Wednesday, 20th January 2021

ಬಾವಿಯೊಳಗಿನ ಕಪ್ಪೆಗೆ ಈಗ ವಿಶಾಲ ಜಲದಲ್ಲಿ ಈಜುವ ಅವಕಾಶ!

ಮೋದಿ 2.0 ಸರಕಾರವು ಅಸ್ತಿತ್ವಕ್ಕೆ ಬಂದು ಸುಮಾರು 70 ದಿನಗಳು ಕಳೆದವು. ಈ ಎಪ್ಪತ್ತು ದಿನಗಳಲ್ಲಿ ಪಾರ್ಲಿಮೆಂಟ್‍ನಲ್ಲಿ ಹಲವಾರು ಐತಿಹಾಸಿಕ ವಿಚಾರಗಳ ಚರ್ಚೆಯಾದವು. ನೂತನ ವಿಧೇಯಕಗಳು ಮಂಡನೆಯಾದವು. ಹಳೆಯ ವಿಧೇಯಕಗಳ ತಿದ್ದುಪಡಿಗಳು ಮಂಡನೆಯಾದವು. ಎಂದೂ ಮರೆಯದ ಪಾರ್ಲಿಮೆಂಟ್‍ನ ಬಜೆಟ್ ಸದನವಾಗಿ ಈ ಎಪ್ಪತ್ತು ದಿನಗಳು ಕಳೆದವು. ಪ್ರತಿನಿತ್ಯವೂ ಆರೋಗ್ಯಕರ ಚರ್ಚೆ, ಸಂಸದರಿಗಂತೂ ಲಾಠಿ ಹಿಡಿದುಕೊಂಡು `ನಡಿ ಒಳಗೆ ಕೂಡು’ ಎಂದು ಹೇಳಿದ ರೀತಿಯಲ್ಲಿ ಎಲ್ಲರನ್ನೂ ಸದನದ ಒಳಗೆ ಸೇರಿಸಿಕೊಂಡು ಚರ್ಚೆಗಳು ನಡೆದವು. ಅಲ್ಲದೇ ಈ ಚರ್ಚೆಗಳು ರಾತ್ರಿ 12ಗಂಟೆಯವರೆಗೂ ನಡೆದವು. ಬಹುಶಃ ಈ ರೀತಿಯಲ್ಲಿ ಹಿಂದೆ ಯಾವತ್ತೂ ನಡೆದಿರಲಿಕ್ಕಿಲ್ಲ. ಭಾರತದ ಇತಿಹಾಸದಲ್ಲಿಯೇ ಇದೇ ಮೊದಲಿರಬೇಕು. ಕೇವಲ ಹರಟೆಯಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದ ಹಿಂದಿನ ಸರಕಾರಗಳನ್ನು ನೋಡಿದ್ದ ನಮಗೆ, ಈ ಚರ್ಚೆಗಳು ಅತಿ ಮುಖ್ಯವಾಗಿ ಕಂಡವು. ಈ ಎಲ್ಲ ವಿಧೇಯಕಗಳ ಮಧ್ಯೆ ಅತಿ ಮುಖ್ಯವಾಗಿ ಚರ್ಚೆಯಾಗಿದ್ದು, ಸಂವಿಧಾನದ ವಿಧಿ 370 ಹಾಗೂ 35ಎ ರದ್ದತಿ.

ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಮಾದವಾಗಿದ್ದ ಈ ವಿಧಿಯನ್ನು ರದ್ದುಗೊಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪಟೇಲರನ್ನು ಹಿಂದೆ ತಳ್ಳಿ, ಮಹಾತ್ಮ ಗಾಂಧಿಯವರಿಗೆ ಬ್ಲ್ಯಾಕ್‍ಮೇಲ್ ಮಾಡಿ 1947ರಲ್ಲಿ ಸ್ವಾತಂತ್ರ್ಯ ಭಾರತದ ಮೊಟ್ಟಮೊದಲ ಪ್ರಧಾನಿಯಾಗಿದ್ದ ನೆಹರು ಮಾಡಿದ್ದ ಬಹು ದೊಡ್ಡ ಪ್ರಮಾದವೇ 370 ಹಾಗೂ 35ಎ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದು.
ನೆಹರು ತಾನೊಬ್ಬ ಪಂಡಿತನಾಗಿ, ಮುಸ್ಲಿಂರ ಓಲೈಕೆಗಾಗಿ ಅಂಬೇಡ್ಕರ್‍ರ ಮಾತನ್ನು ಲೆಕ್ಕಿಸದೇ ಅಂದಿನ ರಾಷ್ಟ್ರಪತಿಗಳಿಂದ ಈ ಎರಡೂ ವಿಧಿಯನ್ನು ಜಾರಿಗೆ ತಂದ ಮಹಾನುಭಾವ. ನೆಹರು ಚೇಲಾ ಅಬ್ದುಲ್ಲಾನ ಸ್ವಹಿತಕ್ಕಾಗಿ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಈ ರೀತಿಯ ವಿಶೇಷ ಅಧಿಕಾರವನ್ನು ನೀಡಿ, ಅವನನ್ನು ಸಂತೃಪ್ತಿಗೊಳಿಸಿದ್ದರು. ಅದೇ ಅಬ್ದುಲ್ಲಾನ ವಂಶವು 72 ವರ್ಷಗಳ ಕಾಲ ಈ ವಿಧಿಯನ್ನು ಬಳಸಿಕೊಂಡು ಅಲ್ಲಿನ ಜನರನ್ನು ಜೀತದಾಳುಗಳಂತೆ ಮಾಡಿ ಇಡೀ ಕಾಶ್ಮೀರದ ಸಂಪತ್ತನ್ನೇ ಲೂಟಿ ಮಾಡಿದರು. ಅಲ್ಲಿನ ಜನರಿಗೆ ಎಷ್ಟೋ ದಶಕಗಳ ಕಾಲ ಈ ವಿಧಿಗಳು ತಮ್ಮನ್ನು ಗೆದ್ದಲುಹುಳುವಿನಂತೆ ಒಳಗೊಳಗೆ ತಿನ್ನುತ್ತವೆಂಬ ಸಣ್ಣ ಸಂಶಯವೂ ಇರಲಿಲ್ಲ.
ಇಡೀ ಭಾರತಕ್ಕೆ ಒಂದು ನಿಯಮವಾದರೆ, ಕಾಶ್ಮೀರಕ್ಕೆ ಮಾತ್ರ ತನ್ನದೇ ನಿಯಮ. ಹೊರಗಿನ ರಾಜ್ಯದವರಿಗೆ ಅಲ್ಲಿ ಒಂದು ಇಂಚು ಜಾಗ ತೆಗೆದುಕೊಳ್ಳುವ ಅಥವಾ ಹೊಂದುವ ಅಧಿಕಾರವಿರಲಿಲ್ಲ. ಅಲ್ಲಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವಿರಲಿಲ್ಲ. ಭ್ರಷ್ಟಾಚಾರ ಕಾಯಿದೆಯಡಿ ಅಲ್ಲಿ ಯಾರನ್ನೂ ಬಂಧಿಸುವಂತಿರಲಿಲ್ಲ. ತಮ್ಮದೇ ಆದ, ತಮಗೆ ಬೇಕಾದಂತೆ ನಿಯಮ ಮಾಡಿ ಅಲ್ಲಿನ ಜನರನ್ನು ಹಾಳುಮಾಡಿದ ಕುಟುಂಬಗಳಿವು. ಈ ವಿಧಿಯನ್ನು ಹುಟ್ಟುಹಾಕಿದ್ದು ಒಂದು ಕುಟುಂಬವಾದರೆ, ಅದನ್ನು ಬಳಸಿಕೊಂಡು ಕಾಶ್ಮೀರದ ಸಂಪತ್ತನ್ನೆಲ್ಲ ದೋಚಿದ್ದು ಮತ್ತೊಂದು ಕುಟುಂಬ. ಇದೇ ವಿಚಾರವನ್ನು ಬಳಸಿಕೊಂಡ ಪಾಪಿ ಪಾಕಿಸ್ತಾನ, ಅಲ್ಲಿನ ಜನರ ಮಧ್ಯೆಯೇ ದ್ವೇಷದ ಕಿಡಿಯನ್ನು ಹಚ್ಚಿ ದಶಕಗಳ ಕಾಲ ಒಳಜಗಳವನ್ನು ನಡೆಸಿತ್ತು. ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದು ಪ್ರತ್ಯೇಕತಾವಾದಿಗಳು. ಈ ಪ್ರತ್ಯೇಕತಾವಾದಿಗಳ ವಾದಕ್ಕೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ.

ಪಾಕಿಸ್ತಾನವು ತಿನ್ನಲು ಗತಿಯಿಲ್ಲದೇ ಬಿದಿಗೆ ಬಂದು ನಿಂತಿದೆ. ವಿಶ್ವದ ಇತರ ದೇಶಗಳ ಎದುರು ಭಿಕ್ಷೆ ಬೇಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಅವರ ಜತೆ ನಾವು ಹೋಗುತ್ತೇವೆಂದು ಹೇಳುತ್ತಾರೆ. ಇಂಥ ಮತಾಂಧರಿಗೆ ಏನೆನ್ನಬೇಕು. ಎಲ್ಲೋ ಸ್ವರ್ಗದಲ್ಲಿ ಸುಂದರ ಕನ್ಯೆಯರು ಇವರಿಗಾಗಿ ಕಾಯುತ್ತಿದ್ದಾರೆಂದು ರಕ್ತದ ಹೊಳೆಯನ್ನೇ ಕಣಿವೆ ರಾಜ್ಯದಲ್ಲಿ ಹರಿಸಿ ಸುಮಾರು 42,000 ಅಮಾಯಕರನ್ನು ಬಲಿ ಪಡೆದುಕೊಂಡರು. ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಈ ರೀತಿಯ ಪರಿಸ್ಥಿತಿ. ಉಳಿದವರು ಯಾರೂ ಸಹ ಇವರ ಜತೆ ಸೇರಿಕೊಳ್ಳಲು ಇಚ್ಛಿಸುವುದಿಲ್ಲ.

ಜಮ್ಮು-ಕಾಶ್ಮೀರದಲ್ಲಿ ಪ್ರತಿಯೊಂದು ಚುನಾವಣೆಯಲ್ಲಿಯೂ ಅಲ್ಲಿನ ಮುಗ್ಧ ಜನರ ಭಾವನೆಗಳ ಜತೆ ಈ ಎರಡೂ ವಿಧಿಯನ್ನೇ ಮುಂದಿಟ್ಟುಕೊಂಡು ಅಬ್ದುಲ್ಲಾನ ಕುಟುಂಬ ಗೆದ್ದು ಬಂದಿದೆ. ಇನ್ನು ಮೆಹಬೂಬ ಮುಫ್ತಿ ತಾನು ಏನೋ ಮಾಡುವುದಾಗಿ ಬಂದು, ಏನೂ ಮಾಡಲಾಗದೇ ಕೊನೆಗೆ ತಾನು ಮಾಡಿದ್ದೂ ಅದೇ ಕೆಲಸವನ್ನು. ಅಲ್ಲಿ ನಡೆಯುತ್ತಿದ್ದ ಒಳಜಗಳ, ದಂಗೆಗಳನ್ನು ತಡೆಯಲು ಸೈನ್ಯವನ್ನು ನಿಯೋಜಿಸಿದರೆ, ಅದರ ವಿರುದ್ಧವೇ ಜನರನ್ನು ಎತ್ತಿಕಟ್ಟಿ ಸೈನಿಕರ ಮೇಲೆ ಕಲ್ಲು ಹೊಡೆಸಿದರು. ಸೈನಿಕರ ಮೇಲೆ ಕಲ್ಲು ತೂರುವವನಿಗೆ, ಯಾಕೆ ಸೈನಿಕರತ್ತ ತೂರುತ್ತಿದ್ದಾನೆ ಎಂಬ ಅರಿವೂ ಇರುವುದಿಲ್ಲ. ಅವನನ್ನು ಮತಾಂಧನನ್ನಾಗಿ ಮಾಡಿ, ಅವನ ಕೈಗೊಂದು ಕಲ್ಲು ಹಾಗೂ ಬಂದೂಕು ನೀಡಿದ್ದಾರೆ.

ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಹೊರಗಿನಿಂದ ಉಗ್ರರು ಒಳಬರುವುದು ಅಷ್ಟು ಸುಲಭವಾಗಲಿಲ್ಲ. ಆಗ ಕಾಶ್ಮೀರದ ಸ್ಥಳೀಯ ಯುವಕರನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನವು ನೆರವು ನೀಡಿತ್ತು. ಇತ್ತೀಚೆಗೆ ಪುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆಸಿದ ದಾಳಿಯೇ ಇದಕ್ಕೆ ಸಾಕ್ಷಿ. ಇದುವರೆಗೂ ಈ ರೀತಿಯ ದಾಳಿಗಳಲ್ಲಿ ಭಾರತವು 5,600ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ನೀಡುತ್ತಿದ್ದ 370 ಹಾಗೂ 35ಎ ವಿಧಿಯನ್ನು ಎಂದೋ ರದ್ದುಪಡಿಸಬೇಕಿತ್ತು. ಆದರೆ ನಮ್ಮ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷವು ಮನಸ್ಸೇ ಮಾಡಲಿಲ್ಲ. ತನ್ನ ಬುಡವನ್ನು ಪಕ್ಷದ ಮೊದಲ ಪ್ರಧಾನಮಂತ್ರಿ ನೆಹರು ಗಟ್ಟಿ ಮಾಡಿಕೊಳ್ಳಲು ಹುಟ್ಟು ಹಾಕಿದ ಈ ವಿಧಿಯನ್ನು ಅವರ ಮಗಳು, ಮೊಮ್ಮಗನಾದರೂ ರದ್ದುಗೊಳಿಸಬೇಕಿತ್ತು. ಇವರ್ಯಾರಿಗೂ ಆ ಕುರಿತು ನಿರ್ಧಾರ ತೆಗೆದುಕೊಳ್ಳುವ ಧೈರ್ಯವೇ ಇರಲಿಲ್ಲ. ಏಕೆಂದರೆ ಅಲ್ಲಿಯೂ ಇದ್ದಿದ್ದು ಕುಟುಂಬ ರಾಜಕಾರಣವೇ ತಾನೆ? ಇದೇ ರೀತಿ ಅಂದು ಹೈದರಾಬಾದ್ ಸಂಸ್ಥಾನವನ್ನು ಸಹ ಬಿಟ್ಟುಕೊಡುವ ಎಲ್ಲಾ ಚಿಂತನೆ ನಡೆಸಿದ್ದರೆಂದು ಇತಿಹಾಸವೇ ಹೇಳುತ್ತದೆ. ತನ್ನ ಸ್ವಾರ್ಥಕ್ಕಾಗಿ ಈ ಮನುಷ್ಯ ಏನು ಬೇಕಾದರೂ ಮಾಡುವ ಮನಸ್ಥಿತಿಯಲ್ಲಿದ್ದುದು ಎಲ್ಲರಿಗೂ ಗೊತ್ತು. ಇನ್ನು ಅದೇ ರಕ್ತ ಹಂಚಿಕೊಂಡು ಹುಟ್ಟಿರುವ ಮುಂದಿನ ಪೀಳಿಗೆಯವರು ಮಾಡುತ್ತಾರೆಯೇ?


ಇನ್ನು ನಮ್ಮ ಮನಮೋಹನ ಸಿಂಗ್ ಕೂಡ ಕಾಶ್ಮೀರ ಕುರಿತು ಗಟ್ಟಿ ನಿರ್ಧಾರ ತೆಗೆದುಕೊಳ್ಳಲೂ ಆಗಲಿಲ್ಲ. ಮನಮೋಹನ ಸಿಂಗ್ ಕೂಡ ಏನೂ ಮಾಡಲಿಲ್ಲ. ಅವರ ಕುಟುಂಬಕ್ಕೆ ನಿಷ್ಠಾವಂತನಾಗಿ ಇರಲು ಬಯಸಿದರು. 50 ಪೇಜಿನ ಬಯೋಡೆಟಾ ಹೊಂದಿದ್ದ ಪ್ರಧಾನಮಂತ್ರಿಯವರು, ಮೇಡಂ ಹೇಳಿದ ಕಡತಗಳಿಗೆಲ್ಲ ಕೇವಲ ರಬ್ಬರ್‍ಸ್ಟಾಂಪ್ ಒತ್ತುತ್ತಿದ್ದವರಿಗೆ ಇನ್ನು ಈ ವಿಧಿಯನ್ನು ರದ್ದು ಮಾಡುವ ಧೈರ್ಯ ಎಲ್ಲಿಂದ ತಾನೆ ಬರುತ್ತದೆ?
ಅಟಲ್‍ಜೀ ಕೂಡ ಈ ವಿಚಾರವನ್ನು ಮುಟ್ಟುವ ಧೈರ್ಯ ಮಾಡಲಿಲ್ಲ. ಯಾಕೆಂದರೆ ಆಗ ಬಿಜೆಪಿ ಪಕ್ಷಕ್ಕೆ 182 ಸೀಟುಗಳು ಬಂದಿದ್ದವು. ಎನ್‍ಡಿಎ ಮೈತ್ರಿಕೂಟದ ಪಕ್ಷಗಳ ಜತೆಗೆ ಅಧಿಕಾರ ನಡೆಸಬೇಕಿತ್ತು. ಈ ರೀತಿಯ ದೃಢ ನಿರ್ಧಾರವನ್ನು ಕೈಗೊಳ್ಳಲು ಸಂಪೂರ್ಣ ಅಧಿಕಾರದ ಅವಶ್ಯಕತೆಯೂ ಇತ್ತು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ನರೇಂದ್ರ ಮೋದಿ, ಯಾವಾಗ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಕ್ಷೇತ್ರಗಳಲ್ಲಿ ಗೆದ್ದಿತೋ, ಈ ಎರಡೂ ವಿಧಿಯನ್ನು ಕಿತ್ತು ಹಾಕಲೇಬೇಕೆಂಬ ದೃಢ ನಿರ್ಧಾರಕ್ಕೆ ಬರುವಂತಾಯಿತು. ತಾನೊಬ್ಬನೇ ಇದನ್ನು ಅಷ್ಟು ಸುಲಭವಾಗಿ ಮಾಡುವುದು ಸೂಕ್ತವಲ್ಲವೆಂದಾಗ, ತನ್ನ ಮಿತ್ರ ಅಮಿತ್ ಶಾ ಅವರನ್ನು ಗೃಹಮಂತ್ರಿಯನ್ನಾಗಿಸುವ ಮೂಲಕ ಒಂದು ಸ್ಪಷ್ಟವಾದ ಸಂದೇಶವನ್ನು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ, ಅಬ್ದುಲ್ಲಾನ ಸಂಕುಲ, ಪಾಕಿಸ್ತಾನಕ್ಕೆ ರವಾನಿಸಿದ್ದರು. ಇದಕ್ಕಾಗಿಯೇ ಸುಮಾರು ಮೂರು ತಿಂಗಳುಗಳಕಾಲ ತಯಾರಿಯನ್ನು ನಡೆಸಿ, ಎಲ್ಲ ಪ್ರತ್ಯೇಕತಾವಾದಿಗಳನ್ನು ಗೃಹಬಂಧನದಲ್ಲಿರಿಸಿ ಹೆಚ್ಚುವರಿ ಸೈನ್ಯವನ್ನು ಕಾಶ್ಮೀರಕ್ಕೆ ಕಳುಹಿಸಿ ಎಲ್ಲಾ ರೀತಿಯ ಬಂದೋಬಸ್ತ್ ಮಾಡಿದ ನಂತರವೇ ಪಾರ್ಲಿಮೆಂಟ್‍ನಲ್ಲಿ 370 ಹಾಗೂ 35ಎ ವಿಧಿಯ ರದ್ದತಿಯನ್ನು ಘೋಷಿಸಿಯೇ ಬಿಟ್ಟರು.

ಅಂದಿನ ಕಾಲದಲ್ಲಿ ರಾಷ್ಟ್ರಪತಿಯನ್ನು ಬಳಸಿಕೊಂಡು ಹೇಗೆ ನೆಹರು ಈ ಎರಡೂ ವಿಧಿಯನ್ನು ಹುಟ್ಟು ಹಾಕಿದರೋ, ಅದೇ ರೀತಿಯಾಗಿ ರಾಷ್ಟ್ರಪತಿಯಿಂದಲೇ ಈ ಎರಡೂ ವಿಧಿಯನ್ನು ರದ್ದು ಮಾಡಿಯೇ ಬಿಟ್ಟರು. ಈ ವಿಚಾರವನ್ನು ಸುಬ್ರಮಣಿಯಮ್ ಸ್ವಾಮಿ ಮೊದಲೇ ಹೇಳಿದ್ದರು, ಸುಲಭವಾಗಿಯೇ ಈ ಎರಡೂ ವಿಧಿಯನ್ನು ತೆಗೆಯಬಹುದೆಂಬ ಸತ್ಯ ಅವರಿಗೆ ಗೊತ್ತಿತ್ತು. ಆದರೆ ಸುಲಭವಾಗಿ ಮಾಡಬಹುದಾದ ಈ ಕೆಲಸವನ್ನು ಯಾರೂ ಮಾಡಿರಲಿಲ್ಲ. ಎಲ್ಲರೂ ಈ ವಿಚಾರವನ್ನು ಜೇನುಗೂಡಿಗೆ ಕಲ್ಲು ಹೊಡೆದ ಹಾಗೆ ಎಂದು ಭಾವಿಸಿದ್ದರು. ಹಾಗಾಗಿ ಯಾರೂ ಮುಟ್ಟುವ ಧೈರ್ಯ ಮಾಡಲಿಲ್ಲ. ಕೊನೆಗೆ ಸರ್ದಾರ್ ವಲ್ಲಭ ಭಾಯ್ ಪಟೇಲರ ಎರಡನೇ ಅವತಾರವಾಗಿ ಗೃಹಮಂತ್ರಿ ಅಮಿತ್ ಶಾ ಈ ಕೆಲಸ ಮಾಡಿದರು.

ಇನ್ನು ಈ ವಿಧಿ ರದ್ದತಿಯಿಂದ ಆರೆಸ್ಸೆಸ್ ಬಹುದಿನಗಳ ಬೇಡಿಕೆಯೊಂದನ್ನು ನರೇಂದ್ರ ಮೋದಿ ಈಡೇರಿಸಿದ್ದರು. ಈ ವರ್ಷ ಮಹಾರಾಷ್ಟ್ರದ ಚುನಾವಣೆಯನ್ನು ಆರಾಮಾಗಿ ಗೆಲ್ಲುತ್ತಾರೆ. ಒಂದು ಚುನಾವಣೆಯನ್ನು ಗೆಲ್ಲಲು ಮೋದಿಗೆ ಇದಕ್ಕಿಂತಲೂ ದೊಡ್ಡ ಅಸ್ತ್ರವು ಬೇರೊಂದಿಲ್ಲ. ಇನ್ನು ಜನರೆಲ್ಲರಿಗೂ ದೇಶಾದ್ಯಂತ ಮೋದಿಯವರ ಮೇಲಿನ ನಂಬಿಕೆ ದುಪ್ಪಟ್ಟಾಗಿರುವುದರಿಂದ ಕಣ್ಣುಮುಚ್ಚಿಕೊಂಡು ವೋಟು ಹಾಕುತ್ತಾರೆ. ಬಹುಶಃ ಶಿವಸೇನೆಯ ಅಗತ್ಯವೂ ಬೇಕಾಗುವುದಿಲ್ಲ. ಅಷ್ಟರಮಟ್ಟಿಗೆ ವೋಟುಗಳನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಈ ವಿಷಯವು ತಂದುಕೊಡಲಿದೆ. ಮಾಡಿದ ಕೆಲಸವನ್ನು ಹೇಳಿ ವೋಟು ಕೇಳುವುದರಲ್ಲಿ ಯಾವ ತಪ್ಪು ಇಲ್ಲ ಬಿಡಿ. ನಾನು ಸಾಯುತ್ತೇನೆ, ಇದು ನನ್ನ ಕೊನೆಯ ಚುನಾವಣೆಯೆಂದು ಮೊಸಳೆ ಕಣ್ಣೀರು ಹಾಕಿ ವೋಟು ಕೇಳುವ ನಾಯಕರ ಮುಂದೆ ಎದೆಯುಬ್ಬಿಸಿಕೊಂಡು ವೋಟು ಕೇಳುವುದರಲ್ಲಿ ತಪ್ಪೇ ಇಲ್ಲ. ಇನ್ನು ಈ ರದ್ದತಿಯನ್ನು ಬೇರೆ ಪಕ್ಷಗಳಾದ ಟಿಡಿಪಿ, ಎಐಎಡಿಎಮ್‍ಕೆ, ಟಿಆರ್‍ಎಸ್, ವೈಎಸ್‍ಆರ್‍ಸಿ, ಬಿಎಸ್‍ಪಿಗಳು ಸಹ ಸ್ವಾಗತಿಸಿದವು ಹಾಗೂ ಪಾರ್ಲಿಮೆಂಟ್‍ನಲ್ಲಿ ಬೆಂಬಲಿಸಿದವು. ಆದರೆ ಅದನ್ನು ಹುಟ್ಟುಹಾಕಿದ ಕಾಂಗ್ರೆಸ್ ಮಾತ್ರ ಬೆಂಬಲಿಸಲಿಲ್ಲ. ದೇಶಾದ್ಯಂತ ಜನರು ಸಂಭ್ರಮಿಸುತ್ತಿದ್ದರೂ, ಕಾಂಗ್ರೆಸ್ ಮಾತ್ರ ಬೆಂಬಲಿಸಲಿಲ್ಲ.

ಸದನದಲ್ಲಿ ಕಾಂಗ್ರೆಸ್ ಸಂಸದನೊಬ್ಬ, ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮಸ್ಯೆಯೆಂದು ಹೇಳುವುದರ ಮೂಲಕ ತಮ್ಮ ಪಕ್ಷದ ಶವ ಪೆಟ್ಟಿಗೆಯ ಕೊನೆ ಮೊಳೆಯನ್ನು ಹೊಡೆದೇ ಬಿಟ್ಟ. ಇನ್ನು ಕೆಲವರು ಅಲ್ಲಿನ ಜನರ ಅಭಿಪ್ರಾಯವನ್ನು ಪಡೆಯದೇ ಈ ಸರಕಾರವು 370 ಹಾಗೂ 35ಎ ರದ್ದು ಮಾಡಿದೆಯೆಂದು ಬಾಯಿಬಡಿದುಕೊಂಡರು. ಯಾರು ಬಾಯಿ ಬಡಿದುಕೊಂಡರೂ ಕೇಳಲು ಯಾರೂ ತಯಾರಿರಲಿಲ್ಲ. ಯಾಕೆಂದರೆ ಈ ಎರಡೂ ವಿಧಿಗಳನ್ನು ಹುಟ್ಟಿಸುವಾಗ ಅದರ ಅಪ್ಪ ಯಾರನ್ನೂ ಕೇಳಿರಲಿಲ್ಲ. ನಮ್ಮ ದೇಶದ ಮುಕುಟಮಣಿಯನ್ನುನಾವು ಸರಿಪಡಿಸಲು ಯಾರ ಅಪ್ಪಣೆಯೂ ಬೇಕಿಲ್ಲ.

ಇನ್ನು ಅಂಡುಸುಟ್ಟ ಬೆಕ್ಕಿನಂತೆ ಆಡುತ್ತಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್‍ಖಾನ್‍ನ ಪರಿಸ್ಥಿತಿಯಂತೂ ನೋಡಿದರೆ ನಗು ಬರುತ್ತದೆ. ನಮ್ಮ ಆಂತರಿಕ ವಿಚಾರವನ್ನು ಬಗೆಹರಿಸಿಕೊಳ್ಳುವ ಹಕ್ಕು ನಮಗಿದೆ. ಅದನ್ನು ಕೇಳಲು ಇವನ್ಯಾರು? ನಾವು ಈ ವಿಧಿಯನ್ನು ರದ್ದು ಮಾಡಿರುವುದರಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ವ್ಯವಹಾರ ಸಂಬಂಧವನ್ನು ನಿಲ್ಲಿಸುತ್ತಾನಂತೆ. `ಸಂಝೋತಾ ಎಕ್ಸ್‍ಪ್ರೆಸ್’ ಸಂಚಾರವನ್ನು ನಿಷೇಧಿಸಿದ್ದಾನೆ. ಅಲ್ಲಾ, ಯಾರು ತಾನೆ ಪಾಕಿಸ್ತಾನವನ್ನು ನಂಬಿಕೊಂಡು ಭಾರತದಲ್ಲಿ ಬದುಕುತ್ತಿದ್ದಾರೆ? ಇನ್ನು ಅಲ್ಲಿನ ಹಲವಾರು ರೋಗಿಗಳು ಭಾರತದಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವೀಸಾ ನೀಡಿ ಎಂದು ಬೇಡಿಕೊಳ್ಳುತ್ತಾರ. ಅಲ್ಲಿ ಮಾಡಲು ಕೆಲಸವಿಲ್ಲದೇ ಭಾರತಕ್ಕೆ ಬರುತ್ತಾರೆ. ಪ್ರಪಂಚದ ವಿವಿದೆಡೆಗೆ ಹೋಗುತ್ತಾರೆ.

ಈತ ಹೇಳುವುದು ನೋಡಿದರೆ, ಏನೋ ಈ ನಿರ್ಧಾರದಿಂದ ಭಾರತಕ್ಕೆ ಬಿಲಿಯನ್ ಡಾಲರ್‍ನಷ್ಟು ನಷ್ಟವಾಗುತ್ತದೆ ಎಂಬ ರೀತಿಯಲ್ಲಿ ತಿಳಿದುಕೊಂಡಿದ್ದಾನೆ. `ಸಂಜೋತಾ ಎಕ್ಸ್‍ಪ್ರೆಸ್’ ರೈಲನ್ನು ನಿಲ್ಲಿಸಿದರೆ, ಪಾಕಿಸ್ತಾನಕ್ಕೇ ಅತಿ ಹೆಚ್ಚು ನಷ್ಟವಾಗುತ್ತದೆ. ನಮಗೇನೂ ಆಗುವುದಿಲ್ಲವೆಂಬ ಕನಿಷ್ಟ, ಸಾಮಾನ್ಯ ಜ್ಞಾನ ಈತನಿಗಿಲ್ಲ. ಇನ್ನು ಅತ್ತ ಅಫ್ಘಾನಿಸ್ತಾನದಿಂದ ಅಮೆರಿಕವು ತನ್ನ ಸೇನೆಯನ್ನು ಹಂತಹಂತವಾಗಿ ವಾಪಸ್ ಕರೆಯಿಸಿಕೊಳ್ಳುತ್ತಿದೆ. ಇತ್ತ ಬಲೂಚಿಸ್ತಾನದಿಂದ ಅಲ್ಲಿನ ಪ್ರತ್ಯೇಕತಾವಾದಿಗಳೂ ಪ್ರತಿನಿತ್ಯವೂ ಪಾಕಿಸ್ತಾನಕ್ಕೆ ಹಿಂಸೆ ನೀಡುತ್ತಿದ್ದಾರೆ. ಎಲ್ಲಾ ಕಡೆಯಿಂದಲೂ ನಷ್ಟ ಅನುಭವಿಸುತ್ತಿದ್ದವನಿಗೆ ಈಗ ತಾನೇ ಮಾಡಿದ ತಪ್ಪಿನಿಂದ ಇನ್ನೂ ಹೆಚ್ಚು ನಷ್ಟವಾಗಿದೆ.

ಕೆಲವೊಂದು ವಿಷಯಗಳಲ್ಲಿ ಮುಂದೇನು ಎಂಬ ವಿಚಾರಕ್ಕೆ ಬರುವುದಾದರೆ, ಕೆಲವು ಕಡೆ ಈ ನಿರ್ಧಾರವನ್ನು ಕೋರ್ಟಿನಲ್ಲಿ ಪ್ರಶ್ನಿಸಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ, 370 ಹಾಗೂ 35ಎ ವಿಧಿ ರದ್ದುಗೊಳಿಸಿದ್ದು.
ಕಾಶ್ಮೀರದಲ್ಲಿನ ಸರಕಾರವು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬೇಕು. ಆದರೆ ಕಾಶ್ಮೀರದಲ್ಲಿ ಕಳೆದ ಆರು ತಿಂಗಳಿನಿಂದ ರಾಷ್ಟ್ರಪತಿಗಳ ಆಡಳಿತವಿರುವುದರಿಂದ ಅಲ್ಲಿನ ಗವರ್ನರ್ ಈ ಎರಡೂ ವಿಧಿಯನ್ನುರದ್ದುಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದರು. ಹಾಗಾಗಿ ಗವರ್ನರ್‍ಗೆ ಈ ಅಧಿಕಾರವಿದೆಯೇ ಎಂಬ ಪ್ರಶ್ನೆಗಳು ಅಲ್ಲಲ್ಲಿ ಹರಿದಾಡುತ್ತಿವೆ. ಆದರೆ ಹಲವಾರು ದೊಡ್ಡ ದೊಡ್ಡ ವಕೀಲರು ಇದು ನ್ಯಾಯವಾಗಿಯೇ ನಡೆದಿದೆ, ಗವರ್ನರ್ ಎಂದರೆ ಸರಕಾರ. ಅವರು ಶಿಫಾರಸ್ಸು ಮಾಡಬಹುದೆಂದು ಹೇಳಿದ್ದಾರೆ. ಹಾಗಾಗಿ ಅಷ್ಟೊಂದು ದೊಡ್ಡ ನಕರಾತ್ಮಾಕ ಅಂಶವಾಗಿ ಈ ವಾದವು ಕಾಣುವುದಿಲ್ಲ. ಇನ್ನು ಸುಬ್ರಮಣಿಯಂ ಸ್ವಾಮಿಯವರೇ ಈ ರೀತಿಯಾಗಿ ಮಾಡಬಹುದೆಂದು ಹಲವಾರು ದಶಕಗಳಿಂದ ಹೇಳಿಕೊಂಡು ಬರುತ್ತಿರುವುದರಿಂದ ಇದು ಸರಿಯಾಗಿಯೇ ಇದೆ ಎಂಬುದು ಹಲವರ ವಾದ.

ಈ ವಿಚಾರವಾಗಿ ಕಾಶ್ಮೀರದ ಶೀಲಾ ರಷೀದ್ ಕೋರ್ಟಿನ ಮೆಟ್ಟಿಲು ಏರುವುದಾಗಿ ಹೇಳಿದ್ದಾರೆ. ಈ ವಿಚಾರಣೆ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡಬೇಕು. ಪ್ರಧಾನಿಯವರ ಆತ್ಮ ವಿಶ್ವಾಸವನ್ನು ಕಂಡರೆ ನ್ಯಾಯಾಲಯದಲ್ಲಿ ಯಾವ ರೀತಿಯ ಮ್ಯಾಜಿಕ್ ಕೂಡ ನಡೆಯುತ್ತಿಲ್ಲವೆನಿಸುತ್ತದೆ. ಇನ್ನು ಕಾಶ್ಮೀರದ 370 ಹಾಗೂ 35ಎ ವಿಧಿಯನ್ನೇ ತನ್ನ ಅಸ್ತ್ರವಾಗಿಸಿಕೊಂಡು ಭಾರತದ ಮೇಲೆ ದಾಳಿಗಳನ್ನು ನಡೆಸುತ್ತಿದ್ದ ಪಾಕಿಸ್ತಾನವು ಇನ್ನು ಮುಂದೆ ಈ ಅಸ್ತ್ರವೂ ಇಲ್ಲದ ಕಾರಣ, ಮೈಮೇಲೆ ಹುಳು ಬಿಟ್ಟುಕೊಂಡವರಂತೆ ಆಡುತ್ತಿರುವುದು ನೋಡಿದರೆ, ಹೊಟ್ಟೆ ಉರಿಯಿಂದ ಇನ್ನೂ ಹೆಚ್ಚಿನ ಭಯೋತ್ಪಾದಕ ದಾಳಿ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಇಮ್ರಾನ್‍ಖಾನ್ `ಪುಲ್ವಾಮಾ ಮಾದರಿಯ ದಾಳಿಯು ಮರುಕಳಿಸುತ್ತಿದೆ’ಯೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಉಗ್ರ ಹಫೀಜ್ ಸಯೀದ್‍ನನ್ನು ಈಗಾಗಲೇ ಬಿಡುಗಡೆ ಮಾಡಿರುವುದನ್ನು ನೋಡಿದರೆ, ಆತನಿಂದ ಇನ್ನೂ ಹಲವಾರು ದಾಳಿಗಳನ್ನು ನಿರೀಕ್ಷಿಸಬಹುದು. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಭಾರತದ ಎರಡೂ ಕಣ್ಣನ್ನು ತೆಗೆಯಬಯಸುವ ಬುದ್ಧಿ ಪಾಕಿಸ್ತಾನಕ್ಕೆ ಹೊಸತೇನಲ್ಲ. ಈ ದಾಳಿಗಳನ್ನು ನಡೆಯದೇ ಇರುವ ಹಾಗೆ ತಡೆಯುವ ಬಹುದೊಡ್ಡ ಜವಾಬ್ದಾರಿಯು ಗೃಹ ಸಚಿವ ಅಮಿತ ಶಾ ಅವರ ಮೇಲಿದೆ.

ಲಡಾಖ್‍ನ ಜನರಿಗೆ ತಮ್ಮ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿರುವುದು ತುಂಬಾ ಖುಷಿ ತಂದಿದೆ. ಹಲವು ದಶಕಗಳಿಂದ ಈ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದರು. ಯಾವ ಬೇಡಿಕೆಗೂ ಸೊಪ್ಪು ಹಾಕದ ಹಿಂದಿನ ಸರಕಾರಗಳು ಅವರಿಗೆ ಅನ್ಯಾಯ ಮಾಡಿತ್ತು. ಕಾರ್ಗಿಲ್, ಸಿಯಾಚಿನ್, ಟಿಬೆಟನ್ ಮತ್ತು ಚೀನಾ ಬಾರ್ಡರ್‍ಗಳು ಇರುವುದರಿಂದ ಅಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಅಗತ್ಯವಿದೆ. ಅತಿ ಹೆಚ್ಚಿನ ಸೈನ್ಯವನ್ನು ಅಲ್ಲಿ ನಿಯೋಜಿಸಿ, ಸೈನ್ಯಕ್ಕೆ ಸಂಬಂಧಿಸಿದ ಹಲವಾರು ಸೌಕರ್ಯಗಳನ್ನು ನಿರ್ಮಿಸಲು ಈಗ ಕೇಂದ್ರ ಸರಕಾರವು ಯೋಚಿಸಿದೆ. ಈ ಹಿಂದೆ ಕೇಂದ್ರ ಸರಕಾರವು ನೇರವಾಗಿ ಅಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಸಾಧ್ಯವಿರಲಿಲ್ಲ. ಈಗ ಕೇಂದ್ರಾಡಳಿತ ಪ್ರದೇಶವಾದ ಮೇಲೆ ನೇರವಾಗಿ ತನ್ನ ಅಧಿಕಾರವನ್ನು ಪ್ರಯೋಗಿಸಬಹುದು. ಇದರಿಂದಾಗಿ ಚೀನಾಕ್ಕೆ ಅತಿ ಮುಖ್ಯವಾದ ಸಂದೇಶವನ್ನು ರವಾನಿಸಿದೆ.

ಪ್ರಧಾನಿ ಮೋದಿಯವರು ಗುರುವಾರ ಸಂಜೆ ದೇಶವನ್ನುz್ದÉೀಶಿಸಿ ಮಾತನಾಡಿದ್ದನ್ನು ನಾವು ಕೇಳಿದ್ದೀವಿ. ಅವರು ಹೇಳಿದ ಹಾಗೆ ಕಾಶ್ಮೀರವು ಇಷ್ಟು ವರ್ಷ ಮುಖ್ಯವಾಹಿನಿಗೆ ಬರದೇ ಬಾವಿಯಲ್ಲಿನ ಕಪ್ಪೆಯಂತಾಗಿದೆ. ಅಲ್ಲಿನ ಜನರಿಗೆ ಹೊರಗಿನ ಪ್ರಪಂಚದ ಅರಿವಾಗಿಲ್ಲ. ನಾನು ಶ್ರೀನಗರಕ್ಕೆ ಹೋಗಿದ್ದಾಗ, ಅಲ್ಲಿನ ಡ್ರೈವರ್ ಒಬ್ಬ, `ನೀವು ಭಾರತದಿಂದ ಬಂದಿದ್ದೀರಾ?’ ಎಂದು ಕೇಳಿದ. ನನಗೆ ಮೈಯೆಲ್ಲ ಉರಿದುಹೋಗಿತ್ತು. ಇಷ್ಟರಮಟ್ಟಿಗೆ ಅಲ್ಲಿನ ಜನರ ಬ್ರೈನ್ ವಾಷ್ ಮಾಡಲಾಗಿದೆ. ಕಾಶ್ಮೀರದ ಕೇಸರಿ ಹಾಕಿದ ಹಾಲನ್ನು ಕುಡಿದು ಬೆಳೆದ ಅದೆಷ್ಟೋ ಜನರು ಇಂದು ಸೈನ್ಯದಲ್ಲಿದ್ದಾರೆ. ಕಾಶ್ಮೀರದ ಸೇಬು, ಆಯುರ್ವೇದಗಳನ್ನು ಇಡೀ ಜಗತ್ತಿಗೇ ಪರಿಚಯಿಸಬೇಕೆಂಬ ಹಲವು ಸಾಹಸಿಗರಿಗೆ ಹಂಬಲವಿದೆ. ಕಾಶ್ಮೀರದಲ್ಲಿನ ವಿದ್ಯಾರ್ಥಿಗಳು ಹೊರಬಂದು ಓದುವ ಬದಲು ಅಲ್ಲಿಯೇ ಓದುವಂತಹ ಶಾಲೆಗಳು, ಕಾಲೇಜುಗಳು ನಿರ್ಮಾಣವಾಗಬೇಕಿದೆ. ಇನ್ನು ಈ ಎರಡೂ ವಿಧಿಯನ್ನು ತೆಗೆದ ಮೇಲೆ ಅಲ್ಲಿಗೆ ಹೂಡಿಕೆದಾರರು ದೌಡಾಯಿಸುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.

ಮಾರ್ವಾಡಿಗಳು, ಗುಜರಾತಿಗಳು, ಬನಿಯಾಗಳು, ಶೆಟ್ಟರು ಕಾಶ್ಮೀರದಲ್ಲಿನ ಹೂಡಿಕೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇವರೆಲ್ಲರಿಗೂ ಕೆಲವು ವರ್ಷಗಳ ಕಾಲ ರಕ್ಷಣೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈಗಾಗಲೇ ಅಕ್ಟೋಬರ್ ತಿಂಗಳಲ್ಲಿ ಹೂಡಿಕೆದಾರರ ಸಮಾವೇಶವನ್ನು ಕಾಶ್ಮೀರದಲ್ಲಿ ನಡೆಸುವ ಬಗ್ಗೆ ಕೇಂದ್ರ ಸರಕಾರವು ಚಿಂತನೆಯನ್ನು ನಡೆಸಿದೆ. ಈ ಸಮಾವೇಶದಲ್ಲಿ ಯಾವುದಾದರೊಂದು ದೊಡ್ಡ ಪ್ರಮಾಣದ ಹೂಡಿಕೆಯ ಭರವಸೆ ಸಿಕ್ಕರೆ ಸಾಕು, ಅದು ಮೋದಿಗೆ ಸಂದ ಅತ್ಯದ್ಭುತ ವಿಜಯ. ಅಪ್ಪಿ ತಪ್ಪಿ ಇಸ್ರೇಲ್ ದೇಶವೇನಾದರೂ ಕಾಶ್ಮೀರದಲ್ಲಿ ತನ್ನ ಯಾವುದಾದರೊಂದು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಮುಗಿಯಿತು. ಯಾರೊಬ್ಬರೂ ಬಾಲ ಬಿಚ್ಚುವುದಿಲ್ಲ. ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಈ ಸಮಾವೇಶವು ಪ್ರಯೋಜನಕಾರಿಯಾಗಲಿದೆಯೆಂದು ಕಾದು ನೋಡಬೇಕಿದೆ.

ಇನ್ನು ಉಟ್ಟ ಬಟ್ಟೆಯಲ್ಲೇ ತಮ್ಮ ಮನೆಗಳನ್ನು ಬಿಟ್ಟು ಬಂದ ಕಾಶ್ಮೀರಿ ಪಂಡಿತರಿಗೆ ತಾವು ಕಳೆದುಕೊಂಡ ಮನೆ-ಮಠಗಳನ್ನು ಹಿಂದಿರುಗಿಸು ಕಾರ್ಯವನ್ನು ಸರಕಾರ ಮಾಡಬೇಕಿದೆ. ಕಾಶ್ಮೀರಿ ಪಂಡಿತರು ತಮ್ಮ ಸ್ವಂತ ಊರು, ಮನೆಗಳಿಗೆ ವಾಪಸ್ ಹೋಗುವಂತಾಗಬೇಕು.
ಪಾಕಿಸ್ತಾನ ಹಾಗೂ ಚೀನಾವನ್ನು ಪ್ರಪಂಚದ ಎಲ್ಲಾ ರಾಷ್ಟ್ರಗಳಿಂದ ಮೂಲೆಗುಂಪು ಮಾಡಿಸಿ, ಈ ರೀತಿಯ ನಿರ್ಧಾರಗಳನ್ನು ನಮ್ಮ ಪ್ರಧಾನಿ ತೆಗೆದುಕೊಂಡರು. ಹಾಗಾಗಿಯೇ ಯಾವೊಬ್ಬ ವಿದೇಶಿ ಪ್ರಧಾನಮಂತ್ರಿಯೂ ಇಂದು ನಮ್ಮ ದೇಶದ ನಿರ್ಧಾರದ ವಿರುದ್ಧ ಒಂದು ಹೇಳಿಕೆಯನ್ನೂ ನೀಡುತ್ತಿಲ್ಲ.

2 thoughts on “ಬಾವಿಯೊಳಗಿನ ಕಪ್ಪೆಗೆ ಈಗ ವಿಶಾಲ ಜಲದಲ್ಲಿ ಈಜುವ ಅವಕಾಶ!

Leave a Reply

Your email address will not be published. Required fields are marked *