ವಿಶ್ಚವಾಣಿ ಸುದ್ದಿಮನೆ, ಕೊಪ್ಪಳ
ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ನಾವು ಸ್ವಾಗತಿಸುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ತಾಲೂಕಿನ ಬಸಾಪುರ ಬಳಿಯ ಕೈಗಾರಿಕಾ ವಸಾಹತು ಉದ್ಘಾಟಿಸಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಟಿಕೆಟ್ ಹಂಚಿಕೆ ಮಾಡುವುದು ಹೈಕಮಾಂಡ್ ನಿರ್ಧಾರ. ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷ ಈಗಾಗಲೇ ನಿರ್ಧಾರ ಕೈಗೊಂಡಿದೆ. ಅದನ್ನು ನಾವು ಸ್ವಾಗತಿಸಬೇಕು. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಪಕ್ಷ ತ್ಯಾಗ ಮಾಡಿದವರಿಗೆ ನಾವು ಗೌರವಿಸುತ್ತೇವೆ. ಮುಂದಿನ ದಿನಗಳಲ್ಲಿ ಎಚ್.ವಿಶ್ವನಾಥ ಅವರಿಗೆ ಅವಕಾಶ ಮಾಡಿ ಕೊಡಲಾಗುವುದು ಎಂದರು.
ಚೀನಾ ಗಡಿವಿವಾದ ಕುರಿತು ಮಾತನಾಡಿ , ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ. ಯೋಧರ ಪ್ರಾಣ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದು, ಅದನ್ನು ಕಾರ್ಯಗತ ಮಾಡಲಿದ್ದಾರೆ. ದೇಶದಲ್ಲಿ ಸದ್ಯ ಕರೊನಾ ಇದ್ದು, ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಎಲ್ಲವನ್ನು ನೋಡಿಕೊಂಡು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವರು. ಚೀನಾ ಆಕ್ರಮಣಕಾರಿ ನೀತಿಯಿಂದ ದೇಶದ ಜನರಲ್ಲಿ ಜಾಗೃತಿ ಬಂದಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸಿದಲ್ಲಿ ಯುದ್ಧಕ್ಕಿಂತ ದೊಡ್ಡ ಹೊಡೆತ ನೀಡಿದಂತಾಗುತ್ತದೆ ಎಂದರು.
ಈ ವೇಳೆ ಸಂಸದ ಸಂಗಣ್ಣ ಕರಡಿ, ಡಿಸಿ ಸುನೀಲಕುಮಾರ್, ಬಿಜೆಪಿ ಮುಖಂಡ ಅಮರೇಶ್ ಕರಡಿ, ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.