Friday, 24th March 2023

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವೆ: ಅಶೋಕ್ ಗೆಹಲೋತ್‌

ಕೊಚ್ಚಿ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ, ತೆರವಾಗಲಿರುವ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಜಸ್ಥಾನ ಉಸ್ತುವಾರಿ ಅಜಯ್ ಮಾಕನ್ ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಈಗ ಒಬ್ಬರಿಗೆ ಒಂದೇ ಸ್ಥಾನವೆಂಬ ನಿಯಮವಿದೆ. ರಾಹುಲ್‌ ಗಾಂಧಿ ಅವರೂ ಗುರುವಾರ ಈ ವಾದವನ್ನು ಪ್ರತಿಪಾದಿಸಿದ್ದರು.

‘ನಾನು ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ. ನಾನು ರಾಜಸ್ಥಾನಕ್ಕೆ ಮರಳಿದ ನಂತರ ದಿನಾಂಕ ನಿಗದಿಪಡಿಸುತ್ತೇನೆ. ಇದು ಪ್ರಜಾಪ್ರಭುತ್ವದ ಪ್ರಶ್ನೆ’ ಎಂದು ಹೇಳಿದರು.

ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಕಣಕ್ಕೆ ಇಳಿಯುವ ಕುರಿತು ಮಾತ ನಾಡಿದ ಅವರು, ‘ಕಾಂಗ್ರೆಸ್‌ನಲ್ಲಿರುವ ಯಾವ ಸ್ನೇಹಿತರು ಬೇಕಿದ್ದರೂ ಸ್ಪರ್ಧಿಸಬಹುದು. ಆದರೆ ಏಕತೆ ಮತ್ತು ಎಲ್ಲಾ ಹಂತಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಅಗತ್ಯ ನಮ್ಮು ಮುಂದೆ ಇದೆ’ ಎಂದು ಹೇಳಿದರು.

ಫಲಿತಾಂಶದ ನಂತರ ನಾವು ಬ್ಲಾಕ್, ಗ್ರಾಮ, ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡೋಣ. ನಮ್ಮ (ಕಾಂಗ್ರೆಸ್) ಚಿಂತನಾಕ್ರಮವನ್ನು ಆಧಾರವಾಗಿಟ್ಟುಕೊಂಡು ಮುನ್ನಡೆಯಬೇಕು ಎಂದು ಅವರು ಹೇಳಿದರು.

ಇದರೊಂದಿಗೆ ಕಾಂಗ್ರೆಸ್‌ ಹಲವು ವರ್ಷಗಳ ಬಳಿಕೆ ಮೊದಲ ಬಾರಿಗೆ ಗಾಂಧಿಯೇತರ ನಾಯಕರೊಬ್ಬರನ್ನು ಕಾಣುವುದು ಸ್ಪಷ್ಟವಾಗುತ್ತಾ ಸಾಗಿದೆ.

error: Content is protected !!