Thursday, 30th November 2023

ಮಂಗಳಮುಖಿಯರ ಮತ್ತೊಂದು ಮುಖ

ವಿದೇಶವಾಸಿ

dhyapaa@gmail.com

ಸುಮಾರು ವರ್ಷದ ಹಿಂದಿನ ಕಥೆ. ಕಾಲೇಜಿನ ರಜಾದಿನಗಳಲ್ಲಿ ಮಾಯಾ ನಗರಿ ಬಾಂಬೆಗೆ ಹೋಗಿ ಒಂದೋ ಎರಡೋ ತಿಂಗಳು ಉಳಿದು ಬರುತ್ತಿದ್ದ ಕಾಲ.
ಆಗಿನ್ನೂ ಅದು ‘ಮುಂಬೈ’ ಆಗಿ ಬದಲಾಗಿರಲಿಲ್ಲ. ಮರಾಠಿಗರು ಮಾತ್ರ ಮುಂಬಯಿ ಎನ್ನುತ್ತಿದ್ದರು ಬಿಟ್ಟರೆ ಕನ್ನಡ, ತುಳು ಮಾತನಾಡುವವರಿಗೆ ‘ಬೊಂಬಾಯಿ’ ಅಥವಾ ‘ಬೊಂಬೈ’ಯಾಗಿತ್ತು, ಉಳಿದವರಿಗೆಲ್ಲ ‘ಬಾಂಬೆ’ಯೇ ಆಗಿತ್ತು. ಬೊಂಬೈಗೆ ಹೋಗಿ ಹಿಂತಿರುಗಿ ಊರಿಗೆ ಬಂದಾಗ ಸ್ನೇಹಿತರು ‘ಬೊಂಬೈ ಸೆ ಆಯಾ ಮೆರಾ ದೋಸ್ತ್…’ ಹಾಡು ಹೇಳಿ ಕಾಲೆಳೆಯುತ್ತಿದ್ದ ಕಾಲ ಅದು.

ಆಗೆಲ್ಲ ಬೆಳಗ್ಗೆ ಕಿಸೆಯಲ್ಲಿ ೧೦೦-೨೦೦ ರೂಪಾಯಿ ಹಾಕಿಕೊಂಡು ಹೊರಟರೆ ಮಧ್ಯಾಹ್ನದವರೆಗೆ ಊರು ಸುತ್ತಿ, ಒಂದು ಊಟ ಮಾಡಿ ಅಥವಾ ವಡಾ-ಪಾವ್ ತಿಂದು, ಸಿನಿಮಾ ನೋಡಿ ಸಾಯಂಕಾಲ ಮನೆಗೆ ಹಿಂದಿರುಗು ವಾಗ ಕಿಸೆಯಲ್ಲಿನ್ನೂ ದುಡ್ಡು ಉಳಿದಿರುತ್ತಿತ್ತು. ಎಂದಿನಂತೆ ಅಂದೂ ನಾನು ಕಿಸೆಯಲ್ಲಿ ೨೦೦ ರು. ಇಟ್ಟುಕೊಂಡು ವಿಟಿ (ವಿಕ್ಟೋರಿಯಾ ಟರ್ಮಿನಲ್) ಕಡೆ ಹೋಗಿದ್ದೆ. ಊಟ, ಸಿನಿಮಾ ಎಲ್ಲ ಮುಗಿಸಿ, ವಿಟಿ ರೇಲ್ವೆ ಸ್ಟೇಷನ್ ಬಳಿ ಹಿಂದಿರುಗಿ ಬರುತ್ತಿದ್ದೆ. ಕಿಸೆಯಲ್ಲಿ ೧೩೦ ರು.ನಷ್ಟು ಉಳಿದಿತ್ತು. ಇನ್ನೇನು ಸ್ಟೇಷನ್ ಪ್ರವೇಶಿಸಬೇಕಿತ್ತಷ್ಟೇ, ಒಂದು ಗುಂಪು ನನ್ನನ್ನು ಸುತ್ತುವರಿಯಿತು.

ಅದರಲ್ಲಿದ್ದವರೆಲ್ಲರೂ ಯಾವುದೋ ಹಾಡು ಹಾಡುತ್ತ, ಚಪ್ಪಾಳೆ ತಟ್ಟುತ್ತ, ನನ್ನನ್ನು ಸುತ್ತಲಾರಂಭಿಸಿದರು. ಅವರೆಲ್ಲ ಮಂಗಳಮುಖಿಯರು ಎಂದು ಅರ್ಥವಾಗಲು ನನಗೆ ಸ್ವಲ್ಪ ಸಮಯ ಬೇಕಾಯಿತು. ಏಕೆಂದರೆ ಅದುವರೆಗೂ ಅವರ ಬಗ್ಗೆ ಅಲ್ಪ ಸ್ವಲ್ಪ ಕೇಳಿದ್ದೆ, ನೋಡಿರಲಿಲ್ಲ. ಒಂದೆರಡು ನಿಮಿಷವಾಗಿರಬಹುದು, ಆ ಗುಂಪಿ
ನಿಂದ ಒಬ್ಬರು ನನ್ನ ಬಳಿ ಬಂದು ಹಣ ಕೊಡುವಂತೆ ಕೇಳಿದರು. ಆಗಿನ್ನೂ ವಿದ್ಯಾರ್ಥಿಯಾಗಿದ್ದ ನಾನೇ ಪಾಕೆಟ್ ಮನಿಯಲ್ಲಿ ಜೀವನ ಸಾಗಿಸುವವನು, ಬೇರೆಯವರಿಗೆ ಎಲ್ಲಿಂದ ಕೊಡಲಿ? ಅಕ್ಕಪಕ್ಕ ನೋಡಿದರೆ ಯಾರೂ ಸಹಾಯಕ್ಕೆ ಬರುವವರಂತೆ ಕಾಣಲಿಲ್ಲ.

ಸರಿ, ಐದೋ-ಹತ್ತೋ ರುಪಾಯಿ ಕೊಟ್ಟು ಜಾಗ ಖಾಲಿಮಾಡೋಣವೆಂದು ಕಿಸೆಗೆ ಕೈ ಹಾಕಿ ಹಣ ತೆಗೆದೆ. ನಾನು ದುಡ್ಡು ಎಣಿಸುವುದಕ್ಕೂ ಮೊದಲೇ ಆ ವ್ಯಕ್ತಿ ಏನೋ ಹೇಳುತ್ತಾ, ನನ್ನ ಕೈಯಲ್ಲಿದ್ದ ಅಷ್ಟೂ ಹಣವನ್ನು ಕಸಿದು ಹೊರಟುಹೋದರು. ಅವರೊಬ್ಬರೇ ಅಲ್ಲ, ಕೆಲವೇ ಸೆಕೆಂಡಿನಲ್ಲಿ ಆ ಗುಂಪಿನ ಒಬ್ಬ ಸದಸ್ಯರೂ ಕಾಣಲಿಲ್ಲ. ಅಂದಿನಿಂದಲೂ ಮಂಗಳಮುಖಿಯರು ಎಂದರೆ ಒಂದು ರೀತಿಯ ಭಯ, ಅಂಜಿಕೆ ನನ್ನನ್ನು ಆವರಿಸಿತ್ತು. ಇವರಿಂದ ಆದಷ್ಟು ದೂರ ಇರಬೇಕು ಎಂಬ ಅನಿಸಿಕೆ ಹುಟ್ಟಿಕೊಂಡಿತ್ತು.

ಅದು ದೂರವಾಗಲು ಸುಮಾರು ಒಂದು ದಶಕಕ್ಕಿಂತಲೂ ಹೆಚ್ಚೇ ಹಿಡಿಯಿತು. ಆ ಅಂಜಿಕೆ ಕೊನೆಗೂ ದೂರವಾದದ್ದು ಥೈಲ್ಯಾಂಡ್‌ನಲ್ಲಿ! ಥೈಲ್ಯಾಂಡ್ ಪ್ರವಾಸ ಎಂದರೆ ಬಹುತೇಕರು ವಿಚಾರ ಮಾಡುವುದೇ ಬೇರೆ. ಆಹಾರ-ವಿಹಾರ, ಮೋಜು-ಮಸ್ತಿ, ನೈಟ್‌ಲೈಫ್ ಇತ್ಯಾದಿ. ಅದರಲ್ಲೂ ಪಟ್ಟಾಯಕ್ಕೆ ಹೋಗುತ್ತಿದ್ದಾನೆ ಎಂದರೆ ಮುಗಿಯಿತು, ಜೀವಮಾನದಲ್ಲಿ ಒಮ್ಮೆಯೂ ಥೈಲ್ಯಾಂಡಿಗೆ ಭೇಟಿ ಕೊಡದ ಮಹಾಶಯನೂ ನಮಗೆ ಸರ್ಟಿಫಿಕೇಟ್ ಕೊಡುತ್ತಾನೆ. ಅವರಿಗೆಲ್ಲ ಯೂಟ್ಯೂಬ್ ವಿಡಿಯೋಗಳೇ ಆಧಾರ ಬಿಡಿ. ಅಂಥದ್ದರಲ್ಲಿ ನಾನು ಕುಟುಂಬ ಸಮೇತ ಹೋಗುತ್ತಿದ್ದೇನೆ ಎಂದರೆ ಹೇಗಿರಬಹುದು? ನನ್ನ ಜತೆ ಕೆಲಸ ಮಾಡುವ ಮೇಲಧಿಕಾರಿಯೇ ಹೇಳಿದ್ದರು, ‘ಸಂಸಾರ ಸಮೇತ ಥೈಲ್ಯಾಂಡಿಗೆ ಹೋಗುತ್ತಿದ್ದೀಯ? ನಿನಗೆಲ್ಲೋ ಹುಚ್ಚು’ ಎಂದು.

ನಿಜ ಹೇಳುತ್ತೇನೆ, ಆ ದೇಶದಲ್ಲಿ ಕುಟುಂಬ ಸಮೇತ ಹೋಗಿ ನೋಡಬಾರದ್ದು ಎಷ್ಟಿದೆಯೋ, ನೋಡಬೇಕಾದ್ದು ಅದರ ಎರಡರಷ್ಟಿದೆ. ಅದರಲ್ಲಿ ಜೀವಮಾನದಲ್ಲಿ ಒಮ್ಮೆಯಾದರೂ ನೋಡಲೇ ಬೇಕಾದದ್ದೂ ಒಂದೆರಡು ಇವೆ. ಅದರಲ್ಲೂ ಪಟ್ಟಾಯಕ್ಕೆ ಹೋಗಿ ‘ಟಿಫಾನಿಸ್ ಶೋ’ ನೋಡದೇ ಹಿಂತಿರುಗಿದರೆ, ಥೈಲ್ಯಾಂಡ್‌ಗೆ ಹೋದದ್ದೇ ವ್ಯರ್ಥ! ವೇಶ್ಯಾವಾಟಿಕೆ, ಮದ್ಯಪಾನ, ಮೋಜು-ಮಸ್ತಿಗೆ ಪಟ್ಟಾಯ ಹೆಚ್ಚು ಪ್ರಚಾರ ಪಡೆದದ್ದನ್ನು ಅಲ್ಲಗಳೆಯುವಂತಿಲ್ಲ. ಆದರೆ ಅದೇ ಊರಿನಲ್ಲಿ
ಮನಸೂರೆಗೊಳ್ಳುವ ಹಾಡು ಮತ್ತು ನೃತ್ಯದ ಅದ್ಭುತ ಪ್ರದರ್ಶನವೂ ಇದೆ. ಟಿಫಾನಿಸ್ ಶೋ (Tiffany’s Transgender Show) ಮಂಗಳಮುಖಿಯರು ಪ್ರಸ್ತುತಪಡಿಸುವ ಕಲಾಪ್ರದರ್ಶನ. ನೀವು ಥೈಲ್ಯಾಂಡ್ ಪ್ರವಾಸಕ್ಕೆ ಹೋದರೆ ಮುದ್ದಾಂ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಒಂದು. ಬೇರೇನೇ ಮಾಡಿ, ನೋಡಿ, ತಿನ್ನಿ, ಬಿಡಿ, ಈ ಟ್ರಾನ್ಸ್‌ಜೆಂಡರ್ ಶೋ ನೋಡದೇ ಹಿಂದಿರುಗಬೇಡಿ.

ಈ ಪ್ರದರ್ಶನದಲ್ಲಿ ಬೇರೆ ಬೇರೆ ಭಾಷೆಯ ಹಾಡು, ನೃತ್ಯಗಳಿರುತ್ತವೆ. ಆಯಾ ವರ್ಷದಲ್ಲಿ ವಿಶ್ವಾದ್ಯಂತ ಜನಪ್ರಿಯವಾದ ಹಾಡು ಅಥವಾ ಜನಪ್ರಿಯ ಹಾಡಿಗೆ ನೃತ್ಯ ಸಂಯೋಜಿಸಿರುತ್ತಾರೆ. ಅದಕ್ಕೆ ಬೇಕಾಗಿ ಮಾಳಿಗೆ, ಮೆಟ್ಟಿಲು, ಜೋಕಾಲಿ ಇತ್ಯಾದಿ ಗಳಿರುವ ಸೆಟ್ ಅಳವಡಿಸಿರುತ್ತಾರೆ. ವೇಷಭೂಷಣ ಗಳೂ ಆಕರ್ಷಕ
ವಾಗಿರುತ್ತವೆ. ಕೆಲವು ಪ್ರದರ್ಶನದಲ್ಲಿ ಜೀವಂತ ಆನೆಗಳೂ ವೇದಿಕೆಯ ಮೇಲೆ ಬಂದು ತಮ್ಮ ಪಾತ್ರ ನಿಭಾಯಿಸಿ ಹೋಗುತ್ತವೆ. ಅದೆಲ್ಲ ಸರಿ, ನನಗೆ ಆಶ್ಚರ್ಯ ಎನಿಸಿದ್ದು ವೇದಿಕೆಯ ಮೇಲೆ ಪ್ರತಿ ನೃತ್ಯಕ್ಕೂ ಅವರು ಸೆಟ್ ಬದಲಾಯಿಸುವುದು. ಒಂದು ಹಾಡು ಅಬ್ಬಬ್ಬಾ ಎಂದರೆ ೫-೬ ನಿಮಿಷ ಇರ ಬಹುದು. ಅಷ್ಟೇ
ಸಮಯದಲ್ಲಿ ಸುಮಾರು ೧೨-೧೫ ಅಡಿ ಎತ್ತರ, ೪೦ ಅಡಿ ಅಗಲದ ಸೆಟ್ ಬದಲಾಯಿ ಸುವುದು, ಅದರಲ್ಲೂ ಕಲಾವಿದರು ಅದರ ಮೇಲೆ ಹತ್ತಿ, ಕುಣಿದು, ಜಿಗಿದರೂ ಜಗ್ಗದಂಥ ಸೆಟ್ ಹಾಕಬೇಕು ಎಂದರೆ ಸಾಧಾರಣ ವಿಷಯವಲ್ಲ.

ಅದೂ ಯಾವುದೇ ಶಬ್ದ ಆಚೆ ಕೇಳಿಸದಂತೆ ಈ ಕೆಲಸ ಆಗಬೇಕು ಎಂದರೆ ಊಹಿಸಿ. ಈ ಕೆಲಸ ಪರದೆಯ ಹಿಂದೆ ನಡೆಯುತ್ತಿರುವಾಗ ಮುಂದೆ ಒಬ್ಬರು ಹಾಡು
ಹಾಡುತ್ತಿರುತ್ತಾರೆ. ಅದು ಮುಗಿಯುವುದರೊಳಗೆ ರಂಗದ ವಿನ್ಯಾಸವೇ ಬದಲಾಗಿರುತ್ತದೆ. ಇದನ್ನೇ ದಿನಕ್ಕೆ ೩-೪ ಬಾರಿ ಪ್ರದರ್ಶನಕ್ಕೆ ತಕ್ಕಂತೆ ಪುನರಾವರ್ತಿ
ಸುತ್ತಾರೆ. ಸುಮಾರು ೩೦ ಜನ ಅದಕ್ಕಾಗಿಯೇ ಕೆಲಸಮಾಡುತ್ತಾರೆ. ಇನ್ನು ವೇದಿಕೆಯಲ್ಲಿ ಸುಮಾರು ೨೦-೩೦ ಮಂಗಳಮುಖಿಯರು ಪ್ರದರ್ಶನ ನೀಡು
ತ್ತಾರೆ. ಅದರಲ್ಲಿ ಒಂದು ಹಿಂದಿ ಹಾಡಿಗೂ ಹೆಜ್ಜೆ ಹಾಕುತ್ತಾರೆ. ನಂಬಿ, ೭೦-೮೦ ನಿಮಿಷ ನೀವು ಈ ಲೋಕವನ್ನೇ ಮರೆತು ಹೊರಗಿನ ಮಾಯಾಪ್ರಪಂಚ
ದಲ್ಲಿ ತೇಲುತ್ತಿರುತ್ತೀರಿ.

ಈ ಪ್ರದೇಶಗಳಲ್ಲಿ ಗಮನಿಸಬೇಕಾದ ಒಂದು ಸಂಗತಿಯಿದೆ. ಪ್ರದರ್ಶನ ಮುಗಿದ ನಂತರ, ಅದರಲ್ಲಿ ಭಾಗವಹಿಸಿದ ಕಲಾವಿದರು, ಸಹಾಯಕರು ಸಭಾಂಗಣದ ಹೊರಗೆ ಪ್ರೇಕ್ಷಕರ ಭೇಟಿಗಾಗಿ ಕಾಯುತ್ತಿರುತ್ತಾರೆ. ಇದನ್ನು ಥೈಲ್ಯಾಂಡ್, ವಿಯೆಟ್ನಾಂ, ಮಲೇಷಿಯಾ ಮೊದಲಾದೆಡೆ ನೋಡಿ ದ್ದೇನೆ. ಪ್ರೇಕ್ಷಕರು ಕಾರ್ಯಕ್ರಮದ ನಂತರ ಅವರೊಂದಿಗೆ ಫೋಟೊ ತೆಗೆಸಿಕೊಳ್ಳಬಹುದು, ಮಾತಾಡಬಹುದು.

ಟಿಫಾನಿಸ್ ಕೂಡ ಇದಕ್ಕೆ ಹೊರತಲ್ಲ, ಆದರೆ ಟಿಫಾನಿಸ್ ಕಲಾವಿದರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ನೂರೋ-ಇನ್ನೂರೋ ಬಾಥ್ (ಥೈಲ್ಯಾಂಡಿನ ಹಣ) ಕೊಡಬೇಕಾಗುತ್ತದೆ. ಮಂಗಳಮುಖಿಯರನ್ನು ಕಂಡರೆ ನನಗಿದ್ದ ಭಯ, ಅಳುಕು ನಿವಾರಣೆಯಾದದ್ದೇ ಅಲ್ಲಿ! ನಿಮಗೆ ತಿಳಿದಿರಲಿ, ಟಿಫಾನಿಸ್ ಆರಂಭವಾದದ್ದು
ಒಂದು ಜನ್ಮದಿನಾಚರಣೆಯ ಸಂದರ್ಭದಲ್ಲಿ. ನಿಜ, ಬರ್ತ್‌ಡೇ ಪಾರ್ಟಿಯಲ್ಲಿ. ಇದರ ರೂವಾರಿ ಸುಪರ್ಬ್ ಸಂಗ್‌ಕುಮ್ಚೂ. ಅಂದಿನ ಜನ್ಮ ದಿನಾಚರಣೆಗೆ ಬಂದಿದ್ದ ಮದ್ಯದ ಉದ್ಯಮಿ ಯೊಬ್ಬರು ತಮ್ಮ ಬಾರ್‌ನಲ್ಲಿ ಈ ಪ್ರದರ್ಶನ ಏರ್ಪಡಿಸುವಂತೆ ಕೇಳಿಕೊಂಡರು.

ಬಾರ್‌ನಲ್ಲಿ ನಡೆಯುತ್ತಿದ್ದ ಮಂಗಳಮುಖಿಯರ ಪ್ರದರ್ಶನ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗತೊಡಗಿತು. ಜನಪ್ರಿಯತೆ ಎಷ್ಟು ಹೆಚ್ಚಿತೆಂದರೆ, ಇಂದು ಟಿಫಾನಿಸ್ ೫೦೦ ಜನ ಕುಳಿತು ನೋಡಬಹುದಾದ ಕ್ಯಾಬರೆ ಥೇಟರ್ ನಿರ್ಮಿಸಿದೆ. ಇದು ವಿಶ್ವದ ಮೊದಲ ಕ್ಯಾಬರೆ ಥೇಟರ್ ಎಂಬ ಅಗ್ಗಳಿಕೆಗೂ ಪಾತ್ರ
ವಾಗಿದ್ದು, ಮುಂದಿನ ವರ್ಷ ಸುವರ್ಣಮಹೋತ್ಸವ ವನ್ನೂ ಆಚರಿಸಲಿದೆ. ಕಲಾವಿದರ ಒಂದು ತಂಡವಾಗಿದ್ದ ಟಿಫಾನೀಸ್ ಈಗ ಒಂದು ಸಂಸ್ಥೆಯಾಗಿ ಬೆಳೆದಿದೆ. ಕಳೆದ ೨೫ ವರ್ಷದಿಂದ ಮಂಗಳಮುಖಿಯರಿಗಾಗಿ ‘ಮಿಸ್ ಟಿಫಾನಿಸ್ ಯುನಿವರ್ಸ್’ ಸ್ಪರ್ಧೆ ಏರ್ಪಡಿಸುತ್ತಿದೆ. ಕಳೆದ ೨ ದಶಕದಿಂದ ‘ಮಿಸ್ ಇಂಟರ್‌ನ್ಯಾಷನಲ್
ಕ್ವೀನ್’ ಸ್ಪರ್ಧೆಯನ್ನೂ ಏರ್ಪಡಿಸುತ್ತಿದ್ದು, ಇದು ವಿಶ್ವದಲ್ಲೇ ಅತಿದೊಡ್ಡ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ ಎಂಬ ಕೀರ್ತಿಗೆ ಪಾತ್ರವಾಗಿದೆ.

ವಿಶ್ವದೆಲ್ಲೆಡೆಯೂ ಮಂಗಳಮುಖಿಯರಿದ್ದಾರೆ. ಲಂಡನ್, ಪ್ಯಾರಿಸ್, ಕೆನಡಾ, ಅಮೆರಿಕದ ನ್ಯೂಯಾರ್ಕ್, ಲಾಸ್ ವೆಗಾಸ್ ಹೀಗೆ ವಿವಿಧೆಡೆ ಇಂಥ ಪ್ರದರ್ಶನಗಳೂ ನಡೆಯುತ್ತವೆ. ಆದರೆ ಥೈಲ್ಯಾಂಡಿನ ಪಟ್ಟಾಯದಲ್ಲಿರುವ ಟಿಫಾನಿಸ್ ವಿಶೇಷವಾಗಿ ಎದ್ದು ಕಾಣುವುದು ಈ ಕಾರಣಕ್ಕೆ ಎಂದರೆ ತಪಾಗಲಾರದು. ಹಾಗಂತ, ಟಿಫಾನಿಸ್ ಶೋಗೆ ಮಾತ್ರ ಹೋಗಿ ಎಂದರೆ ಅವರ ಪರವಾಗಿ ಪ್ರಚಾರ ಮಾಡಿದಂತಾದೀತು. ಏಕೆಂದರೆ ಥೈಲ್ಯಾಂಡಿನಲ್ಲಿ ಅಂಥದೇ ಪ್ರದರ್ಶನ ನೀಡುವ ಮತ್ತಷ್ಟು ತಂಡಗಳಿವೆ. ಅದರಲ್ಲಿ, ಸಿಯಾಮ್ ನಿರಮಿತ್, ಕಾನ್, ಅಲ್ಕಾಜರ್ ಶೋ, ಮಿರಿನ್, ಕಲಿಪ್ಸೊ ಕ್ಯಾಬರೆ ಮೊದಲಾದವು ಪ್ರಮುಖವಾದವು.

ಒಬ್ಬೊಬ್ಬರದ್ದೂ ಒಂದೊಂದು ರೀತಿಯ ವಿಶೇಷತೆ. ಇದನ್ನು ನೋಡಿದಾಗೆಲ್ಲ ನನಗೆ ಭಾರತದ ಮಂಗಳಮುಖಿಯರು ಯಾಕೆ ಹೀಗಾಗಬಾರದು ಎನಿಸುತ್ತಿತ್ತು.
ಮಂಗಳಮುಖಿಯರು ಈ ಪ್ರಪಂಚಕ್ಕೆ ಹೊಸಬರೇನಲ್ಲ. ನಮ್ಮ ಮಹಾಭಾರತದಲ್ಲಿ, ಇತಿಹಾಸದಲ್ಲಿ ಮಂಗಳಮುಖಿಯರ ಇರುವಿಕೆಯ ಉಲ್ಲೇಖವಿದೆ.
ಬೃಹನ್ನಳೆ, ಶಿಖಂಡಿ, ಇರವಾನ, ಇವರೆಲ್ಲ ಅದೇ ವರ್ಗಕ್ಕೆ ಸೇರಿದವರು ತಾನೆ? ಇವರನ್ನೆಲ್ಲ ಕಿನ್ನರ ವರ್ಗದವರೆಂದು ಗುರುತಿಸಲಾಗುತ್ತಿತ್ತು ತಾನೆ?
ಭಾರತದಲ್ಲಿ ಇಂದಿಗೂ ಮಕ್ಕಳು ಹುಟ್ಟಿದ ಮನೆಗೆ, ಮದುವೆ ಮನೆಗೆ ಮಂಗಳಮುಖಿಯರನ್ನು ಕರೆಸಿ ಹಾಡಿಸುವ ಸಂಪ್ರದಾಯವಿದೆ. ಅವರ ಆಗಮನ
ದಿಂದ ಆ ಕಾರ್ಯಕ್ಕೆ, ಮನೆಗೆ ಮಂಗಳವಾಗುತ್ತದೆ ಎಂದು ನಂಬಿದವರಿದ್ದಾರೆ.

ಇಷ್ಟಾಗಿಯೂ ನಮ್ಮಲ್ಲಿ ಮಂಗಳಮುಖಿಯರೆಂದರೆ ಏನೋ ಅಂಜಿಕೆ, ಹಿಂಜರಿಕೆ. ಎಷ್ಟೋ ಬಾರಿ ಅವರು ಸಿನಿಮಾ, ನಾಟಕದಲ್ಲಿ ಹಾಸ್ಯಪಾತ್ರಕ್ಕಷ್ಟೇ ಸೀಮಿತ! ೭-೮ ವರ್ಷದ ಹಿಂದೆ ಭಾರತದಲ್ಲಿ ಮಂಗಳಮುಖಿಯರ ಮೊದಲ ಮ್ಯೂಸಿಕಲ್ ಬ್ಯಾಂಡ್ ‘ಸಿಕ್ಸ್ ಪ್ಯಾಕ್’ ಆರಂಭವಾಗಿತ್ತು. ಅವರ ‘ಏ ರಾಜು…’ ಸಾಕಷ್ಟು ಸುದ್ದಿ
ಯನ್ನೂ ಮಾಡಿತ್ತು. ಆ ತಂಡದವರು ಕಾನ್ ಫೆಸ್ಟಿವಲ್‌ನಲ್ಲೂ ಪ್ರದರ್ಶನ ನೀಡಿದ್ದರು. ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ, ಯಾವ ಸುದ್ದಿಯೂ ಇಲ್ಲ. ಮಜದ ಸಂಗತಿಯೆಂದರೆ ನಮ್ಮಲ್ಲಿ ಶಾರುಖ್ ಖಾನ್, ಸೈಫ್ ಅಲಿ ಖಾನ್ ಮಂಗಳಮುಖಿಯರ ಪಾತ್ರ ಮಾಡಿದರೆ ಚಪ್ಪಾಳೆ ತಟ್ಟುತ್ತೇವೆ.

ನಿಜವಾದ ಮಂಗಳಮುಖಿಯೊಬ್ಬರು ಹೀರೋ ಪಾತ್ರ ಮಾಡಿದರೆ ಹಾಗೆಯೇ ಪ್ರತಿಕ್ರಿಯಿ ಸುತ್ತೇವೆಯೇ? ಇದು ನಮಗೆ ನಾವೇ ಕೇಳಿಕೊಳ್ಳ ಬೇಕಾದ ಪ್ರಶ್ನೆ.
ನಮ್ಮವರೇ ಆದ ರಂಗಭೂಮಿ ನಟಿ, ಗಾಯಕಿ, ಮಂಜಮ್ಮ ಜೋಗತಿ ಜಾನಪದ ಅಕಾಡೆಮಿಯ ಅಧ್ಯಕ್ಷರೂ ಆದರು. ಖುಷಿ ಶೇಖ್ ತನ್ನ ನೃತ್ಯದಿಂದ ದೇಶದ ಗಮನ ಸೆಳೆದಿದ್ದಾರೆ. ತಮಿಳುನಾಡಿನ ಸುದ್ದಿ ನಿರೂಪಕಿ ಪದ್ಮಿನಿ ಪ್ರಕಾಶ್, ಪೊಲೀಸ್ ಅಧಿಕಾರಿ ಪ್ರೀತಿಕಾ ಯಶಿನಿ, ಛತ್ತೀಸ್‌ಘಡದ ರಾಯ್‌ಘಡದ ಮೇಯರ್ ಮಧು ಕಿನ್ನರ್ ಇವರೆಲ್ಲ ಅದೇ ವರ್ಗಕ್ಕೆ ಸೇರಿದವರು. ಆದರೂ ಸಾಲದು, ಈ ವರ್ಗದವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಹಕಾರ ಬೇಕು, ಜನರಿಂದಲೂ, ಸರಕಾರದಿಂದಲೂ.

ಹಾಗೆಯೇ ಮಂಗಳಮುಖಿ ಯರೂ ಸಿಗ್ನಲ್‌ನಲ್ಲಿ, ಟೋಲ್ ಗೇಟ್‌ನಲ್ಲಿ ನಿಂತು ಜನರ ಮುಂದೆ ಕೈಚಾಚುವುದನ್ನು ಬಿಡಬೇಕು. ಅವರ ಸ್ಥಾನ ಖಂಡಿತವಾಗಿಯೂ
ಅದಲ್ಲ. ಅವರು ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಲು ಇಲ್ಲಿ ಬಂದವರು.

ಟಿಫಾನಿಸ್ ಅವರ ಒಂದು ಘೋಷವಾಕ್ಯವಿದೆ: ‘There is always a winner in every show’. ನಿಜ ಅಲ್ಲವೇ?

Leave a Reply

Your email address will not be published. Required fields are marked *

error: Content is protected !!