Thursday, 30th November 2023

ಅನಾಥ ಪತ್ರಗಳ ಅಂತ್ಯಸಂಸ್ಕಾರದ ಕಥೆ ಗೊತ್ತೇ?!

ಯಾವುದೇ ಪೌರಾಣಿಕ ಯಕ್ಷಗಾನ/ ನಾಟಕವನ್ನು ನೋಡಿದರೆ, ಕಥೆಗಳನ್ನು ಓದಿದರೆ, ಅದರಲ್ಲಿ ಒಬ್ಬ ರಾಜ ಇನ್ನೊಬ್ಬ ರಾಜನಿಗೆ ದೂತನ ಮೂಲಕ ಪತ್ರ ಕಳಿಸುವುದು ಇದ್ದೇ ಇರುತ್ತದೆ. ಪತ್ರವು ಒಂದೋ ಹೊಸ ಸಂಬಂಧಕ್ಕೆ, ಇಲ್ಲವೇ ಯುದ್ಧಕ್ಕೆ ನೀಡಿದ ಪಂಥಾಹ್ವಾನವಾಗಿರುತ್ತದೆ. ಪತ್ರದಿಂದಲೇ ಅದೆಷ್ಟೋ ಕಥೆಗಳು, ಇತಿಹಾಸ ಶುರುವಾಗುವುದು. ಪತ್ರಗಳೇ ಅದೆಷ್ಟೋ ರಾಜಮನೆತನದ ಅಂತ್ಯಕ್ಕೆ ನಾಂದಿಯಾಗುವುದು. ರಾಮಾಯಣ, ಮಹಾಭಾರತದಲ್ಲಿ ಮಾತ್ರವಲ್ಲದೆ ಆಧುನಿಕ ಇತಿಹಾಸದಲ್ಲೂ ಪತ್ರಗಳಿಗೆ ವಿಶೇಷ ಸ್ಥಾನವಿದೆ. ೬೦-೯೦ರ ದಶಕದ ಇಂಗ್ಲಿಷ್ ಕಾದಂಬರಿಗಳಲ್ಲಿ, ನಂತರದ ಚಲನಚಿತ್ರಗಳಲ್ಲಿ ಪತ್ರಗಳಿಗೆ ಮುಖ್ಯಪಾತ್ರ ಇದ್ದೇ ಇರುತ್ತಿತ್ತು. ಯಶವಂತ ಚಿತ್ತಾಲರ ಎಷ್ಟೋ ಕಥೆಗಳಲ್ಲಿ ತಲುಪದ ಪತ್ರಗಳೇ ಮುಖ್ಯಎಳೆಯ ಮೂಲಧಾತು. ಈ ತಲುಪದ ಪತ್ರಗಳು ಅದ್ಯಾರೋ ಇಬ್ಬರ ನಡುವೆ ನಡೆಯದೆ ಹೋದ ಒಂದು ಅಪೂರ್ಣ ಸಂವಹನ. ನಿಜವಾದ ಕಮ್ಯುನಿಕೇಶನ್ ಗ್ಯಾಪ್. ಕಳುಹಿಸಿದಾತ ತಾನು ಹೇಳಿದ್ದೇನೆ ಅಂದುಕೊಂಡುಬಿಟ್ಟಿರುತ್ತಾನೆ, ಆದರೆ ಇನ್ನೊಬ್ಬನಿಗೆ ಆ ವಿಷಯವೇ ಮುಟ್ಟಿರುವುದಿಲ್ಲ. ಪ್ರತಿ ಪತ್ರವೂ ಬದುಕಿನ ಇತಿಹಾಸದ ಭಾಗ, ಅಂತೆಯೇ ಈ ತಲುಪದ ಪತ್ರಗಳೂ. ಅದರಲ್ಲಿ ಅದೆಷ್ಟೋ ವೈಯಕ್ತಿಕ ವಿಚಾರಗಳು, ಕನವರಿಕೆಗಳು, ಪ್ರೀತಿ, ಹುಸಿಮುನಿಸು ಅಕ್ಷರವಾಗಿರುತ್ತದೆ. ಅವು ವಿಳಾಸ ಸರಿಯಿಲ್ಲದ್ದರಿಂದ ಅಥವಾ ಪಡೆಯುವವರು ವಿಳಾಸ ಬದಲಿಸಿದ್ದರಿಂದ ಹೀಗೆ ನಾನಾ ಕಾರಣದಿಂದ ಹೋಗಿ ಮುಟ್ಟುವುದಿಲ್ಲ. ಕೆಲವೊಮ್ಮೆ ಸೂಕ್ತ ಮೊತ್ತದ ಸ್ಟ್ಯಾಂಪ್ ಅಂಟಿಸಿಲ್ಲದಿದ್ದರೆ ಪತ್ರ ಸ್ವೀಕರಿಸುವವರಿಂದ ಆ ಹಣ ಪಡೆವ ಪದ್ಧತಿ ಇದೆಯಲ್ಲ. ಇಂಥ ಅದೆಷ್ಟೋ ಅಸ್ವೀಕೃತ ಪತ್ರಗಳಿಗೆ ಹಲವು ಬಾರಿ ಪರತ್ ವಿಳಾಸವಿರುವುದಿಲ್ಲ.

ತ್ರಿಶಂಕು ಸ್ಥಿತಿಯ ಇವನ್ನು ‘ಡೆಡ್ ಲೆಟರ್ಸ್’, ಸತ್ತ ಅಥವಾ ಅನಾಥ ಪತ್ರಗಳು ಎನ್ನುವುದುಂಟು. ಇಂಗ್ಲೆಂಡ್, ಅಮೆರಿಕದಲ್ಲೆಲ್ಲ ನಮ್ಮಲ್ಲಿಗಿಂತ ಮೊದಲೇ ಪೋಸ್ಟಲ್ ವ್ಯವಸ್ಥೆ ಒಂದಿಷ್ಟು ಅಭಿವೃದ್ಧಿಯಾಗಿತ್ತು. ನಾನು
ಹೇಳುತ್ತಿರುವುದು ಇತ್ತೀಚಿನ ಇತಿಹಾಸ. ಆಧುನಿಕ ಪೋಸ್ಟಲ್ ವ್ಯವಸ್ಥೆಯ ಕಲ್ಪನೆಗಿಂತ ಮೊದಲೇ ಈಜಿಪ್ಟ್, ರೋಮ್ ಮತ್ತು ಭಾರತದಲ್ಲಿ ಪತ್ರವ್ಯವಹಾರಗಳಿಗೆ ಬೇಕಾದ ವ್ಯವಸ್ಥೆಯಿತ್ತು. ಆದರೆ ಅವೆಲ್ಲ ಸಾಮಾನ್ಯರಿಗೆ ಲಭ್ಯವಾಗುವಂತಿದ್ದಿರಲಿಕ್ಕಿಲ್ಲ. ಅಮೆರಿಕ, ಇಂಗ್ಲೆಂಡ್ ಇಲ್ಲೆಲ್ಲ ಪೋಸ್ಟ್ ವ್ಯವಸ್ಥೆ ಶುರುವಾದ ಹೊಸತಿನಲ್ಲಿ ಪತ್ರವನ್ನು ಪಡೆಯುವವರೇ ಸ್ಟ್ಯಾಂಪ್ ಹಣ ಕೊಡಬೇಕಾಗಿತ್ತು. ಇದೊಂದು ಒಳ್ಳೆಯ ಬ್ಯುಸಿನೆಸ್ ಮಾಡೆಲ್. ಪತ್ರಗಳೆಂದರೆ ಅದು ಪಡೆವವನ ಅವಶ್ಯಕತೆ ಎಂದು ಪರಿಗಣಿಸಲಾಗುತ್ತಿತ್ತು. ಅಲ್ಲದೆ ಕಳುಹಿಸುವವರಿಗೆ ಬದಲಾಗಿ ಸ್ವೀಕರಿಸುವವರಿಗೆ ಸ್ಟ್ಯಾಂಪ್ ವೆಚ್ಚ ವಿಧಿಸುವ ಪೋಸ್ಟಲ್ ವ್ಯವಸ್ಥೆಯಲ್ಲಿ ಕಳುಹಿಸುವವರು ಜಾಸ್ತಿ ಯೋಚಿಸ ಬೇಕಾಗಿಲ್ಲವಲ್ಲ. ೧೮೦೦ರ ಕಾಲದಲ್ಲಿ ಅಮೆರಿಕ, ಯುರೋಪ್‌ಗಳಲ್ಲಿ ಪೋಸ್ಟಲ್ ವ್ಯವಸ್ಥೆ ಅತ್ಯುತ್ತಮವಾಗಿ ಸಾಗುತ್ತಿತ್ತು. ಪತ್ರ ಬರೆವವರು ಯಾವುದೇ ಹಣ ತೆರದೆ ಪತ್ರವನ್ನು ಕಳುಹಿಸುತ್ತಿದ್ದರು.

ಇದು ವ್ಯಾವಹಾರಿಕವಾಗಿ ಸರಿಯಿತ್ತು. ಹೀಗೆ ಕಳುಹಿಸುವ ಪತ್ರಗಳು ಅಸ್ವೀಕೃತವಾದಲ್ಲಿ ಕಳುಹಿಸಿದ ವಿಳಾಸಕ್ಕೆ ಮರಳಿಸಿದಾಗ, ಕಳುಹಿಸಿದಾತ ದುಪ್ಪಟ್ಟು ಸ್ಟ್ಯಾಂಪ್ ವೆಚ್ಚ ಕೊಡ ಬೇಕಾಗಿತ್ತು. ಇದರಿಂದಾಗಿ ಕ್ರಮೇಣ ರಿಟರ್ನ್ ಅಡ್ರೆಸ್ ಹಾಕದೆಯೇ ಜನ ಪತ್ರ ಕಳುಹಿಸಲು ಶುರುಮಾಡಿದರು. ಹೋಗಿ ಮುಟ್ಟಿದರೆ ಸರಿ, ಇಲ್ಲದಿದ್ದರೆ ಇಲ್ಲ! ಹೀಗೆ ಪರತ್ ವಿಳಾಸವಿಲ್ಲದ, ತಲುಪದ ಪತ್ರಗಳು ಮೊದಲೆಲ್ಲ ಅಷ್ಟು ಸಂಖ್ಯೆ ಯಲ್ಲಿರುತ್ತಿರಲಿಲ್ಲ. ಯಾವುದೇ ವ್ಯವಹಾರವಿರಲಿ, ಅದರಲ್ಲಿ ನಷ್ಟದ ಒಂದು ಭಾಗ ಇದ್ದೇ ಇರುತ್ತದೆ. ಆಧುನಿಕ ಹೈನುಗಾರಿಕೆಯಲ್ಲಿ ಗಂಡುಕರು ಹುಟ್ಟುವುದು, ಹೋಟೆಲ್‌ನಲ್ಲಿ ಹೆಚ್ಚುವರಿಯಾದ ಆಹಾರ ಇತ್ಯಾದಿ. ಎಲ್ಲಾ ವ್ಯವಹಾರದಲ್ಲೂ ಹೀಗೆ ನಷ್ಟವಾಗುವ ಪ್ರಮಾಣ ತಗ್ಗಿಸಿ ಹೊಂದಿಸಿಕೊಂಡು ಹೋಗಬೇಕು. ಇದನ್ನು ವ್ಯವಹಾರದ ಭಾಷೆಯಲ್ಲಿ ‘ನಷ್ಟದಲ್ಲಿರುವ ಘಟಕ’ ಎನ್ನುತ್ತಾರೆ. ೧೭೦೦-೧೮೦೦ರ ಪೋಸ್ಟಲ್ ವ್ಯವಸ್ಥೆಯಲ್ಲಿ
ಈ ತಲುಪದ ಪತ್ರಗಳು ಹೆಚ್ಚಿನ ನಷ್ಟಕ್ಕೆ ಕಾರಣವಾಗುತ್ತಿದ್ದವು.

ಹಾಗಂತ, ಕಳುಹಿಸುವವರೇ ಹಣ ಪಾವತಿಸುವಂತೆ ಬದಲಿಸಿದರೆ, ಪತ್ರ ಕಳುಹಿಸುವವರ ಸಂಖ್ಯೆ ತಗ್ಗುವ ಸಾಧ್ಯತೆ. ಹಾಗಾಗಿ ಪದ್ಧತಿ ಬದಲಿಸುವುದು ಸುಲಭವಿರಲಿಲ್ಲ. ಆದರೆ ಕಾಲ ಕ್ರಮೇಣ ಅನಾಥ ಪತ್ರಗಳಿಂದಾಗಿ ಪೋಸ್ಟಲ್ ವ್ಯವಸ್ಥೆಗೆ ಆಗುತ್ತಿದ್ದ ನಷ್ಟ ಹೆಚ್ಚುತ್ತಲೇ ಹೋಯಿತು. ಅದು ಇನ್ನಷ್ಟು ತೀವ್ರವಾಗಿದ್ದು ಆಧುನಿಕ ಮುದ್ರಣ ಯಂತ್ರಗಳು ಬಂದು ಮುದ್ರಿಸುವಿಕೆ ಅಗ್ಗವಾದಾಗ. ಯಾವಾಗ ಕಂಪ್ಯೂಟರ್ ಬಳಸಿ ಪತ್ರ ಮುದ್ರಿಸುವ ವ್ಯವಸ್ಥೆಯಾಯಿತೋ, ಆಗ ಅಮೆರಿಕದಲ್ಲಿ ಕಂಪನಿ, ಅಂಗಡಿ, ಹೋಟೆಲ್ಲುಗಳು ಜಾಹೀರಾತನ್ನು ಮುದ್ರಿಸಿ ಪೋಸ್ಟ್ ಮೂಲಕ ಜನರಿಗೆ ಕಳುಹಿಸಲು ಶುರುಮಾಡಿದವು. ಈ ವ್ಯಾಪಾರಸ್ಥರು ಜಾಹೀರಾತನ್ನು ಪುಕ್ಸಟ್ಟೆ ಕಳುಹಿಸುತ್ತಿದ್ದರು. ಜನರು ಅದನ್ನು ದುಡ್ಡು ಕೊಟ್ಟು ಪಡೆಯಬೇಕಾಗಿತ್ತು. ಇದರಿಂದ ಕಿರಿಕಿರಿಯಾಗಿ ಜನರು ಕ್ರಮೇಣ ಪತ್ರ ಸ್ವೀಕರಿಸಲು ಹಿಂಜರಿಯತೊಡಗಿದರು. ಮೊದಲೆಲ್ಲ ವಿಳಾಸ ಸರಿಯಿಲ್ಲದಿದ್ದರೆ ಅಥವಾ ವಿಳಾಸದಲ್ಲಿ ಆ ವ್ಯಕ್ತಿಯಿಲ್ಲದಿದ್ದರೆ ಮಾತ್ರ ಪತ್ರ ಅಸ್ವೀಕೃತವಾಗುತ್ತಿದ್ದರೆ, ಈಗ ಜನರೇ ತಮಗೆ ಬಂದ ಪತ್ರಗಳನ್ನು ತಿರಸ್ಕರಿಸಲು ಶುರುಮಾಡಿದರು. ಇಂಥ ಸ್ಥಿತಿಯಲ್ಲಿ ಕಳುಹಿಸುವವರೇ ಹಣ ಪಾವತಿಸುವಂತೆ ಅನಿವಾರ್ಯವಾಗಿ ವ್ಯವಸ್ಥೆಯನ್ನು ಬದಲಿಸಬೇಕಾಯಿತು. ಜತೆಗೆ, ಪತ್ರ ತಲುಪಿ ಸಲಿಕ್ಕೆ ಮುಂಗಡಹಣ ಪಡೆಯುವುದರಿಂದ ತಲುಪಿಸಲೇಬೇಕಾದ ಹೊಣೆಗಾರಿಕೆ ಅಂಚೆ ವ್ಯವಸ್ಥೆಯ ಹೆಗಲೇರಿತು.

ವಿಳಾಸ ಸರಿಯಿದ್ದರೆ ತಲುಪಿಸುವುದು ದೊಡ್ಡ ವಿಷಯವಲ್ಲ. ಸರಿಯಿಲ್ಲದಿದ್ದರೆ ಕಳುಹಿಸಿದವರಿಗೆ ಮರಳಿಸುವುದು. ಆದರೆ ರಿಟರ್ನ್ ವಿಳಾಸವಿರದ ಅನಾಥ ಪತ್ರವನ್ನು ಮಾಡುವುದೇನು? ಮುಂಗಡಹಣ ಪಡೆದದ್ದರಿಂದ ತಲುಪಿಸಬೇಕಾದ ಹೊಣೆ ಅಂಚೆ ಇಲಾಖೆಯ ಮೇಲೆ. ಹರಿದು ಹಾಕುವಂತೆಯೂ ಇಲ್ಲ, ಏಕೆಂದರೆ ಪತ್ರಗಳು ಅಂಚೆಕಚೇರಿಯ ಸ್ವತ್ತಲ್ಲ, ಅದನ್ನು ಹೊತ್ತೊಯ್ದು ಮುಟ್ಟಿಸುವುದಷ್ಟೇ ಅದರ ಕೆಲಸ. ಅಂಚೆ ವ್ಯವಸ್ಥೆಯನ್ನು ಹೆಚ್ಚೆಚ್ಚು ಜನ ಬಳಸಲು ಶುರುಮಾಡಿದಾಗಿನಿಂದ ಈ ಅಸ್ವೀಕೃತ ಪತ್ರಗಳದ್ದೇ ತಲೆನೋವಾಯಿತು. ಅನಾಥ ಪತ್ರಗಳು ಅಂಚೆಕಚೇರಿಗಳಲ್ಲಿ ರಾಶಿ ಬೀಳತೊಡಗಿ ದವು. ಈ ವ್ಯವಸ್ಥೆಯ ಆರಂಭದಿಂದಲೂ ಅಸ್ವೀಕೃತ ಪತ್ರಗಳ ತಾಪತ್ರಯವಿದ್ದರೂ, ಅವನ್ನು ಸ್ಥಳೀಯ ಅಂಚೆ ಕಚೇರಿಯಲ್ಲಿ ಒಂದಿಷ್ಟು ಕಾಲ ಇಡಲು ಜಾಗವಿರುತ್ತಿತ್ತು. ಯುರೋಪ್, ಅಮೆರಿಕದಲ್ಲಿ ೧೮೦೦ರ ಆಸುಪಾಸಿನಲ್ಲಿ ಅಸ್ವೀಕೃತ ಪತ್ರಗಳ ವಿಲೇವಾರಿಗೆಂದೇ ಪ್ರತ್ಯೇಕ ವ್ಯವಸ್ಥೆ ನಿರ್ಮಿಸಲಾಗಿತ್ತು. ಭಾರತದಲ್ಲೂ ಅನಾಥ ಪತ್ರಗಳ ನಿಭಾವಣೆಗೆ ೧೮೩೭ರಲ್ಲೇ Dead Letter Office/ Returned Letter Office (ಆರ್‌ಎಲ್‌ಒ) ತೆರೆಯಲಾಗಿತ್ತು. ಆದರೆ ಆ ಕಾಲ ದಲ್ಲಿ ಅಷ್ಟು ಪ್ರಮಾಣದ ಪತ್ರವ್ಯವಹಾರ ಇರಲಿಲ್ಲ. ಹಾಗಾಗಿ ಇದೆಲ್ಲವನ್ನು ನಿಭಾಯಿಸಲಿಕ್ಕೆ ಇದ್ದ ಅಂಚೆ ಸಿಬ್ಬಂದಿ ಸಾಕಾಗುತ್ತಿತ್ತು. ಆದರೆ ಅದೆಲ್ಲ ಭಾರತದಲ್ಲಿ ಬದಲಾದದ್ದು ಸ್ವಾತಂತ್ರ್ಯಾ ನಂತರ.

ಅನಾಥ ಪತ್ರಗಳ ಸಂಖ್ಯೆ ಒಂದು ಕಾಲದಲ್ಲಿ ಶೇ.೩೦ರಷ್ಟು ಇತ್ತು ಎನ್ನುವ ಊಹೆ. ಮೊದಲೆಲ್ಲ ಕೆಲವೇ ನೂರರಷ್ಟು ಅಸ್ವೀಕೃತ ಪತ್ರಗಳಿದ್ದಾಗ ನಿಭಾಯಿಸಲು ಕೆಲವೇ ಸಿಬ್ಬಂದಿ, ಚಿಕ್ಕಜಾಗ ಸಾಕಿತ್ತು. ಕಾಲ ಕಳೆದಂತೆ, ಅಂಚೆ ವ್ಯವಸ್ಥೆಯ ಬಳಕೆ ಹೆಚ್ಚಿದಂತೆ, ಇದೆಲ್ಲವನ್ನು ನಿಭಾಯಿಸಲಿಕ್ಕೆ ಪ್ರತ್ಯೇಕ ವ್ಯವಸ್ಥೆ, ಸಿಬ್ಬಂದಿ, ಕಟ್ಟಡ ಅನಿವಾರ್ಯವಾದವು. ಇದೆಲ್ಲದರಿಂದ ನಯಾಪೈಸೆ ಲಾಭವಿರಲಿಲ್ಲ, ಬದಲಿಗೆ ನಷ್ಟ! ನಮ್ಮಲ್ಲಿನ ಆಧುನಿಕ ಅಂಚೆ ವ್ಯವಸ್ಥೆ ಬ್ರಿಟಿಷರ ಬಳುವಳಿ. ಅವರು ನಿರ್ಮಿಸಿಟ್ಟು ಹೋದ ವ್ಯವಸ್ಥೆಯನ್ನೇ ನಾವು ಮುಂದುವರಿಸಿದ್ದು. ೧೮೩೭ರ ೧೬ನೇ ಅಧಿನಿಯಮದಂತೆ, ಪರತ್ ವಿಳಾಸವಿಲ್ಲದ ಅನಾಥ ಪತ್ರಗಳನ್ನು ಅದೇ ಅಂಚೆ
ಕಚೇರಿಯಲ್ಲಿ ೩ ತಿಂಗಳು ಇಡಬೇಕು. ಅಂಚೆ ಕಚೇರಿಗೆ ಹೋಗಿ, ಸರಿಯಾದ ವಿಳಾಸದ ಕಾಗದಪತ್ರ ತೋರಿಸಿ ಪತ್ರವನ್ನು ಪಡೆಯಲು ಅಷ್ಟು ಕಾಲಾವಕಾಶ. ನಂತರ ಅದನ್ನು ಜಿಪಿಒ (ಜನರಲ್ ಪೋಸ್ಟ್ ಆಫೀಸ್) ಮುಖ್ಯ ಕಚೇರಿಗೆ ಕಳುಹಿಸಬೇಕು. ಮೊದಲೆಲ್ಲ ಇಂಥ ವಿಲೇವಾರಿಯಾಗದ ಪತ್ರಗಳ ವಿವರ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾಗುತ್ತಿತ್ತು. ಜಿಪಿಒನಲ್ಲಿ ಇಂಥ ಅನಾಥ ಪತ್ರಗಳನ್ನು ಸುಮಾರು ೧೮ ತಿಂಗಳು ಇಡಲಾಗುತ್ತದೆ. ಈ ಸಮಯದಲ್ಲಿ ಕೆಲವರು ಅಧಿಕೃತ ಗೆಜೆಟ್ ನೋಡಿ ಬಂದು ಪತ್ರ ಪಡೆಯಲು ಅವಕಾಶವಿದೆ. ಆದರೆ ಎಷ್ಟು ಮಂದಿ ಅದನ್ನು ನೋಡಿ, ಹುಡುಕಿ ಪತ್ರವನ್ನು ಪಡೆದಾರು? ಅಷ್ಟು ಸಮಯದ ನಂತರ ಈ ಪತ್ರ ತೆರೆದು ನೋಡಲು ಪೋಸ್ಟ್ ಮಾಸ್ಟರ್‌ಗೆ ಅನುಮತಿಸಲಾಗಿತ್ತು.

ಅವರು, ಸಿಬ್ಬಂದಿ ಪತ್ರದ ವಿವರ ಓದುವಂತಿಲ್ಲ. ಬದಲಿಗೆ ಒಳಗೆ ಯಾವುದಾದರು ವಿಳಾಸವಿದೆಯೇ ಎಂದು ನೋಡಬಹುದು. ಅಲ್ಲಿ ಇನ್ನೊಂದು ವಿಳಾಸ ಸಿಕ್ಕರೆ ಅಲ್ಲಿಗೆ ಕಳುಹಿಸುವ ಪ್ರಯತ್ನವಾಗುತ್ತದೆ. ಏನೂ ವಿವರ ಸಿಗದಿದ್ದಲ್ಲಿ, ಇನ್ನೊಂದು ವರ್ಷ ಕಾದು ನಂತರ ಆ ಪತ್ರವನ್ನು ನಾಶಮಾಡಲಾಗುತ್ತದೆ. ಈ ಪದ್ಧತಿ ತೀರಾ ಇತ್ತೀಚಿನವರೆಗೂ ಬದಲಾಗದೇ ನಡೆದುಕೊಂಡು ಬಂದಿದೆ. ಬಹುಶಃ ಕೆಲವು ದಶಕದಿಂದೀಚೆ ರಾಜ್ಯ ಪತ್ರಗಳಲ್ಲಿ ಈ ಅನಾಥ ಪತ್ರಗಳನ್ನು ನಮೂದಿಸುವುದು ನಿಂತಿರಬಹುದು. ಡಿಸೆಂಬರ್ ೨೦೧೯ರ ನಂತರ ಈ ರಾಜ್ಯಪತ್ರಗಳು ಕೂಡ ನಿಂತುಹೋದಂತಿದೆ. ಕರ್ನಾಟಕದ ಸರಕಾರಿ ಜಾಲ ತಾಣದಲ್ಲಿ ನಂತರದ ತಿಂಗಳುಗಳ ಗೆಜೆಟ್ ಸಿಗುವುದಿಲ್ಲ. ಹೀಗೆ ಇಷ್ಟೆಲ್ಲಾ ಕಾದ ನಂತರವೂ ವಾರಸುದಾರರಿಲ್ಲದ, ಅನಾಥ ವಾಗಿಯೇ ಉಳಿವ ಪತ್ರಗಳನ್ನು ನಾಶಮಾಡುವ ವ್ಯವಸ್ಥೆ. ಈ ಪದ್ಧತಿ ಇಂದಿಗೂ ನಡೆದುಬಂದಿದೆ. ಇದೆಲ್ಲ ಪತ್ರಗಳ ಕಥೆಯಾಯಿತು. ಅದರ ಜತೆ ಅನಾಥ ಪಾರ್ಸೆಲ್‌ಗಳೂ ಇರುತ್ತವೆ. ಅವನ್ನು ಏನು ಮಾಡುವುದು? ಅವುಗಳಲ್ಲಿ ಬೆಲೆಬಾಳುವ ವಸ್ತುಗಳಿರುತ್ತವೆ. ಬ್ರಿಟಿಷರು ಅಂಥ ಅಸ್ವೀಕೃತ ವಸ್ತುಗಳನ್ನು ಸರಕಾರಿ ಸ್ವತ್ತು ಎಂದು ಪರಿಗಣಿಸುತ್ತಿದ್ದರು. ಅದೇ ಪದ್ಧತಿ ಇಂದಿಗೂ ಮುಂದುವರಿದಿದೆ. ಅಂಥ ಬೆಲೆಬಾಳುವ ವಸ್ತುಗಳನ್ನು ಹರಾಜು ಹಾಕಿ ಆ ಹಣವನ್ನು ಸರಕಾರಕ್ಕೆ ಮುಟ್ಟಿಸುವ ವ್ಯವಸ್ಥೆ.

ಫುಟ್ಬಾಲ್ ದಂತಕಥೆ ಪೀಲೆ ಬಗ್ಗೆ ಕೇಳಿರುತ್ತೀರಿ. ಆತನಿಗೆ ಪತ್ರ ಬರೆಯಬೇಕೆಂದರೆ ಲಕೋಟೆಯ ಮೇಲೆ ‘ಪೀಲೆ, ಬ್ರೆಜಿಲ್’ ಎಂದಷ್ಟೇ ಬರೆದಿದ್ದರೆ ಸಾಕಿತ್ತಂತೆ, ಅದು ಅವನಿಗೇ ತಲುಪುತ್ತಿತ್ತಂತೆ. ಆತ ಅಷ್ಟು ಪ್ರಸಿದ್ಧ ಎಂದು ಹೇಳಲಿಕ್ಕೋಸ್ಕರ ಈ ಕಥೆ ಹುಟ್ಟಿಕೊಂಡದ್ದಿರಬೇಕು, ಇರಲಿ. ಮುಂದುವರಿದ ರಾಷ್ಟ್ರಗಳಲ್ಲಿ, ಅದರಲ್ಲೂ ಅಮೆರಿಕ, ಯುರೋಪ್‌ನಲ್ಲಿ ಅನಾಥ ಪತ್ರಗಳ ತಾಪತ್ರಯ ನಿಭಾಯಿಸಲು ವಿಳಾಸವನ್ನು ಸರಳೀಕರಿಸುವ ಕೆಲಸ ನಡೆಯಿತು- ಹೆಸರು, ಮನೆ ನಂಬರ್, ರಸ್ತೆಯ ಹೆಸರು, ಊರು, ಜಿಪ್ ಕೋಡ್. ಇಂದು ಅಮೆರಿಕದ ಎಲ್ಲರ ವಿಳಾಸ ಇರುವುದು ಇಷ್ಟೇ. ಮನೆಯಿರಲಿ, ಅಪಾರ್ಟ್ ಮೆಂಟ್ ಇರಲಿ, ವಿಳಾಸ ಎರಡೇ ಸಾಲು. ನಮ್ಮಲ್ಲಿ ಹಾಗಲ್ಲ. ದುರ್ಲಭ್ ದಾಸ್, o/ಟ ಅನಾಮಿಕ ದಾಸ್, ಅಜ್ಞಾತ ನಿಲಯ, ಮನೆ ನಂಬರ್ ೧೦, ೮ನೇ ಅಡ್ಡರಸ್ತೆ, ೩ನೇ ಮುಖ್ಯ ರಸ್ತೆ, ಮಾರಮ್ಮನ ಗುಡಿ ಹತ್ತಿರ, ದುರ್ಗಾ ಮೆಡಿಕಲ್ಸ್ ಎದುರು, ಮಿಣಿಮಿಣಿ ಓಣಿ, ರಾಜೇಶ್ ನಗರ, ಬೆಂಗಳೂರು, ಕರ್ನಾಟಕ ೫೬೦೦೦೧- ಇಷ್ಟುದ್ದದ ವಿಳಾಸ ನಮ್ಮಲ್ಲಿ ಸಾಮಾನ್ಯ. ಕೆಲ ವೊಮ್ಮೆ ಊರಿನ ಜತೆ ಆ ಊರಿಗೆ ಮಾರ್ಗಮಧ್ಯದಲ್ಲಿ ಸಿಗುವ ಊರನ್ನು ‘via’ ಎಂದು ಬರೆಯುವುದೂ ಇದೆ. ನಮ್ಮೆಲ್ಲರ ವಿಳಾಸ ಅಂಚೆ ಪೇದೆಗೆ ಮನೆಯ ದಾರಿ ಹೇಳಿದಂತೆ ಇರುತ್ತದೆ.

ಆತ ದಾರಿ ತಪ್ಪಿದರೆ ಪತ್ರ ತಲುಪುವುದೇ ಇಲ್ಲ. ಅದಲ್ಲದೆ ಸಾಮಾನ್ಯವಾಗಿ ತಮ್ಮ ವಿಳಾಸ ಬದಲಿಸಿದವರು ಅಂಚೆ ಕಚೇರಿಗೆ ಹೋಗಿ ತಮ್ಮ ಹೊಸ ವಿಳಾಸ ನಮೂದಿಸುವುದು ಕೂಡ ಕಡಿಮೆ. ಇದೆಲ್ಲ ಕಾರಣಕ್ಕೆ ನಮ್ಮಲ್ಲಿ ಈ ತಲುಪದ ಪತ್ರಗಳ ಸಂಖ್ಯೆ ಜಾಸ್ತಿ. ನೀವೀಗ ೪೦-೫೦ ದಾಟಿದವರಾದರೆ ನಿಮ್ಮ ಬದುಕಿನಲ್ಲಿ ಪತ್ರಕ್ಕೆ ಸಂಬಂಧಿಸಿ- ಅಪಾಯಿಂಟ್ಮೆಂಟ್ ಲೆಟರ್ ತಡವಾಗಿ ಬಂದದ್ದು, ಅಡ್ಮಿಷನ್ ಲೆಟರ್ ಬಾರದೇ ಹೋದದ್ದು ಇತ್ಯಾದಿ- ಒಂದಾದರೂ ಕಥೆ ಇದ್ದೇ ಇರುತ್ತದೆ. ಅನಾಥ ಪತ್ರಗಳ ತಲೆನೋವು ಎಲ್ಲ ದೇಶದ ಅಂಚೆ ವ್ಯವಸ್ಥೆಯಲ್ಲೂ ಇದ್ದದ್ದೇ. ಇದನ್ನು ಸಂಪೂರ್ಣ ತಪ್ಪಿಸಲು ಸಾಧ್ಯ ವಿಲ್ಲದಿದ್ದರೂ ವಿಳಾಸವನ್ನು ‘ಸ್ಟಾಂಡರ್ಡೈಜ್’ ಮಾಡುವ ಮೂಲಕ ಇದರ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಕೆಲಸ ಕೆಲವು ದೇಶಗಳಲ್ಲಿ ನಡೆದಿದೆ. ನಮ್ಮಲ್ಲಿ ಅದಾಗಿಲ್ಲ, ಹಾಗಾಗಿ ನಮ್ಮಲ್ಲಿ ಅನಾಥ ಪತ್ರಗಳ ಪ್ರಮಾಣವೂ ಜಾಸ್ತಿ. ಬೆಂಗಳೂರಿನ ಅನಾಥ ಪತ್ರಗಳನ್ನು ನಿಭಾಯಿಸುವ RLO (Returned Letter Office) ಸ್ಥಾಪನೆ ಯಾಗಿದ್ದು ೧೯೬೩ರಲ್ಲಿ. BG RLO- ಅಂದಿನಿಂದ ಹಿಂದಿನ ವಾರದವರೆಗೆ ಕರ್ನಾಟಕದ ಎಲ್ಲ ಅನಾಥ ಪತ್ರಗಳು ಕೊನೆಯಲ್ಲಿ ಹೋಗಿ ಮುಟ್ಟುತ್ತಿದ್ದುದು ಇಲ್ಲಿಗೆ. ಇಲ್ಲೇ ಈ ಪತ್ರಗಳ ಅಂತಿಮ ಸಂಸ್ಕಾರ ನಡೆಯುತ್ತಿದ್ದುದು. ಕೆಲ ವರ್ಷದ ಹಿಂದೆ ಟೆಲಿಗ್ರಾಂ ವ್ಯವಸ್ಥೆಯನ್ನು ಬಹುತೇಕ ದೇಶಗಳು ನಿಲ್ಲಿಸುತ್ತಿರುವುದು ಸುದ್ದಿಯಾಗಿತ್ತು. ಆ ಸಮಯದಲ್ಲಿ ಟೆಲಿಗ್ರಾಂಗೆ ಅಂತಿಮ ವಿದಾಯ ಹೇಳುವ ಹಲವು ಲೇಖನ, ಕಥೆಗಳು ಮುನ್ನೆಲೆಗೆ ಬಂದವು. ಆದರೆ ಒಮ್ಮೆ ಯೋಚಿಸಿ, ಇಂದು ಪತ್ರ ಬರೆವವರು ಯಾರಾದರೂ ಇದ್ದಾರೆಯೇ? ಇದ್ದರೆ ಎಲ್ಲಿದ್ದಾರೆ? ಬಹುತೇಕ ಪತ್ರ ವ್ಯವಹಾರ ನಿಂತುಬಿಟ್ಟಿದೆ.

ಎಲ್ಲೋ ಕೆಲವು ಬೆರಳೆಣಿಕೆಯವರು ಬರೆಯಬಹುದು. ಇಂದು ಪಾರ್ಸೆಲ್ ಕಳುಹಿಸಲು ಅಂಚೆ ಬಳಸುವವರಿದ್ದಾರೆ. ಅದು ಬಿಟ್ಟರೆ ಕೆಲ ಸರಕಾರಿ ವ್ಯವಹಾರಗಳು, ನೋಟಿಸ್‌ಗಳು ಅಂಚೆ ಮೂಲಕ ಬರುವುದಿದೆ. ಅದು ಬಿಟ್ಟರೆ ಇಮೇಲ್, ವಾಟ್ಸಾಪ್ ಇತ್ಯಾದಿ ಯುಗದಲ್ಲಿ ‘ನಾವೆಲ್ಲಾ ಕ್ಷೇಮ, ನೀವು ಕ್ಷೇಮವೇ’, ‘ಇಂತಿ ತಮ್ಮವ’ ಎಂದು ಪತ್ರ ಬರೆವವರು ಇಂದು ಅಳಿವಿನಂಚಿನಲ್ಲಿರುವ ಜೀವಪ್ರಭೇದ! ಈಗಾಗಲೇ ನಾಮಾವಶೇಷವಾಗಿರಬಹುದು. ಹೀಗಿರುವಾಗ ಅಂದು ತೆರೆದುಕೊಂಡಿದ್ದ ಆರ್‌ಎಲ್‌ಒ ಇಂದು ಕ್ರಮೇಣ ತನ್ನ ಅವಶ್ಯಕತೆಯನ್ನು ಕಳೆದುಕೊಂಡಿದೆ. ಇತ್ತೀಚೆಗೆ ಬೆಂಗಳೂರಿನ ಆರ್‌ಎಲ್‌ಒ ಮುಚ್ಚುವ ಸುದ್ದಿ ತಿಳಿದಾಗ, ಅನಾಥ ಪತ್ರಗಳ ಸಂಖ್ಯೆ ಈಗ ಎಷ್ಟಿದೆ ಎಂದು ಸ್ನೇಹಿತರಾದ ಶ್ರೀಹರ್ಷರನ್ನು ಕೇಳಿದ್ದೆ. ಅವರು ಮಂಗಳೂರಿನ ಪೋಸ್ಟಲ್ ಡಿವಿಷನ್‌ನ ಮುಖ್ಯಸ್ಥರಾಗಿದ್ದವರು (ಸದ್ಯ ಸೀನಿಯರ್ ಸೂಪರಿಂಟೆಂಡೆಂಟ್ ರೈಲ್ವೆ ಮೇಲ್
ಸರ್ವಿಸ್, ಬೆಂಗಳೂರು). ಅವರು ಒಂದಿಷ್ಟು ಅವರ್ಗೀಕೃತ ವಿವರಗಳನ್ನು ಹಂಚಿಕೊಂಡರು. ಅದಲ್ಲದೆ ಕರ್ನಾಟಕದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್  ಅವರ ಪರಿಚಯ ಮಾಡಿಕೊಟ್ಟರು. ಅವರ ಜತೆ ಮಾತನಾಡುವಾಗ ಒಂದಿಡೀ ಅಂಚೆ ವ್ಯವಸ್ಥೆಯ ಅಪಸವ್ಯವಾಗಿರುವ ಅನಾಥ ಪತ್ರಗಳ ಗೋಳಿನ ವಿವರಗಳು ಸಿಕ್ಕವು. ಇದು ಇತಿಹಾಸದುದ್ದಕ್ಕೂ ಕೊಟ್ಟ ಆರ್ಥಿಕ ಹೊರೆ ಅಷ್ಟಿಷ್ಟಲ್ಲ. ಕೆಲವೇ ವರ್ಷದ ಹಿಂದೆ ಬೆಂಗಳೂರಿನ ಆರ್‌ಎಲ್‌ಒದಲ್ಲಿ ಸುಮಾರು ೫೦ ಉದ್ಯೋಗಿಗಳ ಅವಶ್ಯಕತೆಯಿತ್ತಂತೆ. ಅದನ್ನು ಸುಮಾರು ೩೦ ಮಂದಿ ಹೇಗೋ ನಿರ್ವಹಿಸುತ್ತಿದ್ದರಂತೆ. ಕಾಲ ಕಳೆದಂತೆ ಪತ್ರವ್ಯವಹಾರಗಳು ಕಡಿಮೆಯಾಗಿ ಇದೆಲ್ಲವನ್ನು ಇಬ್ಬರು ನಿಭಾಯಿಸುವಷ್ಟಾಗಿದೆ. ಒಂದು ಕಾಲದಲ್ಲಿ ಅದೆಷ್ಟೋ ಸಾವಿರ ಅನಾಥ ಪತ್ರ, ಪಾರ್ಸೆಲ್‌ಗಳನ್ನು ನಿಭಾಯಿಸಬೇಕಿತ್ತು. ಆದರೆ ಜುಲೈ ೨೦೨೩ರಲ್ಲಿ ಇಂಥ ಅನಾಥ ಪತ್ರಗಳ ಸಂಖ್ಯೆ ಕರ್ನಾಟಕದಲ್ಲಿ ಕೇವಲ ೪೭೦. ಅದರಲ್ಲಿ ೧೪೦ ಪತ್ರಗಳನ್ನು ತೆರೆದಾಗ ವಿಳಾಸ ಸಿಕ್ಕಿ ಅವರಿಗೆ ಕಳುಹಿಸಲಾಗಿದೆ. ಕೊನೆಯಲ್ಲಿ ಅನಾಥವಾಗಿ ನಾಶಮಾಡಲ್ಪಟ್ಟ ಪತ್ರಗಳ ಸಂಖ್ಯೆ ಕೇವಲ ೨೫೯. ಅದು ಸರಾಸರಿ ದಿನಕ್ಕೆ, ಇಡೀ ಕರ್ನಾಟಕಕ್ಕೆ ದಿನಕ್ಕೆ ಕೇವಲ ೧೦. ಈಗ ಅನಾಥವಾಗುವ ಪತ್ರಗಳು ಅಷ್ಟು ಕಡಿಮೆಯಾಗಿವೆ. ಇದಕ್ಕೆ ನಮ್ಮ ಹೊಸ ವ್ಯಾವಹಾರಿಕ ಸಮಾಜ ಕಾರಣ.

ಆಗಸ್ಟ್ ೧೪ರಿಂದ ಮುಂದೆ ಕರ್ನಾಟಕದ ಅನಾಥ ಪತ್ರಗಳು ಚೆನ್ನೈ ತಲುಪಲಿವೆ. ಇನ್ನು ಮೇಲೆ ಇಡೀ ದಕ್ಷಿಣ ಭಾರತದ ಅನಾಥ ಪತ್ರಗಳ ನಿಭಾವಣೆ, ಸಾಮೂಹಿಕ ಅಂತ್ಯಸಂಸ್ಕಾರ ಅಲ್ಲೇ! ದೇಶದ ಬಹುತೇಕ ಸ್ಥಳೀಯ ಆರ್‌ಎಲ್‌ಒಗಳನ್ನು ಮುಚ್ಚಲಾಗುತ್ತಿದ್ದು, ಚೆನ್ನೈ, ಲಖನೌ, ಮುಂಬೈ ಮತ್ತು ಕೋಲ್ಕೊತಾಗಳಲ್ಲಿ ಮಾತ್ರ ಇವನ್ನು ನಿಭಾಯಿಸಲಾಗುತ್ತದೆ. ಒಂದು ಕಾಲದಲ್ಲಿ ದೊಡ್ಡ ತಲೆನೋವಾಗಿದ್ದ ಅನಾಥ ಪತ್ರಗಳ ಸಮಸ್ಯೆಗೆ ಕಾಲವೇ ಪರಿಹಾರ ನೀಡಿದಂತಾಗಿದೆ. ಇದೆಲ್ಲವನ್ನು ಕಂಡು ಬೇಸರಿಸಬೇಕೇ? ಖಂಡಿತ ಇಲ್ಲ. ಆದರೆ ಈ ಎಲ್ಲ ಬೆಳವಣಿಗೆಗಳ ಮಧ್ಯೆ ಅಂಚೆ ವ್ಯವಸ್ಥೆ ತಕ್ಷಣ ಹೊಸ ತಲೆಮಾರಿಗೆ ಬದಲಾಗುವ ಅವಶ್ಯಕತೆ ಎದ್ದುಕಾಣುತ್ತಿದೆ. ರಾಜೇಂದ್ರ ಸರ್ ಪ್ರಕಾರ ಅಂಚೆ ಇಲಾಖೆ ಸಾಕಷ್ಟು ಬದಲಾವಣೆಗಳನ್ನು ತ್ವರಿತವಾಗಿ ಮಾಡಿಕೊಳ್ಳುತ್ತಿದೆ. ಅದು ಸಮಾಧಾನ. ಇಲ್ಲದಿದ್ದರೆ ಅಂಚೆ ಇಲಾಖೆ ಕೂಡ ಬಿಎಸ್‌ಎನ್ ಎಲ್, ಏರ್ ಇಂಡಿಯಾ ಹಾದಿಯನ್ನು ಯಾವತ್ತೋ ಹಿಡಿದು ಬಿಡುತ್ತಿತ್ತು.

Leave a Reply

Your email address will not be published. Required fields are marked *

error: Content is protected !!