Tuesday, 23rd April 2024

ಅವರು ಬೆಳೆದಷ್ಟು ರಾಗಿಯನ್ನೂ ಈವರೆಗೆ ಯಾರೂ ಬೆಳೆದಿಲ್ಲ !

ಸುಪ್ತ ಸಾಗರ

rkbhadti@gmail.com

ಬೆಂಗಳೂರಿನಿಂದ ಹೊರಟು, ದೊಡ್ಡಬಳ್ಳಾಪುರ ಹಾದು ಮರಳೇನಹಳ್ಳಿ ತಲಪಿದರೆ, ಅಲ್ಲಿ ರೆಡ್ಡಿಯವರ ಜಮೀನು ಯಾವು ದೆಂದು ತಿಳಿದು ಅಲ್ಲಿಗೆ ಹೊಕ್ಕರೆ, ಮನೆಯಂಗಳದಲ್ಲಿ ಮುಖದ ತುಂಬ ಮುಗುಳ್ನಗೆಯೊಂದಿಗೆ ಎಲ್ಲರನ್ನು ಎದುರುಗೊಳ್ಳು ತ್ತಿದ್ದವರು ಎಂಬತ್ತರ ವಯಸ್ಸಿನ ಹಿರಿಯ ನಾಡೋಜ ಎಲ್.ನಾರಾಯಣ ರೆಡ್ಡಿ.

ಬೆಂಗಳೂರು ಹೊರವಲಯದ ಸೋರಹುಣಸೆ ಗ್ರಾಮದ ಎಲ್.ನಾರಾಯಣ ರೆಡ್ಡಿ ಅವರದು ದೊಡ್ಡ ರೈತ ಕುಟುಂಬ. ಹೀಗಾಗಿ ವ್ಯವಸಾಯ ಚಿರಪರಿಚಿತ. ಬಾಲ್ಯದಲ್ಲಿ ಒಮ್ಮೆ ಕುರಿ ಮೇಯಿ ಸಲು ಹೋಗಿದ್ದ ಬಾಲಕ ನಾರಾಯಣ ರೆಡ್ಡಿ, ಅಲ್ಲಿ ಸಾಗಿ ಹೋಗು ತ್ತಿದ್ದ ರೈಲು ನೋಡುತ್ತ ಮೈಮರೆತುಬಿಟ್ಟ. ಕುರಿಗಳನ್ನು ಮನೆಗೆ ಹೊಡೆದುಕೊಂಡು ಬರುವುದಕ್ಕೆ ತಡ ಆಗಿದ್ದರಿಂದ ಅಪ್ಪನ ಕೋಪಕ್ಕೆ ತುತ್ತಾಗಿ ಮನೆ ಬಿಟ್ಟು ಹೊರಟ. ಹೋಟೆಲ್ ಮಾಣಿ ಕೆಲಸಕ್ಕೆ ಸೇರಿ, ಕೆಲಸ ಮಾಡುತ್ತ, ಗಲ್ಲಾ ಪೆಟ್ಟಿಗೆಯ ಮೇಲೆ ಕೂರುವಷ್ಟು ವಿಶ್ವಾಸವನ್ನು ಮಾಲೀಕ ರಿಂದ ಗಳಿಸಿದ.

ಅವರ ಸಹಕಾರದಿಂದಲೇ ವಿದ್ಯೆಯನ್ನೂ ಪಡೆದ. ಅಲ್ಲಿಂದ ನಾರಾಯಣ ರೆಡ್ಡಿ ಅವರ ಬದುಕು ಹೊರಳಿದ್ದು ಲಾರಿ ಕ್ಲೀನರ್ ಕೆಲಸದತ್ತ. ಅಲ್ಲೂ ಮಾಲೀಕರ ವಿಶ್ವಾಸ ಗಳಿಸುತ್ತ ಮುಂದೆ ಆ ಸಾರಿಗೆ ಕಂಪನಿಯ ಮ್ಯಾನೇಜರ್ ಆಗಿ ಬಡ್ತಿ ಪಡೆದರು. ನಾನಾ ರಾಜ್ಯಗಳಿಂದ ಬರುತ್ತಿದ್ದ ಲಾರಿ ಚಾಲಕರ ಜತೆ ವ್ಯವಹರಿಸುತ್ತ, ಆರೇಳು ಭಾಷೆಯಲ್ಲಿ ಸರಾಗವಾಗಿ ಮಾತನಾಡು ವಂತಾದರು.

ಆಕಸ್ಮಿಕವಾಗಿ ಒಮ್ಮೆ ಲಾರಿಯನ್ನು ಬಾಡಿಗೆಗೆ ಕೇಳಲು ಬಂದವರು ನಾರಾಯಣ ರೆಡ್ಡಿಯವರನ್ನು ಗುರುತು ಹಿಡಿದರು. ಅವರು ರೆಡ್ಡಿಯವರ ಊರಿನವರು! ಇವರನ್ನು ವಾಪಸು ಊರಿಗೆ ಕರೆದುಕೊಂಡು ಹೋಗಿ, ಅಕ್ಕನ ಮಗಳ ಜತೆ ಮದುವೆ ಮಾಡಿಸಿ, ಕೃಷಿ ಕೆಲಸಕ್ಕೆ ನಿಯೋಜಿಸಿದರು. ಅಲ್ಲಿಂದ ನಾರಾಯಣ ರೆಡ್ಡಿಯವರ ಕೃಷಿ ಬದುಕು ಶುರುವಾಯಿತು. ಸತತ ಹಾಗೂ ಶ್ರದ್ಧೆಯ
ದುಡಿಮೆ ರೆಡ್ಡಿಯವರ ಮಂತ್ರ. ಇವರ ವ್ಯವಸಾಯದ ಪರಿ ಹೇಗಿತ್ತೆಂದರೆ, 1976ರ ಅಧಿಕ ರಾಗಿ ಇಳುವರಿ ತೆಗೆದು ಪ್ರಗತಿಪರ ರೈತ’ ಎಂಬ ಖ್ಯಾತಿಗೆ ಪಾತ್ರರಾದರು.

ಅವರ ಇಳುವರಿ ಪ್ರಮಾಣವನ್ನು ಈವರೆಗೆ ಯಾರೂ ದಾಟಿಲ್ಲ ಎಂಬುದೊಂದು ಹೆಗ್ಗಳಿಕೆ. ಅಮೆರಿಕದ ಆಲ್ಬರ್ಟ ಟ್ರಕ್ಕಾರ್ ಎಂಬ ವಿಜ್ಞಾನಿ ಬಂದರು. ಇವರ ವ್ಯವಸಾಯ ಪದ್ಧತಿ ನೋಡಿ ‘ನೀನು ಮಾಡುತ್ತಿರುವ ಕೃಷಿ ವಿಧಾನ ತಪ್ಪು. ಸಾವಯವ ಕೃಷಿ
ಮಾಡು’ ಎಂದು ಸಲಹೆ ಮಾಡಿದರು; ಜತೆಗೆ -ಕುವೊಕ ಅವರ ‘ಒನ್ ಸ್ಟ್ರಾ ರೆವಲ್ಯೂಷನ್’ ಪುಸ್ತಕ ಕೊಟ್ಟರು. ಅಲ್ಲಿಂದ ನಾರಾಯಣ ರೆಡ್ಡಿಯವರ ಸಾವಯವ ಯಾತ್ರೆ ಆರಂಭವಾಯಿತು. ನಾಲ್ಕು ದಶಕಗಳಿಂದ ಸಾವಯವ ಕೃಷಿ ಮಾಡುತ್ತ, ಸಾವಯವ ಕೃಷಿ ಪದ್ಧತಿ ಕುರಿತು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದ ನಾರಾಯಣರೆಡ್ಡಿ ಅವರಿಗೆ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಹಾಲೆಂಡ್, ಜಪಾನ್, ಜರ್ಮನಿ ಸೇರಿದಂತೆ ಹದಿನೈದು ದೇಶಗಳ ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ನೀಡಿದ್ದಾರೆ. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಸರಳ ಪರಿಹಾರವನ್ನೂ ನಾರಾಯಣ ರೆಡ್ಡಿ ಸೂಚಿಸುತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಕೆಲವು ಇತ್ತೀಚಿನ ಪದ್ಧತಿಗಳನ್ನು ನಾರಾಯಣ ರೆಡ್ಡಿ ಕಟುವಾಗಿ ಟೀಕಿಸುತ್ತಿದ್ದರು.

ನಾರಾಯಣ ರೆಡ್ಡಿಯವರ ಬದುಕೇ ಒಂದು ರೋಚಕ. ರೈತ ದುಶ್ಚಟಗಳಿಗೆ ಬಲಿಯಾಗದೆ ಇದ್ದರೆ ಕೃಷಿಯಿಂದ ಹೇಗೆ ಆತ ಶ್ರೀಮಂತನಾಗಬಹುದು ಎಂಬುದನ್ನು ತೋರಿಸಿಕೊಟ್ಟರು. ಸೋರಹುಣಸೆ ಗ್ರಾಮದ ಅವರ ಹೊಲವು ನಗರದ ಮಡಿಲಿಗೆ ಸೇರುತ್ತಿದ್ದಂತೆ, ದೂರದ ತಮಿಳುನಾಡಿನಲ್ಲಿ ಬೀಳು ಹೊಲ ಖರೀದಿಸಿ ಹಸಿರು ಉಕ್ಕಿಸಿದರು. ದೊಡ್ಡಬಳ್ಳಾಪುರದ ಮರಳೇನಹಳ್ಳಿಯನ್ನು ತಮ್ಮ ತಪೋವನವನ್ನಾಗಿ ಮಾಡಿಕೊಂಡು, ಸಾವಿರಾರು ಜನರಿಗೆ ದಾರಿ ತೋರಿದರು. ನಿರರ್ಗಳವಾಗಿ ಇಂಗ್ಲಿಷ್ ಮಾತಾಡುತ್ತಿದ್ದ ನಾರಾಯಣರೆಡ್ಡಿ, ಇಂಗ್ಲಿಷ್ ಕೃಷಿ ಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು.

ವಿಜ್ಞಾನಿಗಳಿಗೆ ಪಾಠ ಹೇಳಿದರು. ಅನೇಕ ದೇಶಗಳಿಗೆ ಹೋಗಿಬಂದರು. ಕೃಷಿ ಕ್ಷೇತ್ರದ ಸಾಧನೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾರಾಯಣರೆಡ್ಡಿ ಅವರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿತ್ತು. ‘ನಮ್ಮ ತೋಟಕ್ಕೊಂದು ಸುತ್ತು ಹಾಕೋಣ, ಬನ್ನಿ’ ಎನ್ನುತ್ತ ಎಲ್ಲರನ್ನೂ ಕರೆದೊಯುತ್ತಿದ್ದರು. ಕಾಯಿ ತುಂಬಿದ ಚಿಕ್ಕು (ಸಪೋಟ) ಮರಗಳನ್ನು ದಾಟಿ ಸಾಗುತ್ತಾ ’ನನ್ನ ಜೀವಮಾನದ ನಾನು ಸಾಲ ಮಾಡಿದೋನಲ್ಲ; ಬಡ್ಡಿ ಕಟ್ಟಿದವನೂ ಅಲ್ಲ. ಆದರೆ ಈ ಕೃಷಿ ತರಬೇತಿ
ಸಂಸ್ಥೆಗಾಗಿ ಸಾಲ ಮಾಡಬೇಕಾಯಿತು’ ಎಂದಿದ್ದರು, ತಮ್ಮ ಮನೆಯ ಹಿಂಬದಿಯ ತರಬೇತಿ ಸಂಸ್ಥೆಯ ಕಟ್ಟಡವನ್ನು ತೋರಿಸುತ್ತ.

‘ಈ ಭೂಮಿ, ಈ ಸಸ್ಯ’ ಮತ್ತು ‘ನೆಲದೊಡಲ ಚಿಗುರು’ ಎಂಬ ಎರಡು ಪುಸ್ತಕಗಳಲ್ಲಿ ದಾಖಲಾಗಿರುವ ಅವರ ಕೃಷಿ ಚಿಂತನೆ ಹಾಗೂ ಅನುಭವಗಳ ಹರವು ದೊಡ್ಡದು. ಅವನ್ನೆಲ್ಲ ವ್ಯವಸ್ಥಿತವಾಗಿ ಆಸಕ್ತರೊಂದಿಗೆ ಹಂಚಿಕೊಳ್ಳಬೇಕು ಎಂಬ ಉದ್ದೇಶದಿಂದ ಕಟ್ಟಿದ್ದರು ಆ ಸಂಸ್ಥೆಯನ್ನು. ಅದರ ಕಟ್ಟಡ ಮುಗಿಸಲಿಕ್ಕಾಗಿ ಅವರು ಜೀವಮಾನದ ಮೊದಲ ಬಾರಿ ಸಾಲ ಮಾಡಬೇಕಾಗಿ
ಬಂತು. ಅದನ್ನು ಷರತ್ತಿನಂತೆಯೇ ತೀರಿಸಿದ ಸಮಾಧಾನ ಅವರಿಗಿತ್ತು. ಜತೆಗೆ, ಕೃಷಿಯ ಆಳ-ಅಗಲ ತಿಳಿಯಲಿಕ್ಕಾಗಿ ಅಲ್ಲಿಗೆ ಬಂದು, ಕೆಲವು ದಿನ ಉಳಿಯುವ ಆಸಕ್ತರಿಗೆ ತನ್ನ ಜೀವನಾನುಭವ ಧಾರೆಯೆರೆದ ಧನ್ಯತಾ ಭಾವ.

‘ಬೇಸಾಯದಲ್ಲಿ ತಪ್ಪುಗಳಾಗುತ್ತವೆ. ಅವುಗಳಿಂದ ಕಲೀತಾ ಇರಬೇಕು. ನಾನು ಹತ್ತಾರು ಚಿಕ್ಕು ಗಿಡ ನೆಟ್ಟು ಬೆಳೆಸಿದ್ದೆ. ಒಳ್ಳೇ ಫಸಲು. ಆದರೆ ಏನ್ ಮಾಡೋದು? ಆಂಧ್ರದಿಂದ ಬೆಂಗಳೂರಿನ ಮಾರ್ಕೆಟಿಗೆ ಚಿಕ್ಕು ಬರಲಿಕ್ಕೆ ಶುರು ಆಯಿತು. ನಮ್ಮ ಚಿಕ್ಕು ಮಾರೋದೇ ಕಷ್ಟ ಆಯಿತು. ಅದಕ್ಕೆ ಕೆಲವು ಚಿಕ್ಕು ಮರ ಕಡಿದು, ಮಾವಿನ ಗಿಡ ನೆಟ್ಟಿದ್ದೇನೆ. ಚೆನ್ನಾಗಿ ಬೆಳೀತಿವೆ. ಮುಂಚೆ ನೆಟ್ಟಿದ್ದ ’ಅನಂತಭಟ್ಟನ ಅಪ್ಪೆಮಿಡಿ’ಯ ಒಂದೇ ಮರದಿಂದ ಈ ವರುಷ ಎಷ್ಟು ಸಿಕ್ತು ಅಂತೀರಾ? ೧೭ ಸಾವಿರ ರುಪಾಯಿ
ಕೈಗೆ ಬಂತು. ಬೆಳೆಯುತ್ತಿರುವ ಮಾವಿನ ಗಿಡಗಳಿಂದಲೂ ಮೂರ್ನಾಲ್ಕು ವರುಷದಲ್ಲಿ ಒಳ್ಳೇ ಆದಾಯ ಬಂದೇ ಬರ್ತದೆ’ ಎನ್ನುವಾಗ ಅವರ ಧ್ವನಿಯಲ್ಲಿ ಪ್ರವಾಹದ ವಿರುದ್ಧ ಈಜಿ ಗೆದ್ದ ಆತ್ಮವಿಶ್ವಾಸ.

ಬಲಬದಿಯ ಬೆಣ್ಣೆಹಣ್ಣಿನ ಮರಗಳನ್ನು ತೋರಿಸುತ್ತ ಅವರು ಹೇಳಿದ್ದು: ನೆಟ್ಟು ನೀರು ಕೊಟ್ರೆ ಸಾಕು. ಬೆಣ್ಣೆಹಣ್ಣಿನ ಗಿಡಗಳು ಚೆನ್ನಾಗಿ ಬೆಳೀತವೆ, ಮರ ತುಂಬಾ ಹಣ್ಣು ಕೊಡ್ತವೆ. ಅದಕ್ಕೇ ೮೦ ಗಿಡ ನೆಟ್ಟಿದ್ದೇನೆ, ನೋಡಿ. ಒಂದೊಂದು ಮರದಿಂದಲೂ ಹತ್ತು ಸಾವಿರ ರುಪಾಯಿ ಆದಾಯ ಗ್ಯಾರಂಟಿ.

ಎಡಬದಿಯಲ್ಲಿರುವ ಆಳೆತ್ತರದ ಗೆದ್ದಲು ಹುತ್ತದ ಪಕ್ಕದ ಮಾವಿನ ಮರದ ಎಲೆ ತೋರಿಸುತ್ತ, ನಾರಾಯಣ ರೆಡ್ಡಿಯವರು ತೆರೆದಿಟ್ಟ ಒಳನೋಟ: ಇದರ ಎಲೆ ಯಾಕೆ ಇಷ್ಟು ಉದ್ದ ಇಷ್ಟು ಅಗಲವಿದೆ ಅನ್ನೋದಕ್ಕೆ ಯಾವ ವಿಜ್ಞಾನಿಯೂ ಉತ್ತರ ಕೊಟ್ಟಿಲ್ಲ. ಇದಕ್ಕೆ ಕಾರಣ ಈ ಮಾವಿನ ಮರದ ಬುಡದಲ್ಲಿರೋ ಹುತ್ತ. ಆ ಹುತ್ತದೊಳಗಿನ ವ್ಯಾಕ್ಯೂಮಿನಿಂದಾಗಿ ಮಾವಿನ ಮರಕ್ಕೆ ಚೆನ್ನಾಗಿ ಆಕ್ಸಿಜನ್ ಸಿಗ್ತಾ ಇದೆ. ಆದ್ರಿಂದ ಎಲೆ ಈ ಗಾತ್ರಕ್ಕೆ ಬೆಳೆದಿದೆ (ಆ ಮಾವಿನ ಎಲೆಯ ಉದ್ದ ೧೦ ಇಂಚು, ಅಗಲ ೩.೫ ಇಂಚು). ತುಸು ದೂರದಲ್ಲಿದ್ದ ಹುಣಿಸೆ ಮರ ತೋರಿಸುತ್ತ, ಅದರ ಕತೆ ಶುರುವಿಟ್ಟರು, ‘ಫಾರೆಸ್ಟ್ ಡಿಪಾಟ್
ಮೆಂಟಿನವರು ಕೊಟ್ಟ ಗಿಡ ತಂದು ನೆಟ್ಟಿದ್ದೆ.

ಈಗ ನೋಡಿ ಹೇಗೆ ಬೆಳೆದಿದೆ. ಅದರಲ್ಲಿ ಹುಣಿಸೆ ಹಣ್ಣಾದಾಗ ಗೆಲ್ಲುಗಳನ್ನು ಜಾಡಿಸೋದಷ್ಟೇ ನಮ್ಮ ಕೆಲಸ – ತೊಪತೊಪನೆ ಹಣ್ಣು ಬೀಳ್ತವೆ. ಮಾರಿದಾಗ ೭ ಸಾವಿರ ರುಪಾಯಿ ಸಿಗ್ತದೆ – ನಾವು ಏನೂ ಮಾಡದೇನೆ.’ ಪುನಃ ಎಡಕ್ಕೆ ತಿರುಗಿ, ಅಲ್ಲಿದ್ದ ಎತ್ತರದ ತೇಗದ (ಸಾಗುವಾನಿ) ಮರಗಳನ್ನು ದಾಟುತ್ತಾ, :ಹೇಗೆ ಬೆಳೆದಿದೆ ನೋಡಿ, ಈ ತೇಗದ ಮರಗಳು. ನಾನು ಒಂದಷ್ಟು ನೀರು ಕೊಟ್ಟದ್ದು ಮಾತ್ರ’ ಎನ್ನುವಾಗ ಅವರಲ್ಲಿ ಸಂತೃಪ್ತಿಯ ಭಾವ.

ತೋಟ ಸುತ್ತಿ ಮನೆಯ ಹತ್ತಿರ ಬರುತ್ತಿದ್ದಂತೆ, ಒಂದು ಗುಂಟೆ ಜಾಗದಲ್ಲಿ ಬೆಳೆದಿದ್ದ ಕ್ಯಾಬೇಜು ತೋರಿಸಿ, ‘ಇಷ್ಟೇ ಜಾಗದಿಂದ ನನಗೆ ೪ ಸಾವಿರ ರುಪಾಯಿ ಆದಾಯ ಬಂತು. ಇದಕ್ಕೆ ಒಂದೇ ಒಂದು ಹುಳ ಬಿದ್ದಿಲ್ಲ. ಮಣ್ಣಿನ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬೇಕು. ಆ ಮಣ್ಣಿನಲ್ಲಿ ಸಮತೋಲನದ ಗೊಬ್ಬರ ಹಾಕಿ, ಆಯಾ ಹಂಗಾಮಿಗೆ ಹೊಂದುವ ಬೆಳೆ ಬೆಳೆದ್ರೆ ಹುಳ ಬರಲ್ಲ. ಅದು ಬಿಟ್ಟು, ಚಳಿಗಾಲದಲ್ಲಿ ಬೆಳೀಬೇಕಾದ್ದನ್ನ ಬೇಸಿಗೇಲಿ ಬೆಳದ್ರೆ ಹುಳ ಬಂದೇ ಬರ್ತದೆ’ ಎಂದು ವಿವರಿಸಿದರು.

ಪಾಪ ಹಸು. ಹಾಲು ಕೊಡ್ತು, ನಾವು ಮೊಸರು ಮಾಡಿದ್ವಿ. ಬೆಣ್ಣೆ ಕೊಡ್ತು, ನಾವು ತುಪ್ಪ ಮಾಡಿದ್ವಿ. ಪನ್ನೀರ್ ಮಾಡಿದೆವು. ಖೋವಾ ಮಾಡಿದೆವು. ನಮ್ಮ ಮಕ್ಕಳಿಗೆ ಹಾಲು ಕೊಟ್ಟು ಪೌಷ್ಟಿಕವಾಗಿ ಬೆಳೆಸಿದೆವು. ಕೊನೆಗೆ ನಾವು ಮಾಡೋದೇನು? ಅಮ್ಮನಂತಹಾ ಗೋವನ್ನು ಸಾಯಿಸೋದು. ಎಂತ ಹೀನ ಬಾಳು ನಮ್ಮದು. ಇವತ್ತು ನಾವು ಕನ್ಸ್ಯುರ್ಮ ಆಗಿ ಬದಲಾಗ ಬೇಕು.

ಆಗ ದೇಶ ಬದಲಾಗುತ್ತದೆ. ನಮಗೆ ಕೆಮಿಕಲ್ ಹಾಕಿದ ಆಹಾರ ಬೇಡ. ಕೆಮಿಕಲ್ ಹಾಕದೆ, ಭೂಮಿಗೆ ವಿಷ ಉಣಿಸದೆ ಬೆಳೆ ಬೆಳೆಯೋಣ. ತಮ್ಮ ಮಾತು ಮುಂದುವರಿಸುತ್ತ ಆಲೂಗಡ್ಡೆ ಬೇಸಾಯದಿಂದಾಗಿ ಮಣ್ಣಿನಲ್ಲಿ ವಿಷ ಹೇಗೆ ತುಂಬಿಕೊಳ್ಳುತ್ತದೆ ಮತ್ತು ಅದಕ್ಕೆ ಪರಿಹಾರವೇನೆಂದು ತಿಳಿಸಿದರು: ಬಹಳ ರೈತರು ಆಲೂಗಡ್ಡೆ ಬೆಳೀತಾರೆ. ನೆಡೋದಕ್ಕೆ ಮುಂಚೆ ಅದರ ಬೀಜಕ್ಕೆ ಪಾದರಸದ ಪೀಡೆನಾಶಕದಿಂದ ಬೀಜೋಪಾಚಾರ ಮಾಡಲೇ ಬೇಕು.

ಅದರಿಂದಾಗಿ ಭೂಮಿಯಲ್ಲಿ ವಿಷ ತುಂಬಿ ಕೊಳ್ತದೆ. ಅನಂತರ ಆಲೂಗಡ್ಡೆ ಬೆಳೆಗೆ ವೈರಸ್ ರೋಗ ಬಂದೇ ಬರ್ತದೆ. ಅದಕ್ಕೆ ಪುನಃ ವಿಷ ಹೊಡೀತಾರೆ. ಈ ಆಲೂಗಡ್ಡೆ ನಮಗ್ಯಾಕೆ ಬೇಕು? ಬೇರೆ ಎಷ್ಟೆಲ್ಲ ಗೆಡ್ಡೆಗಳಿವೆ- ಮರಗೆಣಸು, ಗೆಣಸು, ಡಯಾಸ್ಕೋರಿಯಾ, ಸುವರ್ಣಗೆಡ್ಡೆ. ಇವೆಲ್ಲ ನಿದ್ದೆ ಇದ್ದಂಗೆ ಈ ವರ್ಷ ಕಿತ್ ತೆಗೆಯದಿದ್ರೆ, ಮಣ್ಣೊಳಗೆ ಬೆಳೀತಾ ಇರ್ತವೆ. ಗಡ್ಡೆ-ಗೆಣಸುಗಳನ್ನು ತಿಂದು ಬೆಳೆದ ದೇಶ ನಮ್ಮದು ನೆನಪಿರಲಿ..!

ರೈತರ ಸಂಕಷ್ಟಗಳ ಮಾತು ಬಂದಾಗ, ಅವರು ತೋರಿದ ಪರಿಹಾರದ ದಾರಿ: ಬೆಳೆಯೋನು ರೈತ, ಆದರೆ ಫಸಲಿಗೆ ಬೆಲೆ ನಿರ್ಧಾರ ಮಾಡೋರು ಮಣ್ಣಿಗೆ ಇಳಿಯದೋರು. ಅದರಿಂದಲೇ ಸಮಸ್ಯೆ. ಬೀಜ, ಬಿತ್ತನೆ, ಗೊಬ್ಬರ, ನೀರು ಹಾಯಿಸೋದು, ಕಳೆ ತೆಗೆಯೋದು, ಕೊಯ್ಲು, ಒಕ್ಕಣೆ, ಸಾಗಾಟ ಎಲ್ಲಾ ಸೇರಿದ್ರೆ, ಒಂದು ಕಿಲೋ ರಾಗಿಗೆ ೨೫ ರುಪಾಯಿ ಖರ್ಚು ಬರ್ತದೆ.
ಸರಕಾರ ರಾಗಿಗೆ ಕಿಲೋಕ್ಕೆ ೩೫ ರುಪಾಯಿ ಬೆಲೆ ನಿಗದಿ ಮಾಡಲಿ.

ಹಾಲಿಗೂ ಹಾಗೇನೇ, ಒಂದು ಲೀಟರ್ ಹಾಲಿಗೆ ೪೫ ರುಪಾಯಿ ಖರ್ಚು ಬರ್ತದೆ. ಸರಕಾರ ಹಾಲಿಗೆ ಲೀಟರಿಗೆ ೫೫ ರುಪಾಯಿ ಬೆಲೆ ನಿಗದಿ ಮಾಡಲಿ. ಹೀಗೆ ಮಾಡಿದ್ರೆ ರೈತ ಉಳಿದಾನು. ನಾವು ಹೊರಡುತ್ತಿದ್ದಂತೆ, ಅಲ್ಲಿಗೆ ಕಾಲಿಟ್ಟಾಗ ಅವರು ಹೇಳಿದ ಮಾತು ನೆನಪಾಯಿತು: ‘ಭೂಮಿ ನಮಗೆ ಎಲ್ಲವನ್ನೂ ಕೊಡ್ತದೆ. ಅದನ್ನು ತಾಯಿಯಂತೆ ನೋಡ್ಕೋಬೇಕು. ಆದರೆ ನಾವು ಏನ್ ಮಾಡ್ತಾ ಇದ್ದೇವೆ? ನೋಡಿ, ೨೫ ವರ್ಷದ ಮುಂಚೆ ಇಲ್ಲಿ ನಾಲ್ಕೆಕ್ರೆ ಜಮೀನು ಖರೀದಿಸಿದ್ದೆ.

ಈಗ ಇಲ್ಲಿ ಒಂದ್ ಕೋಟಿ ರುಪಾಯಿ ಕೊಟ್ರೂ ಒಂದೆಕ್ರೆ ಜಮೀನು ಸಿಗಲ್ಲ. ಜಮೀನಿಗೆ ರೇಟ್ ಸಿಕ್ಕಾಪಟ್ಟೆ ಏರಿದೆ, ಆದ್ರೆ ಬೇಸಾಯಕ್ಕೆ ನೀರೇ ಇಲ್ಲ! ಆಗ ೨೧ ಅಡಿ ಆಳಕ್ಕೆ ಇಲ್ಲಿ ನೀರು ಸಿಗ್ತಿತ್ತು. ಈಗ ನೀರು ಸಿಗಬೇಕಂದ್ರೆ ೧೨೦೦ ಅಡಿ ಆಳಕ್ಕೆ ರ್ಬೋ ಕೊರೀಬೇಕು. ಪುಕ್ಕಟೆ ಕರೆಂಟ್ ಸಿಗ್ತದೆಂತ ಬೋರ್ವೆಲ್ ಕೊರೆದು ಕೊರೆದು ನಾವು ಏನ್ ಮಾಡಿದ್ದೇವೆ ನೋಡಿ.’ ಹೀಗೆ
ವಿeನಿಯ ಖಚಿತತೆ, ಸಂತನ ಸರಳತೆ, ತಾಯಿಯ ಪ್ರೀತಿ, ಗುರುವಿನ eನ ಮತ್ತು ಮಗುವಿನ ಮುಗ್ಧತೆ ಒಟ್ಟಾಗಿ ಮೇಳೈಸಿದ್ದ ವ್ಯಕ್ತಿತ್ವ ನಾರಾಯಣರೆಡ್ಡಿ ಅವರದು.

ಸಾವಯವ ಚಳುವಳಿಗೆ ಗಟ್ಟಿ ದನಿಯಾಗಿದ್ದ ರೆಡ್ಡಿಯವರು, ಆಂದೋಲನದ ಹಾದಿಯಲ್ಲಿ ಮಾಸಲಾರದ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಅವರು ನಮ್ಮನ್ನಗಲಿ ಮೊನ್ನೆ ಜನವರಿಗೆ ನಾಲ್ಕು ವರ್ಷಗಳಾದವು. ಯಾಕೋ ಇನ್ನೂ ಖಾಲಿ ಖಾಲಿ
ಅನಿಸುತ್ತಿದೆ.

error: Content is protected !!