Tuesday, 30th May 2023

ಅಕ್ಷಯ ಅನುಗ್ರಹದಾಯಕನಿಗೆ ಅಕ್ಷರಮೋದಕ

– ಶ್ರೀವತ್ಸ ಜೋಶಿ **

ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಮ್| ಅನೇಕದಂ ತಂ ಭಕ್ತಾನಾಮೇಕದನ್ತಮುಪಾಸ್ಮಹೇ||
ಈ ಶ್ಲೋಕವನ್ನು ಅರ್ಥಮಾಡಿಕೊಳ್ಳಲಿಕ್ಕೆ ಸ್ವಲ್ಪ ಗೊಂದಲವಾಗುವುದಿದೆ. ಏಕೆಂದರೆ ಇದರಲ್ಲಿ ಒಂದೆರಡು ಪದ ಚಮತ್ಕಾರಗಳು ಇವೆ. ಗಜಾನನನನ್ನು ಕುರಿತ ಶ್ಲೋಕದಲ್ಲಿ ಅಗಜಾನನ ಅಂದರೆ ಗಜಾನನ ಅಲ್ಲದವನು ಅಂತಾಗುವುದಿಲ್ವೇ ಎಂಬುದೇ ಮೊದಲ ಗೊಂದಲ. ಕೆಲವು ಸಂಸ್ಕøತ ಪದಗಳು ಮೊದಲಲ್ಲಿ ಅ ಅಕ್ಷರ ಸೇರಿಸಿಕೊಂಡರೆ ವಿರುದ್ಧ ಪದ ಆಗುತ್ತವಷ್ಟೇ? ಉದಾಹರಣೆಗೆ: ಸಾಧ್ಯ-ಅಸಾಧ್ಯ, ಸಹ್ಯ-ಅಸಹ್ಯ, ಧರ್ಮ-ಅಧರ್ಮ, ಪವಿತ್ರ-ಅಪವಿತ್ರ, ಪರಿಚಿತ-ಅಪರಿಚಿತ ಇತ್ಯಾದಿ. ಹಾಗೆ ಗಜಾನನ-ಅಗಜಾನನ ಅಂತಲೇ ನಾನು ಮೊದಲು ತಿಳಿದುಕೊಂಡಿದ್ದೆ. ಆದರೆ, ಯಾರು ಅಗಜಾನನ? ಅದು ಹಾಗಲ್ಲ, ಸಂಸ್ಕøತದಲ್ಲಿ ಏನೇನೆಲ್ಲ ಚಮತ್ಕಾರ ಸಾಧ್ಯವಿದೆ ನೋಡಿ. ಆ ಭಾಷೆಯಲ್ಲಿ ಪದಗಳಿಗೆ ಅಷ್ಟೇ ಅಲ್ಲ, ಒಂದೊಂದು ಅಕ್ಷರz್ದÉೀ ಪದಗಳಿರುವುದರಿಂದ ಅಕ್ಷರಗಳಿಗೂ ಅರ್ಥವಿದೆಯೇನೋ ಅಂತನಿಸುತ್ತದೆ. ಗ ಅಂದರೆ ಗಮಿಸುವ ಅಥವಾ ಚಲಿಸುವ ಎಂಬ ಅರ್ಥ. ಆದ್ದರಿಂದಲೇ ಖಗ ಅಂದರೆ `ಖ’ದಲ್ಲಿ ಚಲಿಸುವ, ಅಂದರೆ ಆಕಾಶದಲ್ಲಿ ಚಲಿಸುವ, ಅಂದರೆ ಪಕ್ಷಿ ಎಂದು ಅರ್ಥ. ಉರಗ ಅಂದರೆ ಉರ (ಎದೆ, ವಕ್ಷಸ್ಥಳ)ವನ್ನು ನೆಲಕ್ಕೆ ಸವರುತ್ತ ಚಲಿಸುವ, ಹಾವು. ಪನ್ನಗ ಎಂಬ ಪದಕ್ಕೆ ಹಾವು ಎಂಬ ಅರ್ಥ ಬಂದದ್ದೂ ಈ ರೀತಿಯೇ. ಗ ಅಂದರೆ ಚಲಿಸುವ ಅಂತಾದ್ರೆ ಅದರ ವಿರುದ್ಧ ಪದ ಅಗ. ಅರ್ಥ `ಚಲಿಸದ’ ಎಂದು. ಯಾವುದದು? ಪರ್ವತ. ಅಂಥಿಂಥ ಪರ್ವತವಲ್ಲ ಹಿಮಾಲಯ ಪರ್ವತ! ಜ ಅಂದರೆ ಹುಟ್ಟಿದವನು, ಅದರ ಸ್ತ್ರೀಲಿಂಗರೂಪ ಜಾ. ಆದ್ದರಿಂದ ಅಗಜಾ ಅಂದರೆ ಹಿಮಪರ್ವತರಾಜನಿಗೆ ಹುಟ್ಟಿದವಳು. ಗಿರಿಜಾ ಎಂದರೂ ಆಕೆಯೇ. ನಮಗೆ ಗೊತ್ತೇ ಇರುವ ಪಾರ್ವತಿ. ಅಲ್ಲಿಗೆ, ಅಗಜಾ = ಪಾರ್ವತಿ ಅಂತಾಯ್ತು. ಅಗಜಾನನ ಅಂದರೆ ಪಾರ್ವತಿಯ ಆನನ, ಅರ್ಥಾತ್ ಪಾರ್ವತಿಯ ಮುಖ. ಅಬ್ಬಾ! ಐದೇ ಅಕ್ಷರಗಳಲ್ಲಿ ಎಷ್ಟೊಂದು ಸಂಕೀರ್ಣ ಸಂಪೂರ್ಣ ಸಂರಚನೆ! ಅದುವೇ ಸಂಸ್ಕøತ ಭಾಷೆಯ ಮಹಿಮೆ.

ಶ್ಲೋಕದ ಮಿಕ್ಕ ಭಾಗವನ್ನು ನೋಡೋಣ. ಪದ್ಮಾರ್ಕಂ- ಇದರಲ್ಲಿ ಪದ್ಮ ಅಂದರೆ ಕಮಲ. ಅರ್ಕ ಅಂದರೆ ಸೂರ್ಯ. ಗಜಾನನಮಹರ್ನಿಶಮ್- ಇಲ್ಲಿ ಗಜಾನನ ಅಂದರೆ ಗಜಾನನನೇ. ಆನೆಯ ಮೊಗದವನೇ. ಅಹರ್ನಿಶಮ್ ಅಂದರೆ ಹಗಲೂ ರಾತ್ರಿಯೂ ಅಂತರ್ಥ. ಕಮಲವು ಸೂರ್ಯನನ್ನು ನೋಡಿದೊಡನೆ ಹೇಗೆ ಅರಳುತ್ತದೋ, ಹಾಗೆ ಪಾರ್ವತಿಯ ಮುಖವೂ ಅರಳುತ್ತದೆ ಗಜಾನನನನ್ನು ನೋಡಿದರೆ. ಅಲ್ವೇ ಮತ್ತೆ? ಮಗುವನ್ನು ನೋಡಿ ಯಾವ ತಾಯಿಯ ಮುಖ ಅರಳುವುದಿಲ್ಲ? ಅದರಲ್ಲೂ ಗಣೇಶನಂಥ ಕಿಲಾಡಿ ಮಗನಿದ್ದರೆ ಕೇಳಬೇಕೇ! ಇನ್ನು, ಶ್ಲೋಕದ ಎರಡನೆಯ ಸಾಲಿನಲ್ಲೂ ತುಸು ಗೊಂದಲಕ್ಕೆ ಆಸ್ಪದವಿದೆ. ವೇಗವಾಗಿ ಹೇಳುವಾಗ `ಅನೇಕದಂತಂ’ ಅಂತಲೇ ಉಚ್ಚರಿಸುವುದರಿಂದ, ಏಕದಂತ ಇದ್ದವನು ಅನೇಕದಂತ ಹೇಗಾದ? ಎಂಬ ಪ್ರಶ್ನೆ. ಡೆಂಟಿಸ್ಟ್ ಹತ್ತಿರ ಹೋಗಿ ಹಲ್ಲುಗಳ ಸೆಟ್ ಏನಾದ್ರೂ ಹಾಕಿಸಿಕೊಂಡ್ನಾ ಎಂದು ತರ್ಲೆ ಪ್ರಶ್ನೆ. ಅದು ಹಾಗಲ್ಲ. ದಂ ಅಂದರೆ ಕೊಡುವವನು. ಇಲ್ಲಿ ದ್ವಿತೀಯಾ ವಿಭಕ್ತಿಯಲ್ಲಿ `ಕೊಡುವವನನ್ನು’ ಎಂದೇ ಅರ್ಥೈಸಿಕೊಳ್ಳೋಣ. ವರ ಕೊಡುವವನನ್ನು ಅಂತಲೇ ಇರಲಿ. ಅನೇಕದಂ ಅಂದರೆ ಅನೇಕ ವರಗಳನ್ನು ಕೊಡುವವನು. ತಂ ಅಂದರೆ ಅವನನ್ನು. ಭಕ್ತಾನಾಂ ಅಂದರೆ ಭಕ್ತರಿಗೆ. ಏಕದನ್ತಂ ಅಂದರೆ ಏಕದಂತನನ್ನು. ಉಪಾಸ್ಮಹೇ ಅಂದರೆ ಪೂಜಿಸುತ್ತೇನೆ. ಈಗ ಇಡೀ ಶ್ಲೋಕದ ಅರ್ಥವನ್ನು ಕನ್ನಡದಲ್ಲಿ ಹೇಳುವುದಾದರೆ: `ಸೂರ್ಯನನ್ನು ಕಂಡ ಕಮಲವು ಅರಳುವಂತೆ ಗಜಾನನನನ್ನು ಕಂಡ ಪಾರ್ವತಿಯ ಮುಖ ಅರಳುತ್ತದೆ. ಅಂತಹ ಗಜಾನನನನ್ನು, ಭಕ್ತರಿಗೆ ಅನೇಕ ವರಗಳನ್ನು ಕೊಡುವ ಏಕದಂತನನ್ನು, ನಾನು ಹಗಲೂ ರಾತ್ರಿಯೂ ಪೂಜಿಸುತ್ತೇನೆ’.

ಗಣೇಶಚೌತಿ ಹಬ್ಬದ ಪ್ರಯುಕ್ತ ತಿಳಿರುತೋರಣ ಅಂಕಣದಲ್ಲಿ ಇವತ್ತು ಸಂಸ್ಕøತ ರಸದೌತಣ. ಇದುವರೆಗಿನ ಭಾಗ ಸ್ಟಾರ್ಟರ್. ಕಡುಬಿನ ಹೊರ ಆವರಣ. ಈಗಿನ್ನು ಮೇನ್ ಕೋರ್ಸ್. ಕೊಬ್ಬರಿ-ಬೆಲ್ಲ-ಏಲಕ್ಕಿ ಮಿಶ್ರಿತ ಸಿಹಿ ಹೂರಣ. ಅಕ್ಷರಮೋದಕ ಎಂದು ಶೀರ್ಷಿಕೆಯಲ್ಲಿ ಆಸೆ ತೋರಿಸಿದ ಮೇಲೆ ಮೋಸವಿಲ್ಲ. ಅಷ್ಟಕ್ಕೂ ಮೋದಕ ಅಂದರೆ ಕಡುಬು ಅಂತಷ್ಟೇ ಅಲ್ಲ, `ಹರ್ಷವನ್ನುಂಟುಮಾಡುವ’ ಎಂಬರ್ಥವೂ ಸಂಸ್ಕøತದಲ್ಲಿ ಇದೆಯೆಂದು ನಿಮಗೆ ಗೊತ್ತಿರಲಿ. ಮೋದಕ ತಿಂದವರಿಗೆ ಹರ್ಷವಾಗದೆ ಇರುವುದುಂಟೇ?

ಒಂದು ನಿಮಿಷ ತಾಳಿ. `ಅಷ್ಟಕ್ಕೂ’ ಎಂಬ ಪದ ಬಳಸಿದೆನಾ!? ಇದು ನನಗೆ ಇಷ್ಟವಾಗದ ಪದ ಎಂದು ಹಿಂದೊಮ್ಮೆ ಹೇಳಿದ್ದೆನಲ್ಲ!? ಅಡ್ಡಿಯಿಲ್ಲ, ನಾನಿಲ್ಲಿ `ಅಷ್ಟಕ್ಕೂ’ ಪದ ಬಳಸಿದ್ದು ಬೇರೆಯವರು ಬಳಸಿದಂತೆ ಅಲ್ಲ. ಎಂಟಕ್ಕೂ ಎಂಬ ಅರ್ಥದಲ್ಲಿ ಬಳಸಿದ್ದು. ಯಾವ ಎಂಟು? ಇಲ್ಲಿದೆ ನೋಡಿ: ಗಣೇಶನನ್ನು ಕುರಿತ ಒಂದು ಸ್ವಾರಸ್ಯಕರ ಒಗಟಿನಂತಿರುವ ಸಂಸ್ಕøತ ಸುಭಾಷಿತ. ಇದರಲ್ಲಿ ಗಣೇಶನ ಎಂಟು ವಿಶೇಷಗಳನ್ನು ಪಟ್ಟಿ ಮಾಡಲಾಗಿದೆ. ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು. ಅವು ಯಾವುವೆಂದು ತಿಳಿದುಕೊಳ್ಳುವ ಮೊದಲು, ಸುಭಾಷಿತದ ಪೂರ್ಣ ರೂಪವನ್ನು ಓದಿ. `ಏಕರದ ದ್ವೈಮಾತುರ ನಿಸ್ತ್ರಿಗುಣ ಚತುರ್ಭುಜೋಪಿ ಪಂಚಕರ| ಜಯ ಷಣ್ಮುಖನುತ ಸಪ್ತಚ್ಛದಗನ್ಧಿಮದಾಷ್ಟತನುತನಯ||’

ಏಕರದ ಅಂದರೆ ಒಂದು ಹಲ್ಲು ಇರುವÀವನು. ರದ ಅಂದರೆ ದಂತ ಅಥವಾ ಹಲ್ಲು ಎಂದರ್ಥ. `ರದಂ ಚ ವರದಂ ಹಸ್ತೈರ್ಬಿಭ್ರಾಣಂ ಮೂಷಕಧ್ವಜಮ್’ ಎಂದು ಬರುತ್ತದೆ ಗಣಪತ್ಯಥರ್ವಶೀರ್ಷ ಸೂಕ್ತದಲ್ಲಿ. ಗಣೇಶನಿಗೆ ಆನೆಯ ಮುಖ, ಆದರೆ ಒಂದೇ ದಾಡೆ. ಇನ್ನೊಂದು ಮುರಿದಿದೆ. ಅದು ಮುರಿದದ್ದು ಹೇಗೆ ಎನ್ನುವುದಕ್ಕೆ ಬೇರೆಬೇರೆ ಕಥೆಗಳಿವೆ. ಕಾರ್ತವೀರ್ಯಾರ್ಜುನನನ್ನು ಸೋಲಿಸಿದ ಪರಶುರಾಮನು ತನಗೆ ಅಷ್ಟು ಶಕ್ತಿಯನ್ನಿತ್ತ ಶಿವನಿಗೆ ಧನ್ಯವಾದ ಸಲ್ಲಿಸಲಿಕ್ಕೆಂದು ಕೈಲಾಸಕ್ಕೆ ಹೋದಾಗ ಗಣೇಶ ಅವನನ್ನು ದ್ವಾರದಲ್ಲಿ ತಡೆಗಟ್ಟಿದನಂತೆ. ಗಣೇಶ ಯಾವಾಗಲೂ ಹಾಗೆಯೇ. ಏಕ್‍ದಂ ಸ್ಟ್ರಿಕ್ಟ್ ಗೇಟ್ ಕೀಪರ್. ಕೋಪಗೊಂಡ ಪರಶುರಾಮ ಕೊಡಲಿಯನ್ನೆಸೆದು ಗಣೇಶನ ಒಂದು ದಾಡೆಯನ್ನು ಮುರಿದನಂತೆ. ಅದೇ ಕೊಡಲಿಯನ್ನು ಗಣೇಶ ತನ್ನ ಒಂದು ಕೈಯಲ್ಲಿ ಹಿಡಿದುಕೊಂಡಿರುವುದು. ಇನ್ನೊಂದು ಕಥೆ, ವ್ಯಾಸಮಹರ್ಷಿ ಹೇಳಿದ ಮಹಾಭಾರತವನ್ನು ಉಕ್ತಲೇಖನದಂತೆ ಬರೆಯುತ್ತಿದ್ದಾಗ ಗಣೇಶನ ಕೈಯಲ್ಲಿದ್ದ ಲೇಖನಿ ಸವೆದುಹೋಯಿತಂತೆ. ಲೇಖನಿ ಇಲ್ಲ ಎಂದು ಚಡಪಡಿಸಿದರೆ ವ್ಯಾಸರೊಂದಿಗೆ ಮಾಡಿದ್ದ ಒಡಂಬಡಿಕೆಗೆ ತೊಂದರೆಯಾಗುತ್ತದೆಂದು ಗಣೇಶ ತನ್ನದೊಂದು ದಾಡೆಯನ್ನು ಮುರಿದು ಅದರಿಂದಲೇ ಬರೆಯತೊಡಗಿದನಂತೆ. ಮೂರನೆಯ ಕಥೆ, ತನ್ನ ಡೊಳ್ಳುಹೊಟ್ಟೆಯನ್ನು ನೋಡಿ ಬಾನಿನಲ್ಲಿ ಚಂದ್ರ ನಕ್ಕಾಗ ಅವನಿಗೆ ಹೊಡೆಯಲೆಂದು ಗಣೇಶ ಸಿಟ್ಟಿನಿಂದ ತನ್ನ ದಾಡೆಯನ್ನೇ ಮುರಿದು ಆಯುಧವಾಗಿಸಿದ್ದು. ಇದರಲ್ಲಿ ಯಾವುದೋ ಒಂದು ಮಾತ್ರ ನಿಜ ಇರಬಹುದು. ಏಕೆಂದರೆ ಪದೇಪದೆ ದಾಡೆ ಮುರಿದುಕೊಳ್ಳುವುದು ಸಾಧ್ಯವಿಲ್ಲವಲ್ಲ? ಅಂದಹಾಗೆ `ಪ್ರಪಂಚದ ಮೊತ್ತ ಮೊದಲ ಬ್ರೇಕಿಂಗ್ ನ್ಯೂಸ್ ಯಾವುದು?’ ಎಂದು ಯಾರಾದರೂ ರಸಪ್ರಶ್ನೆ ಕೇಳಿದರೆ `ಗಣೇಶ ತನ್ನ ದಾಡೆಯನ್ನು ಬ್ರೇಕ್ ಮಾಡಿಕೊಂಡದ್ದು ಎಂದು ಧಾರಾಳವಾಗಿ ಹೇಳಬಹುದು.

ದ್ವೈಮಾತುರ ಅಂದರೆ ಇಬ್ಬರು ತಾಯಂದಿರುಳ್ಳವನು. ಗಣೇಶನ ತಂದೆ ಪರಮೇಶ್ವರನಿಗೆ ಗೌರಿ ಮತ್ತು ಗಂಗೆ ಇಬ್ಬರು ಹೆಂಡತಿಯರು. ಪಟ್ಟಣಕ್ಕೆ ಬಂದ ಪತ್ನಿಯರು ಚಿತ್ರದ `ಒಬ್ಬಳ ಕಾಟವೆ ಸಾಕಾಗಿ ಹೋಗಿದೆ, ಒಬ್ಬಳ ಕಾಟಕೆ ತುತ್ತಾಗಿ ಹೋಗಿಹೆ… ಇಬ್ಬರು ಹೆಂಡಿರೇ ಸದಾಶಿವ ನಿನ್ಗೆ…’ ಹಾಡನ್ನು ನೆನಪಿಸಿಕೊಳ್ಳಿ. ಅಂತೂ ಗಂಗೆ-ಗೌರಿ ಇಬ್ಬರು ಗಣೇಶನಿಗೆ ಮಾತೆಯರು. ಅಲ್ಲದೇ, `ಪಾರ್ವತಿ ತನ್ನ ಮೈಯ ಅಂಗರಾಗದಿಂದ ಒಂದು ಮೂರ್ತಿಯನ್ನು ಮಾಡಿ ಗಂಗೆಗೆ ಎಸೆದಳು. ಗಂಗೆಯೂ ಪಾರ್ವತಿಯೂ ಅದನ್ನು ಮಗುವೆಂದು ಕರೆದುದರಿಂದ ಆ ಬೊಂಬೆಯು ಜೀವಂತವಾಯಿತು. ಇಬ್ಬರು ತಾಯಂದಿರುಳ್ಳ ಈ ಮಗು ದ್ವೈಮಾತುರನೆಂದು ಕರೆಯಲ್ಪಟ್ಟಿತು’ ಎಂದು ಮತ್ಸ್ಯಪುರಾಣದಲ್ಲಿದೆಯಂತೆ. ಹಾಗೆನ್ನುತ್ತದೆ ಯಜ್ಞನಾರಾಯಣ ಉಡುಪರು ಸಂಪಾದಿಸಿದ ಪುರಾಣ ಭಾರತ ಕೋಶ. ಇನ್ನು, ಅಮರಕೋಶದಲ್ಲಿ ಗಣೇಶನ ಎಂಟು ಹೆಸರುಗಳ ಶ್ಲೋಕದಲ್ಲೂ ದ್ವೈಮಾತುರ ಎಂದು ಬರುತ್ತದೆ: `ವಿನಾಯಕೋ ವಿಘ್ನರಾಜ ದ್ವೈಮಾತುರಗಣಾಧಿಪಾಃ| ಅಪ್ಯೇಕದಂತ ಹೇರಂಬ ಲಂಬೋದರಗಜಾನನಾಃ||’ ಒಂದು ಸಾಮಾನ್ಯಜ್ಞಾನದ ಪಾಯಿಂಟನ್ನು ಸೇರಿಸುವುದಾದರೆ- ಮಹಾಭಾರತ ಕಾಲದಲ್ಲಿದ್ದ ಜರಾಸಂಧನನ್ನೂ ದ್ವೈಮಾತುರ ಎಂದು ಗುರುತಿಸಲಾಗುತ್ತದೆ. ಯಾಕೆ ಎಂಬ ಕಥೆ ಇಲ್ಲೀಗ ಬೇಡ.

ನಿಸ್ತ್ರಿಗುಣ ಅಂದರೆ ಮೂರು ಗುಣಗಳಿಗೆ ಅತೀತನಾದವನು. ಸತ್ತ್ವಗುಣ, ರಜೋಗುಣ, ತಮೋಗುಣ – ಈ ಮೂರು ಗುಣಗಳಿಗೆ ಗ್ರಾಹ್ಯನಾಗದೆ ಇನ್ನೂ ಏನೋ ಆಗಿರುವವನು ಎಂದು ಅರ್ಥ. `ಗುಣಾತೀತಾಯ ಗುಣಾಧೀಶಾಯ ಗುಣಪ್ರತಿಷ್ಠಾಯ ಧೀಮಹಿ…’ ಶಂಕರಮಹಾದೇವನ್ ಹಾಡಿರುವ ಸ್ತೋತ್ರವನ್ನು ನೆನಪಿಸಿಕೊಳ್ಳಿ.

ಚತುರ್ಭುಜ ಅಂದರೆ ನಾಲ್ಕು ಭುಜಗಳುಳ್ಳವನು. ಪ್ರಾಚೀನ ಕಾಲದ ಗಣಪತಿಗೆ ಎರಡೇ ಭುಜಗಳಿದ್ದುವಂತೆ. ಮಧ್ಯಪ್ರದೇಶ ರಾಜ್ಯದ ಭೂಮಾರಾ ಎಂಬಲ್ಲಿ, ಮತ್ತು ನಮ್ಮ ಕರ್ನಾಟಕದ ಕಡಲತಡಿಯಲ್ಲಿರುವ ಗೋಕರ್ಣ ಕ್ಷೇತ್ರದಲ್ಲಿ ಎರಡು ಭುಜಗಳ ಗಣಪತಿಯ ವಿಗ್ರಹಗಳಿವೆ. `ತಲೆಬಾಗಿ ಬನ್ನಿ ವಟುರೂಪಿ ಗಣಪನಿಗೆ… ಗೋಕರ್ಣದಲಿ ನಿಂತ ದ್ವಿಭುಜ ಮೂರುತಿಗೆ…’ ಭಕ್ತಿಗೀತೆಯನ್ನು ನೆನಪಿಸಿಕೊಳ್ಳಿ. ಆದರೂ, ಸಾಮಾನ್ಯವಾಗಿ ಕ್ಯಾಲೆಂಡರ್‍ಗಳಲ್ಲಿ ನಾವು ನೋಡುವ, ನಮಗೆ ಚಿರಪರಿಚಿತ ಗಣೇಶನ ರೂಪವೆಂದರೆ ನಾಲ್ಕು ಭುಜಗಳು ಇರುವಂಥದು. `ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಮ್| ಪಾಶಾಂಕುಶಧರಂ ದೇವಂ ಧ್ಯಾಯೇತ್ ಸಿದ್ಧಿವಿನಾಯಕಮ್||’ ಮುಂತಾದ ಶ್ಲೋಕಗಳಲ್ಲೂ ಚತುರ್ಭುಜನೆಂಬ ಬಣ್ಣನೆ. ಮಣ್ಣಿನಿಂದ ಗಣೇಶನ ಮೂರ್ತಿ ಮಾಡುವವರಿಗೆ ಚಾಲೆಂಜಿಂಗ್ ಅನಿಸುವುದೂ ಚತುರ್ಭುಗಳನ್ನು ಜೋಡಿಸುವ ಚಾಣಾಕ್ಷತೆ.

ಪಂಚಕರ ಅಂದರೆ ಐದು ಕೈಗಳುಳ್ಳವನು. ನಾಲ್ಕು ಭುಜಗಳಿದ್ದವನಿಗೆ ಐದು ಕೈಗಳು ಹೇಗೆ? ಸ್ವಲ್ಪ ಆಲೋಚಿಸಿ. ಗಣೇಶನದು ಆನೆಯ ತಲೆ ಅಲ್ವಾ? ಆನೆಯ ಸೊಂಡಿಲು ಅಂದರೆ ಒಂದು ಕೈಯೇ. ಹಾಗಾಗಿ, ನಾಲ್ಕು ಪ್ಲಸ್ ಒಂದು ಒಟ್ಟು ಐದು ಕೈಗಳು. ಗಣೇಶನ ಚಿತ್ರಗಳಲ್ಲಿ, ಅವನು ಎಡಗೈಯಲ್ಲಿ ಹಿಡಿದ ತಟ್ಟೆಯಿಂದ ಮೋದಕಗಳನ್ನು ಎತ್ತಿಕೊಳ್ಳುವುದು ಸೊಂಡಿಲು ಎಂಬ ಐದನೆಯ ಕೈಯಿಂದಲೇ.

ಷಣ್ಮುಖನುತ ಅಂದರೆ ಆರು ಮುಖಗಳುಳ್ಳವನಿಂದ ಸ್ತುತಿಸಲ್ಪಟ್ಟವನು. ಪ್ರಪಂಚಕ್ಕೆ ಪ್ರದಕ್ಷಿಣೆ ಹಾಕುವ ಸ್ಪರ್ಧೆಯಲ್ಲಿ ಷಣ್ಮುಖನು ನವಿಲನ್ನೇರಿ ನಿಜವಾಗಿಯೂ ಭೂಮಂಡಲಕ್ಕೊಂದು ಪ್ರದಕ್ಷಿಣೆ ಹಾಕಿ ಬಂದ. ಬುದ್ಧಿವಂತ ಗಣೇಶ, ತಾಯಿ-ತಂದೆಯರೇ ಪ್ರಪಂಚ ಎಂದು ಬಗೆದು ಅವರಿಗೊಂದು ಪ್ರದಕ್ಷಿಣೆ ಸುತ್ತಿ ತಾನೇ ಗೆದ್ದವನೆಂದ! ಸೋಲೊಪ್ಪಿಕೊಂಡ ಷಣ್ಮುಖ ಗಣೇಶನನ್ನು ಕೊಂಡಾಡಲೇಬೇಕಾಯ್ತು.

ಸಪ್ತಚ್ಛದಗಂಧಿಮದ ಅಂದರೆ, ಏಳು ಸುತ್ತಿನ ಬಾಳೆಗಿಡದ ಪರಿಮಳವುಳ್ಳ ತಲೆಯವನು. ಸಪ್ತಚ್ಛದ ಅಂದರೆ ಏಳು ಸುತ್ತಿನ ಬಾಳೆ ಗಿಡ. ಅದಕ್ಕೆ ಎಲೆಗಳು ಕಾಂಡದ ಸುತ್ತ ಏಳು ಸುತ್ತುಗಳಲ್ಲಿ ಹುಟ್ಟಿರುತ್ತವೆ. ಪಚ್ಚೆಕರ್ಪೂರದಂಥ ಪರಿಮಳ ಇರುತ್ತದೆ ಆ ಬಾಳೆಗೆ. `ಅಶೋಕ ಸಪ್ತಚ್ಛದ ಚಂಪಕ ಚೂತ ಪಾದಪ ಉಪಶೋಭಿತಂ… ಏಕಯೋಜನಪ್ರಮಾಣ ವಿಸ್ತಾರಮುಂ…’ ಪಂಪನ ಆದಿಪುರಾಣದಲ್ಲಿ ವನವರ್ಣನೆಯಲ್ಲಿ ಸಪ್ತಚ್ಛದ ಬಾಳೆಗಿಡದ ಉಲ್ಲೇಖವೂ ಬರುತ್ತದೆ. ಮದವೇರಿದ ಗಂಡಾನೆಯ ಹಣೆÉಯಿಂದ ಒಂದು ರೀತಿಯ ಪರಿಮಳದ್ರವ್ಯ ಒಸರುತ್ತಿರುತ್ತದೆ; ಆ ಪರಿಮಳವು ಸಪ್ತಚ್ಛದ ಬಾಳೆಯ ಪರಿಮಳದಂತೆಯೇ ಇರುತ್ತದೆ. ಗಣೇಶನಿಗೆ ಗಂಡಾನೆಯ ತಲೆ ಇರುವುದರಿಂದ ಅವನ ತಲೆಯಿಂದಲೂ ಪರಿಮಳದ್ರವ್ಯ ಒಸರುತ್ತಿರುತ್ತದೆಯೆಂಬ ನಂಬಿಕೆ.

ಅಷ್ಟತನುತನಯ ಅಂದರೆ ಎಂಟು ಬಗೆಯ ಶರೀರಗಳುಳ್ಳವನ ಮಗ. ಪರಶಿವನು ಅಷ್ಟಮೂರ್ತಿಸ್ವರೂಪ. ಭವ, ಶರ್ವ, ಈಶಾನ, ಪಶುಪತಿ, ಭೀಮ, ಉಗ್ರ, ಮಹಾದೇವ, ರುದ್ರ- ಇವೇ ಆ ಎಂಟು ಶರೀರಗಳು. ಇನ್ನೊಂದು ವ್ಯಾಖ್ಯೆಯ ಪ್ರಕಾರ ಪರಶಿವನ ಅಷ್ಟತನುಗಳು: ಸ್ಥೂಲ, ಸೂಕ್ಷ್ಮ, ಕಾರಣ, ನಿರ್ಮಲ, ಆನಂದ, ಚಿನ್ಮಯ, ಚಿದ್ರೂಪ, ಶುದ್ಧ. ಮತ್ತೊಂದು ವ್ಯಾಖ್ಯೆಯ ಪ್ರಕಾರ- ಪೃಥ್ವಿ, ಜಲ, ತೇಜಸ್ಸು, ವಾಯು, ಆಕಾಶ, ಯಜಮಾನ (ಯಾಗ ಮಾಡುವವನು), ಚಂದ್ರ, ಸೂರ್ಯ- ಈ ಎಂಟೂ ಈಶ್ವರನ ಮೂರ್ತಿಗಳು. ಯಾವ ವ್ಯಾಖ್ಯೆಯ ಪ್ರಕಾರವಾದರೂ ಒಟ್ಟು ಎಂಟು ಬಗೆ. ಅಂಥ ಅಷ್ಟತನುವುಳ್ಳವನ ತನಯ (ಮಗ) ನಮ್ಮ ಗಣೇಶ! ಅಷ್ಟಕ್ಕೂ ಅಪ್ಪನಂತೆಯೇ ಮಗ ಎನ್ನುವುದು ಸುಮ್ಮನೆ ಅಲ್ಲ. ಗಣೇಶನಿಗೆ ಪ್ರಿಯವಾದ ಇನ್ನೊಂದು `ಅಷ್ಟ’ವೂ ಇದೆ, ಅಷ್ಟದ್ರವ್ಯ. ತೆಂಗಿನಕಾಯಿ, ಅವಲಕ್ಕಿ, ಅರಳು, ಎಳ್ಳು, ಕಬ್ಬು, ಬೆಲ್ಲ, ತುಪ್ಪ, ಜೇನು- ಇವುಗಳ ಮಿಶ್ರಣ. ಗಣಹೋಮ ಮಾಡುವಾಗ ಹವಿಸ್ಸಿಗಾಗಿ ಅದು ಬೇಕೇಬೇಕು.

ಅಷ್ಟದ್ರವ್ಯದ ಸುಗ್ರಾಸಭೋಜನವಾದ ಮೇಲೆ ಈಗ ಒಂದು ಡೆಸರ್ಟ್, ಸಿಹಿತಿಂಡಿ. ಗಣೇಶನನ್ನು ಕುರಿತಾದ ಒಂದು `ಬಿಂದುಪೂರ್ವಕ ಡಕಾರ’ ಶ್ಲೋಕ. ಡಕಾರ ಅಂದರೆ ತೇಗು ಅಂತಂದ್ಕೊಳ್ಳಬೇಡಿ! ಬಿಂದುಪೂರ್ವಕ ಡಕಾರ ಅಂದರೆ ಅನುಸ್ವಾರದ ಬಳಿಕ ಡ ವ್ಯಂಜನವಿರುವ ಪದಗಳು. `ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೆಕೋ ಚಂಡವ್ಯಾಘ್ರನೆ ನೀನಿದೆಲ್ಲವನುಂಡು ಸಂತಸದಿಂದಿರು… ಎಂದು ಪುಣ್ಯಕೋಟಿಯ ಪದ್ಯದಲ್ಲಿ, ಅಥವಾ, `ಭಂಡರೆದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಡೀವಿ… ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳಖಂಡ ಕೀರ್ತಿಪ್ರಚಂಡ…’ ಎಂದು ಬಬ್ರುವಾಹನ ಚಿತ್ರಗೀತೆಯಲ್ಲಿ, ಅಥವಾ, `ಅಯಿ ಶತಖಂಡÀ ವಿಖಂಡಿತರುಂಡ ವಿತುಂಡಿತಶುಂಡ ಗಜಾಧಿಪತೇ… ರಿಪುಗಜಗಂಡ ವಿದಾರಣಚಂಡ ಪರಾಕ್ರಮಶುಂಡ ಮೃಗಾಧಿಪತೇ… ನಿಜಭುಜದಂಡ ನಿಪಾತಿತಖಂಡ ವಿಪಾತಿತ ಮುಂಡ ಭಟಾಧಿಪತೇ…’ ಎಂದು ಮಹಿಷಾಸುರಮರ್ದಿನಿ ಸ್ತೋತ್ರದಲ್ಲಿ ಬರುತ್ತದೆ ನೋಡಿ ಅಂಥವು. ಅವು ಇದ್ದರೆ ಶ್ಲೋಕವನ್ನು ದೊಡ್ಡ ಧ್ವನಿಯಲ್ಲಿ ಹೇಳುವಾಗ ಡಂ ಡಂ ಡಮರು ಅಥವಾ ಯಕ್ಷಗಾನದ ಚೆಂಡೆ ಬಡಿದಂತೆ ಅದ್ಭುತ ಶಬ್ದವೈಭವ. ಈಗ ಅಂಥದೇ ಒಂದು ಗಣೇಶಶ್ಲೋಕವನ್ನು ಓದಿಕೊಳ್ಳಲಿಕ್ಕೆ ಸಿದ್ಧರಾಗಿ: `ದೋದ್ರ್ಯೋತದ್ದಂತಖಂಡಃ ಸಕಲಸುರಗಣಾಡಂಬರೇಷು ಪ್ರಚಂಡಃ| ಸಿಂದೂರಾಕೀರ್ಣಗಂಡಃ ಪ್ರಕಟಿತ ವಿಲಸಚ್ಚಾರುಚಾಂದ್ರೀಯಖಂಡಃ| ಗಂಡಸ್ಥಾನಂತಘಂಡಃ ಸ್ಮರಹರತನಯಃ ಕುಂಡಲೀಭೂತಶುಂಡೋ| ವಿಘ್ನಾನಾಂ ಕಾಲದಂಡಃ ಸ ಭವತು ಭವತಾಂ ಭೂತಯೇ ವಕ್ರತುಂಡಃ|

ಇಷ್ಟೆಲ್ಲ ಆದಮೇಲೆ ಒಂದು ತಣ್ಣನೆ ಐಸ್‍ಕ್ರೀಂ ಬೇಡವೇ? ಗಣೇಶನದು ಎಷ್ಟು ಕೂಲ್ ಕೂಲ್ ಪ್ರಪಂಚ ಎಂದು ಬಣ್ಣಿಸುವ ಒಂದು ಸುಭಾಷಿತ. ಇದರಲ್ಲಿ ಪ್ರಕೃತಿ ಸಹಜವಾದ ಸುಂದರ ಪ್ರತಿಮೆಗಳು ಬರುತ್ತವೆ. ಸಮುದ್ರದಲೆಗಳ ಬಿಳಿ ನೊರೆ, ಬೆಳದಿಂಗಳಲ್ಲಿ ಹೊಳೆಯುತ್ತಿರುವ ಬಿಳಿನೈದಿಲೆಗಳ ಉದ್ಯಾನ, ರಾತ್ರಿಯ ಆಗಸದಲ್ಲಿ ಮಿನುಗುವ ನಕ್ಷತ್ರಗಳು, ಕೊಳದಲ್ಲಿ ಈಜುತ್ತಿರುವ ಹಂಸಗಳ ಹಿಂಡು, ಪರ್ವತಕ್ಕೆ ಮಣಿಮಾಲೆ ಕಟ್ಟಿದಂತೆ ತೋರುತ್ತಿರುವ ಹಿಮದ ಕಣಗಳು, ಆನೆಯು ಸೊಂಡಿಲಿನಿಂದ ಚಿಮುಕಿಸುತ್ತಿರುವ ತುಂತುರು ನೀರು… ಆಹಾ ಏನು ಸೊಗಸು! ಶ್ಲೋಕ ಹೀಗಿದೆ: `ಯಃ ಸಿಂಧೌ ಫೇನರಾಶಿರ್ಭುವಿ ಕುಮುದವನಂ ವ್ಯೋಮ್ನಿ ನಕ್ಷತ್ರಲಕ್ಷ್ಮೀ| ರಬ್ಧೌ ಮುಕ್ತಾಸಭೂಹಸ್ತರುಷು ಸುಮನಸೋ ಮಾನಸೇ ಹಂಸಸಂಘಃ| ಶ್ರೀಕಂಠೇ ಭೂತಿಲೇಶಃ ಶಿಖರಿಷು ಮಣಯೋ ದಿಕ್ಷು ನೀಹಾರಪಾತಃ| ಪಾಂಡುಃ ಶುಂಡಾಗ್ರಜನ್ಮಾ ಜಯತಿ ಗಣಪತೇಃ ಶೀಕರಾಣಾಂ ವಿಲಾಸಃ|’

ಇದರಲ್ಲಿ ಕೊನೆಗೆ ಬರುವ `ಶೀಕರ’ ಅಂದರೆ ನೀರಿನ ತುಂತುರು. ನೀವು ಅದನ್ನು ಶೀಕರಣೆ ಎಂದು ಓದಿಕೊಂಡು ರಸವಿಲಾಸವನ್ನು ಹೆಚ್ಚಿಸಿಕೊಂಡಿದ್ದೀರಾದರೆ ಮತ್ತೂ ಒಳ್ಳೆಯದೇ. ಚೌತಿಹಬ್ಬ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಗಣೇಶನ ಅನುಗ್ರಹ, ಅದಕ್ಕೆ ಮುಂಚೆ ಅವನ ಅಮ್ಮ ಗೌರಿಯ ಅನುಗ್ರಹವೂ ನಮ್ಮೆಲ್ಲರ ಮೇಲೆ ಸದಾ ಇರಲಿ.

error: Content is protected !!