Wednesday, 29th June 2022

ದೇವಾಲಯದಿಂದ 800 ವರ್ಷ ಹಳೆಯ ವಿಗ್ರಹ ಕಳ್ಳತನ

ಚಿತ್ರದುರ್ಗ: ಎರಡು ವರ್ಷಗಳ ಹಿಂದೆ ಜಮೀನಿನಲ್ಲಿ ದೊರೆತಿದ್ದ ಪುರಾತನ ಕಾಲದ ವಿಗ್ರಹವನ್ನು ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ ದೇವಾಲಯದಿಂದ ಕಳ್ಳತನ ಮಾಡಲಾಗಿದೆ.

ಸುಮಾರು 800 ವರ್ಷಗಳ ಹಿಂದಿನದ್ದು ಎನ್ನಲಾದ ದೇವರ ವಿಗ್ರಹವನ್ನು ಮಂಗಳವಾರ ತಡರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ. ಗ್ರಾಮಸ್ಥರು ದೇವಸ್ಥಾನದಲ್ಲಿ ವಿಗ್ರಹ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

ಜಮೀನಿನಲ್ಲಿ ಸಿಕ್ಕಿದ್ದ ವಿಗ್ರಹವನ್ನು ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಇಟ್ಟು ಪ್ರತಿದಿನ ವಿಶೇಷ ಪೂಜೆ ಸಲ್ಲಿಸ ಲಾಗುತ್ತಿತ್ತು. ಆದರೆ ಎರಡು ವರ್ಷಗಳ ಬಳಿಕ ಕಳ್ಳರು ದೇವರ ವಿಗ್ರಹ ಮೂರ್ತಿಯನ್ನು ಕಳವು ಮಾಡಿದ್ದಾರೆ.

ಅಬ್ಬಿನಹೊಳೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸುವ ಸಾಧ್ಯತೆ ಇದೆ. ದೇವಾಲಯದ ಬೀಗ ಒಡೆದು ವಿಗ್ರಹ ಕಳವು ಮಾಡಲಾಗಿದೆ.

ಜಮೀನಿನಲ್ಲಿ ಜೆಸಿಬಿಯಿಂದ ಮಣ್ಣು ಹಸನುಗೊಳಿಸುವಾಗ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಗಿರಿಸ್ವಾಮಿ ಮತ್ತು ವೆಂಕಟರಮಣಪ್ಪ ಜಮೀನಿನ ಮಧ್ಯದಲ್ಲಿ ಕೆಲವು ವಿಗ್ರಹಗಳು ದೊರೆತಿದ್ದವು. ಶಂಕ, ಚಕ್ರ, ಗದೆ, ಕೀರಿಟ, ಜನಿವಾರ ಸಹಿತವಿದ್ದ 4 ಅಡಿ ಮೂರ್ತಿ ದೊರೆತಿತ್ತು. ಜಮೀನಿನಲ್ಲಿ ವಿಗ್ರಹ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ತಂದಿತ್ತು.

ದೇವರ ವಿಗ್ರಹ ದೊರೆತ ಸ್ಥಳದಲ್ಲಿ ಗುಡ್ಲೆಕುಂಟೆ ಎಂಬ ಗ್ರಾಮವಿತ್ತು ಎಂಬು ಗ್ರಾಮಸ್ಥರು ಹೇಳುತ್ತಾರೆ. ಈ ಜಾಗದಲ್ಲಿ ಕಾಡುಗೊಲ್ಲರು ವಾಸಿಸುತ್ತಿದ್ದು, ಗೊಲ್ಲರಹಟ್ಟಿ ಇದಾಗಿತ್ತು.