Tuesday, 23rd April 2024

ಇರುವುದರಲ್ಲಿ ಖುಷಿ ಪಟ್ಟರೆ ಬದುಕು ಬೆಳದಿಂಗಳು !

ಶ್ವೇತಪತ್ರ

shwethabc@gmail.com

ವೈಭೋಗದ ಮಾರ್ಗದಲ್ಲಿ ಯಶಸ್ಸು ನಮ್ಮನ್ನು ಅಹಂಕಾರಿಗಳನ್ನಾಗಿಯೂ, ಮಾನವೀಯ ಸ್ಪರ್ಶದಿಂದ ದೂರ ತಳ್ಳಲ್ಪಡುತ್ತವೆ. ಮತ್ತೊಂದು ಕಡೆ ಬದುಕು ಬರೆ ವಿಫಲ ಪ್ರಯತ್ನವೇ ಆಗುತ್ತಾ ಹೋದರೆ ಒಳನೋಟ ಹಾಗೂ ಖುಷಿಯ ಪ್ರೇರಣೆಯೇ ಇಲ್ಲದಂತಾಗಿ ಬಿಡುತ್ತದೆ. ಬದುಕಿಗೆ ಬೇಕಿರುವುದು ಬ್ಯಾಲೆನ್ಸ್ ಆದರೆ ನಾವೆಲ್ಲ ಮನುಷ್ಯರು ವಿಫಲತೆಯನ್ನೇ ಹೆಚ್ಚು ಆಲಂಗಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ.

ಬದುಕಲ್ಲಿ ನಾವು ಏನೇ ಮಾಡಿದರೂ ಅದಕ್ಕೊಂದು ಸ್ಪಷ್ಟತೆ ಇರಬೇಕು, ಕೆಲವೊಮ್ಮೆ ಜೋತು ಬಿದ್ದ ಅಭ್ಯಾಸಗಳಿಂದ ದೂರ ಸರಿದು ನಿಂತಿರುತ್ತೇವೆ. ಆದರೆ ಅದನ್ನೇ ಕಾರಣವಾಗಿಸಿ ಕೊರಗುತ್ತಿರು ತ್ತೇವೆ. ಅಂಟಿಕೊಂಡ ಅಭ್ಯಾಸಗಳನ್ನು ಗಟ್ಟಿಯಾಗಿ ಬಿಟ್ಟು ನಿಂತ ನಮ್ಮ ಕ್ಷಮತೆಯನ್ನು
ಅರಿಯುವು ದರಲ್ಲಿ ಸೋಲುತ್ತೇವೆ. ಈ ಮನೋಭಾವ ಬದುಕನ್ನು ಗುರುವೆಂದು ಪರಿಗಣಿಸುವ ಬದಲು ಹೊರೆ ಎಂಬ ಭಾವವನ್ನು ಮನಸ್ಸಿಗೆ ಹೊರಿಸುತ್ತದೆ.

ಮುಖ್ಯವಾಗಿ ನಾವು ರೂಢಿಸಿಕೊಂಡಿರುವುದು ಬದುಕುವುದನ್ನು. ಆದರೆ ರೂಢಿಸಿಕೊಳ್ಳಬೇಕಿ ರುವುದು ಜೀವಿಸುವುದನ್ನು – ಒಂದಿಷ್ಟು ಹಾಸ್ಯ, ತುಂಬ ಪ್ರೀತಿ, ಉದಾರತೆ ನಮ್ಮಷ್ಟಕ್ಕೆ ನಾವೇ ಮೂಡಿಸಿಕೊಳ್ಳಬೇಕು. ಇಲ್ಲದಿದ್ದರೆ ಜೀವನದ ಪಯಣ ಸಪ್ಪೆ. ನಮ್ಮದೇ ಬದುಕನ್ನು ಚಂದದೊಂದು ಅಡುಗೆಗೆ ಹೋಲಿಸಿಕೊಂಡರೆ ಅದಕ್ಕೆ ಬಹು ಮುಖ್ಯವಾಗಿ ಬೇಕಿರುವ ಸಾಮಗ್ರಿ ಸ್ವಯಂ-ಪ್ರತಿಬಿಂಬ.

ನಮ್ಮ ಬಗ್ಗೆ ನಾವೇ ಬೆಳೆಸಿಕೊಳ್ಳುವ ಖುಷಿಯೆಂಬ ಮ್ಯಾಜಿಕ್ ಅದು. ಇದನ್ನು ನಮ್ಮ ಜೊತೆ ನಾವೇ ಬೆಳೆಸಿಕೊಳ್ಳುವ ಸ್ನೇಹವೆನ್ನಬಹುದು (Making friends with ourselves). ಈ ಸ್ನೇಹದ ಮುಖ್ಯವಾದ ತಳಹದಿ ನಮ್ಮ ಬಗ್ಗೆ ನಾವೇ ಯಾವುದೇ ಪೂರ್ವಗ್ರಹಗಳಿಲ್ಲದೆ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬೇಕೆಂಬ ಅಂಶ. ಈ ಸ್ನೇಹ ಒಂಥರ ಯಾವ ಷರತ್ತುಗಳನ್ನು ಒಳಗೊಳ್ಳದ ಅಪೂರ್ವತೆ. ಈ ಜೀವಿಸುವಿಕೆಯ ಪ್ರಕ್ರಿಯೆ ಎಲ್ಲಾ ಸಹಜ ಬೆಚ್ಚಗಿನ ಅಪ್ಪಿಗೆಗಳ ಸಾಂಗತ್ಯ ಜೊತೆಗೆ ಪ್ರೀತಿ ಮತ್ತು ಸಹಾನುಭೂತಿಗಳನ್ನು ಒಳಗೊಂಡ ರಮ್ಯತೆ. ನಿಮ್ಮ ಜೊತೆ ನೀವು ಹೆಚ್ಚಿನ ಸಮಯ ಕಳೆದಷ್ಟು ಅನೇಕ ಅರಿಮೆಯ ಅರಿವುಗಳು ನಿಮ್ಮದಾಗುತ್ತಾ ಹೋಗುತ್ತವೆ. ಆದರೆ ನಮ್ಮಲನೇಕರು ನೋವುಗಳನ್ನು ಕೆರೆದು ಮತ್ತಷ್ಟು ಗಾಯವಾಗಿಸಿ ಕೊಳ್ಳುತ್ತಾರೆ ವಿನಃ ಹೊರಬರುವ ಪ್ರಯತ್ನಕ್ಕೆ ಮುಖ ಮಾಡುವುದಿಲ್ಲ.

ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಪ್ರಜ್ಞೆ ಬೇರೆಯವರ ಗೊಂದಲಗಳಿಗೂ ನಾವು ಮತ್ತಷ್ಟು ವಿನಮ್ರರು ಹಾಗೂ ಸಹಾನುಭೂತಿ ಉಳ್ಳವರನ್ನಾಗಿಯೂ
ಮಾಡುತ್ತದೆ. ಬೇರೆಯವರ ಅನೇಕ ಕೊರಗುಗಳನ್ನು ಹಾಗೇ ನೋಡುವಾಗ ನಮಗೆ ಕಿರಿಕಿರಿ ಎನಿಸಬಾರದು. ಏಕೆಂದರೆ ನಮ್ಮಲ್ಲೂ ಇಂತಹ ಕೊರಗುಗಳು ಇವೆಯಲ್ಲ ನಾವೆಲ್ಲ ಒಂದೇ ದೋಣಿಯ ಸಹ ಪ್ರಯಾಣಿಕರು. ಆದರೆ ಆ ಕೊರಗುವಿಕೆಯನ್ನು ದಾಟಿ ಬರಬೇಕೆಂಬ ಸ್ಪಷ್ಟತೆಯ ಎಚ್ಚರಿಕೆ ಅದೇ ದೋಣಿಯಲ್ಲಿ ಪಯಣಿಸುತ್ತಿರುವ ನಮ್ಮನ್ನು ಸದಾ ತಿವಿಯುತ್ತಿರಬೇಕು.

ಬುದ್ಧನ ತತ್ವದಲ್ಲಿ ಒಂದು ಮಾತಿದೆ, ಶುರುವಿನಲ್ಲೊಂದು; ಕೊನೆಯಲ್ಲೊಂದು (One at the beginning and one at the end). ದಿನ ಶುರುವಿಟ್ಟ ಕೂಡಲೇ ಇದನ್ನು ನಾವೆಲ್ಲ ಅನುಸರಿಸಬೇಕು. ದಿನದ ಶುರುವಿನಲ್ಲೊಂದು ಆಕಾಂಕ್ಷೆ ಅಥವಾ ಅಭಿಲಾಷೆ ಅಥವಾ ಸಂಕಲ್ಪವನ್ನು
ಮಾಡಿಕೊಳ್ಳಬೇಕು ಮಾಡಿಕೊಳ್ಳುವ ಸಂಕಲ್ಪಗಳು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ವಾಸ್ತವಕ್ಕೆ ನಿಲುಕುವಂತಿರಬೇಕು ಉದಾಹರಣೆಗೆ ಹೇಳುವು ದಾದರೆ ಇವತ್ತು ನಾನು ಕೋಪ ಮಾಡಿಕೊಳ್ಳುವುದಿಲ್ಲ (ಆದರೆ ನಮ್ಮಲ್ಲಿ ಕೆಲವರಿಗೆ ಭವ್ಯಕಲ್ಪನೆಗಳೆ ಹೆಚ್ಚು) ಹೀಗೆ ಒಂದು ಸ್ಪಷ್ಟ ಆಲೋಚನೆ ನಮ್ಮದಾದರೆ ಬದುಕಿನ ಹಾದಿ ಸುಲಭ.

ಇನ್ನು ಸಂಜೆ ದಿನ ಮುಗಿದ ಮೇಲೆ ಬೆಳಗಿನಿಂದ ಸಂಜೆಯ ನಮ್ಮದೇ ನಡವಳಿಕೆಗಳ ಒಂದು ಪುಟ್ಟ ಹಿನ್ನೋಟ ಅಥವಾ ವಿಮರ್ಶೆ ಮಾಡಿಕೊಂಡರೆ ಅಲ್ಲಿ ನಮ್ಮ ತಪ್ಪುಗಳನ್ನು ಲೋಪ-ದೋಷಗಳನ್ನು ಗ್ರಹಿಸುವುದು ಸುಲಭ. ಆದರೆ ನಮ್ಮಗೆಲ್ಲ ಇರುವ ದುರದೃಷ್ಟಕರ ಮನೋಭಾವವೆಂದರೆ
ಅನಗತ್ಯವಾಗಿ ನಮ್ಮೆಲ್ಲರ ಸೋಲುಗಳನ್ನು ಅತ್ಯಂತ ವೈಭವೀಕರಿಸಿಕೊಂಡು ನೋಡುವುದು. ಝೆನ್ ತತ್ವ ಹೇಳುವುದೇನು ಗೊತ್ತೆ? ಸೋಲನ್ನು ನಾವು ಸಂತೋಷಿಸಬೇಕು.

ಏಕೆಂದರೆ ಅಲ್ಲಿ ನಮ್ಮದೇ ತಪ್ಪುಗಳನ್ನು ಅರಿಯಲು ಅವಕಾಶ ನಮಗೆ ಸಿಗುತ್ತದೆ. ಈ ಒಳನೋಟವೇ ಒಂಥರಾ ಸೂರ್ತಿದಾಯಕವಾದದ್ದು. ಸೋಲಿನಲ್ಲಿ ಹೆಚ್ಚು ನಾವು ಪ್ರಾಪಂಚಿಕ ಸುಖಗಳನ್ನು ಕಳೆದುಕೊಳ್ಳಬಹುದೇ ವಿನಃ ನಮ್ಮ ವಿವೇಕವನ್ನಲ್ಲ, ನಮ್ಮ ಅಂತದೃಷ್ಟಿಯನಲ್ಲ, ನಮ್ಮ ಸಹಜ ಬುದ್ಧಿಶಕ್ತಿಯನ್ನಲ್ಲ. ಬದಲಾಗಲು ಬರಿಯೇ ಆಕಾಂಕ್ಷೆಗಳಷ್ಟೇ ಇದ್ದರೆ ಸಾಲದು, ಅವುಗಳನ್ನು ನಮ್ಮ ಬದುಕಿಗೆ ಪೂರಕವಾಗಿಸಿಕೊಳ್ಳುತ್ತಾ ಸಾಗಬೇಕು.
ನಾನಿವತ್ತು ಯಾರ ಮನಸ್ಸನ್ನು ನೋಯಿಸಲಿಲ್ಲ, ನಾನೆಂದು ಸಿಗರೇಟ್ ಸೇದಲಿಲ್ಲ ಇವೇ ಪುಟ್ಟ ಸಂಗತಿಗಳು ಮನಸ್ಸನ್ನು ತುಂಬಬೇಕು. ಆದರೆ ನಾವು ಮಾಡುವುದು ಏನೆಂದರೆ ಇವತ್ತು ನಾನು ಏನೋ ಅಂದುಕೊಂಡೆ, ಆದರೆ ಮಾಡಲಾಗಲಿಲ್ಲ. ಈ ಮಾಡಲಾಗಲಿಲ್ಲವೆಂಬ ಸಂಗತಿಯೇ ಹೆಚ್ಚಿನ ನೆಗೆಟಿವಿಟಿಯನ್ನು ಬದುಕಿಗೆ ತುಂಬುತ್ತದೆ. ಇವತ್ತು ನನಗೆ ಮಾಡಲಾಗದಿರಬಹುದು.

ಆದರೆ ಖಂಡಿತ ಇದನ್ನು ನನ್ನಿಂದ ಮಾಡಲು ಸಾಧ್ಯ ಎನ್ನುವ ಸ್ವಯಂ ಅನುಭೂತಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ, ಖಿನ್ನತೆಯ ಕೂಪದಿಂದ ನಮ್ಮನ್ನು ಹೊರಗುಳಿಸುತ್ತದೆ. ಹೀಗೆ ನಮ್ಮನ್ನು ನಾವೇ ವಿಮರ್ಶಿಸಿಕೊಳ್ಳುವ ಗುಣ ಬದುಕಿಗೆ ಮನಸ್ಸಿಗೆ ಸ್ವಾತಂತ್ರ್ಯವನ್ನು ತಂದು ಕೊಡುತ್ತದೆ. ನಿರಾಕರಿಸದೆ ನಮ್ಮನ್ನು ನಾವೇ ಒಪ್ಪಿಕೊಳ್ಳುತ್ತಿದೆಯಲ್ಲ ಅದು ಬದುಕಿನ ಎಲ್ಲಾ ಖುಷಿಗಳನ್ನು ನಮ್ಮದಾಗಿಸುತ್ತದೆ. ಬುದ್ಧ ಮಾರ್ಗದಲ್ಲಿ ಒಂದು ಮಾತಿದೆ, ಅಧ್ಯಾತ್ಮಿಕ ಹಾದಿ ಎಂದಿಗೂ ಭವ್ಯವಾಗಿ ಇರಬೇಕಿಲ್ಲ. ಅಲ್ಲಿ ಕೆಲವೊಮ್ಮೆ ವಿಫಲ ಪ್ರಯತ್ನಗಳು ಇಣುಕುತ್ತಿರಬೇಕೆಂದು.

ವೈಭೋಗದ ಮಾರ್ಗದಲ್ಲಿ ಬರಿಯ ಒಂದು ಯಶಸ್ಸು ನಮ್ಮನ್ನು ಅಹಂಕಾರಿಗಳನ್ನಾಗಿಯೂ, ಮಾನವೀಯ ಸ್ಪರ್ಶದಿಂದ ದೂರ ತಳ್ಳಲ್ಪಡುತ್ತವೆ. ಮತ್ತೊಂದು ಕಡೆ ಬದುಕು ಬರೆ ವಿಫಲ ಪ್ರಯತ್ನವೇ ಆಗುತ್ತಾ ಹೋದರೆ ಒಳನೋಟ ಹಾಗೂ ಖುಷಿಯ ಪ್ರೇರಣೆಯೇ ಇಲ್ಲದಂತಾಗಿ ಬಿಡುತ್ತದೆ. ಅದಕ್ಕೆ ಬದುಕಿಗೆ ಬೇಕಿರುವುದು ಬ್ಯಾಲೆನ್ಸ್ ಆದರೆ ನಾವೆಲ್ಲ ಮನುಷ್ಯರು ವಿಫಲತೆಯನ್ನೇ ಹೆಚ್ಚು ಆಲಂಗಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಸವಾರಿ
ಅನ್ನುವ ಹೆಸರಿನ ಕನ್ನಡ ಸಿನಿಮಾ ಒಂದಿದೆ ಅದರಲ್ಲಿನ ನಾಯಕನಟಿ ನಾಯಕನಿಗೆ ಒಂದು ಮಾತು ಹೇಳುತ್ತಿರುತ್ತಾಳೆ. ಅದು ಎಂದಿಗೂ ನನ್ನಿಷ್ಟದ ಸಾಲುಗಳಾಗಿವೆ. ನೀನು ಕಾರು ಬಿಟ್ಟು ಕೆಳಗಿಳಿ, ಆಗ ನಿಜವಾದ ಪ್ರಪಂಚದ ಸ್ಪರ್ಶ ನಿನಗಾಗುತ್ತದೆ, ಪ್ರಪಂಚ ಎಂದರೇನು ಅನ್ನೋದು
ಅರ್ಥ ವಾಗುತ್ತದೆ ಎಂದು.

ಇಂತಹ ಸಾಮಾನ್ಯ ಅಂಶಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುವುದು. ನಮ್ಮ ಸಾಮಾನ್ಯದ ಸಾಮಾನ್ಯ ದಿನಗಳಲ್ಲಿ (Ordinary days)
ಖುಷಿಯ ಕ್ಷಣಗಳಿವೆ, ಸಂತೋಷದ ಕೆಲಸಗಳಿವೆ, ಎಷ್ಟೋ ಸಂಗತಿಗಳು ನಮ್ಮನ್ನು ಸ್ಪರ್ಶಿಸಿವೆ, ನಮ್ಮೊಳಗೊಂದು ಆರ್ದ್ರತೆಯನ್ನು ತುಂಬಿವೆ. ಪ್ರಪಂಚಕ್ಕೆ ಜೊತೆಗೆ ಬೇರೆಯವರ ಹೃದಯಗಳಿಗೆ ಕನೆಕ್ಟ್ ಆಗುವಂತೆ ಮಾಡಿವೆ. ಒಳಗಿನ ಅಂತಃ ಸತ್ವದಿಂದ ಮುಂದೆ ತಳ್ಳದ ಹೊರತು ನಮ್ಮ ಹಾದಿ ನಿಂತ ನೀರಾಗಿ ಬಿಡುತ್ತದೆ. ಸೋಲು ನಮ್ಮಲ್ಲಿ ತಪ್ಪು ಸರಿಗಳನ್ನು ಗುರುತಿಸುವ ಗುಣವನ್ನು ಒದಗಿಸಿಕೊಡುತ್ತದೆ.

ಮುಗಿಸುವ ಮುನ್ನ ಗುರು ದಲೈಲಾಮ ಸಂದರ್ಶನವೊಂದರಲ್ಲಿ ಹೇಳಿದ ಕಥೆಯಿಲ್ಲಿ ನೆನಪಾಗುತ್ತಿದೆ. ಒಮ್ಮೆ ದ ಆರ್ಟ್ ಆಫ್ ಹ್ಯಾಪಿನೆಸ್ ಕೃತಿಗಾಗಿ ಹೋವರ್ಡ್ ಕಟ್ಲರ್ ಅವರನ್ನು ಪ್ರಶ್ನೆ ಕೇಳುತ್ತಾರೆ. ನಿಮ್ಮ ಜೀವನದಲ್ಲಿ ಅಪರಾಧಿಪ್ರಜ್ಞೆ ಮೂಡಿಸಿದ, ಪಶ್ಚಾತಾಪ ಪಡುವಂತಹ ಘಟನೆ ಏನಾದರೂ ನಡೆದಿದೆಯೇ ಎಂದು. ಅದಕ್ಕೆ ಉತ್ತರಿಸುವ ದಲೈಲಾಮ, ಒಮ್ಮೆ ಒಬ್ಬ ವಯಸ್ಸಾದ ಸಾಧು ನನ್ನ ಬಳಿ ಬಂದು ನೀವೆಲ್ಲ ಅತ್ಯುನ್ನತ ಬುದ್ಧನ
ಮಾರ್ಗ ಹಾಗೂ ಆಚರಣೆಗಳನ್ನು ಅನುಸರಿಸುತ್ತಿದ್ದೀರಿ, ನಾನು ಅದನ್ನು ಕಲಿಯಬೇಕು ಅದನ್ನು ನನಗೆ ಕಲಿಸಿ ಕೊಡಿ ಎಂದಾಗ ಅದಕ್ಕೆ ಪ್ರತ್ಯುತ್ತರ ವಾಗಿ ದಲೈಲಾಮರವರು ಬಹಳ ಸಹಜವಾಗೆ ಇಲ್ಲಿನ ಕೆಲವೊಂದು ಆಚರಣೆಗಳು ಬಹಳ ಕಠಿಣವಾಗಿವೆ.

ಚಿಕ್ಕವಯಸ್ಸಿನಲ್ಲೇ ಇಲ್ಲಿಗೆ ಬಂದಿದ್ದರೆ ಇವನ್ನೆಲ್ಲ ಕಲಿಯುವುದು ಸುಲಭದಿತ್ತು ಎನ್ನುತ್ತಾರೆ. ನಂತರದಲ್ಲಿ ಅವರಿಗೆ ತಿಳಿದ ವಿಷಯವೆಂದರೆ ಆ ವಯಸ್ಸಾದ ಸಾಧು ಬುದ್ಧ ತತ್ವದ ಆಚರಣೆಗಳನ್ನು ಕಲಿಯಲು ಚಿಕ್ಕವನಾಗ ಬೇಕೆಂಬ ಕಾರಣಕ್ಕೆ ಮತ್ತೆ ಮರುಜನ್ಮ ಪಡೆಯಲು ತನ್ನನ್ನು ತಾನೇ ಕೊಂದುಕೊಂಡಿರುತ್ತಾನೆ. ನಿಮ್ಮ ಜೀವನದ ಪಶ್ಚಾತ್ತಾಪದ ಸಂಗತಿ ಯಾವುದೆಂದು ಪ್ರಶ್ನೆ ಕೇಳಿದ ಕಟ್ಲರಿಗೆ ಒಂದು ಕ್ಷಣ ಈ ಉತ್ತರದಿಂದ ದಿಗ್ಭ್ರಾಂತಿಯಾಗುತ್ತದೆ.

ಆತ ದಲೈಲಾಮಾರಿಗೆ ಮರು ಪ್ರಶ್ನೆ ಎಸೆಯುತ್ತಾನೆ. ಈ ಪಶ್ಚಾತ್ತಾಪದಿಂದ ನೀವು ಹೇಗೆ ಬಿಡುಗಡೆ ಹೊಂದಿದ್ದೀರಿ ಎಂದು? ದೀರ್ಘ ನಿಟ್ಟುಸಿರುಬಿಟ್ಟ ದಲೈಲಾಮ ಉತ್ತರಿಸುತ್ತಾರೆ – ಅದರಿಂದ ನಾನಿನ್ನು ಯಾವುದೇ ಬಿಡುಗಡೆ ಯನ್ನು ಹೊಂದಿಲ್ಲ ಅದಿನ್ನೂ ನನ್ನ ಮನಸಲ್ಲೇ ಇದೆ. ಅದರ ಆಲೋಚನೆ ನನ್ನಲ್ಲಿ ತಪ್ಪಿತಸ್ಥ ಭಾವವನ್ನು ಉಂಟು ಮಾಡಿ ಎದೆಯನ್ನು ಭಾರವಾಗಿಸಿದರೂ ಅದರೊಳಗೆ ನನ್ನನ್ನು ನಾನು ಕಳೆದು ಹೋಗಲು ಬಿಟ್ಟುಕೊಟ್ಟಿಲ್ಲ.ಆ
ಪಶ್ಚಾತ್ತಾಪದ ಆಚೆಗೆ ಎದ್ದು ನಡೆದಿದ್ದೇನೆ. ಹೌದಲ್ಲವೇ! ನಾವು ಹೀಗೆ ತಪ್ಪು ತಿಳಿದುಕೊಂಡಿರುತ್ತೇವೆ,ಪಶ್ಚಾತ್ತಾಪ ಪಡುತ್ತಿರುತ್ತೇವೆ, ದುಃಖಗಳನ್ನು ನುಂಗುತ್ತಲೇ ಪ್ರಪಂಚದ ಖುಷಿಯಲ್ಲಿ ಜೀವಿಸಬೇಕು.

ಮುಂದುವರಿದು ದಲೈಲಾಮ ಹೇಳುತ್ತಾರೆ-ನಮ್ಮ ಪಶ್ಚಾತ್ತಾಪಗಳಲ್ಲಿ ನಾವು ಕಳೆದು ಹೋಗುವುದರಿಂದ ಯಾವುದೇ ಪ್ರಯೋಜನಗಳಿಲ್ಲ. ಅದರಿಂದ ಕಲಿತ ಅನುಭವ ಪಾಠ ನಮ್ಮ ವರ್ತನೆಯನ್ನು ಬದಲಾಯಿಸಬೇಕು ಎಂದು. ಹೊರಗೆ ವಸಂತದ ಪಕಳೆಗಳು ತೆರೆದುಕೊಂಡಂತೆಲ್ಲ ಪ್ರಕೃತಿ
ಪ್ರಖರಗೊಳ್ಳುತ್ತಿದೆ. ಬುದ್ಧನ ಅನೇಕ ವಿಚಾರಧಾರೆಗಳು ಬದುಕಿನ ಹಲವು ಅನುಭವ ಲೋಕಗಳನ್ನು ನಮಗೆ ಕಾಣಿಸುತ್ತವೆ. ಮನುಷ್ಯ ತನ್ನದೇ ಆದ ರೀತಿಯಲ್ಲಿ ಆಕರ್ಷಕ ಹಾಗೂ ಪರಿಪೂರ್ಣತೆಯನ್ನು ಎತ್ತರಿಸಲು ಹೆಣಗುತ್ತಾನೆ ಎನ್ನುವ ಬುದ್ದನ ಮಾತುಗಳಲ್ಲಿ ಬಿಸಿಲನ್ನು ಬೆಳದಿಂಗಳಾಗಿಸುವ ಅಪ್ಪುಗೆಯಿದೆ.

ಬದುಕು ಎಷ್ಟೊಂದು ಮೌಲ್ಯ ಹಾಗೂ ಅರ್ಥಗಳೊಳಗೆ ನೆಂದಿದೆ. ಆದರೆ ಅದರ ಘಮಲ್ಲನ್ನು ಅರಿಯಲು ನಮ್ಮ ಹೊರಗಿನ ಅಸೂಕ್ಷ್ಮ ಸಂಗತಿಗಳು ನಮ್ಮನ್ನು ಬಿಡುವುದಿಲ್ಲ. ಬುದ್ಧನ ಈ ಮಾತುಗಳಲ್ಲಿ ತತ್ವ ಜ್ಞಾನವೇನಿದ್ದರೂ ಇನ್ನೊಬ್ಬರಿಗೆ ನಮಗಲ್ಲವೆಂಬ ಬದುಕಿನ ಪಾಠವೇ ಅಡಗಿದೆ. ಹಾಗಿದ್ದರೆ
ನಾವೆಲ್ಲ ನಮ್ಮ ನಮ್ಮ ಬದುಕುಗಳಲ್ಲಿ ಮಾಪನ ಮಾಡಿಕೊಳ್ಳಬೇಕಾಗಿರುವುದು ಏನು? ಬುದ್ಧ ಹೇಳುವಂತೆ ಮೌಲ್ಯಗಳನ್ನು ನಮ್ಮೊಳಗೆ ದಾಖಲಿಸಿ ಕೊಳ್ಳಬೇಕು ಇನ್ನೂ ಹೆಚ್ಚು ಸೊಗಸಾಗಿ ಬದುಕಲು!

error: Content is protected !!