Friday, 1st December 2023

ಬೆಲೆ ಏರಿಕೆ ಎಂದಿಗೂ ಅನಾಥ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಇಂದಿನ ಕಷ್ಟಕಾಲದಲ್ಲಿ ಮೂರು ಹೊತ್ತಿನ ಊಟಕ್ಕೆ ಬೇಕಾದಷ್ಟು ದಿನಸಿ, ತರಕಾರಿಗಳನ್ನು ಖರೀದಿಸುವುದಕ್ಕೇ ಏದುಸಿರು ಬಿಡುವ ಮಂದಿಗೆ ಒಂದು ರುಪಾಯಿ ಉಳಿದರೂ ಮಹತ್ವದ್ದಾಗಿರುತ್ತದೆ. ಇಂಥ ಬಡಪಾಯಿಗಳು ತಮ್ಮ ಸಾಂಬಾರಿಗೆ ಟೊಮೇಟೊ ಖರೀದಿಸಲು ಕೆ.ಜಿ.ಗೆ ೨೦೦-೨೫೦ ರುಪಾಯಿ ಕೊಡುವುದು ದುಸ್ತರ. ಆ ಕಷ್ಟ ಅವರಿಗೇ ಗೊತ್ತು.

ಒಂದು ಕಾಲವಿತ್ತು. ತರಕಾರಿ ಖರೀದಿಸಲು ಹೋದಾಗ, ತಕ್ಕಡಿಯು ಅಲ್ಲಿ ವಿರಳವಾಗಿ ಬಳಕೆಯಾಗುತ್ತಿತ್ತು. ಅಂಗಡಿಯವರು ತರಕಾರಿಯನ್ನು ಅಂಗೈಯಲ್ಲಿ ಎತ್ತಿ ನಮ್ಮ ಬುಟ್ಟಿಯೊಳಗೆ ಹಾಕುತ್ತಿದ್ದರು. ತರಕಾರಿ ಕೊಂಡ ಮೇಲೆ ಕರಿಬೇವು-ಕೊತ್ತಂಬರಿ-ಹಸಿಮೆಣಸಿನಕಾಯಿ-ಶುಂಠಿ ಇತ್ಯಾದಿಯನ್ನು ಕೊಸರಿನಂತೆ ಉಚಿತವಾಗಿ ನೀಡುತ್ತಿದ್ದರು. ಇಲ್ಲಿ ತಕ್ಕಡಿಗಿಂತ ವ್ಯಾಪಾರಸ್ಥರ ಕಣ್ಣಳತೆ, ಕೈಯಳತೆಗಳೇ ಮಾಪನ ಗಳಾಗಿದ್ದವು.

ಬಟ್ಟಿನ ತಕ್ಕಡಿಗಳಿದ್ದಾಗ ಒಂದು ಕೆ.ಜಿ. ಯಷ್ಟು ತರಕಾರಿಯನ್ನು ಕೇಳಿದಾಗ, ಒಂದು ಕೆ.ಜಿ.ಗಿಂತಲೂ ಹೆಚ್ಚು ತೂಕ ವಿಲ್ಲದೆ ಅದನ್ನು ನೀಡುತ್ತಿರಲಿಲ್ಲ, ಅಂಥ ಧಾರಾಳ ಮನೋಭಾವದಲ್ಲೇ ಮಾರುಕಟ್ಟೆ ನಡೆಯುತ್ತಿತ್ತು. ಆದರೆ, ಈಗ ಬಂದಿರುವ ಇಲೆಕ್ಟ್ರಾನಿಕ್ ಮಾಪನಗಳು ಎಂಥ ‘ಬುದ್ಧಿವಂತ’ ತಕ್ಕಡಿಗಳೆಂದರೆ, ಒಂದು ಕೆ.ಜಿ. ಬಾಳೆಹಣ್ಣಿನ ಬೆಲೆ ೭೦ ರುಪಾಯಿಯಷ್ಟಿದ್ದು, ತೂಕವು ಒಂದು ಕೆ.ಜಿ. ೧೦ ಗ್ರಾಂ ಇದ್ದರೆ ಅದನ್ನೂ ಸೇರಿಸಿ ಒಟ್ಟಾರೆ ಬೆಲೆಯನ್ನು ತೋರಿಸುತ್ತವೆ.

ಅಷ್ಟು ಮೊತ್ತವನ್ನು ಗ್ರಾಹಕ ನೀಡಲೇಬೇಕು. ಆಗೆಲ್ಲಾ ವ್ಯಾಪಾರಿ-ಗ್ರಾಹಕರ ಮಧ್ಯೆ ವಿಶ್ವಾಸ, ಗೌರವಗಳಿದ್ದವು. ಆದರೆ ಇಂದು ೧೦ ಗ್ರಾಂ ತೂಕ ಹೆಚ್ಚಿದ್ದರೂ, ‘ಅಯ್ಯೋ, ಇವನಿಗೇನು ಕಮ್ಮಿ, ಕೊಡಲಿ ಬಿಡು; ನಮ್ಮ ಕಷ್ಟ ನಮಗೆ ಗೊತ್ತು’ ಎಂಬಂಥ ನಿಷ್ಠುರ ಭಾವನೆಯೇ ವ್ಯಾಪಾರಸ್ಥರಲ್ಲಿ ಹೆಚ್ಚಾಗಿದೆ. ಇಂಥ ಕಾಲದಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗ ದವರಲ್ಲದೆ, ತೀರಾ ದಿನಗೂಲಿ ಮಾಡಿ ಮೂರು ಹೊತ್ತಿನ ಊಟಕ್ಕೆ ಬೇಕಾದಷ್ಟು ದಿನಸಿ, ತರಕಾರಿಗಳನ್ನು ಖರೀದಿಸುವ ಮಂದಿಗೆ ಒಂದು ರುಪಾಯಿ ಉಳಿದರೂ ಅದು ಮಹತ್ವದ್ದಾಗಿರುತ್ತದೆ. ಇಂಥ ಬಡಪಾಯಿಗಳು ತಮ್ಮ ಸಾಂಬಾರಿಗೆ ಟೊಮೇಟೊ ಖರೀದಿಸಲು ಕೆ.ಜಿ.ಗೆ ೨೦೦-೨೫೦ ರುಪಾಯಿ ಕೊಡುವುದು ದುಸ್ತರ. ಆ ಕಷ್ಟ ಅವರಿಗೇ ಗೊತ್ತು.

ಬೇಳೆಕಾಳು, ಶುಂಠಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಅಡುಗೆ ಎಣ್ಣೆ, ಹಾಲು-ಮೊಸರು- ಮಜ್ಜಿಗೆ-ತುಪ್ಪ, ಕಾಫಿ-ಟೀ ಬೆಲೆಗಳು ಏರಿಕೆಯಾಗಿರುವುದರಿಂದ ಹೋಟೆಲ್‌ಗಳಲ್ಲಿ ಊಟ- ತಿಂಡಿ ಬೆಲೆಗಳೂ ಏರಿವೆ. ಅಬಕಾರಿ ತೆರಿಗೆ, ಮೋಟಾರು ವಾಹನಗಳ ತೆರಿಗೆ, ಸ್ಟ್ಯಾಂಪ್ ಡ್ಯೂಟಿ ಇವುಗಳಲ್ಲಿನ ಏರಿಕೆಯಿಂದಾಗಿ ಅನೇಕ ಸರಕು ಮತ್ತು ಸೇವೆಗಳ ಬೆಲೆ ಹಾಗೂ ಶುಲ್ಕಗಳ ಏರಿಕೆಗೆ ಪ್ರಚೋದನೆ ಸಿಕ್ಕಂತಾಗುತ್ತದೆ. ಅನೇಕ ಕ್ಷೇತ್ರಗಳಲ್ಲಿ ಏರಿಕೆಯಾದರೆ ಕಟ್ಟಡ ನಿರ್ಮಾಣ ಸಾಮಗ್ರಿಗಳ
ಬೆಲೆಗಳೂ ಏರುತ್ತವೆ, ಮಾಂಸ, ಕೋಳಿಮೊಟ್ಟೆ, ಹಣ್ಣುಗಳ ವರ್ತಕರು ಹೀಗೆ ಪ್ರತಿಯೊಬ್ಬರೂ ಬೆಲೆಯೇರಿಸಬೇಕಾದ ಪರಿಸ್ಥಿತಿಗೆ ತಲುಪುತ್ತಾರೆ.

ಆಟೋ-ಕ್ಯಾಬ್, ಸರಕು ಸಾಗಣೆ ವಾಹನಗಳ ಬಾಡಿಗೆ ಏರಿಕೆಯಾಗದೆ ಅದರ ನಿರ್ವಾಹಕರು ಹಳೆಯ ದರದಲ್ಲೇ ಸೇವೆ ನೀಡುವುದು ಅಸಾಧ್ಯದ ಮಾತು. ಕ್ಷೌರ, ಬಟ್ಟೆಯ ಇಸಿ, ಕೇಬಲ್ ಸಂಪರ್ಕ, ಉಪಕರಣಗಳು, ಅದರ ದುರಸ್ತಿ ವೆಚ್ಚಗಳಲ್ಲದೆ ಶಾಲೆಯ ಫೀಸ್‌ನಿಂದ ಹಿಡಿದು ಸುಲಭ್ ಶೌಚಾಲಯದವರೆಗೂ ಬೆಲೆಯೇರಿಕೆಯ ‘ಸೋಂಕು’ ತಗಲುವುದು ನಿಶ್ಚಿತ. ಕೆಲ ವ್ಯಾಪಾರಿಗಳಲ್ಲಿ ಚೌಕಾಸಿ ಮಾಡಿದರೆ, ‘ಅಯ್ಯೋ, ಸರಕಾರದವರೇ ಎಲ್ಲಾ ಬೆಲೆ ಜಾಸ್ತಿಮಾಡಿ ಲೂಟಿ ಮಾಡ್ಕೋತಾವ್ರೆ, ನಾವು ಬೆಲೆ ಜಾಸ್ತಿ ಕೇಳೋದು ತಪ್ಪಾ?’ ಎಂಬ ಸಾಮಾನ್ಯ ಪ್ರತಿಕ್ರಿಯೆ ಅವರಿಂದ ಹೊಮ್ಮುತ್ತದೆ.

ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಜನಸಾಮಾನ್ಯರನ್ನು ಬೆಲೆ ಯೇರಿಕೆಯು ಕಾಡುವುದರಲ್ಲಿ ಸಂಶಯವೇ ಇಲ್ಲ. ‘ಗೃಹಖಾತೆ’ ನಿರ್ವಹಿಸುವ ‘ಗೃಹಲಕ್ಷ್ಮಿ’ಗೆ ನೀಡುವ
೨ ಸಾವಿರ ರುಪಾಯಿ ಇಂಥ ಬೆಲೆಯೇರಿಕೆಯಲ್ಲೇ ಕರಗಿಬಿಡುತ್ತದೆ. ರಾಜ್ಯ ಸರಕಾರದ ಆರ್ಥಿಕ ನೀತಿ ಗಳು ಇಂಥ ಬೆಲೆಯೇರಿಕೆಗೆ ಪರೋಕ್ಷ ಕಾರಣ
ವಾಗುತ್ತವೆ. ಇದನ್ನು ಸಮತೋಲನ ಮಾಡುವುದಕ್ಕಾಗಿಯೇ ಸರಕಾರಿ ನೌಕರರಿಗೆ ‘ತುಟ್ಟಿಭತ್ಯೆ’ ಎಂಬ ಸಂಬಳ ಹೆಚ್ಚಳದ ನಿಯಮವಿದೆ; ಆದರೆ ದಿನಗೂಲಿ ನೌಕರರ ಸಂಬಳದ ಹೆಚ್ಚಳ ಮಾಡೋದ್ಯಾರು? ಹಾಗೆಂದ ಮಾತ್ರಕ್ಕೆ ಹಿಂದೆಲ್ಲಾ ಬೆಲೆಯೇರಿಕೆ ಆಗೇ ಇಲ್ಲ ಎಂದೇನಲ್ಲ. ಹತ್ತು ವರ್ಷದ ಹಿಂದೆ ೧೦,೦೦೦ ರು. ಸಂಬಳ ಪಡೆದು ಲೀಟರ್‌ಗೆ ೭೦ ರು.ನಂತೆ ಪೆಟ್ರೋಲ್ ಹಾಕಿಸುತ್ತಿದ್ದವನು ಈಗ ೨೦,೦೦೦ ರು. ಸಂಬಳ ಪಡೆದು ಅಷ್ಟೇ ಪ್ರಮಾಣದ ಪೆಟ್ರೋಲ್‌ಗೆ ೧೦೨ ರು. ಪಾವತಿಸುತ್ತಿದ್ದಾನೆ.

ಸಾಮಾನ್ಯವಾಗಿ ಬೆಲೆಯೇರಿಕೆಯಾಗುವುದು ಕೇಂದ್ರ ಸರಕಾರವು ಕೈಗೊಳ್ಳುವ ಸಿಲಿಂಡರ್, ಪೆಟ್ರೋಲ್ ಬೆಲೆ ಹೆಚ್ಚಳದಿಂದ, ವಿವಿಧ ರೀತಿಯ ತೆರಿಗೆಗಳ ಏರುಪೇರಿನಿಂದ; ಆರ್‌ಬಿಐ ಕೈಗೊಳ್ಳುವ ಕೆಲ ನಿರ್ಧಾರಗಳೂ ಬೆಲೆಯೇರಿಕೆಗೆ ಮೂಲ ವಾಗುತ್ತವೆ. ಆದರೆ ರಾಜ್ಯದಲ್ಲಿಂದು ಕಾಣುತ್ತಿರುವ ಅಕಾಲಿಕ ಬೆಲೆಯೇ ರಿಕೆಗೆ, ಅಧಿಕಾರಕ್ಕಾಗಿ ಕಾಂಗ್ರೆಸ್ ಘೋಷಿಸಿಕೊಂಡ ‘ಗ್ಯಾರಂಟಿ’ ಯೋಜನೆಗಳೇ ಕಾರಣ, ಇದು ಅವುಗಳದೇ ಅಡ್ಡಪರಿಣಾಮ ಎಂದು ಜನ ಮರುಗುತ್ತಿದ್ದಾರೆ.

ಇಂದು ರಾಜಕೀಯ ಪಕ್ಷಗಳಿಗೆ ಅಧಿಕಾರ ವೆಂಬುದು ಉನ್ಮಾದ, ದಾಹ, ವಾಂಛೆ, ದುರಾಸೆ, ಶೋಕಿ ಎಂಬಂತೆ ಆಗಿಹೋಗಿರುವುದರಿಂದ, ಅದಕ್ಕಾಗಿ ಎಂಥ ಆಮಿಷಗಳನ್ನಾದರೂ ಬಿಸಾಡಿ ರಾಜಕೀಯದಲ್ಲಿ ಮೆರೆಯಬೇಕೆಂಬ ಮನಸ್ಥಿತಿ ಯಿದೆ. ಚುನಾವಣೆ ಹತ್ತಿರವಿರುವಾಗ ಅಂದಿನ ರಾಜ್ಯ ಬಿಜೆಪಿ ಸರಕಾರ ವಿದ್ಯುತ್ ದರ ಹೆಚ್ಚಳದ ಕಡತವನ್ನು ಮುಚ್ಚಿಟ್ಟು, ಚುನಾವಣೆ ಮುಗಿದ ಕೂಡಲೇ ವಿದ್ಯುತ್ ದರ ಹೆಚ್ಚಿಸಿತು. ಅಂದರೆ ಇಲಾಖೆಯು ವಿದ್ಯುತ್ ದರ ಏರಿಕೆ ಮಾಡಿ,
ಆಗಬಹುದಾದ ನಷ್ಟವನ್ನು ಸರಿಪಡಿಸಿಕೊಳ್ಳುವ ದುಸ್ಥಿತಿಯಲ್ಲಿರುವಾಗ ಅಽಕಾರಕ್ಕೆ ಬಂದ ಕಾಂಗ್ರೆಸ್ ಅದನ್ನೇ ಉಚಿತವಾಗಿ ನೀಡುತ್ತದೆ ಎಂದರೆ, ಅಲ್ಲಿಗೆ
ಮೂರ್ಖರು ಬಿಜೆಪಿಯೋ ಕಾಂಗ್ರೆಸ್ಸೋ ಯೋಚಿಸಿ. ಅದೇ ‘ರಾಜಕೀಯ’!

ಒಂದು ರಾಜ್ಯದ ಆರ್ಥಿಕ ವ್ಯವಸ್ಥೆ ಎಂದರೆ ಥೇಟು ಮಧ್ಯಮವರ್ಗದ ಕುಟುಂಬದ ಆರ್ಥಿಕ ವ್ಯವಸ್ಥೆಯಂತೆಯೇ. ಸಾಲವನ್ನು ತೀರಿಸುವ ಗುರಿ ಇದ್ದಾಗ ಹೆಚ್ಚುವರಿ ಖರ್ಚುಗಳನ್ನು ಮಾಡುವುದು ತಪ್ಪಾಗುತ್ತದೆ. ಆದರೂ ಮನೆಗೆ ಸುಣ್ಣ-ಬಣ್ಣ ಬಳಿದು, ನೆಲ-ಚಾವಣಿಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಳ್ಳುವಂತೆ ರಾಜ್ಯದೆಲ್ಲೆಡೆ ಮೂಲಭೂತ ಸೌಕರ್ಯ, ಅಭಿವೃದ್ಧಿ, ಪ್ರಗತಿಗಳನ್ನು ನಿಲ್ಲಿಸದೇ ನಡೆಸಿಕೊಂಡು, ಸಾಲವನ್ನೂ ತೀರಿಸುತ್ತಾ ಅಥವಾ ಮತ್ತಷ್ಟು ಸಾಲವನ್ನು ಮಾಡದೆಯೇ, ಇರುವುದ ರಲ್ಲೇ ಎಲ್ಲವನ್ನೂ ಸಮಾಧಾನಕರವಾಗಿ ಇಟ್ಟು ಕೊಂಡು ರಾಜ್ಯಭಾರ ಮಾಡುವುದು ಜಾಣತನ.

ಸರಕಾರ ಎಂದೊಡನೆ ಹೆಚ್ಚುವರಿ ನೋಟುಗಳನ್ನು ಮುದ್ರಿಸುವುದಾಗಲೀ, ರಾಜರ ಕಾಲದಂತೆ ಪರರಾಜ್ಯದ ಮೇಲೆ ಯುದ್ಧಮಾಡಿ ಗೆದ್ದು ಆ ಸಂಪತ್ತನ್ನು ವಿನಿಯೋಗಿಸುವುದಾಗಲೀ ಸಾಧ್ಯವಿಲ್ಲ. ಸಾವಿರಾರು ಕೋಟಿಗಳ ಸರದಾರನಾದರೂ ತನ್ನ ಹಣವನ್ನು ‘ಅನ್ನಭಾಗ್ಯ’ ದಂಥ ಯೋಜನೆಗಳಿಗೆ ವಿನಿಯೋಗಿಸುವಂಥ ಕಲಿಯುಗಕರ್ಣ ರಾಜಕೀ ಯದಲ್ಲಿಲ್ಲ. ಹೀಗಿರುವಾಗ ಒಂದೋ ಸಾಲ ಮಾಡಬೇಕು ಅಥವಾ ಬೇರೆ ಯೋಜನೆಗಳಿಂದ ಕಿತ್ತು ಕೊಡಬೇಕು. ಒಟ್ಟಿನಲ್ಲಿ ಮತದಾರನಿಗೆ ದಿಢೀರ್ ತುಪ್ಪ ತಿನ್ನಿಸಲೇಬೇಕು.

‘ಬೊಂಬೆ ಮಿಠಾಯಿ’ ಮಾರುವವನು ಮಿಠಾಯಿಯನ್ನು ಎಳೆದು ಎಳೆದು ಏರೋಪ್ಲೇನು ಮಾಡಿ ತಿನ್ನಿಸುತ್ತಾನೆ, ಸೈಕಲನ್ನೂ ಮಾಡಿ ತಿನ್ನಿಸುತ್ತಾನೆ. ಆದರೆ ಎಳೆಯುವುದಕ್ಕೆ ಆತನಿಗಿರುವುದು ಅದೊಂದೇ ಮಿಠಾಯಿ! ಅಂತೆಯೇ ಏನೇ ‘ಗ್ಯಾರಂಟಿ’ ನೀಡಿದರೂ ಅದು ರಾಜ್ಯದ ಆರ್ಥಿಕ ಸಾಮರ್ಥ್ಯದೊಳಗೇ ಆಗಬೇಕು, ಉಚಿತದೊಂದಿಗೆ ಬೆಲೆಯೇರಿಕೆಯೂ ಆಗಲೇಬೇಕೇ ಹೊರತು ಅನ್ಯಮಾರ್ಗಗಳಿಲ್ಲ. ಕಾಂಗ್ರೆಸ್ ತನ್ನ ಚುನಾವಣಾ ಜಾಹೀರಾತಿನಲ್ಲಿ ಬಿಜೆಪಿಯ ಆಡಳಿತದಲ್ಲಿನ
ಬೆಲೆಯೇರಿಕೆಯನ್ನೇ ಪ್ರಬಲ ಅಸವಾಗಿ ಬಳಸಿ ಕೊಂಡು, ಅದನ್ನು ಪರಿಣಾಮಕಾರಿ ಜಾಹೀರಾತು ಗಳ ಮೂಲಕ ತೋರಿಸಿ ಜನರನ್ನು ಮೋಡಿ ಮಾಡಿತು, ಸ್ವತಃ ಕಾಂಗ್ರೆಸ್ಸಿಗರೇ ನಿರೀಕ್ಷಿಸದ ರೀತಿ ಯಲ್ಲಿ ಗೆದ್ದುಬಂದಿತು. ಆದರೆ ಇಂದಿನ ಬೆಲೆಯೇರಿಕೆಗಳ ವಿಚಾರವಾಗಿ ಯಾವ ಶಾಸಕ- ಮಂತ್ರಿಗಳೂ ಮಾತನಾಡುವುದಿಲ್ಲ. ಅದಕ್ಕೇ ಹೇಳಿದ್ದು, ‘ಗ್ಯಾರಂಟಿಗಳಿಗೆ ನೂರು ಅಪ್ಪಂದಿರು, ಆದರೆ ಬೆಲೆಯೇರಿಕೆ ಮಾತ್ರ ಅನಾಥ!’ ಅಂತ.

ಇವತ್ತೇನೋ ಗ್ಯಾರಂಟಿಗಳಿಂದಲೇ ಗೆದ್ದುಬಂದ ಕಾಂಗ್ರೆಸ್, ಅಭಿವೃದ್ಧಿಗಿಂತ ಗ್ಯಾರಂಟಿಗಳ ಜಾರಿ ಗಾಗಿಯೇ ಎಲ್ಲಾ ರೀತಿಯ ಕಸರತ್ತು ಮಾಡುತ್ತಿದೆ.
ಸಾಲದಲ್ಲಿರುವ ಸಾಮಾನ್ಯ ಕುಟುಂಬವು ದಿಢೀರನೆ ಮನೆಗೆ ವಾಷಿಂಗ್ ಮಷಿನ್, ಬುಲೆಟ್ ಬೈಕ್, ಆಪಲ್ ಫೋನು ಇಂಥವನ್ನು ಖರೀದಿಸಿದಂತೆ, ಸಾಲದಲ್ಲಿರುವ ಸರಕಾರ ‘ನುಡಿದಂತೆ ನಡೆದಿದ್ದೇವೆ’ ಎನ್ನಲು ಏಕಾಏಕಿ ಲಕ್ಷಾಂತರ ಕೋಟಿಗಳನ್ನು ಹೊಂದಿಸುವುದು ಎಷ್ಟು ಕಷ್ಟ ಮತ್ತು ಅವೈಜ್ಞಾನಿಕ ಎಂಬುದು ನುರಿತ ಆರ್ಥಿಕ ತಜ್ಞರಿಗಷ್ಟೇ ಗೊತ್ತು.

ಯಾವುದೇ ಪಕ್ಷ ಅಧಿಕಾರಕ್ಕೆ ಬರುವವರೆಗೂ ಅದು ರಾಜಕಾರಣವಷ್ಟೇ. ಅಧಿಕಾರಕ್ಕೆ ಬಂದಮೇಲೆ ಸಂವಿಧಾನಬದ್ಧವಾಗಿ ರಾಜ್ಯವನ್ನು ಪರಿಶುದ್ಧವಾಗಿ
ಆಳುವುದೇ ರಾಜ್ಯಭಾರ. ಇದೇ ರಾಜಕೀಯದ ನಿಜವಾದ ಸಾರ್ಥಕತೆ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ೫ ವರ್ಷದ ಆಡಳಿತವೇ ಇದಕ್ಕೆ ದೃಷ್ಟಾಂತ. ಜನರು ಅಂಥವರನ್ನೇ ಮತ್ತೊಂದು ಅವಽಗೆ ಉಳಿಸಿಕೊಳ್ಳಲಿಲ್ಲ. ಆದರೆ ಇಂದಿನ ಕೆಲ ರಾಜಕಾರಣಿಗಳು ರಾಜ್ಯಭಾರದಲ್ಲೂ ‘ರಾಜಕೀಯ’ ಮಾಡಿ,
ರಾಜ್ಯವನ್ನು ಪ್ರಜ್ಞಾಪೂರ್ವಕವಾಗೇ ‘ಭಾರ’ ಮಾಡುವತ್ತ ಹೊರಟಿರುವುದು ದುರದೃಷ್ಟಕರ.

ಸರಕಾರದ ಆರ್ಥಿಕ ನೀತಿ ಎಂಬುದು ಸಿದ್ಧ ಸೂತ್ರದ ಸಿನಿಮಾವೊಂದರ ನಿರ್ಮಾಣದಂತೆ. ಎರಡು ಡ್ಯುಯೆಟ್, ಒಂದು ಶೋಕಗೀತೆ, ಒಂದು ಐಟಮ್ ಸಾಂಗ್, ನಾಲ್ಕು -ಟು, ಹಿರೋಯಿಸಂ, ಸುಖಾಂತ್ಯ ಇಷ್ಟೇ ಅಂಶಗಳನ್ನಿಟ್ಟುಕೊಂಡು ಬೇರೆ ಬೇರೆ ನಿರ್ದೇಶಕರು ಬೇರೆ ಬೇರೆ ರೀತಿಯ ಚಿತ್ರಕಥೆ ಹೆಣೆದು ತೋರಿಸುತ್ತಾರೆ. ಪುಟ್ಟಣ್ಣ ಕಣಗಾಲರಂಥವರು ಮೊದಲು ಸುಖ ತೋರಿಸಿ, ಕೊನೆಯಲ್ಲಿ ದುರಂತ ತೋರಿಸುತ್ತಾರೆ. ರಾಜ್ಯದ ಪ್ರಜೆಗಳಿಗೀಗ ಆರಂಭದಲ್ಲೇ ಡ್ಯುಯೆಟ್, ಐಟಮ್ ಸಾಗ್ ಇರುವ ರೆಡಿಮೇಡ್ ಮಜಾ ಸಿಗುತ್ತಿದೆ. ಜನರೂ ಅದನ್ನೇ ಬಯಸಿದ್ದಾರೆ. ಸತ್ಯವೇನೆಂದರೆ ಇಂಥ ಸಿನಿಮಾ ದಲ್ಲೂ ಗೋಳಿಡುವ ಸನ್ನಿವೇಶಗಳೂ ಬರುತ್ತ
ವೆಂಬುದನ್ನು ಮರೆತು ಜನ ಆನಂದಿಸುತ್ತಿದ್ದಾರಷ್ಟೇ.

ನೆನಪಿರಲಿ, ಅಲ್ಲೊಬ್ಬ ನಿರ್ದೇಶಕರು ವಿಶ್ವಕ್ಕೇ ಭಾರತ ‘ದರ್ಶನ’ ಮಾಡಿಸುತ್ತಿದ್ದಾರೆ. ಆದರೆ ಅದು ಸಿನಿಮಾ ಅಲ್ಲ, ಸಾಕ್ಷಾತ್ ‘ಬೆಳಕು’. ಇದರ ವಿರುದ್ಧ
ಮಲ್ಟಿಸ್ಟಾರರ್ ಪ್ಯಾನ್ ‘ಇಂಡಿಯ’ ಸಿನಿಮಾ ಮಾಡಲು ನಿಂತಿರುವವರಲ್ಲೊಬ್ಬರಾದ ಮಾಜಿ ಜೈಲುವಾಸಿ, ಭ್ರಷ್ಟಾಚಾರದ ಪಿತಾಮಹ ‘ಮೇವು’ ಪ್ರಸಾದ್ ಯಾದವ್, ‘ಮೋದಿ ೨೦೨೪ರಲ್ಲಿ ಸೋತು ವಿದೇಶಕ್ಕೆ ಓಡಿಹೋಗುತ್ತಾರೆ’ ಎನ್ನುತ್ತಾರೆ. ಸಾಧು ಕೋಕಿಲರಂಥ ಕಾಮಿಡಿ ಪೀಸುಗಳೂ ರಾಜಕಾರಣ ದಲ್ಲಿ ಇರಲೇಬೇಕಲ್ಲವೇ?!!

Leave a Reply

Your email address will not be published. Required fields are marked *

error: Content is protected !!