Sunday, 3rd July 2022

ಮಲಯಾಳಂನ ನಟ ವಿಜಯ್ ವಿರುದ್ದ ವಾರೆಂಟ್

ತಿರುವನಂತಪುರ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿ ರುವ ಮಲಯಾಳಂನ ನಟ ವಿಜಯ್ ಬಾಬುಗೆ ಕೇರಳದ ಪೊಲೀಸರು ಬಂಧನದ ವಾರೆಂಟ್ ಹೊರಡಿಸಿದ್ದಾರೆ.

ಚಿತ್ರಗಳಲ್ಲಿ ಅವಕಾಶ ನೀಡುವುದಾಗಿ ನಟಿಯ ಮೇಲೆ ಲೈಂಗಿಕ ಕ್ರಿಯೆ ನಡೆಸಿ ವಂಚಿಸಿದ್ದಾರೆಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆ ದೂರು ನೀಡಿದ್ದಾಗಿನಿಂದಲೂ ನಟ ವಿಜಯ್ ತಲೆ ಮರೆಸಿಕೊಂಡಿದ್ದು ಬಂಧಿಸುವಂತೆ ಎರ್ನಾಕುಲಂನ ಕೋರ್ಟ್ ರೆಕಾರ್ಡ್ ಕಾರ್ನರ್ ನೋಟಿಸ್ ಅನ್ನು ಹೊರಡಿಸಿತ್ತು.

ಕೋರ್ಟ್ ನೋಟಿಸ್ ನೀಡಿದ ನಂತರ ಪೊಲೀಸರು ನಟ ಮತ್ತು ನಿರ್ಮಾಪಕ ವಿಜಯ್‍ಬಾಬುವಿನ ಫೋಟೋ ಹಾಗೂ ವಿವರ ಗಳನ್ನು ಅಂತರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆಯ ವೆಬ್‍ಸೈಟ್‍ನಲ್ಲೂ ಹಾಕಿದ್ದರು. ಈಗ ಕೇರಳ ಪೊಲೀಸರು ಕೂಡ ಆತನ ವಿರುದ್ಧ ಬಂಧನದ ವಾರೆಂಟ್ ಅನ್ನು ಹೊರಡಿಸಿದ್ದಾರೆ.

ಏಪ್ರಿಲ್ 22 ರಂದು ಮಹಿಳೆಯೊಬ್ಬಳು ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ನಟ ವಿಜಯ್‍ಬಾಬು ಅವರು ನನಗೆ ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ವಂಚಿಸಿ ಅವರ ಅಪಾರ್ಟ್‍ಮೆಂಟ್‍ನಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದರು.

ಇದಕ್ಕೆ ಸಂಬಂಧಿಸಿ ವಿಜಯ್ ಅವರು ಏಪ್ರಿಲ್ 26 ರಂದು ಫೇಸ್‍ಬುಕ್ ಲೈವ್‍ಗೆ ಬಂದು, ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ವಿರುದ್ಧ ಆ ಮಹಿಳೆಯ ಸುಳ್ಳು ಆರೋಪ ಮಾಡಿದ್ದಾಳೆ, ಇದರಿಂದ ನಾನು ತುಂಬಾ ನೊಂದಿದ್ದೇನೆ ಎಂದು ಹೇಳಿದ್ದರು.