Saturday, 23rd September 2023

ಎತ್ತ ಸಾಗುತ್ತಿದೆ ದೇಶದ ಪ್ರಜಾಪ್ರಭುತ್ವ ? ಒಂದು ಅವಲೋಕನ

ಸ್ವಾಸ್ಥ್ಯ ಸಂಪದ

Yoganna55@gmail.com

ಕರ್ನಾಟಕದ ವಿಧಾನಸಭಾ ಚುನಾವಣೆ ಜರುಗುತ್ತಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ, ಪಂಚರತ್ನ ಯಾತ್ರೆಗಳಲ್ಲಿ ಪರಸ್ಪರ ಮಾಡುತ್ತಿರುವ ದೋಷಾರೋಪಗಳು, ಈ ಯಾತ್ರೆಗಳಿಗೆ ಜನರನ್ನು ಸೇರಿಸುತ್ತಿರುವ ವಿಧಾನಗಳು, ದೈನಂದಿನ ಸರ್ಕಾರದ ಆಡಳಿತ ವನ್ನು ನಿರ್ಲಕ್ಷಿಸಿ ಪದೇ ಪದೆ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಮಂತ್ರಿಗಳು ಆಗಿಂದಾಗ್ಯೆ ನಿರಂತರವಾಗಿ ನಡೆಯುವ ಚುನಾವಣೆ ಪ್ರಚಾರಗಳಲ್ಲಿ ಪಾಲ್ಗೊಂಡು ಸಮಯವನ್ನು ವ್ಯಯ ಮಾಡುತ್ತಿರುವುದು, ಲಂಚ ಪಡೆದು ಜೈಲು ಸೇರುತ್ತಿರುವ ಶಾಸಕರುಗಳು, ಭ್ರಷ್ಟಾಚಾರ ವಿರೋಧಿ ಚಳವಳಿ ಯಿಂದಲೇ ಅಧಿಕಾರ ಹಿಡಿದ ದೆಹಲಿ ಸರ್ಕಾರದ ಮಂತ್ರಿಗಳು ಭ್ರಷ್ಟಾಚಾರ ಆರೋಪದಿಂದ ಜೈಲು ಸೇರಿರುವುದು, ಆಡಳಿತ ವ್ಯವಸ್ಥೆಯ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳೂ ಸಹ ಭ್ರಷ್ಟಾಚಾರಕ್ಕೀಡಾಗುತ್ತಿರುವುದು, ಮನ್ನಿಸಬಹುದಾದ ಸಣ್ಣ ಪುಟ್ಟ ಆರೋಪಗಳಿಗೂ ಮಾನನಷ್ಟ ಮೊಕದ್ದಮ್ಮೆಗಳನ್ನು ಹೂಡಿ ವಿರೋಧ ಪಕ್ಷದವರನ್ನು ಲೋಕಸಭಾ ಸದಸ್ಯತ್ವ ದಿಂದಲೇ ಅನರ್ಹಗೊಳಿಸುತ್ತಿರುವುದು, ಜಾತಿ ಜಾತಿಗಳನ್ನು ಓಲೈಸಲು ಅನರ್ಹರಿಗೂ ಮೀಸಲಾತಿಗಳನ್ನು ನೀಡಿ, ಟಿಕೆಟ್ ನೀಡುತ್ತಿರುವುದು, ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರುವುದು, ಧರ್ಮ ಧರ್ಮಗಳ ನಡುವೆ
ರಾಜಕೀಯ ಅಧಿಕಾರಕ್ಕಾಗಿ ವೈಷಮ್ಯಗಳನ್ನು ಹರಡುತ್ತಿರುವುದು ಒಂದೇ ಎರಡೇ? ಇತ್ಯಾದಿ ಮನ ಕಲಕುವ ಪ್ರಸಂಗಗಳು ದೇಶದಲ್ಲಿ ಇಂದು ಕ್ಯಾನ್ಸರ್ ನಂತೆ ಹರಡುತ್ತಿವೆ.

ಇವೆಲ್ಲ ಪ್ರಸಂಗಗಳು ತುಸುಕಾಲ ನನ್ನ ಮೇಲೆ ಪರಿಣಾಮ ಬೀರಿ ಭಾರತ ದೇಶದ ಇತಿಹಾಸ, ಸಾಗಿ ಬಂದ ದಾರಿ, ಪ್ರಾಚೀನ ಆಡಳಿತ ವ್ಯವಸ್ಥೆಗಳು, ಪಾಲಿಸಿಕೊಂಡು ಬಂದ ರಾಜಕೀಯ ಮತ್ತು ಸಾಮಾಜಿಕ ಮೌಲ್ಯಗಳು, ಹಿರಿಮೆ ಗರಿಮೆಗಳು, ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥತೆಯಿಂದ ಮಾಡಿದ ತ್ಯಾಗ ಮತ್ತು ಬಲಿದಾನಗಳು ಮತ್ತು ಅಂದಿನಿಂದ ಇಂದಿನವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಏಳು ಬೀಳುಗಳು, ಆಡಳಿತ ಸಾಗಿ ಬಂದ ಹಾದಿ ಮತ್ತು ಮುಂದೇನು ಎಂಬ ಆತಂಕಗಳ ಹಿನ್ನೆಲೆಯಲ್ಲಿ ಕೆಲ ಕಾಲ ಆತ್ಮಾವಲೋಕನ ಮಾಡಿಕೊಂಡೆ.

ದೇಶಪ್ರೇಮಿ ಮತ್ತು ಮಾನವಪ್ರೇಮಿಗಳೆಲ್ಲರಿಗೂ ಹೀಗೆ ಆಗಿರಬೇಕು, ಅವೆಲ್ಲವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಈ ವಿಚಾರಗಳನ್ನು ತಮ್ಮ ಮುಂದೆ ಯಥಾವತ್ತಾಗಿ ಸಾದರ ಪಡಿಸುತ್ತಿದ್ದೇನೆ. ವೇದಕಾಲದ ಭಾರತ ಭೂಮಂಡಲದ ಶೇ ೨.೪ರಷ್ಟು ಭೂ ಪ್ರದೇಶವನ್ನು ಭಾರತ ಹೊಂದಿದ್ದು, ಪ್ರಪಂಚದ ವಿಸ್ತೀರ್ಣದಲ್ಲಿ ೭ನೇ ಸ್ಥಾನ ಹೊಂದಿ ಸುಮಾರು ೩೨೮೭೭೬೩ ಚ.ಕಿ.ಮೀ ಉಳ್ಳ, ಹಿಮಪೀಡಿತ ಹಿಮಾಲಯದಿಂದ ದಕ್ಷಿಣದಲ್ಲಿರುವ ಉಷ್ಣವಲಯದ ಮಳೆಗಾಲದ ಕಾಡಿನವರೆವಿಗೂ ಹರಡಿಕೊಂಡಿರುವ, ಫಲವತ್ತಾದ ಭೂಮಿಯುಳ್ಳ ಪುಣ್ಯಭೂಮಿ ಭಾರತ.

ಕ್ರಿ.ಪೂ.೧೫೦೦ರಲ್ಲಿ ಭಾರತ ದೇಶ ಉಗಮಿಸಿರಬಹುದೆಂದು ಅಂದಾಜಿಸಲಾಗಿದೆ. ಪ್ರಾರಂಭದಲ್ಲಿ ಮಾನವ ಸಂತತಿ ಇಂದಿನ ದಕ್ಷಿಣ ಆಫ್ರಿಕಾದಲ್ಲಿ
ಸುಮಾರು ೨೨ ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಸುಮಾರು ೬೫ ಸಾವಿರ ವರ್ಷಗಳ ಹಿಂದಿನಿಂದ ಮಾನವನ ಇರುವಿಕೆ ಭಾರತದಲ್ಲಿ
ಪ್ರಾರಂಭವಾಗಿರಬಹುದೆಂದು ಅಂದಾಜಿಸಲಾಗಿದೆ. ಕಪ್ಪು ಬೆರ್ರಿ ಮರಗಳು (ಬ್ಲಾಕ್ ಬೆರ್ರಿ) ಈ ಪ್ರದೇಶದಲ್ಲಿ ಹೆಚ್ಚಾಗಿದ್ದುದರಿಂದ ಮೊದಲು ಭಾರತ ವನ್ನು ಜಂಭೂದ್ವೀಪ ಎಂದು ಕರೆಯಲಾಯಿತು ಎಂದು, ಅನಂತರ ಸುಮಾರು ವರ್ಷಗಳ ಹಿಂದೆ ಭರತ ಎಂಬ ರಾಜ ಆಳಿದ ಕಾರಣ ಇದಕ್ಕೆ ಭಾರತ ಎಂದು, ತದನಂತರ ಈಗ ಪಾಕಿಸ್ತಾನದಲ್ಲಿರುವ ಇಂಡಸ್ ವ್ಯಾಲಿಯಲ್ಲಿ ಪ್ರಾರಂಭವಾದ ಹರಪ್ಪ ಮೊಹೆಂಜೋದಾರೋ ನಾಗರಿಕತೆಯಿಂದಾಗಿ ಆಂಗ್ಲ
ಪದದ ಇಂಡಿಯಾ ಎಂಬ ಹೆಸರು ಬಂದಿರುತ್ತದೆ.

ಇಡೀ ಪ್ರಪಂಚದಲ್ಲಿಯೇ ಜ್ಞಾನದ ಪ್ರಾಥಮಿಕ ಕೋಶಗಳಾದ ವೇದಗಳ ಉಗಮ ಭಾರತವಾಗಿದ್ದು, ಅಂದು ಸುಮಾರು ೫ ಸಾವಿರ ವರ್ಷಗಳ ಹಿಂದೆ
ವೇದಗಳಾಧಾರಿತ ನಾಗರಿಕತೆ ಮೊದಲು ಭಾರತ ದೇಶದಲ್ಲಿ ಪ್ರಾರಂಭವಾಯಿತು. ಇಡೀ ಭೂಮಂಡಲವೇ ಒಂದು ಕುಟುಂಬ (ವಸುದೈವ ಕುಟುಂಬಕಂ)
ಎಂಬ ವೈಜ್ಞಾನಿಕ ತತ್ವದ ಅಡಿಯಲ್ಲಿ ಸೃಷ್ಟಿ ಅತೀತ ಶಕ್ತಿಯಾದ ದೇವರಿಂದಾಗಿದೆ, ಅದಕ್ಕೆ ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಮೂರ್ತಿಗಳು, ಹಬ್ಬ ಹರಿ
ದಿನಗಳ ಆಚರಣೆಗಳು, ಪರಸ್ಪರ ಪ್ರೀತಿಸಿ ಸಹಕರಿಸುವ ಮನೋಭಾವದ ಕುಟುಂಬ ವ್ಯವಸ್ಥೆ, ಸರ್ವರ ಹಿತಕ್ಕೂ ಪಾಲಿಸಬೇಕಾದ ಸಮಗ್ರ ದೃಷ್ಟಿಕೋನದ ಜೀವನಶೈಲಿಯ ಮಾರ್ಗೋಪಾಯಗಳು ವೇದಗಳಾಧಾರಿತ ಧರ್ಮದ ಮೂಲ ಉದ್ದೇಶಗಳಾಗಿವೆ.

ಭಾರತದ ಮೂಲ ನಿವಾಸಿಗಳು ಕಪ್ಪಾಗಿರುವ ದ್ರಾವಿಡರಾಗಿದ್ದು, ಅನಂತರ ಸೌದಿ ಅರೇಬಿಯಾ ಮತ್ತಿತರ ಹೊರದೇಶಗಳಿಂದ ಬಂದ ಬಿಳಿಯ ಆರ್ಯರು ಬುದ್ಧಿವಂತರಾಗಿದ್ದು, ದೇಶದ ಮಾನವ ಕುಲವನ್ನು ವೃತ್ತಿಯ ಆಧಾರದ ಮೇಲೆ ವಿಂಗಡಣೆ ಮಾಡಿದ ಫಲವಾಗಿ ಮಾನವಕುಲ ಜಾತಿಯ ಆಧಾರದ ಮೇಲೆ ಪ್ರಪ್ರಥಮವಾಗಿ ವಿಂಗಡಣೆಯಾಯಿತು. ಅಂದು ಜ್ಞಾನವನ್ನು ಪಡೆದ ಬುದ್ಧಿವಂತರ ಪಂಗಡ ಇನ್ನಿತರರನ್ನು ಶೋಷಣೆ ಮಾಡಿದ ಫಲವಾಗಿ ಮೇಲು
ಕೀಳುಗಳು ಪ್ರಾರಂಭವಾಗಿ, ಹಲವಾರು ದೇವರುಗಳು ಸೃಷ್ಟಿಯಾಗಿ ದೇಶದ ಮಾನವ ಕುಲ ವಿವಿಧ ಜಾತಿ, ದೇವರುಗಳ ಅಡಿಯಲ್ಲಿ ಚೂರು ಚೂರಾಯಿತು.

ನಿರ್ಮಲವಾದ, ವೈಜ್ಞಾನಿಕವಾದ, ಇಡೀ ಭೂಮಂಡಲ ಒಂದು ಎಂದು ಸಾರುವ ವೇದಗಳಾಧಾರಿತ ನಾಗರಿಕತೆ ಇವೆಲ್ಲವುಗಳ ಪರಿಣಾಮದಿಂದಾಗಿ ಮೇಲು ಕೀಳಿನ, ವಿವಿಧ ದೇವರುಗಳನ್ನೊಳಗೊಂಡ ಹಿಂದೂಧರ್ಮ ಸೃಷ್ಟಿಯಾಯಿತು. ಇದಕ್ಕೆ ವಿರುದ್ಧವಾಗಿ ಅನಂತರದಲ್ಲಿ ಕ್ರಿ.ಪೂ. ೩-೪ನೇ ಶತಮಾನಗಳಲ್ಲಿ ಬುದ್ಧ ಮತ್ತು ಮಹಾವೀರ ಸಿಡಿದೆದ್ದ ಪರಿಣಾಮವಾಗಿ ದೇಶದಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ಉಗಮಿಸಿದವು. ಅಂದು ಹಲವಾರು ರಾಜ ಮಹಾರಾಜರುಗಳು, ಪಾಳೇಗಾರರು, ಸಾಮ್ರಾಜ್ಯಶಾಹಿಗಳು ಬಿಡಿ ಬಿಡಿಯಾಗಿ ಬ್ರಿಟೀಷರು ಬರುವವರೆವಿಗೂ ದೇಶವನ್ನಾಳಿ ವಿವಿಧ ಧರ್ಮ ಮತ್ತು ಜಾತಿಗಳ ಪ್ರತಿಪಾದಕರಾದರು. ಇಲ್ಲಿಯ ಬಹುಪಾಲು ಜನರು ಹಿಂದೂಧರ್ಮವನ್ನು ಪಾಲಿಸುತ್ತಿದ್ದರಿಂದ ಹಿಂದೂಸ್ಥಾನ ಎಂಬ ಹೆಸರು ಬಂದಿರುತ್ತದೆ.

ಕ್ರಿ.ಶ. ೭ನೇ ಶತಮಾನದಲ್ಲಿ ಮುಸ್ಲಿಮರು ಭಾರತಕ್ಕೆ ಬಂದು ಕ್ರಿ.ಪೂ. ೧೫೨೬ರಿಂದ ೧೮೫೭ರವರೆಗೆ ಸುಮಾರು ೩೫೦ ವರ್ಷಗಳ ಕಾಲ ಭಾರತವನ್ನಾಳಿ ದರು. ಈ ಅವಧಿಯಲ್ಲಿ ಮುಸ್ಲಿಂ ದಾಳಿಕೋರರು ದೇಶದ ಸಂಪತ್ತನ್ನು ಲೂಟಿ ಮಾಡಿದರು. ಕ್ರಿ.ಪೂ. ೧ನೇ ಶತಮಾನದಲ್ಲಿ ಕ್ರೈಸ್ತರು ಭಾರತಕ್ಕೆ ಬಂದು ಕ್ರಮೇಣ ಭಾರತ ಸರ್ವಧರ್ಮಗಳ ಸಮ್ಮಿಶ್ರಿತ ದೇಶವಾಯಿತು. ಇಡೀ ಪ್ರಪಂಚದಲ್ಲಿಯೇ ಮಾನವ ಕುಲ ಪ್ರಪ್ರಥಮವಾಗಿ ಅನುಸರಿಸಿದ ಧರ್ಮ, ವೇದಗಳ ಆಧಾರಿತ ಸನಾತನ ಧರ್ಮ ಎಂಬುದು ನಿರ್ವಿವಾದ. ಇನ್ನಿತರ ಎಲ್ಲ ಧರ್ಮಗಳು ಅನಂತರ ಬಂದವುಗಳಾಗಿವೆ ಎಂಬುದನ್ನು ಯಾರೂ ನಿರಾಕರಿಸ ಲಾಗದು. ಮನುಷ್ಯ ಆಧ್ಯಾತ್ಮಿಕ ಹಿನ್ನೆಲೆ ಯಲ್ಲಿ ಸಮಗ್ರ ದೃಷ್ಟಿಕೋನದಿಂದ ತಾನೂ ನೆಮ್ಮದಿಯಿಂದ ಬದುಕಿ, ಇನ್ನಿತರರನ್ನೂ ನೆಮ್ಮದಿಯಿಂದ ಬದುಕುವ ಜೀವನಶೈಲಿಯನ್ನು ಪ್ರಪ್ರಥಮವಾಗಿ ಕಂಡುಕೊಂಡಿದ್ದು ಭಾರತೀಯ ಮನುಕುಲ ಎಂಬುದು ಹೆಮ್ಮೆಯ ವಿಷಯ.

ಬ್ರಿಟೀಷರ ಆಡಳಿತ: ಬ್ರಿಟೀಷರು ನಮ್ಮ ದೇಶಕ್ಕೆ ಬರುವ ಮುನ್ನ ಕ್ರಿ.ಪೂ.೩೭೨-೧೮೫ರಲ್ಲಿ ಮೌರ್ಯ ಸಾಮ್ರಾಜ್ಯ ಈ ದೇಶವನ್ನು ಸುಭಿಕ್ಷವಾಗಿ ಆಳಿದ್ದು,
ತದನಂತರ ಅಶೋಕ ಚಕ್ರವರ್ತಿಯೊಂದಿಗೆ ಇದು ಕೊನೆಗೊಂಡು ನಂತರ ಸುಮಾರು ೩೦೦ ವರ್ಷಗಳ ಕಾಲ ಮೊಘಲರು ದೇಶವನ್ನಾಳಿದರು. ಅನಂತರ ದೇಶದೆಲ್ಲೆಡೆ ವಿವಿಧ ಪ್ರದೇಶಗಳಲ್ಲಿ ವಿವಿಧ ಸಾಮ್ರಾಜ್ಯಶಾಹಿಗಳು, ರಾಜರುಗಳು ಆಯಾಯ ಪ್ರದೇಶಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಿದರು.

ಬ್ರಿಟೀಷರ ಆಡಳಿತದಲ್ಲೂ ಇದೇ ಸಾಮ್ರಾಜ್ಯಶಾಹಿಗಳು ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸಿದರು. ಬ್ರಿಟೀಷರು ಸುಮಾರು ೨೦೦ ವರ್ಷಗಳ ಕಾಲ
ಭಾರತದಲ್ಲಿದ್ದು, ೧೮೫೮-೧೯೪೭(೯೦ವರ್ಷ)ಗಳವರೆಗೆ ಆಡಳಿತ ನಡೆಸಿ, ಭಾರತೀಯ ಮೌಲ್ಯಯುತ ಶಿಕ್ಷಣ ವ್ಯವಸ್ಥೆಯನ್ನು ದಮನ ಮಾಡಿ, ಸಂಪತ್ತನ್ನು ದೋಚಿ, ಗುಲಾಮಗಿರಿಯನ್ನು ಹೇರುವುದರ ಜೊತೆ ಜೊತೆಗೆ ರೈಲ್ವೆ ಮತ್ತಿತರ ವೈಜ್ಞಾನಿಕ ಆಧಾರಿತ ಅಭಿವೃದ್ಧಿ ಮತ್ತು ಕೆಲವರಿಗೇ ಸೀಮಿತವಾಗಿದ್ದ ಶಿಕ್ಷಣವನ್ನು ಎಲ್ಲರಿಗೂ ಲಭಿಸುವಂತಾಗಿಸಿದರು.

ಸ್ವಾತಂತ್ರ್ಯ ಸಂಗ್ರಾಮ : ೧೮೫೭ರಲ್ಲಿ ಮಂಗಲ್ ಪಾಂಡೆ ಎಂಬಾತನಿಂದ ಪ್ರಾರಂಭವಾದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಆಫ್ರಿಕಾದಿಂದ ೧೯೧೫ ರಲ್ಲಿ ಗಾಂಽಜಿಯವರು ಬಂದ ನಂತರ ಸ್ವಾತಂತ್ರ್ಯ ಚಳವಳಿ ತೀವ್ರವಾಗಿ ಅದಕ್ಕೊಂದು ಸ್ಪಷ್ಟ ಗುರಿ ಮತ್ತು ಗುರು ಲಭಿಸಿದಂತಾಯಿತು. ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ೧೯೨೦ ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಂಸ್ಥೆಯನ್ನು ಹುಟ್ಟುಹಾಕಿ ಹೋರಾಡಿದ ಫಲದಿಂದ ೧೯೪೭ರಲ್ಲಿ
ಸ್ವಾತಂತ್ರ್ಯ ಲಭಿಸಿತು. ಅಷ್ಟೊತ್ತಿಗಾಗಲೆ ಪ್ರಾರಂಭದಲ್ಲಿ ಹಿಂದೂ ರಾಷ್ಟ್ರವಾಗಿದ್ದ ಭಾರತದಲ್ಲಿ ಮುಸ್ಲಿಂ ಧರ್ಮವೂ ವ್ಯಾಪಕಗೊಂಡು, ಅದರ ಜನಸಂಖ್ಯೆಯೂ ಸಹ ಗಣನೀಯವಾಗಿತ್ತು.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಒಟ್ಟು ೩೦ಕೋಟಿ ಜನಸಂಖ್ಯೆಯಲ್ಲಿ ೭ ಕೋಟಿ ಮುಸ್ಲಿಮರಿದ್ದರು. ಇಂದು ದೇಶದ ಜನಸಂಖ್ಯೆ ೧೪೦ ಕೋಟಿಯಾಗಿದ್ದು,  ಇದರಲ್ಲಿ ೨೧ಕೋಟಿ ಮುಸ್ಲಿಮರಿದ್ದಾರೆ, ೩ಕೋಟಿ ಕ್ರೈಸ್ತರಿದ್ದಾರೆ. ಬ್ರಿಟೀಷರ ಚಿತಾವಣೆಯಿಂದಾಗಿ ಧರ್ಮದ ಆಧಾರದ ಮೇಲೆ ಭಾರತ ಇಬ್ಭಾಗವಾಗಿ ಪಾಕಿಸ್ತಾನ ಸೃಷ್ಟಿಯಾಯಿತು. ದೇಶದ ವಿಭಜನೆ ಜೊತೆ ಜೊತೆಗೆ ಧರ್ಮದ ಆಧಾರದ ಮೇಲೆ ಮನಸ್ಸುಗಳೂ ಕೂಡ ದ್ವೇಷ ಮತ್ತು ಅಸೂಯೆಗಳಿಂದ ವಿಂಗಡಣೆ ಯಾಗಿ ಮಾರಣಹೋಮಗಳೇ ನಡೆದುಹೋದವು. ಅಂದು ಪ್ರಾರಂಭವಾದ ಧರ್ಮಾಧಾರಿತ ದ್ವೇಷದ ದಳ್ಳುರಿ ಇಂದಿಗೂ ಆರದಿರುವುದು ವಿಷಾದನೀಯ. ಸ್ವಾತಂತ್ರ್ಯೋತ್ತರದ ಭಾರತ: ೧೯೪೭ರಿಂದ ೧೯೫೦ ರವರೆಗೆ ಸಂವಿಧಾನವಿಲ್ಲದ ಕೇಂದ್ರ ಸರ್ಕಾರ ಜವಾಹರ್ ಲಾಲ್ ನೆಹರೂ ಅವರ ನೇತೃತ್ವದಲ್ಲಿ ರಚನೆಯಾಗಿ ಅಂದು ಕಾನೂನು ಮಂತ್ರಿಗಳಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿ ನೇಮಕವಾಗಿ ಸಂವಿಧಾನ ರಚನೆಯಾಗಿ ೧೯೫೦ನೇ ಜನವರಿ ೨೬ರಂದು ಭಾರತೀಯ ಸಂವಿಧಾನವನ್ನು ಜಾರಿಗೊಳಿಸಲಾಯಿತು.

ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ತತ್ವದಡಿಯ ಪಕ್ಷಾಧಾರಿತ ಪ್ರಜಾ ಪ್ರಭುತ್ವದ ಆಡಳಿತ ಸಂವಿಧಾನದ ಮೂಲಮಂತ್ರವಾಯಿತು. ಸ್ವಾತಂತ್ರ್ಯಕ್ಕೆ ಕಾರಣವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಪರಿವರ್ತನೆಯಾದುದರಿಂದ ಅಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಎಲ್ಲ ಪ್ರಮುಖರು ಕಾಂಗ್ರೆಸಿನವರೇ ಆದುದರಿಂದ ಸಹಜವಾಗಿ ಕಾಂಗ್ರೆಸ್ ಜನಮನ್ನಣೆ ಪಡೆದ ಬಲಾಢ್ಯ ಪಕ್ಷವಾಗಿತ್ತು. ನೆಹರೂ ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿಯವರು ಹೊರಬಂದು ೧೯೫೧ರಲ್ಲಿ ಜನಸಂಘವನ್ನು ಸ್ಥಾಪಿಸಿದರು.

ವಾಜಪೇಯಿ ಮತ್ತು ಅಡ್ವಾಣಿಯವರೂ ಕೂಡ ಅದರ ನಾಯಕರಾದರು. ಪ್ರಥಮ ಲೋಕಸಭೆಯ ೪೮೯ ಸ್ಥಾನಗಳಿಗೆ ೧೯೫೨ ಏಪ್ರಿಲ್‌ನಲ್ಲಿ ಚುನಾವಣೆಯಾಗಿ ಭಾಗವಹಿಸಿದ್ದ ೫೩ ಪಕ್ಷಗಳಲ್ಲಿ ೧೪ ರಾಷ್ಟ್ರೀಯ ಪಕ್ಷಗಳಾಗಿದ್ದವು. ಭಾರತದ ರಾಷ್ಟ್ರೀಯ ನ್ಯಾಷನಲ್ ಕಾಂಗ್ರೆಸ್, ಕಮ್ಯುನಿಷ್ಟ್ ಪಾರ್ಟಿ
ಆಫ್ ಇಂಡಿಯಾ, ಸ್ವತಂತ್ರ ಪಕ್ಷ, ಜನಸಂಘ ಇತ್ಯಾದಿ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ೩೬೯ ಸ್ಥಾನಗಳನ್ನು ಗೆದ್ದು, ಜವಾಹರಲಾಲ್ ನೆಹರೂ ದೇಶದ ಪ್ರಥಮ ಚುನಾಯಿತ ಪ್ರಧಾನಮಂತ್ರಿಗಳಾದರು.

ಅಂದೂ ಕೂಡ ಯಾವ ಪಕ್ಷವೂ ಸಹ ಅಧಿಕೃತ ವಿರೋಧ ಪಕ್ಷವಾಗುವಷ್ಟು ಸ್ಥಾನಗಳನ್ನು ಗಳಿಸಲಿಲ್ಲ. ೧೯೬೯ರಲ್ಲಿ ಕಾಂಗ್ರೆಸ್ ಇಬ್ಭಾಗವಾಗುವ
ತನಕವೂ ಅಧಿಕೃತ ವಿರೋಧ ಪಕ್ಷವೇ ಇರಲಿಲ್ಲ. ಅಷ್ಟರ ಮಟ್ಟಿಗೆ ಕಾಂಗ್ರೆಸ್ ತನ್ನ ಅಽಪತ್ಯವನ್ನು ಸಾಧಿಸಿತ್ತು. ಅಂದು ಲೋಕಸಭೆಗೆ ಆಯ್ಕೆಯಾದ ಬಹುಪಾಲು ಸದಸ್ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ತ್ಯಾಗ ಮಾಡಿದ್ದವರಾದ್ದರಿಂದ ಅವರುಗಳಲ್ಲಿ ದೇಶಪ್ರೇಮ ಮತ್ತು ಸಾಮಾಜಿಕ ಮೌಲ್ಯಗಳು ಮೈದುಂಬಿಕೊಂಡಿದ್ದವು.

ಸಚ್ಚಾರಿತ್ರ್ಯವುಳ್ಳ ದೇಶಪ್ರೇಮಿಗಳು ಸರ್ಕಾರದಲ್ಲಿದ್ದರು. ನೆಹರೂರವರು ಅಪ್ಪಟ ಪ್ರಜಾಪ್ರಭುತ್ವವಾದಿಯಾದುದರಿಂದ ಸರಿಯೆಂದ ವಿರೋಧ ಪಕ್ಷದ ಸದಸ್ಯರುಗಳಿಗೂ ಮನ್ನಣೆ ನೀಡಿ ಸಲಹೆಗಳನ್ನು ಪಾಲಿಸುತ್ತಿದ್ದರು. ಸರ್ಕಾರಕ್ಕೆ ದೇಶ ನಡೆಸುವುದು ಸುಲಭದ ಮಾತಾಗಿರಲಿಲ್ಲ. ದೇಶ ವಿಭಜನೆ ಸಮಯದಲ್ಲಿ ನಡೆದ ಧಾರ್ಮಿಕ ಹಿನ್ನೆಲೆಯ ಮಾರಣಹೋಮಗಳು, ಆರ್ಥಿಕ ಸಂಕಷ್ಟಗಳು ಮತ್ತು ಕಿತ್ತು ತಿನ್ನುವ ಬಡತನ, ಸುಮಾರು ೫೬೫ ಪ್ರಾಂತ್ಯಗಳಲ್ಲಿ ರಾಜರುಗಳ ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಭಾರತವನ್ನು ರಚಿಸುವಿಕೆ, ರಾಜ್ಯಗಳ ನಿರ್ಮಾಣ, ಅವುಗಳ ಚುನಾವಣೆ ಇವೆಲ್ಲವುಗಳು ಆಡಳಿತದ ಅನುಭವವೇ ಇಲ್ಲದ ಚಳವಳಿಯಿಂದ ಬಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದವು.

ಅನಂತರ ನಡೆದ ಪಾಕಿಸ್ತಾನ ಮತ್ತು ಚೈನಾ ಯುದ್ಧಗಳು ಮತ್ತಷ್ಟು ಹೊರೆಯಾದವು. ನೆಹರೂ ನೇತೃತ್ವದ ಅಂದಿನ ಕಾಂಗ್ರೆಸ್ ಪಕ್ಷ ಇವೆಲ್ಲವುಗಳನ್ನು
ಅಂದು ಇದ್ದ ಇತಿಮಿತಿಯೊಳಗೆ ಸಮರ್ಥವಾಗಿ ನಿರ್ವಹಿಸಿ ವೈಜ್ಞಾನಿಕ ತಳಹದಿಯ ಮೇಲೆ ಆಧುನಿಕ ಭಾರತದ ನಿರ್ಮಾಣಕ್ಕೆ ತಮ್ಮ ಹದಿನಾರೂವರೆ
ವರ್ಷಗಳ ಆಡಳಿತ ಅವಧಿಯಲ್ಲಿ ಭದ್ರವಾದ ಬುನಾದಿ ಹಾಕಿದ್ದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್ ಪಕ್ಷ ಮತ್ತು ನೆಹರೂ ಹಾಗೂ ಲಾಲ್ ಬಹದ್ದೂರ್ ಶಾಸಿ ಅವರ ನೇತೃತ್ವದ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಗಳು ಸಂವಿಧಾನದ ಆಶಯಗಳಿಗೆ ಮೌಲ್ಯಯುತವಾಗಿ ನಡೆದುಕೊಂಡು ಭಾರತದ ಹಿರಿಮೆ ಗರಿಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದು ಸರ್ವವೇದ್ಯ.

೧೯೬೯ರಲ್ಲಿ ಕಾಂಗ್ರೆಸ್ ಇಬ್ಭಾಗವಾಗುವವರೆವಿಗೆ ಕೇರಳವನ್ನು ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರವಿತ್ತು. ೧೯೫೭ರಲ್ಲಿ ಪ್ರಪ್ರಥಮ ಬಾರಿಗೆ ಕೇರಳದಲ್ಲಿ ಸಿಪಿಐ ನೇತೃತ್ವದ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂತು. ೧೯೬೯ರಲ್ಲಿ ಮದ್ರಾಸಿನಲ್ಲಿ ಅಣ್ಣಾದೊರೈ ಅವರ ನೇತೃತ್ವದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರದ ಏಕಪಕ್ಷೀಯ ಪ್ರಾದೇಶಿಕ ಪಕ್ಷದ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂತು.

ರಾಜಕೀಯ ಅರಿವು ಮೂಡಿಸಿದ ತುರ್ತು ಪರಿಸ್ಥಿತಿ: ೧೯೬೯ ರಲ್ಲಿ ಶ್ರೀಮತಿ ಇಂದಿರಾಗಾಂಽಯವರಿಂದಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕಾಂಗ್ರೆಸ್ (ಓ) ಮತ್ತು ಕಾಂಗ್ರೆಸ್ (ಆರ್) ಎಂದು ಇಬ್ಭಾಗವಾಗಿ ತದ ನಂತರ ಇಂದಿರಾಗಾಂಽ ಅವರ ನೇತೃತ್ವದ ಕಾಂಗ್ರೆಸ್ (ಆರ್) ಅವರದೇ ಹೆಸರಿನಲ್ಲಿ ಕಾಂಗ್ರೆಸ್ (ಐ) ಎಂದಾಯಿತು. ಮೂಲ ಕಾಂಗ್ರೆಸ್ಸಿನ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ವ್ಯಕ್ತಿ ಪೂಜೆ ಪ್ರಧಾನವಾದ ಕಾಂಗ್ರೆಸ್ ಐ ಸೃಷ್ಟಿಯಾಯಿತು. ತಮ್ಮ ಅಧಿಕಾರದ ಉಳಿವಿಗಾಗಿ ೧೯೭೫ ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಫಲವಾಗಿ ಅಷ್ಟೊಂದು ರಾಜಕೀಯ ಜಾಗೃತಿ ಅರಿವು ಇಲ್ಲದ ಸಮಾಜಗಳಲ್ಲೂ ಇಡೀ ರಾಷ್ಟ್ರದಲ್ಲಿ ರಾಜಕೀಯ ಮತ್ತು ಸಾಮಾಜಿಕ ಜಾಗೃತಿ ಸಾಮಾನ್ಯರಲ್ಲೂ ಮೊಳಕೆಯೊಡೆದು ಇಂದು ಹೆಮ್ಮರವಾಗಿ ಬೆಳೆದಿದೆ.

ಇದಕ್ಕಾದರೂ ಇಂದಿರಾಗಾಂಧಿಯವರಿಗೆ ದೇಶ ಕೃತಜ್ಞ ವಾಗಿರಬೇಕು! ಇದು ವಿರೋಧ ಪಕ್ಷಗಳ ಒಗ್ಗಟ್ಟಿಗೂ ನಾಂದಿಯಾಗಿ ಬಹುಪಾಲು ವಿರೋಧ ಪಕ್ಷಗಳ ಸಮ್ಮಿಶ್ರಣದಿಂದ ೧೯೭೭ರಲ್ಲಿ ಜನತಾ ದಳ ಅಸ್ತಿತ್ವಕ್ಕೆ ಬಂದು ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ಸೇತರದ ಜನತಾದಳದ ಸಮ್ಮಿಶ್ರ ಸರ್ಕಾರ ಮೊರಾರ್ಜಿಯವರ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಈ ಪ್ರಯೋಗ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರಗಳ ಮತ್ತು ಪ್ರಾದೇಶಿಕ ಪಕ್ಷಗಳ ಉಗಮಕ್ಕೆ ನಾಂದಿಯಾಯಿತು.

ನಾಯಿಕೊಡೆಗಳಂತೆ ಬೆಳೆದ ರಾಜಕೀಯ ಪಕ್ಷಗಳು ಇಂದು ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ೨೮೫೮ ರಾಜಕೀಯ ಪಕ್ಷಗಳಿದ್ದು, ಅವುಗಳಲ್ಲಿ ೮ ರಾಷ್ಟ್ರೀಯ ಮತ್ತು ೫೪ ರಾಜ್ಯ ಪಕ್ಷಗಳಾಗಿದ್ದು, ಇನ್ನುಳಿದವು ಮನ್ನಣೆ ಪಡೆಯದವುಗಳಾಗಿವೆ. ಇಂದು ಇರುವ ಬಹುಪಾಲು ರಾಜಕೀಯ ಪಕ್ಷಗಳು ವೈಯಕ್ತಿಕ ಪ್ರತಿಷ್ಠೆ, ಸ್ವಾರ್ಥ, ಜಾತಿ, ಧರ್ಮ, ಭಾಷೆ, ಅಧಿಕಾರದ ಆಸೆಗಳ ಹಿನ್ನೆಲೆಯಲ್ಲಿಯೇ ಸ್ಥಾಪಿತವಾಗಿರುವ ಪಕ್ಷಗಳಾಗಿದ್ದು, ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಪಕ್ಷಗಳಾಗಿವೆ. ಪಕ್ಷ ಪಕ್ಷಗಳ ನಡುವೆ ವೈಯಕ್ತಿಕ ದ್ವೇಷ ಅಸೂಯೆಗಳೇ ಮಾನದಂಡಗಳಾಗಿ ಭ್ರಷ್ಟಾಚಾರದಿಂದ ಅಧಿಕಾರ ಹಿಡಿದು ಹಣ ಸಂಪಾದಿಸಿ ಮತ್ತೊಮ್ಮೆ ಅಧಿಕಾರ ಹಿಡಿಯುವ ವಿಷವೃತ್ತಕ್ಕೆ ಬಲಿಯಾಗದಿರುವ ಪಕ್ಷ ಇಂದು ನಮ್ಮಲ್ಲಿಲ್ಲ. ಮತದಾರ ಇವೆಲ್ಲವುಗಳನ್ನು ಆತ್ಮಾವಲೋಕನ ಮಾಡಿಕೊಂಡು ರಾಜಕೀಯ ಪಕ್ಷಗಳಿಗೆ ಪರಿವರ್ತನೆಯಾಗುವಂತೆ ಬುದ್ಧಿ ಕಲಿಸದ ಹೊರತು ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ.

error: Content is protected !!