Tuesday, 29th September 2020

“ನಾಗವಲ್ಲಿ’ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆ

ತುಮಕೂರು:

ನಾಗವಲ್ಲಿ ಗ್ರಾಮವೊಂದರಲ್ಲಿಯೇ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಗೊಂಡಿರುವುದು ಜೆಡಿಎಸ್‌ಗೆ ಇನ್ನಷ್ಟು ಬಲವನ್ನು ತಂದಿದ್ದು, ಬೇರೆ ಪಕ್ಷಗಳಿಂದ ಬರುವರನ್ನು ಸ್ವಾಗತಿಸಲಾಗುವುದು ಎಂದು  ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

ನಾಗವಲ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೇ ಇರುವುದರಿಂದಲೇ ಇಂದು ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಬೆಂಬಲ ನೀಡಲು ಮುಂದಾಗಿದ್ದಾರೆ, ಮುಂದಿನ ದಿನಗಳಲ್ಲಿ ಬೇರೆ ಬೇರೆ ಪಕ್ಷಗಳಿಂದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ನಿಗದಿಯಾಗಿರುವ ಹೇಮಾವತಿ ನೀರನ್ನು ಸಂಪೂರ್ಣವಾಗಿ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಹಾಗೂ ಗೋಪಾಲಯ್ಯ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಕಳೆದ ವರ್ಷ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹಂಚಿಕೆಯಾಗಿರುವ ಹೇಮಾವತಿ ನೀರು ಹರಿಸಲಿಲ್ಲ, ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯ ತುಂಬುವ ಹಂತಕ್ಕೆ ತಲುಪಿರುವುದರಿಂದ ಹಂಚಿಕೆಯಾಗಿರುವ ನೀರನ್ನು ಸಂಪೂರ್ಣ ಹರಿಸುವ ಮೂಲಕ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.

ಮುಂದಿನ ಸೋಮವಾರ ವಿಧಾನಸೌಧದಲ್ಲಿ ನಡೆಯಲಿರುವ ನೀರಾವರಿ ಸಮಿತಿ ಸಭೆಯಲ್ಲಿ ಕಳೆದ ವರ್ಷ ಕ್ಷೇತ್ರಕ್ಕೆ ಆಗಿರುವ ಅನ್ಯಾಯದ ಕುರಿತು ಸಚಿವರ ಗಮನಸೆಳೆಯುವ ಮೂಲಕ ಈ ಬಾರಿ ಪೂರ್ಣ ಪ್ರಮಾಣದಲ್ಲಿ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ನೀರಿನ ರಾಜಕೀಯವನ್ನು ಬಿಟ್ಟು ಜನರಿಗೆ ನೀರು ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.

ನಾಗವಲ್ಲಿ ಮತ್ತು ಹೊನ್ನುಡಿಕೆ ಕೆರೆಗಳಿಗೆ ನೀರು ಹರಿಸುವ ಮೂಲಕ ಇಷ್ಟು ವರ್ಷಗಳ ಕಾಲ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಸೋಮವಾರ ನಡೆಯಲಿರುವ ಸಭೆಯಲ್ಲಿ ಒತ್ತಾಯಿಸುತ್ತೇನೆ, ಈ ಭಾಗದ ರೈತರ ಬಹುದೊಡ್ಡ ಬೇಡಿಕೆಯಾಗಿರುವ ಈ ಕೆರೆಗಳಿಗೆ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿಯಲ್ಲಿ ಆಗ್ರಹಿಸುವುದಾಗಿ ತಿಳಿಸಿದರು.

ಪಕ್ಷ ಸಂಘಟನೆಗೆ ಒತ್ತು:

ನಾಗವಲ್ಲಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದ್ದು, ಈ ಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಕಾರ್ಯಕರ್ತರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಸೂಚಿಸಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟುವ ದೃಷ್ಟಿಯಿಂದ ಈಗಾಗಲೇ ಪದಾಧಿಕಾರಿಗಳನ್ನು ಬದಲಾಯಿಸಲಾಗಿದೆ. ಈ ಮೂಲಕ ಇನ್ನಷ್ಟು ಬಲಿಷ್ಠವಾಗಿ ಪಕ್ಷವನ್ನು ಕಟ್ಟಬೇಕಿದೆ, ಜೆಡಿಎಸ್ ಕಾರ್ಯಕರ್ತರ ಪಕ್ಷವಾಗಿದ್ದು, ಕಾರ್ಯಕರ್ತರ ಬಲದಿಂದ ರಾಜ್ಯದಲ್ಲಿ ಅಧಿಕಾರವನ್ನು ಪಡೆದಿರುವ ಹಿರಿಮೆ ಪಕ್ಷಕ್ಕೆ ಇದೆ ಎಂದ ಅವರು, ಗ್ರಾಮಾಂತರ ಕ್ಷೇತ್ರವನ್ನು ಜೆಡಿಎಸ್‌ನ ಭದ್ರಕೋಟೆಯಾಗಿ ರೂಪಿಸಲಾಗುವುದು ಎಂದರು.

ಈ ವೇಳೆ ಜೆಡಿಎಸ್ ಮುಖಂಡರಾದ ಹಾಲನೂರು ಅನಂತಕುಮಾರ್, ತಾ.ಪಂ.ಸದಸ್ಯ ದೀಪು, ನಾಗವಲ್ಲಿ ರಾಮಣ್ಣ, ರಾಜು ನಾಗವಲ್ಲಿ, ಗ್ರಾ.ಪಂ.ಸದಸ್ಯ ವಿಜಯ್, ಸುರೇಶ್, ಸ್ವಾಮಿ, ಕೃಷ್ಣಪ್ಪ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *