Thursday, 30th November 2023

ಆದಿಪುರುಷ್ ಅಯೋಗ್ಯ (ರ) ಸಿನಿಮಾ ಅಗತ್ಯವಿತ್ತೇ ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಕನ್ನಡದ ಮಹಾನ್ ನಿರ್ದೇಶಕರ ಹುಣಸೂರು ಕೃಷ್ಣಮೂರ್ತಿಯವರಿಗೆ ಬಬ್ರುವಾಹನ ಚಿತ್ರದ ಶ್ರೀಕೃಷ್ಣನ ಪಾತ್ರಕ್ಕೆ ಒಬ್ಬ ಕಲಾವಿದನ ಕೊರತೆ ಯಾಗುತ್ತದೆ. ಆಗ ಅವರಿಗೆ ಸಿಕ್ಕ ವ್ಯಕ್ತಿ ಉತ್ತರಕನ್ನಡದ ೨೩ರ ಹರೆಯದ ಹವ್ಯಕ ಬ್ರಾಹ್ಮಣ ಹುಡುಗ. ಆತನಿಗೋ ಅದು ಮೊದಲ ಚಿತ್ರ. ಇಂಥ ಅವಕಾಶವನ್ನು ಯಾರೂ ನಿರಾಕರಿಸುವುದಿಲ್ಲ. ಆದರೆ ಅಂದು ಚಿತ್ರೀಕರಣದಲ್ಲಿ ಶ್ರೀಕೃಷ್ಣನ ವೇಷಧಾರಿಯಾಗಿದ್ದ ಆ ಹುಡುಗ ಅಭಿನಯಿಸುವುದಕ್ಕೆ ಹೆದರಿ ಹಿಂಜರಿದುಬಿಡುತ್ತಾನೆ.

ಕಾರಣವೇನು ಗೊತ್ತೆ? ಆ ಸನ್ನಿವೇಶದಲ್ಲಿ ಆತನ ಕಾಲಿಗೆ ಬಿದ್ದು ನಮಸ್ಕರಿಸಲು ಬಂದ ೪೮ರ ದೈತ್ಯನಟ, ಅರ್ಜುನ ಪಾತ್ರಧಾರಿ ವರನಟ ಡಾ.ರಾಜ್. ಅಣ್ಣಾವ್ರು ಅದಾಗಲೇ ಸರಿಸಾಟಿಯಿಲ್ಲದ ನಟರಾಗಿದ್ದರು. ಭಾರತದ ಸರ್ವಶ್ರೇಷ್ಠ ಕಲಾವಿದ ಎನಿಸಿಕೊಂಡಿದ್ದರು. ಅಂಥ ಮಹಾನ್ ನಟ ತನ್ನ ಕಾಲಿಗೆ ಬೀಳುವುದಕ್ಕೆ ಈ ನಟ ತೀವ್ರ ಮುಜಗರ ಅನುಭಿವಿಸಿದ್ದ. ಆಗ ಆತನಿಗೆ ‘ನೋಡಪ್ಪಾ, ನೀನು ದೇವರಾದ ಶ್ರೀಕೃಷ್ಣನ ಪಾತ್ರಧಾರಿ, ನಾನು ಅರ್ಜುನ ಪಾತ್ರಧಾರಿ ನಾವಿಬ್ಬರೂ ಸಮಾನ ಕಲಾವಿದರು. ಇದು ಪಾತ್ರಗಳಷ್ಟೇ ಧೈರ್ಯವಾಗಿ ಅಭಿನಯಿಸು..’ ಎಂದು ರಾಜ್ ಹುರಿದುಂಬಿಸುತ್ತಾರೆ.

ಆ ನಟನ ಹೆಸರು ನೀರ್ನಳ್ಳಿ ರಾಮಕೃಷ್ಣ. ಇಂಥದ್ದೇ ಇನ್ನೊಂದು ಸಂದರ್ಭ ೧೯೮೩ರ ಕವಿರತ್ನ ಕಾಳಿದಾಸ ಚಿತ್ರೀಕರಣದ ಸಮಯದಲ್ಲೂ ಎದುರಾಗುತ್ತದೆ. ನಿರ್ದೇಶಕ ರೇಣುಕಾಶರ್ಮ ಅವರು ಕಾಳಿ ಪಾತ್ರಕ್ಕೆ ೧೯ರ ನಳಿನಿ ಎಂಬ ಹುಡುಗಿಯನ್ನು ಕರೆತರುತ್ತಾರೆ. ಆ ಚಿತ್ರದಲ್ಲಿ ೯ ದೇವಿಯರ ಅಲಂಕಾರದಲ್ಲಿ ಆಕೆಯ ಕಾಲಿಗೆ ರಾಜ್ ನಮಸ್ಕರಿಸುವ ಸನ್ನಿವೇಶವಿರುತ್ತದೆ. ಆದರೆ, ಅಂಥ ಮೇರುನಟರು ನವನಟಿಯಾದ ತನ್ನ ಕಾಲಿಗೆ ಬೀಳುವುದನ್ನು ಒಪ್ಪಿಕೊಳ್ಳಲಾಗದೇ ಹಿಂಜರಿದಾಗಲೂ ಅಣ್ಣಾವ್ರು ಆಕೆಗೆ ತಿಳಿಹೇಳಿ ಅಭಿನಯಿಸಲು ಪ್ರೇರೇಪಿಸುತ್ತಾರೆ.

ಆದ್ದರಿಂದಲೇ ‘ಮಾಣಿಕ್ಯ ವೀಣಾ ಮು-ಲಾಲಯಂತೀಂ…’ ಗೀತೆಯನ್ನು ಈಗಲೂ ನೋಡಿದವರು ಭಾವಪರವಶರಾಗುತ್ತಾರೆ. ಮುಂದೆ ರೇಣುಕಾಶರ್ಮ ಅವರು, ‘ಕೊಲ್ಲೂರು ಮೂಕಾಂಬಿಕೆ’ ಚಿತ್ರ ಮಾಡುವಾಗಲೂ ಮೂಕಾಂಬಿಕೆಯ ಪಾತ್ರಕ್ಕೆ ಶ್ರೀಜ್ಯೋತಿ ಎಂಬ ಹೊಸಮುಖವನ್ನು ಪರಿಚಯಿಸುತ್ತಾರೆ. ಹುಣಸೂರು ಕೃಷ್ಣಮೂರ್ತಿಯವರೂ ಭಕ್ತಕುಂಬಾರ ಚಿತ್ರದ ವಿಠಲ ದೇವರ ಪಾತ್ರಕ್ಕೆ ಮುದ್ದುನಟ ರಮೇಶ್ ಅವರನ್ನು ಆಯ್ಕೆ
ಮಾಡುತ್ತಾರೆ.

ಇಷ್ಟೇ ಅಲ್ಲ, ೧೯೫೪ರಲ್ಲಿ ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರು ಬೇಡರಕಣ್ಣಪ್ಪ ಚಿತ್ರದ ಕಣ್ಣಪ್ಪನ ಪಾತ್ರಕ್ಕೆ ಆರಿಸಿದ್ದು ಮುಗ್ಧ ಅಮಾಯಕ ಹುಡುಗನೇ ಆಗಿದ್ದ ೨೫ರ ಯುವಕ ಡಾ.ರಾಜ್ ಅವರನ್ನು. ಹೀಗೆ ಯೋಗ್ಯ ನಿರ್ದೇಶಕರೆಲ್ಲ ಪೌರಾಣಿಕ ಚಿತ್ರದಲ್ಲಿನ ದೇವರ ಪಾತ್ರಕ್ಕೆ ಹೊಸ ಮುಖಗಳನ್ನು ಪರಿಚಯಿಸಲು ಕಾರಣ ನೋಡುಗರಿಗೆ ಆ ಪಾತ್ರ ಸಾಕ್ಷಾತ್ ದೇವರಾಗಿಯೇ ಮನಮುಟ್ಟಬೇಕು. ಬಬ್ರುವಾಹನ ಚಿತ್ರದ ಕಾಲದಲ್ಲಿ ಶ್ರೀನಾಥ್, ರಾಜೇಶ್‌ರಂಥ ನಟರಿದ್ದರೂ ಶ್ರೀಕೃಷ್ಣನ ಪಾತ್ರಕ್ಕೆ ಹೊಸಮುಖವನ್ನೇ ಆಯ್ಕೆಮಾಡಿದ್ದು ಈ ಕಾರಣದಿಂದಲೇ.

ಒಂದೊಮ್ಮೆ ಕಾಳಿ, ಮೂಕಾಂಬಿಕೆ ಪಾತ್ರಗಳಿಗೆ ಜನಪ್ರಿಯ ನಾಯಕಿಯರನ್ನೋ, ಡಿಸ್ಕೋಶಾಂತಿ, ಸಿಲ್ಕ್ ಸ್ಮಿತಾರಂಥ ನಟಿಯರನ್ನೋ ಹಾಕಿದರೆ ವೀಕ್ಷಕರಿಗೆ ಆ ನಟಿಯರ ಹಿಂದಿನ ಚಿತ್ರಗಳ ಸನ್ನಿವೇಶಗಳೇ ಕಣ್ಣಮುಂದೆ ಬರುತ್ತವೆಯೇ ಹೊರತು ಭಕ್ತಿ ಹುಟ್ಟಲು ಸಾಧ್ಯವಿಲ್ಲವೆಂಬುದು ಅಂದಿನ
ನಿರ್ದೇಶಕರ ವಿವೇಚನೆ, ಕಳಕಳಿಯಾಗಿತ್ತು. ಹೀಗಾಗಿ ದೇವರ ಪಾತ್ರಧಾರಿಗಳ ಆಯ್ಕೆಯಲ್ಲಿ ಸಾಕ್ಷಾತ್ ದೇವರನ್ನೇ ತೋರಿಸವಂಥ ಹೊಣೆಗಾರಿಕೆ,ಜಾಣ್ಮೆ ಅವರಲ್ಲಿತ್ತು. ಹಿಂದಿಯಲ್ಲೂ ಅಷ್ಟೇ ರಮಾನಂದಸಾಗರ್ ಅವರು ರಾಮಾಯಣ ಧಾರವಾಹಿ ನಿರ್ದೇಶಿಸುವಾಗ ರಾಜೇಶ್‌ಖನ್ನ,
ವಿನೋದ್ ಖನ್ನ, ಗೋವಿಂದರಂಥ ಸುಂದರ ನಟರಿದ್ದರೂ ಅವರನ್ನು ಬಿಟ್ಟು ಅರುಣ್‌ಗೋವಿಲ್ ಅವರಿಂದ ರಾಮನ ಪಾತ್ರವನ್ನು ಮಾಡಿಸಿದ್ದ ರಿಂದಲೇ ಇಂದಿಗೂ ಆ ನಟರನ್ನು ಕಂಡಕೂಡಲೇ ಜನರು ಅವರ ಕಾಲಿಗೆ ನಮಸ್ಕರಿಸುತ್ತಿದ್ದಾರೆ.

ಇಲ್ಲಿ ಇಷ್ಟೆಲ್ಲ ಹೇಳಲು ಕಾರಣ ಅಂದಿನ ನಿರ್ದೇಶಕರಿಗೆ ಸಿನಿಮಾ ಎಂಬುದು ಕೇವಲ ಮನರಂಜನೆ, ಸಂಪಾದನೆಯಾಗಿರಲಿಲ್ಲ. ಪೌರಾಣಿಕ ಕಥೆಗಳೆಂದರೆ ಜನರಲ್ಲಿನ ಭಕ್ತಿ ಭಾವನೆ, ಶ್ರದ್ಧೆಗಳ ಪೂರಕವಾಗಿ ಆ ಪಾತ್ರಗಳನ್ನು ಸೃಷ್ಟಿಸುವ, ಮೇಳೈಸುವ ಬದ್ಧತೆಗಳಿದ್ದವು. ದೇವರನ್ನು
ನೋಡಲು ಸಾಧ್ಯವಿಲ್ಲವಾದರೂ ಸಿನಿಮಾಗಳ ಮೂಲಕವಾದರೂ ಅವರ ಅನುಭೂತಿ ನೀಡಬೇಕೆಂಬ ಛಲ ಅವರಲ್ಲಿತ್ತು. ಹೀಗಾಗಿ ಸನಾತನ
ಪರಂಪರೆ ಸಾರುವ ಸಿನಿಮಾಗಳು ನಿರ್ಮಾಣಗೊಂಡವು. ಆದರೆ ಇಂದು ಬಂಡವಾಳವೊಂದಿದ್ದರೆ ಸಾಕು ಬರಗೆಟ್ಟ ನಿರ್ದೇಶಕನನ್ನು ಇಟ್ಟುಕೊಂಡು ನಾನೇ ಹೀರೋ, ನಾನೇ ರಾಮನ ಪಾತ್ರ ಮಾಡುತ್ತೇನೆ, ಸೀತೆಯ ಪಾತ್ರವನ್ನೂ ನಾನೇ ಮಾಡಿಬಿಡುತ್ತೇನೆ ಎನ್ನುವಂಥ ಅಡ್ಡಕಸುಬಿಗಳ ಅಡ್ಡಾವಾಗಿದೆ ಚಿತ್ರರಂಗ.

ಇಂಥವರ ಕೂಟವೊಂದು ನಿರ್ಮಿಸಿರುವ ಚಿತ್ರವೇ ಹಿಂದಿಯ‘ಆದಿಪುರುಷ್’ ಸಿನಿಮಾ. ಈ ಚಿತ್ರ ಎಷ್ಟು ಅಸಹ್ಯವಾಗಿ ನಿರ್ಮಾಣವಾಗಿದೆಯೆಂದರೆ ಅದಕ್ಕೆ ಸಂಭಾಷಣೆ ಬರೆದ ಮನೋಜ್ ಮುಂತಾರ್ಷಿ ಎಂಬಾತ ಪೋಲೀಸ್ ರಕ್ಷಣೆಯಲ್ಲಿ ಓಡಾಡುವಂತಾಗಿದ್ದಾನೆ. ‘ಈ ಬಟ್ಟೆ ನಿನ್ನಪ್ಪುಂದು,
ಎಣ್ಣೆ ನಿನ್ನಪ್ಪಂದು, ಬೆಂಕಿಯೂ ನಿನ್ನಪ್ಪಂದು, ಈಗ ಸುಡುವುದೂ ನಿನ್ನಪ್ಪಂದು’ ಇಂಥ ಸಂಭಾಷಣೆಯನ್ನು ಹನುಮ ಪಾತ್ರ ರಾವಣನಿಗೆ ಹೇಳುತ್ತದೆ. ಬಹುಶಃ ಇಂಥ ಸಂಭಾಷಣೆ ಬರೆದವನಿಗೆ ಕೆಜಿಎಫ್ ರಾಕಿಬಾಯ್ ಪಾತ್ರ ಪ್ರೇರಣೆ ಸಿಕ್ಕಿರಬೇಕು. ಇನ್ನು ಈ ಚಿತ್ರದ ನಿರ್ದೇಶಕ ಮಹಾಪುರುಷ ೪೧ರ ಓಂರಾವತ್. ಈ ಹಿಂದೆ ತನ್ಹಜೀ, ಲೊಕಮಾನ್ಯ ಎಂಬ ಉತ್ತಮ ಚಿತ್ರಗಳನ್ನು ನೀಡಿದ್ದ.

ಆದರೆ ದಕ್ಷಿಣಭಾರತದವರಿಗೆ ಟಾಂಗ್ ಕೊಡಲೋ, ರಾಜಮೌಳಿಯವರಿಗಿಂತ ತಾನೇನು ಕಡಿಮೆಯಿಲ್ಲ ಏನ್ನುವುದನ್ನು ತೋರಿಸಲೋ ಏನೋ
ರಾಮಾಯಣವನ್ನೇ ತೋರಿಸಿಬಿಡುತ್ತೇನೆಂಬ ದೊಡ್ಡಸ್ತಿಕೆಯಲ್ಲಿ ಆದಿಪುರುಷ್ ಎಂಬ ಎಡಬಿಡಂಗಿ ಚಿತ್ರವನ್ನು ಮಾಡಿದ್ದಾನೆ. ರಾಮಾಯಣ ಏನು, ಅದರ ಪಾತ್ರಗಳ ಮೌಲ್ಯಗಳೇನು, ಅವುಗಳನ್ನು ಆರಾಽಸುವ ಭಕ್ತರ ಭಾವನೆಗಳೇನು? ಈ ಯಾವುದರ ಪರಿಜ್ಞಾನವಿಲ್ಲದೇ ನಿರ್ಮಾಣವಾದ ಚಿತ್ರವಿದು. ಅಂದಿನ ಚಂದಮಾಮ ಪುಸ್ತಕದಲ್ಲಿನ ಸುಂದರ ಚಿತ್ರಗಳನ್ನೇ ನೋಡಿ ರಾಮಾಯಣ, ಮಹಾಭಾರತವನ್ನು ಕಲಿತಿದ್ದ ಪೀಳಿಗೆ ಇಂದು ಸಿ.ಜಿ ತಂತ್ರeನ ವಿಎಫ್ ಎಕ್ಸ್ ಬಳಸಿ ಅದೆಂಥಾ ಅದ್ಭುತ ಚಿತ್ರಗಳನ್ನು ನಿರ್ಮಿಸಬಹುದಿತ್ತು.

ಇದನ್ನೇ ರಾಜಮೌಳಿಯವರು ಸದ್ಬಳಕೆ ಮಾಡಿಕೊಂಡು ಕಾಲ್ಪನಿಕ ಕಥೆಯ ‘ಬಾಹುಬಲಿ’ ಮಾಡಿ ಎಲ್ಲರ ಮನಸೆಳೆದಿದ್ದರು. ಆದರೆ ಈ ಆದಿಪುರುಷ್ ಮಾರ್ವಲ್ ಕಾಮಿಕ್ಸ್ ಆಧರಿತ ಹಾಲಿವುಡ್‌ನ ವಿಚಿತ್ರ ಚಿತ್ರಗಳಂತೆ ನಿರ್ಮಿಸಿದ್ದಾರೆ. ಪೌರಾಣಿಕ ಚಿತ್ರಗಳಲ್ಲಿರಬೇಕಾದ ಪ್ರಸಾಧನ, ವೇಶಭೂಷಣ, ಸಂಭಾಷಣೆ, ದೃಶ್ಯ ವೈಭವಗಳಿಲ್ಲ. ದಕ್ಷಿಣಭಾರತ ಚಿತ್ರಗಳಲ್ಲಿ ನಿರ್ಮಿಸಲಾಗುತ್ತಿದ್ದ ದೇವರುಗಳಿಗೆ ಮೀಸೆ ಇಡುತ್ತಿದ್ದರೆ, ಉತ್ತರಭಾರತದ ಚಿತ್ರಗಳಲ್ಲಿ ಮೀಸೆ ರಹಿತ ದೇವರನ್ನು ತೋರಿಸಲಾಗುತಿತ್ತು. ಆದರೆ ಮೀಸೆ ಇರದ ಮುದ್ದಾದ ಶ್ರೀರಾಮ ಪಾತ್ರದ ಪ್ರಭಾಸ್‌ಗೆ ರಾವಣನಂತೆ ದಪ್ಪಮೀಸೆ ಇಟ್ಟು ಆತನ ದೈಹಿಕ ಸಾಮರ್ಥ್ಯವನ್ನೂ ಬಳಸಿಕೊಳ್ಳದೇ ಪ್ರಭಾಸ್ ನ ತಲೆಯೇ ಬೇರೆ, ದೇಹವೇ ಬೇರೆಯಾಗಿ ಭಾಸವಾಗುವಂತೆ ಮಾಡಲಾಗಿದೆ.

ಒಂದು ಕಡೆ ಶ್ರೀರಾಮನನ್ನು ಜೀಸಸ್‌ಗೆ ಹೋಲುವಂತೆ ತೋರಿಸಲಾಗಿದೆ. ಇನ್ನು ಹನುಮನ ಮುಖ ಮುಸ್ಲಿಂ ಮೌಲ್ವಿಯ ಮುಖವನ್ನು ಹೋಲುವಂತಿದೆ. ರಾವಣನ ಪುಷ್ಪಕ ವಿಮಾನವೇ ಒಂದು ಅದ್ಭುತ ದೃಶ್ಯ. ಆದರೆ, ಇಲ್ಲಿ ಆತನನ್ನು ಸ್ಮಶಾನದ (ಡಿಜಿಟಲ್) ವಿಕಾರ ಬಾವಲಿಯ ಮೇಲೆ ಕೂರಿಸಿದ್ದಲ್ಲದೇ ಆ ಬಾವಲಿಗೆ ಬ್ರಾಹ್ಮಣನಾದ ರಾವಣ ಚಿಕನ್‌ಪೀಸ್ ತಿನ್ನಿಸುವ ಸನ್ನಿವೇಶವಿಡಲಾಗಿದೆ. ಇನ್ನು ರಾವಣನನ್ನು ಟಿಪಿಕಲ್ ರೌಡಿಪಾತ್ರಗಳಂತೆ ಮಾಡಿದ್ದಾರೆ. ಆತನ ಹತ್ತು ತಲೆಗಳನ್ನು ಬೆಲೂನ್‌ಗಳಂತೆ ಓಡಾಡಿಸಲಾಗಿದೆ.

ಇನ್ನು ಆತನ ಲಂಕಾ ಸೇನೆಯನ್ನು ಝಾಂಬೀಸ್ ಶೈಲಿಯ (ಇವಿಲ್‌ಡೆಡ್) ದೆವ್ವಗಳಂತೆ ತೋರಿಸಲಾಗಿದೆ. ಒಟ್ಟಾರೆ ಎಂಬತ್ತರಷ್ಟು ಚಿತ್ರವನ್ನು
ಕಂಪ್ಯೂಟರ್ ಮುಂದೆ ಕುಳಿತೇ ನಿರ್ದೆಶಿಸಲಾಗಿದೆ. ಇನ್ನು ಶ್ರೀರಾಮ, ಸೀತಾ, ಹನುಮ ಪಾತ್ರಗಳಾಗಲಿ ಯಾವ ಸಂದರ್ಭದಲ್ಲೂ ನೋಡುಗರಿಗೆ ಭಕ್ತಿಭಾವ ಹುಟ್ಟಿಸುವುದಿಲ್ಲ. ಮೈನವಿರೇಳಿಸುವಂಥ ಯಾವ ಸನ್ನಿವೇಶವೂ ಇಲ್ಲ. ಸೀತೆಯನ್ನು ಮಾತೆಯಂತೆ ಭಾವಿಸುವ ಹನುಮನಿಂದ ತಂಗಿ ಎಂದು ಕರೆಸಿದ್ದಾರೆ.

ಇದೊಂದು ಕಾಲ್ಪನಿಕ ಕಥೆಯಾಗಿದ್ದರೆ ಹಾಳಾಗಿ ಹೋಗಲಿ ಎನ್ನಬಹುದಿತ್ತು. ಆದರೆ, ಇದು ರಾಮಾಯಣ. ಆದ್ದರಿಂದ ಪ್ರತಿಯೊಂದು ಸನ್ನಿವೇಶ
ಪಾತ್ರವೂ ಸೂಕ್ಷ್ಮ ಸಂವೇದನೆಗೆ ಒಳಪಡುತ್ತದೆ. ಈಗಾಗಲೇ ಬಾಲಿವುಡ್ ಎಂಬುದೇ ಹಿಂದೂ ಧರ್ಮವನ್ನು ಅವಮಾನಿಸುವ ಚಿತ್ರರಂಗವೆಂಬ
ಸತ್ಯವನ್ನು ಈಗಷ್ಟೇ ಪ್ರೇಕ್ಷಕರು ಅರಿತಿದ್ದಾರೆ. ಅಂಥದರಲ್ಲಿ ಈ ಆದಿಪುರುಷ್ ಕೂಡ ಅದಕ್ಕೆ ಹೊರತಾಗಿಲ್ಲ. ಹೀಗಾಗಿ ಬಾಲಿವುಡ್ ಪ್ರೇಮಿಗಳೇ
ಈ ಚಿತ್ರದ ವಿರುದ್ಧ ನಿಂತು ಬಹಿಷ್ಕರಿಸುತ್ತಿದ್ದಾರೆ. ಆರ್‌ಆರ್‌ಆರ್ ಚಿತ್ರದಲ್ಲಿ ಕಾಡಿನಲ್ಲಿ ರಾಮ್‌ಚರಣ್ ಸಿಡಿದೇಳುವ ಸನ್ನಿವೇಶದಲ್ಲಿ ಬರಿಯ ಶ್ರೀರಾಮನ ಹೋಲಿಕೆಯೇ ನೋಡುಗರಲ್ಲಿ ರೋಮಾಂಚನಗೊಳಿಸಿತ್ತು.

ನಮ್ಮ ಕಾಂತಾರ ಚಿತ್ರದ ಮೊದಲ ಮತ್ತು ಕೊನೆಯ ಪಂಜುರ್ಲಿ, ಗುಳಿಗ ದೈವಗಳ ಸಹಜ ಪಾತ್ರಗಳೇ ಆ ಚಿತ್ರ ವಿಶ್ವದ ಚಿತ್ರರಸಿಕರನ್ನೇ ರೋಮಾಂಚನಗೊಳಿಸಿತ್ತು. ಈ ದೇಶದ ಸಮಸ್ತ ಆಸ್ತಿಕರು ಎದುರು ನೋಡುತ್ತಿರುವ ಆಯೋಧ್ಯೆಯ ಶ್ರೀರಾಮಮಂದಿರ ಮುಂದಿನ ವರ್ಷ
ಪ್ರಾಣಪ್ರತಿಷ್ಠಾಪನೆಗೊಳ್ಳುತ್ತಿದೆ. ಇಂಥ ಐತಿಹಾಸಿಕ ಸಂದರ್ಭದಲ್ಲಿ ರಾಮಾಯಣವನ್ನು ಜಗತ್ತಿಗೆ ಹೇಳುವಂಥ, ವಿಶ್ವದೆಡೆ ಇರುವ ಹಿಂದೂಗಳ
ಭಾವನೆಗಳನ್ನು ಒಗ್ಗೂಡಿಸಿ ಕೇಂದ್ರೀಕರಣಗೊಳಿಸುವಂತೆ ಸಾಕ್ಷಾತ್ ವಾಲ್ಮೀಕಿ ಮಹರ್ಷಿಯೇ ತೋರಿಸುವಂಥ ಭಕ್ತಿವೈಭವ ಸಿನಿಮಾ ನಿರ್ಮಿಸಿ, ನಿರ್ದೇಶಿಸಿ ದೇಶಕ್ಕೆ ಕೊಡುಗೆಯಾಗಿ ನೀಡಬೇಕಾದ ಔಚಿತ್ಯ ಅನಿವಾರ್ಯ ಖಂಡಿತಾ ಚಿತ್ರರಂಗಕ್ಕಿದೆ. ಈ ದೇಶದ ಅವಿವೇಕಿಗಳೇ ರಾಮಾಯಣ ಕಾಲ್ಪನಿಕವೆನ್ನುತ್ತ ಅಯೋಧ್ಯೆ ರಾಮಮಂದಿರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ವಕೀಲರನ್ನಿಟ್ಟು ವಾದ ಮಂಡಿಸುತ್ತಾರೆ.

ಶ್ರೀರಾಮನನ್ನೇ ಅವಹೇಳನ ಮಾಡುವ ಮುಟ್ಠಾಳರಿದ್ದಾರೆ. ಹೀಗಿರುವಾಗ ರಾಮಾಯಣವನ್ನು ಸಿನಿಮಾ ಮೂಲಕ ಇಡೀ ಭಕ್ತಕೋಟಿಯನ್ನು ಜಾಗೃತಗೊಳಿಸಿ ದೇಶದಲ್ಲಿ ಆಧುನಿಕ ವಾನರಸೇನೆಯನ್ನು ಕಟ್ಟುವ ತಾಕತ್ತು ಚಿತ್ರರಂಗಕ್ಕಿದೆ. ಹೀಗಾದಲ್ಲಿ ಇಡೀ ದೇಶದ ದಿಕ್ಕೇ ಬದಲಾಗಿ ನಿಲ್ಲುತ್ತದೆ. ಉತ್ತರದಲ್ಲಿ ರಾಮಜನ್ಮಭೂಮಿ ಅಯೋಧ್ಯೆ, ದಕ್ಷಿಣದಲ್ಲಿ ಹನುಮ ಜನ್ಮಭೂಮಿ ನಮ್ಮ ಕಿಷ್ಕಿಂದಾ ನೆಲೆಯಿದೆ. ರಾಮಸೇತು ಜೀವಂತವಾಗಿದೆ ಇವೆಲ್ಲವನ್ನೂ ಬೆಸೆದು ಧರ್ಮ-ನೀತಿ-ಭಕ್ತಿ-ಸಾಹಸ ಪ್ರಧಾನವುಳ್ಳ ಬಹುಭಾಷಾ ಚಿತ್ರವನ್ನು ನಿರ್ಮಿಸುವ ತಾಕತ್ತು ಕನ್ನಡದ ಹೊಂಬಾಳೆ ಸಂಸ್ಥೆಗಿದೆ. ಚಿತ್ರಕಥೆಗೆ ತಂದೆ ವಿ.ವಿಜಯೇಂದ್ರಪ್ರಸಾದ್ ನಿರ್ದೇಶನಕ್ಕೆ ಮಗ ಎಸ್.ಎಸ್.ರಾಜಮೌಳಿಯವರ ಅನುಭವವಿದೆ.

ಸಂಭಾಷಣೆಗೆ ಸಂಸ್ಕೃತ ವಿದ್ವಾಂಸರಿದ್ದಾರೆ. ಅನುವಾದಕ್ಕೆ ಎಲ್ಲ ಭಾಷೆಗಳಲ್ಲೂ ಪಂಡಿತರಿದ್ದಾರೆ. ಆದರೆ ಎಲ್ಲರಲ್ಲೂ ನಮ್ಮದು ಎಂಬ ಇಚ್ಛಾಶಕ್ತಿ
ಇರಬೇಕಷ್ಟೇ ! ಅದಿಲ್ಲದಿದ್ದರೆ ಇಂಥ ನೂರು ಕುಲಗೆಟ್ಟ ಪುರುಷರು ಬಂದುಹೋಗುತ್ತವಷ್ಟೇ!

Leave a Reply

Your email address will not be published. Required fields are marked *

error: Content is protected !!