Wednesday, 24th April 2024

ರೈತರ ರಕ್ಷಣೆಗೆ ನಿಂತ ಐಟಿಸಿ

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

dhyaapaa@gmail.com

‘ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ’ ಪ್ರಕಾರ ಕಳೆದ ಮೂರು ದಶಕಗಳಲ್ಲಿ ಸುಮಾರು 3 ಲಕ್ಷ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತದ ಆರ್ಥಿಕತೆಯಲ್ಲಿ ಕೃಷಿಯ ಪಾಲು ಶೇಕಡಾ 15ಕ್ಕಿಂತ ಹೆಚ್ಚು. ಶೇಕಡಾ 70 ರಷ್ಟು ಜನರ ವ್ಯಾಪಾರ ಕೃಷಿ ಅಥವಾ ಅದರ ಉತ್ಪನ್ನವನ್ನು ಅವಲಂಬಿಸಿದೆ.

ಒಂದು ಕಾಲದಲ್ಲಿ ಅಪ್ಪನ ಬಳಿ ಐಟಿಸಿ (Indian Tobacco Company) ಕಂಪನಿಯ ಕೆಲವು ಶೇರುಗಳಿದ್ದವು. ಎಂಬತ್ತು-ತೊಂಬತ್ತರ ದಶಕದಲ್ಲಿ ಅದಕ್ಕೆ ಅಂಥಾ ಬೆಲೆಯೇನೂ ಇದ್ದಿರಲಿಲ್ಲ. ಅದೊಂದು ಬಿಟ್ಟರೆ ಅವರ ಬಳಿ ಯಾವ ಕಂಪನಿಯ ಶೇರೂ ಇರಲಿಲ್ಲ. ವಿಷಯ ಅದಲ್ಲ, ಹೆಸರೇ ಹೇಳುವಂತೆ ಇಂಡಿಯನ್ ಟೊಬ್ಯಾಕೋ ಕಂಪನಿ ಸಿಗರೇಟ್ ತಯಾರಿಕೆಯಲ್ಲಿ ಹೆಸರು ಮಾಡಿತ್ತು.

ಅಂಥ ಕಂಪನಿಯ ಶೇರು ಅಪ್ಪನ ಬಳಿ ಏಕೆ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಏಕೆಂದರೆ ಅಪ್ಪ ಸಿಗರೇಟ್ ಸೇದುತ್ತಿರಲಿಲ್ಲ. ಅವರದ್ದೇನಿದ್ದರೂ ಊರು ತಂಬಾಕಿನ ಕವಳ. ಕೊನೆಗೊಂದು ದಿನ ಅದೇ ಅವರ ಪ್ರಾಣವನ್ನೂ ತೆಗೆದುಕೊಂಡಿತು ಎನ್ನುವುದು ಖೇದಕರ. ಆದರೆ ಅದಕ್ಕಿಂತ ದಶಕದ ಮೊದಲೇ ಯಾವುದೋ ಅಡಚಣೆ ಬಂದಾಗ ಅವರು ಆ ಶೇರುಗಳನ್ನು ಮಾರಿದ್ದರು. ಸಿಗರೇಟ್ ತಯಾರಿಸುವ ಸಂಸ್ಥೆಯ ಶೇರು ಏಕೆ ಖರೀದಿಸಿದ್ದು ಎಂದು ಕೇಳುವ ಧೈರ್ಯ ಮನೆಯಲ್ಲಿ ಯಾರಿಗೂ ಇರಲಿಲ್ಲ. ಆದರೆ ಅದನ್ನು ಮಾರಿದ ದಿನ ಎಲ್ಲರೂ ಖುಷಿಪಟ್ಟಿದ್ದರು.

ಕಾಲಕ್ರಮೇಣ ನನಗೆ ಅರ್ಥವಾದ ವಿಷಯವೆಂದರೆ, ಐಟಿಸಿಯ ಹಲವಾರು ಉತ್ಪನ್ನಗಳಲ್ಲಿ ಸಿಗರೇಟ್ ಕೂಡ ಒಂದು ವಿನಾ ಅದೊಂದೇ ಕಂಪನಿಯ ಉತ್ಪನ್ನವಲ್ಲ ಎಂಬುದು. ಜತೆಗೆ, ಸಂಸ್ಥೆ ರೈತರೊಂದಿಗೆ ಬೆಳೆಸಿಕೊಂಡ ಸಂಬಂಧ, ರೈತರ ಟೊಂಕಕ್ಕೆ
ಕಸುವು ನೀಡಿದ ರೀತಿ, ರೈತರಿಗೆ ನೀಡಿದ ಮಾರ್ಗದರ್ಶನ, ರೈತರು ಆರ್ಥಿಕವಾಗಿ ಸದೃಢರಾಗಲು ನೆರವಾದ ಬಗೆ, ಶ್ಲಾಘನೀಯ. ದೇಶದಾದ್ಯಂತ ಮೂವತ್ತೈದು ಸಾವಿರ ಹಳ್ಳಿಗಳಲ್ಲಿ ರೈತಾಪಿ ಮಾಡಿಕೊಂಡಿದ್ದ ಸುಮಾರು ನಲವತ್ತು ಲಕ್ಷ ಜನ ರೈತರ ಬದುಕು ಹಸನಾಗಿಸಿದ ಶ್ರೇಯ ಐಟಿಸಿಗೆ ಸಲ್ಲಬೇಕು.

ಹಾಗಂತ ಸಂಸ್ಥೆ ರೈತರ ಮೇಲಿನ ಅನುಕಂಪದಿಂದ ದಾನ-ಧರ್ಮ ಮಾಡಿಲ್ಲ. ಮುಂಗಡ ಹಣ ನೀಡಿಲ್ಲ, ಅಂದ ಮೇಲೆ ಸಾಲ ಮನ್ನಾವೂ ಇಲ್ಲ. ಸಂಸ್ಥೆ ಮಾಡಿದ್ದು ಪಕ್ಕಾ ವ್ಯಾಪಾರದ ತಂತ್ರ. ಇದೇ ತಂತ್ರವನ್ನು ಬಳಸಿ ಮುಂದೊಂದು ದಿನ ಜೊಮೆಟೊ, ಗ್ರೊ-ರ್ಸ್‌ನಂತಹ ಸಂಸ್ಥೆಗಳು ಹೆಚ್ಚಿನ ಲಾಭ ಗಳಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಹತ್ತೊಂಬತ್ತನೆಯ ಶತಮಾನದ ಅಂತ್ಯ ದಲ್ಲಿ ಭಾರತದ ಕೃಷಿ ಉತ್ಪನ್ನಗಳ ರಫ್ತಿನ ವಹಿವಾಟು ಅಷ್ಟೇನೂ ಉತ್ತೇಜನಕಾರಿಯಾಗಿರಲಿಲ್ಲ. ಆ ಕಾಲದಲ್ಲಿ ಐಟಿಸಿ ಸಂಸ್ಥೆ ರಫ್ತು ಮಾಡುತ್ತಿದ್ದ ಉತ್ಪನ್ನಗಳಲ್ಲಿ ಸೋಯಾಬೀನ್ ಪ್ರಮುಖವಾಗಿತ್ತು.

ಸಂಸ್ಥೆಗೆ ಸೋಯಾಬೀನ್ ಪೂರೈಸುವುದರಲ್ಲಿ ಮಧ್ಯಪ್ರದೇಶದ ಗ್ರಾಮೀಣ ಭಾಗದ ಪಾಲು ದೊಡ್ಡದಾಗಿತ್ತು. ಅಲ್ಲಿಂದಲೇ ಸುಮಾರು ನಲವತ್ತು ಲಕ್ಷ ಟನ್ ಅಥವಾ ಎಂಬತ್ತು ಪ್ರತಿಶತ ಸೋಯಾಬೀನ್ ಪೂರೈಕೆಯಾಗುತ್ತಿತ್ತು. ಅದರಲ್ಲಿ ಶೇಕಡಾ ಎಪ್ಪತ್ತೈದರಷ್ಟು ಕೋಳಿ, ಕುರಿ, ದನಕರುಗಳ ಆಹಾರಕ್ಕಾಗಿ ಪೂರೈಕೆಯಾದರೆ, ಉಳಿದ ಇಪ್ಪತ್ತೈದು ಪ್ರತಿಶತ ಹೆಚ್ಚು ಪೌಷ್ಟಿ ಕಾಂಶವುಳ್ಳ ಖಾದ್ಯ ತೈಲಕ್ಕೆ ಬಳಕೆಯಾಗುತ್ತಿತ್ತು.

ಸಸ್ಯಾಹಾರಿಗಳ ಮಾಂಸ ಎಂದೇ ಕರೆಯಲ್ಪಡುವ ಸೋಯಾ ತುಂಡುಗಳು (ಚಂಕ್ಸ್), ಸೋಯಾ ಹಾಲು ಇತ್ಯಾದಿಗಳು ಆಗಿನ್ನೂ ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ಸೋಯಾ ಉತ್ಪನ್ನಗಳನ್ನು ಐಟಿಸಿ ಸಂಸ್ಥೆ ಚೀನಾ, ಪಾಕಿಸ್ತಾನ, ಯುನೈಟೆಡ್ ಅರಬ್
ಎಮರೈಟ್ಸ್, ಬಾಂಗ್ಲಾದೇಶದಂತಹ ದೇಶಗಳಿಗೆ ರಫ್ತು ಮಾಡುತ್ತಿತ್ತು. ಹಾಗಿರುವಾಗ, ಸೋಯಾಬೀನ್ ಉದ್ಯಮ ಶ್ರೀಮಂತವಾಗ ಬೇಕಿತ್ತು, ಅದನ್ನು ಬೆಳೆದ ರೈತರೂ ಧನಿಕರಾಗಬೇಕಿತ್ತು. ಆದರೆ ಪರಿಸ್ಥಿತಿ ಹಾಗಿರಲಿಲ್ಲ.

ಮಧ್ಯಪ್ರದೇಶದ ಸೋಯಾ ಬೆಳೆಯುವ ರೈತರು ಸಾಲದಲ್ಲಿ ಮುಳುಗಿರುತ್ತಿದ್ದರು. ಎಲ್ಲಿಯವರೆಗೆ ಎಂದರೆ ಮುಂದಿನ ಬೆಳೆ ಬೆಳೆಯಲು ಕೂಡ ಅವರಲ್ಲಿ ಹಣ ಇರುತ್ತಿರಲಿಲ್ಲ. ಅದಕ್ಕೆ ಪ್ರಮುಖ ಕಾರಣ ಸಪ್ಲೈಚೈನ್ ಅಥವಾ ಸರಬರಾಜಿನ ಸರಪಳಿಯ ಕೊಂಡಿ ಹಾಗಿತ್ತು. ಸರಬರಾಜಿನಲ್ಲಿ ಪ್ರಮುಖವಾಗಿರುವುದು ಮೂರು ಅಂಶಗಳು. ಮೊದಲನೆಯದು, ಬೆಳೆ ಬೆಳೆಯುವ ರೈತ. ಎರಡನೆಯದು, ಎಪಿಎಮ್‌ಸಿ (Agriculture Produce Market Committee) ಮೂರನೆಯದಾಗಿ, ಸಗಟು ವ್ಯಾಪಾರ ಸ್ಥರು ಅಥವಾ ಐಟಿಸಿಯಂತಹ ಸಂಸ್ಥೆಗಳು. ಎಪಿಎಮ್‌ಸಿ ಎಂದರೆ ಸರಕಾರದಿಂದ ಮಾನ್ಯತೆ ಪಡೆದ ಗುತ್ತಿಗೆದಾರು ಅಥವಾ ಮಾರಾಟಗಾರರ (ಮಧ್ಯವರ್ತಿಗಳ) ಒಕ್ಕೂಟ. ರೈತರು ಸಂತೆಯಲ್ಲಿ ಮೋಸಹೋಗದಂತೆ ಖಾತ್ರಿಪಡಿಸಿಕೊಳ್ಳಲು ಸರಕಾರ ನಿರೂಪಿಸಿದ ಯೋಜನೆ ಅನ್ನಿ.

ಇದರ ಪ್ರಕಾರ, ಮಾರುಕಟ್ಟೆಯಲ್ಲಿ ಸರಕಾರದ ಪರವಾನಿಗೆ ಪಡೆಯದ ಯಾವುದೇ ವ್ಯಾಪರಸ್ಥರು ರೈತರಿಂದ ನೇರವಾಗಿ ಅವರ ಬೆಳೆಯನ್ನು ಕೊಂಡುಕೊಳ್ಳುವಂತಿರಲಿಲ್ಲ. ವ್ಯಾಪಾರಸ್ಥರು ರೈತ ಬೆಳೆದ ಬೆಳೆಗೆ ಬೆಲೆ ಕಟ್ಟುತ್ತಾರೆ, ಹೆಚ್ಚು ಬೆಲೆ ಕಟ್ಟಿದ ವ್ಯಾಪಾರ ಸ್ಥನಿಗೆ ರೈತ ತನ್ನ ಬೆಳೆಯನ್ನು ಮಾರುತ್ತಾನೆ, ಇದು ಲೆಕ್ಕಾಚಾರ. ಆ ಲೆಕ್ಕದಲ್ಲಿ ರೈತ ಒಳ್ಳೆಯ ಹಣ ಸಂಪಾದಿಸಿ ಶ್ರೀಮಂತನಾಗ ಬೇಕಿತ್ತು. ಆದರೆ ಪ್ರಮುಖವಾದ ಮೂರು ಕಾರಣಗಳಿಂದ ಇದು ವಾಸ್ತವದಿಂದ ದೂರವೇ ಉಳಿಯುತ್ತಿತ್ತು. ಮೊದಲನೆಯದಾಗಿ, ರೈತರು ಬೆಳೆ ಬೆಳೆಯುವ ಸ್ಥಳದಿಂದ ಮಾರುಕಟ್ಟೆ ಸುಮಾರು ಮೂವತ್ತರಿಂದ ಐವತ್ತು ಕಿಲೋಮೀಟರ್ ದೂರದಲ್ಲಿರುತ್ತಿತ್ತು.

ಭಾರತ ದೇಶದ ಶೇಕಡಾ ಎಂಬತ್ತಕ್ಕೂ ಹೆಚ್ಚು ರೈತರ ಬಳಿ ಇರುವುದು ಎರಡು ಹೆಕ್ಟೇರ್‌ಗಿಂತಲೂ ಕಮ್ಮಿ ಭೂಮಿ. ಅಂದರೆ ಅವರೆಲ್ಲ ಸಣ್ಣ ಹಿಡುವಳಿಯ ರೈತರ ಪಟ್ಟಿಗೆ ಸೇರುವವರು. ಅಂಥವರಿಗೆ ತಾವು ಬೆಳೆದ ಧಾನ್ಯವನ್ನು ಶೇಖರಿಸಿ ಇಡುವುದಕ್ಕೆ ಸ್ಥಳವಾಗಲೀ, ಸಾಗಾಣಿಕೆಯ ಸೌಲಭ್ಯವಾಗಲೀ ಇರುವುದಿಲ್ಲ. ಅವರ ಬಳಿ ಇರುವ ಆಯ್ಕೆಯೆಂದರೆ, ವಾಹನವನ್ನು ಬಾಡಿಗೆಗೆ ಪಡೆದು ಸರಕು ಸಾಗಿಸುವುದು ಅಥವಾ ಸಣ್ಣ ಪುಟ್ಟ ಗುತ್ತಿಗೆದಾರರಿಗೋ, ವ್ಯಾಪಾರಸ್ಥರಿಗೋ ಮಾರುವುದು. ಆ ಗುತ್ತಿಗೆದಾರರು ಕಮ್ಮಿ ಮೊತ್ತದಲ್ಲಿ ಖರೀದಿಸಿ, ದೊಡ್ಡ ಗುತ್ತಿಗೆದಾರರಿಗೆ ಮಾರಿ, ಅವರು ಎಪಿಎಮ್‌ಸಿಯಲ್ಲಿ ಮಾರುವುದು.

ಅಂದರೆ, ರೈತ ಸಾಗಾಣಿಕೆಯ ಖರ್ಚನ್ನು ತಾನೇ ಭರಿಸಬೇಕು ಅಥವಾ ಕಮ್ಮಿ ಬೆಲೆಗೆ ತಾನು ಬೆಳೆದದ್ದನ್ನು ಮಾರಬೇಕು. ಮೂರನೆಯ ಆಯ್ಕೆಯೇ ಇಲ್ಲ. ಎರಡನೆಯದಾಗಿ, ಪ್ರಸಕ್ತ ದಿನ, ಪ್ರಸಕ್ತ ಮಾರುಕಟ್ಟೆಯಲ್ಲಿ ತಾನು ಬೆಳೆದ ಬೆಳೆಗೆ ಬೆಲೆ ಎಷ್ಟಿದೆ ಎಂದು ರೈತರಿಗೆ ತಿಳಿಯುತ್ತಿರಲಿಲ್ಲ. ಕೇವಲ ಬಾಯಿ ಮಾತಿನಿಂದ ಕೇಳಿದ್ದನ್ನೇ ನಂಬಬೇಕಿತ್ತು. ಆ ನಂಬಿಕೆಯಿಂದಲೇ ಐವತ್ತು ಕಿಲೋಮೀಟರ್ ದೂರ ದಲ್ಲಿರುವ ಮಾರುಕಟ್ಟೆಗೆ ಬಾಡಿಗೆ ವಾಹನದಲ್ಲಿ ಸರಕು ಒಯ್ಯುವ ರಿಸ್ಕ್ ತೆಗೆದುಕೊಳ್ಳಬೇಕಿತ್ತು.

ಒಂದು ವೇಳೆ ಅಂದು ಮಾರುಕಟ್ಟೆಯಲ್ಲಿ ತಾನು ಎಣಿಸಿದ್ದಕ್ಕಿಂತ ಕಮ್ಮಿ ಧಾರಣೆ ಇದ್ದರಂತೂ ಕಥೆಯೇ ಮುಗಿಯಿತು. ಇನ್ನು ಕೊನೆಯದಾಗಿ, ಮಾರುಕಟ್ಟೆಯಲ್ಲಿ ನೇರವಾಗಿ ಮಾರಲು ಸಾಧ್ಯವಿಲ್ಲದ್ದರಿಂದ, ಪರವಾನಿಗೆ ಪಡೆದ ವ್ಯಾಪಾರಸ್ಥರಿಗೆ ಮಾರ ಬೇಕಿತ್ತು. ದೂರದ ಊರಿಂದ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಬಾಡಿಗೆ ವಾಹನದಲ್ಲಿ ತಂದ ರೈತರು ಮಾರಾಟ ಮಾಡದೇ ಹಿಂತಿರುಗುವುದಿಲ್ಲ ಎಂದು ನಂಬಿದ್ದ ವ್ಯಾಪಾರಸ್ಥರು ಒಳ ಒಪ್ಪಂದ ಮಾಡಿಕೊಂಡು ಒಂದೇ ಬೆಲೆಯನ್ನು ನಮೂದಿಸುತ್ತಿದ್ದರು.

ಹಾಗಾಗಿ ರೈತರು ಕೆಲವೊಮ್ಮೆ ನಷ್ಟವಾದರೂ, ಮಾರಿ ಕೈತೊಳೆದುಕೊಳ್ಳುತ್ತಿದ್ದರು. ವ್ಯಾಪಾರಸ್ಥರು ತಮ್ಮ ಲಾಭಾಂಶ ಸೇರಿಸಿ ಐಟಿಸಿಯಂತಹ ಸಂಸ್ಥೆಗೆ ಮಾರುತ್ತಿದ್ದರು ಎಂದು ಬೇರೆ ಹೇಳಬೇಕಿಲ್ಲವಲ್ಲ. ಅದಕ್ಕಿಂತಲೂ ಖೇದಕರ ಸಂಗತಿಯೆಂದರೆ,
ವ್ಯಾಪಾರಸ್ಥರು ರೈತರಿಗೆ ಅದೇ ಕ್ಷಣದಲ್ಲಿ ಹಣ ಸಂದಾಯ ಮಾಡುತ್ತಿರಲಿಲ್ಲ. ತಾವು ಖರೀದಿಸಿದ ಸಾಮಾನು ವಿಕ್ರಿಯಾಗಿ, ತಮಗೆ ಹಣ ಬಂದ ಮೇಲಷ್ಟೇ ರೈತರಿಗೆ ನೀಡುತ್ತಿದ್ದರು. ಒಮ್ಮೆ ರೈತನ ಬಳಿ ಹಣದ ಕೊರತೆಯಾದರೆ ಬೀಜ, ಗೊಬ್ಬರ, ಉಪಕರಣ ಖರೀದಿ ಎಲ್ಲದಕ್ಕೂ ತತ್ವಾರವೇ.

ಅದರಿಂದ ವರ್ಷ ವರ್ಷಕ್ಕೂ ಬೆಳೆಯಲ್ಲಿಯೂ ಇಳುವರಿಯಲ್ಲಿಯೂ ಕಡಿಮೆಯಾಗುತ್ತಾ ಹೋಯಿತು. (ಇವತ್ತಿಗೂ ರೈತರ ಸ್ಥಿತಿ ಯಲ್ಲಿ ಅದ್ಭುತವಾದ ಸುಧಾರಣೆಯಾಗಿದೆ ಎಂದು ಖಂಡಿತ ಹೇಳುವಂತಿಲ್ಲ ಬಿಡಿ.) ಈ ನಷ್ಟ ಎಷ್ಟಾಗುತ್ತಿತ್ತು ಎಂದರೆ, ಶೇಕಡಾ ಅರವತ್ತರಿಂದ ಎಪ್ಪತ್ತರಷ್ಟು. ಆಗ ಐಟಿಸಿ ಸಂಸ್ಥೆ ಹೊಸ ಯೋಜನೆಗೆ ಚಾಲ್ತಿ ನೀಡಿತು. ಅದೇ ಇ-ಚೌಪಾಲ. ಹಿಂದಿಯಲ್ಲಿ ಚೌಪಾಲ್ ಎಂದರೆ ಪ್ರಾರ್ಥನಾ ಮಂದಿರ ಅಥವಾ ಪೂಜಾ ಸ್ಥಳ ಎಂಬ ಅರ್ಥ. ಇಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲದ ಸಹಾಯದಿಂದ ರೈತನಿಗೆ ಮಾಹಿತಿ ಒದಗಿಸುವುದು ಉದ್ದೇಶ.

ಐಟಿಸಿ ಸಂಸ್ಥೆ ಸುಮಾರು ಎರಡೂವರೆ ದಶಕದ ಹಿಂದೆಯೇ ಮಧ್ಯಪ್ರದೇಶದ ಸಣ್ಣ ಪುಟ್ಟ ಊರಿನಲ್ಲಿ ಕಂಪ್ಯೂಟರ್ ಅಳವಡಿ ಸಿತು. ಅದರಲ್ಲಿ ಆಯಾ ಊರಿನ ಹವಾಮಾನ ವರದಿಯಿಂದ ಹಿಡಿದು, ಬಿತ್ತನೆಯ ಒಂದು ಬೀಜ ಇನ್ನೊಂದರಿಂದ ಎಷ್ಟು ದೂರ ಇರಬೇಕು ಎನ್ನುವುದರವರೆಗೆ ಮಾಹಿತಿ ಇರುತ್ತಿತ್ತು. ಅತಿ ಮುಖ್ಯವಾಗಿ ಮಾರುಕಟ್ಟೆಯ ವಿವರಗಳು, ವಿಶೇಷವಾಗಿ ಎಪಿಎಮ್‌ಸಿ ಮತ್ತು ಐಟಿಸಿ ಕಂಪನಿಯ ಖರೀದಿಯ ದರ ತಿಳಿಯಬಹುದಾಗಿತ್ತು.

ಜತೆಗೆ ಪ್ರತಿ ನಿತ್ಯ ಎಷ್ಟು ಧಾನ್ಯ ಖರೀದಿಸಲಾಗಿದೆ ಎಂಬ ಮಾಹಿತಿಯೂ ದೊರಕುತ್ತಿತ್ತು. ಇದನ್ನೆಲ್ಲ ತಿಳಿಯಲು ಅನಕ್ಷರಸ್ಥ ರೈತ ರಿಗೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಪ್ರತಿ ಊರಿನಲ್ಲೂ ಕಂಪ್ಯೂಟರ್ ಕುರಿತು ಮಾಹಿತಿ ಇರುವ ಒಬ್ಬ ಸಂಚಾಲಕನನ್ನು ನೇಮಿ ಸಿತು. ಅವನಿಗೆ ವಹಿವಾಟಿನ ಮೇಲೆ ಅರ್ಧ ಪ್ರತಿಶತ ಕಮಿಶನ್ ಕೊಡುತ್ತಿತ್ತು. ಅದರಿಂದ ಸಂಚಾಲಕನೂ ಆಸಕ್ತಿಯಿಂದ, ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದ.

ಐಟಿಸಿ ಸಂಸ್ಥೆ ಸರಕಾರದೊಂದಿಗೆ ಮಾತುಕತೆ ನಡೆಸಿ, ಐದು ಸಂಸ್ಕರಣಾ ಕೇಂದ್ರ ಮತ್ತು ನಲವತ್ತು ಶೇಖರಣಾ ಕೇಂದ್ರ ಸ್ಥಾಪಿಸು ವುದಾಗಿ ಹೇಳಿ, ರೈತರಿಂದ ನೇರ ಖರೀದಿಗೆ ಪರವಾನಿಗೆ ಪಡೆಯಿತು. ಪ್ರಮುಖವಾಗಿ ಹೇಳಬೇಕಾದದ್ದೆಂದರೆ, ಈ ಕೇಂದ್ರಗಳನ್ನು ರೈತನ ಹೊಲದಿಂದ ಇಪ್ಪತ್ತರಿಂದ ಇಪ್ಪತ್ತೈದು ಕಿಲೋಮೀಟರ್ ಒಳಗೆ ಇರುವಂತೆ ನಿರ್ಮಿಸಿತು. ಸಣ್ಣ ಮೊತ್ತದ ಬಾಡಿಗೆಯಾ ದದ್ದರಿಂದ ಸರಕು ಸಾಗಣೆಯ ಬಾಡಿಗೆಯನ್ನೂ ಸಂಸ್ಥೆಯೇ ಭರಿಸುತ್ತಿತ್ತು. ಕ್ರಮೇಣ ಈ ಕೇಂದ್ರಗಳಲ್ಲಿ ಮಣ್ಣು ತಪಾಸಣೆಗೆಂದು ಪ್ರಯೋಗಾಲಯವನ್ನೂ ತೆರೆಯಿತು. ಎಲ್ಲಕ್ಕಿಂತ ಮಿಗಿಲಾಗಿ, ಕಿರೀಟದ ಮೇಲೊಂದು ಗರಿ ಇಟ್ಟಂತೆ, ರೈತರಿಂದ ಖರೀದಿಸಿದ ಬೆಳೆಗೆ ತತ್ ಕ್ಷಣದಲ್ಲಿ ಹಣ ನೀಡುವ ವ್ಯವಸ್ಥೆಯನ್ನೂ ಮಾಡಿತು.

ಇದರಿಂದ ರೈತರು ಎದುರಿಸುತ್ತಿದ್ದ ಬೀಜ, ಗೊಬ್ಬರ, ಕೃಷಿ ಸಲಕರಣೆಗಳ ಕೊರತೆ ನೀಗಿ ಇಳುವರಿ ಹೆಚ್ಚುವಂತಾಯಿತು. ಇದರಿಂದ ರೈತ ಪ್ರತಿ ಕ್ವಿಂಟಲ್‌ಗೆ ಸುಮಾರು ಎಪ್ಪತ್ತೈದು ರುಪಾಯಿಯಷ್ಟು ಹೆಚ್ಚು ಲಾಭಗಳಿಸಿದರೆ, ಐಟಿಸಿ ಬರೀ ಸರಕು ಸಾಗಾಟ ವೊಂದರ ಸುಮಾರು ನಲವತ್ತು ರುಪಾಯಿ ಉಳಿಸುತ್ತಿತ್ತು. ಇಂದು ಐಟಿಸಿ ಹಣ್ಣಿನ ರಸದಿಂದ ಹಿಡಿದು, ಬಿಸ್ಕತ್ತು ತಯಾರಿಸುವವರೆಗೂ ತನ್ನ
ಉದ್ಯಮ ಬೆಳೆಸಿಕೊಂಡಿದೆ. ಇ-ಚೌಪಾಲ್‌ನಲ್ಲಿ ಸೋಯಾದೊಂದಿಗೆ ಕಾಫಿ, ಅಕ್ಕಿ, ಗೋಧಿ, ಬೇಳೆ ಕಾಳುಗಳೂ ಸೇರಿಕೊಂಡಿವೆ.

ದೇಶದ ಹತ್ತು ರಾಜ್ಯಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಇಲ್ಲಿ ಒಂದು ವಿಷಯ ಹೇಳಲೇಬೇಕು. ‘ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ’ ಪ್ರಕಾರ ಕಳೆದ ಮೂರು ದಶಕಗಳಲ್ಲಿ ಸುಮಾರು ಮೂರು ಲಕ್ಷ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತದ ಆರ್ಥಿಕತೆಯಲ್ಲಿ ಕೃಷಿಯ ಪಾಲು ಶೇಕಡಾ ಹದಿನೈದಕ್ಕಿಂತ ಹೆಚ್ಚು. ಶೇಕಡಾ ಎಪ್ಪತ್ತರಷ್ಟು ಜನರ ವ್ಯಾಪಾರ ಕೃಷಿ ಅಥವಾ ಅದರ ಉತ್ಪನ್ನವನ್ನು ಅವಲಂಬಿಸಿದೆ. ದೇಶದ ಒಟ್ಟೂ ಕಾರ್ಮಿಕರ ಸಂಖ್ಯೆಯಲ್ಲಿ ಶೇಕಡಾ ನಲವತ್ತಕ್ಕಿಂತಲೂ ಹೆಚ್ಚು ಕೃಷಿಗೆ ಸಂಬಂಧಪಟ್ಟವರಾಗಿದ್ದಾರೆ.

ಇಂದಿಗೂ ಪ್ರತಿನಿತ್ಯ ಸರಾಸರಿ ಇಪ್ಪತ್ತೆಂಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತನ ಸಾವಿನ ಸುದ್ದಿ ಕೇಳಿದಾಗಲೆಲ್ಲ ನಾವು ಒಂದಷ್ಟು ಪಶ್ಚಾತ್ತಾಪ ಪಡುತ್ತೇವೆ, ಸರಕಾರಕ್ಕೆ ಹಿಡಿ ಶಾಪ ಹಾಕುತ್ತೇವೆ. ಮತ್ತೊಬ್ಬ ರೈತನ ಸಾವಿನ ಸುದ್ದಿ ಬರುವವರೆಗೆ ಹಿಂದಿನ ದನ್ನು ಮರೆತುಬಿಡುತ್ತೇವೆ. ಮಾಲ್‌ಗಳಿಗೆ ಹೋಗಿ ತಂಗಳ ಪೆಟ್ಟಿಗೆಯಲ್ಲಿ ತಿಂಗಳುಗಟ್ಟಲೆ ಇಟ್ಟ ತರಕಾರಿಯನ್ನೋ, ಧಾನ್ಯ ವನ್ನೋ ಹೆಚ್ಚಿನ ಬೆಲೆಗೆ ಕೊಂಡು ತರುತ್ತೇವೆ.

ಬೀದಿ ಬದಿಯಲ್ಲಿ ತನ್ನ ಮನೆಯಲ್ಲಿ ಬೆಳೆದು ಮಾರಲು ತಂದ ರೈತನ ಬಳಿ ಎಲ್ಲಿಲ್ಲದ ಚೌಕಾಶಿಗೆ ಇಳಿಯುತ್ತೇವೆ. ಹಾಗಿರುವಾಗ
ರೈತನಿಗೆ ಆಶಾಕಿರಣವೆಂದರೆ ಸರಕಾರವೂ ಅಲ್ಲ, ಸಾಮಾನ್ಯ ಜನರೂ ಅಲ್ಲ, ಮಧ್ಯವರ್ತಿಗಳೂ ಅಲ್ಲ. ಐಟಿಸಿಯಂತಹ ಸಂಸ್ಥೆ ಗಳು ಮಾತ್ರ. ಐಟಿಸಿಯಂತಹ ಸಂಸ್ಥೆಗಳ ವಂಶ ಬೆಳೆಯಲಿ.

error: Content is protected !!