Saturday, 20th April 2024

ಅಪರೂಪದ ವೈದ್ಯಕೀಯ ಕೌತುಕಗಳು

ವೈದ್ಯ ವೈವಿಧ್ಯ

drhsmohan@gmail.com

ಗ್ರೀನ್ ಟೀಯನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಶ್ವಾಸಕೋಶದ ಕ್ಯಾನ್ಸರ್ ಬರದಿರುವಂತೆ ನೋಡಿಕೊಳ್ಳು ತ್ತದೆ ಹಾಗೂ ಮಿದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಗಳು ತಿಳಿಸಿವೆ. ಹಾಗಂತ ಗ್ರೀನ್ ಟೀಯನ್ನು ಮಿತಿಮೀರಿ ಸೇವಿಸಿದರೆ ಅದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು.

ಕಣ್ಣಿನಲ್ಲಿ ಮೀನಿನ ಮೂಳೆ ಸಿಕ್ಕಿಹಾಕಿಕೊಂಡಿದ್ದರ ಬಗ್ಗೆ ಕೇಳಿದ್ದೀರಾ? ನಿಮ್ಮದೇ ಕಿವಿಯ ರಿಂಗ್ ನುಂಗಿ ನೀವು ಆಸ್ಪತ್ರೆಗೆ ಹಿಂದೆ ಯಾವಾಗಾದರೂ ಸೇರಿದ್ದಿರಾ? ಆದರೆ ಈ ರೀತಿಯ ವೈದ್ಯಕೀಯ ಕೌತುಕಗಳು ಕೆಲವು ಕಾಲದಿಂದ ವರದಿ ಯಾಗಿವೆ. ಅಂಥವು ವೈದ್ಯರ ಗಮನಕ್ಕೆ ಬಂದರೆ ಅವನ್ನು ಹೆಚ್ಚಿನವರು ದಾಖಲಿ ಸುತ್ತಾರೆ. ಇದರ ಮುಖ್ಯ ಉದ್ದೇಶ, ಇದು ಉಳಿದ ವೈದ್ಯರುಗಳ ಗಮನಕ್ಕೆ ಬಂದು ಅವರಿಗೆ ಭವಿಷ್ಯದಲ್ಲಿ ಉಪಯೋಗವಾಗಲಿ ಎಂಬುದಕ್ಕಾಗಿ ಮತ್ತು ವೈದ್ಯರಲ್ಲದವರಿಗೆ ಇಂಥ ಅಪರೂಪದ ಘಟನಾವಳಿಗಳ ಬಗ್ಗೆ ಒಂದು ಪರಿಚಯ ಒದಗಲಿ ಎಂದು. ಅಂಥ ಕೆಲವು ಅಪರೂಪದ ಕೌತುಕಗಳ ಬಗ್ಗೆ ಗಮನಹರಿಸೋಣ.

೧. ಅಸಾಧಾರಣ ಚಪ್ಪಟೆ ಹುಳು (Tapeworm): ಚೀನಾದ ಈ ವ್ಯಕ್ತಿ ಹೊಟ್ಟೆನೋವು, ವಾಂತಿ, ಸರಿಯಾಗಿ ಹಸಿವಾಗು ತ್ತಿಲ್ಲ, ಒಮ್ಮೆಲೇ ತೂಕ ಕಡಿಮೆಯಾಗಿದೆ- ಈ ಲಕ್ಷಣದೊಂದಿಗೆ ವೈದ್ಯರಲ್ಲಿಗೆ ಭೇಟಿ ಕೊಟ್ಟ. ಹಾಗೆಯೇ ತನ್ನ ಮಲದಲ್ಲಿ ಕಂಡು ಬಂದ ಜಂತುಹುಳುವಿನ ತುಂಡನ್ನೂ ಕೊಂಡುಹೋಗಿದ್ದ. ಹಾಗಾಗಿ ವೈದ್ಯರಿಗೆ ಇವನ ರೋಗಲಕ್ಷಣಗಳ ಕಾರಣ ಹುಡುಕು ವುದು ಕಷ್ಟವಾಗಲಿಲ್ಲ. ಹಾಗೆಯೇ ಅವನ ಆಹಾರಕ್ರಮ ವಿಚಾರಿಸಿದಾಗ, ಬೇಯಿಸದ ಹಂದಿಮಾಂಸ ತಿನ್ನುವ ಅವನ ಪ್ರವೃತ್ತಿ ಗೊತ್ತಾಯಿತು. ಅವನ ಹೊಟ್ಟೆಯಲ್ಲಿದ್ದ ೨೦ ಅಡಿ ಉದ್ದದ ಜಂತು- ಟೀನಿಯಾ ಸ್ಯಾಜಿನೇಟವನ್ನು ವೈದ್ಯರು ಔಷಧ ಕೊಟ್ಟು ಆತನ ಮಲದ ಮೂಲಕ ಹೊರಬರುವಂತೆ ಮಾಡಿದರು. ನಂತರ ವಿವಿಧ ಔಷಧಗಳನ್ನು ನೀಡಿ ಆತನ ರೋಗಲಕ್ಷಣಗಳು ೩ ತಿಂಗಳಿನಲ್ಲಿ ಇಲ್ಲವಾಗುವಂತೆ ಮಾಡಿದರು.

೨. ಜಂತುಹುಳುವಿನ ಸೋಂಕು ಬೇರೆಡೆ: ಕತಾರ್‌ನಲ್ಲಿರುವ ೪೩ ವರ್ಷದ ಈ ವ್ಯಕ್ತಿಗೆ ಒಂದು ತಿಂಗಳಿನಿಂದ ಮೂತ್ರ ಮಾಡುವಾಗ ನೋವು, ಮೂತ್ರದಲ್ಲಿ ರಕ್ತ ಹೋಗುತ್ತಿತ್ತು. ಆಸ್ಪತ್ರೆಯಲ್ಲಿ ನಡೆಸಿದ ವಿವರವಾದ ಪರೀಕ್ಷೆಯಿಂದ ಆತನಿಗೆ ಶೈಸ್ಟೋಸೋಮಾ ಜಂತುವಿನ ಸೋಂಕು ಆಗಿದೆ ಎಂದು ಗೊತ್ತಾಯಿತು. ಈತನಿಗೆ ಸಾಮಾನ್ಯವಾಗಿ ಮೂತ್ರಚೀಲ ಮತ್ತು
ಮೂತ್ರನಾಳ ಯುರೇಟರ್ ಭಾಗದಲ್ಲಿ ಸೋಂಕು ಆಗಿತ್ತು. ಈ ಪರಾವಲಂಬಿ ಜೀವಿಯ ಸಣ್ಣ ಸಣ್ಣ ಮೊಟ್ಟೆಗಳು ಆತನ ಮೂತ್ರಚೀಲದ ಗೋಡೆಯ ಮೇಲೆ ಹರಡಿಕೊಂಡಿದ್ದವು. ಆತನ ಪ್ರತಿರೋಧ ಶಕ್ತಿಯ ಪ್ರತಿಕ್ರಿಯೆಯಾಗಿ ಅವೆಲ್ಲ ಒಂದು ರೀತಿಯಲ್ಲಿ ಕ್ಯಾಲ್ಸಿಫಿಕೇಶನ್ ಆಗಿ ಗಟ್ಟಿಯಾಗಿದ್ದವು.

ಈ ರೀತಿಯ ಶೈಸ್ಟೋಸೋಮಾ ಜಂತುವಿನ ಸೋಂಕಿನಿಂದ ಮೂತ್ರದ ಚೀಲ ಕ್ಯಾಲ್ಸಿಫಿಕೇಶನ್ ರೀತಿ ಆಗುವುದು ತೀರಾ ಅಪರೂಪವಲ್ಲದಿದ್ದರೂ ಇಡೀ ಮೂತ್ರಚೀಲವೇ ಕ್ಯಾಲ್ಸಿಫಿಕೇಶನ್ ಆಗಿ ಎಲ್ಲವೂ ವಿಪರೀತ ಗಟ್ಟಿಯಾದ ರೀತಿ ತುಂಬಾ ವಿರಳ ಎಂದು ವೈದ್ಯರ ಅನಿಸಿಕೆ. ಹಾಗೆ ಆಗಲು ಹಲವು ವರ್ಷಗಳು ಬೇಕಾಗಬಹುದು ಎಂದು ಅವರ ಅಭಿಪ್ರಾಯ. ಜಂತು ಹುಳುವಿನ ಸೋಂಕು ಬಹುಶಃ ೩೦ ವರ್ಷಗಳಿಂದ ಆತನ ದೇಹದಲ್ಲಿತ್ತು ಎಂದು ಅವರ ಅಭಿಪ್ರಾಯ.

೩. ಕಣ್ಣುಗುಡ್ಡೆಯಲ್ಲಿ ಮೀನಿನ ಮೂಳೆ: ೫೨ ವರ್ಷದ ಈ ಪ್ರವಾಸಿ ಕೆಂಪು ಸಮುದ್ರದಲ್ಲಿ ಈಜುತ್ತಿದ್ದ. ಒಮ್ಮೆಲೇ ಒಂದು ಮೀನಿನ ಹಿಂಡು ಅಲೆಯಲ್ಲಿ ಬಂದು ಆತನಿಗೆ ಡಿಕ್ಕಿ ಹೊಡೆಯಿತು. ಕೆಲವು ದಿನಗಳ ನಂತರ ಆತನ ರೆಪ್ಪೆ ಊದಿಕೊಂಡಿತು. ಹಾಗೂ ರೆಪ್ಪೆ ಕೆಳಗೆ ಬಂದು ಕಣ್ಣನ್ನು ಮುಚ್ಚಿಕೊಂಡು ಬಿಡುತ್ತಿತ್ತು. ಆಗ ಆತ ವೈದ್ಯರಲ್ಲಿ ಬಂದ. ಅವರು ಗ್ರಾನುಲೋಮಾ
ಆಗಿದೆ ಎಂದು ಸಣ್ಣ ಶಸಕ್ರಿಯೆ ಕೈಗೊಂಡಾಗ, ಗ್ರಾನುಲೋಮಾ ಮಾತ್ರವಲ್ಲದೆ ಎರಡು ಉರುಟು ಆಕಾರದ ಆಕೃತಿಗಳನ್ನು ಹುಡುಕಿ ತೆಗೆದರು. ಆ ಆಕೃತಿಗಳು ಏನೆಂದು ಜೀವಶಾಸದ ಅಭಿಪ್ರಾಯ ಪಡೆಯಲಾಗಿ- ಅವು ಅಪರೂಪದ ಜಾತಿಯ ಮೀನಿನ ದವಡೆಯ ಮೂಳೆ ಎಂದು ಸಾಬೀತಾಯಿತು. ಆ ಮೂಳೆಗಳು ರೆಪ್ಪೆಯ ಮಾಂಸಖಂಡಗಳನ್ನು ಪ್ಯಾರಲೈಸ್ ಮಾಡಿದ್ದರಿಂದ
ಆತನ ಕಣ್ಣಿನ ರೆಪ್ಪೆ ಇಳಿದಂತೆ ಕಾಣುತ್ತಿತ್ತು.

೪. ಸುಡೊಕೊ ತಂದ ಅವಘಡ: ಹೌದು, ಯಾವುದೂ ಅತಿಯಾದರೆ ಒಳ್ಳೆಯದಲ್ಲ. ಜರ್ಮನಿಯ ಈ ಯುವಕನಿಗೆ ಅವನು
ಹೆಚ್ಚಾಗಿ ಬಿಡಿಸುತ್ತಿದ್ದ ಸುಡೊಕೊ ಸಮಸ್ಯೆಗಳು ಅವನ ದೇಹದಲ್ಲಿ ನಡುಕ ಉಂಟುಮಾಡತೊಡಗಿದವು. ಆತ ಒಮ್ಮೆ ಸ್ಕೀಯಿಂಗ್‌ ಗಾಗಿ ಹೋದಾಗ ದೊಡ್ಡ ಐಸ್ ಬಂಡೆಗಳ ಕೆಳಗೆ ಆಗಿ ಸಿಕ್ಕಿಕೊಂಡ. ನಂತರ ಆತನನ್ನು ಅಲ್ಲಿಂದ ರಕ್ಷಿಸಲಾಯಿತು.
ಆದರೆ ಆ ಸಂದರ್ಭದಲ್ಲಿ ಆತನಿಗೆ ಹೈಪಾಕ್ಸಿಯಾ ಎಂಬ ರೀತಿ ಆಯಿತು. ಆಗ ದೇಹದ ಅಂಗಾಂಶಗಳಿಗೆ ಮತ್ತು ಮಿದುಳಿಗೆ ದೊರಕಬೇಕಾದ ಮಟ್ಟದ ಆಮ್ಲಜನಕ ದೊರೆಯಲಿಲ್ಲ. ಅದರಿಂದ ತ ಮಾತನಾಡಿದಾಗ ಬಾಯಿಯ ಸುತ್ತ ಕೆಲವು ಮಾಂಸಗಳು ನಡುಗಲಾರಂಭಿಸಿದವು. ಹಾಗೆಯೇ ಆತ ನಡೆದಾಡಿದಾಗ ಕಾಲಿನ ಮಾಂಸಖಂಡದಲ್ಲಿಯೂ ಈ ನಡುಕ ಕಾಣಿಸಿಕೊಂಡಿತು. ಜತೆಗೆ ಎಡಗೈನಲ್ಲೂ ನಡುಕದ ಅನುಭವ ಆಗಲಾರಂಭಿಸಿತು.

ವೈದ್ಯರು ಎಪಿಲೆಪ್ಸಿ ಕಾಯಿಲೆಗೆ ಕೊಡಬೇಕಾದ ಔಷಧಗಳನ್ನು ಕೊಟ್ಟು ಚಿಕಿತ್ಸೆ ಫಲಪ್ರದವಾಯಿತು ಎಂದು ಭಾವಿಸಿದರು. ಆತ
ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಹೊರಬಂದು ಕೆಲವು ದಿವಸಗಳ ನಂತರ ಸುಡೋಕು ಸಮಸ್ಯೆ ಬಿಡಿಸಲು ಆರಂಭಿಸಿದಾಗ ಮತ್ತೆ ಎಡಭಾಗದ ಕೈನಲ್ಲಿ ನಡುಕದ ಅನುಭವವಾಗತೊಡಗಿತು.

ಕಾರಣ ಏನೆಂದು ವೈದ್ಯರು ಹುಡುಕಿದರು. ಆತ ಆ ಸುಡೊಕೋ ಸಮಸ್ಯೆ ಪರಿಹರಿಸಲು ತೊಡಗಿದಾಗ ಅವನ ಮಿದುಳಿನಲ್ಲಿ ಮೂರು ಮೈಯ ಊಹೆ ಕ್ರಿಯಾಶೀಲವಾಯಿತು. ಆತ ಐಸ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ಮಿದುಳಿನ ಯಾವ ಭಾಗಕ್ಕೆ ಆಮ್ಲಜನಕ
ಕಡಿಮೆ ಆಗಿತ್ತೋ ಅದೇ ಭಾಗವೇ ಅವನ ಮೂರು ಮೈಯ ಊಹೆ ಮಾಡುವ ಭಾಗವಾಗಿತ್ತು. ಆತ ಸುಡೊಕೊ ಸಮಸ್ಯೆ ಪರಿಹರಿಸಲು ತೊಡಗಿದಾಗ ಆತನ ತೊಂದರೆಗೀಡಾದ ಮಿದುಳಿನ ಭಾಗವೇ ಮತ್ತಷ್ಟು ಕ್ರಿಯಾಶೀಲತೆಯಲ್ಲಿ ತೊಡಗಿದಾಗ
ಆತನಿಗೆ ಆ ನಡುಕದ ಅನುಭವವಾಗುತ್ತಿತ್ತು. ಆತ ಆ ಸುಡೊಕೊ ಸಮಸ್ಯೆ ಪರಿಹರಿಸುವುದನ್ನು ಶಾಶ್ವತವಾಗಿ ಬಿಡಬೇಕಾಯಿತು.

೫. ಹಲ್ಲನ್ನೊಳಗೊಂಡ ಮಿದುಳಿನ ಗೆಡ್ಡೆ: ನಾಲ್ಕು ತಿಂಗಳ ಮಗುವಿನಲ್ಲಿ ಹಲ್ಲು ಕಾಣಿಸಿಕೊಳ್ಳುವುದು ಅಪರೂಪವೇನಲ್ಲ. ಆದರೆ ಆ ಹಲ್ಲುಗಳು ಮಿದುಳಿನಲ್ಲಿ ಕಂಡುಬರುವುದು ನಿಜವಾಗಿಯೂ ಅಪರೂಪವೇ. ಮೇರಿ ಲ್ಯಾಂಡ್‌ನ ಈ ಮಗುವಿನ ಮಿದುಳು ವಯಸ್ಸಿಗೂ ಮೀರಿ ಅಸಾಧಾರಣವಾಗಿ ಬೆಳೆಯಲಾರಂಬಿಸಿತು. ಆಗ ವೈದ್ಯರು ಆತನ ಮಿದುಳಿನಲ್ಲಿ ಸಮಸ್ಯೆ ಇದೆ ಎಂದು ಸಂದೇಹಿಸಿದರು. ಸ್ಕ್ಯಾನ್ ಮಾಡಿದಾಗ ಮಿದುಳಿನಲ್ಲಿ ಗೆಡ್ಡೆ ಕಂಡುಬಂದುದೇ ಅಲ್ಲದೆ, ಕೆಳದವಡೆಯಲ್ಲಿ ಸಾಮಾನ್ಯವಾಗಿ ಇರುವಂತಹ ಹಲ್ಲುಗಳು ಅದರಲ್ಲಿ ಕಂಡುಬಂದವು.

ಶಸ್ತ್ರಕ್ರಿಯೆ ಮಾಡಿ ಗೆಡ್ಡೆ ತೆಗೆದಾಗ ಅಲ್ಲಿಂದ ಹಲವಾರು ಹಲ್ಲು ಗಳನ್ನು ವೈದ್ಯರು ಬೇರ್ಪಡಿಸಿದರು. ಕೆಲವೊಮ್ಮೆ ಮಿದುಳಿನ ಗೆಡ್ಡೆಯಲ್ಲಿ ಹಲ್ಲುಗಳು ಇರುತ್ತವೆಯಾದರೂ ಈ ಮಗುವಿನಲ್ಲಿ ಕಂಡುಬಂದ ಗೆಡ್ಡೆಯಲ್ಲಿ (ಕ್ರೇನಿಯೋ-ರಂಜಿಯೋಮದಲ್ಲಿ) ಹಲ್ಲುಗಳು ಇರುವುದಿಲ್ಲ. ಶಸ್ತ್ರಕ್ರಿಯೆಯ ನಂತರ ಮಗು ಸಂಪೂರ್ಣವಾಗಿ ಗುಣಹೊಂದಿತು.

೬. ಶಕ್ತಿ ಕೊಡುವ ಪಾನೀಯ ತಂದ ಹೃದಯಾಘಾತ: ೨೬ ವರ್ಷದ ಈ ಯುವಕನಿಗೆ ಹೃದಯಾಘಾತವಾಯಿತು. ವೈದ್ಯರು ಕಾರಣ ಹುಡುಕಲಾಗಿ ಆತ ಶಕ್ತಿ ಕೊಡುವ ಪಾನೀಯವನ್ನು ಪ್ರತಿದಿನ ೧೦-೧೨ರಷ್ಟು ಕುಡಿಯುತ್ತಿದ್ದುದು ಗೊತ್ತಾಯಿತು. ಆ ಪಾನೀಯದಲ್ಲಿ ಜಾಸ್ತಿ ಪ್ರಮಾಣದಲ್ಲಿ ಕೆಫೀನ್‌ನ ಅಂಶವಿತ್ತು. ಹಾಗೆಯೇ ಈ ಘಟನೆಗೂ ಮೊದಲು ೨ ವರ್ಷದಿಂದಲೂ ಆತ
ಪ್ರತಿದಿನ ಒಂದು ಪ್ಯಾಕ್ ಸಿಗರೇಟ್ ಸೇದುತ್ತಿದ್ದ. ಆತನ ಪಾನೀಯದಲ್ಲಿದ್ದ ಹೆಚ್ಚಿನ ಪ್ರಮಾಣದ ಕೆಫೀನ್ ಆತನ ಕರೋನರಿ ರಕ್ತನಾಳಗಳಲ್ಲಿ ರಕ್ತದ ಹರಿವನ್ನು ಕುಂಠಿತಗೊಳಿಸಿತು. ಪರಿಣಾಮ ರಕ್ತದ ಉಂಡೆ ನಿರ್ಮಾಣವಾಗಿ ಹೃದಯಾಘಾತಕ್ಕೆ
ಕಾರಣವಾಯಿತು. ಹಾಗೆಯೇ ಆತ ಬಹಳವಾಗಿ ಸೇದುತ್ತಿದ್ದ ಸಿಗರೇಟ್‌ಗಳೂ ಈ ತೊಂದರೆ ಜಾಸ್ತಿಯಾಗಲು ಕಾರಣವಾಗಿದ್ದವು.

೭. ಕಿವಿಯ ರಿಂಗ್ ನುಂಗಿದಾಗ: ೪೧ ವರ್ಷದ ಈ ಮಹಿಳೆಗೆ ಬಹಳ ಕಾಲದಿಂದ ಅಸ್ತಮಾ ಕಾಯಿಲೆ ಇತ್ತು. ಹೊಸ ವರ್ಷದ
ಸಮಾರಂಭದ ಗಡಿಬಿಡಿಯಲ್ಲಿ ಆಕೆ ತನ್ನ ಪಸ್ ನಲ್ಲಿದ್ದ ಇನ್‌ಹೇಲರ್‌ಗೆ ಹುಡುಕಿದಳು. ನಂತರ ಗಾಳಿ ಸೇವಿಸಿದಳು. ಆಕೆ ಗಡಿಬಿಡಿಯಲ್ಲಿ ಕಿವಿಯ ರಿಂಗ್ ಸೇವಿಸಿದ್ದರಿಂದ ಅದು ಆಕೆಯ ಗಂಟಲಿನಲ್ಲಿ ಕೆರೆಯಲಾರಂಭಿಸಿ ಉಸಿರು ಕಟ್ಟುವಿಕೆ ಜಾಸ್ತಿ
ಯಾಯಿತು, ರಕ್ತವಾಂತಿಯಾಗ ತೊಡಗಿತು.

ನಂತರ ಆ ಕಿವಿಯ ರಿಂಗ್ ಆಕೆಯ ಬಲಭಾಗದ ಶ್ವಾಸನಾಳದಲ್ಲಿ ಹೋಗಿ ಕುಳಿತಿತ್ತು. ವೈದ್ಯರು ಸ್ಕೋಪಿ ಮಾಡಿ ಆ ರಿಂಗ್ ಹೊರ ತೆಗೆದರು. ಆಗ ಆಕೆಗೆ ತನ್ನ ಇನ್‌ಹೇಲರ್ ಉಪಯೋಗಿಸಿದ ನಂತರ ಅದರ ಮುಚ್ಚಳ ಸರಿಯಾಗಿ ಹಾಕಬೇಕೆಂಬ
ಜ್ಞಾನೋದಯವಾಯಿತು.

೮. ಟೀ ಕುಡಿದು ಹೆಪಟೈಟಿಸ್: ಇಂಗ್ಲೆಂಡಿನ ೧೬ ವರ್ಷದ ಈ ಹುಡುಗಿ ತೂಕ ಕಡಿಮೆ ಮಾಡಲು ಆನ್‌ಲೈನ್‌ನಲ್ಲಿ ಚೀನಾದ್ದೊಂದು ಹೇಳಲ್ಪಟ್ಟ ಗ್ರೀನ್ ಟೀಯನ್ನು ತರಿಸಿ ದಿವಸಕ್ಕೆ ಮೂರು ಕಪ್‌ನಂತೆ ಕುಡಿಯತೊಡಗಿದಳು. ೩ ತಿಂಗಳು ಗಳ ನಂತರ ಆಕೆಗೆ ಜಾಂಡೀಸ್, ಕೀಲುನೋವು, ತಲೆ ತಿರುಗುವ ಲಕ್ಷಣಗಳು ತೋರಿದವು. ಇವು ಲಿವರ್ ಅಥವಾ ಯಕೃತ್‌ನ
ತೀವ್ರ ರೀತಿಯ ಸೋಂಕು ಎಂದು ವೈದ್ಯರು ಗುರುತಿಸಿದರು. ಆ ಟೀಯಲ್ಲಿರುವ ಪದಾರ್ಥ ಗಳೆಲ್ಲ ಚೀನಿ ಭಾಷೆಯಲ್ಲಿ ಮುದ್ರಿತವಾಗಿದ್ದರಿಂದ ವೈದ್ಯರಿಗೂ ಅವುಗಳ ವಿವರ ಗೊತ್ತಾಗಲಿಲ್ಲ.

ಹೌದು ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು. ಶ್ವಾಸಕೋಶದ ಕ್ಯಾನ್ಸರ್ ಬರದಿರುವಂತೆ ನೋಡಿಕೊಳ್ಳುತ್ತದೆ ಹಾಗೂ ಮಿದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಆದರೆ ಮಿತಿಮೀರಿ ಅದನ್ನು ಸೇವಿಸಿದರೆ ಅದರಿಂದ ಹಾನಿಯೇ ಸರಿ ಎಂದು ಮೇಲಿನ ಉದಾಹರಣೆಯಲ್ಲಿ ದೃಢಪಟ್ಟಿತು. ಆಕೆ ಆ ಟೀ ಸೇವಿಸುವುದನ್ನು ನಿಲ್ಲಿಸಿ ಕೆಲವೇ ದಿನಗಳ ನಂತರ ಆಕೆಯ ರೋಗಲಕ್ಷಣಗಳು ಮಾಯವಾದವು, ಆಕೆಯ ಆರೋಗ್ಯ ವೃದ್ಧಿಸಿತು.

೯. ಬೇಕಿಂಗ್ ಸೋಡಾಕ್ಕೆ ಹಪಹಪಿಕೆ: ಗರ್ಭಿಣಿಯರಿಗೆ ಅಪರೂಪದ ಬಯಕೆ ಬರುವುದು ಸಾಮಾನ್ಯ. ಆದರೆ ಅಸಾಮಾನ್ಯ ವಾದ ಬಯಕೆ ಬಂದು ತಿನ್ನಬಾರದ ವಸ್ತುವನ್ನು ಅನಿಮಿಯತವಾಗಿ ತಿನ್ನುತ್ತಾ ಹೋದರೆ ಅಪಾಯವೇ ಸರಿ. ಈ ಗರ್ಭಿಣಿ ದಿವಸಕ್ಕೆ ಒಂದು ಪೌಂಡ್ ಬೇಕಿಂಗ್ ಸೋಡಾವನ್ನು ಗರ್ಭ ಧರಿಸುವ ಮೊದಲು ಮತ್ತು ನಂತರ ಕೂಡಾ ತಿನ್ನುತ್ತಾ ಹೋದಳು. ನಂತರ ಆಕೆಗೆ ಹೃದಯದ ಮತ್ತು ಮಾಂಸಖಂಡಗಳ ಗಂಭೀರವಾದ ಸಮಸ್ಯೆಗಳು ಆರಂಭವಾದವು. ಈ ಬಗೆಗೆ ಸೀ ರೋಗ ತಜ್ಞರ ಜರ್ನಲ್‌ನಲ್ಲಿ ೨೦೧೩ರಲ್ಲಿ ಪ್ರಕಟವಾಯಿತು. ಈ ರೀತಿಯ ಬಯಕೆ ಗರ್ಭಿಣಿಯರಲ್ಲಿ ಸಾಮಾನ್ಯ ಎಂದು ವೈದ್ಯರು ಅಭಿಪ್ರಾಯಪಟ್ಟರು. ಸಾಮಾನ್ಯವಾಗಿ ಈ ತರಹದ ಬಯಕೆ ಇರುವವರು, ಆಹಾರವಲ್ಲದ ವಸ್ತುಗಳಾದ ಮಣ್ಣು, ಬೇಕಿಂಗ್ ಪೌಡರ್, ಜೇಡಿಮಣ್ಣು ಇತ್ಯಾದಿಗಳನ್ನು ತಿನ್ನಲು ಬಯಸುತ್ತಾರೆ.

ಬೇಕಿಂಗ್ ಸೋಡಾದಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಬೈಕಾರ್ಬೋನೇಟ್ ಇರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸಿದಾಗ ದೇಹದ ಮೆಟಬಾಲಿಕ್ ವ್ಯವಸ್ಥೆಯನ್ನು ಅದು ಏರುಪೇರು ಮಾಡುತ್ತದೆ. ಗರ್ಭಿಣಿಯರಲ್ಲಿ ಇದು ಹೃದಯದ ಮತ್ತು ಇತರ ಭಾಗಗಳ ಮಾಂಸಖಂಡಗಳನ್ನು ನಿಶ್ಶಕ್ತಗೊಳಿಸುತ್ತದೆ.

error: Content is protected !!