Tuesday, 23rd April 2024

ಒಬ್ಬ ತೆಂಡೂಲ್ಕರ‍್ ಸಾಕು, ತಂಡದಲ್ಲಿ ಎಲ್ಲರೂ ಅವರೇ ಇರಬೇಕೆಂದಿಲ್ಲ !

ನೂರೆಂಟು ವಿಶ್ವ

vbhat@me.com

Talent wins games, but teamwork wins
championships-Michael Jordan

ಕೆಲವು ವರ್ಷಗಳ ಹಿಂದೆ, ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ, ತನ್ನ ಆಡಳಿತ ನಿರ್ವಹಣೆಯ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದ ‘ಸಿಇಒ ಬೇಕಾಗಿ ದ್ದಾರೆ’ ಎಂಬ ಜಾಹೀರಾತಿನಲ್ಲಿ, ‘ನಮಗೆ ಪತ್ರಿಕೋದ್ಯಮ ಹಿನ್ನೆಲೆಯಿರುವವರು ಬೇಡ’ ಎಂದು ಸ್ಪಷ್ಟವಾಗಿ ಬರೆದಿತ್ತು. ಆ ದಿನಗಳಲ್ಲಿ ಈ ಜಾಹೀರಾತು ಸಾಕಷ್ಟು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿತ್ತು.

ಅಲ್ಲಿಯ ತನಕ ಪತ್ರಿಕೋದ್ಯಮ ಹಿನ್ನೆಲೆಯಿರುವವರೇ ಆ ಹುದ್ದೆಗೆ ನೇಮಕ ವಾಗುತ್ತಿದ್ದರು. ಆದರೆ ಆ ಪತ್ರಿಕೆಯ ಈ ಹೊಸ ಧೋರಣೆ ಕಂಡು ಅನೇಕರು, ‘ಟೈಮ್ಸ್’ ಪತ್ರಿಕೆ ಪತ್ರಿಕೋದ್ಯಮವನ್ನು ಕೆಡಿಸುತ್ತಿದೆ ಎಂದು ಟೀಕಿಸಿದರು. ಇದು ಪತ್ರಿಕೋ ದ್ಯಮದ ಮೂಲ ನಂಬಿಕೆಯನ್ನೇ ಶಿಥಿಲಗೊಳಿಸುವ ಪ್ರಯತ್ನ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಇನ್ನು ಕೆಲವರು ಪತ್ರಿಕೆಯನ್ನು ಕಮರ್ಷಿಯಲ್ ಮಾಡುವ ಹುನ್ನಾರ ಎಂದು ಜರೆದರು. ಆದರೆ ಪತ್ರಿಕೆಯ ಆಡಳಿತ ಮಂಡಳಿ ಇದಕ್ಕೆ ತಲೆ ಕೆಡಿಸಿ ಕೊಳ್ಳಲಿಲ್ಲ.

ಪತ್ರಿಕೋದ್ಯಮದಲ್ಲಿ ಅನುಭವವಿರುವವರು ಬೇಡ ಎಂದು ಸ್ಪಷ್ಟವಾಗಿ ಬರೆದಿದ್ದರಿಂದ ಆ ಜಾಹೀರಾತಿಗೆ, ಬೇರೆ ಹಲವು ಕ್ಷೇತ್ರಗಳಲ್ಲಿರುವ ಉತ್ತಮ ಅಭ್ಯರ್ಥಿಗಳು ಅರ್ಜಿ ಹಾಕಿದರು. ಕೊನೆಯಲ್ಲಿ, ‘ಟೈಮ್ಸ್’ ಆಡಳಿತ, ಬಾಟಾ ಶೂ ಕಂಪನಿಯ ಉನ್ನತ ಹುದ್ದೆಯಲ್ಲಿದ್ದವರೊಬ್ಬರನ್ನು ಸಿಇಒ ಹುದ್ದೆಗೆ ನೇಮಿಸಿತು. ನಂತರದ ದಿನಗಳಲ್ಲಿ, ಆ ಸಂಸ್ಥೆ ಬೆಳೆದ ಪರಿಯನ್ನು ನೋಡಿದರೆ, ಅಂದು ಪತ್ರಿಕೆಯ ಆಡಳಿತ ಮಂಡಳಿ ತೆಗೆದುಕೊಂಡ ಆ ನಿರ್ಧಾರ ಸರಿ ಎಂಬುದು ಮನವರಿಕೆ ಆಯಿತು. ಈ ಪ್ರಯೋಗದ ಬಳಿಕ, ಆ ಪತ್ರಿಕೆ ಈ ಸಂಪ್ರದಾಯವನ್ನೇ ಮುಂದುವರಿಸಿತು. ಆ ಹುದ್ದೆಗೆ ಪತ್ರಿಕೋದ್ಯಮದಲ್ಲಿ ಅನುಭವ, ಗಂಧ-ಗಾಳಿ ಇರದವರನ್ನೇ ಆಯ್ಕೆ ಮಾಡಲಾರಂಭಿಸಿತು.

ಗ್ರಾಹಕ ವಸ್ತುಗಳ ಮಾರಾಟ, ಪೆಪ್ಸಿ -ಕೋಲಾ, ಮೊಬೈಲ್ ಕಂಪನಿ ಮಾರ್ಕೆಟಿಂಗ್ ವಿಭಾಗಗಳಲ್ಲಿ ಇರುವವರನ್ನೇ ಸಂಸ್ಥೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿಕೊಳ್ಳಲಾರಂಭಿಸಿತು. ಇಂದಿಗೂ ಆ ಸಂಸ್ಥೆಯ ಸಿಇಒ ಪತ್ರಿಕೋದ್ಯಮ ಹಿನ್ನೆಲೆಯಿರು ವವರಲ್ಲ. ಇದರಿಂದ ಹಳೆ ಜೀಪಿಗೆ ಜೆಟ್ ಎಂಜಿನ್ ಕೂಡಿಸಿದಂತಾಯಿತು. ತೆವಳಿಕೊಂಡು ಸಾಗುತ್ತಿದ್ದ ಸಂಸ್ಥೆ ಆಕಾಶದಲ್ಲಿ
ಹಾರಾಡಲಾರಂಭಿಸಿತು!

ಇದೇ ರೀತಿಯ ಮತ್ತೊಂದು ಪ್ರಯೋಗವನ್ನು ಮಾಡಿದ್ದು ‘ದೈನಿಕ್ ಭಾಸ್ಕರ್’ ಹಿಂದಿ ಪತ್ರಿಕೆ. ಆ ಪತ್ರಿಕೆಯ ಸುದ್ದಿಮನೆ
ಯಲ್ಲಿ, ಕಾಮರ್ಸ್ ವಿಭಾಗಕ್ಕೆ ಕೆಲವು ಉಪಸಂಪಾದಕರು ಬೇಕಾಗಿದ್ದರು. ಎಂದಿನಂತೆ, ‘ಉಪಸಂಪಾದಕರು ಬೇಕಾಗಿದ್ದಾರೆ’ ಅಥವಾ ‘ಅನುಭವಿ ಪತ್ರಕರ್ತರು ಬೇಕಾಗಿದ್ದಾರೆ’ ಎಂಬ ಸವಕಲು ಜಾಹೀರಾತು ನೀಡದೆ, ‘ನಮಗೆ ಬುದ್ಧಿವಂತ ಪತ್ರಕರ್ತರು ಬೇಡ’ ಎಂದು ಹೇಳಿತು. ಮೊದಲನೆಯದಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಈ ಜಾಹೀರಾತಿಗೆ ಸ್ಪಂದಿಸಲಿ ಎಂಬುದು ಮುಖ್ಯ ಆಶಯವಾಗಿತ್ತು. ಎರಡನೆಯದಾಗಿ, ಅಸಲಿಗೆ ಅವರಿಗೆ ಬುದ್ಧಿವಂತ ಪತ್ರಕರ್ತರೂ ಬೇಕಿರಲಿಲ್ಲ.

ಕಾಮರ್ಸ್ ವಿಭಾಗದಲ್ಲಿ ಷೇರು ದರ, ಮಾರುಕಟ್ಟೆ, ದಿನಸಿ, ತರಕಾರಿ ದರವನ್ನು ಬರೆಯಲು ವಿಶೇಷ ಬುದ್ಧಿವಂತಿಕೆ ಇರುವವರು ಬೇಕಿರಲಿಲ್ಲ. ಆ ವಿಭಾಗದಲ್ಲಿ ಕೆಲಸ ಮಾಡಲು ಕೆಲವರು ಹಿಂದೇಟು ಹಾಕುತ್ತಿದ್ದರಿಂದ ‘ಬುದ್ಧಿವಂತರು ಬೇಡ’ ಎಂದು ಸ್ಪಷ್ಟವಾಗಿ ಹೇಳಿತ್ತು. ಕಾರಣ, ದಿನವೂ ಈ ರೇಟುಗಳನ್ನು ಬರೆಯುತ್ತಾ ಕಾಲ ಕಳೆಯಬೇಕಲ್ಲ ಎಂದು ಆ ವಿಭಾಗದಲ್ಲಿ ರುವವರು ಮೂಗು ಮುರಿಯುತ್ತಾರೆ.

ಆದರೆ ಜಾಹೀರಾತಿನಲ್ಲಿಯೇ ‘ಬುದ್ಧಿ ವಂತರು ಬೇಡ’ ಎಂದು ಹೇಳಿದ್ದರಿಂದ, ಉದ್ದೇಶಪೂರ್ವಕವಾಗಿ, ಹೆಚ್ಚು ಓದಿಲ್ಲದವರನ್ನು, ಕಡಿಮೆ ಅಂಕ ಗಳಿಸಿದವರನ್ನು ನೇಮಿಸಿಕೊಳ್ಳಲಾರಂಭಿಸಿತು. ಇದರಿಂದ ಬೇರೆಲ್ಲೂ ಕೆಲಸ ಸಿಗದವರಿಗೆ ಅನುಕೂಲ ವಾಯಿತು. ಅಷ್ಟಕ್ಕೂ ಆ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ವಿದ್ಯಾಭ್ಯಾಸದ ಅಗತ್ಯವಿರಲಿಲ್ಲ. ಹೋಟೆಲಿನಲ್ಲಿ ತರಕಾರಿ, ಹಣ್ಣುಗಳನ್ನು ಕಟ್ ಮಾಡಲು, ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆ ಬಿಡಿಸಲು, ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಓದಿಕೊಂಡವರು ಬೇಕಿಲ್ಲವಲ್ಲ.

ಅದೇ ರೀತಿ ಕೆಲವು ಕೆಲಸಗಳಿರುತ್ತವೆ, ಅವನ್ನು ಮಾಡಲು ಪರಿಣತ ಸಿಬ್ಬಂದಿ ಬೇಕಾಗುವುದಿಲ್ಲ. ಅಂಥ ವಿಭಾಗಕ್ಕೆ ಬುದ್ಧಿವಂತ ರನ್ನು ನೇಮಿಸಿಕೊಂಡರೆ, ಅವರನ್ನು ಅವಮಾನಿಸಿದಂತೆ. ಇದರಿಂದ ಅವರಿಗೂ ಪ್ರಯೋಜನ ವಾಗುವುದಿಲ್ಲ, ಸಂಸ್ಥೆಗೂ.
ಎಲ್ಲಾ ಸಂಸ್ಥೆಗಳು, ಕಂಪನಿಗಳು ತಾವು ಮಹಾ ಮೇಧಾವಿಗಳನ್ನು ನೇಮಿಸಿಕೊಂಡಿದ್ದೇವೆ, talent pool ಹೊಂದಿದ್ದೇವೆ ಎಂದು ಬೀಗುತ್ತವೆ. ಆದರೆ ಈ ಮಾತು ಎಲ್ಲಾ ಸಂದರ್ಭದಲ್ಲೂ, ಎಲ್ಲಾ ಕಂಪನಿಗಳಿಗೂ ಅನ್ವಯ ಆಗಲಿಕ್ಕಿಲ್ಲ.

ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡಲು ಎಂಬಿಎ ಪದವೀಧರರು ಬೇಕಿಲ್ಲ. ಬುದ್ಧಿವಂತರು ಬೇಕಿಲ್ಲ. ಎಸೆಸ್ಸೆಲ್ಸಿಯಲ್ಲಿ ನಪಾಸಾದವರು ಇದ್ದರೂ ಆದೀತು. ಅಂಥ ಒಂದು ಬಹುದೊಡ್ಡ ವರ್ಕ್ ಫೋರ್ಸ್ ನಮ್ಮ ಸಮಾಜದಲ್ಲಿದೆ. ಅಂಥವರಿಗೆ ಕೆಲಸ ಕೊಟ್ಟರೆ ಉಪಕೃತರಾಗಿ, ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಅವರು ಮಾಡುವ ಉದ್ಯೋಗಕ್ಕೂ, ಅವರು ಓದಿದ್ದಕ್ಕೂ ಅಥವಾ ಗಳಿಸಿದ ಪದವಿಗೂ ಸಂಬಂಧವೇ ಇರುವುದಿಲ್ಲ.

ನಾನು ಓದಿದ್ದು ಎಂಎಸ್ಸಿ ಭೂಗರ್ಭಶಾಸ. ಅದಕ್ಕೂ ನಾನು ಈಗ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ. ಹಾಗಂತ ಯಾವ ವಿಷಯವನ್ನು ಕಲಿಯುವುದೂ ನಿರರ್ಥಕವಲ್ಲ ಎಂದು ನಾನು ಭಾವಿಸಿದವನು. ಅದು ಬೇರೆ ಮಾತು. ಐಪಿಎಲ್ ಪಂದ್ಯವನ್ನು ಗೆಲ್ಲಲು ಎಲ್ಲಾ ಹನ್ನೊಂದು ಮಂದಿಯೂ ಮಹಾನ್ ಆಟಗಾರರೇ ಆಗಬೇಕಿಲ್ಲ. ವಿರಾಟ್ ಕೊಹ್ಲಿಯಂಥ ಘಟಾನು ಘಟಿ ಆಟಗಾರರನ್ನು ಹೊಂದಿಯೂ, ಆರ್‌ಸಿಬಿ ತಂಡಕ್ಕೆ ಇಲ್ಲಿ ತನಕ ಒಂದು ಸಲವೂ ಕಪ್ ಗೆಲ್ಲಲು ಆಗಿಲ್ಲ.

ಅವರು ಎಷ್ಟೇ ದೊಡ್ಡ ಮೊತ್ತ ಪೇರಿಸಿದರೂ, ಎದು ರಾಳಿ ತಂಡ ಆ ಮೊತ್ತವನ್ನು ಹೊಡೆದು, ಗೆದ್ದ ನಿದರ್ಶನಗಳಿವೆ. ಅದಕ್ಕೆ ಕಾರಣ ಆರ್‌ಸಿಬಿ ತಂಡದ ದುರ್ಬಲ ಬೌಲಿಂಗ್. ಒಂದು ತಂಡ ಗೆಲ್ಲಲು ಆಯಾ ಸಂದರ್ಭ, ಆಯಾ ಕ್ರಮಾಂಕದಲ್ಲಿ ಆಡಲು ಸರಿಯಾದ ಆಟಗಾರರು ಬೇಕು. ಈ ಮಾತನ್ನು ಹೇಳುವಾಗ ನನಗೆ ೨೦೦೮ರಲ್ಲಿ ಚಾಂಪಿಯನ್ ಆದ ರಾಜಸ್ಥಾನ ರಾಯಲ್ಸ್ ತಂಡ ನೆನಪಿಗೆ ಬರುತ್ತದೆ. ಆಗ ಆ ತಂಡದ ನಾಯಕ ಶೇನ್ ವಾರ್ನ್. ಆಗ ಆತನಿಗೆ ೩೯ ವರ್ಷವಾಗಿತ್ತು.

ಟೆಸ್ಟ್ ಕ್ರಿಕೆಟಿನಲ್ಲಿ ಎಂದೂ ಆಸ್ಟ್ರೇಲಿಯಾ ತಂಡದ ನಾಯಕನಾಗದ ವಾರ್ನೆ, ತನ್ನ ತಂಡವನ್ನು ಚಾಂಪಿಯನ್ ಹಂತಕ್ಕೆ ಕೊಂಡೊಯ್ಯಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಅಲ್ಲದೇ ಆ ತಂಡದಲ್ಲಿ ಹೇಳಿಕೊಳ್ಳುವಂಥ ಅನುಭವಿ ಅಥವಾ ಖ್ಯಾತನಾಮ ಆಟಗಾರರೂ ಇರಲಿಲ್ಲ. ಆ ತಂಡದಲ್ಲಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ. ಆರಂಭಿಕ ಆಟಗಾರ ಗೋವಾದ ಸ್ವಪ್ನಿಲ್ ಅಸ್ನೋಡ್ಕರ್. ಇನ್ನು ಪಠಾಣ್ ಸಹೋದರರು. ಉಳಿದವರೆಲ್ಲ ಕಳ್ಳೇಕಾಯಿ-ಅವಲಕ್ಕಿ-ಮಂಡಕ್ಕಿ!

ಆದರೂ ರಾಜಸ್ಥಾನ ರಾಯಲ್ಸ ಎಲ್ಲರ ಹುಬ್ಬೇರಿಸುವಂತೆ ಚಾಂಪಿಯನ್ ಆಯಿತು. ಇದರಲ್ಲಿ ಒಂದು ಸಂದೇಶವಿದೆ.
ಅದೇನೆಂದರೆ, ನಿಮ್ಮ ತಂಡದಲ್ಲಿ ಇರುವವರೆಲ್ಲ ಸ್ಟಾರ್ ಆಟ ಗಾರರೇ ಆಗಬೇಕಿಲ್ಲ. ಸುನಿಲ್ ಗವಾಸ್ಕರ್ ತಮ್ಮ ಕಾಮೆಂಟರಿ
ಯಲ್ಲಿ ಹೇಳಿದ, ‘A team wins not because it has the eleven best people playing, but because it
has the best eleven’ ಎಂಬ ಮಾತು ನೆನಪಾಗುತ್ತದೆ.

ಕೆಲವು ಸಲ best talent ಗಿಂತ right talent ಬಹಳ ಮುಖ್ಯ. ಇವೆರಡರ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ತಂಡದಲ್ಲಿ best talent ಗಳನ್ನೇ ತುಂಬಿಕೊಳ್ಳುವ ಬದಲು, ಅಂಥವರನ್ನು ಹೇಗೆ ದುಡಿಸಿಕೊಳ್ಳುತ್ತೇವೆ, ಬಳಸಿಕೊಳ್ಳುತ್ತೇವೆ ಅನ್ನೋದು ಮುಖ್ಯ. ಇರುವ ಉತ್ತಮರನ್ನು ಬಳಸಿಕೊಳ್ಳದಿದ್ದರೆ, ಅವರನ್ನು ಇಟ್ಟುಕೊಂಡರೆಷ್ಟು ಬಿಟ್ಟರೆಷ್ಟು? ಹೀಗಾಗಿ ಕೆಲವು ಸಲ ೬ ಜನ ಉತ್ತಮ ಆಲ್‌ರೌಂಡರ್‌ಗಳನ್ನು ಹೊಂದಿಯೂ, ಖ್ಯಾತನಾಮ ಆಟಗಾರರನ್ನು ಹೊಂದಿಯೂ ತಂಡ ಸೋಲುತ್ತದೆ.

ಇಲ್ಲಿ ನಾನು ನನ್ನದೇ ಒಂದು ಅನುಭವವನ್ನು ಹಂಚಿಕೊಳ್ಳಬಯಸುವೆ. ನಾನು ‘ವಿಜಯ ಕರ್ನಾಟಕ’ಕ್ಕೆ ಪ್ರಧಾನ ಸಂಪಾದಕ ನಾಗಿ ಸೇರಿಕೊಂಡಾಗ ನನಗೆ ೩೨ ವರ್ಷ. ಇನ್ನೂ ಮೀಸೆ ಮತ್ತು ಬುದ್ಧಿ ಬೆಳೆಯಬೇಕಿದ್ದ ವಯಸ್ಸು. ಆಗ ನನ್ನ ಮುಂದೆ ಬಲಿಷ್ಠ, ಜನಪ್ರಿಯ, ಸ್ಥಾಪಿತ ಪತ್ರಿಕೆಗಳಿದ್ದವು. ಪತ್ರಕರ್ತರೂ ಇದ್ದರು. ನನಗೆ ಎಷ್ಟು ವಯಸ್ಸಾಗಿದೆಯೋ, ಅಷ್ಟು ವರ್ಷ ಕನ್ನಡ ಪತ್ರಿಕೋದ್ಯಮದಲ್ಲಿ ದುಡಿದು ಅನುಭವ ಗಳಿಸಿದವರಿದ್ದರು. ಆ ದಿನಗಳಲ್ಲಿ ಪ್ರತಿಸ್ಪರ್ಧಿ ‘ಪ್ರಜಾವಾಣಿ’ಯಲ್ಲಿ ಖ್ಯಾತನಾಮ, ಹಿರಿಯ ಪತ್ರಕರ್ತ ರಿದ್ದರು. ಅವರೆಲ್ಲರೂ ಒಂದಿಂದು ‘ಬೀಟ್’ನಲ್ಲಿ ಪ್ರಭುತ್ವ ಸಾಧಿಸಿ, ಓದುಗರಿಗೆ ಪರಿಚಿತರಾದವರೇ. ಅಷ್ಟಕ್ಕೂ ‘ವಿಜಯ ಕರ್ನಾಟಕ’ದಲ್ಲಿ ಎಲ್ಲರೂ ಎಳೆ ನಿಂಬೆಕಾಯಿಗಳೇ, ಚಳ್ಳೆಪಿಳ್ಳೆಗಳೇ!

ಇಡೀ ಸಂಪಾದಕೀಯ ತಂಡದಲ್ಲಿ ಒಬ್ಬಿಬ್ಬರು ೩೫-೪೦ ವಯಸ್ಸಿನವರನ್ನು ಬಿಟ್ಟರೆ, ಉಳಿದವರೆಲ್ಲ ಮೂವತ್ತರ ಹಿಂದೆ-ಮುಂದೆ ಇದ್ದವರು. ಆ ಪೈಕಿ ಒಬ್ಬರೇ ಒಬ್ಬರು ದೊಡ್ಡ ಹೆಸರಿನವರಲ್ಲ, ಪರಿಚಿತ ಮುಖಗಳಿರಲಿಲ್ಲ. ಬಹುತೇಕರೆಲ್ಲ ಪತ್ರಿಕೋದ್ಯಮಕ್ಕೆ ಆಗ ತಾನೇ ಕಾಲಿಟ್ಟವರು ಮತ್ತು ಅಂಬೆ ಗಾಲಿಡುತ್ತಿದ್ದವರು. ‘ಪ್ರಜಾವಾಣಿ’ ಮತ್ತು ‘ಕನ್ನಡಪ್ರಭ’ದಲ್ಲಿ ರುವವರನ್ನು ಕರೆದರೂ ಬರುತ್ತಿರಲಿಲ್ಲ. ಅಷ್ಟೂ ಸಾಲದೆಂಬಂತೆ, ಪತ್ರಿಕೆ ಯಾವ ಕ್ಷಣದದರೂ ಮುಚ್ಚಬಹುದು ಎಂಬ ವದಂತಿಯನ್ನು ಹಬ್ಬಿಸಿದ್ದರು.

ಒಂದೆರಡು ಟ್ಯಾಬ್ಲಾಯ್ಡ್‌ಗಳು ಸತತ ಸಂಕೇಶ್ವರರ ಈ ಪ್ರಯತ್ನವನ್ನು ಹಂಗಿಸಿ, ಕುಹಕ ಮಾಡಿ ಬರೆಯುತ್ತಿದ್ದವು. ತಮ್ಮ ಬಸ್ಸೇರಿದವರನ್ನು ಸಂಕೇಶ್ವರರು ಯಾವಾಗ ಅರ್ಧ ದಾರಿಯಲ್ಲಿ ಇಳಿಸಿ ಹೋಗುತ್ತಾರೋ ಎಂದು ಅವರು ವ್ಯಂಗ್ಯವಾಡು ತ್ತಿದ್ದರು. ಅದರಲ್ಲೂ ಒಂದು ಟ್ಯಾಬ್ಲಾಯ್ಡ್ ಅಂತೂ, ಪ್ರತಿಸ್ಪರ್ಧಿ ‘ಸಂಯುಕ್ತ ಕರ್ನಾಟಕ’ ಶಾಮರಾಯರಿಂದ ಲಂಚವಾಗಿ ನ್ಯೂಸ್ ಪ್ರಿಂಟ್ ತೆಗೆದುಕೊಂಡು, ಸಂಕೇಶ್ವರರ ವಿರುದ್ಧ, ಪತ್ರಿಕೆ ವಿರುದ್ಧ ಸತತವಾಗಿ ಬರೆಯುತ್ತಿತ್ತು.

ಆ ದಿನಗಳಲ್ಲಿ ಆ ಟ್ಯಾಬ್ಲಾಯ್ಡ್ ಪ್ರಸಾರ, ಜನಪ್ರಿಯತೆಯೂ ಜೋರಾಗಿತ್ತು. ಹೀಗಾಗಿ ಯಾರೂ ‘ವಿಜಯ ಕರ್ನಾಟಕ’ ಸೇರಲು ಧೈರ್ಯ ಮಾಡುತ್ತಿರಲಿಲ್ಲ. ‘ನಿಮಗೆ ಸರಿಯಾಗಿ ಸಂಬಳ ಕೊಡುತ್ತಿದ್ದಾರಾ?’ ಎಂದು ಹೋದಲ್ಲಿ-ಬಂದಲ್ಲಿ ಕೇಳುತ್ತಿದ್ದರು. ನಾನು ಬರುವ ಮುಂಚೆಯೇ ವಿಜಯ ಸಂಕೇಶ್ವರರು ಬೆಲೆ ಸಮರ ಘೋಷಿಸಿದ್ದರು. ಆದರೆ ಪತ್ರಿಕೆ ಪ್ರಸಾರ ಎದ್ದಿರಲಿಲ್ಲ. ‘ವಿಜಯ ಕರ್ನಾಟಕ’ದೊಂದಿಗೆ ಆರಂಭಿಸಿದ್ದ, ‘ನೂತನ’ ವಾರಪತ್ರಿಕೆ ಮತ್ತು ‘ಭಾವನಾ’ ಮಾಸಪತ್ರಿಕೆಯನ್ನು ಮುಲಾಜಿಲ್ಲದೆ ಮುಚ್ಚಿದ್ದರು.

‘ವಿಜಯ ಕರ್ನಾಟಕ’ ಪ್ರಸಾರವನ್ನು ೬ ತಿಂಗಳಲ್ಲಿ ಹೆಚ್ಚಿಸದಿದ್ದರೆ, ಅದನ್ನೂ ಮುಂದುವರಿಸಿಕೊಂಡು ಹೋಗುವ ದರ್ದು ಅವರಿಗಿರಲಿಲ್ಲ. ಕಾರಣ ಅಷ್ಟರೊಳಗೆ, ನೂರಾರು ಕೋಟಿ ರೂಪಾಯಿ ಕೈತಪ್ಪಿ ಹೋಗಿತ್ತು. ಅಲ್ಲದೆ, ನಾನು ಬರುವುದಕ್ಕಿಂತ ಮುನ್ನ, ಇಬ್ಬರು ಸಂಪಾದಕರು ರಾಜೀನಾಮೆ ಇಟ್ಟು ಹೊರನಡೆದಿದ್ದರು. ಕನ್ನಡದ ಪ್ರಸಿದ್ಧ ಸಾಹಿತಿ ಮತ್ತು ಲೇಖಕರನ್ನು ಭೇಟಿ ಮಾಡಿ ಪತ್ರಿಕೆಗೆ ಬರೆಯಿರಿ ಎಂದರೂ ‘ಪತ್ರಿಕೆ ಸರಿಯಾಗಿ ನೆಲೆಯೂರಲಿ, ಮುಂದೆ ನೋಡೋಣ’ ಎನ್ನುತ್ತಿದ್ದರು. ಹೊಸ ಪತ್ರಿಕೆಯನ್ನು ಕಟ್ಟಲು ಬೇಕಾದ ಪೂರಕ, ಉಲ್ಲಸಿತ, ಆಹ್ಲಾದಕರ ವಾತಾವರಣವಿರಲಿಲ್ಲ.

ಆದರೂ ಅತ್ಯಲ್ಪ ಕಾಲದಲ್ಲಿ ‘ವಿಜಯ ಕರ್ನಾಟಕ’ ಯಶಸ್ವಿಯಾಗಿ ಮನೆ ಮಾತಾಯಿತು. ಉಳಿದೆಲ್ಲ ಪತ್ರಿಕೆಗಳನ್ನು ಹಿಂದಕ್ಕೆ ಹಾಕಿ ನಂ.೧ ಆಯಿತು. ಒಂದು ಪತ್ರಿಕೆಯ ಯಶಸ್ಸಿಗೆ ಬೇಕಾದ ಸಂಪಾದಕೀಯ, ಪ್ರಸಾರ, ಜಾಹೀರಾತು, ಮುದ್ರಣ ಮತ್ತು ಆಡಳಿತ ವಿಭಾಗಗಳು ಸಮಸಮವಾಗಿ ಅಥವಾ ಪರಸ್ಪರ ಪೈಪೋಟಿಗೆ ಬಿದ್ದು ಕೆಲಸ ಮಾಡಿದ್ದೂ ಅದರ ಯಶಸ್ಸಿಗೆ ಕಾರಣವಾಯಿತು.

ಬರೀ ಸಂಪಾದಕೀಯ ವಿಭಾಗವೊಂದೇ ಉತ್ತಮ ಕೆಲಸ ಮಾಡಿದರೆ ಪತ್ರಿಕೆ ಯಶಸ್ವಿಯಾಗುತ್ತದೆ ಎಂದೇನಿಲ್ಲ. ಅಂಥ
ಪತ್ರಿಕೆಯನ್ನು ಮನೆಮನೆಗೆ ತಲುಪಿಸುವಲ್ಲಿ ಪ್ರಸಾರ ವಿಭಾಗದ ಯೋಗದಾನವೂ ಬಹುಮುಖ್ಯ. ಹಾಗೆಯೇ ಪತ್ರಿಕೆಗೆ ಬೇಕಾದ ವರಮಾನವನ್ನು ತರಲು ಜಾಹೀರಾತು ವಿಭಾಗ ಸಹ ಅಷ್ಟೇ ಮುಖ್ಯ. ಮಾಲೀಕರೂ ಈ ಎಲ್ಲಾ ವಿಭಾಗದವರ ಮೇಲೆ ಭರವಸೆ ಇಟ್ಟು ಹಣ ಹೂಡಬೇಕು. ಸಂಕೇಶ್ವರರು ನಿಜಕ್ಕೂ ಅದ್ಭುತ ಮಾಲೀಕ. ಪತ್ರಿಕೆ ಯಶಸ್ಸಿಗೆ ಮಾಲೀಕರೂ ಹೇಗೆ ಕಾರಣರಾಗುತ್ತಾರೆ ಎಂಬುದಕ್ಕೆ ಅವರೊಂದು ಉತ್ತಮ ನಿದರ್ಶನ. ಆ ದಿನಗಳಲ್ಲಿ ‘ವಿಜಯ ಕರ್ನಾಟಕ’ದ ಯಶಸ್ಸನ್ನು ಮಿಡತೆಯೊಂದು ಆನೆಯನ್ನು ಸೋಲಿಸಿದ್ದಕ್ಕೆ ಹೋಲಿಸಬಹುದು.

ಸ್ಟಾರ್ ಆಟಗಾರರನ್ನೇ ತುಂಬಿಕೊಂಡಿರುವ ತಂಡವನ್ನು ಕಟ್ಟುವ ಬದಲು ತಂಡವನ್ನೇ ಸ್ಟಾರ್ ಆಗಿ ಕಟ್ಟುವುದು ಹೇಗೆ
ಎಂದು ಯೋಚಿಸಬೇಕು. ಕೆಲವು ವ್ಯಕ್ತಿಗಳ ಬಲವನ್ನು ನೆಚ್ಚಿಕೊಂಡು ಸಂಸ್ಥೆ ಕಟ್ಟುವುದಕ್ಕಿಂತ, ಎಲ್ಲಾ ಸಿಬ್ಬಂದಿ ಬಲವನ್ನು ಉಪಯೋಗಿಸಿಕೊಂಡು ಸಂಸ್ಥೆ ಕಟ್ಟಿದರೆ ಯಶಸ್ಸು ನಿಶ್ಚಿತ. ಯಾಕೆಂದರೆ ಮಾಲೀಕ ನೆಚ್ಚಿಕೊಂಡ ಸಂಸ್ಥೆಯ ಒಂದಿಬ್ಬರು ಉತ್ತಮ ಸಾಧನೆ ತೋರದಿದ್ದರೆ, ಇಡೀ ಸಂಸ್ಥೆಯೇ ಮುಳುಗಿಹೋಗುತ್ತದೆ. ಕೊಹ್ಲಿ ಮತ್ತು ರೋಹಿತ್ ಶರ್ಮ ಇಬ್ಬರನ್ನೇ ನೆಚ್ಚಿಕೊಂಡು ತಂಡ ಕಟ್ಟಿದಂತಾಗುತ್ತದೆ.

ಅವರಿಬ್ಬರೂ ಬೇಗ ಔಟಾದರೆ ಇಡೀ ತಂಡವೇ ಕಡಿಮೆ ರನ್ನಿಗೆ ಔಟಾಗುತ್ತದೆ. ಅದರ ಬದಲು ಖ್ಯಾತನಾಮರಲ್ಲದಿದ್ದರೂ,
ಆಯಾ ಕ್ರಮಾಂಕಲ್ಲಿ ಉತ್ತಮವಾಗಿ ಆಡುವವರಿದ್ದರೂ ಸಾಕು. ಒಬ್ಬನೇ ನೂರು ರನ್ ಹೊಡೆಯುವ ಬದಲು, ಉಳಿದವರೂ ತಲಾ ೨೫-೩೫ ರನ್ ಹೊಡೆದರೂ, ಉತ್ತಮ ಸ್ಕೋರ್ ಜಮೆ ಆಗುತ್ತದೆ. ತಂಡದಲ್ಲಿ ಒಬ್ಬ ತೆಂಡೂಲ್ಕರ್ ಸಾಕು. ಎಲ್ಲರೂ ಅವರೇ ಆಗಬೇಕೆಂದಿಲ್ಲ. ಯೋಚಿಸಿ.

error: Content is protected !!