Thursday, 18th April 2024

ನಾನು ಕಂಡ ನಾಡಿನ ನಕ್ಷತ್ರಗಳು: ಮಾದರಿ ಪುಸ್ತಕ

ವೈದ್ಯ ವೈವಿಧ್ಯ

drhsmohan@gmail.com

ನಾಡಿನ ನಕ್ಷತ್ರಗಳು ಕೃತಿಯಲ್ಲಿರುವ ಲೇಖನಗಳನ್ನು ಗುಂಪುಗಳಲ್ಲಿ ವಿಂಗಡಿಸಬಹುದು. ೧. ನಾಡಿನ ೨೬ ನಕ್ಷತ್ರಗಳ ಬಗೆಗಿನ ೨೬ ಬರಹಗಳು ೨. ತಮ್ಮ ತಾಯಿ, ಮಡದಿ ಹಾಗೂ ಸಮಾಧಾನ ಆಪ್ತ ಸಲಹಾ ಕೇಂದ್ರದ ಬಗ್ಗೆ ಬರೆದಿರುವ ಬರಹಗಳು. ೩. ನಾಡಿನ ನಕ್ಷತ್ರಗಳ ಹೊಳಪನ್ನು ಹೆಚ್ಚಿಸುವಂತಹ ಪೂರಕ ಲೇಖನಗಳು.

ನಾನು ಕಂಡ ನಾಡಿನ ನಕ್ಷತ್ರಗಳು – ಡಾ.ಸಿ.ಆರ್. ಚಂದ್ರಶೇಖರ್ ಅವರು ಇತ್ತೀಚಿಗೆ ಪ್ರಕಟಿಸಿದ ಅಪರೂಪದ ವಿಶಿಷ್ಟ ಪುಸ್ತಕ. ಇದರಲ್ಲಿ ಅವರು ತಮ್ಮ ಒಡನಾಟಕ್ಕೆ ಬಂದ ೨೬ ಭಿನ್ನ ರೀತಿಯ ವ್ಯಕ್ತಿಗಳ ಸೂಕ್ಷ್ಮ ಪರಿಚಯ ಮಾಡಿ ಅವರ ಸಮಾಜ ಸೇವೆಯನ್ನು ಎತ್ತಿ ತೋರಿಸಿದ್ದಾರೆ.

ಡಾ. ಸಿ.ಆರ್. ಚಂದ್ರಶೇಖರ್ ಅವರು ನಾಡಿನ ಖ್ಯಾತ ಮನೋವೈದ್ಯರು, ಶ್ರೇಷ್ಠ ವೈದ್ಯ ಸಾಹಿತಿಗಳು, ಹಾಗೆಯೇ ಉತ್ತಮ ಸಾಮಾಜಿಕ ಕಾರ್ಯ ಕರ್ತರು. ಬೆಂಗಳೂರಿನ ಖ್ಯಾತ ನಿಮ್ಹಾನ್ಸ್ ಸಂಸ್ಥೆಯಲ್ಲಿ ಸುದೀರ್ಘ ೩೮ ವರ್ಷ ಮನೋವೈದ್ಯರಾಗಿ, ಶಿಕ್ಷಕರಾಗಿ, ಪ್ರೊಫೆಸರ್ ಆಗಿ ವೃತ್ತಿಜೀವನ ನಡೆಸಿ ಈಗ ನಿವೃತ್ತರಾಗಿಯೂ ಉತ್ತಮ ಸಾಮಾಜಿಕ, ವೈದ್ಯಕೀಯ ಸೇವೆಯನ್ನು ಗೈಯುತ್ತಿದ್ದಾರೆ. ಅವರು ಸಮಾಧಾನ ಎಂಬ ಆಪ್ತ ಮಾನಸಿಕ ಕೌನ್ಸೆಲಿಂಗ್ ಸೆಂಟರ್ ತೆರೆದು ಅದರಲ್ಲಿ ಮಾನಸಿಕ ರೋಗಿ ಗಳಿಗೆ ಉಚಿತ ಸಲಹೆ ನೀಡುತ್ತಿರುವುದಲ್ಲದೇ, ಆಪ್ತ ಸಲಹೆ ಕೋರ್ಸ್‌ಗಳನ್ನು ಆಯೋಜಿಸಿ ಹಲವು ಸಾವಿರ ಆಪ್ತ ಸಲಹೆಗಾರ ರನ್ನು ಹುಟ್ಟು ಹಾಕಿದ್ದಾರೆ.

ಅವರೆಲ್ಲಾ ನಾಡಿನಾದ್ಯಂತ ತಮ್ಮ ಸೇವೆಗೈಯುತ್ತಿದ್ದಾರೆ. ತಮ್ಮ ದುಡಿಮೆಯ ಒಂದು ಕೋಟಿ ಹತ್ತು ಲಕ್ಷ ರು.ಗಳನ್ನು ನಿಮ್ಹಾನ್ಸ್ ಸಂಸ್ಥೆಗೆ ದಾನವಾಗಿ ನೀಡಿ ಹಿರಿಯ ನಾಗರಿಕರ ಆರೈಕೆಗೆ ವ್ಯವಸ್ಥೆಯನ್ನು ರೂಪಿಸುವಂತೆ ಕೋರಿಕೊಂಡಿದ್ದಾರೆ. ನಾವೆಲ್ಲ ಬಾಯಿ ಚಟವನ್ನು ತೀರಿಸಿಕೊಳ್ಳಲು ಮಾತನಾಡುವುದುಂಟು. ಆದರೆ ಸಿಆರ್‌ಸಿ ಯವರು ಸದ್ದಿಲ್ಲದ ಹಾಗೆ ತಮ್ಮ ಆಶಯವನ್ನು ಕಾರ್ಯರೂಪಕ್ಕೆ ಬಂದಿರುವುದು ನಿಜಕ್ಕೂ ಅನುಕರಣೀಯ (ಡಾ.ನಾ. ಸೋಮೇಶ್ವರ ಅವರ ಮುನ್ನುಡಿಯಿಂದ).
ವೈದ್ಯಕೀಯ ಸಾಹಿತ್ಯದಲ್ಲಿ ಕಳೆದ ೪೫-೫೦ ವರ್ಷಗಳಿಂದ ತೊಡಗಿಕೊಂಡ ಇವರು ೧೨೦೦ ಕ್ಕೂ ಅಧಿಕ ಲೇಖನಗಳನ್ನು ನಾಡಿನ ಹೆಚ್ಚಿನ ಎಲ್ಲಾ ಕನ್ನಡ ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ.

ಹಾಗೆಯೇ ೨೮೦ ಕನ್ನಡ ಪುಸ್ತಕಗಳು, ೪೫ ಇಂಗ್ಲಿಷ್ ಪುಸ್ತಕಗಳು ೧೧೦ ಸಂಪಾದಿತ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ದೀರ್ಘಕಾಲದ ವೈದ್ಯಕೀಯ ಸಾಹಿತ್ಯ ಮತ್ತು ಸಾಮಾಜಿಕ ಸೇವೆಗೆ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವುಗಳಲ್ಲಿ ಮುಖ್ಯವಾದವುಗಳು-ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಅರಿವೇ ಗುರು ಪ್ರಶಸ್ತಿ, ಕರ್ನಾಟಕ ಸರ್ಕಾರದ ಮಹಾತ್ಮ
ಗಾಂಽ ಸೇವಾ ಪ್ರಶಸ್ತಿ ಇತ್ಯಾದಿ.

ಡಾ. ಸಿ.ಆರ್. ಚಂದ್ರಶೇಖರ್ ಅವರು ಮೇಲಿನ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ. ಆಗಸದಲ್ಲಿರುವ ನಕ್ಷತ್ರಗಳ ಸಂಖ್ಯೆ ಅಗಣಿತ. ಹಾಗೆಯೇ ನಮ್ಮ ನಾಡಿನಲ್ಲಿ ತಮ್ಮ ಪ್ರತಿಭೆ, ಶ್ರಮ, ಛಲದಿಂದ ಸಾಧನೆ ಮಾಡಿದವರ ಸಂಖ್ಯೆಯೂ
ಅಗಣಿತವೇ. ಊರುಕೇರಿಯಲ್ಲಿ ನಕ್ಷತ್ರಗಳಿವೆ. ಕೆಲವು ನಕ್ಷತ್ರಗಳು ಪ್ರಚಾರದ ಬೆಳಕಿನಲ್ಲಿ ಹೆಚ್ಚು ಮಿನುಗಿದರೆ, ಹಲವು ಎಲೆಮರೆಕಾಯಿಗಳು. ಎಲೆ ಸರಿಸಿ ನೋಡಿದರೆ ಮಾತ್ರ ಗೋಚರವಾಗುತ್ತವೆ. ಯಾವುದೇ ಪ್ರಚಾರ ಬಯಸದ ಸಾಧಕ ರಿದ್ದಾರೆ. ನನ್ನ ಜೀವಿತಾವಧಿಯಲ್ಲಿ ನಾನು ಅನೇಕ ನಕ್ಷತ್ರಗಳ ಸಂಪರ್ಕಕ್ಕೆ ಬಂದಿದ್ದೇನೆ. ಕೆಲವು ನಕ್ಷತ್ರಗಳು ನನ್ನ ವೃತ್ತಿಗೆ ಬೆಳಕಾಗಿವೆ. ಕೆಲವು ನಕ್ಷತ್ರಗಳು ನನ್ನ ಪ್ರವೃತ್ತಿಗೆ ಬೆಳಕಾಗಿವೆ.

ಕೆಲವು ನನ್ನ ವ್ಯಕ್ತಿತ್ವವನ್ನು ರೂಪಿಸಿವೆ. ಹಲವು ನಕ್ಷತ್ರಗಳು ನನ್ನ ಮೇಲೆ ಪ್ರೀತಿ-ವಿಶ್ವಾಸಗಳ ತುಂತುರು ಮಳೆಯನ್ನು
ಸುರಿಸಿವೆ, ಮುದವನ್ನಿತ್ತಿವೆ. ಇಂತಹ ೨೬ ನಕ್ಷತ್ರಗಳ ಪುಟ್ಟ ಪರಿಚಯವನ್ನು, ಅವರೊಡನೆ ನನ್ನ ಸಂಪರ್ಕ ಒಡನಾಟದ ಝಲಕ್ಕನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದೇನೆ. ಇವರಿಗೆಲ್ಲ ನನ್ನ ಮನದಾಳದ ನಮನಗಳು. ಈ ನಕ್ಷತ್ರಗಳು ಈಗಿನ ಮತ್ತು
ಮುಂದಿನ ಪೀಳಿಗೆಗಳಿಗೆ ದಾರಿದೀಪಗಳಾಗಬೇಕು.

ಇಂದಿನ ಅಸ್ತವ್ಯಸ್ತ ವಿದ್ಯಾಭ್ಯಾಸ ಅಂಕಗಳಿಗೆ ಪ್ರಾಧಾನ್ಯತೆ ನೀಡುವ ಶಿಕ್ಷಣ ವ್ಯವಸ್ಥೆ ಉದ್ಯೋಗ ಹಣ ಸಂಪಾದನೆ ಬಾಳಿನ ಗುರಿಯಾಗಿರುವಾಗ ಮಕ್ಕಳ ಪ್ರಾಯದವರ ಯುವಕ ಯುವತಿಯರ ಬಾಳಿಗೊಂದು ಅರ್ಥಪೂರ್ಣ ಗುರಿಯೇ ಇಲ್ಲವಾಗಿದೆ. ಈ ಕ್ಷಣದ ಮೋಜು, ಖುಷಿಗೆ ಆದ್ಯತೆ, ನೀತಿ ನಿಯಮಗಳ ಉಲ್ಲಂಘನೆಯೇ ಆದ್ಯತೆಯಾಗಿರುವಾಗ ಆರೋಗ್ಯಕರ ಮತ್ತು ತೃಪ್ತಿಯ ಜೀವನಶೈಲಿ ರೂಪಿಸಿಕೊಳ್ಳಲು ಈ ಮಹಾನ್ ಚೇತನಗಳು ಮಾರ್ಗದರ್ಶನ ಮಾಡಬಲ್ಲವು ಎಂಬುದೇ ನನ್ನ ನಂಬಿಕೆ.

ಪುಸ್ತಕಕ್ಕೆ ಮುನ್ನುಡಿ ಬರೆದ ಡಾ. ನಾ.ಸೋಮೇಶ್ವರ ಹೀಗೆ ಬರೆಯುತ್ತಾರೆ. ನಾಡಿನ ನಕ್ಷತ್ರಗಳು ಕೃತಿಯಲ್ಲಿರುವ ಲೇಖನ ಗಳನ್ನು ಗುಂಪುಗಳಲ್ಲಿ ವಿಂಗಡಿಸಬಹುದು. ೧. ನಾಡಿನ ೨೬ ನಕ್ಷತ್ರಗಳ ಬಗೆಗಿನ ೨೬ ಬರಹಗಳು ೨. ತಮ್ಮ ತಾಯಿ, ಮಡದಿ ಹಾಗೂ ಸಮಾಧಾನ ಆಪ್ತ ಸಲಹಾ ಕೇಂದ್ರದ ಬಗ್ಗೆ ಬರೆದಿರುವ ಬರಹಗಳು. ೩. ನಾಡಿನ ನಕ್ಷತ್ರಗಳ ಹೊಳಪನ್ನು ಹೆಚ್ಚಿಸು ವಂತಹ ಪೂರಕ ಲೇಖನಗಳು.

ಡಾ. ಚಂದ್ರಶೇಖರ್ ಅವರು ತಮ್ಮ ತಾಯಿಯ ಬಗ್ಗೆ ಬರೆಯುತ್ತಾ-ನನ್ನ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ನನ್ನ ತಾಯಿ ದೊಡ್ಡ
ಪಾತ್ರವನ್ನು ವಹಿಸಿದರು. ಒಬ್ಬನೇ ಮಗ ಎಂದು ಅತಿಯಾಗಿ ಮುದ್ದಿಸಲಿಲ್ಲ, ಶಿಸ್ತನ್ನು ಕಡಿಮೆ ಮಾಡಲಿಲ್ಲ. ನನ್ನಲ್ಲಿ ಸಾಹಿತ್ಯ ಪ್ರೀತಿಯನ್ನು ಹುಟ್ಟು ಹಾಕುವುದರಲ್ಲಿ ಅವರ ಕಾಣಿಕೆಯೂ ಇದೆ. ಕಥೆ ಕಾದಂಬರಿಗಳನ್ನು ಓದುವುದು ವ್ಯರ್ಥ ಕಾಲಕ್ಷೇಪ, ಅವುಗಳನ್ನು ಓದಿ ಜನ ಕೆಡುತ್ತಾರೆಂಬುದು ನನ್ನ ತಂದೆಯ ಅಭಿಪ್ರಾಯ. ನಾನು ಮುಂದೆ ಲೇಖನಗಳನ್ನು ಬರೆದು ಪ್ರಕಟಿಸಿದಾಗ ನನ್ನ ತಾಯಿ ಓದಿ ಸಂತೋಷಪಡುತ್ತಿದ್ದರು.

ಖ್ಯಾತ ವೈದ್ಯ ಡಾ. ಅನುಪಮಾ ನಿರಂಜನ ಅವರ ಬಗ್ಗೆ ಬರೆಯುತ್ತಾ ಅವರು ಭೇಟಿಯಾದಾಗ ಹೇಳಿದ ಮಾತುಗಳನ್ನು
ಬರೆಯುತ್ತಾರೆ. ಡಾ. ಚಂದ್ರಶೇಖರ್ ನಮ್ಮ ಜನ ರೋಗಗಳಿಂದ ಎಷ್ಟು ನರಳುತ್ತಾರೋ ಅದಕ್ಕಿಂತ ಹೆಚ್ಚಾಗಿ ಅಜ್ಞಾನ ಮೂಢನಂಬಿಕೆಗಳಿಂದ ನರಳುತ್ತಾರೆ. ನಾವು ಡಾಕ್ಟರ್‌ಗಳು ಕೇವಲ ಮಾತ್ರೆ ಇಂಜೆಕ್ಷನ್‌ಗಳನ್ನು ಕೊಟ್ಟರೆ ಸಾಲದು. ಅವರಿಗೆ ಕಾಯಿಲೆಗಳು ಬರುವುದನ್ನು ತಡೆಗಟ್ಟಲು ಹೇಳಿ ಕೊಡಬೇಕು. ಎಷ್ಟೋ ಹೆಣ್ಣು ಮಕ್ಕಳಿಗೆ ಋತುಮತಿ ಯಾಗುವುದು ಅಂದರೆ ಏನು ಅಂತ ಗೊತ್ತಿಲ್ಲ. ಗರ್ಭಧಾರಣೆ ಹೇಗಾಗುತ್ತೆ ಗೊತ್ತಿಲ್ಲ.

ಋತುಸ್ರಾವದ ಏರುಪೇರಿಗೆ ಯಂತ್ರ-ಮಂತ್ರ-ತಾಯಿತ ಕಟ್ಟಿಸ್ತಾರೆ. ತಮಗೆ ಅನಿಮಿಯಾ ಇದೆ, ಅಂದರಿಂದ ಮುಟ್ಟಾಗಿಲ್ಲ
ಅನ್ನೋದು ಗೊತ್ತಿಲ್ಲ. ಬಿಳಿಸೆರಗು ಯಾಕಾಗುತ್ತೆ ಗೊತ್ತಿಲ್ಲ. ವೈದ್ಯಕೀಯ ಮಾಹಿತಿ ಜನಕ್ಕೆ ತಲುಪಬೇಕು. ನಾವೊಂದು ನಾಲ್ಕೈದು ಜನ ಬರೆಯುತ್ತಿದ್ದೇವೆ. ಉಳಿದವರು ಏಕೆ ಬರೆಯಬಾರದು? ಮತ್ತೊಬ್ಬ ಖ್ಯಾತ ವೈದ್ಯ ಸಾಹಿತಿ ಡಾ. ಕೆ.ಎ. ಅಶೋಕ ಪೈ ಅವರ ಬಗ್ಗೆ ಬರೆಯುತ್ತಾ- ೧೯೭೧ ರಷ್ಟು ಹಿಂದೆಯೇ ಮರಾಠಿ ಪ್ರಾಬಲ್ಯದ ಬೆಳಗಾವಿಯಲ್ಲಿ ಕನ್ನಡ ವೈದ್ಯ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿದ ವೀರ ಕನ್ನಡಿಗ.

ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತರ ಅಧ್ಯಕ್ಷತೆ, ಡಾ. ಅನುಪಮಾ ನಿರಂಜನ, ಡಾ. ಸ.ಜ. ನಾಗಲೋಟಿಮಠ, ಡಾ. ಎಚ್.ಡಿ. ಚಂದ್ರಪ್ಪ ಗೌಡ, ಡಾ. ಪಿ.ಎಸ್. ಶಂಕರ್, ಡಾ. ಡಿ.ಎಸ್. ಶಿವಪ್ಪನವರ ಉಪಸ್ಥಿತಿ. ಡಾ. ಚಂದ್ರಪ್ಪ ಗೌಡ ಅವರ
ಬಗ್ಗೆ ಬರೆಯುತ್ತಾ-೧೯೮೦ ರಲ್ಲಿ ಅವರನ್ನು ಭೇಟಿ ಮಾಡಿದ ನಂತರ, ನನ್ನ ಮತ್ತು ಅವರ ಸ್ನೇಹ ಬಾಂಧವ್ಯ ನಿರಂತರವಾಗಿ ಸಾಗಿ ಬಂದಿತು. ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ನಮ್ಮಿಬ್ಬರ ಬಾಂಧವ್ಯದ ಬೆಸುಗೆಯನ್ನು ಮತ್ತಷ್ಟು ಬಲಪಡಿಸಿತು. ರಸಋಷಿ ಕುವೆಂಪು ಅವರ ಹೆಸರಿನಲ್ಲಿ ಶ್ರೇಷ್ಠ ವೈದ್ಯ ಕೃತಿಗೆ ಬಹುಮಾನ ನೀಡಲು ಶಿವಮೊಗ್ಗ ಐಎಂಏ ಕ್ಲಬ್ ವತಿಯಿಂದ ೧೫,೦೦೦ ರುಪಾಯಿಗಳ ಪುದುವಟ್ಟನ್ನು ಪರಿಷತ್ತಿಗೆ ನೀಡಿದರು. ನನಗೂ ಆ ಪ್ರಶಸ್ತಿ ಬಂತೆಂಬುದು ಹೆಮ್ಮೆಯ ವಿಚಾರ.

ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರ ಬಗ್ಗೆ ಬರೆಯುತ್ತಾ ತಮ್ಮ ಮನೋ ವಿಸ್ಮಯ ಪುಸ್ತಕ ಬಿಡುಗಡೆಯ ಸಮಾರಂಭ ದಂದು ಡಾ. ಕರಜಗಿ ಅವರು ಹೇಳಿದ ಮಾತುಗಳನ್ನು ಇಲ್ಲಿ ಅವರು ಉದ್ಧರಿಸಿದ್ದಾರೆ-ಇಂದು ಅನೇಕ ವಿಸ್ಮಯ ಗಳು ಸೇರಿ ಮೇಳೈಸಿರುವ ಸಂದರ್ಭ ಎಂದು ಮಾತನ್ನು ಆರಂಭಿಸಿದ ಕರಜಗಿ ಅವರು ಪುಸ್ತಕದ ಹೆಸರು ಮನೋ ವಿಸ್ಮಯ,
ಪ್ರಕಟಿಸಿದವರು ವಿಸ್ಮಯ ಪ್ರಕಾಶನದವರು. ಮನೋವೈದ್ಯರಾದ ಡಾಕ್ಟರ್ ಚಂದ್ರಶೇಖರ್ ಅವರು ಮನಸ್ಸಿನ ವಿಸ್ಮಯ ಪ್ರಪಂಚವನ್ನು ಈ ಕೃತಿಗಳ ಮೂಲಕ ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ ಎಂದ ಅವರ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ.

ಗುಲಬರ್ಗಾದ ಸಾಮಾಜಿಕ ಕಾರ್ಯಕರ್ತ ಎಸ್.ಎಸ್. ಹಿರೇಮಠ್ ಅವರ ಬಗ್ಗೆ ನಾಡೋಜ ಡಾ. ಪಿ.ಎಸ್. ಶಂಕರ್,
ದಿವಂಗತ ಡಾ. ಎಸ್.ಎಸ್. ಪಾಟೀಲ್, ಡಾ. ಸ.ಜ. ನಾಗಲೋಟಿ ಮಠ, ಡಾ. ಗುಬ್ಬಿ, ವಿಕಾಸ್ ಅಕಾಡೆಮಿಯ ಬಸವರಾಜ ಸೇಡಂ ಅವರಂತಹ ಘಟಾನುಘಟಿಗಳ ಮಧ್ಯೆ ಹಿರೇಮಠ ಅವರು ಕಲಬುರ್ಗಿ ವಿಜಾಪುರ ಬಾಗಲಕೋಟೆ ವಲಯದಲ್ಲಿ
ಸಾಹಿತ್ಯ ಪರಿಚಾರಕರಾಗಿ, ಆರೋಗ್ಯ ಶಿಕ್ಷಣ ಸೇವೆಯಲ್ಲಿ , ಆಪ್ತ ಆಲೋಚನೆ, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಧಣಿವರಿಯದಂತೆ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ.

ಸಾಗರದ ನೇತ್ರ ತಜ್ಞ ಡಾ. ಎಚ್.ಎಸ್. ಮೋಹನ್ ಬಗ್ಗೆ – ಶಿಕ್ಷಕರುಗಳಿಗೆ ಮಕ್ಕಳ ಕಣ್ಣಿನ ತಪಾಸಣೆ ಬಗ್ಗೆ ತರಬೇತಿ ಕೊಟ್ಟಿದ್ದಾರೆ. ಮಕ್ಕಳಲ್ಲಿ ದೃಷ್ಟಿ ದೋಷ, ವಾರೆಗಣ್ಣು, ಕಣ್ಣಿಗೆ ಹೊರಗಿನ ವಸ್ತು ಬೀಳುವುದು, ಕಣ್ಣುರಿ, ಕಣ್ಣಿನ ಸೋಂಕು ಇವು ಸಾಮಾನ್ಯ. ಆದರೆ ಅವುಗಳ ಅರಿವೇ ಅವರಿಗಿರುವುದಿಲ್ಲ. ತಂದೆ ತಾಯಿಗಳಿಗೂ ತಿಳಿಯುವುದಿಲ್ಲ. ಕಣ್ಣಿನ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಬಲ್ಲವರೆಂದರೆ ಶಿಕ್ಷಕರು. ಸುಮಾರು ೯೦೦ಕ್ಕೂ ಹೆಚ್ಚಿನ ಶಿಕ್ಷಕರಿಗೆ ಡಾ. ಮೋಹನ್ ಕಣ್ಣಿನ ತೊಂದರೆಗಳನ್ನು ಗುರುತಿಸಲು ಹಾಗೂ ವೈದ್ಯರಲ್ಲಿಗೆ ಕಳುಹಿಸಿಕೊಡಲು ತರಬೇತಿ ನೀಡಿದ್ದಾರೆ.

೧೯೯೭ರಿಂದ ೨೦೦೧ ರವರೆಗಿನ ಅವಽಯಲ್ಲಿ ೩೨,೦೦೦ ಮಕ್ಕಳ ಕಣ್ಣಿನ ಉಚಿತ ತಪಾಸಣೆ ಮಾಡಿದ್ದಾರೆ. ಖ್ಯಾತ ಶಿಕ್ಷಣ ತಜ್ಞ ಬೆಂಗಳೂರು ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಡಾ.ಎಚ್. ನರಸಿಂಹಯ್ಯ ಅವರ ಜೊತೆ ಭಾನಾಮತಿ ನಾಡಿನಲ್ಲಿ ಸಂಚರಿಸಿದ ಬಗ್ಗೆ ತಮ್ಮ ಅನುಭವವನ್ನು ಡಾ. ಚಂದ್ರಶೇಖರ್ ಹಂಚಿಕೊಂಡಿದ್ದಾರೆ.

ಭಾನಾಮತಿ ಎಂಬ ಅತಿ ಮಾನವ ಶಕ್ತಿ ಯಿಂದ ಯಾರಿಗಾದರೂ ಯಾವ ಬಗೆಯ ಕೇಡು ಹಾನಿಯನ್ನುಂಟು ಮಾಡಬಹುದೆಂಬ ಮಿಥ್ಯಾ ನಂಬಿಕೆ ಬೀದರ್, ಕಲಬುರ್ಗಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಜನ ತತ್ತರಿಸಿ ಹೋಗಿದ್ದರು. ಈ ಭಾನಾಮತಿಯ ಬಗ್ಗೆ ಅಧ್ಯಯನ ಮಾಡಲು, ಪರಿಹಾರ ಸೂಚಿಸಲು ನಿಮ್ಹಾನ್ಸ್ ತಂಡದಲ್ಲಿ ನಾನೂ ಇದ್ದೆ. ಒಂದು ತಿಂಗಳ ಕಾಲ ಎಚ್ಚೆನ್ ಜೊತೆ ಪ್ರವಾಸ ಮಾಡಿದೆವು.

ಡಾ. ಡಿ.ವಿ. ರಾವ್ ಅವರ ಬಗ್ಗೆ ಬರೆಯುತ್ತಾ- ವೈದ್ಯರು ಮರೆಯಲಾಗದ ರೋಗಿಗಳು ಎಂಬ ಪುಸ್ತಕವನ್ನು ನಾನು ಸಂಪಾದಿಸಿದೆ. ಅದರಲ್ಲಿ ಒಂದು ಲೇಖನವನ್ನು ಡಾ. ರಾವ್ ಬರೆದು ಡೆಲಿರಿಯಂನಲ್ಲಿದ್ದ ವೃದ್ಧೆ ಒಬ್ಬಳು ಡಾ. ರಾವ್ ಅವರ
ಕೈಗಳನ್ನು ಹಿಡಿದು ತನ್ನ ಮಗನೆಂದೇ ತಿಳಿದು ಸಂತೃಪ್ತಿಯಿಂದ ಸಾವನ್ನಪ್ಪಿದ ಹೃದಯ ಕಲಕುವ ಘಟನೆಯನ್ನು ವಿವರಿಸಿದ್ದಾರೆ.

ಶ್ರೀಮತಿ ಪಂಕಜ ಅವರ ಬಗ್ಗೆ ಬರೆಯುತ್ತಾ-೧೯೮೧ ರಿಂದ ಇಂದಿನವರೆಗೂ ಶ್ರೀಮತಿ ಪಂಕಜ ಅವರೊಂದಿಗೆ ಕೆಲಸ ಮಾಡಿ
ದ್ದೇನೆ. ಅಂದು ಎಷ್ಟು ಉತ್ಸಾಹ, ಹುಮ್ಮಸ್ಸು ಇತ್ತೋ ಇಂದಿಗೂ ಅದೇ ಉತ್ಸಾಹ, ಹುಮ್ಮಸ್ಸು ಇದೆ. ಶರೀರ ಕುಗ್ಗಿದೆ, ಬೆನ್ನು ಬಾಗಿದೆ. ಬೆನ್ನು ಮೂಳೆ ಸವೆದು ಮುರಿದಿದೆ. ಆದರೂ ಕೇಂದ್ರದ ಉತ್ಸುವಾರಿಯನ್ನು ಅವರು ಬಿಟ್ಟಿಲ್ಲ. ಹೀಗೆ ಹಲವು ವ್ಯಕ್ತಿಗಳ ವಿಶೇಷತೆ ಎತ್ತಿ ತೋರಿಸುವ ಈ ಪುಸ್ತಕ ಮಾದರಿ ಪುಸ್ತಕ ಎನ್ನಬಹುದು.

error: Content is protected !!