Friday, 9th December 2022

ಸೋಂಕಿತರ ಸಂಖ್ಯೆ ಹೆಚ್ಚಳ: ಮಂಗಳೂರಿನಲ್ಲಿ 144 ಸೆಕ್ಷನ್ ಜಾರಿ

ಮಂಗಳೂರು: ಕೋವಿಡ್‌-19 ಎರಡನೇ ಅಲೆ ತಡೆಯಲು ಹಾಗೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದ ಸಾರ್ವಜನಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 (3) ಸೆಕ್ಷನ್ ಜಾರಿ ಮಾಡಿ, ಜಿಲ್ಲಾಧಿ ಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಮಾ. 29ರಿಂದಲೇ 144(3) ಸೆಕ್ಷನ್‌ ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮುಂದಿನ ಆದೇಶದವರೆಗೆ ಇದು ಮುಂದುವರಿಯಲಿದೆ. ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ, ಹೋಳಿಹಬ್ಬ, ಶಬೇ ಬರಾಅತ್, ಗುಡ್ ಫ್ರೈಡೆ ಇತ್ಯಾದಿ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಮೈದಾನ, ಉದ್ಯಾನ, ಮಾರುಕಟ್ಟೆ, ಧಾರ್ಮಿಕ ಪ್ರದೇಶಗಳು ಇತ್ಯಾದಿ ಪ್ರದೇಶದಲ್ಲಿ ಸಾರ್ವಜನಿಕ ಸಮಾರಂಭ, ಸಭೆಗಳನ್ನು ನಡೆಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಜನರು ಕೋವಿಡ್‌-19 ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯ. ಮಾಸ್ಕ್‌ ಧರಿಸುವುದು, ಸುರಕ್ಷಿತ ಅಂತರ ಕಾಪಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ಅನ್ವಯ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮದ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.