Tuesday, 11th August 2020

ರಾಜಕಾರಣಿಗಳಿ ತಪ್ಪು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮುಖ್ಯ

ಚನ್ನರಾಯಪಟ್ಟಣ:

ರಾಜಕಾರಣಿಗಳ ಅಂಕುಡೊಂಡು ತಿದ್ದುವುದರಲ್ಲಿ ಮಾಧ್ಯಮದವರ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.

ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ತಾಲ್ಲೂಕಿನ ಮಾಧ್ಯಮ ಪ್ರತಿನಿದಿಗಳು ರಾಜಕಾರಣಿಗಳ ತಪ್ಪುಗಳನ್ನು ತೋರ್ಪಡಿಸಲು ಬಹಳ ಮುಖ್ಯವಾಗಿದ್ದಾರೆ ತಾಲೂಕಿನಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗಬೇಕಿದ್ದರೆ ಪತ್ರಿಕೆಗಳ ಮೂಲಕ ಪ್ರಕಟಿಸಿ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ, ಸಮಾಜದ ಸುಧಾರಣೆ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖ, ಮಾಧ್ಯಮ ಕ್ಷೇತ್ರ ಸಂವಿಧಾನದ ನಾಲ್ಕನೇ ಅಂಗ ಇದ್ದಂತೆ ನಿಷ್ಟೆ ಪ್ರಾಮಾಣಿಕತೆ ಮುಖ್ಯವಾದದ್ದು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕರೊನಾ ಸೋಂಕು ಹರಡುವಿಕೆ ಝೀರೋ ಇದ್ದಾಗ ಲಾಕ್ ಡೌನ್ ಮಾಡಲಾಗಿದ್ದು ದೇಶದ ಆರ್ಥಿಕತೆ ಹಾಗೂ ಜನರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೊರೊನಾ ಸೋಂಕು ಸಮುದಾಯದಲ್ಲಿ ಕಾಣಿಸಿಕೊಳ್ಳುತ್ತಿರುವ ವೇಳೆಯಲ್ಲಿ ಅದರ ವಿರುದ್ಧ ಹೋರಾಡಬೇಕು ಎನ್ನುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಲುವು ಸದ್ಯಕ್ಕೆ ಅರ್ಥವಾಗದ ಕಗ್ಗಂಟಾಗಿದೆ, ಆದರೆ ಈ ಸಮಯದಲ್ಲಿ ಲಾಕ್‍ಡೌನ್ ಅವಶ್ಯಕತೆ ಇದ್ದು ಸರ್ಕಾರ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹೆದರಿ ಲಾಕ್‍ಡೌನ್ ಮಾಡಲು ಮುಂದಾಗುತ್ತಿಲ್ಲ ಎಂದರು.
ಆಯೋಜಿಸಿದ್ದ ಶಿಬಿರದಲ್ಲಿ 30 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು, ಶಾಸಕ ಸಿ.ಎನ್.ಬಾಲಕೃಷ್ಣ ಅವರು ಪರ್ತಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ತಮ್ಮ ವೇತನದಲ್ಲಿ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದರೆ, ಸರ್ಕಾರಿ ನೌಕರರ ಸಂಘದ ವತಿಯಿಂದ ಅಧ್ಯಕ್ಷ ಮಂಜುನಾಥ್ 25 ಸಾವಿರ ರೂ. ಚೆಕ್ ನೀಡಿದರು. ಜತೆಗೆ ಈಗಾಗಲೇ 50 ಸಾವಿರ ರೂ. ನೀಡಿರುವ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಮತ್ತೊಮ್ಮೆ 50 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದರು.

ಕತ್ತರಿಘಟ್ಟದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಮಾತನಾಡಿದರು ಕೊರೋನ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು ಅದರಿಂದ ಪತ್ರಕರ್ತರೂ ಸಹ ನಿಮ್ಮ ಕುಟುಂಬದ ಬಗ್ಗೆ ಬಹಳ ಎಚ್ಚರ ವಹಿಸಿ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು ಮಾತನಾಡಿ ಮೂರು ತಾಲೂಕಿನ ಪತ್ರಕರ್ತರನ್ನು ಕಳೆದುಕೊಂಡಿದ್ದೇವೆ ಪತ್ರಕರ್ತರಿಗೆ ಯಾವುದೇ ರೀತಿಯ ಭದ್ರತೆ ಇಲ್ಲ, ಆದ್ದರಿಂದ ಪತ್ರಿಕಾ ಮಿತ್ರರರು ಆಯಾ ತಾಲೂಕುಗಳಲ್ಲಿ ಸಂಘದ ವತಿಯಿಂದ ಪ್ರತಿಯೊಬ್ಬರಿಗೂ ವಿಮೆ, ಕ್ಷೇಮಾಭಿವೃದ್ಧಿ ನಿಧಿಯನ್ನು ಸಂಗ್ರಹಿಸಿ ಇದರಿಂದ ಮುಂದಿನ ದಿನದಲ್ಲಿ ಯಾರಾದರೂ ಅನಾರೋಗ್ಯದ ಸ್ಥಿತಿಯಲ್ಲಿ ಹಾಗೂ ಅಪಘಾತದ ಸಂದರ್ಭದಲ್ಲಿ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಬಿ.ಟಿ.ವೆಂಕಟಸ್ವಾಮಿ ಮತ್ತು ಸ್ವಾಮೀಗೌಡ ಹಾಗೂ ಪತ್ರಿಕಾ ವಿತರಕ ಪ್ರಶಾಂತ್ ಇವರಿಗೆ ಸನ್ಮಾನಿಸಲಾಯಿತು.

ತಹಸಿಲ್ದಾರ್ ಜೆ.ಬಿ.ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಎಇಇ ಅಂಬಿಕಾ, ಬಿಸಿಎಂ ವಿಸ್ತರಣಾಧಿಕಾರಿ ಮಂಜುನಾಥ್, ಜೀವ ರಕ್ಷಕ ರಕ್ತನಿಧಿ ಬ್ಯಾಂಕಿನ ವ್ಯವಸ್ಥಾಪಕ ಮೋಹನ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿ ವಿನೋದ್ ಚಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಪತ್ರಕರ್ತ ಪ್ರಕಾಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎಂ.ಜಯರಾಂ ಇದ್ದರು.

Leave a Reply

Your email address will not be published. Required fields are marked *