Wednesday, 30th September 2020

ತುಮಕೂರು:

ಕರ್ನಾಟಕದಲ್ಲಿ ಗೊಲ್ಲ ಜನಾಂಗ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದ್ದರೂ ಈ ಜನಾಂಗವನ್ನು ಸರ್ವಾಂಗೀಣವಾಗಿ ಮೇಲೆತ್ತುವ ಕೆಲಸವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಂದು ಶ್ರೀಕೃಷ್ಣ ಹೇಳಿದ್ದಂತೆ ಕೆಲವೊಮ್ಮೆ ಹೋರಾಟ ಮತ್ತು ಸಂಘಟನಾ ಶಕ್ತಿಯಿಂದಲೇ ನ್ಯಾಯ ದೊರಕಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ಯಾದವ (ಗೊಲ್ಲರ) ಸಂಘದ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಿಳಿಸಿದರು.

ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಜಿಲ್ಲಾ ಗೊಲ್ಲರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಶ್ರೀಕೃಷ್ಣ ಧರ್ಮವನ್ನು ಉಳಿಸಲು ಅಧರ್ಮ ಮಾರ್ಗದಲ್ಲಿ ನಡೆಯುತ್ತಿರುವವರ ವಿರುದ್ಧ ಸ್ಪಷ್ಟ ಸಂದೇಶ ನೀಡಿದ್ದ. ಧರ್ಮ ಮಾರ್ಗಿಗಳಾಗಿದ್ದ ಪಾಂಡವರ ಕಡೆ ಸಹಕಾರಿಯಾಗಿ ನಿಂತಿದ್ದ. ಇಂದು ಎಲ್ಲ ಕಡೆಯೂ ಅಧರ್ಮವೇ ಕಂಡುಬರುತ್ತಿದೆ. ಸಮಾಜದಲ್ಲಿ ಶೋಷಿತರು ಹಾಗೆಯೇ ಉಳಿದಿದ್ದಾರೆ. ರಾಜಕಾರಣದಲ್ಲಿಯೂ ಗುರುತಿಸುವ ಕೆಲಸವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟನಾ ಶಕ್ತಿ ಬಲಗೊಳ್ಳಬೇಕಿದೆ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಮಾತನಾಡಿ ರಾಜ್ಯದಲ್ಲಿ ಗೊಲ್ಲ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಇದುವರೆಗೆ ಎಲ್ಲ ಪಕ್ಷಗಳೂ ಈ ಜನಾಂಗವನ್ನು ಬಳಸಿಕೊಂಡೇ ಬಂದಿವೆ. ಚುನಾವಣೆ ಸಂದರ್ಭದಲ್ಲಿ ಬಳಸಿಕೊಂಡು ಆನಂತರ ಮೂಲೆ ಗುಂಪು ಮಾಡುತ್ತಾರೆ. ಈ ಜನಾಂಗ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ. ಅದಕ್ಕಾಗಿ ಇತರೆ ಸಮುದಾಯಗಳ ಸಹಕಾರವನ್ನೂ ಪಡೆಯಬೇಕಿದೆ ಎಂದ ಅವರು, ಪಕ್ಷಗಳು ಚುನಾವಣೆ ಸಮಯದಲ್ಲಿ ಈ ಜನಾಂಗವನ್ನು ಹುಡುಕಿಕೊಂಡು ಬರುವ ಪದ್ಧತಿ ಬದಲಾಗಬೇಕು. ಅಂತಹ ಶಕ್ತಿ ಈ ಜನಾಂಗಕ್ಕೆ ಬರಬೇಕು. ಅದಕ್ಕಾಗಿ ಹಿರಿಯರು ಮಾರ್ಗದರ್ಶನ ಮಾಡಬೇಕು ಎಂದರು.

ಚAಗಾವರ ಕರಿಯಪ್ಪ ಮಾತನಾಡಿ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಲ್ಲ. ಕಂದಾಯ ಗ್ರಾಮಗಳನ್ನಾಗಿ ಮಾಡಬೇಕೆಂಬ ಒತ್ತಾಯಗಳು ಇನ್ನೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಗುಡಿಸಲು ಮುಕ್ತ ಹಟ್ಟಿಗಳನ್ನಾಗಿಸಲು ಸರ್ಕಾರಗಳು ಪ್ರಯತ್ನಿಸಬೇಕು ಎಂದರು.
ಎಪಿಎAಸಿ ಉಪಾಧ್ಯಕ್ಷ ಶಿವರಾಜು, ಜಿ.ಪಂ.ಸದಸ್ಯೆ ಯಶೋಧ ಶಿವಣ್ಣ, ಪ್ರೇಮ ಮಹಾಲಿಂಗಪ್ಪ, ಹಿರಿಯ ರಂಗಭೂಮಿ ಕಲಾವಿದ ಚಿಕ್ಕಪ್ಪಯ್ಯ, ಡಿ.ಎಂ.ಸತೀಶ್, ಮುಖಂಡರುಗಳಾದ ಪುಟ್ಟರಾಜು, ಶೇಷಕುಮಾರ್, ಚಿಕ್ಕಣ್ಣಸ್ವಾಮಿ ಕ್ಷೇತ್ರದ ಶಿವಕುಮಾರ್, ಚಿಕ್ಕೇಗೌಡರು ಸೇರಿದಂತೆ ಇತರೆ ಮುಖಂಡರುಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *