Saturday, 8th August 2020

ದೊಡ್ಡಣ್ಣನ ದೊಡ್ಡಾಟಕ್ಕೆ ಬಗ್ಗದ ಭಾರತ, ಅಮೆರಿಕದ 29 ಉತ್ಪನ್ನಗಳ ಮೇಲೆ ಆಮದು ಸುಂಕ ಏರಿಕೆ

ದೊಡ್ಡಣ್ಣನ ದೊಡ್ಡಾಟಗಳಿಗೆ ಜಗ್ಗದ ಭಾರತ, ವ್ಯಾಪಾರ ಸಂಬಂಧ ಮಾತುಕತೆಗಳ ಫಲಪ್ರದವಾಗದ ಕಾರಣ, ಅಮೆರಿಕದಿಂದ ಆಮದಾಗುವ 29 ಉತ್ಪನ್ನಗಳ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸಲು ನಿರ್ಧರಿಸಿದೆ.

ಪರಿಷ್ಕರಿಸಿದ ಆಮದು ದರಗಳು ಜೂನ್‌ 16ರಿಂದ ಪರಿಣಾಮಕಾರಿಯಾಗಲಿವೆ. ಈ ಸಂಬಂಧ ಅಧಿಕೃತ ಪ್ರಕಟಣೆಯನ್ನು ಭಾರತ ಶೀಘ್ರವೇ ಬಿಡುಗಡೆ ಮಾಡಲಿದೆ. ಅಮೆರಿಕದಿಂದ ಭಾರತಕ್ಕೆ ಆಮದಾಗಲಿರುವ ಬಾದಾಮಿ, ವಾಲ್‌ನಟ್‌ಗಳು ಹಾಗೂ ಧವಸಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಭಾರತ ಉಕ್ಕು ಹಾಗೂ ಅಲ್ಯೂಮಿನಿಯಮ್‌ ಉತ್ಪನ್ನಗಳ ಮೇಲೆ ಕ್ರಮವಾಗಿ 25% ಹಾಗೂ 10%ನಷ್ಟು ಆಮದು ಸುಂಕ ವಿಧಿಸಲು ಕಳೆದ ವರ್ಷದಿಂದ ಅಮೆರಿಕ ನಿರ್ಧರಿಸಿದ ಬಳಿಕ ಉಭಯ ದೇಶಗಳ ನಡುವೆ ವ್ಯಾಪಾರ ಸಂಬಂಧ ಶೀತಲ ಸಮರ ಆರಂಭಗೊಂಡಿದೆ. ಅಮೆರಿಕದ ಈ ನಡೆಯಿಂದ ಭಾರತದ ರಫ್ತುದಾರರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.

ಜೂನ್‌ 5ರಂದು; ಅಭಿವೃದ್ಧಿಶೀಲ ದೇಶಗಳಿಗೆ ತಾನು ಕೊಡಮಾಡುತ್ತಿದ್ದ ಸಾಮಾನ್ಯ ವ್ಯಾಪಾರ ಪ್ರಾಶಸ್ತ್ಯ(GSP) ಸ್ಥಾನಮಾನದ ಪಟ್ಟಿಯಿಂದ ಭಾರತವನ್ನು ಅಮೆರಿಕ ತೆಗೆದುಹಾಕಿದ ಬಳಿಕ ಉಭಯ ದೇಶಗಳ ನಡುವಿನ ಭಿನ್ನಭಿಪ್ರಾಯಗಳು ಮತ್ತಷ್ಟು ಹೆಚ್ಚಿವೆ. ಈ ನಡೆಯಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ $5.5 ಶತಕೋಟಿ ಮೌಲ್ಯದ ಸರಕುಗಳ ಮೇಲೆ ಪರಿಣಾಮ ಉಂಟಾಗಿದೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಳತ್ವದಲ್ಲಿ ಅಮೆರಿಕ ಅದಾಗಲೇ ಚೀನಾದೊಂದಿಗೆ ದೊಡ್ಡ ವ್ಯಾಪಾರ ಸಮರದಲ್ಲಿ ನಿರತವಾಗಿದೆ. ತನ್ನಲ್ಲಿನ ತಂತ್ರಜ್ಞಾನವನ್ನು ಕದ್ದು, ಅಗ್ಗದ ದರದಲ್ಲಿ ತಯಾರಿಸಿದ ವಸ್ತುಗಳನ್ನು ತನ್ನ ನೆಲೆಕ್ಕೇ ತಂದು ಚೀನಾ ಸುರಿಯುತ್ತಿದೆ ಎಂದು ಅಮೆರಿಕ ಗಂಭೀರವಾಗಿ ಆಪಾದನೆ ಮಾಡುತ್ತಲೇ ಬಂದಿದೆ.

Leave a Reply

Your email address will not be published. Required fields are marked *