Thursday, 28th March 2024

ವಿಮರ್ಶೆಗಳನ್ನೂ ಸ್ವೀಕರಿಸುತ್ತ ಮುನ್ನಡೆಯಿರಿ

ಪರಿಶ್ರಮ

ಪ್ರದೀಪ್‌ ಈಶ್ವರ್‌

parishramamd@gmail.com

ದಾನ ಧರ್ಮ ಮಾಡಿದರೆ ಯಾವನ್ ತಲೆ ಮೇಲೆ ಕಲ್ಲು ಹಾಕಿ ದುಡ್ಡು ತಂದಾನೋ ಅಂತಾರೆ. ಕಷ್ಟ ಪಟ್ಟು ಮೇಲೆ ಬಂದರೆ ಅದೃಷ್ಟ ಅಂತಾರೆ. ಕಷ್ಟ ಪಟ್ಟು ಸೋತರೆ ಯೋಗ್ಯತೆ ಇಲ್ಲ ಅಂತಾರೆ. ಸಂಬಂಧಿಕರಿಗೆ ಹತ್ತಿರ ಇದ್ದರೆ ಹೊಟ್ಟೆ ಕಿಚ್ಚು ಪಡ್ತಾರೆ. ದೂರ ಇದ್ದರೆ ಹೊಟ್ಟೆ ಮೇಲೆ ಹೊಡೀತಾರೆ. ಧೈರ್ಯವಾಗಿ ಎವನ್ನು ಎದುರಿಸಿದರೆ ಇವನಿಗೇನೋ ವಕ್ಕರಿಸಿದೆ ಅಂತಾರೆ.

ವಿಮರ್ಶೆಗಳು ಯಶಸ್ಸಿನ ಸಾಮ್ರಾಜ್ಯವನ್ನ ಕಟ್ಟಿ, ಅಧಿಪತಿಗಳಾಗ ಬೇಕಾದವರನ್ನ, ಗೆಲುವಿನ ಮಹಲ್ ಕಟ್ಟಬೇಕಾದ ಮಹನೀಯ ರನ್ನ ಅರ್ಧದಾರಿಯ ನಿಲ್ಲಿಸಿಬಿಡುತ್ತೆ. ಆತ್ಮವಿಶ್ವಾಸದಿಂದ ನಡೆಯಬೇಕಾದವರನ್ನ ಆಕ್ರಂದನಕ್ಕೆ ಸಿಲುಕಿಸಿ ಬಿಡುತ್ತೆ ಗೆಲುವು, ಸೋಲು ಪಯಣದಲ್ಲಿ ಸಹಜ ಆದ್ರೆ ಗೆಲುವು ಸೋಲು ಲೆಕ್ಕಿಸದೆ ವಿಮರ್ಶೆಗಳನ್ನ ಸ್ವೀಕರಿಸುವುದು ಒಂದು ಕಲೆ. ಗೆಲುವಿನ ಶ್ರದ್ಧೆ, ಏಕಾಗ್ರತೆ, ನಿರಂತರಪ್ರಯತ್ನ ಬುದ್ಧಿ ವಂತಿಕೆ, ಧೈರ್ಯ ಎಷ್ಟು ಮುಖ್ಯವೋ, ವಿಮರ್ಶೆ ಗಳನ್ನ ಸ್ವೀಕರಿಸುವುದು, ಸಹಿಸಿಕೊಳ್ಳುವ ಗುಣ ಅಷ್ಟೇ ಮುಖ್ಯ.

ಜಗತ್ತಲ್ಲಿ ಸಾಕಷ್ಟು ಮಂದಿ ವಿಮರ್ಶೆಗಳನ್ನ ಸ್ವೀಕರಿಸಿ ಬೆಳೆಯುವ ತಾಕತ್ತಿನ ಕೊರತೆ ಯಿದೆ. ಒಂದು ಪುಟ್ಟ ವಿಮರ್ಶೆ ಬಂದ ನಂತರ ಬದುಕು ಮುಗಿದೇ ಹೊಯ್ತೇನೋ ಎಂಬ ಸಂಗದಿಗ್ಧತೆ ಗೆ ಸಾಕಷ್ಟು ಮಂದಿ ಒಳಪಡುತ್ತಾರೆ. ಇವುದರಲ್ಲಿ ಯಾವುದು ಕೊರತೆ ಯಾದರು ಗೆಲುವಿನ ಸನಿಯಕ್ಕೆ ತಲುಪುವುದು ತುಂಬಾ ಕಷ್ಟ. ಆ ಕಾರಣನಕ್ಕೆ ಈ ಜಗತ್ತಿ ನಲ್ಲಿ ಎಷ್ಟೋ ಮೇಧಾವಿಗಳು, ಎಷ್ಟೋ ಬುದ್ದಿವಂತವರಿದ್ರೂ ಸಹ ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನ ಕಟ್ಟಲು ವಿಫಲವಾಗುತ್ತಿದ್ದಾರೆ.

ನೀವು ಯಾವುದೇ ಪ್ರಯತ್ನಕ್ಕೆ ಕೈ ಹಾಕಿ, ನಿಮ್ಮನ್ನು ಟೀಕಿಸಿ ಮಾತನಾಡುವವರು ಇದ್ದೇ ಇರುತ್ತಾರೆ. ಯಾರು ಏನೇ ಹೇಳಲಿ, ಮಾತನಾಡಲಿ ನಿಮ್ಮ ಪ್ರಯತ್ನದಲ್ಲಿ ಪ್ರಾಮಾಣಿಕತೆ ಇದ್ದರೆ ಮುನ್ನಡೆಯಬೇಕು. ಗೆದ್ದರೆ ನಿಮ್ಮ ಮನೆಯವರು ಸಂತೋಷ ಪಡ್ತಾರೆ, ಸೋತರೆ ಪಕ್ಕದ ಮನೆಯವರು ಸಂತೋಷ ಪಡ್ತಾರೆ.

ಬಾಲ್ಯದಿಂದ ಪ್ರಾಯದವರೆಗೂ, ಪ್ರಾಯದಿಂದ ಬದುಕಿಗೆ ಗಾಯವಾಗುವವರೆಗೂ, ಉಸಿರು ನಿಲ್ಲಿಸಿ ಪ್ರಪಂಚದಲ್ಲಿ ಬಿಟ್ಟು ಹೋಗು ವವರೆಗೂ ವಿಮರ್ಶೆಗಳ ಸುರಿಮಳೆ ಚಾಲ್ತಿಯಲ್ಲಿರುತ್ತೆ. ಸಹನೆಯಿಂದ ನಿಮ್ಮ ಪಾಡಿಗೆ ನೀವಿದ್ದರೆ ಸ್ವಾರ್ಥಿ ಅಂತಾರೆ. ಜಾಸ್ತಿ ಮಾತ ನಾಡಿದರೆ ದುಡ್ಡಿನ ಅಹಂ ಅಂತಾರೆ. ಸಮಾಜದ ಅಂಕು ಡೊಂಕುಗಳನ್ನ ಪ್ರಶ್ನಿಸಿದರೇ ಮಾಡಲು ಕೆಲಸವಿಲ್ಲ ಅಂತಾರೆ.

ಯಾವುದಕ್ಕೆ ಪ್ರತಿಕ್ರಿಯೆ ಕೊಡದಿದ್ದರೆ Social Responsibility ಇಲ್ಲ ಅಂತಾರೆ. ನಾಲ್ಕು ಜನಕ್ಕೆ ಸಹಾಯ ಮಾಡಿ ಒಳ್ಳೆ ಕೆಲಸ ಮಾಡಲು ಹೋದರೆ ಮುಂದೇ ರಾಜಕೀಯಕ್ಕೆ ಬರ್ತಾನೇನೊ ಅಂತಾರೆ. ಯಾರಿಗೂ ಸಹಾಯ ಮಾಡದಿದ್ದರೆ ಸತ್ತಾಗೇನು ದುಡ್ಡು ಎತ್ತುಕೊಂಡು ಹೋಗ್ತಾನ ಅಂತಾರೆ. ದಾನ ಧರ್ಮ ಮಾಡಿದರೆ ಯಾವನ್ ತಲೆ ಮೇಲೆ ಕಲ್ಲು ಹಾಕಿ ದುಡ್ಡು ತಂದಾನೋ ಅಂತಾರೆ. ಕಷ್ಟ ಪಟ್ಟು ಮೇಲೆ ಬಂದರೆ ಅದೃಷ್ಟ ಅಂತಾರೆ. ಕಷ್ಟ ಪಟ್ಟು ಸೋತರೆ ಯೋಗ್ಯತೆ ಇಲ್ಲ ಅಂತಾರೆ.

ಸಂಬಂಧಿಕರಿಗೆ ಹತ್ತಿರ ಇದ್ದರೆ ಹೊಟ್ಟೆಕಿಚ್ಚು ಪಡ್ತಾರೆ. ದೂರ ಇದ್ದರೆ ಹೊಟ್ಟೆ ಮೇಲೆ ಹೊಡೀತಾರೆ. ಧೈರ್ಯವಾಗಿ ಎವನ್ನು ಎದುರಿಸಿದರೆ ಇವನಿಗೇನೋ ವಕ್ಕರಿಸಿದೆ ಅಂತಾರೆ. ಎಲ್ಲವನ್ನ ಸಹಿಸಿಕೊಂಡು ಸುಮ್ಮನಿದ್ದರೆ ಹೇಡಿ ಅಂತಾರೆ. ಶ್ರೀಮಂತ
ಹುಡುಗಿಯನ್ನ ಮದುವೆಯಾದರೇ ಒಳ್ಳೆ ಹುಡುಗಿನ ಪಟಾಯಿಸಿಬಿಟ್ಟ ಅಂತಾರೆ. ಬಡವರ ಮನೆ ಹುಡುಗಿಯನ್ನ ಮದುವೆ ಯಾದರೇ ಇವನಿಗೆ ಬುದ್ದಿ ಇಲ್ಲ ಅಂತಾರೆ.

ವಿಮರ್ಶೆಗಳನ್ನ ದಾಟಿ ಬೆಳೆಯುವುದು ಸಹ ಒಂದು ಕಲೆ. ಒಂದು ಅದ್ಭುತವಾದ ಕಲೆ. ಏನೋ ಸಾಧಿಸಬೇಕೆಂದು ಹೊರಟವರು ವಿಮರ್ಶೆಗಳಿಂದ ತತ್ತರಿಸಿ ಹೋಗುತ್ತಿದ್ದಾರೆ. ದೆಹಲಿಯ ಬಳಿ ಪುಟ್ಟ ಹಳ್ಳಿ ಆಕೆಯ ಹೆಸರು ಸಾಕ್ಷಿ. ಐಐಟಿ ಪರೀಕ್ಷೆಯಲ್ಲಿ ರಾಂಕ್
ಗಳಿಸುತ್ತೇನೆಂದು ಸ್ನೇಹಿತರೊಂದಿಗೆ ಹೇಳಿದಾಗ ಹತ್ತನೇ ತರಗತಿಯಲ್ಲಿ ಶೇ.೮೦ ರಷ್ಟು ಅಂಕವನ್ನು ಗಳಿಸಿಲ್ಲ ನೀನು ಐಐಟಿ ಪರೀಕ್ಷೆಯನ್ನು ಹೇಗೆ ಪಾಸ್ ಮಾಡ್ತಿಯಾ? ಎಂಬ ವಿಮರ್ಶೆಗಳು ಬರಲು ಪ್ರಾರಂಭಿಸಿದವು. ಆದರೂ ಆಕೆಗೆ ಒಂದು ಗಟ್ಟಿಯಾದ
ನಂಬಿಕೆ ಇತ್ತು. ನಾನು ಐಐಟಿ ಪರೀಕ್ಷೆಯನ್ನ ಗೆದ್ದೇ ಗೆಲ್ಲುತ್ತೇನೆಂದು ಮೊದಲನೆಯ ಪ್ರಯತ್ನದಲ್ಲಿ ಬಹಳಷ್ಟು ಪ್ರಾಮಾಣಿಕ ಪ್ರಯತ್ನ ಪಟ್ಟರು ಸೋತುಬಿಟ್ಲು.

ಸ್ನೇಹಿತರು ಸೇರಿದಂತೆ ಕುಟುಂಬದವರೆಲ್ಲ ಬೇಸರದಿಂದ, ನೋವಿನಿಂದ ಆಕೆಗೆ ಬುದ್ಧಿ ಮಾತು ಹೇಳಿ ಯಾವುದಾದರೂ ಕೋರ್ಸ್
ಆಯ್ಕೆ ಮಾಡಿಕೊಳ್ಳಲು ಗೈಡ್ ಮಾಡಿದ್ರು. ಆದ್ರೂ ಸಾಕ್ಷಿ ತನ್ನ ಹಠ ಬಿಡಲಿಲ್ಲ. ಗಟ್ಟಿಗಿತ್ತಿಯರ ಹಠ ಹಾಗೆ ಇರುತ್ತೆ. ಮತ್ತೊಮ್ಮೆ ಐಐಟಿ ಪ್ರವೇಶ ಪರೀಕ್ಷೆಗೆ ಒಂದು ವರ್ಷಗಳ ಕಾಲ ಕೂತು ಪ್ರವೇಶ ಪರೀಕ್ಷೆ ಕೊಟ್ಟಳು ನಂತರ ಸೋಲಿನ ಅನುಭವ. ನಂತರ ಸಂಬಂಧಿಕರು ಎಲ್ಲರು ಆಕೆಯನ್ನ ವಿಮರ್ಶಿಸಲು ಪ್ರಾರಂಭಿಸಿ ಬಿಟ್ಟರು.

ಆದ್ರೂ ಮತ್ತೊಮ್ಮೆ ಎರಡನೇ ಪ್ರಯತ್ನ ದಲ್ಲಿ ಆಕೆ ಕೂತು ದೇಶದ ಪ್ರತಿಷ್ಠಿತ ಪರೀಕ್ಷೆಯಾದ ಐಐಟಿ ಪರೀಕ್ಷೆಯಲ್ಲಿ ೩೪೩ ನೇ ರಾಂಕ್ ಗಳಿಸಿ ಐಐಟಿಗೆ ಪ್ರವೇಶ ಪಡೆದಳು. ಇದರ ಹಿಂದೆ ವಿಮರ್ಶೆಗಳು, ಗೆಲುವು, ಸೋಲು ಏನೇ ಇದ್ದರು ಕೊನೆಗೂ ವಿಮರ್ಶೆ ಗಳನ್ನ ಸಹಿಸಿಕೊಂಡು ಏನಾದರು ಸಾಧಿಸಬೇಕೆಂಬ ಸಾಕ್ಷಿಯವರ ಗಟ್ಟಿತನವೇ ಗೆಲುವಿಗೆ ಕಾರಣವಾಯಿತು. ಗೆಲ್ಲುವುದಕ್ಕಿಂತ ಮುಂಚೆ ನಿಮ್ಮನ್ನ ನಿಮ್ಮ ಪ್ರಯತ್ನವನ್ನ ತುಂಬ ಜನ ಪರೀಕ್ಷಿಸುತ್ತಾರೆ. ಆದ್ರೆ ಗೆದ್ದ ನಂತರ ಅದು ಸಾಧನೆ ಆಗುತ್ತೆ. ಆ ಸಾಧನೆ ಒಂದು ರೂಲ್‌ನ್ನ ಸೆಟ್ ಮಾಡುತ್ತೆ.

error: Content is protected !!