇನ್ನು ಕೆಲವರು ಅವರ ಮೇಲೆ ಉಚ್ಚೆ ಹಾರಿಸಿ ಹೋಗುತ್ತಿದ್ದರು. ಎರಡು – ಮೂರು ದಿನಕ್ಕೊಮ್ಮೆ ಊಟ ಕೊಡುತ್ತಿದ್ದರು. ಕೈಕೋಳ ಧರಿಸಿಯೇ ಊಟ ಮಾಡಬೇಕಾಗುತ್ತಿತ್ತು. ಕಾರ್ಪೆಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಂತೆ ಬಲವಂತ ಮಾಡುತ್ತಿದ್ದರು. ಆಗ ಕೈಕೋಳ ಬಿಚ್ಚಿ ಅದನ್ನು ಕಾಲಿಗೆ ತೊಡಿಸುತ್ತಿದ್ದರು. ಸುಮಾರು ಒಂದು ವರ್ಷ ಕೋಳ ಧರಿಸಿ ಅವರ ಕೈ-ಕಾಲಿನ ಚರ್ಮ ಸುಲಿದು ಹೊಪ್ಪಳಿಕೆ ಎದ್ದಿದ್ದವು. ಆ ಜೈಲಿನಲ್ಲಿ ಒಂದೊಂದು ದಿನ ದಿನ ದೂಡುವುದೂ ಅಸಾಧ್ಯವಾಗಿತ್ತು. ಎರಡು – ಮೂರು ತಿಂಗಳಿಗೊಮ್ಮೆ ಸ್ನಾನ ಮಾಡಲು ಅವರಿಗೆ ಬಕೆಟ್ ನೀರು ಕೊಡುತ್ತಿದ್ದರು.

ಮೂರು ವರ್ಷ ಕಳೆಯುವುದರೊಳಗೆ ಗ್ಯಾತ್ಸೋ ಜರ್ಜರಿತರಾಗಿದ್ದರು. ದಿನವಿಡೀ ಕಾಲಿಕೆ ಕೋಳ ಧರಿಸಿ ಅವರ ಕಾಲುಗಳು ಊತಗೊಂಡು ನಡೆಯಲಾಗದಂಥ ಸ್ಥಿತಿ. ಆದರೆ ಜೈಲಿನ ರಣಹಿಂಸೆಯನ್ನು ಸಹಿಸಲು ಸಾಧ್ಯವೇ ಇರಲಿಲ್ಲ. ಅಲ್ಲಿಂದ ಪರಾರಿಯಾಗಲು ಹವಣಿಸಿದರು. ತಮ್ಮ ಜತೆಗಿದ್ದ ಏಳು ಜನರ ಜತೆಗೆ ಕುಂಟುತ್ತಲೇ ಸೈನಿಕರ ಕಣ್ತಪ್ಪಿಸಿ ಜೈಲಿನಿಂದ ಪರಾರಿಯಾದರು. ಆದರೆ ಎದುರು ದಿಕ್ಕಿನಿಂದ, ಭಾರತದ ಗಡಿಯಿಂದ ಚೀನಾದ ಸೈನಿಕರು ಮರಳುತ್ತಿದ್ದರು. ಗ್ಯಾತ್ಸೋ ಮತ್ತು ಉಳಿದ ಕೈದಿಗಳು ಹೋಗಿ ಹೋಗಿ ಹುಲಿಯ ಬೋನಿಗೆ ಬಿದ್ದಂತೆ ಅವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರು.

ಆರಂಭದಲ್ಲಿ ಆರು ವರ್ಷಗಳ ಕಾಲ ಮಾತ್ರ ಸೆರೆಮನೆವಾಸ ಶಿಕ್ಷೆಯನ್ನು ವಿಧಿಸಲಾಗಿತ್ತು. ಆ ಪೈಕಿ ಮೂರು ವರ್ಷಗಳನ್ನು ಕಳೆದಿದ್ದರು. ಯಾವಾಗ ಜೈಲಿನಿಂದ ಪರಾರಿಯಾಗಲು ಹೋಗಿ ಸಿಕ್ಕಿ ಬಿದ್ದರೋ ಅವರ ಸೆರೆಮನೆವಾಸ ಶಿಕ್ಷೆಯನ್ನು ಪುನಃ ಎಂಟು ವರ್ಷಗಳಿಗೆ ವಿಸ್ತರಿಸಿ, ಕುಖ್ಯಾತ ಕೈದಿಗಳನ್ನು ಇರಿಸುವ ಕಾರಾಗೃಹಕ್ಕೆ ಅವರನ್ನು ಸ್ಥಳಾಂತರಿಸಿದರು. ಅದೆಂಥ ಕಗ್ಗತ್ತಲ ಕಾರಾಗೃಹವೆಂದರೆ ಅಲ್ಲಿ ಬೆಳಕೆಂಬುದೇ ಇರಲಿಲ್ಲ. ತಿಂಗಳುಗಟ್ಟಲೆ ಉಪವಾಸ ಮತ್ತು ಕತ್ತಲೆವಾಸ. ಅದಾದ ಬಳಿಕ ಅವರನ್ನು ಮಧ್ಯಾಹ್ನದ ಬಿಸಿಲಿಗೆ ಕರೆತಂದು ಕಣ್ಣು ಪಟ್ಟಿ ಬಿಚ್ಚುತ್ತಿದ್ದರು. ಆ ಪ್ರಖರ ಬಿಸಿಲಿಗೆ ಅನೇಕರು ತೀವ್ರ ಕಿರಿಕಿರಿ, ಯಾತನೆಯಿಂದ ದೃಷ್ಟಿ ಕಳೆದುಕೊಳ್ಳುತ್ತಿದ್ದರು.

ಆರು ತಿಂಗಳ ಕಗ್ಗತ್ತಲವಾಸದ ನಂತರ ಗ್ಯಾತ್ಸೋ ಅವರನ್ನು ಹೊಲದಲ್ಲಿ ನೊಗಕ್ಕೆ ಕಟ್ಟಿ ಹಾಕಿ ಭೂಮಿ ಉಳುವ ಕೆಲಸಕ್ಕೆ ಹಚ್ಚಿದರು. ಅವರ ಜತೆಗಿದ್ದ ಮೂವರು ಈ ಕೆಲಸ ಮಾಡಲಾಗದೇ, ಉಪವಾಸದಿಂದ ಸತ್ತು ಹೋದರು. ಅವರ ಹೆಣಗಳನ್ನು ಗಾಳಿಯಲ್ಲಿ ಎಸೆಯುತ್ತಾ ಸೈನಿಕರು ಕೇಕೆ ಹಾಕುತ್ತಿದ್ದರು. ಜೈಲಿನಲ್ಲಿ ಇಲಿ, ಹೆಗ್ಗಣ, ಹಾವು, ಕೀಟಗಳಿಂದ ತಯಾರಿಸಿದ ಆಹಾರಗಳನ್ನು ಕೊಡುತ್ತಿದ್ದರು. ಅದನ್ನು ತಿನ್ನದಿದ್ದರೆ ಉಪವಾಸವೇ ಗತಿ. ಗ್ಯಾತ್ಸೋ ತಾವು ಧರಿಸಿದ್ದ ಬೂಟುಗಳನ್ನು ನೀರಿನಲ್ಲಿ ನೆನೆಸಿ ಅದನ್ನೇ ಅಗೆಯುತ್ತಿದ್ದರು. ಪ್ರತಿದಿನ ಜೈಲಿನಲ್ಲಿ ಕನಿಷ್ಠ ಐದಾರು ಜನ ಸಾಯುತ್ತಿದ್ದರು. ಆ ಹೆಣಗಳನ್ನು ಕುದುರೆ ಮೇಲೆ ಒಂದರ ಮೇಲೆ ಒಂದರಂತೆ ಪೇರಿಸಿ ಊರ ಹೊರಗೆ ಬಿಸಾಡಿ ಬರುತ್ತಿದ್ದರು. ಅಲ್ಲಿನ ಬೇರೆ ಬೇರೆ ಜೈಲುಗಳಲ್ಲಿದ್ದ ಟಿಬೆಟಿಯನ್ನರ ಸಾವು – ನೋವಿನ ಸುದ್ದಿ ಕೇಳಿ ಉಳಿದವರು ಭಯಭೀತರಾಗುತ್ತಿದ್ದರು.

ಅದಾಗಿ ಒಂದು ವರ್ಷದ ನಂತರ ಗ್ಯಾತ್ಸೋ ಅವರನ್ನು ಬೇರೆ ಜೈಲಿಗೆ ವರ್ಗಾಯಿಸಲಾಯಿತು. ಅಲ್ಲಿ ಅವರನ್ನು ಕಲ್ಲು ಒಡೆಯುವ, ಹೊರುವ ಕಠಿಣ ಕೆಲಸಕ್ಕೆ ಹಚ್ಚಲಾಯಿತು. ರಾತ್ರಿಯಾಗುತ್ತಿದ್ದಂತೆ, ಎಲ್ಲಾ ಸನ್ಯಾಸಿಗಳಿಗೂ ದಲೈ ಲಾಮಾ ಅವರನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುವ ಶಿಕ್ಷೆ. ಇದನ್ನು ವಿರೋಧಿಸಿದರೆ, ಬೂಟುಗಾಲಿನಲ್ಲಿ ಒದೆತ ತಿನ್ನಬೇಕಾಗುತ್ತಿತ್ತು. ಲಾಮಾ ಅವರನ್ನು ಬೈಯುವುದು ಮತ್ತು ಸನ್ಯಾಸಿಯಾಗಿ ಮುಂದುವರಿಯುವುದು ಸಾಧ್ಯವೇ ಇರಲಿಲ್ಲ. ಎರಡರ ಪೈಕಿ ಒಂದನ್ನು ಅವರು ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ ಅದರ ಬದಲು ಒದೆತವನ್ನೇ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಲಾಮಾ ಅವರನ್ನು ಹೀಯಾಳಿಸುವುದಿಲ್ಲ ಎಂಬ ಕಾರಣಕ್ಕೆ ಗ್ಯಾತ್ಸೋ ಉಳಿದವರಿಗಿಂತ ಹೆಚ್ಚು ಒದೆ ತಿನ್ನುತ್ತಿದ್ದರು. ಲಾಮಾ ಅವರನ್ನು ನಿಂದಿಸಲಿಲ್ಲ ಎಂಬ ಕಾರಣಕ್ಕೆ ಕ್ರುದ್ಧನಾದ ಸೈನಿಕನೊಬ್ಬ ಒಬ್ಬ ಧಾರ್ಮ ಗುರುವನ್ನು ಜೀವ ಸಹಿತ ಹೂತು ಹಾಕಿದ್ದ. ಇದೇ ಕಾರಣಕ್ಕೆ ಹಲವರು ಗುಂಡೇಟು ತಿಂದು ಸತ್ತರು.

1975 ರಲ್ಲಿ ಗ್ಯಾತ್ಸೋ ಅವರ ಜೈಲು ಅವಧಿ ಮುಗಿದು ಅವರನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಬಿಡಲಿಲ್ಲ. ಅದರ ಬದಲು 1983 ರವರೆಗೆ ಸೆರೆ,ಾನೆ ವಾಸ ವಿಸ್ತರಿಸಿದರು. ಇದಕ್ಕೆ ಕಾರಣ ಧರ್ಮಗುರುಗಳನ್ನು ಅವಹೇಳನ ಮಾಡದಿರುವುದು ಮತ್ತು ಧರ್ಮಗ್ರಂಥಗಳನ್ನು ಬೂಟುಗಾಲಿನಿಂದ ತುಳಿಯಲು ಒಪ್ಪದಿರುವುದು. ಬೇರೆ ಜೈಲಿಗೆ ಗ್ಯಾತ್ಸೋ ಅವರನ್ನು ವರ್ಗಾಯಿಸಲಾಯಿತಾದರೂ, ಪರಿಸ್ಥಿತಿ ಮಾತ್ರ ಸುಧಾರಿಸಲಿಲ್ಲ. ಮಾತು ಕೇಳದ ಕೈದಿಗಳನ್ನು ಮತ್ತು ಸ್ನೇಹಿತರನ್ನು ಚಲಿಸುವ ಟ್ರಕ್ಕಿಗೆ ಎಸೆದು ಸಾಯಿಸುತ್ತಿದ್ದರು. ಈ ಹೆಣಗಳನ್ನು ಹೆಗಲ ಮೇಲೆ ಹೊತ್ತು ನದಿಗೆ ಎಸೆದು ಬರುವಂತೆ ಹೇಳುತ್ತಿದ್ದರು.

ಜೈಲಿನಲ್ಲಿದ್ದಾಗ ಸಹಕೈದಿಗಳಿಗೆ ಜಾಗೃತಿ ಮೂಡಿಸಲು ಗ್ಯಾತ್ಸೋ ಗುಟ್ಟಾಗಿ ಸಭೆ ಮಾಡುತ್ತಿದ್ದರು. ಕರಪತ್ರಗಳ ಮೂಲಕ ಸ್ಹೀನಾ ಸರಕಾರದ ನೀತಿಯನ್ನು ಟೀಕಿಸುತ್ತಿದ್ದರು. ಟಿಬೆಟಿಯನ್ನರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸುತ್ತಿದ್ದರು. ಒಮ್ಮೆ ಟಿಬೆಟ್ ಭಾಷೆ ಬಲ್ಲ ಚೀನಾದ ಜೈಲು ಅಧಿಕಾರಿಗೆ ಗ್ಯಾತ್ಸೋ ಹೊರಡಿಸಿದ ಕರಪತ್ರ ಸಿಕ್ಕಿತು. ಈ ಸಂಗತಿ ಗ್ಯಾತ್ಸೋ ಅವರಿಗೆ ಗೊತ್ತೇ ಆಗಲಿಲ್ಲ. ಆತ ಗ್ಯಾತ್ಸೋ ಅವರನ್ನು ದರದರ ಎಳೆದುಕೊಂಡು ಬಂದು ಪಕ್ಕಡ್ ನಿಂದ ಅವರ ಉಗುರುಗಳನ್ನು ಕಿತ್ತುಬಿಟ್ಟ. ಅಷ್ಟೂ ಸಾಲದೆಂಬಂತೆ, ಕಬ್ಬಿಣದ ರಾಡನ್ನು ಅವರ ಬಾಯಲ್ಲಿ ತೂರಿಸಿ , ಬಲವಾಗಿ ತಿರುಗಿಸಿಬಿಟ್ಟ. ಆ ನೋವು ತಾಳಲಾರದೇ ಗ್ಯಾತ್ಸೋ ಸುಮಾರು ಮೂರು ತಾಸು ಮೂರ್ಛೆ ಬಿದ್ದಿದ್ದರು . ಪ್ರಜ್ಞೆ ಬಂದಾಗ ರಕ್ತದ ಮಡುವಿನಲ್ಲಿದ್ದರು. ಇಪ್ಪತ್ತು ಹಲ್ಲುಗಳು ಉದುರಿ ಹೋಗಿದ್ದವು ! ಸುಮಾರು ಮೂರು ತಿಂಗಳು ಬಾಯಲ್ಲಿ ಹಲ್ಲುಗಳಿರದೇ ಆಹಾರ ಸೇವಿಸಲು ಸಹ ಆಗುತ್ತಿರಲಿಲ್ಲ. ಏನೇ ಹಾಕಿದರೂ ಬಿಸಿ ಕೆಂಡ ಇಟ್ಟಂತಾಗುತ್ತಿತ್ತು. ಆ ಯಾತನೆಯನ್ನು ಅನುಭವಿಸಿಯೂ ಅವರು ಬದುಕುಳಿದಿದ್ದೇ ಹೆಚ್ಚು.

ಈ ಮಧ್ಯೆ ಗ್ಯಾತ್ಸೋ ಅವರನ್ನು ನೋಡಲು ಬಂದ ವ್ಯಕ್ತಿಯ ಮೂಲಕ ಟಿಬೆಟಿಯನ್ ರಾಜಕೀಯ ಕೈದಿಗಳು ಅನುಭವಿಸುತ್ತಿರುವ ಕರುಣಾಜನಕ ಕತೆಯನ್ನು ಗುಟ್ಟಾಗಿ ಬರೆದು ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ಮಾಡಿದರು. ಅದು ಕೆಲವು ವಿದೇಶಿ ಪತ್ರಿಕೆಗಳಲ್ಲೂ ಪ್ರಕಟವಾಗಿ, ಚೀನಾಕೆ ಭಾರಿ ಮುಖಭಂಗವಾಯಿತು. ಮೂರು ದಶಕಗಳಿಂದ ಚೀನಾದ ಜೈಲಿನಲ್ಲಿ ದಾರುಣ ಸ್ಥಿತಿಯಲ್ಲಿರುವ ಟಿಬೆಟಿಯನ್ನರ ಬಗ್ಗೆ ವರದಿಗಳು ಪ್ರಕಟವಾದಾಗ, ಚೀನಾ ಸರಕಾರ ಎಚ್ಚರವಾಯಿತು. ಈ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಲಾರಂಭಿಸಿತು. ಭಾರತವೂ ಟಿಬೆಟಿನ ನಿರ್ಧಾರವನ್ನು ಬೆಂಬಲಿಸಿತು. ಅಲ್ಲದೇ ಟಿಬೆಟಿನ ಒತ್ತೆಯಾಳುಗಳ ವಿವರಗಳನ್ನು ನೀಡುವಂತೆ ಅಂತಾರಾಷ್ಟ್ರೀಯ ಸಮೂದಾಯಗಳು ಒತ್ತಾಯ ಮಾಡಲಾರಂಭಿಸಿದವು. ಆದರೆ ಅಷ್ಟರೊಳಗೆ ಚಿತ್ರಹಿಂಸೆಯಿಂದ ಸಾವಿರಾರು ಮಂದಿ ಸತ್ತು ಹೋಗಿದ್ದರು. ಅವರೆಲ್ಲ ವಿವರಗಳನ್ನು ನೀಡುವಂತಾದರೆ ಮತ್ತಷ್ಟು ಮುಜುಗರ ಅನುಭವಿಸಬೇಕಾದೀತೆಂದು ಮೂವತ್ತು ವರ್ಷಕ್ಕಿಂತ ಜಾಸ್ತಿ ಸೆರೆಮನೆವಾಸ ಅನುಭವಿಸಿದ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ಸರಕಾರ ನಿರ್ಧರಿಸಿತು.

ಆದರೆ ಅಷ್ಟರೊಳಗೆ ಗ್ಯಾತ್ಸೋ ಮೂವತ್ಮೂರು ವರ್ಷ ಚೀನಾದ ಜೈಲಿನಲ್ಲಿ ಕಳೆದಿದ್ದರು. ಒಂದು ದಿನವೂ ನೆಮ್ಮದಿಯಿಂದ ಕಳೆಯಲಿಲ್ಲ. ಕೊನೆ ಕೊನೆಗೆ ಅವರೇ ಹೇಳಿಕೊಂಡಂತೆ ಜೈಲು ಅಧಿಕಾರಿಗಳ ಮೂತ್ರ ಸೇವನೆ ಅವರಿಗೆ ಶಿಕ್ಷೆ ಎಂದು ಅನಿಸುತ್ತಿರಲಿಲ್ಲ. ಎಲ್ಲಾ ರೀತಿಯ ದೈಹಿಕ, ಮಾನಸಿಕ ಹಿಂಸೆ, ಅವಮಾನ, ವೇದನೆಗಳಿಗೆ ಒಗ್ಗಿಕೊಂಡು ಕಲ್ಲಾಗಿ ಹೋಗಿದ್ದರು. ಅವರನ್ನು ಯಾವ ಶಕ್ತಿಯೂ ಕುಗ್ಗಿಸಲು ಸಾಧ್ಯವಿರಲಿಲ್ಲ. ಗಟ್ಟಿಪಿಂಡ, ಎಲ್ಲವನ್ನೂ ಸಹಿಸಿಕೊಂಡರು.

ಬೇರೆ ದಾರಿ ಇರಲಿಲ್ಲ. 1992 ರಲ್ಲಿ ಚೀನಾ ಸರಕಾರ ಗ್ಯಾತ್ಸೋ ಅವರನ್ನು ಬಿಡುಗಡೆ ಮಾಡಿತು. ಆದರೆ ಯಾವ ಕಾರಣಕ್ಕೂ ಭಾರತಕ್ಕೆ ಹೋಗಕೂಡದೆಂದು ಹೇಳಿತು. ಟಿಬೆಟ್ ಗೆ ಮರಳಿದ ಬಳಿಕವೂ ಚೀನಾ ಸರಕಾರ ಅವರ ಮೇಲೆ ಕಣ್ಣಿಟ್ಟಿತ್ತು. ಆದರೆ ಅವರು ಅಧಿಕಾರಿಗಳಿಗೆ ಕಣ್ತಪ್ಪಿಸಿ ಭಾರತಕ್ಕೆ ಓದಿ ಬಂದು ಧರ್ಮಶಾಲಾದಲ್ಲಿ ದಲೈ ಲಾಮಾ ಅವರನ್ನು ಸೇರಿಕೊಂಡರು. ಪ್ರಾಯಶಃ ಇವರಷ್ಟು ಸುದೀರ್ಘ ಸೆರೆಮನೆವಾಸವನ್ನು ಬೇರೆ ಯಾರೂ ಅನುಭವಿಸಿರಲಿಕ್ಕಿಲ್ಲ. ಜೈಲಿನಿಂದ ಮರಳಿದ ಬಳಿಕ ಅವರು ಇಪ್ಪತ್ತಾರು ವರ್ಷ (ಎರಡು ವರ್ಷಗಳ ಹಿಂದೆ, 2018ರಲ್ಲಿ ತೀರಿಕೊಂಡರು) ಬದುಕಿದ್ದರು. ಈ ಅವಧಿಯಲ್ಲಿ ಅವರು ಬೆಂಗಳೂರಿಗೂ ಒಮ್ಮೆ ಬಂದಿದ್ದರು.

ಗ್ಯಾತ್ಸೋ ಕಳೆದ ಮೂವತ್ಮೂರು ವರ್ಷಗಳ ಆ ಸೆರೆಮನೆ ವಾಸದ ಮುಂದೆ ಈ ಲಾಕ್ ಡೌನ್ ಯಾವ ಲೆಕ್ಕ !?

Leave a Reply

Your email address will not be published. Required fields are marked *