Tuesday, 29th September 2020

ಭಾರೀ ಮಳೆ : ಬಾಳೆ ಗಿಡಗಳು ನಾಶ

ಶಿರಸಿ :
ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗಾಳಿಯ ಪರಿಣಾಮ ತಾಲೂಕಿನ ಬನವಾಸಿಯ ವದ್ದಲ ಗ್ರಾಮದಲ್ಲಿ ೧೫ ಎಕರೆಗೂ ಅಧಿಕ ಬಾಳೆ ಗಿಡಗಳು ನಾಶವಾಗಿದ್ದು, ೬ ಲಕ್ಷಕ್ಕೂ ಅಧಿಕ ಹಾನಿಯಂಟಾಗಿದೆ.

ದಾಸನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ವದ್ದಲ ಹಾಗೂ ಅಕ್ಕ ಪಕ್ಕದ ಗ್ರಾಮದಲ್ಲಿ ಭಾರೀ ಗಾಳಿಯ ಕಾರಣದಿಂದ ಬಾಳೆ ಗಿಡ ನೆಲ ಕಚ್ಚಿದ್ದು, ಸುಮಾರು ೧೩ ರೈತರ ೧೫ ಎಕರೆಗೂ ಅಧಿಕ ಬಾಳೆ ಗಿಡ ನಾಶವಾಗಿದ್ದು, ತಲಾ ೫೦ ಸಾವಿರ ಹಾನಿಯುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಗ್ರಾಮದ ಶಂಕ್ರಪ್ಪ, ಸದಾನಂದ ಗೌಡ, ನೀಲಪ್ಪ ಮಾದರ, ಮಲ್ಲಿಕಾರ್ಜುನ ಗೌಡ, ಬಂಗಾರಪ್ಪ ಗೌಡ, ಎಂ.ಎಸ್.ಗೌಡ, ಗುತ್ಯಪ್ಪ ಚನ್ನಯ್ಯ, ಚನ್ನಬಸಪ್ಪ ಗೌಡ, ಶಿವಾನಂದ ಹುಲ್ಯಣ್ಣನವರ, ಲೇಖಪ್ಪ ಹೊಸೂರು, ಫಕೀರಪ್ಪ ಗೋಂದಿ ಎಂಬುವರಿಗೆ ಸೇರಿದ ಜಮೀನಿನ ಬೆಳೆಗಳು ನಾಶವಾಗಿದೆ.

ಇದಲ್ಲದೇ ಸಂತೊಳ್ಳಿ, ಕಾಳಂಗಿ ಭಾಗದ
ಬಸವರಾಜ, ದೇವೇಂದ್ರಪ್ಪ ಬಕ್ಕಣದಣನವರ, ಆನಂದ ಗೌಡ ಸೇರಿದಂತೆ ಹಲವು ರೈತರು ಬೆಳೆಗಳು ಅತಿವೃಷ್ಟಿಯ ಕಾರಣದಿಂದ ನಾಶವಾಗಿದ್ದು, ಸರ್ಕಾರದಿಂದ ಪರಿಹಾರ ಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ವದ್ದಲದ ಸ.ನಂ. ೭೯ ರಲ್ಲಿ ೪ ಎಕರೆ ಪ್ರದೇಶದಲ್ಲಿ ಸುಮಾರು ೧ ಸಾವಿರ ಬಾಳೆ ಗಿಡಗಳು ನಾಶವಾಗಿದ್ದು, ಸುಮಾರು ೩ ಲಕ್ಷ ರೂ. ಹಾನಿ ಉಂಟಾಗಿದೆ. ಬಾಳೆಯ ಮೊದಲ ಬೆಳೆ ಬಂದ ಸಂದರ್ಭದಲ್ಲಿ ಕೊರೊನಾದಿಂದ ಸಮಸ್ಯೆಯಾಗಿ, ಬೆಲೆ ಸಿಗದೇ ಹೋಯಿತು. ಆದರೆ ಈಗ ಮಳೆ ಹಾನಿಯಿಂದ ನಮ್ಮ ಎಲ್ಲಾ ಶ್ರಮ ವ್ಯರ್ಥವಾಗಿದೆ ಎಂದು ರೈತ ವಸಂತ ಗೌಡ ಅಲವತ್ತುಕೊಂಡಿದ್ದಾರೆ. ಅಲ್ಲದೇ ಸರ್ಕಾರ ಈ ಕುರಿತು ಶೀಘ್ರದಲ್ಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *