Wednesday, 26th February 2020

ಕಾಂಗ್ರೆಸ್ ಅಧ್ಯಕ್ಷಗಿರಿಗೆ ರಾಜೀನಾಮೆ: ಹಂಗಾಮಿ ಎಐಸಿಸಿ ಅಧ್ಯಕ್ಷರಾಗಿ ಮೋತಿಲಾಲ್ ವೋರಾ

ದೆಹಲಿ: ಹದಿನೇಳನೆ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿ, ಭವಿಷ್ಯದಲ್ಲಿ ಕಾಂಗ್ರೆಸ್ ಬೆಳವಣಿಗೆಯ ಹೊಣೆಗಾರಿಕೆ ನಿರ್ಣಾಯಕ ಎಂದು ಹೇಳಿದ್ದಾರೆ.

ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಪ್ರಕಟಿಸಿದ ಒಂದು ಗಂಟೆಯ ಬಳಿಕ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ‘ಧನ್ಯವಾದ’ ತಿಳಿಸಿ ಬಹಿರಂಗ ಪತ್ರ ಬರೆದಿರುವ ಅವರು, ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ನೂತನ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ನಾಯಕನ ಹುಡುಕಾಟದಲ್ಲಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಮಧ್ಯಂತರ ಅಧ್ಯಕ್ಷರನ್ನಾಗಿ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯ  ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

“ತಾವು ಅಧ್ಯಕ್ಷ ಸ್ಥಾನದಲ್ಲಿ ಬಹುಕಾಲ ಮುಂದುವರಿಯುವುದಿಲ್ಲ. ಹೀಗಾಗಿ ಹಿರಿಯ ಮುಖಂಡರು ಆದಷ್ಟು ಬೇಗ ಸೂಕ್ತ ವ್ಯಕ್ತಿಯನ್ನು ಆ ಸ್ಥಾನದಲ್ಲಿ ಕೂರಿಸುವ ಹೊಣೆ ಹೊರಬೇಕು” ಎಂದು ರಾಹುಲ್ ರಾಜೀನಾಮೆ ಪತ್ರವನ್ನು ಬಹಿರಂಗ ಪಡಿಸುವ ಮೊದಲು ತಿಳಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅಥವಾ ಸುಶೀಲ್ ಕುಮಾರ್ ಶಿಂಧೆ ಅವರನ್ನು ಆಯ್ಕೆ ಮಾಡಲು ಪಕ್ಷ ಉತ್ಸುಕವಾಗಿದೆ ಎನ್ನಲಾಗುತ್ತಿದೆ.

ಟ್ವಿಟರ್ ನಲ್ಲಿ ‘ಕಾಂಗ್ರೆಸ್ ಅಧ್ಯಕ್ಷ’ ಪದ ಅಳಿಸಿರುವ ರಾಹುಲ್

ರಾಹುಲ್ ಗಾಂಧಿ ಅವರು ನೀಡಿದ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಆದಾಗ್ಯೂ ಅವರು ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ ನಲ್ಲಿದ್ದ ಎಐಸಿಸಿ ಅಧ್ಯಕ್ಷ ಪದವನ್ನು ತೆಗೆದು, ಎಐಸಿಸಿ ಸದಸ್ಯ ಹಾಗೂ ಸಂಸದ ಎಂದು ಬರೆದುಕೊಂಡಿದ್ದಾರೆ.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಬರೆದಿರುವ 4 ಪುಟಗಳ ಬಹಿರಗಂಗ ಪತ್ರದಲ್ಲಿ, “ನಮ್ಮ ಸುಂದರ ದೇಶದ ಜೀವನಾಡಿಯಾಗಿ, ಮೌಲ್ಯಗಳು ಹಾಗೂ ಆದರ್ಶ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುವುದು ನನ್ನ ಮಟ್ಟಿಗೆ ಹೆಮ್ಮೆಯ ಸಂಗತಿ, ನನ್ನ ದೇಶ ಮತ್ತು ಪಕ್ಷಕ್ಕೆ ಋಣಿಯಾಗಿರುವೆ” ಎಂದು ಹೇಳಿಕೊಂಡಿದ್ದಾರೆ.

ರಾಜೀನಾಮೆಯ ಕುರಿತು ಮೇ 25ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪ್ರಸ್ತಾಪಿಸಿದ್ದ ರಾಹುಲ್, “ಪಕ್ಷದ ಅಧ್ಯಕ್ಷನಾಗಿ 2019ರ ಸಾರ್ವತ್ರಿಕ ಚುನಾವಣೆಯ ಸೋಲಿನ ಹೊಣೆ ಹೊರುತ್ತಿದ್ದೇನೆ. ನಮ್ಮ ಪಕ್ಷದ ಬೆಳವಣಿಗೆಯ ಹೊಣೆಗಾರಿಕೆ ನಿರ್ಣಾಯಕವಾಗಿದೆ. ಈ ಕಾರಣಕ್ಕಾಗಿಯೇ ರಾಜೀನಾಮೆಗೆ ನಿರ್ಧರಿಸಿರುವೆ” ಎಂದು ಹೇಳಿದ್ದರು.

ಕಾಂಗ್ರೆಸ್ ನ ಕಾರ್ಯಕ್ಷಮತೆಯ ಹೊಣೆಗಾರಿಕೆಯ ಬಗ್ಗೆ ಒತ್ತಿ ಹೇಳಿರುವ ರಾಹುಲ್, ಪಕ್ಷದ ಪುನಶ್ಚೇತನಕ್ಕಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಅಧ್ಯಕ್ಷನಾಗಿ ಲೋಕಸಭಾ ಚುನಾವಣೆಯ ಸೋಲನ್ನು ಬೇರೆಯವರ ಮೇಲೆ ಹೊರಿಸುವುದು ಸರಿಯಲ್ಲ ಎಂದಿದ್ದರು.

ನೂತನ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಮುಖಂಡರ ಹೆಸರು ಸೂಚಿಸಬೇಕೆಂದು ಪಕ್ಷದ ನಾಯಕರು ನೀಡಿರುವ ಸಲಹೆಯನ್ನು ರಾಹುಲ್ ನಿರಾಕರಿಸಿದ್ದು, “ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾದವರ ಹೆಸರನ್ನು ನಾನು ಸೂಚಿಸುವುದು ಸರಿಯಲ್ಲ. ಧೈರ್ಯ, ಪ್ರೀತಿ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಸೂಕ್ತ ನಾಯಕನ ಆಯ್ಕೆಯನ್ನು ಪಕ್ಷವೇ ಮಾಡಬೇಕು. ಅಗತ್ಯ ಕಂಡುಬಂದಲ್ಲಿ ಪಕ್ಷದ ಸೇವೆಗೆ ನಾನು ಸದಾ ಲಭ್ಯ” ಎಂದು ಹೇಳಿದ್ದಾರೆ.

ಆರ್ ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿರುವ ರಾಹುಲ್, “ದೇಶದ ಸಾಂಸ್ಥಿಕ ರಚನೆಯನ್ನು ಹಿಡಿದಿಟ್ಟುಕೊಳ್ಳಬೇಕು ಎಂಬ ಅವರ ಆಸೆ ಫಲಿಸಿದೆ. ನಮ್ಮ ಪ್ರಜಾಪ್ರಭುತ್ವ ಮೂಲಭೂತವಾಗಿ ದುರ್ಬಲಗೊಂಡಿದೆ. ಇಂದಿನಿಂದ ನಿಜವಾದ ಅಪಾಯ ಅರಂಭವಾಗಿದೆ. ಭಾರತದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಗಳು ಕೇವಲ ಆಚರಣೆಯಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನ ಗಳಿಸಿದರೆ, ಬಿಜೆಪಿ 303 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಆದರೆ ಪಕ್ಷದ ಕಾರ್ಯಕಾರಿ ಸಮಿತಿ ತಿರಸ್ಕರಿಸಿತ್ತು. ಆದಾಗ್ಯೂ ಪಟ್ಟುಬಿಡದ ರಾಹುಲ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *