Wednesday, 27th January 2021

ಮಣಿಪುರದಲ್ಲಿ ಸರ್ಕಾರ ಬಿಕ್ಕಟ್ಟಿನಲ್ಲಿ: ಕಾಂಗ್ರೆಸ್‍ಗೆ ಸರ್ಕಾರ ರಚಿಸುವ ವಿಶ್ವಾಸ

ಇಂಫಾಲ್,

ಮಣಿಪುರದಲ್ಲಿ ಮೂವರು ಬಿಜೆಪಿ ಶಾಸಕರು, ಮೈತ್ರಿಪಕ್ಷಗಳು ಸೇರಿದಂತೆ ಒಂಬತ್ತು ಶಾಸಕರು ಬುಧವಾರ ಸರ್ಕಾರಕ್ಕೆ ಬೆಂಬಲವನ್ನು ವಾಪಸ್‍ ಪಡೆಯುವುದರೊಂದಿಗೆ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ತೀವ್ರ ಬಿಕ್ಕಟ್ಟಿನಲ್ಲಿದೆ.

ಬಿರೆನ್‍ ಸಿಂಗ್ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಸೂಚಿಸಬೇಕು ಎಂದು ರಾಜ್ಯಪಾಲರಾದ ಡಾ.ನಜ್ಮಾ ಹೆಪ್ತುಲ್ಲಾ ಅವರನ್ನು ಒತ್ತಾಯಿಸುವುದಾಗಿ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಒ ಇಬೊಬಿ ಸಿಂಗ್ ಹೇಳಿದ್ದಾರೆ.

ಸರ್ಕಾರ ರಚಿಸಲು ರಾಜ್ಯಪಾಲರು ಕಾಂಗ್ರೆಸ್ ಪಕ್ಷವನ್ನು ಆಹ್ವಾನಿಸುತ್ತಾರೆ ಎಂಬ ವಿಶ್ವಾಸ ಹೊಂದಿರುವ ಕಾಂಗ್ರೆಸ್ ನಾಯಕರು ಮುಂದಿನ ಕಾರ್ಯತಂತ್ರಗಳ ಕುರಿತು ಗುರುವಾರ ಹುಮ್ಮಸ್ಸಿನಿಂದ ಓಡಾಡುತ್ತಿದ್ದರು. ಬುಧವಾರ ಮೂವರು ಬಿಜೆಪಿ ಶಾಸಕರು ಶಾಸಕ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ.

ಬಿಜೆಪಿಯ ಮೂವರು ಶಾಸಕರಾದ ಸ್ಯಾಮ್ಯುಯೆಲ್ ಜೆಂಡೈ, ಟಿಟಿ ಹಾಕಿಪ್, ಸುಭಾಷ್‍ ಚಂದ್ರ ಅವರನ್ನು ಮಾಜಿ ಮುಖ್ಯಮಂತ್ರಿ ಓ ಸಿ ಇಬೊಬಿ ಮತ್ತು ಇತರ ಕಾಂಗ್ರೆಸ್ ನಾಯಕರು ಔಪಚಾರಿಕವಾಗಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಬಿರೇನ್ ಸರ್ಕಾರದ ಸಚಿವರಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ನಾಲ್ವರು ಶಾಸಕರು ಸಹ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಾಲ್ವರು ಶಾಸಕರಾದ ವೈ ಜಾಯ್‌ಕುಮಾರ್, ಎಲ್ ಜಯಂತಕುಮಾರ್, ಲೆಟ್‌ಪಾವೊ ಹಾಕಿಪ್ ಮತ್ತು ಎನ್ ಕಯಿಸಿ ಅವರು ರಾಜೀನಾಮೆ ಪತ್ರಗಳನ್ನುನಿನ್ನೆ ಮುಖ್ಯಮಂತ್ರಿಗೆ ಸಲ್ಲಿಸಿದ್ದಾರೆ.ಎಐಟಿಸಿ ಶಾಸಕ ಎಲ್ ರೊಬಿಂದ್ರೋ ಮತ್ತು ಪಕ್ಷೇತರ ಶಾಸಕ ಆಶಾಬುದ್ದೀನ್ ಸಹ ಸರ್ಕಾರಕ್ಕೆ ತಮ್ಮ ಬೆಂಬಲ ವಾಪಸ್‍ ಪಡೆಯುವ ನಿರ್ಧಾರವನ್ನು ನಿನ್ನೆ ಪ್ರಕಟಿಸಿದ್ದಾರೆ.

ಸದ್ಯ ಕಾಂಗ್ರೆಸ್ ನೊಂದಿಗೆ 27 ಶಾಸಕರಿದ್ದು, ನಾಲ್ವರು ಎನ್‌ಪಿಪಿ ಶಾಸಕರು, ಎಐಟಿಸಿ ಮತ್ತು ಪಕ್ಷೇತರ ಶಾಸಕ ಸೇರಿ ಒಟ್ಟು 33 ಶಾಸಕರ ಬೆಂಬಲವನ್ನು ಹೊಂದಿದೆ. ಬಿಜೆಪಿ ಕಡೆ 26 ಶಾಸಕರಿದ್ದಾರೆ. ಇದೀಗ ಪಕ್ಷದ ಮೂವರು ಶಾಸಕರ ರಾಜೀನಾಮೆ ನಂತರ ಕೇವಲ 23 ಶಾಸಕರನ್ನು ಹೊಂದಿದೆ ಎಂದು ಇಬೋಬಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *