Sunday, 14th August 2022

ನಟನೆಗೆ ಮರಳಿದ ಅನುಶ್ರೀ

ಕಿರುತೆರೆಯ ನಿರೂಪಣೆಯಲ್ಲಿ ಬ್ಯುಸಿಯಾಗಿರುವ ಅನುಶ್ರೀ, ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಕಿರುತೆರೆಯಿಂದ ಮತ್ತೆ ಬೆಳ್ಳಿತೆರೆಗೆ ಎಂಟ್ರಕೊಟ್ಟಿದ್ದಾರೆ. ಹೌದು, ಅನುಶ್ರೀ ಉಪ್ಪು ಹುಳಿ ಖಾರ ಚಿತ್ರದ ಬಳಿಕ ಯಾವ ಚಿತ್ರದಲ್ಲಿಯೂ ನಟಿಸಿರಲಿಲ್ಲ. ಈಗ ಬಹು ವರ್ಷಗಳ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ.

ಎಸ್‌ಎನ್‌ಪಿ ಪ್ರೊಡಕ್ಷನ್ಸ್ ಮತ್ತು ಹೆಚ್.ಲೋಹಿತ್ ಪ್ರೊಡಕ್ಷನ್ಸ್ ಅವರ ಜಂಟಿ ನಿರ್ಮಾಣದಲ್ಲಿ ತಯಾರಾಗು ತ್ತಿರುವ ಚೊಚ್ಚಲ ಚಿತ್ರದಲ್ಲಿ ಅನುಶ್ರೀ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಹಿಂದೆ ಮಮ್ಮಿ ಮತ್ತು ದೇವಕಿ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಪ್ರಭಾಕರನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಚಿತ್ರದ ನಾಯಕನಾಗಿ ಯಾರು ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಿದೆ. ವಿಭಿನ್ನ ಕಥಾಹಂದರದ ಈ ಚಿತ್ರದಲ್ಲಿ ಹಾರರ್ ಟಚ್ ಕೂಡ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ದೈವಿಕ ಶಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವ, ಹಾಗೂ ದುಷ್ಟಶಕ್ತಿಗಳನ್ನು ಆರಾಧಿಸುತ್ತ ತಮ್ಮದೇ ಶೈಲಿಯಲ್ಲಿ ಬದುಕುವ ಜನಸಮೂಹದ ಬಗ್ಗೆ ಇರುವ ನೈಜ ಘಟನೆಗಳನ್ನಾಧಾರಿಸಿದ ಚಿತ್ರದ ಕಥೆ ಹೆಣೆಯಲಾಗಿದೆ.

ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸತನದ ಕಥೆಯಾಗಿದೆ. ಇದನ್ನು ವಿಭಿನ್ನವಾಗಿ ಕಟ್ಟಿಕೊಡಲು ನಿರ್ದೇಶಕ ಪ್ರಭಾಕರನ್ ತಯಾರಿ ನಡೆಸಿದ್ದಾರೆ.
ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಎಸ್.ಎಂ.ಪಾರ್ಥಿಬನ್ ಮತ್ತು ಪುನೀತ್.ಹೆಚ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.