Thursday, 28th January 2021

ಭತ್ತ ಕಟಾವು ಮಾಡುತ್ತಿದ್ದ 40 ರೈತರ ಹತ್ಯೆ: ಬೊಕೊ ಹರಮ್‌ ಉಗ್ರರ ಕೃತ್ಯ

ಮೈದ್ಗುರಿ: ನೈಜೀರಿಯಾದ ಉತ್ತರ ಬೊರ್ನೊ ರಾಜ್ಯದ ಗದ್ದೆಗಳಲ್ಲಿ ಭತ್ತ ಕಟಾವು ಮಾಡುತ್ತಿದ್ದ 40 ರೈತರನ್ನು ಹಾಗೂ ಮೀನು ಗಾರರನ್ನು ಶಂಕಿತ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಇಸ್ಲಾಮಿಕ್‌ ಉಗ್ರಗಾಮಿ ತಂಡದ ಬೊಕೊ ಹರಮ್‌ ಗುಂಪಿಗೆ ಸೇರಿದವರು ಈ ಕೃತ್ಯ ಎಸಗಿದ್ದಾರೆ.

ಉತ್ತರ ಬೊರ್ನೊ ರಾಜ್ಯದ ಗರಿನ್‌-ಕ್ವಾಶೆಬೆಯ ಗದ್ದೆಯಲ್ಲಿ ರೈತರು ಭತ್ತ ಕಟಾವು ಮಾಡುತ್ತಿದ್ದ ವೇಳೆ ಅವರನ್ನು ಸುತ್ತುವರಿದ ಶಸ್ತ್ರಸಜ್ಜಿತ ಉಗ್ರಗಾಮಿ ಗಳು, ಗುಂಡಿನ ದಾಳಿ ನಡೆಸಿದ್ದಾರೆ. ಬೊರ್ನೊ ರಾಜ್ಯದ ಭತ್ತ ಬೆಳೆಗಾರರ ಸಂಘದ ಮುಖಂಡ ಮಲಮ್ ಝಬಾರ್‌ಮರಿ ಅವರು ಈ ಘಟನೆಯನ್ನು ಖಚಿತ ಪಡಿಸಿದ್ದಾರೆ.

‘ಗರಿನ್‌ -ಕ್ವಾಶೆಬೆ ಭತ್ತದ ಗದ್ದೆಗಳಲ್ಲಿ ಝಬಾರ್‌ಮರಿ ಸಮುದಾಯದ ರೈತರು ಬೆಳೆ ಕಟಾವು ಮಾಡುತ್ತಿದ್ದಾಗ, ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. 60ಕ್ಕೂ ಹೆಚ್ಚು ರೈತರ ಮೇಲೆ ದಾಳಿ ನಡೆದಿದೆ.

ನೈಜೀರಿಯಾ ಅಧ್ಯಕ್ಷ ಮೊಹಮದ್‌ ಬುಹಾರಿ ಘಟನೆಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಇಂಥ ಸಂದರ್ಭದಲ್ಲಿ ಮೃತಪಟ್ಟ ರೈತರ ಕುಟುಂಬದವರ ದುಃಖದಲ್ಲಿ ನಾವು ಭಾಗಿಗಳಾಗಿದ್ದೇವೆ. ಅವರ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದು ಹೇಳಿದ್ದಾರೆ.

‘ಬೊಕೊ ಹರಾಮ್‌ ಗುಂಪಿನ ಬಂದೂಕುಧಾರಿ ಸದಸ್ಯನೊಬ್ಬ ಗದ್ದೆಯಲ್ಲಿದ್ದ ರೈತರಿಗೆ ಹಣ ಕೊಡುವಂತೆ ಹಾಗೂ ತನಗೆ ಅಡುಗೆ ಮಾಡಿಕೊಂಡುವಂತೆ ಕಿರುಕುಳ ನೀಡುತ್ತಿದ್ದ. ಈತನ ಕಾಟದಿಂದ ಬೇಸತ್ತ ರೈತರು, ಊಟಕ್ಕಾಗಿ ಕಾಯ್ದು ಕುಳಿತಿದ್ದ ಆ ಬಂದೂಕು ಧಾರಿ ಮೇಲೆ ಮುಗಿಬಿದ್ದು, ರೈಫಲ್ ಕಸಿದುಕೊಂಡು ಅವನನ್ನು ಕಟ್ಟಿ ಹಾಕಿದರು. ನಂತರ ಆತನನ್ನು ಭದ್ರತಾ ಸಿಬ್ಬಂದಿಗೆ  ಒಪ್ಪಿಸಿದರು.

ಇದಕ್ಕೆ ಪ್ರತೀಕಾರವಾಗಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ದಾಳಿ ಮಾಡಿದರು. ಹೊರಡುವ ಮುನ್ನ ಭತ್ತದ ಗದ್ದೆಗಳಿಗೆ ಬೆಂಕಿ ಹಂಚಿದರು’ ಎಂದು ಘಟನೆಯನ್ನು ವಿವರಿಸಿದರು.

Leave a Reply

Your email address will not be published. Required fields are marked *