Friday, 1st December 2023

ವೃದ್ಧಾಪ್ಯ ಮನಸ್ಥಿತಿಯ ಕೆಲವು ವೈಜ್ಞಾನಿಕ ಹೊಳಹುಗಳು

ಶಿಶಿರ ಕಾಲ

shishirh@gmail.com

ಸಾಮಾನ್ಯವಾಗಿ ಮನೆಯಲ್ಲಿ ಗೋಡೆಗೆ ನಮ್ಮ, ಕುಟುಂಬದ ಫೋಟೋ ನೇತುಹಾಕಿಕೊಂಡಿರು ತ್ತೇವಲ್ಲ, ತಿಂಗಳು, ವರ್ಷ ಕಳೆದಂತೆ ಅದರಲ್ಲಿರುವ ನಾವು ಹಾಗೇ ಇರುತ್ತೇವೆ. ಫೋಟೋ ಆಚೆಯ ನಾವು ಮಾತ್ರ ವಯಸ್ಸಾಗುತ್ತ ಹೋಗುತ್ತೇವೆ, ಅಲ್ಲವೇ? ವಯಸ್ಸು ಹೆಚ್ಚಾದಂತೆ ‘ಒಹ್, ಇವರು ಮೊದಲು ಹೇಗಿದ್ದರು ನೋಡಿ!’
ಎಂದು ಅಚ್ಚರಿಯಾಗುವುದಿದೆ ಗೋಡೆಯ ಮೇಲಿನ ಚಿತ್ರಕ್ಕೆ ವಯಸ್ಸಾಗುವುದಿಲ್ಲ.

The Picture of Dorian Gray- ಇದು ತತ್ತ್ವ ಶಾಸ್ತ್ರ ಆಧಾರಿತ ಕಾದಂಬರಿ. ೧೫೦ ವರ್ಷ ಹಿಂದಿನದು. ಕೆಲವು ದಿನದ ಹಿಂದೆ ಆ ಕಾದಂಬರಿ ಆಧಾರಿತ ಚಲನಚಿತ್ರವನ್ನು ನೋಡುತ್ತಿದ್ದೆ. ೧೯೪೫ರ ಚಿತ್ರ. ಈ ಕಥೆಯಲ್ಲಿ, ಯುವಕ ಡೋರಿ ಗ್ರೇ ತನ್ನೆದುರಿಗಿನ ತನ್ನದೇ ತೈಲಚಿತ್ರವನ್ನು ದಿಟ್ಟಿಸುತ್ತಿರುವಾಗ ಅವನಲ್ಲೊಂದು ಯೋಚನೆ ಬರುತ್ತದೆ: ‘ನಾನು ಹೀಗೆಯೇ ಇರುವುದಿಲ್ಲ, ವಯಸ್ಸಾದಂತೆ ನನ್ನ ದೇಹ ಬದಲಾಗುತ್ತದೆ, ಆದರೆ ನನ್ನ ಚಿತ್ರಕ್ಕೆ ಹಾಗಲ್ಲ’. ಕ್ರಮೇಣ ಆತ ಒಂದು ದೆವ್ವದ ಜತೆ ಒಂದು ವ್ಯವಹಾರ ಕುದುರಿಸುತ್ತಾನೆ. ಅಲ್ಲಿಂದ ಚಿತ್ರದಲ್ಲಿದ್ದ ಅವನಿಗೆ ಮಾತ್ರ ವಯಸ್ಸಾಗುತ್ತ ಹೋಗುತ್ತದೆ.

ಹೀರೋ ಡೋರಿಯನ್ ಯುವಕನಾಗಿಯೇ ಉಳಿದುಕೊಳ್ಳುತ್ತಾನೆ. ಈ ಕಥೆಯಲ್ಲಿ ಅವನ ವಯಸ್ಸಾದ ಚಿತ್ರವೇ ಅವನ ಜತೆ ಪರೋಕ್ಷವಾಗಿ ವಾದಕ್ಕಿಳಿಯುತ್ತದೆ. ಸಾಕ್ಷಿಪ್ರಜ್ಞೆಯಾಗಿ ಅವನ ಜತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸು ತ್ತಿರುತ್ತದೆ. ಅವನ ತಪ್ಪುಗಳನ್ನು ಎತ್ತಿ ತೋರಿಸುತ್ತದೆ. ಚಿತ್ರ ವೃದ್ಧಾಪ್ಯದಲ್ಲಿ ಪರಿಪಕ್ವವಾಗುತ್ತ ಆತನನ್ನು ನಿರ್ದೇಶಿಸುತ್ತಿರುತ್ತದೆ. ಬಹಳ ಮಜವಾದ ಪರಿಕಲ್ಪನೆಯ ಕಥೆಯುಳ್ಳ ಚಲನಚಿತ್ರ ಅದು. ಈ ಕಾದಂಬರಿಯ ಸಾರ ಆಗೀಗ Geropsychology ಯಲ್ಲಿ ಕೇಳುವುದಿದೆ. ವಯಸ್ಸಾಗುವ ಪ್ರಕ್ರಿಯೆಯಲ್ಲಿ ಎದುರಾಗುವ ಮಾನಸಿಕ ಬದಲಾವಣೆಗಳ ಬಗ್ಗೆ ಅಭ್ಯಾಸ ಮಾಡುವ ಮನಃ ಶಾಸ್ತ್ರದ ಒಂದು ಭಾಗ Geropsychology. ಕೆಲ ದಿನಗಳ ಹಿಂದೆ, ‘A Long Bright Life ಎಂಬ ಪುಸ್ತಕವನ್ನು ಓದಲು ಶುರುಮಾಡಿದಾಗಿನಿಂದ ಅದನ್ನು ಬರೆದ ಲೌರಾ ಕಾರ್ಟೆನ್ಸನ್ ಬಗ್ಗೆ ಆಸಕ್ತಿ ಹುಟ್ಟಿತ್ತು. ಆಕೆ ಸ್ಟ್ಯಾನೋರ್ಡ್ ವಿಶ್ವವಿದ್ಯಾಲ ಯದಲ್ಲಿ ದೀರ್ಘ ಬದುಕಿನ ಮೇಲೆ ಅಭ್ಯಾಸ ಮಾಡುವ ಡಿಪಾರ್ಟ್‌ಮೆಂಟ್‌ನ ಸಂಸ್ಥಾಪಕ ನಿರ್ದೇಶಕಿ.

ಲೌರಾ ಇಂಥದ್ದೊಂದು ಅಪರೂಪದ ಫೀಲ್ಡಿಗೆ ಬಂದದ್ದೇ ಒಂದು ಕಥೆ. ೨೧ರ ವಯಸ್ಸಿನಲ್ಲಿ ಲೌರಾ ಹೈಸ್ಕೂಲ್ ಮುಗಿಸಿದ ನಂತರ ವಿದ್ಯಾಭ್ಯಾಸ ಬಿಟ್ಟಾಗಿತ್ತು. ಬದುಕಿನ ಯಾವುದೇ ಜವಾಬ್ದಾರಿಯ ಪ್ರeಯೂ ಇಲ್ಲದ ಬದುಕು. ಯಾವುದೋ ಹೋಟೆಲ್‌ನಲ್ಲಿ ಪರಿಚಾರಕಿಯ ಕೆಲಸ ಮಾಡುತ್ತಿದ್ದಳು. ಒಂದು ಸಂಜೆ, ಕೆಲಸ ಮುಗಿಸಿ, ಹುಡುಗಿ ಯರೆಲ್ಲ ಊರು ಸುತ್ತಲು ಹೊರಟಿದ್ದರು. ಸಮಯ ಸರಿದದ್ದೇ ಗೊತ್ತಾಗಲಿಲ್ಲ. ತಡರಾತ್ರಿ, ತನ್ನ ಹೋಟೆಲ್‌ನಲ್ಲಿ ನೋಡಿ ಪರಿಚಯವಿದ್ದ ಗ್ರಾಹಕನೊಬ್ಬನಿಂದ ಲಿಫ್ಟ್ ಪಡೆಯಲು ಅವನ ಕಾರು ಹತ್ತಿದಳು. ಕಾರು ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಆತ ವಿಪರೀತ ಕುಡಿದದ್ದು ಅವಳಿಗೆ ತಿಳಿಯಿತು. ಗಾಬರಿಗೊಂಡ ಲೌರಾ ಕಿರುಚಾಡಿ ಓಡುತ್ತಿದ್ದ ಕಾರಿನ ಸ್ಟೇರಿಂಗ್ ತಿರುಗಿಸಿ ಬಿಟ್ಟಳು. ಕ್ಷಣಾರ್ಧದಲ್ಲಿ ಕಾರು ಕಂದಕವೊಂದಕ್ಕೆ ಜಿಗಿಯಿತು.

ಮುಂದೆ ಆಕೆ ಕಣ್ಣು ತೆರೆದದ್ದು ಆಸ್ಪತ್ರೆಯಲ್ಲಿ. ಈ ಅಪಘಾತದಿಂದ ಆಕೆಗೆ ಸುಮಾರು ೨೦ ಮೂಳೆ ಮುರಿದಿತ್ತು. ಇಡೀ ದೇಹ ಜಖಂ ಆಗಿತ್ತು. ಮೊದಲ ನಾಲ್ಕಾರು
ದಿನವಂತೂ ಅರಿವಳಿಕೆ ಕೊಡಲೂ ಸಾಧ್ಯವಾಗದ ದೇಹಸ್ಥಿತಿ. ಕೈಕಾಲುಗಳು, ಎದೆಗೂಡು, ಬೆನ್ನುಹುರಿ ಹೀಗೆ ಬಹುತೇಕ ಮುಖ್ಯ ಅಂಗಗಳ ಮೂಳೆಗಳು ಮುರಿದಿದ್ದವು. ಅರಿವಳಿಕೆ ಯಿಲ್ಲದೇ ಆಪರೇಷನ್ ಮಾಡುವಂತಿಲ್ಲ. ನಂತರ ಶಸ್ತ್ರಚಿಕಿತ್ಸೆ ಗಳು ಶುರುವಾದವು. ಆಕೆಯ ಕೈಕಾಲುಗಳಿಗೆ ಪ್ಲಾಸ್ಟರ್ ಹಾಕಿಡ
ಲಾಗುತ್ತಿತ್ತು. ಎರಡೂ ಕಾಲನ್ನು ನೆಟ್ಟಗಿರಿಸಲು ಮೇಲಕ್ಕೆತ್ತಿ ಆಸ್ಪತ್ರೆಯ ಬೆಡ್ಡಿನ ಕಂಬಕ್ಕೆ ನೇತುಹಾಕಲಾಗಿತ್ತು. ಸುಮಾರು ತಿಂಗಳು ಆಕೆ ಬಿದ್ದಲ್ಲಿಯೇ. ಚೇತರಿಕೆ ಬಹಳ ನಿಧಾನ. ಈ ಸಮಯದಲ್ಲಿ ಆಕೆಗೆ ಬೇಸರ ಕಾಡತೊಡಗಿತು.

ತಂದೆಯಲ್ಲಿ ಹೇಳಿದಾಗ, ಅವರು ‘ಯಾವುದಾದರೂ ವಿಷಯ ಆಯ್ಕೆ ಮಾಡಿಕೋ, ಅದರ ಮೇಲೆ ಡಿಗ್ರಿ ಪಡೆ’ ಎಂದು ಬೇಸರಕ್ಕೊಂದು ಉಪಾಯ ಹೇಳಿಕೊಟ್ಟರು. ಆಕೆ ಕಲಿಯಲಿಕ್ಕೆ ಆಯ್ಕೆ ಮಾಡಿಕೊಂಡದ್ದು ಮನಃಶಾಸವನ್ನು. ಆಕೆಯಿರುವುದು ಆಸ್ಪತ್ರೆ ಯಲ್ಲಿ. ಹಾಗಾಗಿ ಆಕೆ ತರಗತಿಗೆ ಹಾಜರಾಗಲು ಸಾಧ್ಯವಿಲ್ಲವಲ್ಲ. ಅದು ಇಂದಿನಂತೆ ಇಂಟರ್ನೆಟ್ ಇದ್ದ ಸಮಯವಲ್ಲ, ೧೯೭೪. ವಿಡಿಯೋ ಕ್ಲಾಸಿನ ವ್ಯವಸ್ಥೆಯಿಲ್ಲ. ಪ್ರತಿದಿನ ಅವಳ ತಂದೆ ಕ್ಲಾಸಿಗೆ ಹೋಗಿ ಪಾಠಗಳನ್ನು ರೆಕಾರ್ಡ್ ಮಾಡಿಕೊಂಡು ಬರುವುದು, ಅದನ್ನು ಲೌರಾ ಕೇಳಿಸಿಕೊಳ್ಳುವುದು ನಡೆದಿತ್ತು. ಆಕೆ ಅಲ್ಲಿಯವರೆಗೆ ಸ್ವಚ್ಛಂದವಾಗಿ, ಬದುಕಿನ ಭವಿಷ್ಯತ್ತಿನ ಬಗ್ಗೆ ಚೂರೂ ತಲೆಕೆಡಿಸಿಕೊಳ್ಳದೆ ಬದುಕುತ್ತಿದ್ದವಳು. ಈಗ ಆಸ್ಪತ್ರೆಯ ಬೆಡ್ಡಿನಲ್ಲಿ ಅದೆಲ್ಲ ಸ್ವಾತಂತ್ರ್ಯವನ್ನು ಕಳೆದುಕೊಂಡು ತನ್ನೆಲ್ಲ ಕೆಲಸಕ್ಕೆ ಇನ್ನೊಬ್ಬರನ್ನು ಅವಲಂಬಿಸುವಂತೆ
ಬದಲಾದ ಬದುಕು. ಅದೆಲ್ಲ ನಡೆದದ್ದು ಒಂದೇ ದಿನದಲ್ಲಿ, ಕ್ಷಣಮಾತ್ರದಲ್ಲಿ. ಆಕೆ ಇದ್ದ ವಾರ್ಡಿನಲ್ಲಿ ಉಳಿದವರೆಲ್ಲ ಹೆಚ್ಚು ಕಡಿಮೆ ಅದೇ ಸ್ಥಿತಿಯಲ್ಲಿದ್ದರು. ಆದರೆ ಅವರೆಲ್ಲರಿಗೆ ವಯಸ್ಸಾಗಿತ್ತು.

೨೧ರ ಹರೆಯದ ಆಕೆಯ ಬದುಕೂ ಈ ವಯೋವೃದ್ಧರ ಬದುಕೇ ಆಗಿತ್ತು. ಕ್ರಮೇಣ ಆಕೆ ಒಂದು ಕಡೆ ಮನಃಶಾಸ್ತ್ರದಲ್ಲಿ ಪದವಿ ಕಲಿಯುತ್ತ, ಬೆಡ್ಡಿನ ಅತ್ತಿತ್ತ ಸುತ್ತಲಿದ್ದ ವಯೋವೃದ್ಧರ ಜೀವನಕಥೆ ಕೇಳುತ್ತಿದ್ದಳು. ಸಹಜವಾಗಿ ಆಕೆಯ ಎದುರಿಗೆ ವಯಸ್ಸಾದವರ ನಿರ್ಲಕ್ಷಿತ ಜಗತ್ತೊಂದು ತೆರೆದುಕೊಂಡಿತು. ಅಲ್ಲಿಯವರೆಗೆ ಮುದುಕರೆಲ್ಲ ಒಂದೇ ರೀತಿ ಎಂದುಕೊಂಡಿದ್ದ ಆಕೆಗೆ ಅವರಲ್ಲಿಯೂ ಅಷ್ಟೇ ವೈವಿಧ್ಯ, ಹಿನ್ನೆಲೆ, ಬದುಕಿನ ಆಸಕ್ತಿಗಳು ಇರುತ್ತವೆ ಎಂದು ತಿಳಿಯತೊಡಗಿತು. ಆಕೆ ೪
ವರ್ಷದವರೆಗೆ ಅಲ್ಲೇ ಕಳೆದು, ಚೇತರಿಸಿಕೊಂಡು ಹೊರಬರುವ ಸಮಯ. ಆಗ ಆಕೆಗೆ ನಾನಾ ಹಿನ್ನೆಲೆಯಿಂದ ಬಂದ, ವಯಸ್ಸಾದವರ ಸಾವಿರಗಟ್ಟಲೆ ಉದಾಹರಣೆ ಗಳಿಂದಾಗಿ ಅವರ ಮನಸ್ಥಿತಿಯ ಪರಿಕಲ್ಪನೆ ಸ್ಪಷ್ಟವಾಗಿತ್ತು.

ಈ ೧೯೭೦-೮೦ರ ಸಮಯ, ೨ನೇ ವಿಶ್ವಯುದ್ಧ ಮುಗಿದು ಮೊದಲ ತಲೆಮಾರಿನವರು ಯೌವನಕ್ಕೆ ಬರುತ್ತಿದ್ದ ಸಮಯ. ಆ ಸಮಯಕ್ಕಿಂತ ಮೊದಲು ಮನುಷ್ಯನ ಸರಾಸರಿ ವಯಸ್ಸು ತೀರಾ ಕಡಿಮೆಯಿತ್ತು. ಈಗ ಸಮಯ ಕಳೆದಂತೆ ಮನುಷ್ಯ ಹೆಚ್ಚೆಚ್ಚು ವರ್ಷ ಬದುಕಲು ಸಾಧ್ಯವಾಗಿತ್ತು. ಸಮಾಜದಲ್ಲಿ ಒಮ್ಮೆಲೇ ವಯಸ್ಸಾದ ವರ ಸಂಖ್ಯೆ ಹೆಚ್ಚಿತ್ತು. ಅಲ್ಲಿಯವರೆಗೆ, ಅನಾದಿ ಕಾಲದಲ್ಲಿ ಕೂಡ ಅಷ್ಟು ವರ್ಷ ಬದುಕುತ್ತಿದ್ದುದು ಕಡಿಮೆ. ನಮ್ಮಲ್ಲಿಯ ಪೌರಾಣಿಕ ಕಥೆಗಳಲ್ಲಿ ಕೂಡ ಒಂದು
ವಯಸ್ಸಿನ ನಂತರ ಬದುಕಿರುವವರನ್ನು ಆ ಕಾರಣಕ್ಕೆ ವಿಜೃಂಭಿಸುವುದು ಇದೆಯಲ್ಲ. ಅದರರ್ಥ, ಅಂದು ಕೂಡ ಜಾಸ್ತಿ ವಯಸ್ಸು ಬದುಕುವುದು ಒಂದು ಪವಾಡ ಎಂದೇ ಇತ್ತು ಎಂದಾಯಿತು. ಏಕೆಂದರೆ ಎಲ್ಲಿಯೂ ಜನಸಾಮಾನ್ಯರೆಲ್ಲರೂ ನೂರು ವರ್ಷ ಬದುಕುತ್ತಿದ್ದರು ಎಂಬುದು ಇದ್ದಂತಿಲ್ಲ.

ಹಿಂದೆ ಹೀಗಿರುವಾಗ, ಮತ್ತು ಹೊಸ ಕಾಲಮಾನದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಿದಂತೆ, ಅವರ ಮನಸ್ಥಿತಿಯ ಬಗ್ಗೆ ಅಷ್ಟಾಗಿ ರಿಸರ್ಚ್ ನಡೆದಿರಲಿಲ್ಲ.
ಚಲನಚಿತ್ರ, ಜಾಹೀರಾತು, ಫ್ಯಾಶನ್ ಜಗತ್ತು ಇವೆಲ್ಲ ಕೌಮಾರ್ಯವನ್ನು ಸದಾ ವೈಭವೀಕರಿಸುತ್ತವೆ. ವಯಸ್ಸಾಗುವ ಕುರುಹನ್ನು ಅಡಗಿಸಲು ಅದೆಷ್ಟೋ ಬಣ್ಣ ವೈವಿಧ್ಯಗಳು, ಕಾಸ್ಮೆಟಿಕ್ಸ್, ಇಂಜೆಕ್ಷನ್, ಗುಳಿಗೆಗಳು, ಕ್ರೀಮು ಬಜಾರಿನಲ್ಲಿ ಬಿಕರಿಯಾಗುತ್ತವೆ. ಅಂಥ ವಸ್ತುಗಳ ಮಾರುಕಟ್ಟೆ ಜಾಗತಿಕವಾಗಿ ಅದೆಷ್ಟೋ ಬಿಲಿಯನ್ ಡಾಲರ್‌ನ ವ್ಯವಹಾರ.

ವಯಸ್ಸಾದ ಸಿನಿಮಾ ನಟ, ತಾರೆ ವಯಸ್ಸಾದರೂ ಅದು ಹೇಗೆ ಯಂಗ್ ಆಗಿ ಕಾಣಿಸುತ್ತಾರೆ ಎಂಬ ಬಗ್ಗೆ ಸೋಷಿಯಲ್ ಮೀಡಿಯಾ, ಟ್ಯಾಬ್ಲಾಯ್ಡ್, ಟಿವಿ ಕಾರ್ಯಕ್ರಮಗಳಲ್ಲಿ ನೋಡುತ್ತಿರುತ್ತೇವೆ. ಇಂಥದ್ದು ಕಂಡರೆ ಎಂಥವರೂ ಒಂದು ಕ್ಷಣ ನಿಂತು ನೋಡುತ್ತಾರೆ. ಏನಿದರರ್ಥ? ವಯಸ್ಸಾಗುವುದು ಎಂದರೆ ಎಲ್ಲರಿಗೂ ಒಂದು ಹೆದರಿಕೆಯಿದೆ. ನಿಮ್ಮನ್ನು ಸಮಾಜ ನೋಡುವ ಬದಲಾವಣೆಯ ಬಗ್ಗೆ ಇರುವ ಕಳವಳ ಅದು. ವಯಸ್ಸಾಗುವುದೆಂದರೆ ಸಾಮಾಜಿಕವಾಗಿ ಭಯಾನಕ ವಿಚಾರ. ವಯಸ್ಸನ್ನು ನಿಲ್ಲಿಸಲಿಕ್ಕಂತೂ ಅಸಾಧ್ಯ. ಇಂದಿನ ಯುವಕರು ಮುಂದಿನ ಮುದುಕರಾಗಲೇಬೇಕು. ಇದನ್ನು ಎಣಿಸಿಕೊಂಡರೆ ಅದೆಷ್ಟೋ ಮುಂದಿನ ಸಂಕಟಗಳ ಸ್ಥಿತಿಯನ್ನು ಅಂದಾಜಿಸಿ ಹಿಂಸೆಯಾಗುತ್ತದೆ. ಹಾಗಾಗಿಯೇ ಒಂದಿಷ್ಟು ವಯಸ್ಸಿನವರೆಗೆ ನಾವು ನಮಗೆ ವಯಸ್ಸಾದ ಮೇಲೆ ಹೇಗೆ
ಎಂದು ಯೋಚಿಸಲು ಹಿಂದೇಟು ಹಾಕುತ್ತಿರುತ್ತೇವೆ.

ಅದರಲ್ಲೂ ಹದಿಹರೆಯದ ವಯಸ್ಸಿನಿಂದ ಸುಮಾರು ೪೦ ವಯಸ್ಸಾಗುವವರೆಗೆ. ಮಿಡ್‌ಲೈಫ್ ಕ್ರೈಸಿಸ್ ಬಗ್ಗೆ ನೀವು ಕೇಳಿರುತ್ತೀರಿ. ಅದು ಒಮ್ಮೆಲೇ ನಮಗೆ ವಯಸ್ಸಾಗುತ್ತಿರುವುದು ಗ್ರಹಿಕೆಗೆ ಬರುವ ಕಾಲ. ಅದು ಕೆಲವೊಮ್ಮೆ ಎಂತೆಂಥವರನ್ನೇ ಖಿನ್ನರಾಗಿಸಿ, ಉದ್ವೇಗಕ್ಕೆ ಕಾರಣವಾಗುತ್ತದೆ. ‘ಅಯ್ಯೋ,
ನಾನು ಇಷ್ಟು ವರ್ಷ ದುಡಿದರೂ ಅಂದುಕೊಂಡಷ್ಟನ್ನು ಕೂಡಿಡಲಾಗಲಿಲ್ಲ, ಅಂದುಕೊಂಡ ಮಟ್ಟಿಗೆ ಕಾರ್ಯ ಅಥವಾ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಲಾಗಲಿಲ್ಲ, ಇನ್ನು ಹೆಚ್ಚಿಗೆ ಸಮಯವಿಲ್ಲ. ಮುದುಕನಾದ ಮೇಲೆ ಮತ್ತೆ ಬದಲಾವಣೆಗೆ ಅಷ್ಟು ಸಮಯವಿರುವುದಿಲ್ಲ’- ಈ ಎಲ್ಲ ವಿಚಾರಗಳು ಮಿಡ್ ಲೈಫ್ ಕ್ರೈಸಿಸ್‌ನ ಭಾಗ. ಅದೆಷ್ಟೋ ಕುಟುಂಬದಲ್ಲಿ ವಯಸ್ಸಾಗುವುದೆಂದರೆ ಯಾರಿಗೂ ಬೇಡದವರಾಗುವುದು.

ವಯಸ್ಸಾಯಿತೆಂದರೆ ಮನೆಯ ಮೂಲೆಯಲ್ಲೆಲ್ಲೋ ಲೆಕ್ಕಕ್ಕಿಲ್ಲದಂತೆ ಬದುಕುವುದು. ಉಳಿದವರು ಊಟಕ್ಕೆ ಸಮಯವಾದಾಗಲಷ್ಟೇ ನೆನಪಿಸಿಕೊಳ್ಳುವ ಹಿಡಿದಿಟ್ಟುಕೊಂಡ ಜೀವ. ಈಗೀಗ ವಯೋ ಅನುಗುಣ ಅದೆಷ್ಟೋ ಸಂಶೋಧನೆಗಳು ಮನಃಶಾಸ್ತ್ರದಲ್ಲಿ ನಡೆದಿದ್ದರೂ, ಲೌರಾ ಕಾರ್ಟೆನ್ಸನ್‌ಳ ಪ್ರಯೋಗ, ಸಂಶೋಧನೆ, ಅವಲೋಕನಗಳು ಇಂದಿಗೂ ಪ್ರಸ್ತುತವೆನಿಸುತ್ತದೆ. ಇದನ್ನು ವಯಸ್ಸಾದವರು ತಿಳಿಯುವುದಕ್ಕಿಂತ ಮುಂದೆ ವಯಸ್ಸಾಗುವವರು ತಿಳಿಯಬೇಕು ಎನಿಸುತ್ತದೆ. ಆಕೆ ಪ್ರಯೋಗ ನಡೆಸಿದ ಸಮಯದಲ್ಲಿ ವಯಸ್ಸಾಗುವುದೆಂದರೆ ಅದು ಒಂದು ರೀತಿಯ ರೋಗಕ್ಕೆ ತುತ್ತಾಗುವುದು ಎಂದೇ ಇತ್ತು. ನೂರೆಂಟು ಮಾನಸಿಕ ಸಮಸ್ಯೆಗಳ ಮಧ್ಯೆ ವಯಸ್ಸಾಗುವುದನ್ನು ಕೂಡ ಒಂದು ವ್ಯಾಽ ಎಂದೇ ವಿಜ್ಞಾನ ನಂಬಿದ್ದ ದಿನಗಳವು.

ವಯಸ್ಸಾಗುವುದು ರೋಗವಾದರೆ, ಮರೆವು, ಹೆದರಿಕೆ, ಖಿನ್ನತೆ, ಅಲ್ಜೈಮರ್ ಇವೆಲ್ಲ ಆ ರೋಗದ ಲಕ್ಷಣಗಳು. ವಯಸ್ಸಾಗುವುದು ಒಂದು ಕಷ್ಟಕರ ಮಾನಸಿಕ
ಪ್ರಕ್ರಿಯೆ ಎಂದೇ ವಿಜ್ಞಾನ ಜಗತ್ತು ನಂಬಿತ್ತು. ಆಗ ಲೌರಾಗೆ ಈ ವಿಚಾರದಲ್ಲಿ ಸಂಶೋಧನೆ ಮಾಡಲು ಒಂದಿಷ್ಟು ಗ್ರ್ಯಾಂಟ್ ಸಿಕ್ಕಿತು. ಆಕೆಯ ತಂಡ ಸುಮಾರು ಸಾವಿರ ವಯೋವೃದ್ಧರಿಗೆ ಮತ್ತು ಯುವಕ-ಯುವತಿಯರಿಗೆ (೧೮ರಿಂದ ೯೪ ವಯಸ್ಸಿನವರಿಗೆ) ಒಂದು ಪೇಜರ್ ಕೊಟ್ಟಿತು. ಅವರೆಲ್ಲ ಮಾಡಬೇಕಾದದ್ದು ಇಷ್ಟೇ: ದಿನದಲ್ಲಿ ತಾಸಿಗೊಮ್ಮೆ ತಮ್ಮ ಮಾನಸಿಕ ಸಮತೋಲನದ ಬಗ್ಗೆ, ಮೂಡ್‌ನ ಬಗ್ಗೆ ತಿಳಿಸಬೇಕು. ಅಲ್ಲಿ ತಿಳಿದುಬಂದದ್ದು ಹೊಸತೊಂದು ವಿಚಾರ.

ಕಿರಿಯರು, ಯುವಕ-ಯುವತಿಯರು, ವಯಸ್ಸಾದವರಿಗಿಂತ ಹೆಚ್ಚಿನ ಮಾನಸಿಕ ಏರಿಳಿತವನ್ನು ಅನುಭವಿಸುತ್ತಾರೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಯ್ತು. ೫೦-೬೦ ದಾಟಿದವರೆಲ್ಲರ ನಿತ್ಯಜೀವನದಲ್ಲಿನ ಆತಂಕ, ಕೋಪ, ಭಯ, ಅಸೂಯೆ, ಅಸಹಾಯಕತೆ, ಮಾನಸಿಕ ಅಸಮತೋಲನ ಮೊದಲಾದ ಋಣಾತ್ಮಕ ವಿಚಾರಗಳನ್ನು ಹೋಲಿಸಿದರೆ, ಯುವ ಜನತೆಗಿಂತ ತೀರಾ ಕಡಿಮೆ. ಅಲ್ಲಿಂದ ಮುಂದೆ ವಯಸ್ಸು ಕಳೆದಂತೆ ಪ್ರಬುದ್ಧತೆ ಮತ್ತು ಅದಕ್ಕನುಗುಣವಾಗಿ ಜೀವನ ಪ್ರೀತಿ, ಸಮಷ್ಟಿ, ಸಮತೋಲನ ಹೆಚ್ಚುತ್ತದೆ ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟದ್ದು, ಆಧುನಿಕ ವಿಜ್ಞಾನ ಒಪ್ಪಿದ್ದು.

ಈ ಎಲ್ಲ ಸಂಶೋಧನೆಯನ್ನು ವಿಜ್ಞಾನ ವರ್ಗ ಅಷ್ಟು ಸುಲಭದಲ್ಲಿ ಮೊದಲು ಒಪ್ಪಲಿಲ್ಲ. ಈ ಪ್ರಯೋಗದಲ್ಲಿಯೇ ಏನೋ ತಪ್ಪಿರಬಹುದು ಎಂದು ಅನುಮಾನಿಸಿ ದವರೇ ಜಾಸ್ತಿ. ಅಲ್ಲಿ ಮರೆವು ಮೊದಲಾದ ಅರಿವಿನ ಪ್ರeಗಳು, ದುರ್ಬಲತೆ, ಸಹಜವಾಗಿ ಇವರ ಮಾನಸಿಕ ಶಾಂತಿಗೆ ಕಾರಣ, ಅದು ಮಿಥ್ಯ ಪರಿಕಲ್ಪನೆ ಎಂದೆಲ್ಲ ವಾದವಾದವು. ಆದರೆ ಒಂದಂತೂ ಸ್ಪಷ್ಟವಿತ್ತು: ವಯಸ್ಸಾದವರು ಹೆಚ್ಚು ಸಮಾಧಾನದಲ್ಲಿ ಬದುಕುತ್ತಿದ್ದರು. ದೇಹದಲ್ಲಿ ನೂರೆಂಟು ರೋಗ, ಬಾಧೆ, ಕ್ಷೀಣಿಸಿದ ಸಾಮಾಜಿಕ ಬದುಕು, ಸ್ನೇಹವರ್ಗ, ಅವರ ಇರುವನ್ನೇ ಗ್ರಹಿಸದ ವಾತಾವರಣ, ಕುಟುಂಬದಲ್ಲಿ ಕಡೆಗಣಿಸಿದ ಸ್ಥಿತಿ, ಸಾವಿಗೆ ಹತ್ತಿರವಾದ ಸಮಯ. ಇವೆಲ್ಲದರ ನಡುವೆ ಮನಸ್ಸು ಮಾತ್ರ ಹಿಂದಿರದಷ್ಟು ಹೆಚ್ಚಿನ ಶಾಂತತೆಯನ್ನು ಹೊಂದಿತ್ತು.

ಇದು ವೃದ್ಧಾಪ್ಯದ ವಿರೋಧಾಭಾಸವಲ್ಲದೆ ಇನ್ನೇನು? ಸಾಮಾನ್ಯವಾಗಿ ಆರೋಗ್ಯ, ವಯಸ್ಸು, ಸಾವಿರದೆಂಟು ಜನರ ಸಂಪರ್ಕ, ಸಾಮಾಜಿಕ ಅಸ್ತಿತ್ವ ಇವೆಲ್ಲವೂ ಯೌವನದಲ್ಲಿ ಜಾಸ್ತಿ. ಆ ಜೀವನದಲ್ಲಿ ಇವೇ ಸಂಪತ್ತು. ಅದೆಲ್ಲವೂ ವಯಸ್ಸು ಕಳೆದಂತೆ ಕ್ಷೀಣಿಸುತ್ತದೆ. ನೆಮ್ಮದಿಗೆ ಕಾರಣವಾದದ್ದೇ ಕಡಿಮೆ ಯಾದಾಗ, ಅಲಭ್ಯವಾದಾಗ, ಸಾಮಾಜಿಕ ಚಟುವಟಿಕೆ ಕ್ಷೀಣಿಸಿದಾಗ ಸಹಜವಾಗಿ ಖುಷಿ, ಸಂತೃಪ್ತಿಯೂ ಕಡಿಮೆ ಯಾಗಬೇಕಲ್ಲ. ಆದರೆ ಅದಕ್ಕೆ ತದ್ವಿರುದ್ಧದ ಸ್ಥಿತಿ. ಮನುಷ್ಯ
ವಯಸ್ಸು ಕಳೆದಂತೆ ಸಂತೃಪ್ತಿಯ, ಮಾನಸಿಕ ಸಮತೋಲನದ ದಿನಗಳು ಸಾಧ್ಯವಾಗುವುದು ಎನ್ನುವುದನ್ನು ಮೊದಲು ನಿರೂಪಿಸಿದ್ದು ಈ ಪ್ರಯೋಗ. ಬುದ್ಧಿಮಾಂದ್ಯತೆ ಪ್ರಮಾಣ ವಯಸ್ಸಾದವರಲ್ಲಿಗಿಂತ ಎಳೆಯವರಲ್ಲಿಯೇ ಜಾಸ್ತಿ ಎಂದು ಸಾಮೂಹಿಕವಾಗಿ ಕಂಡುಕೊಂಡದ್ದು ಆಗ. ಅದಲ್ಲದೇ ಮುದಿಗಾಲದಲ್ಲಿ ಎದುರಾಗುವ ಕೆಲವು ರೋಗಲಕ್ಷಣಗಳೆಂದೇ ಬಿಂಬಿತವಾದ ಬದುಕಿನ ಸವಾಲುಗಳು ಅತಿಹೆಚ್ಚು ಕಾಡುವುದು ಇಳಿವಯಸ್ಸಿನ ಬದಲಿಗೆ ಎಳೆವಯಸ್ಸಿನಲ್ಲಿ ಎನ್ನುವುದು.

ಇದು ಸಂಪೂರ್ಣ ಮಾನಸಿಕ ವೈಜ್ಞಾನಿಕ ನಿಲುವನ್ನೇ ಬದಲಿಸಿತು. ಇನ್ನೊಂದೆಂದರೆ ಶ್ರೀಮಂತರು, ಬಡವರು, ಹಲವು ಹಿನ್ನೆಲೆಯಿಂದ ಬಂದ ವಯೋವೃದ್ಧರಲ್ಲಿ ಎಲ್ಲರಲ್ಲೂ ಅಷ್ಟೇ ಶಾಂತತೆ ಕಾಣಿಸಿಕೊಂಡದ್ದು. ಯಾವುದೇ ಪ್ರಬುದ್ಧ ವಾಗ್ಮಿಗಳ ಮಾತನ್ನೇ ಕೇಳಿ. ಅವರೆಲ್ಲ ಎಳೆಯರಿಗೆ ಹೇಳುವುದು ವರ್ತಮಾನದಲ್ಲಿ ಬದುಕಿ ಎಂದೇ. ಈ ಕ್ಷಣದಲ್ಲಿ, ಪ್ರಜ್ಞಾಪೂರ್ವಕವಾಗಿ ಬದುಕಿ ಎನ್ನುವುದು ನಮ್ಮ ಸನಾತನ ಧರ್ಮದ, ಬಹುತೇಕ ಅಧ್ಯಾತ್ಮದ ಸಾರದ ಕೊನೆಯ ಹುಂಡು. ಹೇಗೆ  ವರ್ತಮಾನದಲ್ಲಿ ಜೀವಿಸಬೇಕು ಎಂಬುದನ್ನು ಹೇಳುವ ಭಗವದ್ಗೀತೆಯೇ ನಮಗೆ ಪರಮೋಚ್ಚ. ಲೌರಾ ಇದೆಲ್ಲದನ್ನು ಕಂಡುಹಿಡಿಯುವ ಮೊದಲೇ ಈ ನೆಲದಲ್ಲಿ ಆ ಬಗೆಗಿನ ಅನ್ವೇಷಣೆಗಳು ಆದಂತಿದೆ. ಇಂಥ ಕೆಲ ವಿಚಾರಗಳು ನಮ್ಮಲ್ಲಿ ಯಾವತ್ತೋ ಇತ್ತಲ್ಲ ಎಂದೇ ಕೊನೆಯಾಗುವುದು ಆಶ್ಚರ್ಯ, ಸತ್ಯ. ಇವೆಲ್ಲವೂ ನಮ್ಮ
ಜ್ಞಾನ ಸಂಪತ್ತಿನಲ್ಲಿ ಎದುರಿಗಿದೆ. ಅವು ವಯಸ್ಸಾದ ನಂತರ ಎದುರಾಗುವ ಸಾಕ್ಷಾತ್ಕಾರವನ್ನು ಮೊದಲೇ ತಿಳಿಸುವ ಮಾರ್ಗ ದರ್ಶಿಗಳು.

ಆದರೆ ಇದು ವಿಪರ್ಯಾಸ. ಅಧ್ಯಾತ್ಮವೆಂದರೆ ಅದು ಮುದುಕರಾಗಿ, ಜೀವನದಲ್ಲಿ ಎಲ್ಲ ಮುಗಿಯುವ ಸಮಯದಲ್ಲಿ, ಅವಶ್ಯಕತೆಯೇ ಇಲ್ಲದಾಗ, ಮೊರೆಹೋಗುವ
ಟೈಮ್‌ಪಾಸ್ ಎಂದು ಪರಿಗಣಿತವಾಗುವುದು. ತೀರಾ ಎಳೆಯ ನೊಬ್ಬ ಅಧ್ಯಾತ್ಮ, ನಶ್ವರತೆಯನ್ನು ಮಾತನಾಡಿದರೆ ಅವನನ್ನು ‘ವಯಸ್ಸಾದವರಂತೆ ಆಡಬೇಡ’ ಎಂದು ಹೀಯಾಳಿಸುತ್ತೇವೆ. ನಿಜವಾಗಿ ಅಧ್ಯಾತ್ಮಿಕ ವಿಚಾರಗಳು, ವಯಸ್ಸಿಗೆ ಮೀರಿದ ಪ್ರೌಢತೆ, ಜೀವನದ ಸಾಕ್ಷಾತ್ಕಾರ ಬೇಕಾಗಿರುವುದು ಮಧ್ಯ ವಯಸ್ಸಿನಲ್ಲಿ. ಅದು ವಯಸ್ಸಾಗುವ ಸ್ಥಿತಿಗೆ ಅಣಿಯಾಗುವ ಪ್ರಕ್ರಿಯೆಯ ಪಾಠವಾಗಿ ಅಲ್ಲ. ಬದಲಿಗೆ ಇಂದು ಹೇಗೆ ಬದುಕಬೇಕು ಎಂದು ನಿರ್ದೇಶಿಸುವವು. ಇವೆಲ್ಲ ಜ್ಞಾನ
ಸುಲಭದಲ್ಲಿ ಲಭ್ಯ, ಆದರೆ ಯುವಜನತೆಗೆ ಸಹಜ ಅಸಡ್ಡೆ. ಬಹುಶಃ ಅನುಭವಿಸಬೇಕಾದ ಜೀವನದ ಹಂತಗಳನ್ನು ದಾಟಿಯೇ ಕೊನೆಯಲ್ಲಿ ಪ್ರೌಢತೆಯನ್ನು ಪಡೆದು ನೆಮ್ಮದಿ ಹೊಂದಬೇಕೆಂದೇ ಸಾಮಾಜಿಕವಾಗಿ ನಾವೆಲ್ಲಾ ನಿರ್ಧರಿಸಿದಂತಿದೆ.

ಅದಕ್ಕೆಲ್ಲ ವ್ಯತಿರಿಕ್ತವಾಗಿ ಯೋಚಿಸಲು ಸಮಾಜ ಏಕೋ ಒಪ್ಪುವುದಿಲ್ಲ. ಮನುಷ್ಯನಿಗೆ ಕೆಲವೊಂದು ಕುರುಡುತನ ಅನಿವಾರ್ಯವೇ ಅಥವಾ ಮೂರ್ಖತನವೇ
ಎನ್ನುವುದೇ ಇಲ್ಲಿನ ಪ್ರಶ್ನೆ.

Leave a Reply

Your email address will not be published. Required fields are marked *

error: Content is protected !!