Tuesday, 23rd April 2024

ತೂಗುಮಂಚದಲ್ಲಿ ಕೂತು…ತೂಗುವಿಕೆಯದೇ ಮಾತು

ತಿಳಿರು ತೋರಣ

srivathsajoshi@yahoo.com

ಒಂದು ಸ್ವಾರಸ್ಯವನ್ನು ನಾನು ಅಮೆರಿಕದಲ್ಲಿಯೂ ಗಮನಿಸಿದ್ದೇನೆ. ಪರಸ್ಪರ ಕುಶಲ ವಿಚಾರಣೆಯ ‘ಹೌ ಆರ್ ಯೂ?’ ಪ್ರಶ್ನೆಗೆ ಇಲ್ಲಿ ಕೆಲವರು ‘ಜಸ್ಟ್ ಹ್ಯಾಂಗಿಂಗ್ ಇನ್ ದೇರ್’ ಎಂದು ಉತ್ತರಿಸುವುದುಂಟು. ಅದೂ ಈಗಿನ ಕೋವಿಡೋತ್ತರ ಕಾಲದಲ್ಲಂತೂ ‘ಸದ್ಯ ಏನೋ ನೇತಾಡಿಕೊಂಡು ಇದ್ದೇವೆ’ ಎಂಬಂತೆಯೇ ಮಾತನಾಡುತ್ತಾರೆ. ಅಂದರೆ ಅವರು ನಿರಾಶಾವಾದಿಗಳೆಂದಲ್ಲ. ಹತಾಶೆಯಿಂದ ಆ ರೀತಿ ಹೇಳುತ್ತಿರುವುದೆಂದೇನಲ್ಲ.

‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ ಜೋ ಜೋಜೋ ಜೋ…’ ಎಂದು ಲಾಲಿ ಹಾಡುತ್ತ ಅಮ್ಮ ಮಗುವನ್ನು ತೊಟ್ಟಿಲಲ್ಲಿಟ್ಟು ತೂಗುತ್ತಾಳೆ. ತೊಟ್ಟಿಲಲ್ಲಿರುವ ಮಗು ಏಕೆ ಅತ್ತಿತ್ತ ನೋಡುತ್ತದೆ? ಮತ್ತ್ಯಾಕೆ, ಅಮ್ಮನನ್ನೇ ನಿರಂತರವಾಗಿ ನೋಡುತ್ತಿರಲಿಕ್ಕೆ!

ತೊಟ್ಟಿಲನ್ನು ತೂಗುವ ಪ್ರಕ್ರಿಯೆಯು ಮಗು ಅತ್ತಿತ್ತ ನೋಡುವುದನ್ನು ಅವಶ್ಯವಾಗಿಸು ತ್ತದೆ. ತೊಟ್ಟಿಲಿನ ಜೀಕು ಆ ಕಡೆಗೆ, ಅಮ್ಮನಿಂದ ದೂರ ಸಾಗಿದಾಗ, ಅಮ್ಮ ಇದ್ದಾಳೆ ತಾನೆ ಎಂದು ದೃಢಪಡಿಸಿಕೊಳ್ಳಲಿಕ್ಕೆ ಮಗು ಇತ್ತ ನೋಡುತ್ತದೆ. ಜೀಕು ಈ ಕಡೆಯ ತುದಿಗೆ ಬಂದಾಗ ಮಗು ಮತ್ತೆ ಇನ್ನೊಂದು ಬದಿಗೆ, ಅಮ್ಮ ನಿಂತಿರುವತ್ತ, ನೋಡುತ್ತದೆ. ತೂಗುವ ಪ್ರಕ್ರಿಯೆಯ ಮೂಲ ಸಿದ್ಧಾಂತವೇ ಅದು: ಒಮ್ಮೆ ಆಕಡೆಗೆ ಒಮ್ಮೆ ಈಕಡೆಗೆ.

ಆದರೆ, ತೂಗುವುದನ್ನು ನಾವು ಭಾವನಾತ್ಮಕವಾಗಿಯಷ್ಟೇ ನೋಡುತ್ತೇವೆ, ಎಲ್ಲಿಯವ ರೆಗೆಂದರೆ ಮಗುವನ್ನಷ್ಟೇ ಅಲ್ಲ, ದೇವರನ್ನೂ ಮಗು ಎಂದು ಪರಿಗಣಿಸಿ ತೂಗುತ್ತೇವೆ. ‘ಪಾಲಗಡಲೊಳು ಪವಡಿಸಿದವನೇ… ಆಲದೆಲೆಯ ಮೇಲೆ ಮಲಗಿದ ಶಿಶುವೇ… ಶ್ರೀಲಲಿತಾಂಗಿಯರ ಚಿತ್ತದೊಲ್ಲಭನೇ… ಬಾಲ ನಿನ್ನನು ಪಾಡಿ ತೂಗುವೆನಯ್ಯ…’ ಎಂದು ಜೋಗುಳ ಹಾಡಿ ತೂಗುತ್ತೇವೆ. ‘ತೂಗಿರೇ ರಂಗನ ತೂಗಿರೇ ಕೃಷ್ಣನ ತೂಗಿರೆ ಅಚ್ಯುತಾ ನಂತನ…’ ಎನ್ನುತ್ತ ಬೇರೆಯವರೂ ತೂಗುವಂತೆ ಕೇಳಿಕೊಳ್ಳುತ್ತೇವೆ.

ಬಾಲಕೃಷ್ಣನನ್ನಷ್ಟೇ ಅಲ್ಲ, ರಾಘವೇಂದ್ರ ಸ್ವಾಮಿಗಳನ್ನೂ! ‘ತೂಗಿರೇ ರಾಯರ ತೂಗಿರೇ ಗುರುಗಳ ತೂಗಿರೇ ಯತಿಕುಲ ತಿಲಕರ… ತೂಗಿರೇ ಯೋಗೇಂದ್ರ ಕರಕಮಲ ಪೂಜ್ಯರ ತೂಗಿರೇ ಗುರು ರಾಘವೇಂದ್ರರ…’ ಕವಿ ಎಸ್.ವಿ. ಪರಮೇಶ್ವರ ಭಟ್ಟರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ‘ತಿಳಿಮುಗಿಲ ತೊಟ್ಟಿಲಲಿ ಮಲಗಿರುವ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು…’ ಎಂಬ ಅದ್ಭುತ ಕಲ್ಪನೆ ಮಾಡಿದ್ದಾರೆ.

ಇನ್ನೊಂದು ಅದ್ಭುತ ಕವಿಕಲ್ಪನೆ ನನಗೆ ತುಂಬ ಇಷ್ಟವಾದದ್ದು ಡಿ.ಎಸ್.ಕರ್ಕಿಯವರು ರಚಿಸಿದ ‘ತೂಗು ಬಾ ತೊಟ್ಟಿಲನು ತಾಯೇ ಮತ್ತೊಮ್ಮೆ ತೂಗು ತೊಟ್ಟಿಲನು ನೀನೇ…’ ಭಾವಗೀತೆಯಲ್ಲಿ. ಬೇರೆಲ್ಲ ಪದ್ಯಗಳು ಅಮ್ಮನು ಮಗುವನ್ನು ತೂಗುತ್ತ ಹೇಳುವುದಾದರೆ ಇದು ಮಗುವೇ ಅಮ್ಮನಿಗೆ ಹೇಳುವ ಪದ್ಯ. ತನ್ನನ್ನು ತೂಗುವಂತೆ ಡಿಮ್ಯಾಂಡ್ ಮಾಡುವ ಪದ್ಯ!

ಆಗಲೇ ಹೇಳಿದಂತೆ, ತೂಗುವಿಕೆಯನ್ನು ನಾವು ಭಾವನಾತ್ಮಕವಾಗಿಯಷ್ಟೇ ನೋಡುತ್ತೇವೆ. ಆದರೆ ತೂಗುವ ಕ್ರಿಯೆಯಲ್ಲಿ
ಅಡಕವಾಗಿರುವ ಚಲನಶಾಸ್ತ್ರವನ್ನೂ ಗಮನಿಸಿದರೆ ಅನನ್ಯವಾದ ಪ್ರಪಂಚವೊಂದು ತೆರೆದುಕೊಳ್ಳುತ್ತದೆ ನಮ್ಮ ಯೋಚನಾ ಲಹರಿ ಯೆದುರಿಗೆ. ಇಲ್ಲಿ ತೂಗುವುದೆಂದರೆ ತೊಟ್ಟಿಲನ್ನು ತೂಗುವುದಷ್ಟೇ ಅಲ್ಲ, ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು ಆಕೆ ನಾಚುವ ಏನೋ ಮಾತು ಆಡುವುದಷ್ಟೇ ಅಲ್ಲ, ಬಾಗು ಚಂದ್ರನ ತೂಗು ಮಂಚಕೇ ಬಾ ಚಕೋರಿ ಬಾ ಎಂದು ಕರೆಯುವುದಷ್ಟೇ ಅಲ್ಲ; ಆತ್ಮನೇಪದಿಯಾಗಿಯೂ ‘ತೂಗು’ ಕ್ರಿಯೆಯನ್ನು ಗಮನಿಸಬೇಕು.

ಅಂದರೆ ಯಾವುದೇ ನಿರ್ಜೀವ ವಸ್ತು ಅಥವಾ ಸ್ವಂತ ಚಲನೆಯಿಲ್ಲದ ಸಜೀವ ವಸ್ತುವೂ ‘ತೂಗು’ತ್ತದಲ್ಲ, ಅದನ್ನು. ಬೆಸ್ಟ್ ಉದಾಹರಣೆಯೆಂದರೆ ಚೆಂದುಳ್ಳಿ ಚೆಲುವೆ ಹೆಣ್ಣಿನ ಕಿವಿಗಳ ಅಲಂಕಾರವಾಗಿ ತೂಗುವ ಝುಮಕಿಗಳು. ‘ಝುಮ್ಕಾ ಗಿರಾ ರೇ ಬರೈಲಿ ಕೀ ಬಜಾರ್ ಮೇ’ ಹಿಂದೀ ಹಾಡನ್ನೂ ‘ಮೂಗುತಿ ಮುತ್ತು ಚಂದ ವಾಲೆ ಝುಮಕಿ ಗತ್ತು ಚಂದ…’ ಕನ್ನಡ ಹಾಡನ್ನೂ ನೆನಪಿಸುವ ಅದೇ ಝುಮಕಿ, ಲೋಲಾಕು.

ಅಂದಹಾಗೆ- ವಿಷಯಾಂತರ ಅಲ್ಲ, ಉತ್ತರ ಪ್ರದೇಶದ ಬರೈಲಿಯಲ್ಲಿ ೧೪ ಅಡಿ ಎತ್ತರದ, ಸ್ವರ್ಣಲೇಪದ ಝುಮಕಿ ಪ್ರತಿಕೃತಿ ಯೊಂದನ್ನು ಸ್ಮಾರಕವೆಂಬಂತೆ ನಿಲ್ಲಿಸಿದ್ದಾರಂತೆ, ಮೇರಾ ಸಾಯಾ ಚಿತ್ರದ ಗೀತೆಯಿಂದ ಝುಮ್ಕಿಗೂ ಬರೈಲಿಗೂ ಅವಿನಾಭಾವ ಸಂಬಂಧ ಹುಟ್ಟಿಕೊಂಡಿದ್ದರ ನೆನಪಿಗೆ. ಇನ್ನು, ಸ್ವಂತ ಚಲನೆಯಿಲ್ಲದ ಸಜೀವ ವಸ್ತು ತೂಗುವುದಕ್ಕೆ ಚಿತ್ರಗೀತೆಗಳಿಂದಲೇ ಉದಾಹರಣೆ ಬೇಕಿದ್ದರೆ- ಪರಸಂಗದ ಗೆಂಡೆತಿಮ್ಮನ ‘ತೇರಏರಿ ಅಂಬರದಾಗೆ ನೇಸರ ನಗುತಾನೆ ಮರಗಿಡ ತೂಗ್ಯಾವೇ ಹಕ್ಕಿ ಹಾಡ್ಯಾವೇ…’, ಗಂಧದ ಗುಡಿಯ ‘ಮುಗಿಲನು ಚುಂಬಿಸೋ ಆಸೆಯಲಿ ತೂಗಾಡುತ ನಿಂತ ಮರಗಳಲಿ…’, ಮತ್ತು ಸ್ಪಂದನ ಚಿತ್ರದ ‘ಮಾಗಿಯ ಎದೆ ತೂರಿ ಕೂಗಿತೊ ಕೋಗಿಲ ರಾಗದ ಚಂದಕೆ ಬಾಗಿತೊ ಬನವೆಲ್ಲ ತೂಗುತ ಬಳ್ಳಿ ಮೈಯನ್ನ…’ ಮರಗಿಡ ಬಳ್ಳಿಗಳಷ್ಟೇ ಏಕೆ, ಮನುಷ್ಯರಾದ ನಾವೂ ತಲೆದೂಗುತ್ತೇವಷ್ಟೆ? ಸಮ್ಮತಿ ಸೂಚಿಸಲಿಕ್ಕೆ, ಮೆಚ್ಚುಗೆ ಸೂಚಿಸಲಿಕ್ಕೆ ‘ತಲೆದೂಗು ವುದು’ ಎಂದೇ ಹೇಳುತ್ತೇವೆ, ನಿಜವಾಗಿ ತಲೆಯನ್ನು ಒಂದಿನಿತೂ ಅತ್ತಿತ್ತ ಅಲ್ಲಾಡಿಸದಿದ್ದರೂ!

ತಲೆದೂಗಿದಂತೆಯೇ ಕೈ ತೂಗುವುದು, ಬೆರಳು ತೂಗುವುದು ಮುಂತಾದ ಪದಬಳಕೆಯೂ ಇದೆ, ಮುಖ್ಯವಾಗಿ ಹಳೆಯ ಕಾವ್ಯ ಗಳಲ್ಲಿ. ‘ಬೆರಳ ತೂಗಿದನಡಿಗಡಿಗೆ ಹಲ| ಧರನುದಗ್ರಗದಾ ವಿಧಾನಕೆ| ಶಿರವನೊಲೆದನು ಶೌರಿ ಮಿಗೆ ಮೆಚ್ಚಿದನು ಯಮಸೂನು|’
ಎನ್ನುತ್ತಾನೆ ಕುಮಾರವ್ಯಾಸ. ಭೀಮ ದುರ್ಯೋಧನರ ಹೋರಾಟವನ್ನು ನೋಡುತ್ತಿದ್ದ ಹಲಧರ ಬಲರಾಮನು ಮೆಚ್ಚಿ
ಅಡಿಗಡಿಗೆ ಬೆರಳ ತೂಗಿದನಂತೆ. ಇನ್ನೊಂದು ಪದ್ಯದಲ್ಲಿ ‘ಮನದ ಬಗೆ ಮುಟ್ಟದ ಮಹಾಮಹಿ| ಮನನು ಕಟ್ಟುವೆ ವೆಂತೆನುತೆ ತಮ| ತಮಗೆ ಕರ್ಣಾದಿಗಳು ಕೈಗಳ ಕದಪ ತೂಗಿದರು…’ ಮನಸ್ಸನ್ನು ಮುಟ್ಟದ ಆ ಮಹಾಮಹಿಮನನ್ನು (ಕೃಷ್ಣನನ್ನು) ಕಟ್ಟುವುದಾ ದರೂ ಹೇಗೆ ಎಂದು ಕರ್ಣಾದಿಗಳು ತಮ್ಮ ಕೈಗಳನ್ನು ಕೆನ್ನೆಯಮೇಲಿಟ್ಟು ಅತ್ತಿಂದಿತ್ತ ತೂಗಿದರಂತೆ, ಅಂದರೆ ಯೋಚನೆ ಮಾಡತೊಡಗಿದರಂತೆ.

ಕೀಚಕವಧೆಗೆ ಮುನ್ನ ದ್ರೌಪದಿ ಭೀಮನಿದ್ದಲ್ಲಿಗೆ ಹೋಗುವಾಗ- ‘ನಿಳಯವನು ಹೊರವಂಟು ಕಂಗಳ| ಬೆಳಗು ತಿಮಿರವ ಕೆಡಿಸೆ ಕಂಕಣ| ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ…’ ತನ್ನ ಮನೆಯಿಂದ ರಾತ್ರಿಯಲ್ಲಿ ಹೊರಟ ದ್ರೌಪದಿಯ ಕಣ್ಣುಗಳ ಕಾಂತಿ ಕತ್ತಲೆಯನ್ನು ಹೋಗಲಾಡಿಸುವಂತಿತ್ತು, ಅವಳಿಗೆ ಅದೇ ಬೆಳಕು. ಕಂಕಣದಿಂದ ಇಂಪಾದ ಝೇಂಕೃತಿ ಯೊಡನೆ, ಬಳ್ಳಿಯಂತಿರುವ ತೋಳನ್ನು ಬೀಸುತ್ತ ಅವಳು ಸಾಗಿದಳು.

ಅದೇ ದ್ರೌಪದಿ ಹಿಂದೊಮ್ಮೆ ತನ್ನ ಗಂಡಂದಿರನ್ನೆಲ್ಲ ಮೂದಲಿಸಿದಾಗ ‘ಆದೊಡಿದೆ ಕುರುರಾಜ ವಂಶ| ಚ್ಛೇದ ಧೀರ ಕುಠಾರ ವೆನುತವೃ| ಕೋದರನು ತೂಗಿದನು ಗದೆಯನು ಗಾಢಕೋಪದಲಿ…’ ಹಂಗಿನ ಆ ನುಡಿಯನ್ನು ಕೇಳಿದ ಭೀಮನು ಅತೀವ
ಕೋಪಗೊಂಡು ಗದೆಯನ್ನು ತಿರುಗಿಸುತ್ತಾ ಹಾಗಾದರೆ ಕೌರವ ವಂಶವನ್ನು ಕತ್ತರಿಸುವ ಪರಾಕ್ರಮಶಾಲಿಯಾದ ಕೊಡಲಿಯಿದು
ಎಂದು ತೋರಿಸಿದ್ದನು. ಇಲ್ಲೆಲ್ಲ ತೂಗು ಎಂಬುದಕ್ಕೆ ಬೀಸು, ತಿರುಗಿಸು, ಅಲ್ಲಾಡಿಸು ಎಂಬ ಅರ್ಥಗಳು.

ಇರಲಿ, ಕಾವ್ಯವಾಚನದಷ್ಟು ಆಳವಾಗಿ ಹೋಗಬೇಕಿಲ್ಲ. ತೂಗುವ ಪ್ರಕ್ರಿಯೆ ನಮಗೆ ಎಲ್ಲೆಲ್ಲೂ ಕಂಡುಬರುತ್ತದೆ, ನೋಡುವ ಕಣ್ಣಿದ್ದರೆ, ಗಮನಿಸುವ ಆಸಕ್ತಿಯಿದ್ದರೆ. ನನ್ನ ನೆಚ್ಚಿನ ಕಲಾವಿದ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೊಫೋನ್ ವಾದನವನ್ನು ಕೇಳುವುದರಲ್ಲಿರುವಷ್ಟೇ ಆಸಕ್ತಿ ಕುತೂಹಲ ನನಗೆ ಅವರ ಸ್ಯಾಕ್ಸೊಫೋನ್ ವಾದ್ಯದ ಸಿಂಗಾರವನ್ನು ಗಮನಿಸುವುದರಲ್ಲೂ. ಅದರ ಕೊರಳಲ್ಲಿ ಒಂದೆರಡು ಬಂಗಾರದ ಬಿಲ್ಲೆ ಅಥವಾ ಪದಕಗಳಂಥವು ತೂಗುತ್ತಿರುತ್ತವೆ.

ಅಷ್ಟೇಅಲ್ಲ, ಸ್ಯಾಕ್ಸೊಫೋನ್‌ನ ತೆರೆದ ಬಾಯಿಯ ಸುತ್ತ ಚಿಕ್ಕಚಿಕ್ಕ ಝಮುಕಿಗಳು ತೂಗುತ್ತಿರುತ್ತವೆ. ಸಂಗೀತದ ರಸಧಾರೆ ಹರಿಸುವುದರಲ್ಲಿ ತಲ್ಲೀನರಾಗುವ ಕದ್ರಿ ಒಂಥರದ ಆವೇಶ-ಉನ್ಮಾದಗಳಿಂದ ಸ್ಯಾಕ್ಸೊಫೋನ್ ನುಡಿಸುವಾಗ, ಕುಳಿತಲ್ಲಿಂದಲೇ ಶರೀರವನ್ನು ಆಚೀಚೆ ಓಲಾಡಿಸುವಾಗ, ವಾದ್ಯಕ್ಕೆ ತೊಡಿಸಿದ ಆ ಆಭರಣಗಳೂ ಥಳುಕಿನಿಂದ ಬಳುಕುತ್ತ ನಲಿಯುತ್ತಿರುತ್ತವೆ! ಕದ್ರಿಯವರು ಮಾಡುವಷ್ಟಲ್ಲದಿದ್ದರೂ ನಾನು ಗಮನಿಸಿರುವಂತೆ ನಾದಸ್ವರ, ಶಹನಾಯ್, ಕ್ಲಾರಿನೆಟ್ ನುಡಿಸುವವರೂ ತಮ್ಮ ವಾದ್ಯಕ್ಕೊಂದು ಚಂದದ ಕೆಂಪುನೂಲನ್ನೋ ಮತ್ತೇನನ್ನೋ (ವಾದ್ಯ ನುಡಿಸುವಾಗ ಬೇರೆಬೇರೆ ಶ್ರುತಿಗಳಿಗೆ ಬೇಕಾಗುವ ಕೊಳವೆಗಳೂ ಇರಬಹುದು) ತೂಗಿಸಿರುತ್ತಾರೆ.

ಉದ್ದೇಶ ಅದೇ- ವಾದ್ಯ ಆಚೀಚೆ ಓಲಾಡುತ್ತಿದ್ದಂತೆ ಆ ತೂಗುಮಾಲೆಯೂ ಬಳುಕುತ್ತದೆ, ಕಲಾವಿದ ತನ್ನ ಕಲೆಯನ್ನು ಪ್ರಸ್ತುತಪಡಿಸುವ ವಾತಾವರಣದ ಒಟ್ಟಂದಕ್ಕೆ ಮತ್ತಷ್ಟು ಮೆರುಗು ಬರುತ್ತದೆ. ಸ್ವಾರಸ್ಯವೆಂದರೆ ಅದೇ ಮೆರುಗು ಅದೇ ಅಂದ, ಸಾಕ್ಷಾತ್ ಕೃಷ್ಣಪರಮಾತ್ಮ ಕೊಳಲು ನುಡಿಸುವಾಗಲೂ ಕಂಡುಬರುತ್ತದೆಯಂತೆ. ಆದರೆ ಅಲ್ಲಿ ಆಭರಣ ತೊಡಿಸಿರುವುದು ಕೊಳಲಿಗಷ್ಟೇ ಅಲ್ಲ, ಕೃಷ್ಣನ ಕೊರಳಲ್ಲಿರುವ ಕೌಸ್ತುಭಮಣಿಯೂ ಅತ್ತಿಂದಿತ್ತ ಓಲಾಡುವುದು, ತೂಗುವುದು.

‘ಶಿಸ್ತಿಲಿ ಕೊಳಲ ಊದುವ ಓರೆನೋಟ… ಕೌಸ್ತುಭ ಎಡಬಲದಲಿ ಓಲ್ಯಾಟ… ಕೃಷ್ಣ ಮೂರ್ತಿ ಕಣ್ಣಮುಂದೆ ನಿಂತಿದಂತಿದೆ…’
ಎಂದು ಪುರಂದರದಾಸರು ಕೊಂಡಾಡಿದ್ದು ಅದನ್ನೇ. ನಿಮ್ಮೂರಿನ ಅಥವಾ ನೀವು ನೋಡಿದ ಒಂದು ರಥೋತ್ಸವವನ್ನು ನೆನಪಿಸಿಕೊಳ್ಳಿ. ಅಂದವಾಗಿ ಸಿಂಗರಿಸಿದ ರಥದ ಚಿತ್ರಣವನ್ನು ಒಮ್ಮೆ ನಿಮ್ಮ ಮನಸ್ಸಿನಲ್ಲಿ ತಂದುಕೊಳ್ಳಿ. ಬಣ್ಣಬಣ್ಣದ ಪತಾಕೆಗಳು, ಹೂಮಾಲೆಗಳು, ಬೆಂಡುಬತ್ತಾಸಿನಿಂದ ಮಾಡಿದ ಹೂಚೆಂಡುಗಳು, ಹೂವಿನ ಗೊಂಚಲುಗಳು… ರಥ ನಿಧಾನವಾಗಿ ಮುಂದೆ ಸಾಗುವಾಗ ಅವು ಬಳುಕುವ ಪರಿ ಎಷ್ಟು ಸೊಗಸಲ್ಲವೇ? ಕೆಲವರಿಗೆ ಆಗಲೇ ಮೈಸೂರಿನ ದಸರಾ ಮೆರವಣಿಗೆಯಲ್ಲಿ ಪಟ್ಟದಾನೆಯ ಮೇಲೆ ಚಿನ್ನದ ಅಂಬಾರಿಯ ದೃಶ್ಯ, ಆನೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದಂತೆ ಓಲಾಡುವ ಅಂಬಾರಿಯ ಅಲಂಕಾರಗಳೂ ಕಣ್ಮುಂದೆ ಸುಳಿದಿರಬಹುದು.

ಇಲ್ಲಿರುವುದೂ ತೂಗುವ ಪ್ರಕ್ರಿಯೆಯೇ. ಮತ್ತೆ, ಪ್ರಾಚೀನ ವಿಶ್ವದ ಏಳು ಅದ್ಭುತಗಳ ಪೈಕಿ ಒಂದೆಂದು ಗುರುತಿಸಲ್ಪಟ್ಟ ಬ್ಯಾಬಿಲೋನ್‌ನ ತೂಗುತೋಟವನ್ನೂ ನೆನಪಿಸಿಕೊಳ್ಳಬಹುದು. ಅಲ್ಲಿ ಗಿಡಮರಬಳ್ಳಿಗಳೆಲ್ಲ ಆಕಾಶದಿಂದ ತೂಗುತ್ತಿವೆಯೇನೋ
ಎಂದು ಭಾಸವಾಗುತ್ತದಂತೆ. ಹಾಗೆಯೇ ಚೈನಾ ದೇಶದಲ್ಲಿರುವ ಒಂದು ತೂಗುದೇವಾಲಯ ಅಥವಾ ಹ್ಯಾಂಗಿಂಗ್ ಟೆಂಪಲ್.
ಸುಮಾರು ೧೪೦೦ ವರ್ಷಗಳಷ್ಟು ಹಿಂದೆ ಲಿಯಾವೊ ರಾನ್ ಎನ್ನುವ ಬೌದ್ಧಭಿಕ್ಷು ಅದನ್ನು ಕಟ್ಟಿಸಿದನಂತೆ.

ಬೆಟ್ಟವನ್ನೇ ಕೊರೆದು ಕಲ್ಲಿನ ಕಂಬಗಳನ್ನು ಭೂಮಟ್ಟಕ್ಕೆ ಸಮಾಂತರದಲ್ಲಿ ಅಡ್ಡವಾಗಿ ತೂರಿಸಿ ಅವುಗಳ ಸುತ್ತ ಮರಮಟ್ಟುಗಳ ಫ್ರೇಮ್‌ವರ್ಕ್ ಮಾಡಿ ಅದನ್ನು ರಚಿಸಿದ್ದೆನ್ನಲಾಗಿದೆ. ದೂರದಿಂದ ನೋಡಿದರೆ ಮನೆಯ ಛಾವಣಿಗೆ ತೂಗಿಸಿಟ್ಟ ಆಕಾಶದೀಪ (ಗೂಡುದೀಪ)ದಂತೆ ಕಾಣಿಸುತ್ತದಂತೆ ಆ ತೂಗುದೇವಾಲಯ. ತೂಗುವ ಈಎಲ್ಲ ಉದಾಹರಣೆಗಳನ್ನು ನೆನಪಿಸಿಕೊಂಡ ಮೇಲೆ ಈ ಒಂದು ವಿಚಾರವನ್ನು ನಿಮ್ಮ ಚಿಂತನೆಗೆ ತರುತ್ತಿದ್ದೇನೆ.

ಏನೆಂದರೆ, ಯಾವುದೇ ವಸ್ತುವಾದರೂ ನೆಲದ ಮೇಲೆ ತಟಸ್ಥವಾಗಿ ಇರುವ ಸ್ಥಿತಿಗಿಂತ ದಾರ/ಹಗ್ಗ/ಸರಪಳಿ ಅಥವಾ ಇನ್ನಾವುದೇ ಆಧಾರದಿಂದ ತೂಗುತ್ತ ಇದ್ದರೆ ಅದಕ್ಕೆ ಆಲಂಕಾರಿಕ ಅಂದ ಬಂದುಬಿಡುತ್ತದೆ. ಅದು ಚಲನಶೀಲತೆಯ ದ್ಯೋತಕವೂ
ಆಗಿಬಿಡುತ್ತದೆ. ಬಹುಶಃ ಅದೇ ಕಾರಣದಿಂದಿರಬಹುದು ಎಲ್ಲ ಸಂಸ್ಕೃತಿಗಳಲ್ಲೂ ಡೆಕೊರೇಶನ್ ಎಂದರೆ ಅಲ್ಲಿ ಹ್ಯಾಂಗಿಂಗ್ಸ್
ಅಥವಾ ತೂಗಾಡುವ ವಸ್ತು-ವಿನ್ಯಾಸಗಳು ಇದ್ದೇಇರುತ್ತವೆ. ಆ ತೂಗುವಿಕೆಯಲ್ಲೇ ಒಂದು ಗಹನವಾದ ಪಾರಮಾರ್ಥಿಕ ತತ್ತ್ವವೂ ಅಡಗಿರುತ್ತದೆ. ನಾವೆಲ್ಲರೂ ‘ಊಪರ್‌ವಾಲಾ’ ಭಗವಂತನ ನಿಯಂತ್ರಣದಲ್ಲಿರುವ ಸೂತ್ರದ ಗೊಂಬೆಗಳು.

ಆತನ ಇಚ್ಛೆ ಇರುವಲ್ಲಿಯವರೆಗೂ ತೂಗಾಡಿಕೊಂಡು ಚಲನಶೀಲರಾಗಿರುತ್ತೇವೆ. ಆಡಿಸುವಾತ ಬೇಸರ ಮೂಡಿ ಆಟ ನಿಲ್ಲಿಸಿದರೆ, ಸೂತ್ರವ ಹರಿದು ಬೊಂಬೆಯ ಮುರಿದು ಮಣ್ಣಾಗಿಸಿದರೆ… ಆಗ ಆಟ ಮುಗಿದು ಹೋಗಿರುತ್ತದೆ. ಇದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರವೆಂದಲ್ಲ, ಇದಕ್ಕೆ ಸಂಬಂಧಿಸಿದಂತೆ ಒಂದು ಸ್ವಾರಸ್ಯವನ್ನು ನಾನು ಅಮೆರಿಕದಲ್ಲಿಯೂ ಗಮನಿಸಿದ್ದೇನೆ. ಪರಸ್ಪರ ಕುಶಲ ವಿಚಾರಣೆಯ ‘ಹೌ ಆರ್ ಯೂ?’ ಪ್ರಶ್ನೆಗೆ ಇಲ್ಲಿ ಕೆಲವರು ‘ಜಸ್ಟ್ ಹ್ಯಾಂಗಿಂಗ್ ಇನ್ ದೇರ್’ ಎಂದು ಉತ್ತರಿಸುವು ದುಂಟು.

ಅದೂ ಈಗಿನ ಕೋವಿಡೋತ್ತರ ಕಾಲದಲ್ಲಂತೂ ‘ಸದ್ಯ ಏನೋ ನೇತಾಡಿಕೊಂಡು ಇದ್ದೇವೆ’ ಎಂಬಂತೆಯೇ ಮಾತನಾಡುತ್ತಾರೆ.
ಅಂದರೆ ಅವರು ನಿರಾಶಾವಾದಿಗಳೆಂದಲ್ಲ. ಹತಾಶೆಯಿಂದ ಆ ರೀತಿ ಹೇಳುತ್ತಿರುವುದೆಂದೇನಲ್ಲ. ಹಾಗಾದರೆ ಹ್ಯಾಂಗಿಂಗ್ ಇನ್
ದೇರ್ ಅಂದರೇನರ್ಥ? ಅದೇ, ‘ಏನೋ ದೇವರು ಇದುವರೆಗೂ ನಡೆಸಿಕೊಂಡುಬಂದಿದ್ದಾನೆ, ದೇವರು ದೊಡ್ಡವನು’ ಎಂದು.
ಬ್ರಹ್ಮಾಂಡವೇ ಆ ದೇವನಾಡುವ ಬೊಂಬೆಯಾಟವಯ್ಯಾ ಎಂದರೂ ಅದೇ ತಾನೆ ಅರ್ಥ? ಅಥವಾ, ಇನ್ನೂ ಗಹನ ಚಿಂತನೆ
ಬೇಕಿದ್ದರೆ ಮೃತ್ಯುಂಜಯ ಮಹಾಮಂತ್ರದ ಸಾಲು ‘ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ…’ -ಬಳ್ಳಿಗೆ ತೂಗಿ ಕೊಂಡಿರುವ ಮುಳ್ಳುಸೌತೆಕಾಯಿಗಳಂತೆ ನಾವೆಲ್ಲ!

ಹಾಗಾಗಿ, ಜೀವ/ಜೀವನ ಸಂಕೇತವಾಗಿ ಆಲಂಕಾರಿಕ ತೂಗುತೋರಣಗಳ ಬಳಕೆ ಶುರುವಾದದ್ದಿರಬಹುದು ಎಂದು ನನಗನಿ ಸುತ್ತದೆ. ಅದು, ಹಿಂದೂಗಳು ಮನೆಯ ಮುಂಬಾಗಿಲಿಗೆ ಕಟ್ಟುವ ಮಾವಿನೆಲೆಯ ತೋರಣವಿರಬಹುದು, ಕ್ರೈಸ್ತ ಧರ್ಮದವರು ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಟ್ರೀ ಸಿಂಗರಿಸಲೆಂದು ಅದಕ್ಕೆ ತೂಗಿಸುವ ಬಣ್ಣಬಣ್ಣದ ದೀಪಗಳಿರಬಹುದು, ಚೈನಾದವರು ಫಂಗ್‌ಶ್ವೇ ಗೃಹವಿನ್ಯಾಸಕ್ಕೆಂದು ನೇತಾಡಿಸುವ ಗಂಟೆಕಡ್ಡಿಗಳಿರಬಹುದು – ಆ ಎಲ್ಲ ತೂಗುತೋರಣಗಳಲ್ಲೂ ಸೌಂದರ್ಯವಿದೆ, ಸಂಚಲನವಿದೆ, ಅದ್ಭುತ ಜೀವಶಕ್ತಿಯ ಸಂಕೇತವಿದೆ.

ಆಶ್ಚರ್ಯವೆಂದರೆ ಅದೇ ಸೌಂದರ್ಯ, ಅದೇ ಸಂಚಲನಶಕ್ತಿ ಹೆಣ್ಣು ತನ್ನ ಕಿವಿಗಳಿಗೆ ಹಾಕಿಕೊಳ್ಳುವ ಝುಮುಕಿ ಲೋಲಾಕು ಗಳಿಗೂ ಇದೆ, ಮದುವೆಯಂದು ವಧೂವರರ ತಲೆಗೆ ಕಟ್ಟುವ ಬಾಸಿಂಗಕ್ಕೂ ಇದೆ. ಅಷ್ಟೇಏಕೆ, ನಾವು ನೀವು ಕಾರಿನಲ್ಲಿ
ಹಿನ್ನೋಟದ ಕನ್ನಡಿಗೆ ತೂಗುಹಾಕುವ ಗಂಧದ ಮಾಲೆಗೂ ಇದೆ, ದಂತದ ಗೊಂಬೆಗೂ ಇದೆ. ಹಳೆಯ ಮನೆಗಳಲ್ಲಿ ಬೆಣ್ಣೆಗಡಿಗೆ
ಯನ್ನು ತೂಗಿಸಿಡುವ ‘ಸಿಕ್ಕ’ಕ್ಕೂ ಇದೆ, ಗೋಡೆಗಡಿಯಾರದ ಸಾಮಾನ್ಯಲೋಲಕಕ್ಕೂ ಇದೆ.

ಸ್ಕೂಲ್‌ಡೇ ಸಿಂಗಾರಕ್ಕೆಂದು ಶಾಲೆಯ ಸುತ್ತ ಕಟ್ಟುವ ಬಣ್ಣಬಣ್ಣದ ಪತಾಕೆಗಳಿಗಿದೆ, ಗಾಳಿಪಟಕ್ಕೆ ಅಂಟಿಸಿದ ಬಣ್ಣದ ಬಾಲಂಗೋಚಿಗೂ ಇದೆ, ಗಾಡಿಯೆತ್ತಿನ ಕೊರಳಿಗೆ ಕಟ್ಟಿದ ಸಣ್ಣದೊಂದು ಗಂಟೆಗೂ ಇದೆ. ಅವೆಲ್ಲವೂ ಒಂದು ರೀತಿಯಲ್ಲಿ ತೂಗುತೋರಣಗಳೇ. ನಾವು ಅವುಗಳ ಬಗ್ಗೆ ವಿಶೇಷವಾಗಿ ಗಮನಹರಿಸುವುದಿಲ್ಲ, ಅವುಗಳ ಸೌಂದರ್ಯವನ್ನು ಸವಿಯುವುದಿಲ್ಲ ಅಷ್ಟೇ.

ಕೇರಳದ ತ್ರಿಶ್ಶೂರ್‌ನಲ್ಲಿ ನಡೆಯುವ ಪೂರಂ ಉತ್ಸವದ ದೃಶ್ಯಗಳನ್ನು ನೀವು ನೋಡಿರಬಹುದು. ಅಲಂಕರಿಸಲ್ಪಟ್ಟು ಸಾಲಾಗಿ ನಿಂತ ಆನೆಗಳು. ಅವುಗಳ ಮೇಲೆ ಬಣ್ಣಬಣ್ಣದ ಛತ್ರಿಗಳು. ಆ ಛತ್ರಿಗಳೋ ನಾವು ಉಪಯೋಗಿಸುವ ಸಾಮಾನ್ಯ ಕೊಡೆಗಳಂತಲ್ಲ, ಪ್ರತಿಯೊಂದು ಛತ್ರಿಗೂ ಸುತ್ತಲೂ ತೋರಣದಂತೆ ಇಳಿಬಿಟ್ಟಿರುವ ರೇಷ್ಮೆಯಂಚು. ಆನೆ ಒಂಚೂರು ಅಲುಗಾಡಿದರೂ ಛತ್ರಿಯ ತೋರಣ ಬಳುಕುವ ದೃಶ್ಯ ನಯನಮನೋಹರ. ನಮ್ಮ ಕರಾವಳಿಯಲ್ಲಿ ಭೂತಕೋಲದ ವೇಳೆ ಅಡಿಕೆ ಹೂ(ಪಿಂಗಾರ) ಮತ್ತು ತೆಂಗಿನಗರಿಗಳಿಂದ ಭೂತದ ವೇಷ ಕಟ್ಟುವ ಕಲೆಗಾರಿಕೆಯಲ್ಲೂ ಅಂಥದೇ ಅದ್ಭುತ ಕೈಚಳಕವಿರುತ್ತದೆ.

ಎಳತಾಗಿರುವ ತೆಂಗಿನ ಸೋಗೆಯ ಗರಿಗಳಿಂದ ಮಾಡಿದ ತೋರಣಗಳಲ್ಲಿ ಅದೆಷ್ಟು ಕುಸುರಿಕೆಲಸವಿರುತ್ತದೆಂದರೆ ಭೂತದ ವೇಷ ಕಟ್ಟಿದವನು ಒಂಚೂರು ಮೈ ಅಲುಗಾಡಿಸಿದರೂ ಸಾಕು ಆ ತೋರಣಗಳು ಓಲಾಡುವ ಪರಿಯೇ ನೋಡುಗನ ಮೈಝುಮ್ಮೆನಿಸಿ ವಂತಿರುತ್ತದೆ. ಪ್ರಾಯಶಃ ನಮ್ಮ ಜನಪದ ಕಲೆಗಳಲ್ಲೆಲ್ಲ ಅಂತಹ ಪವರ್‌ಫುಲ್ ತೂಗುತೋರಣಗಳ ಬಳಕೆ ಒಂದಲ್ಲಒಂದು ರೂಪದಲ್ಲಿ, ವಿನ್ಯಾಸದಲ್ಲಿ, ವೈವಿಧ್ಯದಲ್ಲಿ ಪರಿಣಾಮಕಾರಿಯಾಗಿ ಆಗುತ್ತದೆ.

ಟಿವಿ ಧಾರಾವಾಹಿ ಮಹಾ ಭಾರತದಲ್ಲಿ ಭೀಷ್ಮ, ಕೃಷ್ಣ, ಕರ್ಣ, ಅರ್ಜುನ ಇತ್ಯಾದಿ ಪಾತ್ರಗಳ ಪೋಷಾಕುಗಳಿಗೆ, ಅವರ ಅರಮನೆ-ಅಂತಃಪುರಗಳಿಗೆ, ರಥ-ಸಿಂಹಾಸನಗಳಿಗೆ ಅದೆಷ್ಟು ಚಂದಚಂದದ ಹ್ಯಾಂಗಿಂಗ್ಸ್ ಇದ್ದುವು ನೆನಪಿದೆಯೇ? ಆದ್ದರಿಂದಲೇ, ಮೂಗುತಿ ಮುತ್ತು ಚಂದ… ವಾಲೆ ಝುಮುಕಿ ಗತ್ತು ಚಂದ; ಮೇಲೆ ಬಣ್ಣಿಸಿದ ಒಂದೊಂದು ನಮೂನೆಯ ತೂಗುತೋರಣ-ತೂಗುಆಭರಣ, ತೂಗುಸೇತುವೆ, ತೂಗುತೋಟ-ತೂಗುನೋಟ, ಹ್ಯಾಂಗಿಂಗ್ಸು- ಇಯರ್ರಿಂಗ್ಸು… ವಾದ್ಯದಿಂದ ವೇದಾಂತದ ವರೆಗೆ- ಎಲ್ಲವೂ ಒಂದಕ್ಕಿಂತ ಒಂದು ಚಂದ.

ಅವುಗಳ ಸೌಂದರ್ಯವನ್ನು ಸವಿಯುವ ಮನಸ್ಸಿದ್ದರಂತೂ ಮತ್ತೂ ಚಂದ. ಕೊನೆಯಲ್ಲಿ, ಇಂದಿನ ಲೇಖನಕ್ಕೆ ಎಚ್.ಎಸ್.
ವೆಂಕಟೇಶಮೂರ್ತಿಯವರ ಪ್ರಖ್ಯಾತ ಕವಿತೆಯ ಸಾಲನ್ನು ಶೀರ್ಷಿಕೆಯಲ್ಲಿ ಬಳಸಿದ್ದರಿಂದ ಆ ಕವಿತೆಯಲ್ಲಿ ಅತ್ಯಂತ ಗಾಢವಾದ, ನನಗೆ ತುಂಬ ಇಷ್ಟದ ಸಾಲನ್ನೂ ಉಲ್ಲೇಖಿಸುತ್ತೇನೆ: ‘ತನಗೆ ತಾನೇ ತೂಗುಮಂಚ ತಾಗುತ್ತಿತ್ತು ದೂರದಂಚ’. ಅಂದರೆ ಆ ತೂಗು ಮಂಚವನ್ನು ಇನ್ನೊಬ್ಬರು ಜೀಕುತ್ತಿದ್ದದ್ದಲ್ಲ.

ಪರಮಾತ್ಮನೇ ಕೂತವನೆಂದಮೇಲೆ ಬೇರೆ ಯಾರಾದರೂ ಏಕೆ ಹೇಗೆ ಜೀಕಬಲ್ಲರು? ಮತ್ತು, ಆ ಸ್ವಯಂ ಜೀಕು ದಿಗಂತ ದಂಚಿನ ವರೆಗೂ ತಲುಪುತ್ತಿತ್ತಂತೆ. ವಾಹ್! ಎಂಥ ಕವಿಕಲ್ಪನೆ!

error: Content is protected !!