Tuesday, 26th October 2021

ಪದವಿ ಜೊತೆಗೆ ಕೌಶಲ್ಯಾಭಿವೃದ್ಧಿ ಸಹ ಮುಖ್ಯ: ಪ್ರೊ.ಬಿ.ಕೆ.ತುಳಸಿಮಾಲಾ

– ಅಕ್ಕಮಹಾದೇವಿ ವಿವಿ ಕುಲಪತಿ ತುಳಸಿಮಾಲ
– ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸ

ಕೊಪ್ಪಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿಯ ಜೊತೆ ಕೌಶಲ್ಯಾಭಿವೃದ್ಧಿ ತುಂಬಾ ಮುಖ್ಯವಾಗಿದೆ. ಅಂದಾಗ ಮಾತ್ರ ಉದ್ಯೋಗ ಸೇರಿದಂತೆ ಇನ್ನಿತರ ಯಾವುದೇ ಕ್ಷೇತ್ರದಲ್ಲೂ ಜೀವನ ಕಂಡುಕೊಳ್ಳವಹುದು ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.

ಅವರು ತಾಲೂಕಿನ ದದೇಗಲ್ ಗ್ರಾಮದಲ್ಲಿನ ನಿಂಗೋಜಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಎಸ್.ಎ. ನಿಂಗೋಜಿ ಮಹಿಳಾ ಪದವಿ ಕಾಲೇಜಿನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಯಾವುದೇ ರಾಜ್ಯ ಅಭಿವೃದ್ಧಿ ಹೊಂದಲು ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ. ಆದರೆ, ಇಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ ಉದ್ಯೋಗ ಅವಕಾಶಗಳ ಬಗ್ಗೆ ಯೋಚಿಸಬೇಕಾಗಿದೆ. ಉದ್ಯೋಗಾ ರ್ಹತೆ ಮತ್ತು ಉದ್ಯಮಶೀಲತೆ ಎರಡೂ ಬಹುಮುಖ್ಯ ಎನಿಸುತ್ತವೆ. ಪದವಿ ಪಡೆದರೆ ಸಾಲದು. ಜಾಗತಿಕ ಗುಣಮಟ್ಟದ ಕೌಶಲ್ಯಾಭಿವೃದ್ಧಿ ತುಂಬಾ ಮುಖ್ಯ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ನಿಂಗೋಜಿ ಟ್ರಸ್ಟ್ ಮಹಿಳಾ ಪದವಿ ಕಾಲೇಜು ಆರಂಭಿಸಿರುವುದು ಸ್ವಾಗತಾರ್ಹ. ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಕೌಶಲ್ಯ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡುವ ಮೂಲಕ ಮಹಿಳೆಯರ ಬಲವರ್ಧನೆಗೆ ಶ್ರಮಿಸಲಿ ಎಂದು ಸಲಹೆ ನೀಡಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾನುಷ್ಠಾನ ಸಮಿತಿ ಅಧ್ಯಕ್ಷ ಪ್ರೊ.ಟಿ.ಜಿ.ತಡಸದ್ ಮಾತನಾಡಿ, ಆದರ್ಶ ಶಿಕ್ಷಣವನ್ನು ಆಧುನಿಕತೆಯ ಶೈಲಿಯಲ್ಲಿ ನೀಡುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಗುರಿ. ವಿದ್ಯಾರ್ಥಿಗಳನ್ನು ಜಾಗತಿಕ ಗುಣಮಟ್ಟಕ್ಕೆ ಸಜ್ಜುಗೊ ಳಿಸುವುದೇ ನಮ್ಮ ಮೂಲ ಉದ್ದೇಶ ಎಂದು ಹೇಳಿದರು.

1986ರಲ್ಲಿ ದೇಶದಲ್ಲಿ ಶಿಕ್ಷಣ ನೀತಿ ಜಾರಿಗೆ ಬಂದಿತು. ಹಲವು ವರ್ಷಗಳ ನಿರಂತರ ಪ್ರಯತ್ನದಿಂದ ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಈ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಖ್ಯಾತಿ ಕರ್ನಾಟಕಕ್ಕೆ ಸಲ್ಲುತ್ತದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಮೇರಿಕ, ಯುರೋಪ್ ಸೇರಿದಂತೆ ಮುಂದುವರಿದ ದೇಶಗಳಲ್ಲಿ ಸ್ಪರ್ಧಾತ್ಮಕವಾಗಿ ಉದ್ಯೋಗ ಅವಕಾಶ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟಿ ವಿ.ಎ. ನಿಂಗೋಜಿ, ನಿಂಗೋಜಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಮಾಹಿತಿ ನೀಡಿದರು. ರತ್ನಮ್ಮ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಗೀತಾ ಬೇನಾಳ, ಯಂಕಣ್ಣ ಯರಾಶಿ, ಎಸ್.ಜಿ. ಪಲ್ಲೇದ್, ಅಕ್ಭರ್ ಕಾಲಿಮಿರ್ಚಿ, ಸೋಮರಡ್ಡಿ ಅಳವಂಡಿ, ಅನ್ನಪೂರ್ಣ ಮನ್ನಾಪುರ, ಫಕೀರಪ್ಪ ವಜ್ರಬಂಡಿ, ವೀರೇಶ ಲಕ್ಷಾಣಿ, ಯಲ್ಲಪ್ಪ ಮೇಟಿ, ಟ್ರಸ್ಟ್ ಅಧ್ಯಕ್ಷ, ವಕೀಲ ಶಶಿಕಾಂತ್ ನಿಂಗೋಜಿ, ಜಿ.ಎಂ. ನಿಂಗೋಜಿ, ಕಸಾಪ ಮಾಜಿ ಅಧ್ಯಕ್ಷ ವೀರಪ್ಪ ನಿಂಗೋಜಿ ˌರವಿ ನಿಂಗೋಜಿ, ಜಿ.ಎಸ್. ಪಾಟೀಲ್, ಎಂ.ಎಲ್. ಪಾಟೀಲ್, ಶಕುಂತಲಾ ಪಾಟೀಲ್ ಉಪಸ್ಥಿತರಿದ್ದರು.

***
ದುಡ್ಡು ಇದ್ದವರು ದೊಡ್ಡವರಲ್ಲ. ಅಧಿಕಾರ ಇದ್ದವರು ದೊಡ್ಡವರಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಸತತ ಪ್ರಯತ್ನದಿಂದ ಸಾಧಿಸುವ ವ್ಯಕ್ತಿ ನಿಜಕ್ಕೂ ದೊಡ್ಡ ಮನುಷ್ಯ ಎನಿಸಿಕೊಳ್ಳುತ್ತಾನೆ. ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ನಿಂಗೋಜಿ ಕೊಪ್ಪಳದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ತುಡಿತ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ.
ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಗವಿಮಠ

Leave a Reply

Your email address will not be published. Required fields are marked *