Thursday, 28th March 2024

ಇತಿಹಾಸದ ಗ್ರಹಿಕೆ ಮತ್ತು ಬೋಧನೆ ?

ದಾಸ್ ಕ್ಯಾಪಿಟಲ್‌

dascapital1205@gmail.com

ಇತಿಹಾಸವನ್ನು ಕುರಿತು ಮಾತನಾಡುವುದು, ಬರೆಯುವುದು, ತರ್ಕಿಸುವುದು, ಚರ್ಚಿಸುವುದು ಎಂದರೆ ಜೇನುಗೂಡಿಗೆ ಕೈಹಾಕಿದ ಅನುಭವ. ಇತಿ ಹಾಸವನ್ನು ಬದಲಾಯಿಸುವುದು ಎಂದರೆ ತಮ್ಮ ತಮ್ಮ ಮೂಗಿನ ನೇರಕ್ಕೇ, ತಮ್ಮ ಹಿತಾಸಕ್ತಿಗಳಿಗೆ ಅನುಗುಣ ವಾಗಿ ತಿದ್ದುವುದು ಆಗುತ್ತದೆ ವಿನಹ ಗತಿಸಿದ ಘಟನೆಗಳನ್ನು ಬದಲಾಯಿಸಲು, ಅದು ನಡೆದುಹೋದ ರೀತಿಯನ್ನು ಬದಲಾಯಿಸಲು ಸಾಧ್ಯವೇ ಇಲ್ಲ.

ಅದು ಹೇಗೋ ನಡೆದು ಹೋಗಿರುತ್ತದೆ. ಆದರೆ, ತಿದ್ದುವುದರ ಮೂಲಕ ಅದು ಹೀಗೆ ನಡೆದಿದೆ ಅಥವಾ ನಡೆದಿತ್ತು ಎಂದೂ, ಆ ಮೂಲಕ ಎಂದೋ ನಡೆದುಹೋದ ಇತಿಹಾಸವನ್ನು ನಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಬದಲಾಯಿಸಿದ್ದೇವೆ ಎಂದು ಹೇಳುವುದು ಕೂಡ ಇತಿಹಾಸದ ವ್ಯಾಖ್ಯಾನ ಮತ್ತೆ ದಾರಿ ತಪ್ಪಿದೆ ಎಂದೇ ಅರ್ಥ ವಾಗುತ್ತದೆ. ಅಷ್ಟಕ್ಕೂ, ಯಾರೇ ಇತಿಹಾಸವನ್ನು ಬರೆದರೂ ಅದು ಅವರ ಒಟ್ಟೂ ಗ್ರಹಿಕೆಯಾಗಲು ಸಾಧ್ಯವೇ ಇಲ್ಲ. ಒಂದು ಸನ್ನಿವೇಶವನ್ನು, ಒಬ್ಬ ವ್ಯಕ್ತಿಯನ್ನು ಅಥವಾ ಒಂದು ನಿರ್ದಿಷ್ಟ ಕಾಲಮಾನದ ಎಲ್ಲ ಆಗುಹೋಗು ಗಳನ್ನು ಗ್ರಹಿಸುವುದು ಪೂರ್ತಿಯಾಗಿ ಯಾರಿಗೂ ಸಾಧ್ಯವೇ ಆಗದ ಸಾಹಸ!

ಇತಿ ಎಂದರೆ ಹೀಗೆ, ಹ ಎಂದರೆ ಇದು, ಆಸ ಎಂದರೆ ಇದ್ದಿತು, ಎಂದು ಇದಮಿತ್ಥಂ ಆಗಿ ಹೇಗೆ ರಚಿಸುವುದು? ನಮ್ಮ ಸಮಕಾಲೀನರು ನಮ್ಮ ಬಗ್ಗೆ ತೋರುವ ತೀರ್ಪು ಹಾಗೂ ನಮ್ಮ ಕಾಲ ನಮ್ಮ ಮೇಲೆ ಮಾಡುವ ತೀರ್ಪು ಅಷ್ಟು ಗುರುತರವಾದದ್ದಲ್ಲ. ನಾವು ಯಾವಾಗಲೂ ಇತಿಹಾಸದ ಅನಿವಾರ್ಯ ತೀರ್ಪಿಗಾಗಿ ಕಾಯಬೇಕು- ಈ ಮಾತನ್ನು ಬಾಲಗಂಗಾಧರ ತಿಲಕರ ಜನ್ಮಶತಾಬ್ದಿಯಂದು ಮುಂಬೈ ಶ್ರೇಷ್ಠ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾ ಧೀಶ ಚಾಂಗ್ಲೆ ಹಿಂದೊಮ್ಮೆ ಆಡಿದ ಮಾತು. ಈ ಮಾತನ್ನು ಮತ್ತಷ್ಟು ಸೂಕ್ಷ್ಮವಾಗಿಸಿಕೊಳ್ಳಬೇಕಿದೆ.

ಇತಿಹಾಸವನ್ನೇ ತಿದ್ದುವುದು ಎಂದರೆ ಏನು? ತಿದ್ದಿದರೂ ಅದು ಸತ್ಯದ ಇತಿಹಾಸ ಆಗುವುದು ಹೇಗೆ? ಯಾಕೆಂದರೆ, ಇತಿಹಾಸವನ್ನು ನಮಗೆ ಬೇಕಾದಂತೆ, ನಮ್ಮ ದೃಷ್ಟಿಕೋನಕ್ಕೆ ಅಂದರೆ ನಮ್ಮ ತಾತ್ವಿಕ ನಿಲುವುಗಳಿಗೆ, ಸೈದ್ಧಾಂತಿಕ ಒಲವುಗಳಿಗೆ ಅನುಗುಣವಾದ ಅಂಶವನ್ನು ಮಾತ್ರ ಆಯ್ದುಕೊಂಡು ಮತ್ತೆ
ಇತಿಹಾಸವನ್ನು ಅದು ಹೀಗೇ ಇತ್ತು ಎಂದು ಹೇಳುವುದೇ? ಹಾಗೆ ಹೇಳಿದರೂ ಸತ್ಯದ ಇತಿಹಾಸ ಸುಳ್ಳಾಗುವುದಿಲ್ಲ ಅಥವಾ ಬದಲಾಗುವುದಿಲ್ಲ. ಅದು ಇದ್ದ ಹಾಗೇ ಇರುತ್ತದೆ. ಮತ್ತು ಹಾಗೇ ಇರುತ್ತದೆ. ಅಂದರೆ ಹೀಗೆಯೇ ಇದು ಇತ್ತುಎಂದು ಇರುವುದನ್ನು ಅಲ್ಲ ಅಲ್ಲ ಅದು ಹೀಗಿತ್ತು ಅಥವಾ ಹೀಗಿದೆ ಅಥವಾ ಹೀಗಿರಬೇಕಿತ್ತು ಎಂದು ಬದಲಾಯಿಸೋದು ಕೂಡ ಭವಿಷ್ಯದಲ್ಲಿ ಮತ್ತೊಂದು ಇತಿಹಾಸವೇ ಆಗಿಹೋಗುತ್ತದೆ.

ಆಗ ಸತ್ಯದ ಇತಿಹಾಸ ಮುಂದಿನ ತಲೆಮಾರಿಗೆ ಗೋಜಲಾಗಿ ಬಿಡುತ್ತದೆ. ತಮ್ಮ ಮೂಗಿನ ನೇರಕ್ಕೇ ಇತಿಹಾಸವನ್ನು ಬದಲಾಯಿಸಿದ್ದನ್ನು ನಾವು ಓದಿದ್ದೇವೆ ಎಂಬ ವಾದವಿದೆ. ನಾವು ಓದಿದ ಇತಿಹಾಸವನ್ನೇ ಸುಳ್ಳೆಂದೂ, ನಿಜದ ಇತಿಹಾಸ ಬೇರೆಯದೇ ಆದ ರೀತಿಯಲ್ಲಿ ಇದೆ. ಮತ್ತದು ಸತ್ಯಕ್ಕೆ ಹತ್ತಿರವಾಗಿದೆ ಎಂದು ಈಗ ಯಾರೇ ಹೇಳಿದರೂ, ಸಾಕ್ಷ್ಯಗಳನ್ನು ಒದಗಿಸಿದರೂ ನಮ್ಮ ಅರಿವಿಗೆ ಅಷ್ಟು ಸುಲಭವಾಗಿ ಅದು ಅರ್ಥವಾಗುವುದಿಲ್ಲ ಮತ್ತು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವಷ್ಟು ನಾವು ಅಂಥ ಇತಿಹಾಸವನ್ನು ಓದಿಕೊಂಡು ಬಂದಿದ್ದೇವೆ ಅಥವಾ ನಮಗೆ ಓದಿಸಲಾಗಿದೆ ಎಂದು ವಾದಿಸುವವರು ಇದ್ದಾರೆ. ಆದ್ದರಿಂದ ಇತಿಹಾಸದ ಗ್ರಹಿಕೆ ಬಹುಕಷ್ಟ.

ಈಗ ಟಿಪ್ಪುವಿನ ವಿಚಾರವನ್ನೇ ನೋಡಿ. ಅವನನ್ನು ಮೆಚ್ಚುವವರು ಇರುವಂತೆ ದ್ವೇಷಿಸುವವರೂ ಇದ್ದಾರೆ. ಎರಡೂ ಅವರವರ ದೃಷ್ಟಿಕೋನದಲ್ಲಿ ಅವರವರು ಕಂಡುಕೊಂಡ ಇತಿಹಾಸವೇ ಸರಿಯಾದುದು ಎಂಬ ನೆಲೆಯಲ್ಲಿ ಒಪ್ಪಿಕೊಂಡು ವಾದಿಸುತ್ತಾರೆ. ವಿಷಯವೊಂದು ಹೇಳಲ್ಪಟ್ಟಿದೆ ಎಂದಾಗಲೀ, ಕೇವಲ ಸಂಪ್ರದಾಯ ಅಥವಾ ಸ್ವಕಲ್ಪಿತ ಎಂದಾಗಲೀ ಆ ವಿಷಯವನ್ನು ನಂಬಬೇಡ. ಯಾವುದೇ ವಿಚಾರವನ್ನು ಸ್ವತಃ ಪರೀಕ್ಷಿಸಿ ಪ್ರಮಾಣಿಸಿ ವಿಶ್ಲೇಷಿಸಿದ ನಂತರ ಯಾವುದು ಸರ್ವಜನರ ಏಳಿಗೆಗೆ, ಒಳಿತಿಗೆ, ಶ್ರೇಯಸ್ಸಿಗೆ ಕಾರಣೀಭೂತವಾಗುವುದೋ ಆ ತತ್ವದಲ್ಲಿ ನಂಬುಗೆ ಇಡು. ಅದರಲ್ಲಿ ಒಲುಮೆಯಿಡು.

ಅದು ನಿನಗೆ ಅನುಸರಣೀಯ ಮಾರ್ಗ- ಎಂದು ಭಾರತೀಯ ಇತಿಹಾಸದ ಒಂದು ಭಾಗವೇ ಆಗಿಹೋದ ಬುದ್ಧ ಹೇಳಿದ ಮಾತುಗಳಿವು. ಹಿಂದಿನವರ ಮಾತುಗಳಲ್ಲಿರುವ ಪ್ರತಿಯೊಂದು ದೋಷವನ್ನೂ ಖಂಡಿಸದೆ ನಂಬಲು ಸಾಧ್ಯವಿಲ್ಲ ಎಂದು ಭಾಸ್ಕರಾಚಾರ್ಯರು ಹೇಳುತ್ತಾರೆ. ಇತಿಹಾಸದ ಬರೆವಣಿಗೆ ಮತ್ತು ಬೋಧನೆ ವಸ್ತುನಿಷ್ಠವಾಗಿರಬೇಕು ಎಂಬ ಮಾತಿದೆ. ಆದರೆ, ವಿಜ್ಞಾನದ ನಿಖರತೆ ಮತ್ತು ನಿರ್ಭಾವುಕತೆಯನ್ನು ಇತಿಹಾಸದಲ್ಲೂ ಬಯಸುವುದು ಸಾಧ್ಯವೇ ಇಲ್ಲ! ಯಾಕೆಂದರೆ, ವಸ್ತು ಮತ್ತು ಪದಾರ್ಥಕ್ಕೆ ವಿಜ್ಞಾನ ಸಂಬಂಧಿಸಿದ್ದು. ಅದು ಪ್ರಮಾಣ ಪರಿಣಾಮ ಬದ್ಧವಾದುದು. ಇದಮಿತ್ಥಂ ಎನ್ನಲು ಬೇಕಾದ ಪ್ರಮಾಣವಿರುತ್ತದೆ. ಆದರೆ ವ್ಯಕ್ತಿನಿಷ್ಠ, ಪ್ರದೇಶನಿಷ್ಠ, ಜನಾಂಗನಿಷ್ಠ, ಸಂಸ್ಕೃತಿನಿಷ್ಠ, ಇವುಗಳ ಹಂಗು ತೊರೆದ ಇತಿಹಾಸ ಇರಲು ಸಾಧ್ಯವಿಲ್ಲ. ಯಾಕೆಂದರೆ, ಇವುಗಳ ಬಗ್ಗೆಯೇ ನಾವು ಇತಿಹಾಸದಲ್ಲಿ ಓದುವುದು.

ಆದಾಗ್ಯೂ, ಯಾವುದನ್ನೂ ನ್ಯಾಯಾಧೀಶರಂತೆ ನಾವು ತೀರ್ಪು ನೀಡಬಾರದು ಎಂಬ ಎಚ್ಚರದಲ್ಲಿ ಇತಿಹಾಸವನ್ನು ಗ್ರಹಿಸಬೇಕು. ಇತಿಹಾಸಕಾರ ಮತ್ತು ಅವನಲ್ಲಿರುವ ಮಾಹಿತಿಯ ನಡುವೆ ನಡೆಯುವ ಪರಸ್ಪರ ಕ್ರಿಯೆಯೇ ಇತಿಹಾಸ. ಯಾವ ಭಾವನೆಗಳಿಗೂ ಬಲಿಬೀಳದ ವಿಶ್ಲೇಷಣೆ ಬೇಕು. ಬ್ರಿಟಿಷರು ಬರೆದ ನಮ್ಮ ಇತಿಹಾಸದಲ್ಲಿ ಸತ್ಯವನ್ನು ತಿರುಚಲಾಗಿದೆ ಎಂದು ಹೇಳುವಲ್ಲಿಯೂ ಸತ್ಯವಿದೆ ಎಂದು ಒಪ್ಪುವುದಾದರೆ, ಗ್ರೀಕರು, ರೋಮನ್ನರು, ಅರಬ್ಬರು, ಚೀನೀಯರು, ಪರ್ಷಿಯನ್ನರೇ ಮುಂತಾದವರು ಮನುಕುಲದ ಪ್ರಗತಿಗೆ ಕಾರಣರು ಎಂಬುದನ್ನೂ ಒಪ್ಪಬೇಕು. ಅದೇ ಸಂದರ್ಭದಲ್ಲಿ ಈ ನೆಲದಲ್ಲಿ ಇನ್ನೂ ಜಾತೀಯತೆ, ಲಿಂಗ ತಾರತಮ್ಯ, ಬಡವ-ಶ್ರೀಮಂತ ಭೇದ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಮೌಢ್ಯಗಳು, ಸಾಮಾಜಿಕ  ಡುಗುಗಳು
ಜೀವಂತವಾಗಿವೆ ಎಂಬುದನ್ನೂ ಒಪ್ಪದೇ ಇರಲು ಸಾಧ್ಯವಿಲ್ಲ.

ಮತ್ತೊಂದು ಮುಖ್ಯವಾದ ವಿಚಾರವನ್ನು ಹೇಳಲೇಬೇಕು. ಎರಡು ನಿಲುವುಗಳು ಈಗ ಪ್ರಚಲಿತದಲ್ಲಿ ಪ್ರಸಿದ್ಧವಾಗಿವೆ. ಒಂದು: ಹೊರಗಿನಿಂದ ಆಮದಾಗಿ ಬಂದ ಎಡಪಂಥೀಯ ಸಿದ್ಧಾಂತ. ಎರಡು: ಬಲಪಂಥೀಯ ಸಿದ್ಧಾಂತ. ಒಂದೇ ವಿಷಯದಲ್ಲಿ ಎರಡು ವಿಭಿನ್ನ ನಿಲುವುಗಳನ್ನು ಹೊಂದಿರುವಷ್ಟು ಇವು ಪರಸ್ಪರ ವಿರುದ್ಧವಾಗಿವೆ. ಈ ಎರಡೂ ಸೈದ್ಧಾಂತಿಕ ನಿಲುವನ್ನು ಸ್ವಾತಂತ್ರ್ಯ ಪೂರ್ವದಲ್ಲೂ, ಸ್ವಾತಂತ್ರ್ಯಾನಂತರದಲ್ಲೂ ಭಾರತದ ಸಮಗ್ರ ರಾಜಕಾರಣದಲ್ಲಿ ಹೆಜ್ಜೆಹೆಜ್ಜೆಗೂ ನಾವು ಕಾಣುತ್ತಲೇ ಬಂದಿದ್ದೇವೆ. ಓದುತ್ತಲೇ ಬಂದಿದ್ದೇವೆ. ಒಂದಿಷ್ಟು ರಾಜಕೀಯ ಪಕ್ಷಗಳು ಎಡಪಂಥೀಯ ನಿಲುವಿನ ಸೈದ್ಧಾಂತಿಕತೆಯನ್ನು ಹೊಂದಿವೆ.

ಮೊದಲು ಭಾರತೀಯ ಜನಸಂಘವಾಗಿದ್ದ, ಈಗಿನ ಭಾರತೀಯ ಜನತಾ ಪಕ್ಷ ಬಲಪಂಥೀಯ ನಿಲುವಿನ ಸೈದ್ಧಾಂತಿಕತೆಯನ್ನು ಹೊಂದಿವೆ. ಎಡಪಂಥೀಯ ನಿಲುವಿನ ಸೈದ್ಧಾಂತಿಕತೆಯ ಮುಂಚೂಣಿಯ ರಾಜಕೀಯ ಪಕ್ಷವಾಗಿ ಮೊದಲಿಂದಲೂ ಅಭಿವ್ಯಕ್ತವಾದ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ.
ಧಾರ್ಮಿಕ ಮುಖಂಡರು, ರಾಜಕೀಯದವರು ಇತಿಹಾಸವನ್ನು ನಿರ್ವಚಿಸಬಾರದು. ಅನೇಕ ವಿಚಾರಗಳು ಇದ್ದರೆ ಅವೆಲ್ಲವನ್ನೂ ಪಠ್ಯಕ್ಕೆ ಅಳವಡಿಸಬೇಕು. ಯಾರೂ ಯಾವ ಒತ್ತಡವನ್ನೂ ಹೇರಬಾರದು. ಇತಿಹಾಸಕಾರರು ಒಳ್ಳೆಯ ಮತ್ತು ಕೆಟ್ಟ ವಿದ್ಯಮಾನಗಳನ್ನೂ ಬರೆಯಬೇಕು. ಆದರೆ
ಯಾರೂ ತನ್ನದೇ ಸರಿಯೆಂದು ವಾದಿಸುವುದು ಸರಿಯಲ್ಲ.

ಆದರೆ, ಎಲ್ಲ ದೃಷ್ಟಿಕೋನಗಳನ್ನು ಕಲೆಹಾಕಿದರೆ ಸತ್ಯ ಗೊತ್ತಾಗುತ್ತದೆ. ಹಾಗೆ ತಿರುಳಿನ ರೂಪದಲ್ಲಿ ಸಿಗುವ ಸತ್ಯ ಭವಿಷ್ಯದ ದೃಷ್ಟಿಯಿಂದ ಈ ದೇಶಕ್ಕೆ ಅತ್ಯಗತ್ಯವಾಗಿರುತ್ತದೆ. ಮುಖ್ಯವಾಗಿ, ತರಗತಿಯಲ್ಲಿ ಇತಿಹಾಸವನ್ನು ಬೋಧಿಸುವಾಗ ಶಿಕ್ಷಕ ತನ್ನ ನಿಲುವುಗಳನ್ನು ವಿದ್ಯಾರ್ಥಿಯ ಮೇಲೆ
ಹೇರಬಾರದು. ಕಲಿಕಾಂಶಗಳಿಗೆ ಪೂರಕವೋ ವಿರುದ್ಧವೋ ಅದ ಮಾಹಿತಿಗಳಿದ್ದರೆ ಸಾಕ್ಷ್ಯ ಸಹಿತ ನಿರೂಪಿಸುವುದು ಅತೀ ಉತ್ತಮವಾದ ಮಾರ್ಗ. ವೈವಿಧ್ಯಮಯ, ವಿಭಿನ್ನರೂಪದ ವಿಶಿಷ್ಟ ಬಗೆಯ ಅಭಿಪ್ರಾಯಗಳನ್ನು ಮಾಹಿತಿ ಹಾಕಿ ಕಲಿಕಾಂಶಗಳನ್ನು ಜೋಡಿಸಬೇಕು.

ಮಕ್ಕಳಿಗೆ ಹಾಗೆಯೇ ಕಲಿಸಬೇಕು. ಆದರೆ, ಒಂದು ಎಚ್ಚರವನ್ನು ವಹಿಸಬೇಕು. ಎಲ್ಲವೂ ಬೇಕು, ಆದರೆ ಎಲ್ಲವೂ ಬೇಡ. ಭಾರತೀಯತೆಗೆ ಪೂರಕವಾಗಿ, ಭಾರತೀಯತೆಯನ್ನು ಉದ್ದೀಪನಗೊಳಿಸುವ, ತನ್ಮೂಲಕ ರಾಷ್ಟ್ರನಿರ್ಮಾಣದ ಕೈಂಕರ್ಯಕ್ಕೆ ತೊಡಗಿಸಿಕೊಳ್ಳುವಂಥ ಇತಿಹಾಸ ರಚನೆಯಾಗಬೇಕು.
ಕೊನೆಯ ಮಾತು: ನಡೆದುದೆಲ್ಲವನ್ನೂ ಒಂದೂ ಬಿಡದಂತೆ ಯಾವ ದೇಶ, ಸಮಾಜ, ರಾಷ್ಟ್ರಗಳ ಇತಿಹಾಸದಲ್ಲೂ ಯಾರೂ ಬರೆಯಲಾಗುವುದಿಲ್ಲ, ಬರೆದಿಲ್ಲ. ಇಲ್ಲಿ ಜರಡಿಯಿಂದ ಸೋಸುವಂತೆ ಯಾವುದು ಬೇಕೋ, ಮುಖ್ಯವೋ, ಪ್ರಸ್ತುತವೋ, ಅನಿವಾರ್ಯವೋ ಅಂಥದ್ದನ್ನೇ ಆರಿಸಿ ಪೋಣಿಸಿ
ಬರೆಯಲು ಒಂದು ಮಾನದಂಡವೂ ಬೇಕು.

ಇತಿಹಾಸವೆಲ್ಲ ಆರಿಸಿ ಬರೆದದ್ದು ಎಂಬ ಮಾತು ಬಂದಿರುವುದು ಈ ಕಾರಣದಿಂದಲೇ! ೧೮೫೭ರ ಸಂಘಟಿತ ಸ್ವಾತಂತ್ರ್ಯ ಸಂಗ್ರಾಮವನ್ನು
ಬ್ರಿಟಿಷರು ಬಂಡಾಯ ಎಂದು ಬರೆದದ್ದು ವಸಾಹತುಷಾಹೀ ದೃಷ್ಟಿಕೋನವೇ ಆದುದಾಗಿದೆ. ಇದು ಅನಪೇಕ್ಷಿತ, ಅವಾಸ್ತವ. ಹಾಗಂತ ಎಡಪಂಥೀಯ ಇತಿಹಾಸಕಾರರು ಸ್ವಾತಂತ್ರ್ಯಾನಂತರದಲ್ಲೂ ಅದೇ ವಸಾಹತುಷಾಹೀ ದೃಷ್ಟಿಕೋನದಿಂದಲೇ ಭಾರತೀಯ ಇತಿಹಾಸವನ್ನು ಬರೆದದ್ದು ಎಂಬ ಅಭಿಪ್ರಾಯ ಈಗಲೂ ಇದೆ. ಮತ್ತೆ ಅದನ್ನೇ ನಾವೆಲ್ಲ ಓದಿರುವುದು. ಅದಕ್ಕೆ ವಿರುದ್ಧವಾದ ನೆಲೆಯ ಪ್ರಜ್ಞೆಗಳೂ ಅದೇ ಇತಿಹಾಸದಲ್ಲಿ ಇದೆಯೆಂಬುದೂ
ತರಗತಿಯಲ್ಲಿ ಬೋಧನೆಯಾಗಬೇಕು. ಅಂದರೆ, ಭಾರತೀಯ ದೃಷ್ಟಿಕೋನದಲ್ಲಿ ಇತಿಹಾಸದ ಗ್ರಹಿಕೆ ಮತ್ತು ಬೋಧನೆ ಪ್ರಮುಖವಾಗಬೇಕು.

error: Content is protected !!