ಶಶಾಂಕಣ
shashidhara.halady@gmail.com
ಈ ಕನ್ನಡ ಕಾದಂಬರಿ ಮೊದಲ ಮುದ್ರಣ ಕಂಡದ್ದು ೧೯೪೯ರಲ್ಲಿ. ನಂತರದ ವರ್ಷಗಳಲ್ಲಿ ಏಳು ಮರುಮುದ್ರಣ ಕಂಡಿತು; ೧೯೬೯ರಲ್ಲಿ ಮುದ್ರಣಗೊಂಡ ಪ್ರತಿಗಳು ತೀರಿಹೋದವು. ಪ್ರತಿಗಳು ಅಲಭ್ಯ ಎನಿಸಿದವು. ಮುಂದಿನ ಮರುಮುದ್ರಣಕ್ಕಾಗಿ ೨೦೧೯ರ ತನಕ, ಅಂದರೆ ಸರಿಯಾಗಿ ಅರ್ಧ ಶತಮಾನ ಕಾಯಬೇಕಾಯಿತು!
ಕಾದಂಬರಿಯ ಹೆಸರು ‘ಬಾಳಿನ ಗಿಡ’. ಬರೆದವರು ಎಂ. ಹರಿದಾಸರಾವ್. ಹೊಸ ಮುದ್ರಣವನ್ನು ಹೊರತಂದವರು ಸಾಹಿತ್ಯ ಭಂಡಾರ, ಬೆಂಗಳೂರು. ಈಚಿನ ತಲೆಮಾರಿಗೆ ಹೆಚ್ಚು ಪರಿಚಿತವಲ್ಲದ ‘ಬಾಳಿನ ಗಿಡ’ ಕನ್ನಡದ ಪ್ರಮುಖ ಕಾದಂಬರಿಗಳಲ್ಲಿ ಒಂದು – ಅದರಲ್ಲೂ ಮುಖ್ಯವಾಗಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು ಎರಡು ವರ್ಷಗಳಲ್ಲಿ ಪ್ರಕಟಗೊಂಡ ಈ ಕಾದಂಬರಿ, ಅಂದಿನ ಸಾಹಿತ್ಯಕ ವಾತಾವರಣದಲ್ಲಿ ಸೃಷ್ಟಿಸಿದ ‘ಹವಾ’ವನ್ನು ಗಮನಿಸಿದರೆ, ನಿಸ್ಸಂಶ ಯವಾಗಿ, ಆ ಕಾಲಮಾನದ ಮತ್ತು ೨೦ನೆಯ ಶತಾನದ ಪ್ರಮುಖ ಕಾದಂಬರಿ ಗಳಲ್ಲಿ ‘ಬಾಳಿನ ಗಿಡ’ವನ್ನು ಸೇರಿಸಬಹುದು.
೧೯೪೯ರಲ್ಲಿ ಈ ಕಾದಂಬರಿ ಪ್ರಕಟವಾದಾಗ ಎಂ.ಹರಿದಾಸ ರಾವ್ ಅವರಿಗೆ ಕೇವಲ ೩೦ ವರ್ಷ. ಆ ಯುವಕನ ಲೇಖನಿ ಯಿಂದ, ಬಹು ಆಯಾಮದ, ಸೊಗಸಾದ ಭಾಷೆ ಹೊಂದಿರುವ, ಉತ್ತಮ ಕಥಾಹಂದರ ಹೊಂದಿರುವ ಈ ಕಾದಂಬರಿ ಹೊರಬಂದಿತು ಎಂಬ ವಿಚಾರವೇ, ಕನ್ನಡದ ಸಾಹಿತ್ಯಲೋಕದ ಒಂದು ಅದ್ಭುತ. ಕರಾವಳಿ ಕನ್ನಡದ ‘ದೇಸಿ’ತನವನ್ನು ಹೊಂದಿರುವ ಈ ಕಾದಂಬರಿ, ಕೆಲವು ಭಾಗಗಳಲ್ಲಿ ಶಿವರಾಮ ಕಾರಂತರು ಬಳಸಿದ ಭಾಷೆಯನ್ನು ಹೋಲುತ್ತದೆ.
ಆದರೆ ವಿಷಯ ವ್ಯಾಪ್ತಿ, ಅನುಭವಗಳ ದಟ್ಟತನ, ನಾನ್ಣುಡಿಗಳ ಬಳಕೆ, ಗ್ರಾಮೀಣ ಬದುಕಿನ ವರ್ಣನೆ, ಬ್ರಿಟಿಷ್ ಸರಕಾರದ ದಬ್ಬಾಳಿಕೆ ಮತ್ತು ಎರಡನೆಯ ಮಹಾಯುದ್ಧದ ಪರಿಣಾಮಗಳ ವಿವರಣೆಯಲ್ಲಿ ಕಾರಂತರನ್ನು ಮೀರಿಸುವ ಕೌಶಲವನ್ನು
ಇಲ್ಲಿ ಕಾಣಬಹುದು. ‘ಬಾಳಿನ ಗಿಡ’ ಕಾದಂಬರಿ ಪಡೆದ ಗೌರವಗಳು ಹಲವು. ೧೯೪೯ರಲ್ಲಿ ಪ್ರಕಟಗೊಂಡ ಈ ಕಾದಂಬರಿಯು, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾರಿತೋಷಕವನ್ನು ಪಡೆದಿದೆ; ಮದರಾಸ್ ವಿಶ್ವವಿದ್ಯಾಲಯವು ೧೯೫೫ -೧೯೫೮ರ ಇಂಟರ್ ಮೀಡಿಯಟ್ ಪರೀಕ್ಷೆಗೆ ಈ ಕಾದಂಬರಿಯನ್ನು ಪಠ್ಯ ಪುಸ್ತಕವನ್ನಾಗಿಸಿದೆ; ಮೈಸೂರು ವಿಶ್ವವಿದ್ಯಾ ಲಯವು ೧೯೫೯-೬೦ರ ಬಿ.ಎ., ಬಿಎಸ್‌ಸಿ ತರಗತಿಗಳಿಗೆ ಇದನ್ನು ಪಠ್ಯವೆಂದು ಗೊತ್ತುಮಾಡಿದೆ; ಕನ್ನಡ ಸಾಹಿತ್ಯ
ಪರಿಷತ್ತು ನಡೆಸುವ ೧೯೫೭ರ ಜಾಣ ಪರೀಕ್ಷೆಗೆ ಇದು ಪಠ್ಯವಾಗಿತ್ತು!
ಇದು ಶ್ರೇಷ್ಠ ವರ್ಗದ ಕಾದಂಬರಿ ಎಂದು ಅಂದಿನ ದಿನಗಳ ಪ್ರಮುಖ ವಾರಪತ್ರಿಕೆ ‘ಪ್ರಜಾಮತ’ ಹೇಳಿದೆ. ಮುನ್ನುಡಿ ಬರೆದ ಗೋವಿಂದ ಪೈ ಯವರು, ಇದೊಂದು ವಿಶಿಷ್ಟ ಕಾದಂಬರಿ ಎಂದು ಬರೆದು, ಇಂತಹ ಸಾಮಾಜಿಕ ಕಾದಂಬರಿಗಳು ಇಂಗ್ಲಿಷ್ ನಲ್ಲಿವೆ, ಕನ್ನಡದಲ್ಲಿ ಅಪರೂಪ ಎಂದು ಹೇಳಿದ್ದಾರೆ.
ಈ ಕಾದಂಬರಿಯನ್ನು ಬರೆದ ಎಂ.ಹರಿದಾಸ ರಾಯರ ಕಥೆ ತುಸು ರೋಚಕ ಎನಿಸಿದರೂ, ಅವರ ಜೀವನವು ದುರಂತ ದೊಂದಿಗೆ ಅಂತ್ಯಗೊಂಡಿದ್ದು ಬೇಸರದ ವಿಚಾರ. ಅವರು ಬದುಕಿದ್ದಿದ್ದರೆ, ಇದೇ ರೀತಿ ಸಾಹಿತ್ಯ ಕೃಷಿಯನ್ನು ಮುಂದು ವರಿಸಿದ್ದರೆ, ಕನ್ನಡದ ಹೆಸರಾಂತ ಸಾಹಿತಿಗಳಲ್ಲಿ ಒಬ್ಬರಾಗಿರುತ್ತಿದ್ದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ದಕ್ಷಿಣ
ಕನ್ನಡ ಜಿಲ್ಲೆಯ ಮಾರ್ಪಳ್ಳಿಯಲ್ಲಿ ಜನಿಸಿದ ಹರಿದಾಸರಾಯರು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ನಂತರ, ಪತ್ರಕರ್ತರಾಗಿ ಕೆಲಸ ಮಾಡಿದರು; ಕರಾವಳಿಯಲ್ಲಿ ಆರಂಭಿಕ ಪರಿಶ್ರಮದ ನಂತರ, ಹುಬ್ಬಳ್ಳಿಗೆ ಹೋದರು; ಅಲ್ಲಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವೃತ್ತಿ ನಿರ್ವಹಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಈ ನಡುವೆ ಇಪ್ಪತ್ತು ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ‘ಬಾಳಿನ ಗಿಡ’ ಕಾದಂಬರಿಯು ಅಂದಿನ ದಿನಗಳಲ್ಲಿ ಇನ್ನಿಲ್ಲದಂತೆ ಜನಪ್ರಿಯವಾಯಿತು; ಅದರಲ್ಲಿ ರೂಪುಗೊಂಡ ಗ್ರಾಮೀಣ ಬದುಕಿನ ಚಿತ್ರಣ ಮತ್ತು ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದ ವಿವರಗಳ ಪ್ರಭಾವದಿಂದಲೋ ಏನೊ, ಎರಡು ವಿಶ್ವವಿದ್ಯಾಲಯ ಗಳಲ್ಲಿ ಪಠ್ಯವಾಗಿಯೂ ಆಯ್ಕೆಯಾಯಿತು, ಆ ಮೂಲಕ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ತಲುಪಿತು.
ಆದರೆ ವಿಧಿ ಹರಿದಾಸರಾಯರನ್ನು ಕ್ರೂರವಾಗಿ ನಡೆಸಿಕೊಂಡಿತು; ಅಸೌಖ್ಯದಿಂದಿದ್ದ ಮಡದಿಗೆ ಔಷಧ ತರಲು ಹುಬ್ಬಳ್ಳಿಯ ರಸ್ತೆಯೊಂದರಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದಾಗ, ವೇಗವಾಗಿ ಬಂದ ವಾಹನವೊಂದು ಡಿಕ್ಕಿಹೊಡೆದು ಹರಿದಾಸರಾಯರು
ನಿಧನರಾದರು (೨೯.೭.೧೯೫೪). ಆ ಸಮಯಕ್ಕಾಗಲೇ ‘ಬಾಳಿನ ಗಿಡ’ ಕಾದಂಬರಿಯು ಎರಡು ಮುದ್ರಣಗಳನ್ನು ಕಂಡಿತ್ತು;
ತನ್ನ ಅನನ್ಯತೆಯನ್ನು ಸಾಬೀತುಪಡಿಸಿತ್ತು.
ಆದರೆ, ಹರಿದಾಸರಾಯರ ಅಕಾಲಿಕ ನಿಧನದಿಂದಾಗಿ, ಕನ್ನಡದ ಸಾರಸ್ವತ ಲೋಕವು ಪ್ರಮುಖ ಸಾಹಿತಿಯೊಬ್ಬರನ್ನು ಕಳೆದು ಕೊಂಡಿತು. ಹರಿದಾಸರಾಯರ ಮಡದಿ ಮತ್ತು ಇಬ್ಬರು ಮಕ್ಕಳು ಅನಂತಪುರಕ್ಕೆ ವಲಸೆ ಹೋದರು; ಅಲ್ಲಿ ಹರಿದಾಸ ರಾಯರ ಮಡದಿಯ ತಂದೆಯವರು ಇವರ ಪಾಲನೆ ಪೋಷಣೆಯನ್ನು ಮಾಡಿದರು ಮತ್ತು ಹರಿದಾಸರಾಯರ ಒಬ್ಬ ಮಗ ವೈದ್ಯರಾ ಗಿಯೂ, ಇನ್ನೊಬ್ಬ ಮಗ ಇಂಜಿನಿಯರ್ ಆಗಿಯೂ ತಮ್ಮ ಬದುಕನ್ನು ಕಟ್ಟಿಕೊಂಡರು. ಅವರಿಬ್ಬರೂ ನಿವೃತ್ತರಾಗಿ ಇಂದು ಕ್ರಮವಾಗಿ ಪೂನಾ ಮತ್ತು ಹೈದರಾಬಾದ್ ನಲ್ಲಿದ್ದಾರೆ.
ಅರ್ಧ ಶತಮಾನದ ನಂತರ, ‘ಬಾಳಿನ ಗಿಡ’ ಕಾದಂಬರಿಯು ೨೦೧೯ರಲ್ಲಿ ಮರುಮುದ್ರಣಗೊಂಡ ವಿಚಾರ ಸಹ ಸ್ವಾರಸ್ಯಕರ. ಸಾಹಿತ್ಯ ಭಂಡಾರದವರು ‘ಬಾಳಿನ ಗಿಡ’ ಕಾದಂಬರಿಯನ್ನು ೧೯೬೯ರ ತನಕ ಮರುಮುದ್ರಣ ಮಾಡಿದ್ದರೂ, ಆ ನಂತರ ಅದರ ಮರುಮುದ್ರಣವನ್ನು ಕೈಗೆತ್ತಿಕೊಂಡಿರಲಿಲ್ಲ. ಕಾದಂಬರಿಯ ಹಕ್ಕುಸ್ವಾಮ್ಯ ಹೊಂದಿರುವ ಹರಿದಾಸ ರಾಯರ ಮಡದಿ ಮತ್ತು ಮಕ್ಕಳ ಸಂಪರ್ಕ ತಪ್ಪಿಹೋಗಿದ್ದರಿಂದ, ಅವರ ಅನುಮತಿಯಿಲ್ಲದೇ ಮರು ಮುದ್ರಣ ಮಾಡುವುದು ಸಮಂಜಸವಲ್ಲ ಎಂಬ ಭಾವ ಇತ್ತು. ಈ ನಡುವೆ ೨೦೧೭ರಲ್ಲಿ ಈ ಕಾದಂಬರಿಯ ಕುರಿತು ಆಸಕ್ತಿ ತಳೆದವರು ಬೈಲಕೆರೆ ಗೋವಿಂದರಾವ್
ಎಂಬ ಮಹನೀಯರು.
ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದ ಗೋವಿಂದರಾವ್ ಅವರು, ‘ಬಾಳಿನ ಗಿಡ’ದಂತಹ ಪ್ರಮುಖ ಕಾದಂಬರಿಯೊಂದು ಅದೇಕೆ
ಮರುಮುದ್ರಣವಾಗುತ್ತಿಲ್ಲ ಎಂದು ಅರಸುತ್ತಾ ಹೋದಾಗ, ಸಾಹಿತ್ಯ ಭಂಡಾರದವರು ಮರುಮುದ್ರಣಕ್ಕಿರುವ ತೊಡಕನ್ನು ತಿಳಿಸಿದರು. ಗೋವಿಂದರಾವ್ ಅವರು ಹರಿದಾಸರಾಯರ ಮಕ್ಕಳು ಎಲ್ಲಿದ್ದಾರೆ ಎಂದು ಹುಡುಕಿ, ಸಂಪರ್ಕಿಸಿ, ಅನುಮತಿ ಕೊಡಿಸುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿದರು; ಅದರ ಫಲವಾಗಿ, ೨೦೧೯ರಲ್ಲಿ ಈ ಕಾದಂಬರಿ ಮರುಮುದ್ರಣಗೊಂಡಿತು.
ಕನ್ನಡದಲ್ಲಿ ಸ್ವಾತಂತ್ರ್ಯ ಪೂರ್ವದ ಗ್ರಾಮೀಣ ಚಿತ್ರಣಗಳನ್ನು ಮತ್ತು ಬ್ರಿಟಿಷರ ವಿರುದ್ಧ ನಡೆಸ ಸ್ವಾತಂತ್ರ್ಯ ಹೋರಾಟದ ವಿವರಗಳನ್ನು ಒಳಗೊಂಡ ಕಾದಂಬರಿಗಳು ಕಡಿಮೆ; ಆ ಕೊರತೆಯನ್ನು ನೀಗಲೋ ಎಂಬಂತೆ ಹರಿದಾಸರಾಯರು ‘ಬಾಳಿನ ಗಿಡ’ ಕಾದಂಬರಿಯನ್ನು ಬರೆದಂತಿದೆ.
ಬ್ರಿಟಿಷರ ವಿರುದ್ಧ ಭೂಗತರಾಗಿದ್ದುಕೊಂಡೋ, ಪ್ರತ್ಯಕ್ಷವಾಗಿಯೋ ಜನ ಸಾಮಾನ್ಯರು ನಡೆಸಿದ ಹೋರಾಟದ ವಿವರಗಳನ್ನು ಕಷ್ಟು ಸಶಕ್ತವಾಗಿ ಹರಿದಾಸರಾಯರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಹರಿದಾಸರಾಯರು, ಸ್ವತಃ ಒಂದು ವರ್ಷ ಜೈಲಿನಲ್ಲಿದ್ದರು; ತಮ್ಮ ಓದಿಗೆ ತಿಲಾಂಜಲಿ ಇತ್ತು, ಹಳ್ಳಿ ಹಳ್ಳಿಗಳಲ್ಲಿ ಬ್ರಿಟಿಷರ ವಿರುದ್ಧ ಪ್ರಚಾರ ನಡೆಸುತ್ತಾ, ತೀರ್ವೆ ಕಟ್ಟಬೇಡಿ ಎಂದು ಜನರಿಗೆ ತಿಳಿಹೇಳಿದ್ದರ ಪರಿಣಾಮವಾಗಿ, ಬ್ರಿಟಿಷ್ ಪೊಲೀಸರು ಅವರನ್ನು ಬಂಧಿಸಿ, ಕಾರಾಗೃಹದಲ್ಲಿಟ್ಟಿದ್ದರು. ಆ ಹೋರಾಟದ ಅನುಭವ ಮತ್ತು ಬ್ರಿಟಿಷ್ ಆಡಳಿತದಿಂದ ನಮ್ಮ ಜನರಿಗಾದ ಅನ್ಯಾಯಗಳು ಈ ಕಾದಂಬರಿಯಲ್ಲಿ ಅಲ್ಲಲ್ಲಿ ಸಾಕಷ್ಟು ವಿವರ ವಾಗಿಯೇ ಬರುತ್ತವೆ.
ಹರಿದಾಸರಾಯರು ಪ್ರಭುತ್ವದ ಹುಳುಕುಗಳನ್ನು, ತಪ್ಪುಗಳನ್ನು ಈ ಕಾದಂಬರಿಯಲ್ಲಿ ಎತ್ತಿ ತೋರಿಸಿದ ಪರಿ ವಿಶೇಷವಾದದು; ಆಳುವವರ ನಡೆಗಳಿಂದ ಹೇಗೆ ಜನರು ಸಂಕಷ್ಟಕ್ಕೆ ಸಿಲುಕಿದರು, ಹೇಗೆ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಳಗೊಂಡಿತು
ಎಂಬೆಲ್ಲಾ ವಿವರಗಳು ವಿಶೇಷವಾಗಿವೆ. ಈ ಕಾದಂಬರಿ ಹೊರಬಂದದ್ದು ೧೯೪೯ರಲ್ಲಿ. ಇಲ್ಲಿನ ಕಥಾನಕದ ಅವಧಿಯು ೧೯೩೦ರ ದಶಕದಿಂದ ೧೯೪೬ರ ತನಕ ಎನ್ನ ಬಹುದು. ಗಾಂಧಿಯವರ ಹೋರಾಟದಿಂದಾಗಿ, ದೇಶಕ್ಕೆ ಸ್ವಾತಂತ್ರ್ಯ ಇನ್ನೇನು ದೊರಕುತ್ತದೆ ಎಂದು ಕಾದಂಬರಿಯ ಪ್ರಮುಖ ಪಾತ್ರಗಳು ಆಗಾಗ ಹೇಳುತ್ತವೆ. ಬ್ರಿಟಿಷರು ಭಾರತವನ್ನು ತೊರೆಯಲೇಬೇಕು, ಅವರಿಗೆ ಬೇರೆ ದಾರಿ ಇಲ್ಲ ಎಂದೂ ಗೋವಿಂದರಾಯರು ಹೇಳುತ್ತಾರೆ. ಹಾಗೆ ನೋಡ ಹೋದರೆ, ಈ ಕಾದಂಬರಿಯ ಬಹುಪಾಲು ಕಥನವು ಹರಿದಾಸ ರಾಯರು ಮತ್ತು ಅವರ ತಂದೆ ಗೋವಿಂz ರಾಯರ ಬದುಕಿನ ಕಥನವೇ ಆಗಿದೆ ಎಂದು ಬೈಲಕೆರೆ ಗೋವಿಂದ ರಾವ್ ಅವರು ಈಚೆಗೆ ಪತ್ತೆ ಮಾಡಿದ್ದಾರೆ.
ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಅನುಭವವನ್ನು ಒಂದು ಸೃಜನಶೀಲ ಕಥನದ ಭಾಗವಾಗಿ ಮುಡಿಸುವಲ್ಲಿ, ಕಾದಂಬರಿ ಕಾರ ಹರಿದಾಸರಾಯರು ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ. ನಿವೃತ್ತ ಶಾಲಾ ಶಿಕ್ಷಕ ಗೋವಿಂದರಾವ್ ಎಂಬುವವರು, ಬಂಗಾಡಿ ಪ್ರದೇಶದ ಕಾಡಿನಂಚಿನ ಜಾಗದಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಈ ಕಾದಂಬರಿಯ ಪ್ರಮುಖ ಕಥಾನಕ. ಬಲ್ಲಾಳರಾಯನ ದುರ್ಗದ ತಳದಲ್ಲಿರುವ ಕಾಡುಪ್ರದೇಶವನ್ನು ಹಲವು ವರ್ಷಗಳ ಕಾಲ ಹಸನು ಮಾಡಿ, ಅಲ್ಲಿ ಕೃಷಿಯ ಕೆಲಸ
ಮಾಡುತ್ತಾ, ಕಾಡಿನ ನಡುವಿನ ಮನೆಯಲ್ಲಿ ವಾಸಿಸುವ ‘ಬೆಟ್ಟದ ಜೀವ’ ಈ ಗೋವಿಂದರಾಯರು. ಹಲವು ಬಾರಿ ಇಲ್ಲಿನ ಕಾಡಿನ ವರ್ಣನೆ, ಕಾಡಿನ ನಡುವಿನ ಬದುಕಿನ ವರ್ಣನೆಯು ‘ಬೆಟ್ಟದ ಜೀವ’ವನ್ನು ನೆನಪಿಸುತ್ತದೆ; ಆದರೆ ಹರಿದಾಸರಾಯರು ವರ್ಣಿಸಿದ ಕಾಡು, ಬೆಟ್ಟ, ಗುಡ್ಡಗಳು ಇನ್ನಷ್ಟು ಸಮರ್ಥವಾಗಿ, ಆಪ್ತವಾಗಿ ಮೂಡಿಬಂದಿವೆ ಎಂಬುದರಲ್ಲಿ ಸಂಶಯವಿಲ್ಲ.
ಕಾಡು ಕಡಿದು ನಾಡು ಮಾಡುವ ಪ್ರಕ್ರಿಯೆಯಲ್ಲಿ, ನಿವೃತ್ತ ಶಿಕ್ಷಕ ಗೋವಿಂದರಾಯರು ಸಫಲರಾದರೂ, ಕಾದಂಬರಿಯ ಕೊನೆಯಲ್ಲಿ ಅವರ ದೇಹಾಂತ್ಯವಾಗುವ ಮೂಲಕ ಈ ಕಥನಕ್ಕೊಂದು ತಾರ್ಕಿಕ ಅಂತ್ಯ ದೊರೆಯುತ್ತದೆ. ಆದರೆ, ಈ ಕಾದಂಬರಿಯ ಸಾರ್ಥಕ್ಯ ಬೇರೆಯದೇ ನೆಲೆಯಲ್ಲಿದೆ ಎಂದನಿಸುತ್ತದೆ. ಕಾಡಿನ ನಡುವೆ ಕುಟುಂಬವೊಂದು ಕಷ್ಟದಿಂದ ಜೀವನ ನಡೆಸುವ ಕಥನವೇ ಪ್ರಧಾನ ಎನಿಸಿದರೂ, ಈ ಕಾದಂಬರಿಯನ್ನು ಅದೇ ನೆಲೆಯಲ್ಲಿ ಇದುವರೆಗೆ ವಿಶ್ಲೇಷಿಸಲಾಗಿದ್ದರೂ,
ಬ್ರಿಟಿಷರ ವಿರುದ್ಧ ಗ್ರಾಮೀಣರು ನಡೆಸಿದ ಹೋರಾಟವೇ ಈ ಕಾದಂಬರಿಯ ಇನ್ನೊಂದು ಪ್ರಮುಖ ನೆಲೆ ಎಂದು ನನಗನ್ನಿ ಸುತ್ತದೆ.
ಅದರಲ್ಲೂ ಮುಖ್ಯವಾಗಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಹೊಸತರಲ್ಲಿ, ಇನ್ನೂ ಬ್ರಿಟಿಷ್ ಆಡಳಿತದ ಛಾಯೆಯ
ಮುಂದುವರಿಕೆಯು ಪ್ರಬಲವಾಗಿದ್ದ ಕಾಲದಲ್ಲಿ (ಆಗಿನ್ನೂ ರಾಜ್ಯಗಳ ಮರುವಿಂಗಡಣೆಯಾಗಿರಲಿಲ್ಲ) ಪ್ರಕಟಗೊಂಡ ಈ ಕಾದಂಬರಿಯು ಈ ವಿಚಾರದಲ್ಲಿ ಹಲವು ಹೊಸ ಚಿಂತನೆಗಳನ್ನು ಹುಟ್ಟುಹಾಕುತ್ತದೆ. ‘ಯಾರು ಪಾಪಿಗಳು? ಯಾರು ಪುಣ್ಯವಂತರು? ಜರ್ಮನರೂ ಜಪಾನರೂ ಅನ್ಯಾಯ ಬಗೆದರು ನಿಜ. ಆದರೆ ಆಂಗ್ಲೋ ಅಮೆರಿಕನ್ನರು ಮಾಡಿದ ಮಹಾ
ಪುಣ್ಯ ಕಾರ್ಯ ಎಂಥಾದ್ದು? ಹಿರೊಶಿಮಾ ನಗರದ ನಾಶ ಅವರ ಪುಣ್ಯ ಕಾರ್ಯವಾ? ಎಲ್ಲ ರಾಕ್ಷಸ ಕುಲ. . . .ಸಾವು ಬೇಕು, ಪರರ ಗುಲಾಮಗಿರಿಯಲ್ಲ! ಸ್ವಾಂತಂತ್ರ್ಯ ಕಳೆದುಕೊಂಡ ಒಂದು ಜನಾಂಗದ ಗತಿ ಏನಾಗುತ್ತದೆ? ನಮ್ಮ ಸ್ಥಿತಿಯೇ ಅದಕ್ಕೊಂದು ಉದಾಹರಣೆ! ನಮಗೆ ಸ್ವಾತಂತ್ರ್ಯವಿದೆಯಾ? .. ಇನ್ನು ನಮಗೆ ಸ್ವಾತಂತ್ರ್ಯ ಕೊಡದೇ ಬೇರೆ ಮಾರ್ಗವಿಲ್ಲ
ಬ್ರಿಟಿಷರಿಗೆ. ಯುದ್ಧದಿಂದ ನಿರ್ವೀರ್ಯರಾಗಿದ್ದಾರೆ ಅವರು.
ಸಾಲ ಕುತ್ತಿಗೆಯವರೆಗೆ ಬಂದಿದೆ. ಗಾಂಧಿ, ಜವಹರ್‌ಲಾಲ್‌ರನ್ನೆಲ್ಲ ಬಿಡುಗಡೆ ಮಾಡಿದ್ದಾರೆ. ಇನ್ನೊಮ್ಮೆ ಅವರು ಹೋರಾಟ ಹೂಡಿದರೆ, ೧೯೪೨ರ ನೂರ್ಮಡಿಯಾದೀತು. ಸ್ವಾತಂತ್ರ್ಯ ಕೊಡಿ ಭಾರತಕ್ಕೆ – ಎಂದು ಇಂಗ್ಲೆಂಡು, ಅಮೆರಿಕ, ರಷ್ಯಗಳಲ್ಲಿ
ಅನೇಕರು ಒತ್ತಾಯ ಮಾಡುತ್ತಿದ್ದಾರೆ. ಇನ್ನು ಹೋದಷ್ಟು ಕಾಲ ಹೋಗಲಿಕ್ಕಿಲ್ಲ.’(ಪುಟ ೧೬೭). ಈ ರೀತಿಯ ಚಿಂತನೆಯು, ೧೯೪೯ರಲ್ಲಿ ಪ್ರಕಟಗೊಂಡ ಕನ್ನಡ ಕಾದಂಬರಿಯೊಂದರಲ್ಲಿತ್ತು ಎಂದು ತಿಳಿಯುವುದೇ ಅಭಿಮಾನದ ವಿಚಾರ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಎರಡನೆಯ ಮಹಾ ಯುದ್ಧವು ಎದುರಾಗಿ, ಆ ಕಾಲದಲ್ಲಿ ನಮ್ಮ ದೇಶದಲ್ಲಿ ಬ್ಲಾಕ್ ಮಾರ್ಕೆಟ್ ವಿಪರೀತ ಹೆಚ್ಚಳವಾಯಿತು ಎಂಬ ವಿಚಾರವು, ಇಲ್ಲಿನ ಪ್ರಮುಖ ಪಾತ್ರ ಗೋವಿಂದರಾಯರ ಬಾಯಲ್ಲಿ ಬರುತ್ತದೆ. .. ಮೇಲೆ ಉಗುಳಿದರೆ ನಮ್ಮ ಮೋರೆಗೇ ಬೀಳುತ್ತದೆ. ಗಾಂಧೀಜಿ ಕೇಳಿದರೆ ಎದೆಯೊಡೆದುಕೊಂಡಾರು. ಚಳುವಳಿ ಆರಂಭ ವಾದ ಕೂಡಲೆ ಅನೇಕ ಕಾಂಗ್ರೆಸಿಗರೂ ರೈಲ್ವೆ ಸ್ಟೇಷನ್ ಸುಟ್ಟು ಹಾಕಿದರು.
ಟಪ್ಪಾಲು ಬಸ್ ನಿಲ್ಲಿಸಿ, ಚೀಲಗಳನ್ನು ಒಡೆದರು. ಆಗ ದೊರೆತ ಹಣವನ್ನೆಲ್ಲ ಕೆಲವರು ಬಗಲಿಗೆ ಹಾಕಿಕೊಂಡು ಹಂಚಿಕೊಂಡ ರೆಂದು ಜನ ಹೇಳುತ್ತಿದ್ದಾರೆ. ಕೆಲವರು ಚಳುವಳಿಯ ನೆವ ಹೇಳಿ, ಮುಂಬೈ, ದಿಲ್ಲಿ, ಅಹಮದಾಬಾದ್‌ಗಳ ದೊಡ್ಡ ದೊಡ್ಡ ಶೇಟ್‌ಗಳಿಂದ ಹತ್ತು ಸಾವಿರ, ಇಪ್ಪತ್ತು ಸಾವಿರ ನಿಧಿ ತಂದು ಅದರ ಬಹ್ವಂಶವನ್ನು ತಿಂದು ತೇಗಿದುದೂ ಇದೆ. ಇನ್ನು
ಬ್ಲ್ಯಾಕ್ ಮಾರ್ಕೆಟಿನ ವಿಷಯ! ಅದನ್ನು ಮಾಡದ ಕಾಂಗ್ರೆಸ್ ವ್ಯಾಪಾರಿಯೇ ಇಲ್ಲ.’ (ಪುಟ ೧೫೦) ಬಾಳಿನ ಗಿಡ ಕಾದಂಬರಿಯ ಪ್ರಮುಖ ಪಾತ್ರಗಳಲ್ಲಿ ಒಂದಾದ ಹರಿಯನ್ನು ಬ್ರಿಟಿಷರು ಬಂಧಿಸುತ್ತಾರೆ; ಆತ ತಪ್ಪಿಸಿಕೊಂಡು, ಮಾರುವೇಷದಲ್ಲಿ ಬಂಗಾಡಿ ಯ ತನ್ನ ತಂದೆಯ ಮನೆಗೆ ಬರುತ್ತಾರೆ; ಬರುವಾಗ, ಸುವಾಸಿನಿ ಎಂಬ ಮಹಿಳೆಯೂ ಜತೆಯಿದ್ದಳು.
ಆಕೆಯೂ ಹೋರಾಟಗಾರಳೇ! ಆಕೆ ಖಾದಿ ಧರಿಸಿದ್ದು ಅದನ್ನು ‘ಗಾಂಧಿ ಸೀರೆ’ ಎಂದು ವರ್ಣಿಸಿದ್ದಳು! ಗಾಂಧೀಜಿಯವರ ಅಸಹಕಾರ ಚಳವಳಿಯ ಮಹತ್ವವನ್ನು ಕಾದಂಬರಿಯ ಪಾತ್ರಗಳು ಹಲವು ಬಾರಿ ಎತ್ತಿ ಆಡುವುದು ಸಹ ಗಮನಾರ್ಹ. ಕನ್ನಡ ಸಾಹಿತ್ಯವನ್ನು, ಕಾದಂಬರಿಗಳನ್ನು ಓದುವವರೆಲ್ಲರೂ ಒಮ್ಮೆಯಾದರೂ ‘ಬಾಳಿನ ಗಿಡ’ ಓದಲೇ ಬೇಕು; ಇಪ್ಪತ್ತನೆಯ ಶತಮಾನದಲ್ಲಿ ಪ್ರಕಟ ಗೊಂಡ ಕನ್ನಡ ಕಾದಂಬರಿಗಳ ವೈವಿಧ್ಯತೆಯನ್ನು ಎತ್ತಿ ತೋರುವ ಪ್ರಮುಖ ಕೃತಿ ‘ಬಾಳಿನ ಗಿಡ’.