Wednesday, 30th September 2020

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಆ.11 ರಂದು ಬೃಹತ್ ಪ್ರತಿಭಟನೆ: ಎಚ್.ಕೆ. ಸಂದೇಶ್

ಹಾಸನ:

ದಲಿತರ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲರಾಗಿರುವ ಜಿಲ್ಲಾಡಳಿತ ಮತ್ತು ಬಿಜೆಪಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಆಗಸ್ಟ್ 11ರ ಮಂಗಳವಾರ ಹಾಸನ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ದಲಿತ ಮುಖಂಡರಾದ ಎಚ್.ಕೆ. ಸಂದೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಅಸಮಾನತೆ, ಜಾತೀಯತೆ, ಅನ್ಯಾಯ, ದಲಿತ – ದಮನಿತರ ಪಾಲಿಗೆ ತುಂಬಿ ಹೋಗುವ ಭಾರತದ ನೆಲದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನ್ಮ ತಾಳಿ ಬದುಕಿನುದ್ದಕ್ಕೂ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿ ಸಮಾಜದ ಕಟ್ಟಕಡೆಯ ಅಸ್ಪೃಶ್ಯತೆ ಸಮುದಾಯಕ್ಕೆ ಮೀಸಲಾತಿ ಊರುಗೋಲಿನ ಮೂಲಕ ಸಾಮಾಜಿಕ ನ್ಯಾಯ, ಹಕ್ಕುಗಳು, ಸಮಾನತೆ ಮತ್ತು ಸವಲತ್ತುಗಳನ್ನು ದೊರಕಿಸಿ ಕೊಡಿಸದಿದ್ದರೆ ಈ ಸಮುದಾಯದ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಸ್ವಾತಂತ್ರ್ಯಾನಂತರದ ಸುದೀರ್ಘ 73 ವರ್ಷಗಳ ಸಂದರ್ಭದಲ್ಲಿ ದೇಶದಲ್ಲಿ ದಲಿತ ದಮನಿತರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಬಾಬಾಸಾಹೇಬರ ಆಶಯದಂತೆ ಉಜ್ವಲ ಬೆಳಕನ್ನು ಕಾಣಲು ಸಾಧ್ಯವಾಗದಿರುವುದು ಈ ದೇಶದ ದುರಂತ. ದಲಿತರು ಅಸ್ಪೃಶ್ಯರು, ಜಾತಿಯಲ್ಲಿ ಹೀನರು, ಮುಟ್ಟಿಸಿಕೊಳ್ಳಬಾರದವರು ಎಂಬ ಒಂದೇ ಕಾರಣದಿಂದ ದೇಶದ ಹಿಂದೂ ಸಮಾಜದ ಮೇಲ್ ಜಾತಿಯವರು ದೇಶದಾದ್ಯಂತ ಈ ಸಮುದಾಯದ ಮೇಲೆ ಕೆಂಡ ಕಾರುತ್ತಾ, ಕ್ಷುಲ್ಲಕ ಕಾರಣಗಳಿಗೆ ಕೊಲೆ ಮಾಡಿ, ದೌರ್ಜನ್ಯ ದಬ್ಬಾಳಿಕೆ ನಡೆಯುವ ಅಮಾನವೀಯ ಕೃತ್ಯಗಳನ್ನು ಎಗ್ಗಿಲ್ಲದೇ ನಡೆಸುತ್ತ ಬಂದಿರುವುದಾಗಿ ದೂರಿದರು.

ಇದಕ್ಕೆ ಆಳುವ ಸರ್ಕಾರಗಳು ಮತ್ತು ವಿರೋಧ ಪಕ್ಷಗಳು ಪ್ರೋತ್ಸಾಹಿಸುತ್ತಾ ಬರುತ್ತಿವೆ. ಅದಕ್ಕೆ ಹಾಸನ ಜಿಲ್ಲೆಯ ಹೊರತಾಗಿಲ್ಲ. ಅದರಲ್ಲೂ ಬಿ.ಜೆ.ಪಿ. ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ 7 ಜನ ದಲಿತ ಯುವಕರ ಕೊಲೆಗಳಾಗಿವೆ. ಅಲ್ಲದೆ ದಲಿತ ಯುವತಿಯರು, ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಾನಭಂಗ, ಜಾತಿ ನಿಂದನೆ ಮುಂತಾದ 106 ವಿವಿಧ ದೌರ್ಜನ್ಯ ಪ್ರಕರಣಗಳು ಸಾಲುಸಾಲಾಗಿ ಘಟಿಸಿವೆ ಎಂದು ಆತಂಕವ್ಯಕ್ತಪಡಿಸಿದರು.

ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ದಲಿತರ ಮೇಲಿನ ಕೊಲೆ ಮತ್ತು ದೌರ್ಜನ್ಯ ಪ್ರಕರಣಗಳನ್ನು
ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚೆಗೆ ಕೆಲವು ಕಟ್ಟುನಿಟ್ಟಾಗಿ ಸುತ್ತೋಲೆಗಳನ್ನು ಮತ್ತು ನಿರ್ದೇಶನಗಳನ್ನು ನೀಡುತ್ತದೆ. ಹೀಗಿದ್ದರೂ ಇಷ್ಟೊಂದು ಪ್ರಕರಣಗಳು ಘಟಿಸಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಹ ಇಂತಹ ಸಂದರ್ಭದಲ್ಲಿ ಡಿ.ಸಿ, ಎಸ್.ಪಿ.ರವರುಗಳು ಕಾರ್ಯಪ್ರವೃತ್ತರಾಗಿ ಇಡೀ ದಲಿತ ಸಮುದಾಯಕ್ಕೆ ಅನ್ಯಾಯ ಎಸಗಿರುವುದು
ಖಂಡನೀಯವಾದ ವಿಚಾರ ಎಂದರು.

ಮುಂದಿನ ದಿನಗಳಲ್ಲಿ ಇಂತಹ ಅವಾಂತರಕ್ಕೆ ಅವಕಾಶ ನೀಡದಂತೆ ಮೊದಲೇ ಹೊಂದಿರುವ ದಲಿತ ಸಮುದಾಯ ನ್ಯಾಯ, ರಕ್ಷಣೆ ಕಾಪಾಡಬೇಕೆಂದು ಒತ್ತಾಯಿಸುತ್ತಾ, ಜಿಲ್ಲೆಯಾದ್ಯಂತ ನಡೆದಿರುವ ಕೊಲೆಗಳು ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಲ್ಲೆಕೋರನನ್ನು ಆರೋಪಿಗಳ ಬಂಧನವಾಗಿರುವ ಎಲ್ಲರನ್ನೂ ತಕ್ಷಣ ಬಂದಿಸುವ ಕೆಲಸ ಮಾಡಬೇಕೆಂದು, ಕೊಲೆಯಾದವರ ಕುಟುಂಬದ ಸದಸ್ಯರೊಬ್ಬರು ಕಾನೂನು ಪ್ರಕಾರ ಸರ್ಕಾರಿ ಕೆಲಸವನ್ನು ಕೊಡಿಸಬೇಕೆಂದು ಹಾಗೂ ಸರ್ಕಾರದಿಂದ ಸಿಗುವ ಪರಿಹಾರವನ್ನು ತುರ್ತಾಗಿ ಮಂಜೂರು ಮಾಡಬೇಕೆಂದು ಒತ್ತಾಯಿಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಛಲವಾದಿ ಸಂಘಟನೆ ಜಿಲ್ಲಾಧ್ಯಕ್ಷ ಪುಟ್ಟರಾಜು, ಮಾದಿಗ ದಂಡೋರ ಮುಖಂಡ ವಿಜಯಕುಮಾರ್, ದಲಿತ ಮುಕಂಡರಾದ ಕೆ. ಈರಪ್ಪ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *