Wednesday, 29th June 2022

ಸುರೇಶಕುಮಾರರೇ, ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟವಾಡಬೇಡಿ, ಪ್ಲೀಸ್ !

– ಜಯವೀರ ವಿಕ್ರಂ ಸಂಪತ್ ಗೌಡ,

ಒಂದನೇ ಟ್ವೀಟ್ : ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್ ಡೌನ್ ಮತ್ತು ಲಾಕ್ ಡೌನ್ ಮಾಡಿದರೆ ಪ್ರಯೋಜನವಿಲ್ಲ.‌ ಬೆಂಗಳೂರು ನಿವಾಸಿಗಳು ಬದುಕುಳಿಯಬೇಕಾದರೆ ಈ ಕೂಡಲೇ ಕನಿಷ್ಠ 20 ದಿನ‌ ಸಂಪೂರ್ಣ ಲಾಕ್ ಡೌನ್ ಮಾಡಿ. ಇಲ್ಲವಾದಲ್ಲಿ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ. ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ.‌

ಎರಡನೇ ಟ್ವೀಟ್ : ಬಡವರು, ಕಾರ್ಮಿಕರಿಗೆ ಕೂಡಲೇ ಪಡಿತರ ವಿತರಿಸಿ. ರಾಜ್ಯದ 50 ಲಕ್ಷ ಮಂದಿ ಶ್ರಮಿಕ ವರ್ಗಕ್ಕೆ ತಲಾ ಐದು ಸಾವಿರ ರುಪಾಯಿ ಪರಿಹಾರ ನೀಡಬೇಕು. ಚಾಲಕರು, ನೇಕಾರರು, ಮಡಿವಾಳರು ಸೇರಿದಂತೆ ವಿವಿಧ ವರ್ಗಕ್ಕೆ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ಪರಿಹಾರ ದಕ್ಕಿಲ್ಲ.

ಮೂರನೇ ಟ್ವೀಟ್ : ಬರೀ ಪ್ಯಾಕೇಜ್ ಘೋಷಣೆ ಮಾಡಿದರೆ ಸಾಲದು. ಅದರ ಅನುಷ್ಠಾನಕ್ಕೆ ತಕ್ಷಣ ಕಾರ್ಯೋನ್ಮುಖವಾಗಬೇಕು. ಪ್ಯಾಕೇಜ್ ಘೋಷಣೆ ಮಾಡಿ, ಸರ್ಕಾರ ಅಂಗೈಯಲ್ಲಿ ಅರಮನೆ ತೋರಿಸಬಾರದು.

ಈ ಮೂರು ಟ್ವೀಟ್ ಗಳನ್ನೂ ಮಾಡಿದವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಅಪರೂಪಕ್ಕೊಮ್ಮೆ ಅವರು ಸೆನ್ಸಿಬಲ್ ಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಅವರ ಟ್ವೀಟುಗಳಲ್ಲಿ ಕಾಳಜಿಗಿಂತ, ರಾಜಕಾರಣವೇ ಹೆಚ್ಚಾಗಿರುತ್ತವೆ. ಅಲ್ಲದೇ ಅವರು ಕ್ಷುಲ್ಲಕ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ತಮ್ಮ ಹಿತವನ್ನು ರಾಜ್ಯದ ಹಿತ ಎಂದು ಭಾವಿಸಿರುವ ಅಪರೂಪದ ರಾಜಕಾರಣಿ ಅವರು. ಅಂಥ ಕುಮಾರಸ್ವಾಮಿ ಅಪರೂಪಕ್ಕೆ ಎಂಬಂತೆ ಸೂಕ್ಷ್ಮವಾದ, ಗಹನವಾದ ವಿಚಾರ ಎತ್ತಿದ್ದಾರೆ.

ಕೋವಿಡ್ ನಿಭಾಯಿಸುವಲ್ಲಿ ಕರ್ನಾಟಕ ಇಡೀ ರಾಷ್ಟ್ರಕ್ಕೆ ಮಾದರಿ ಎಂದು ಯಾವ ಮೂರ್ಖ ಶಿಖಾಮಣಿ ಹೇಳಿದನೋ ಗೊತ್ತಿಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲಿದ್ದ ರಾಜ್ಯ ಸರಕಾರ, ಅಷ್ಟಕ್ಕೇ ವಿಶ್ವೇಶ್ವರಯ್ಯ ಟವರ್ ಹತ್ತಿ ಕುಳಿತುಕೊಂಡುಬಿಟ್ಟಿತು. ಸರಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳಲಾರಂಭಿಸಿತು. ಹಾಗೆ ನೋಡಿದರೆ, ಕರೋನಾ ವೈರಸ್ ವಿಷಯದಲ್ಲಿ ಸರಕಾರ ಆರಂಭದಿಂದಲೂ ಸ್ಪಷ್ಟ ನಿಲುವನ್ನೇ ಹೊಂದಿರಲಿಲ್ಲ. ಏನು ಮಾಡಬೇಕು ಎಂಬ ಬಗ್ಗೆ ಸರಕಾರ ಗೊಂದಲವನ್ನು ಪ್ರದರ್ಶಿಸಿದ್ದೇ ಹೆಚ್ಚು. ಕರೋನಾ ನಿಯಂತ್ರಣದಲ್ಲಿರಲು ಸರಕಾರದ ಪಾತ್ರಕ್ಕಿಂತ ಕರೋನಾ ಪಾತ್ರವೇ ಹೆಚ್ಚಿತ್ತು.

ಕಾರಣ ಆಗ ವೈರಸ್ ಸೋಂಕು ವ್ಯಾಪಕವಾಗಿರಲಿಲ್ಲ. ಅದು ವ್ಯಾಪಕವಾಗಿ ಹಬ್ಬುತ್ತದೆ ಎಂಬುದು ಗೊತ್ತಿದ್ದರೂ, ಏಕಾಏಕಿ ಲಾಕ್ ಡೌನ್ ಸಡಿಲಿಸಿತು. ಅಷ್ಟು ದಿನ ಲಾಕ್ ಡೌನ್ ಮಾಡಿದ್ದೇ ಪ್ರಮಾದವಾಯಿತೇನೋ ಎಂಬಂತೆ ಲಾಕ್ ಡೌನ್ ನ್ನು ತೆರವುಗೊಳಿಸಲಾಯಿತು. ಅದಾದ ಇಪ್ಪತ್ತು ದಿನಗಳಲ್ಲಿ ಕರ್ನಾಟಕ ಏಕ್ ಧಮ್ ಕರೋನಾವೈರಸ್ ಹೊಡೆತಕ್ಕೆ ತತ್ತರವಾಗಿದೆ. ಪ್ರತಿದಿನ ಮುನ್ನೂರು – ನಾನೂರು ಜನರಿಗೆ ಸೋಂಕು ತಗಲುತ್ತಿದೆ. ಸಾವಿನ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಈಗ ಎಂಥ ಸ್ಥಿತಿ ಬಂದಿದೆಯೆಂದರೆ, ಮತ್ತೊಮ್ಮೆ ಬೆಂಗಳೂರನ್ನು ಲಾಕ್ ಡೌನ್ ಗೆ ಒಳಪಡಿಸಬೇಕಾಗಿ ಬಂದಿದೆ.

ಜೂನ್ ಎಂಟಕ್ಕೆ ರಾಜ್ಯ ಸರಕಾರ ಲಾಕ್ ಡೌನ್ ನ್ನು ಸಂಪೂರ್ಣ ಸಡಿಲಿಸಿದಾಗ, ಕರೋನಾ ಹೊರಟೇ ಹೋಯಿತು, ಕರೋನಾ ವಿರುದ್ಧ ನಾವು ದಿಗ್ವಿಜಯ ಸಾಧಿಸಿದೆವು ಎಂಬ ರೀತಿಯಲ್ಲಿ ಸರಕಾರ ವರ್ತಿಸಿತು. ಜನರೂ ಮೂರ್ಖರು, ಅವರೂ ಹಾಗೇ ವರ್ತಿಸಿದರು. ಕರೋನಾ ಬಂದಿದ್ದೇ ಸುಳ್ಳು ಎಂಬ ರೀತಿಯಲ್ಲಿ ಎಲ್ಲಾ ತಮ್ಮ ಪಾಡಿಗೆ ಹಾಯಾಗಿ ವರ್ತಿಸಲಾರಂಭಿಸಿದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ದೊಡ್ಡ ಜೋಕಾಯಿತು. ಜನ ಮಾಸ್ಕ್ ನ್ನು ಮುಖಕ್ಕೆ ಕಟ್ಟಿಕೊಂಡಿದ್ದಕ್ಕಿಂತ ಗಡ್ಡಕ್ಕೆ ತಗುಲಿಸಿಕೊಂಡಿದ್ದೇ ಹೆಚ್ಚು. ಏನೂ ಆಗೇ ಇಲ್ಲ ಎಂಬಂತೆ ಜನ ತಿರುಗಾಡಲಾರಂಭಿಸಿದರು. ಕರೋನಾ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ಮರೆತುಬಿಟ್ಟರು. ಶಾಲೆ, ಕಾಲೇಜು, ಸಿನಿಮಾ ಥಿಯೇಟರುಗಳನ್ನು ಬಿಟ್ಟರೆ ಜನ ಬೇಕಾಬಿಟ್ಟಿ ತಿರುಗಾಡಲು ಆರಂಭಿಸಿದರು.

ಆರಂಭದಲ್ಲಿ ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಸರಕಾರವೇ ಉದಾರವಾಗಿ ವರ್ತಿಸಲಾರಂಭಿಸಿತು. ಸರ್ಕಾರಕ್ಕಂತೂ ಆರ್ಥಿಕತೆಯನ್ನು ಎತ್ತಿ ಹಿಡಿಯುವುದೇ ಅತ್ಯಂತ ಮಹತ್ವದ ಸಂಗತಿಯಾಯಿತು. ಅದು ತುರ್ತಾಗಿ ಆಗುವ ಕೆಲಸ ಅಲ್ಲ ಎಂಬುದು ಗೊತ್ತಿದ್ದರೂ, ಅವಸರವಾಗಿ ಲಾಕ್ ಡೌನ್ ಸಡಿಲಿಸಿ ತನ್ನ ಫೋಕಸ್ಸನ್ನು ಬದಲಿಸಿತು. ಸರಕಾರ ಮಾಡಿದ ಪ್ರಮಾದವೇ ಇದು. ಲಾಕ್ ಡೌನ್ ಸಡಿಲಿಸಿ ಅದಕ್ಕೆ ನೀಡುತ್ತಿದ್ದ ಮಹತ್ವವನ್ನು ಕಡಿಮೆಗೊಳಿಸಲಾರಂಭಿಸಿದರೆ, ಆರಂಭದಲ್ಲಿ ಅದಕ್ಕೆ ಮಹತ್ವ ನೀಡಿದ್ದಾದರೂ ಏಕೆ ? ಯಾವಾಗ ಲಾಕ್ ಡೌನ್ ಅಗತ್ಯವಿರಲಿಲ್ಲವೋ, ಸರಕಾರ ಲಾಕ್ ಡೌನ್ ಮಾಡಿತು. ಯಾವಾಗ ಅದರ ಅಗತ್ಯವಿತ್ತೋ ಆಗ ಅದನ್ನು ಸಂಪೂರ್ಣವಾಗಿ ತೆರವುಗೊಳಿಸಿತು. ಪರಿಣಾಮ, ಈಗ ಮತ್ತೊಮ್ಮೆ ಲಾಕ್ ಡೌನ್ ವಿಧಿಸುವ ಹೊಸ್ತಿಲಿಗೆ ನಮ್ಮನ್ನು ನೂಕಿಕೊಂಡಿದ್ದೇವೆ. ಇಷ್ಟು ದಿನ ಮಾಡಿದ್ದೆಲ್ಲಾ, ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ. ಇದು ಒಂಥರಾ ಮೂಗನ್ನೂ ಚುಚ್ಚಿಸಿಕೊಂಡಿದ್ದಾಯಿತು…. ಆದರೆ ಮೂಗಬೊಟ್ಟೂ ಸಿಗಲಿಲ್ಲ ಎಂಬಂತಾಗಿದೆ.

ಸರಕಾರ ಯಾವತ್ತೂ ನಿರ್ದಾಕ್ಷಿಣ್ಯವಾಗಿಯೇ ನಿರ್ಧಾರ ತೆಗೆದುಕೊಳ್ಳಬೇಕು. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂಬ ಧೋರಣೆ ಸಲ್ಲ. ಜನರ ಜೀವ ಮುಖ್ಯವೋ, ಆರ್ಥಿಕತೆ ಮುಖ್ಯವೋ ಎಂಬ ಬಗ್ಗೆ ಸರಕಾರಕ್ಕೆ ಸ್ಪಷ್ಟತೆ ಇರಬೇಕು. ಎರಡಕ್ಕೂ ಏಕಕಾಲದಲ್ಲಿ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಜನರು ಬದುಕಿದ್ದರೆ ತಾನೇ ಆರ್ಥಿಕತೆ. ಅಷ್ಟಕ್ಕೂ ಆರ್ಥಿಕತೆಯನ್ನು ಸುಧಾರಿಸುವವರು ಪ್ರಜೆಗಳೇ. ಅವರ ಜೀವವೇ ಆತಂಕದಲ್ಲಿದ್ದರೆ, ಇಡೀ ಸಮಾಜವೇ ಭಯಭೀತವಾಗಿದ್ದರೆ, ಆರ್ಥಿಕತೆಯನ್ನು ಸುಧಾರಿಸುವುದಾದರೂ ಹೇಗೆ ? ಇಂಥ ಮನಸ್ಥಿತಿಯಲ್ಲಿ ಆರ್ಥಿಕತೆಯನ್ನು ಸುಧಾರಿಸಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ಕರೋನಾ ವೈರಸ್ ಕರ್ನಾಟಕವನ್ನು ಮಾತ್ರ ಬಾಧಿಸಿಲ್ಲ. ಇಡೀ ಜಗತ್ತಿಗೆ ಇದರ ಬಿಸಿ ತಟ್ಟಿದೆ. ಎಲ್ಲಾ ಬಿಟ್ಟು ನಾವೊಂದೇ ಕರೋನಾ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಆರ್ಥಿಕತೆ ಹಳ್ಳ ಹಿಡಿದಿದೆ. ಆ ಬಗ್ಗೆ ದೂಸರಾ ಮಾತೇ ಇಲ್ಲ. ಆರ್ಥಿಕತೆಯ ಚಿಂತೆ ಬಿಡೋಣ. ಮೊದಲು ಬಚಾವ್ ಆಗಬೇಕಿರುವವರು ನಾವು. ನಾವು ಬದುಕಿಕೊಂಡರೆ, ಆರ್ಥಿಕತೆಯನ್ನೂ ಎತ್ತಬಹುದು, ಹಿಮಾಲಯ ಪರ್ವತವನ್ನೂ ಎತ್ತಬಹುದು. ಆ ಮಧ್ಯೆ ಆರ್ಥಿಕತೆ ಸೊರಗಬಹುದು, ಸೊರಗಲಿಬಿಡಿ. ಆದರೆ ಜನರ ಜೀವ ಅದಕ್ಕಿಂತ ಅಮೂಲ್ಯ. ಯಾಕೆಂದರೆ ಆರ್ಥಿಕತೆಯನ್ನು ಎತ್ತುವವರು ಜನರೇ. ಎತ್ತಬೇಕಾದವರೇ ಮಲಗಿದರೆ, ಪರಲೋಕಕ್ಕೆ ತೆರಳಿದರೆ, ಆರ್ಥಿಕತೆಯ ಕತೆಯೇನು ? ಇದನ್ನು ಹೇಳಲು ಆರ್ಥಿಕ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿಯನ್ನು ಕೇಳಬೇಕಿಲ್ಲ. ಮೂಕಜ್ಜಿಯೂ ಹೇಳಬಲ್ಲಳು. ಆದರೆ ಅವಳನ್ನು ಕೇಳಬೇಕಷ್ಟೇ. ಜನರನ್ನು ಸಾಯಲು ಬಿಟ್ಟು ಆರ್ಥಿಕತೆಯನ್ನು ಸುಧಾರಿಸಲು ಸಾಧ್ಯವಿಲ್ಲ. ಇಂಥ ಸನ್ನಿವೇಶದಲ್ಲಿ ಸಾಮಾನ್ಯ ಜ್ಞಾನ ಮತ್ತು ವಿವೇಕ ಬಹಳ ಮುಖ್ಯ. ಇಡೀ ದೇಶವನ್ನು ಮತ್ತೊಮ್ಮೆ ಲಾಕ್ ಡೌನ್ ಮಾಡಿದರೆ, ಈ ದೇಶವೇನೂ ಮುಳುಗಿ ಹೋಗುವುದಿಲ್ಲ. ಅಷ್ಟಕ್ಕೇ ಆರ್ಥಿಕತೆ ತಳಹಿಡಿದು ಆಗಬಾರದ ಅನಾಹುತ ಆಗುವುದಿಲ್ಲ. ಹೆಚ್ಚು ಅಂದರೆ ಸ್ವಲ್ಪ ಆರ್ಥಿಕ ಹಿಂಜರಿತ ಆಗಬಹುದು. ಅದು ನಿರೀಕ್ಷಿತವೇ. ಇದು ಯಾರೋ ಒಬ್ಬರಿಗೆ ಆಗುವಂಥದ್ದಲ್ಲ. ಇದು ಇಡೀ ಜಗತ್ತಿಗೇ ಆಗುವಂಥದ್ದು.

ಯಾವುದೇ ದೇಶದ ಆರ್ಥಿಕತೆ ಆ ದೇಶದ ಜನರ ಮನಸ್ಥಿತಿ, ಮನೋಭಾವವನ್ನೂ ಆಧರಿಸಿರುತ್ತದೆ. ದೇಶದ ಜನ ವಿಷಣ್ಣಭಾವದಿಂದ, ಖಿನ್ನ ಮನಸ್ಸಿನಿಂದ ಇದ್ದರೆ ಅದರಿಂದ ಯಾವ ದೇಶ ಉದ್ಧಾರವಾದೀತು. ಸಾಧ್ಯವೇ ಇಲ್ಲ. ಲಾಕ್ ಡೌನ್ ಎಂಬುದು ಅನಿಷ್ಟ ಅಗತ್ಯ ಎಂಬುದು ಎಲ್ಲರಿಗೂ ಗೊತ್ತು. ಜನ ಸೋಂಕಿನಿಂದ ಸಾಯಲಾರಂಭಿಸಿದರೆ, ಲಾಕ್ ಡೌನ್ ಒಂದೇ ಪರಿಹಾರ, ಔಷಧ. ಕರೋನಾವೈರಸ್ಸಿಗೆ ಮದ್ದು ಕಂಡು ಹಿಡಿಯುವ ತನಕ ಲಾಕ್ ಡೌನ್ ಮಾತ್ರ ರಾಮಬಾಣ ಎಂಬುದು ಗೊತ್ತಿರಬೇಕು. ಹೀಗಾಗಿ ಪರಿಸ್ಥಿತಿ ಕೈಮೀರಿದಾಗ, ಲಾಕ್ ಡೌನ್ ಅಥವಾ ಸೀಲ್ ಡೌನ್ ಮಾಡಿದರೆ ತಪ್ಪೇನೂ ಇಲ್ಲ. ಅದರಿಂದ ಆರ್ಥಿಕತೆ ಎಕ್ಕುಟ್ಟಿ ಹೋದರೆ, ಹೋಗಲಿ. ಆದರೆ ಜನ ಬದುಕಿಕೊಳ್ಳುತ್ತಾರೆ.

ಈಗ ಜನ ಏಕಾಏಕಿ ಸಾಯಲಾರಂಭಿಸಿದ್ದಾರೆ. ಆದರೆ ಸರಕಾರ ಆರ್ಥಿಕತೆ ಎತ್ತುವ ಹರಸಾಹಸದಲ್ಲಿ ತಲ್ಲೀನವಾಗಿ, ಜನರ ಸಾವಿಗೆ ಕಾರಣವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ನಡೆ. ಲಾಕ್ ಡೌನ್ ಪರಿಹಾರ ಅಲ್ಲ ಅಂದರೆ, ಆಗ ಯಾಕೆ ಐದು ಹಂತಗಳ ಲಾಕ್ ಡೌನ್ ಘೋಷಿಸಿದ್ದೇಕೆ ? ಆಗಲೂ ಲಾಕ್ ಡೌನ್ ತೀವ್ರತೆ ಇತ್ತು. ಆಗಿನ ಕಠಿಣ ಲಾಕ್ ಡೌನ್ ನಿಂದಾಗಿಯೇ ಸೋಂಕು ಕಾಳ್ಗಿಚ್ಚಿನಂತೆ ಹರಡದೇ ನಿಯಂತ್ರಣದಲ್ಲಿರಲು ಸಹಾಯಕವಾಯಿತು. ಆದರೆ ಲಾಕ್ ಡೌನ್ ನ್ನು ಸಂಪೂರ್ಣ ತೆರವುಗೊಳಿಸಬಾರದಿತ್ತು. ಇಂದು ಚೆನ್ನೈ ಲಾಕ್ ಡೌನ್ ಘೋಷಿಸದೇ ಇದ್ದಿದ್ದರೆ ಬಹಳ ದೊಡ್ಡ ಅನಾಹುತವಾಗುತ್ತಿತ್ತು. ಸೋಂಕು ಹರಡುವುದನ್ನು ತಡೆಗಟ್ಟಲು, ಬೇರೆ ಯಾವ ಮಾರ್ಗವೂ ಇಲ್ಲ. ಪರಸ್ಪರ ಸಂಪರ್ಕ ಕಟ್ ಆಗಬೇಕು. ಅದಕ್ಕೆ ಲಾಕ್ ಡೌನ್ ಮಾತ್ರ ದಾರಿ. ಜನ ಮನೆಯಲ್ಲಿಯೇ ಇರುವುದೊಂದೇ ದಾರಿ. ‘ಮನೆಯಲ್ಲಿದ್ದರೆ ಹೊಟ್ಟೆ ತುಂಬುತ್ತಾ ?’ ಎಂದು ಅನೇಕರು ಕೇಳುತ್ತಾರೆ. ಸರಿ. ಹೊಟ್ಟೆ ತುಂಬಿಸಿಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಳ್ಳುವುದು ಸರಿಯಾ ಎಂದು ಪ್ರತಿ ಪ್ರಶ್ನೆ ಕೇಳಿ. ಸುಮ್ಮನಾಗಿತ್ತಾರೆ.

ನನಗೆ ಅರ್ಥವಾಗದ ಇನ್ನೊಂದು ಸಂಗತಿಯೇನೆಂದರೆ, ನಮ್ಮ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಏನಾಗಿದೆ ? ಅವರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಂಡಕ್ಟ್ ಮಾಡಿ ತಾವೊಬ್ಬ ಮಹಾನ್ ಶಿಕ್ಷಣ ಮಂತ್ರಿ ಎಂದು ಕರೆಯಿಸಿಕೊಳ್ಳುವ ಹಂಬಲ ಇದ್ದಂತಿದೆ. ಅವರ ಇರಾದೆ ಗಮನಿಸಿದರೆ ಅವರಿಗೆ ಪ್ರಾಥಮಿಕ ಶಿಕ್ಷಣದ ಕೊರತೆಯಿದೆ ಎನಿಸುತ್ತದೆ. ವಿದ್ಯಾರ್ಥಿಗಳ ಜೀವಕ್ಕಿಂತ ಪರೀಕ್ಷೆ ದೊಡ್ಡದಾ ? ವಿದ್ಯಾರ್ಥಿಗಳು ಪರೀಕ್ಷೆ ಬರೆಯದಿದ್ದರೆ, ಆಕಾಶವೇನಾದರೂ ಬೀಳುತ್ತಾ ? ಒಂದೊ ಪರೀಕ್ಷೆಯನ್ನು ಮುಂದಕ್ಕೆ ಹಾಕಲಿ, ಇಲ್ಲವೇ ಪರೀಕ್ಷೆಯನ್ನು ರದ್ದು ಮಾಡಿ ಎಲ್ಲರನ್ನೂ ಅವರವರ ಶಾಧನೆಯ ಪ್ರಕಾರ, ತೇರ್ಗಡೆ ಮಾಡಲಿ. ಏನಾಗುತ್ತದೆ ? ಆದರೆ, ಸುರೇಶಕುಮಾರ ಅವರೇ, ಪರೀಕ್ಷೆಯ ನೆಪದಲ್ಲಿ ವಿದ್ಯಾರ್ಥಿಗಳನ್ನು ಬಲಿಕೊಡಬೇಡಿ.

ಸುರೇಶಕುಮಾರ ಅವರು, ಒಂದು ನಿಮಿಷವಾದರೂ ವಿದ್ಯಾರ್ಥಿಗಳ ಮನಸ್ಥಿತಿ ಬಗ್ಗೆ ಯೋಚಿಸಿದ್ದಾರಾ ? ಯೋಚಿಸಿದ್ದರೆ ಇಂಥ ಅವಿವೇಕದ ಕ್ರಮಕ್ಕೆ ಮುಂದಾಗುತ್ತಿರಲಿಲ್ಲ. ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂದರೆ ವಿದ್ಯಾರ್ಥಿಗಳು ಭಯಪಡುತ್ತಾರೆ. ಅದನ್ನು ಎದುರಿಸಲು ಅವರಿಗೆ ಏನೋ ಅಳುಕು. ಪರೀಕ್ಷೆಯಲ್ಲಿ ಫೇಲ್ ಆದವರು ಆತ್ಮಹತ್ಯೆಗೆ ಶರಣಾಗುವುದು ಹೊಸತಲ್ಲ. ಇಂದಿಗೂ ಅನೇಕರಿಗೆ ಎಸ್ಸೆಸೆಲ್ಸಿ ಪರೀಕ್ಷೆ ಅಂದರೆ ಜೀವ-ಮರಣದ ನಡುವಿನ ಹೋರಾಟವೇ. ಅದರಲ್ಲೂ ಕಳೆದ ಮೂರು ತಿಂಗಳಿನಿಂದ ಪರೀಕ್ಷೆ ಇದೆಯೋ, ಇಲ್ಲವೋ ಎಂಬ ತಾಕಲಾಟದಲ್ಲಿ ಬಳಲುತ್ತಿರುವವರೆಂದರೆ ಈ ವಿದ್ಯಾರ್ಥಿಗಳು. ಅವರಿಗೆ ಪರೀಕ್ಷೆ ಎದುರಿಸುವುದಕ್ಕಿಂತ ಕರೋನಾ ಎದುರಿಸುವುದೇ ಬಹುದೊಡ್ಡ ಪರೀಕ್ಷೆಯಾಗಿದೆ. ಅವರಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು ಎಂಬುದಕ್ಕಿಂತ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬುದೇ ಮುಖ್ಯವಾಗಿದೆ.

ಪ್ರತಿಯೊಬ್ಬ ವಿದ್ಯಾರ್ಥಿಗೂ ಪರೀಕ್ಷಾ ಕೊಠಡಿಯಲ್ಲಿ ಇರುವಷ್ಟು ಹೊತ್ತು, ತಾನು ಕರೋನಾ ವಿರುದ್ಧ ಹೋರಾಡುತ್ತಿದ್ದೆನಾ ಎಂಬ ಭಯ ಕಾಡುತ್ತಲೇ ಇರುತ್ತದೆ. ಪರೀಕ್ಷಾ ಕೊಠಡಿಯಲ್ಲಿ ಸೋಂಕು ಹರಡುವ ಸಾಧ್ಯತೆಯನ್ನು ತೆರೆದಿಟ್ಟಂತಾಗುತ್ತದೆ. ಖಂಡಿತವಾಗಿಯೂ ಕರೋನಾಕ್ಕೆ ಹರಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈಗಂತೂ ಬೆಂಗಳೂರು ಸೇರಿದಂತೆ ಹಲವು ಊರುಗಳು ಕರೋನಾ ಹೊಡೆತಕ್ಕೆ ತತ್ತರಿಸಿವೆ. ಎರಡನೇ ಅಲೆ ಇನ್ನಷ್ಟು ಭೀಕರತೆಯ ಮುನ್ಸೂಚನೆ ನೀಡಿದೆ. ಇಷ್ಟೂ ಸಾಲದೆಂಬಂತೆ, ಸುರೇಶಕುಮಾರರು ಎಸ್ಸೆಸೆಲ್ಸಿ ಪರೀಕ್ಷೆ ಮಾಡಿಯೇ ಸಿದ್ಧ ಎಂಬ ಜಿದ್ದಿಗೆ ಬಿದ್ದಿದ್ದಾರೆ.

ಇದು ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟವಲ್ಲವೇ ? ವಿದ್ಯಾರ್ಥಿಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳಬೇಕೋ, ಈ ಭಯದಲ್ಲಿ ಪರೀಕ್ಷೆ ಬರೆಯಬೇಕೋ ಎಂಬ ತೀವ್ರ ಮಾನಸಿಕ ಒತ್ತಡ ಹೇರುವುದು ಎಷ್ಟು ಸರಿ ? ಮೊದಲೇ ಪರೀಕ್ಷೆ ಅಂದರೆ ಶಿಕ್ಷೆ ಎಂಬ ಮನಸ್ಥಿತಿಯಲ್ಲಿರುವ ಮಕ್ಕಳನ್ನು ಪರೀಕ್ಷೆಗೆ ಒಡ್ಡುವುದೆಂದರೆ, ಮೃತ್ಯುವಿನ ದವಡೆಗೆ ನೂಕಿದಂತಲ್ಲವೇ ? ಮಕ್ಕಳ ಮೇಲೆ ಅನಗತ್ಯವಾಗಿ ತೀವ್ರ ಒತ್ತಡ ಹಾಕುವುದು ಅದೆಷ್ಟು ಸರಿ ? ಇತರ ರಾಜ್ಯಗಳು ಎಸ್ಸೆಸೆಲ್ಸಿ ಪರೀಕ್ಷೆಗಳನ್ನು ರದ್ದುಪಡಿಸಿವೆ. ಅದೇನು ಇಂಥ ಸಮಯದಲ್ಲಿ ಮಾಡಲೇಬೇಕಾದ ಸಾಂವಿಧಾನಿಕ ಕಟ್ಟಳೆಯೇನೂ ಅಲ್ಲ. ಜೀವಕ್ಕಿಂತ ಮಿಗಿಲಾದ ಪರೀಕ್ಷೆ ಮತ್ತೊಂದಿಲ್ಲ. ಕರೋನಾ ವೈರಸ್ ಸೋಂಕು ಹರಡಿರುವ ಈ ಹೊತ್ತಿನಲ್ಲಿ ಜೀವ ಉಳಿಸಿಕೊಂಡರೆ, ಜೀವನದ ಪರೀಕ್ಷೆಯಲ್ಲಿ ಮೊದಲ ಸ್ಥಾನ, rank ಪಡೆದಂತೆ.

ಹೀಗಿರುವಾಗ, ಪಾಪದ ಮಕ್ಕಳನ್ನು ಮೃತ್ಯುವಿನ ಬಾಯಿಗೆ ನೂಕುವುದು ಶುದ್ಧ ಅಮಾನವೀಯ ನಡೆ. ಈ ಸಂಗತಿಯನ್ನು ಪ್ರಾಥಮಿಕ ಸಚಿವರು ಮತ್ತು ಸರಕಾರ ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ ಹುಡುಗಾಟ ಮಾಡಬಾರದು!