Tuesday, 9th August 2022

15 ವರ್ಷಗಳಿಂದ ಮುಚ್ಚಲಾಗಿದ್ದ ಆಸ್ಪತ್ರೆಯಲ್ಲಿ ನಾಲ್ವರ ಶವ ಪತ್ತೆ

ಮುಂಬೈ: ಕಳೆದ 15 ವರ್ಷಗಳಿಂದ ಮುಚ್ಚಲಾಗಿದ್ದ ದಾಲ್ವಿಆಸ್ಪತ್ರೆಯಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಯ ಶವ ಪತ್ತೆಯಾಗಿ ಆತಂಕ ಮೂಡಿಸಿದೆ. ಮುಂಬೈನ ಕಂಡಿವಾಲಿ ಪ್ರದೇಶದಲ್ಲಿನ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.

ಮುಚ್ಚಿದ್ದ ಆಸ್ಪತ್ರೆಯ ಕಟ್ಟಡದೊಳಗೆ ಕುಟುಂಬ ನೆಲೆಸಿತ್ತು . ಇದೀಗ ಅದೇ ಕುಟುಂಬದ ನಾಲ್ಕು ಮಂದಿಯ ಶವ ಪತ್ತೆಯಾಗಿದ್ದು ಆಸ್ಪತ್ರೆಯಲ್ಲಿ ನಾಲ್ಕು ಸೂಸೈಡ್ ನೋಟ್ ದೊರೆತಿದೆ.

ಇಬ್ಬರು ಮಹಿಳೆಯರ ಶವ ಎರಡನೇ ಮಹಡಿಯಲ್ಲಿ ರಕ್ತಸಿಕ್ತ ರೀತಿಯಲ್ಲಿ ಪತ್ತೆಯಾಗಿದ್ದು, ಮತ್ತಿಬ್ಬರು ಪುರುಷರ ಶವ ನೇಣು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಕಿರಣ್ ದಾಲ್ವಿ, ಹೆಣ್ಣುಮಕ್ಕಳಾದ ಮುಸ್ಕಾನ್, ಭೂಮಿ ಹಾಗೂ ಶಿವದಯಾಲ್ ಸೇನೆ ಎಂದು ತಿಳಿದು ಬಂದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.