Tuesday, 26th October 2021

ಲಸಿಕೆ ಪಡೆಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ

ಸ್ಕೌಟ್ಸ್, ಗೈಡ್ಸ್ ಗಳಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸೂಚನೆ

ಕೊಪ್ಪಳ: ಕೋವಿಡ್ ಲಸಿಕೆ ಪಡೆಯಲು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿನ ಜನರು ಹಿಂದೇಟು ಹಾಕುತ್ತಿದ್ದು, ಅವರ ಆರೋಗ್ಯದ ಹಿತದೃಷ್ಠಿಯಿಂದ ಲಸಿಕೆ ಪಡೆಯು ವುದು ಎಷ್ಟು ಮುಖ್ಯ ಎಂಬುದರ ಕುರಿತು ಅಂತಹ ಗ್ರಾಮಗಳಲ್ಲಿನ ಸಾರ್ವಜನಿಕರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ 2021-22ನೇ ಸಾಲಿನ ಜಿಲ್ಲಾ ಕೌನ್ಸಿಲ್ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ವಿಶೇಷ ಅಭಿಯಾನಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದಾಗ್ಯೂ ಸಾರ್ವಜನಿಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಮುಖ್ಯವಾಗಿ ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಲಸಿಕೆ ಪಡೆಯಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಗ್ರಾಮಗಳನ್ನು ಗುರುತಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದಿ0ದ ಅಲ್ಲಿನ ಜನರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ, ಲಸಿಕೆ ಪಡೆಯುವಂತೆ  ಮನವೊಲಿಸಬೇಕು. ಕೋವಿಡ್ 1ನೇ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗೆ ಮಾಡಿಸಲು ಹಾಗೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಮುಂತಾದ ಆರೋಗ್ಯಕ್ಕೆ ಪೂರಕವಾದ ಮಾಹಿತಿ ಗಳನ್ನು ಸಾರ್ವಜನಿಕರಿಗೆ ನೀಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ತಂಡ ಉತ್ತಮ ಕಾರ್ಯ ನಿರ್ವಹಿಸಿದೆ. ಅದರಂತೆ ಲಸಿಕೆ ಕುರಿತು ಜಾಗೃತಿ ಮೂಡಿಸಲು ಸಹ ಕ್ರಿಯಾತ್ಮಕ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಜಿಲ್ಲಾ ಸಂಸ್ಥೆಗೆ ಹಂಚಿಕೆ ಮಾಡಿರುವ ನಿವೇಶನದಲ್ಲಿ ಈಗಾಗಲೇ ತರಬೇತಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಅದರ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿ ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಿ. ಕಟ್ಟಡಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯಗಳು, ಹೆಚ್ಚಿನ ಸ್ಥಳಾವಕಾಶ ಮುಂತಾದವುಗಳ ಬಗ್ಗೆ ಸೂಕ್ತ ಕಾರಣಗಳೊಂದಿಗೆ ವಿವರವಾದ ಮಾಹಿತಿಯನ್ನು ನೀಡಿ. ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಾಗೂ ಜಿಲ್ಲಾ ಸಂಸ್ಥೆಯ ತರಬೇತಿ ಕಟ್ಟಡ ವಿಶಾಲವಾಗಿದ್ದು, ಅಗತ್ಯಕ್ಕೆ ತಕ್ಕಂತೆ ಹಾಗೂ ಸರ್ಕಾರದ ಮಾನದಂಡಗಳನ್ವಯ ಖಾಸಗಿ ಕಾರ್ಯಕ್ರಮಗಳಿಗೂ ಕಟ್ಟಡವನ್ನು ಬಾಡಿಗೆಗೆ ನೀಡಬಹುದು. ಅದರಿಂದ ಕಟ್ಟಡದ ನಿರ್ವಹಣೆಗೆ ಆದಾಯವನ್ನು ಪಡೆಯಬಹುದು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಅವರು ಸೂಚನೆ ನೀಡಿದರು.

ನಗರದ ಶಾಸಕರ ಮಾದರಿ ಶಾಲಾ ಕಟ್ಟಡದಲ್ಲಿ ಜಿಲ್ಲಾ ಸಂಸ್ಥೆಯ ಕಚೇರಿಗೆ ಮೀಸಲಿರಿಸಿದ್ದ ಕೊಠಡಿಯನ್ನು ತಾಂತ್ರಿಕ ಕಾರಣಕ್ಕಾಗಿ ನೆಲಸಮಗೊಳಿಸಿದ್ದು, ಪ್ರಸ್ತುತ ಶಾಲಾ ಕಟ್ಟಡದಲ್ಲಿ ಸುಸ್ಥಿತಿಯಲ್ಲಿರುವ ಶಾಲಾ ಕೊಠಡಿಯನ್ನು ಸಂಸ್ಥೆಯ ಕಚೇರಿ ನಿರ್ವಹಣೆಗೆ ನೀಡಿ ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಎಚ್.ಎಂ.ಸಿದ್ಧರಾಮಸ್ವಾಮಿ ಮಾತನಾಡಿ, ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲೆಯಾದ್ಯಂತ 600 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಘಟಕದಲ್ಲಿ 32 ವಿದ್ಯಾರ್ಥಿಗಳು ಹಾಗೂ ಒಟ್ಟು 1200 ಶಿಕ್ಷಕರು ಸಂಸ್ಥೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. 300 ಕ್ಕೂ ಹೆಚ್ಚು ಶಿಕ್ಷಕರು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಂದರ್ಭದಲ್ಲಿ ಉತ್ತಮ ಕಾರ್ಯ ನಿರ್ವಹಿಸಿ, ಸುಗಮ ಪರೀಕ್ಷೆಗ ಸಹಕರಿಸಿದ್ದಾರೆ ಎಂದು ತಿಳಿಸುತ್ತಾ ಜಿಲ್ಲಾ ಸಂಸ್ಥೆಯ ಕಾರ್ಯನಿರ್ವಹಣೆ, ಕೈಗೊಂಡ ಚಟುವಟಿಕೆಗಳು, ಸಂಸ್ಥೆಯ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯ ನಂತರ ಕೋವಿಡ್-19 ತುರ್ತು ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್ ಕುಮಾರ್ ಎನ್., ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ, ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ರಾಘವೇಂದ್ರ ಪಾನಗಟ್ಟಿ, ಜಿಲ್ಲಾ ಸ್ಕೌಟ್ ಆಯುಕ್ತ ಮಲ್ಲಿಕಾರ್ಜುನ್ ಚೌಕಿಮಠ, ಜಿಲ್ಲಾ ಗೈಡ್ ಆಯುಕ್ತ ಅರುಣ ಕುಮಾರಿ ವಸ್ತ್ರದ, ರಾಜ್ಯ ಸಹಾಯ ಸಂಘಟನಾ ಆಯುಕ್ತರು ಮತ್ತು ರೇಂಜರ್ ರಿಂಗ್ ಉಸ್ತುವಾರಿ ಮಲ್ಲೇಶ್ವರಿ ಜುಜಾರೆ, ಮಾರುತಿ ಆರೇರ್, ಪ್ರಭಾಕರ್ ದಾಸರ, ಶ್ರೀಕಾಂತ ಮಾಸಗಟ್ಟಿ, ದಾಕ್ಷಾ ಯಿಣಿ ಕೆ. ಬಂಡಿ, ಗಿರೀಶ್ ಬಿಪಿ, ಮಮತಾ ಕುದರಿಮೋತಿ, ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕಾರ್ಯದರ್ಶಿಗಳು ಹಾಜರಿದ್ದರು.

Leave a Reply

Your email address will not be published. Required fields are marked *