Tuesday, 25th February 2020

ಭಾಗವತ್ ಸೇರಿ 6 ಆರ್‌ಎಸ್‌ಎಸ್‌ನ ಮುಖಂಡರಿಂದ ಟ್ವಿಟರ್ ಖಾತೆ ಆರಂಭ

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಆರು ಮಂದಿ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿಗಳು ಸೋಮವಾರ ಮೈಕ್ರೋಬ್ಲಾಗಿಂಗ್ ಸೈಟ್ ಆದ ಟ್ವಿಟರ್ ಖಾತೆ ಆರಂಭಿಸಿದ್ದಾರೆ
ಹಿಂದೊಮ್ಮೆ ತಾವು ಸಾಮಾಜಿಕ ಮಾಧ್ಯಮಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಹೇಳಿದ್ದ ಭಾಗವತ್ ಈಗ @DrMohanBhagwat ಎಂಬ ಟ್ವಿಟರ್ ಖಾತೆ ತೆರೆದಿದ್ದಾರೆ.

ಆರ್‌ಎಸ್‌ಎಸ್‌ನ ಇತರ ನಾಯಕರಾದ ಸುರೇಶ್ ಜೋಷಿ, ಕೃಷ್ಣ ಗೋಪಾಲ್, ಸುರೇಶ್ ಸೊನಿ, ಅರುಣ್ ಕುಮಾರ್, ವಿ.ಭಾಗಯ್ಯ, ಅನಿರುದ್ಧ ದೇಶಪಾಂಡೆ ಅವರು ಕೂಡ ಸಾಮಾಜಿಕ ಮಾಧ್ಯಮ ಪ್ರವೇಶಿಸಿದ್ದಾರೆ. ಆರ್‌ಎಸ್‌ಎಸ್‌ನ 95ನೇ ವರ್ಷಾಚರಣೆ ಸಂದರ್ಭದಲ್ಲಿ ಈ ನಾಯಕರು ಟ್ವಿಟರ್‌ ಪ್ರವೇಶಿಸಿದ್ದಾರೆ.

2011ರಲ್ಲಿ ಆರ್‌ಎಸ್‌ಎಸ್‌ ಟ್ವಿಟರ್ ಖಾತೆ ಆರಂಭಿಸಿತ್ತು. ಇದೀಗ ಅದಕ್ಕೆ 1.3 ದಶಲಕ್ಷ ಹಿಂಬಾಲಕರು ಇದ್ದಾರೆ. ಆದರೆ ಸಂಘದ ಹೆಚ್ಚಿನ ಹಿರಿಯ ನಾಯಕರು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರಲಿಲ್ಲ. 1925ರಲ್ಲಿ ಆರಂಭಗೊಂಡ ಆರ್ ಎಸ್ಎಸ್‌, ಬಿಜೆಪಿಯ ಮಾತೃಸಂಸ್ಥೆಯಾಗಿದ್ದು, 2016ರಿಂದ ಆಧುನೀಕರಣಕ್ಕೆ ತನ್ನನ್ನು ತೆರೆದುಕೊಳ್ಳುತ್ತಿದೆ.

ಬಲಪಂಥೀಯ ಸಂಘಟನೆಯಾದ ಆರ್‌ಎಸ್‌ಎಸ್‌ ಯುವಕರನ್ನು ಸಂಘದೆಡೆಗೆ ಆಕರ್ಷಿಸುವ ಮೊದಲ ಪ್ರಯತ್ನವಾಗಿ, ದಶಕಗಳಷ್ಟು ಹಳೆಯದಾದ ಖಾಕಿ ಸಮವಸ್ತ್ರವನ್ನು ಇತ್ತೀಚೆಗೆ ಬದಲಾಯಿಸಿತ್ತು. ರಾಜಕೀಯ ಮತ್ತು ಸಾಮಾಜಿಕ ಸಾಂಸ್ಕೃತಿಕ ಪ್ರದರ್ಶನದ ಜೊತೆಗೆ ಮನರಂಜನೆಗೆ ಟ್ವಿಟರ್ ಬಹುದೊಡ್ಡ ವೇದಿಕೆಯಾಗಿ ಬಳಕೆಯಾಗುತ್ತಿದೆ. 2019ರಲ್ಲಿ ಪ್ರಕಟಗೊಂಡ ಅಂಕಿಅಂಶಗಳ ಪ್ರಕಾರ, ತಿಂಗಳಿಗೆ 321 ದಶಲಕ್ಷ ಬಳಕೆದಾರರು ಜಗತ್ತಿನಾದ್ಯಂತ ಇದ್ದಾರೆ. ಖಾಸಗಿ ಮತ್ತು ಸಾರ್ವಜನಿಕ ಸಂವಹನದ ಬಹುಮುಖ್ಯ ವೇದಿಕೆಯಾಗಿ ಹೊರಹೊಮ್ಮಿದೆ.

ಜೂನ್ ತಿಂಗಳಲ್ಲಿ ಭಾರತ ಜಗತ್ತಿನಲ್ಲೇ ಇಂಟರ್ನೆಟ್‌ ಬಳಕೆಯಲ್ಲಿ ಎರಡನೇ ದೊಡ್ಡ ದೇಶವಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಈ ವೇದಿಕೆ ಇನ್ನಷ್ಟು ಪರಿಣಾಮಕಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಭಾಗವತ್ ಅವರ ಟ್ವಿಟರ್ ಖಾತೆ ಪ್ರವೇಶ ಕುತೂಹಲ ಮೂಡಿಸಿದೆ. ಏಕೆಂದರೆ ಕಳೆದ ವರ್ಷ ಅವರು ಸಾಮಾಜಿಕ ಮಾಧ್ಯಮವನ್ನು “ನಾನು, ನನ್ನ ಮತ್ತು ನನ್ನದು” ಎಂಬ ಸ್ವಾರ್ಥವನ್ನು ಹೊಂದಿದೆ ಎಂದು ಟೀಕಿಸಿದ್ದರು.

Leave a Reply

Your email address will not be published. Required fields are marked *