Tuesday, 27th October 2020

ನಾಲ್ಕು ಬಾರಿ ನಡೆಸಿದ ಕೋವಿಡ್ ಟೆಸ್ಟ್ ನೆಗೆಟಿವ್: ಎಂ.ಪಿ. ರೇಣುಕಾಚಾರ್ಯ

ದಾವಣಗೆರೆ:

ನಾಲ್ಕು ಬಾರಿ ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದು, ನಾಲ್ಕು ಬಾರಿಯೂ ನೆಗೆಟಿವ್ ಬಂದಿದೆ. ಕೋವಿಡ್ ಭೀತಿಯ ನಡುವೆಯೂ ಕ್ಷೇತ್ರದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಹಲವು ಕಾರ್ಯಗಳನ್ನು ಕೈಗೊಂಡಿದ್ದು, ನಮಗೆ ಸಾರ್ವಜನಿಕರ ಆರೋಗ್ಯವೂ ತಮಗೆ ಅಷ್ಟೇ ಮುಖ್ಯ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.
ಇದುವರೆಗೂ ಮೂರು ಬಾರಿ ಆಂಟಿಜೆನ್ ರ್ಯಾಪಿಡ್ ಟೆಸ್ಟ್ ಮಾಡಿಸಿದ್ದು, ನೆಗೆಟಿವ್ ಬಂದಿದೆ. ಅಲ್ಲದೆ ನಾಲ್ಕನೆ ಬಾರಿಗೆ ಆರ್‍ಟಿ ಪಿ.ಸಿ.ಆರ್. ಟೆಸ್ಟ್ ಮಾಡಿಸಿದ್ದು, ನಾಲ್ಕನೇ ಬಾರಿಯೂ ಕೋವಿಡ್ ನೆಗೆಟಿವ್ ವರದಿ ಬಂದಿದೆ ಎಂದಿದ್ದಾರೆ.

ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ತಮ್ಮ ಪುತ್ರ ಸ್ವದೇಶಕ್ಕೆ ಮರಳಿದ್ದು, ಇವರ ಕೋವಿಡ್ ಟೆಸ್ಟ್ ವರದಿಯೂ ನೆಗೆಟೀವ್ ಬಂದಿದೆ. ಅಮೆರಿಕದಲ್ಲಿ ಹೆಚ್ಚು ಸೋಂಕು ವ್ಯಾಪಿಸಿದ್ದರಿಂದ ಆತಂಕಕ್ಕೆ ಒಳಗಾಗಿದ್ದೆವು. ಇದೀಗ ತಮ್ಮ ಪುತ್ರನ ಟೆಸ್ಟ್ ವರದಿ ನೆಗೆಟಿವ್ ಬಂದಿರುವುದರಿಂದ ಆತಂಕ ನಿವಾರಣೆಯಾಗಿದೆ. ಆತಂಕದ ನಡುವೆಯೂ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ಪ್ರವಾಸ ಕೈಗೊಂಡು, 254 ಬೂತ್‍ಗಳಲ್ಲಿನ ಮನೆ ಮನೆಗೂ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರ ವಿತರಿಸಲಾಗಿದೆ. ಎರಡು ಮತ್ತು ಮೂರನೆ ಸುತ್ತಿನಲ್ಲಿ ಆಹಾರಧಾನ್ಯಗಳ ಕಿಟ್ ಅನ್ನು ಸಾರ್ವಜನಿಕರಿಗೆ ವಿತರಿಸಿದ್ದು, ಜನರ ದೂರವಾಣಿ ಕರೆಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಲಾಕ್‍ಡೌನ್ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್‍ಗಳು, ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ, ಆಸ್ಪತ್ರೆ ರೋಗಿಗಳು, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ರಕ್ಷಣಾ ಸಿಬ್ಬಂದಿ, ಅಸಂಘಟಿತ ಕಾರ್ಮಿಕರಿಗೆ ನಿತ್ಯ ಆಹಾರ ಸಿದ್ದಪಡಿಸಿ ನೀಡಲಾಗಿದೆ. ಗ್ರಾಮಗಳಿಗೆ ಭೇಟಿ ನೀಡಿ ಮಾಸ್ಕ್ ಗಳನ್ನು ವಿತರಿಸಲಾಗಿದೆ. ಸೀಲ್‍ಡೌನ್ ಪ್ರದೇಶದಲ್ಲಿ ಆಹಾರಧಾನ್ಯ ಕಿಟ್ ವಿತರಿಸಲಾಗಿದೆ. ಉಭಯ ತಾಲ್ಲೂಕುಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಿನದ 18 ಗಂಟೆಗಳ ಕಾಲ ಸಾರ್ವಜನಿಕರ ಮಧ್ಯದಲ್ಲಿದ್ದು, ಸೋಂಕು ಪೀಡಿತರ ಮನೆಗಳಿಗೆ ಭೇಟಿ ನೀಡಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಲಾಗಿದೆ. ತಾವು ಪ್ರತಿನಿತ್ಯ ಯೋಗ, ಪ್ರಾಣಯಾಮ, ಧ್ಯಾನ, ವಾಯುವಿಹಾರ ಮಾಡುತ್ತಿದ್ದು, ಆರೋಗ್ಯ ಸದೃಢವಾಗಿದೆ. ನಾಲ್ಕನೆ ಬಾರಿಯೂ ಕೋವಿಡ್ ನೆಗೆಟೀವ್ ಬಂದಿರುವುದರಿಂದ ಆತ್ಮವಿಶ್ವಾಸ ಇಮ್ಮಡಿಯಾಗಿದೆ ಎಂದು ಹೇಳಿದ್ದಾರೆ.

ನಮ್ಮ ಕುಟುಂಬದ ಆರೋಗ್ಯದಷ್ಟೇ ಪ್ರಾಮುಖ್ಯತೆಯನ್ನು ಸಾರ್ವಜನಿಕರ ಆರೋಗ್ಯಕ್ಕೂ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *