Saturday, 20th April 2024

ಎತ್ತ ಸಾಗುತ್ತಿದೆ ರಾಜ್ಯ ಬಿಜೆಪಿ ಸಂಘಟನೆ ?

ವರ್ತಮಾನ

maapala@gmail.com

ರಾಜ್ಯದಲ್ಲಿ ಅಧಿಕಾರದಿಂದ ಕೆಳಗಿಳಿದು ಇದೀಗ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಸಂಘಟನಾತ್ಮಕವಾಗಿ ಬಲಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ಸೋಲಿನಿಂದ ಹೊರಬಂದು ಲೋಕಸಭೆ ಚುನಾವಣೆಗೆ ಸಿದ್ಧವಾಗಬೇಕಾಗಿರುವ ಪಕ್ಷ ಇನ್ನೂ ಆತ್ಮಾವಲೋಕನ ಮಾಡಿಕೊಂಡು ಕಾರ್ಯಪ್ರವೃತ್ತವಾಗಿಲ್ಲ. ಕೆಲವೇ ಕೆಲವರ ಹಿಡಿತದಿಂದ ಹೊರಬರುವ ಲಕ್ಷಣಗಳೂ ಕಾಣಿಸುತ್ತಿಲ್ಲ.

ವಿಧಾನಸಭೆ ಚುನಾವಣೆ ಮುಗಿದು ೨೦ ದಿನಗಳೇ ಕಳೆದಿವೆ. ನಿರೀಕ್ಷೆ ಮೀರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದರ ಬೆನ್ನಲ್ಲೇ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಒತ್ತಾಯ ಗಳೂ ಕೇಳಿಬರುತ್ತಿವೆ. ಚುನಾವಣೆ ವೇಳೆ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಹಿಗ್ಗಾ ಮಗ್ಗ ಜಾಡಿಸಿದ್ದ ಬಿಜೆಪಿ ಕೂಡ ಈಗ ಕಾಂಗ್ರೆಸ್‌ ನ ಗ್ಯಾರಂಟಿ ಹಿಂದೆ ಬಿದ್ದು, ಘೋಷಿಸಿದಂತೆ ಯಾವುದೇ ಷರತ್ತಿಲ್ಲದೆ ಗ್ಯಾರಂಟಿ ಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿ ಸುವುದರಲ್ಲಿ ನಿರತವಾಗಿದೆ.

ಪ್ರತಿಪಕ್ಷವಾಗಿ ಅದು ತನ್ನ ಕೆಲಸ ಮಾಡುತ್ತಿದೆ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ ಬಿಜೆಪಿಯೊಳಗೆ ಏನಾಗುತ್ತಿದೆ?
ಈ ಪ್ರಶ್ನೆಗೆ ಸ್ವತಃ ಬಿಜೆಪಿಯಲ್ಲೇ ಉತ್ತರ ಸಿಗದಂತಾಗಿದೆ. ಚುನಾವಣೆಯಲ್ಲಿ ಹೀನಾಯ ಸೋಲಿಗೆ ಕಾರಣಗಳನ್ನು ಹುಡುಕುವ ಕೆಲಸ ಇನ್ನೂ ಆಗಿಲ್ಲ. ಅಷ್ಟೇ ಏಕೆ, ಇನ್ನೂ ಪ್ರತಿಪಕ್ಷ ನಾಯಕ ಯಾರು ಎಂಬುದನ್ನೂ ನಿರ್ಧರಿಸಲು ಸಾಧ್ಯವಾಗಿಲ್ಲ.

ಚುನಾವಣಾ ಫಲಿತಾಂಶ ಬಂದ ಸಮಯದಲ್ಲಿ ಮುಂದಿನ ವಾರ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದ ಬಿಜೆಪಿ ರಾಜ್ಯ ನಾಯಕರು ಮೂರು ವಾರ ಕಳೆದರೂ ಆ ನಿಟ್ಟಿನಲ್ಲಿ ಯೋಚಿಸಿದಂತೆ ಕಾಣಿಸುತ್ತಿಲ್ಲ. ಇದರ ಮಧ್ಯೆಯೇ ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷ ಸಿದ್ಧತೆ ಆರಂಭಿಸಿದೆ. ಆರಂಭಿಸಿದೆ ಎನ್ನುವುದಕ್ಕಿಂತಲೂ ಪಕ್ಷದ ವರಿಷ್ಠರು ಹೇಳಿದಂತೆ ಅವರ ಸೂಚನೆಗಳನ್ನು ಪಾಲಿಸಿದೆ. ಬಹುಶಃ ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನೂ ಐದು ವರ್ಷ ಇದೆ.
ಅಷ್ಟರೊಳಗೆ ಬಾಕಿ ಉಳಿದಿರುವ ಕೆಲಸಗಳನ್ನು ಮಾಡಿಕೊಂಡರೆ ಸಾಕು ಎನ್ನುವಂತಿದೆ ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳೇನು ಮತ್ತು ಯಾರು ಎಂಬುದು ಗೊತ್ತಿರುವ ಸಂಗತಿ. ಅಧಿಕಾರ ದಲ್ಲಿದ್ದಾಗ ಮೂರು ವರ್ಷ ಹೇಳಿಕೊಳ್ಳುವಂತಹ ಸಾಧನೆಗಳನ್ನು ಮಾಡದೆ ಇನ್ನೇನು ಚುನಾವಣೆ ಸಮೀಪಿಸುತ್ತಿದೆ ಎನ್ನುವಾಗ ಒಂದರ ಹಿಂದೊಂದರಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಅವೆಲ್ಲವೂ ಚುನಾವಣೆಗೆ ಸೀಮಿತ ಎನ್ನುವ ರೀತಿ ಬಿಜೆಪಿ ಸರಕಾರ ವರ್ತಿಸಿತ್ತು. ದಶಕಗಳ ಬೇಡಿಕೆ ಈಡೇರಿಸಿದೆವು ಎಂದು ಅಧಿಕಾರದಲ್ಲಿದ್ದವರು ತಮ್ಮ ಬೆನ್ನು ತಾವೇ ತಟ್ಟಿಕೊಂಡರು.

ಆದರೆ, ಅದು ಜನರಿಗೆ ಅರ್ಥವಾಗಿತ್ತು. ಇನ್ನು ಅಭ್ಯರ್ಥಿಗಳ ಆಯ್ಕೆಯಲ್ಲಿ ಏನೋ ಬದಲಾವಣೆ ಮಾಡಲು ಹೋಗಿ, ಯಾವುದೋ ಕಾರಣಕ್ಕೆ ಹಲವರಿಗೆ ಟಿಕೆಟ್ ತಪ್ಪಿಸಿ ಸೋಲನ್ನು ಮೈಮೇಲೆ ಎಳೆದುಕೊಂಡರು. ಇದೆಲ್ಲಕ್ಕಿಂತ ಮುಖ್ಯವಾಗಿ
ಬಿಜೆಪಿ ಸೋಲಿಗೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಕಾರಣ ಎಂದು ಹೇಳಬಹುದಾದರೂ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಉತ್ತಮ ಆಡಳಿತ ನೀಡಿದ್ದರೆ ಜನರು ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಮಹತ್ವ ಕೊಡುತ್ತಲೂ
ಇರಲಿಲ್ಲ, ಬಿಜೆಪಿ ಸೋಲು ಅನುಭವಿಸುತ್ತಲೂ ಇರಲಿಲ್ಲ.

ಆದರೆ, ಅತಿಯಾದ ಆತ್ಮವಿಶ್ವಾಸ, ಎಲ್ಲಕ್ಕೂ ಪಕ್ಷದ ವರಿಷ್ಠರನ್ನೇ ನಂಬಿಕೊಂಡ ಕಾರಣ ಸೋಲು ತಪ್ಪಲಿಲ್ಲ. ಆದರೂ ರಾಜ್ಯ ಬಿಜೆಪಿ ಇದರಿಂದ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ನೆಪದಲ್ಲಿ ರಾಜ್ಯದಲ್ಲಿ ಸಂಘಟನೆಯನ್ನು ಬದಿಗಿಟ್ಟಿದೆ. ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ಸರಕಾರವನ್ನು ಅವಲಂಬಿಸಿಲ್ಲ. ಇಲ್ಲಿ ಯಾವುದೇ ಸರಕಾರ ಇದ್ದರೂ ಲೋಕಸಭೆಯಲ್ಲಿ ಜವರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದು ೧೯೯೯ರಿಂದಲೂ ರಾಜ್ಯದಲ್ಲಿ ಸಾಬೀತಾಗುತ್ತಲೇ ಬಂದಿದೆ.

೨೦೧೩ ಮತ್ತು ೨೦೧೯ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಮೇಲೆ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಸಾಧ್ಯತೆಗಳಿವೆ. ಆದರೆ, ಇದಕ್ಕೆ ಬಿಜೆಪಿ ಮಾಡಬೇಕಾಗಿರುವುದು ಸಂಘಟನೆಯನ್ನು ಚುರುಕುಗೊಳಿಸುವುದು. ಸಂಘಟನೆ ಗಟ್ಟಿಯಾಗಿದ್ದರೆ ಜನರನ್ನು ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ತೇಲಿಸಬಹುದು.

ಇದಕ್ಕೆ ಮಾಡಬೇಕಾಗಿರುವ ಮೊದಲ ಕೆಲಸ ರಾಜ್ಯ ಘಟಕದಲ್ಲಿ ಬದಲಾವಣೆ ತರುವುದು. ಕೇವಲ ನರೇಂದ್ರ ಮೋದಿ ಅವರ ಗುಣಗಾನ, ಕಾಂಗ್ರೆಸ್ ವಿರುದ್ಧ ಓತಪ್ರೋತ ಟೀಕೆಗಳನ್ನು ಮಾಡುವ ಭಾಷಣಗಳಿಂದ ಸಂಘಟನೆ ಸಾಧ್ಯವಿಲ್ಲ. ಅದಕ್ಕೆ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಬಲ್ಲ ಒಬ್ಬ ಸಾರಥಿ ಬೇಕು. ಅದಕ್ಕೆ ಇಂತಹ ಜಾತಿಯವರೇ ಆಗಬೇಕು ಎಂದೇನಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಹಳೆಯ ವೈಷಮ್ಯ ಮರೆತು, ಜಿದ್ದು ಸಾಽಸದೆ ಪಕ್ಷಕ್ಕಾಗಿಯೇ ಕೆಲಸ ಮಾಡುವ ವ್ಯಕ್ತಿ ಬೇಕು. ಯಾರನ್ನೋ ಮೆಚ್ಚಿಸಲು ಇನ್ಯಾರನ್ನೋ ತುಳಿಯುವ, ಹಿರಿಯ ನಾಯಕರನ್ನು ಓಲೈಸಲು ಕಿರಿಯರನ್ನು ಕಡೆಗಣಿಸುವರಿಂದ ಅದು ಸಾಧ್ಯವಿಲ್ಲ.

ತಮ್ಮವರು, ತಮಗೆ ಜೀ ಹುಜೂರ್ ಎನ್ನುವವರು ಮಾತ್ರ ಪಕ್ಷ ಸಂಘಟನೆಗೆ ಸಮರ್ಥರು ಎಂದು ಭಾವಿಸಿ, ಅದಕ್ಕೆ ಪೂರಕ ವಾಗಿ ವರಿಷ್ಠರಿಗೆ ವರದಿ ನೀಡುವ ನಾಯಕರೆನಿಸಿಕೊಂಡವರಿಂದ ಪಕ್ಷವನ್ನು ಗಟ್ಟಿಗೊಳಿಸುವುದು ಅಸಾಧ್ಯ. ದುರದೃಷ್ಟ ವೆಂದರೆ, ರಾಜ್ಯದಲ್ಲಿ ಈಗಲೂ ಅಂತಹ ನಾಯಕರೇ ವರಿಷ್ಠರಿಗೆ ಹತ್ತಿರದಲ್ಲಿದ್ದಾರೆ. ಅವರ ಪಕ್ಷ ನಿಷ್ಠೆ ಬಗ್ಗೆ ಯಾರಿಗೂ, ಯಾವುದೇ ತಕರಾರು ಇಲ್ಲ. ಆದರೆ, ಚುನಾವಣಾ ರಾಜಕೀಯದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಪಕ್ಷ ನಿಷ್ಠೆಯ ಜತೆಗೆ ಸ್ವಲ್ಪ ಹೊಂದಾಣಿಕೆಯ ಮನೋ ಭಾವವೂ ಬೇಕು. ಆ ಮೂಲಕ ಪಕ್ಷವನ್ನು ವಿಸ್ತರಿಸಬೇಕು.

ಆದರೆ, ಈ ವಿಚಾರಗಳನ್ನು ಮರೆತು ಪಕ್ಷ ಸಂಘಟನೆ ಮಾಡಿದ್ದೇ ವಿಧಾನಸಭೆ ಚುನಾವಣೆ ಸೋಲಿಗೆ ಕಾರಣ ಎಂಬುದನ್ನು ಪಕ್ಷ ಇನ್ನೂ ಪೂರ್ತಿಯಾಗಿ ಅರಿತುಕೊಂಡಂತೆ ಕಾಣಿಸುತ್ತಿಲ್ಲ. ಏಕೆಂದರೆ, ಆಡಳಿತದಲ್ಲಿದ್ದ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಸ್ಥಾನ ಕಳೆದುಕೊಂಡು ಪ್ರತಿಪಕ್ಷದಲ್ಲಿ ಕುಳಿತಿದ್ದರೂ ಮಹತ್ವದ ಬದಲಾವಣೆಗೆ ವರಿಷ್ಠರು ಇನ್ನೂ ಮನಸ್ಸು ಮಾಡಿದಂತಿಲ್ಲ. ಸೋಲಿನ ಹತಾಷೆಯಿಂದ ಹೊರಬಂದಂತೆ ಕಾಣಿಸುತ್ತಿಲ್ಲ. ಪ್ರತಿಪಕ್ಷ ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗಿಲ್ಲ. ಇನ್ನು ೧೦ ತಿಂಗಳಲ್ಲಿ ಲೋಕಸಭೆ ಚುನಾವಣೆ ಇದ್ದರೂ ವಿಧಾನಸಭೆ
ಚುನಾವಣೆಯ ಸೋಲಿನ ಹೊಣೆ ಹೊತ್ತಿರುವ ಪಕ್ಷದ ರಾಜ್ಯ ಘಟಕದಲ್ಲಿ ಬದಲಾವಣೆ ತರುವ ಯೋಚನೆಯನ್ನೂ ಮಾಡಿಲ್ಲ.

ಇದುವೇ ಪಕ್ಷಕ್ಕಾಗಿ ಸಾಕಷ್ಟು ವರ್ಷ ದುಡಿದು ಈಗ ಮೂಲೆಗೆ ಸರಿದಿರುವ ನಿಷ್ಠಾವಂತರಿಗೆ ನೋವು ತಂದಿರುವುದು. ರಾಜ್ಯ ಬಿಜೆಪಿಯಲ್ಲಿ ಅಂತಹ ಸಾವಿರಾರು ಮಂದಿ ಇದ್ದಾರೆ. ಪಕ್ಷವನ್ನು ಈ ಮಟ್ಟಕ್ಕೆ ಬೆಳೆಸಿ ಅಧಿಕಾರಕ್ಕೆ ತರಲು ಹಗಲು-ರಾತ್ರಿ ದುಡಿದು ಅಧಿಕಾರಕ್ಕೆ ಬರುತ್ತಿದ್ದಂತೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಪಕ್ಷದ ಪ್ರಮುಖ ಪದಾಧಿಕಾರಿಗಳಾಗಿ ಇರಬೇಕಾದರವು ಯಾರನ್ನೂ ಓಲೈಸಿಲ್ಲ ಎಂಬ ಕಾರಣಕ್ಕೆ ಇನ್ನೂ ಕಾರ್ಯಕರ್ತರ ಹಂತದಲ್ಲೇ ಉಳಿದುಕೊಂಡಿದ್ದಾರೆ.

ಚುನಾವಣೆಯಲ್ಲಿ ಪಕ್ಷ ಸೋತಾಗ ನಾಯಕರಿಗೆ ಇಂಥವರ ನೆನಪಾಗುತ್ತದೆಯಾದರೂ ಅವರಿಗೆ ಸೂಕ್ತ ಸ್ಥಾನಮಾನ ಕೊಡುವುದಿಲ್ಲ. ಈ ಕಾರಣಕ್ಕಾಗಿಯೇ ಅತ್ಯಂತ ನಿಷ್ಠಾವಂತ ಮತ್ತು ಸಕ್ರಿಯ ಕಾರ್ಯಕರ್ತರಿಗೆ ಪಕ್ಷ ಸೋತಾಗ ನಾಯಕರ
ಮೇಲೆ ಸಿಟ್ಟು ಬರುವುದು. ಹಾಗೆಂದು ಅದನ್ನು ಬಹಿರಂಗ ಪಡಿಸಿದರೆ ಮತ್ತೆ ಮೂಲೆಗುಂಪಾಗಬೇಕಾಗುತ್ತದೆಯೇ ಹೊರತು ನ್ಯಾಯವಂತೂ ಸಿಗುವುದಿಲ್ಲ. ಹಾಕಿದ ಶ್ರಮಕ್ಕೆ ಪ್ರತಿಫಲವೂ ಸಿಗುವುದಿಲ್ಲ. ಹೊರಗಿನಿಂದ ಪಕ್ಷಕ್ಕೆ ಬಂದವರಿಗಿಂತ ಹೆಚ್ಚಾಗಿ ಪಕ್ಷದೊಳಗೆ ಇದ್ದವರೇ ಇಂತಹ ಕಾರ್ಯಕರ್ತರನ್ನು ಮೂಲೆಗೆ ತಳ್ಳಿದ್ದಾರೆ.

ಇದರ ಪರಿಣಾಮ ಇದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಹೀಗಾಗಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪಕ್ಷವನ್ನು ಕಟ್ಟಲು ಸಮಯ ಸಿಕ್ಕಿದೆ. ಮೋದಿ ಅಲೆಯಲ್ಲಿ ಲೋಕಸಭೆ ಚುನಾವಣೆ ಗೆಲ್ಲಬಹುದಾದರೂ ದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯಲಿರುವ ಬಿಬಿಂಪಿ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ
ಚುನಾವಣೆಗಳಿಗೆ ಕಾರ್ಯಕರ್ತರ ಶ್ರಮವೇ ಅನಿವಾರ್ಯವಾಗುತ್ತದೆ.

ಕಾರ್ಯಕರ್ತರು ಸಕ್ರಿಯರಾಗಬೇಕಾದರೆ ಅವರಿಗೆ ಉತ್ಸಾಹ ತುಂಬುವ, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ, ಅವರ ಸಣ್ಣ ಪುಟ್ಟ ಬೇಡಿಕೆಗಳನ್ನು ಈಡೇರಿಸುವ ನಾಯಕರು ಬೇಕಾಗುತ್ತಾರೆ. ಇಲ್ಲವಾದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆದ ಪರಿಸ್ಥಿತಿಯೇ ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬರಬಹುದು. ಪಕ್ಷದ ಸಂಘಟನೆ ವಿಚಾರದಲ್ಲಿ ಇದಕ್ಕೆ ಪೂರಕವಾದ
ನಿರ್ಧಾರ ಕೈಗೊಳ್ಳಲು ಕಾಲ ಮಿಂಚಿಲ್ಲ. ಆದರೆ, ಪಕ್ಷ ಇದೀಗ ಸಂಪೂರ್ಣ ವರಿಷ್ಠರ ಹಿಡಿತದಲ್ಲಿರುವುದರಿಂದ ಈ ವಾಸ್ತವ
ವನ್ನು ಅವರ ಗಮನಕ್ಕೆ ತರುವ ನಾಯಕತ್ವ ರಾಜ್ಯ ಬಿಜೆಪಿಗೆ ಬೇಕಾಗಿದೆ.

ನಾನೂ ಬಿಜೆಪಿಯ ಒಬ್ಬ ಕಾರ್ಯಕರ್ತ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಪಕ್ಷಕ್ಕಾಗಿ ಯಾವ ಮಟ್ಟದ ತೀರ್ಮಾನವನ್ನೂ ಕೈಗೊಳ್ಳುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ವಿಚಾರವನ್ನು ಮದಟ್ಟು ಮಾಡುವ ಒಂದು ವ್ಯವಸ್ಥೆ ರಾಜ್ಯ ಬಿಜೆಪಿಯಲ್ಲಿ ರೂಪುಗೊಳ್ಳಬೇಕಾಗಿದೆ. ಹಾಗಾದರೆ ಮಾತ್ರ ‘ಮಾಸ್ ಲೀಡರ್’ ಇಲ್ಲದೇ ಇದ್ದರೂ ಬಿಜೆಪಿ ಮತ್ತೆ ಚೇತರಿಸಿ ಕೊಳ್ಳಬಹುದು.

ಲಾಸ್ಟ್ ಸಿಪ್: ಸಾಗುತ್ತಿರುವ ದಾರಿ ಸರಿಯಲ್ಲ ಎಂದು ಗೊತ್ತಾದ ಬಳಿಕವೂ ಅದನ್ನು ಸರಿಪಡಿಸಿಕೊಳ್ಳದಿದ್ದರೆ ಗುರಿ
ಮುಟ್ಟಲು ಸಾಧ್ಯವಿಲ್ಲ.

error: Content is protected !!