Friday, 29th March 2024

ಪಾಸ್ ಪೋರ್ಟ್‌ ಟಿಆರ್‌ಪಿ ಸುತ್ತ…

ವಿದೇಶವಾಸಿ

dhyapaa@gmail.com

ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪಟ್ಟಿಯಲ್ಲಿ ಐದನೆಯ ಸ್ಥಾನಕ್ಕೇರಿದೆ. ಹೀಗೆಯೇ ಮುಂದುವರಿದರೆ ಇನ್ನು ನಾಲ್ಕು-ಐದು ವರ್ಷದಲ್ಲಿ ಜಪಾನ್, ಜರ್ಮನಿಯನ್ನೂ ಹಿಂದಿಕ್ಕಿ ಮುನ್ನಡೆಯುತ್ತದೆ ಎಂಬ ವರದಿಯಿದೆ. ಹಾಗಿರುವಾಗ ಶಕ್ತಿಯುತ ಪಾಸ್‌ಪೋರ್ಟ್ ಹೊಂದುವು ದರಲ್ಲಿ ಏಕೆ ವಿಫಲವಾಗುತ್ತಿದೆ ಎನ್ನುವ ಪ್ರಶ್ನೆ ಕಾಡುವುದು ಸಹಜ.

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಟಿವಿಯವರು ಮಾಡುವುದು ಟಿಆರ್ ಪಿಗಾಗಿ. ಸದ್ಯಕ್ಕಂತೂ ಟಿವಿ ಮಾಧ್ಯಮದವರ ಸ್ಥಾನ-ಮಾನ ನಿರ್ಣಯಿ ಸುವ ಏಕಮಾತ್ರ ಸಾಧನ ಎಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್ ಅಥವಾ ಟೆಲಿವಿಶನ್ ರೇಟಿಂಗ್ ಪಾಯಿಂಟ್. ವೀಕ್ಷಕರು ಇಷ್ಟಪಡುವ ಚಾನೆಲ್, ಕಾರ್ಯಕ್ರಮ, ಜಾಹೀರಾತು ಎಲ್ಲವೂ ಲಭ್ಯವಾಗುವುದು ಇದೇ ಟಿಆರ್‌ಪಿಯಿಂದ.

ನ್ಯೂಸ್ ಚಾನೆಲ್‌ನಲ್ಲಿ ಸುದ್ದಿ ಓದುವವರು ಕಿರುಚುವುದರಿಂದ ಹಿಡಿದು, ರಿಯಾಲಿಟಿ ಶೋ ನಲ್ಲಿ ಅಳುವುದರವರೆಗೆ ನಡೆಯುವ ಎಲ್ಲ ಗಿಮಿಕ್ ಗಳೂ ಅದೇ ಟಿಆರ್‌ಪಿಗೋಸ್ಕರ. ಚಾನೆಲ್‌ಗಳಿಗೆ ಪ್ರಾಣವಾಯು ಜಾಹೀರಾತು ಪಡೆಯುವುದಕ್ಕೆ ಬೇಕಾದ ಮೂಲ ಧಾತು ಟಿಆರ್‌ಪಿ. ಭಾರತದಲ್ಲಿ
ಟಿವಿ ಚಾನೆಲ್‌ಗಳ ಸಮೀಕ್ಷೆ ಮಾಡಿ, ಟಿಆರ್‌ಪಿ ರೇಟಿಂಗ್ ನೀಡುವ ಸಂಸ್ಥೆ ಬಿಎಆರ್‌ಸಿ (ಜನಪ್ರಿಯ ಭಾಷೆಯಲ್ಲಿ ಬಾರ್ಕ್) ಮಾತ್ರ. ಸರಿಯೋ, ತಪ್ಪೋ, ನಮ್ಮ ದೇಶದಲ್ಲಿರುವ ನೂರಾರು ಚಾನೆಲ್ ಗಳ ಹಣೆಬರಹ ಹೇಳುವುದು ಇದೊಂದೇ ಸಂಸ್ಥೆ.

ವಿಶ್ವದಾದ್ಯಂತ ಇದೇ ರೀತಿ ಬೇರೆ ಬೇರೆ ಸಮೀಕ್ಷೆಗಳನ್ನು ನಡೆಸುವ ನೂರಾರು ಸಂಸ್ಥೆಗಳಿವೆ. ಶ್ರೀಮಂತರ ಸಮೀಕ್ಷೆ ನಡೆಸುವ ಫೋರ್ಬ್ಸ್ ಯಾರಿಗೆ ಗೊತ್ತಿಲ್ಲ? ಚುನಾವಣೆ ಸಮೀಕ್ಷೆ ಮಾಡುವ ಸಿ-ವೋಟರ್, ಚಾಣಕ್ಯ ಇತ್ಯಾದಿಗಳು ಯಾರಿಗೆ ತಿಳಿದಿಲ್ಲ? ಇಂದಿನ ದಿನಮಾನದಲ್ಲಿ ವಿಮಾನದ ಗುಣಮಟ್ಟದಿಂದ ಹಿಡಿದು, ವೈದ್ಯಕೀಯ ಸಂಸ್ಥೆಯ ವರೆಗೆ, ಹಸಿವಿನ ಸೂಚ್ಯಂಕದಿಂದ ಹಿಡಿದು ದೇಶದ ಸೇನೆಯ ಬಲಾಬಲದವರೆಗಿನ ಸಮೀಕ್ಷೆ ನಡೆಸುವ ಸಂಸ್ಥೆಗಳಿವೆ. ಸಮೀಕ್ಷೆ ನಡೆಸುವ ಯಾವುದೇ ಸಂಸ್ಥೆಯಾದರೂ, ಸಮೀಕ್ಷೆಗೆ ಬೇಕಾಗಿ ಸ್ಥಳ, ಜನ, ಸಮಯ, ದೇಶ, ಇತ್ಯಾದಿಗಳನ್ನು ಆಯ್ದುಕೊಳ್ಳುತ್ತವೆ. ಅವುಗಳ ಆಧಾರದ ಮೇಲೆಯೇ ವರದಿ ಸಿದ್ಧವಾಗುತ್ತದೆ. ಸಂಸ್ಥೆಗಳು ನಡೆಸುವ ಸಮೀಕ್ಷೆಗಳನ್ನೆಲ್ಲ ನಂಬುವುದು, ಬಿಡುವುದು ಅವರವರ ವೈಯಕ್ತಿಕವೇ ಆದರೂ, ಇಂತಹ ಒಂದು ಸಮೀಕ್ಷೆ ನಡೆಸಿ, ಒಂದಷ್ಟು ಮಾಹಿತಿ ಒದಗಿಸುವ ಕಾರ್ಯವನ್ನು ಆ ಸಂಸ್ಥೆಗಳು ಮಾಡುತ್ತಿರುವು ದಕ್ಕಾದರೂ ಅವರಿಗೆ ಅಭಿನಂದನೆ ಹೇಳಬೇಕು.

ಇಲ್ಲವಾದರೆ ಅದೆಷ್ಟೋ ಮಾಹಿತಿಗಳಿಗಾಗಿ ನಾವು ತಿಣುಕಾಡಬೇಕಾಗುತ್ತಿತ್ತು. ಇರಲಿ, ಇಂದಿನ ವಿಷಯ ಅದಲ್ಲವಾದ್ದರಿಂದ ಸಮೀಕ್ಷೆಗಳ ಕುರಿತು ಇಷ್ಟೇ ಸಾಕು. ಒಂದು ದೇಶದ ಪಾಸ್‌ಪೋರ್ಟ್‌ನ ಮೌಲ್ಯ ಅಥವಾ ಘನತೆ ಎಷ್ಟು ಎಂದು ಅಳೆದು ಹೇಳುವ ಸಂಸ್ಥೆ ಹೆನ್ಲಿ. ಜಾಗತಿಕ ಪೌರತ್ವ ಮತ್ತು ನಿವಾಸ ಸಲಹೆಯ ಸಮೀಕ್ಷೆ ನಡೆಸುವ ಹೆನ್ಲಿ ಸಂಸ್ಥೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಹೋಗಿ ಅಲ್ಲಿಯ ಪೌರತ್ವ ಪಡೆಯಲು ಸಹಕರಿಸುತ್ತದೆ.

ಒಂದು ಅರ್ಥದಲ್ಲಿ, ಇದು ವಿಶ್ವದ ೧೯೯ ದೇಶಗಳ ಪಾಸ್‌ಪೋರ್ಟ್‌ನ ಟಿಆರ್‌ಪಿ ಎಷ್ಟು ಎಂದು ಹೇಳುತ್ತದೆ ಎಂದರೂ ಅಡ್ಡಿಯಿಲ್ಲ. ಲಂಡನ್ ಮೂಲದ ಈ ಸಂಸ್ಥೆ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (ಐಎಟಿಎ) ಸಂಸ್ಥೆಯೊಂದಿಗೆ ಸೇರಿ ೨೦೨೩ ರ ಪಾಸ್‌ಪೋರ್ಟ್
ಸೂಚ್ಯಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಆ ಸೂಚ್ಯಂಕದ ಪ್ರಕಾರ, ಭಾರತದ ಪಾಸ್‌ಪೋರ್ಟ್ ವಿಶ್ವದಾದ್ಯಂತ ಇರುವ ಪಾಸ್‌ಪೋರ್ಟ್‌ಗಳ
ಪಟ್ಟಿಯಲ್ಲಿ ೮೫ನೆಯ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತ ೮೭ನೆಯ ಸ್ಥಾನದಲ್ಲಿತ್ತು. ಅಂದರೆ ಈ ವರ್ಷ ಎರಡು ಸ್ಥಾನ ಮೇಲಕ್ಕೇರಿದೆ.

ಮುಂದುವರಿಯುವುದಕ್ಕಿಂತ ಮೊದಲು ಪಾಸ್ ಪೋರ್ಟ್ ಮತ್ತು ವೀಸಾ ನಡುವಿನ ಅಂತರ ತಿಳಿಯೋಣ. ಹೆಚ್ಚಿನ ಜನರಿಗೆ ತಿಳುವಳಿಕೆ
ಇದೆಯಾದರೂ, ಪಾಸ್‌ಪೋರ್ಟ್ ಇದ್ದರೆ ಬೇರೆ ದೇಶಕ್ಕೆ ಹೋಗಬಹುದು ಎಂದು ತಿಳಿದ ಕೆಲವು ಜನ ಇನ್ನೂ ನಮ್ಮ ನಡುವೆ ಇದ್ದಾರೆ. ಪಾಸ್‌ ಪೋರ್ಟ್ ವ್ಯಕ್ತಿಯ ಹೆಸರು, ವಿಳಾಸ, ವಯಸ್ಸು, ಪೌರತ್ವ ಇತ್ಯಾದಿಗಳನ್ನು ತಿಳಿಸುವ ಅಽಕೃತ ದಾಖಲೆ. ವಿಸಾ ಒಂದು ದೇಶದೊಳಗೆ ಪ್ರವೇಶ ಮಾಡಲು ಆ ದೇಶ ನೀಡುವ ಪರವಾನಿಗೆ. ಪ್ರವಾಸಕ್ಕೆ, ನೌಕರಿಗೆ, ಭೇಟಿಗೆ ಅಥವಾ ಇನ್ಯಾವುದೇ ಕಾರಣಕ್ಕೆ ಒಂದು ದೇಶದ ಒಳಗೆ ಹೋಗಲು ಕೇವಲ ಪಾಸ್‌ಪೋರ್ಟ್ ಇದ್ದರೆ ಸಾಲದು, ಆ ದೇಶದ ವೀಸಾ ಕೂಡ ಅವಶ್ಯಕವಾಗುತ್ತದೆ.

ಎರಡು ದೇಶಗಳ ನಡುವಿನ ಒಪ್ಪಂದದಿಂದ ಕೆಲವೊಮ್ಮೆ ಕೆಲವು ದೇಶಗಳಿಗೆ ಹೋಗಲು ಮುಂಚಿತವಾಗಿ ಪರವಾನಿಗೆ ಪಡೆಯುವ ಅವಶ್ಯಕತೆ ಇರುವುದಿಲ್ಲ. ಉದಾಹರಣೆಗೆ, ಭಾರತದಿಂದ ನೇಪಾಳ ಅಥವಾ ಥೈಲೆಂಡ್‌ಗೆ ಹೋಗಲು ಮೊದಲೇ ವೀಸಾ ಪಡೆಯುವ ಅವಶ್ಯಕತೆ ಇಲ್ಲ. ಆ ದೇಶಕ್ಕೆ ಹೋಗಿ ತಲುಪಿದ ನಂತರ ವೀಸಾ ಪಡೆಯಬಹುದು. ಕೆಲವು ದೇಶಗಳಿಗೆ ಆನ್‌ಲೈನ್ ಮೂಲಕ ಮುಂಚಿತವಾಗಿ ವೀಸಾ ಪಡೆಯುವ ಸೌಲಭ್ಯವಿದ್ದರೆ,
ಅಮೆರಿಕದಂತಹ ದೇಶಗಳಿಗೆ ವೀಸಾ ಪಡೆಯಬೇಕಾದರೆ ದೂತಾವಾಸಕ್ಕೆ ಹೋಗಿ ವೀಸಾ ಪಡೆಯಬೇಕಾಗುತ್ತದೆ. ಅಂದಹಾಗೆ, ಈಗ ಅಮೆರಿಕದ
ವೀಸಾ ಬೇಕೆಂದರೆ ಹೆಚ್ಚು ಕಮ್ಮಿ ಒಂದು ಸಾವಿರ ದಿನ ಕಾಯಬೇಕಂತೆ!

ವೀಸಾದಂತೆಯೇ ಪಾಸ್‌ಪೋರ್ಟ್‌ನಲ್ಲಿಯೂ ಬೇರೆ ಬೇರೆ ಬಗೆಗಳಿವೆ. ಭಾರತ ಸರಕಾರ ಸಾಮಾನ್ಯವಾಗಿ ಕಾಣುವ ಕಡು ನೀಲಿ ಬಣ್ಣದ ಪಾಸ್‌ ಪೋರ್ಟ್ ಹೊರತಾಗಿ ಬಿಳಿ ಮತ್ತು ಕಡು ಕೆಂಪು ಬಣ್ಣದ ಪಾಸ್‌ಪೋರ್ಟ್ ವಿತರಿಸುತ್ತದೆ. ಕಡು ಕೆಂಪು ಬಣ್ಣದ ಪಾಸ್‌ಪೋರ್ಟ್ ಮಂತ್ರಿಗಳು, ಇತರೆ ರಾಜತಾಂತ್ರಿಕ ವರ್ಗದವರಿಗೂ, ಬಿಳಿ ಬಣ್ಣದ ಪಾಸ್‌ಪೋರ್ಟ್ ಕೇಂದ್ರ ಸರಕಾರದ ಪ್ರಮುಖ ಅಧಿಕಾರಿಗಳಿಗೂ ನೀಡುತ್ತಾರೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದ್ದರೆ ಬಹುತೇಕ ದೇಶಗಳಿಗೆ ವೀಸಾ ಇಲ್ಲದೆಯೇ ಪ್ರವೇಶ ಪಡೆಯಬಹುದಾಗಿದೆ. ಅಷ್ಟೇ ಅಲ್ಲ, ಅವರನ್ನು ವಿಮಾನ ನಿಲ್ದಾಣದಲ್ಲಿ ಬೇರೆ ಮಾರ್ಗದಿಂದ ವಿಶೇಷ ಗೌರವದೊಂದಿಗೆ ಕರೆದೊಯ್ಯಲಾಗುತ್ತದೆ.

ಯಾವ ದೇಶದ ಪಾಸ್‌ಪೋರ್ಟ್ ಶಕ್ತಿಶಾಲಿ ಎನ್ನುವುದನ್ನು ನೋಡಲು ಸಮೀಕ್ಷೆ ನಡೆಯುತ್ತದೆ ಎಂದೆನಲ್ಲ, ಆ ಸಮೀಕ್ಷೆಯ ಪ್ರಕಾರ ಯಾವ
ದೇಶದ ಪಾಸ್‌ಪೋರ್ಟ್ ಅತ್ಯಂತ ಶಕ್ತಿಯುತವಾಗಿದೆ ಊಹಿಸಬಲ್ಲಿರಾ? ದೊಡ್ಡಣ್ಣ ಅಮೆರಿಕ? ಅಲ್ಲ ಎಂದರೆ ಆಶ್ಚರ್ಯ ಪಡಬೇಡಿ! ಯುನೈಟೆಡ್
ಕಿಂಗ್ಡಮ್ ಕೂಡ ಅಲ್ಲ. -, ಜರ್ಮನಿ, ಇಟಲಿ, ಕೆನಡಾ, ಇತರ ಯುರೋಪ್ ಅಥವಾ ಅಮೆರಿಕದ ದೇಶಗಳು? ಊಹೂಂ… ಸಮೀಕ್ಷೆಯ ಪ್ರಕಾರ ಮೊದಲನೆಯ ಸ್ಥಾನದಲ್ಲಿರುವುದು ಜಪಾನ್. ಜಪಾನ್ ಶಕ್ತಿಯುತ ಪಾಸ್‌ಪೋರ್ಟ್ ಹೊಂದಿದ ದೇಶವಾಗಿ ನಿಂತಿರುವುದು ಇದೇ ಮೊದಲ ಸಲವಲ್ಲ. ಕಳೆದ ಕೆಲವು ವರ್ಷಗಳಿಂದ ಜಪಾನ್ ತನ್ನ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ.

ಎರಡನೆಯ ಸ್ಥಾನದಲ್ಲೂ ಏಷ್ಯ ಖಂಡದ ದೇಶಗಳೇ ಆದ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ. ಮೂರನೆಯ ಸ್ಥಾನದಲ್ಲಿ ಜರ್ಮನಿ ಮತ್ತು ಸ್ಪೇನ್ ಇವೆ. ಈ ಶಕ್ತಿ ಸ್ಪರ್ಧೆಯಲ್ಲಿ ಯುಕೆ, -, ಐರ್ಲ್ಯಾಂಡ್, ಪೋರ್ಚುಗಲ್ ದೇಶ ಆರನೆಯ ಸ್ಥಾನ ಪಡೆದರೆ, ಅಮೆರಿಕ ಏಳನೆಯ ಸ್ಥಾನದಲ್ಲಿದೆ. ಈಗಾಗಲೇ ಹೇಳಿದಂತೆ ಭಾರತ ೮೫ನೆಯ ಸ್ಥಾನದಲ್ಲಿದೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಭಾರತ ೮೨-೮೭ರ ಮಧ್ಯೆ ಗಿರಕಿ ಹೊಡೆಯುತ್ತಿದೆ. ಇರಲಿ, ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ದೇಶ ಯಾವುದು ಗೊತ್ತೇ? ಅಫ್ಘಾನಿಸ್ತಾನ. ಇರಾಕ್ ಅದಕ್ಕಿಂತ ಒಂದು ಮನೆ ಮೇಲೆ.

ಹಾಗಾದರೆ ಇದನ್ನು ಅಳೆಯುವುದಕ್ಕೆ ಮಾಪನ ಯಾವುದು? ಈ ಕಾರ್ಯಕ್ಕೆ ಪ್ರಮುಖವಾಗಿ ಒಂದು ದೇಶದ ಪ್ರಜೆಗೆ ಎಷ್ಟು ದೇಶಕ್ಕೆ ಮುಂಚಿತವಾಗಿ ವೀಸಾ ಪಡೆಯದೆ ಪ್ರವೇಶ ಪಡೆಯಬಹುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಉದಾಹರಣೆಗೆ, ಜಪಾನ್ ದೇಶದ ಪಾಸ್‌ಪೋರ್ಟ್ ಹೊಂದಿದವರು ೧೯೩ ದೇಶಗಳಿಗೆ ಮುಂಗಡ ವೀಸಾ ಪಡೆಯದೆ ಪ್ರವೇಶಿಸಬಹುದಾಗಿದೆ. ಸಿಂಗಾಪುರ, ದಕ್ಷಿಣ ಕೊರಿಯಾದ ಪ್ರಜೆಗಳು ೧೯೨ ದೇಶಕ್ಕೆ ಪ್ರವೇಶ ಪಡೆಯಬಹುದಾಗಿದೆ.

ವರ್ತಮಾನದಲ್ಲಿ ಭಾರತದ ಪಾಸ್‌ಪೋರ್ಟ್ ಹೊಂದಿದವರು ೫೯ ದೇಶಕ್ಕೆ ಪ್ರವೇಶ ಪಡೆಯಬಹುದಾಗಿದೆ. ಇದುವರೆಗೂ ಭಾರತದ ಪ್ರಜೆಗಳಿಗೆ ಉಚಿತ ಪ್ರವೇಶ ನೀಡುತ್ತಿದ್ದ ಸರ್ಬಿಯ ಇದೇ ಜನವರಿಯಿಂದ ಉಚಿತ ಪ್ರವೇಶವನ್ನು ರದ್ದುಗೊಳಿಸಿದೆ. ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್‌ನಂತಹ ದೇಶಗಳನ್ನೆಲ್ಲ ಹಿಂದಿಕ್ಕಿ ಐದನೆಯ ಸ್ಥಾನಕ್ಕೇರಿದೆ. ಹೀಗೆಯೇ ಮುಂದು ವರಿದರೆ ಇನ್ನು ನಾಲ್ಕು-ಐದು ವರ್ಷದಲ್ಲಿ (ರಷ್ಯಾ-ಯುಕ್ರೇನ್ ಯುದ್ಧ ಮುಂದುವರಿದರೆ ಇನ್ನೂ ಬೇಗ!) ಜಪಾನ್, ಜರ್ಮನಿಯನ್ನೂ ಹಿಂದಿಕ್ಕಿ
ಮುನ್ನಡೆಯುತ್ತದೆ ಎಂಬ ವರದಿಯಿದೆ.

ಹಾಗಿರುವಾಗ ಶಕ್ತಿಯುತ ಪಾಸ್‌ಪೋರ್ಟ್ ಹೊಂದುವುದರಲ್ಲಿ ಏಕೆ ವಿಫಲವಾಗುತ್ತಿದೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ಅಸಲಿಗೆ ಒಂದು
ದೇಶದ ಆರ್ಥಿಕ ವಾಗಿ ಬಲಶಾಲಿಯಾಗಿದ್ದರೆ ಆ ದೇಶದ ಪಾಸ್‌ಪೋರ್ಟ್ ಶಕ್ತಿಯುತವಾಗಿರಲೇಬೇಕೆಂದೇನೂ ಇಲ್ಲ. ಒಂದು ದೇಶದ ಮಿಲಿಟರಿ ಬಲಶಾಲಿಯಾಗಿದ್ದರೆ ಆ ದೇಶದ ಪಾಸ್ ಪೋರ್ಟ್ ಕೂಡ ಬಲಶಾಲಿಯಾಗಿರಬೇಕೆಂದೂ ಇಲ್ಲ. ಹಾಗೇನಾದರೂ ಇದ್ದರೆ ಅಮೆರಿಕದ ಪಾಸ್
ಪೋರ್ಟ್ ಮೊದಲನೆಯ ಸ್ಥಾನದಲ್ಲಿರಬೇಕಿತ್ತು. ಇಲ್ಲಿ ಪ್ರಮುಖವಾಗಿ ಗಣನೆಗೆ ಬರುವುದು ವೀಸಾ. ವೀಸಾ ಇಲ್ಲದೇ ಪ್ರವೇಶ ಪಡೆಯುವುದಕ್ಕೆ
ಇರುವ ಮೂರು ಪ್ರಮುಖ ಅಂಶಗಳಲ್ಲಿ ಮೊದಲನೆಯದು, ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ. ಎರಡನೆಯದು, ಒಂದು
ದೇಶದ ಪ್ರಜೆಗಳು ಉದ್ಯೋಗಕ್ಕೋ, ಪ್ರವಾಸಕ್ಕೋ ಇನ್ನೊಂದು ದೇಶಕ್ಕೆ ಹೋದಾಗ ಆ ದೇಶದಲ್ಲಿ ನಡೆದುಕೊಳ್ಳುವ ರೀತಿ. ಮೂರನೆಯದು, ಒಂದು
ದೇಶದ ಒಳಗಿನ ಆರ್ಥಿಕತೆ, ಸುರಕ್ಷತೆ ಇತ್ಯಾದಿಗಳು.

ಈ ಮೂರೂ ಕ್ಷೇತ್ರದಲ್ಲಿ ಹೆಚ್ಚಿನ ಅಂಕ ಪಡೆದಷ್ಟೂ ಆ ದೇಶದ ಪಾಸ್‌ಪೋರ್ಟ್ ಶಕ್ತಿಯುತವಾಗುತ್ತದೆ. ಪ್ರವಾಸಕ್ಕೆ ಹೋದ ದೇಶದ ವಿಮಾನ ನಿಲ್ದಾಣದಲ್ಲಿ, ಇಮಿಗ್ರೇಷನ್ನಲ್ಲಿ ಅದಕ್ಕೆ ತಕ್ಕಂತೆ ಮರ್ಯಾದೆ ಸಿಗುತ್ತದೆ. ಅಲ್ಲಿಗೆ, ಪಾಸ್ ಪೋರ್ಟ್ ಶಕ್ತಿಯುತವಾಗುವುದಕ್ಕೆ ರಾಜತಾಂತ್ರಿಕ
ಸಂಬಂಧದ ಉತ್ತಮಗೊಳ್ಳುವುದರ ಜತೆಗೆ ಆ ದೇಶಕ್ಕೆ ಹೋದ ಪ್ರವಾಸಿಗರ ವರ್ತನೆಯೂ ಅಷ್ಟೇ ಉತ್ತಮವಾಗಿರಬೇಕು ಎನ್ನುವುದನ್ನೂ ಒಪ್ಪಬೇಕು.

ಭಾರತೀಯರೇ ಆಗಲಿ, ಅಫಘಾನಿಸ್ಥಾನದ ಪ್ರಜೆಗಳೇ ಆಗಲಿ ಯಾವುದೇ ದೇಶಕ್ಕೆ ಹೋಗುವಾಗ ತನಗಲ್ಲದಿದ್ದರೂ, ತನ್ನ ದೇಶಕ್ಕೆ ಒಂದಷ್ಟು ಗೌರವ ಸಿಗಬೇಕೆಂದು ಅಪೇಕ್ಷಿಸುತ್ತಾನೆ. ವಿಮಾನ ನಿಲ್ದಾಣ ಅಥವಾ ಭೂಮಿ, ಜಲ ಪ್ರದೇಶದ ಗಡಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಸುರಳೀತು ದೇಶದ ಒಳಕ್ಕೆ ಪ್ರವೇಶ ಪಡೆಯಲು ಬಯಸುತ್ತಾನೆ. ಎಷ್ಟೆಂದರೂ, ಗಡಿಯಲ್ಲಿ ಅಥವಾ ವಿಮಾನ ನಿಲ್ದಾಣದಲ್ಲಿ ರಾಜಾರೋಷವಾಗಿ ನಡೆಯುವುದಕ್ಕೂ, ಸಾಲಿನಲ್ಲಿ ಕಾದು ನಿಂತು ಮುಂದುವರಿಯುವುದಕ್ಕೂ ವ್ಯತ್ಯಾಸ ಇದೆಯಲ್ಲ? ಸರತಿಯ ಸಾಲಿನಲ್ಲಿ ನಿಂತಾಗ ನಮ್ಮ ದೇಶದ ಪಾಸ್ ಪೋರ್ಟ್ ಇನ್ನಷ್ಟು ಶಕ್ತಿಯುತವಾಗಿರಬೇಕಿತ್ತು ಎಂದೆನಿಸದೆ ಇರದು.

ಒಂದು ದೇಶ ತಂತ್ರeನದಲ್ಲಿ ಮುಂದುವರಿದರೆ, ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಿದರೆ, ಸೈನ್ಯ ಬಲಶಾಲಿಯಾದರೆ, ವ್ಯಾಪಾರ-ವಹಿವಾಟಿ
ನಲ್ಲಿ ಮುಂದುವರಿದರೆ ಆ ದೇಶದ ಪಾಸ್‌ಪೋರ್ಟ್ ಶಕ್ತಿಯುತವಾಗುತ್ತದೆ ಎನ್ನುವುದು ಮಿಥ್ಯ. ಹೌದು, ಪಾಸ್‌ಪೋರ್ಟ್ ಶಕ್ತಿಯುತವಾಗಿ ಏನಾಗ ಬೇಕಿದೆ ಎನ್ನಬೇಡಿ. ಹೇಗೆ ವಿದ್ಯಾರ್ಥಿಯ ಜೀವನದಲ್ಲಿ ಪಠ್ಯಕ್ರಮದಲ್ಲಿ ಹೆಚ್ಚು ಅಂಕ ಗಳಿಸುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಿನ ಅಂಕ ಪಡೆಯುವುದು ಮುಖ್ಯವೋ, ಹಾಗೆಯೇ ಪ್ರಪಂಚದ ಭೂಪಟದಲ್ಲಿ ಒಂದು ದೇಶ ಘನತೆ, ಗೌರವ ಗಳಿಸಬೇಕಾದರೆ ಪ್ರತಿಯೊಂದು ಅಂಶವೂ ಮುಖ್ಯ. ಸರ್ವಾಂಗೀಣ ಅಭಿವೃದ್ಧಿ ಎಂದರೆ ಅದೇ ತಾನೆ?

 
Read E-Paper click here

error: Content is protected !!