ಮಡಿಕೇರಿ: ‘ಸಾಲ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಸಚಿವರ ಹೇಳಿಕೆಗೆ ರೈತ ಸಮುದಾಯದಿಂದ ಭಾರೀ ಟೀಕೆ ವ್ಯಕ್ತವಾಗಿದೆಯೆನ್ನಲಾಗಿದೆ.
ಕೃಷಿ ಕಾಲೇಜಿನಲ್ಲಿ ಗುರುವಾರ ‘ಬಿದಿರು ಸಂಸ್ಕರಣೆ ಹಾಗೂ ಬಿದುರು ಮೌಲ್ಯವರ್ಧನಾ ಘಟಕ’ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ‘ಕೃಷಿ ಮಾಡಿಯೂ ಉತ್ತಮ ಬದುಕು ಕಟ್ಟಿಕೊಂಡವರು ಇದ್ದಾರೆ. ಹೇಡಿಗಳು ಮಾತ್ರ ಆತ್ಮಹತ್ಯೆ ಮಾಡಿ ಕೊಳ್ಳುತ್ತಾರೆ. ಹೆಂಡತಿ ಹಾಗೂ ಮಕ್ಕಳನ್ನು ನೋಡಿಕೊಳ್ಳದ ರೈತ ಹೇಡಿ’ ಎಂದು ಪುನರುಚ್ಚರಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬನ್ನು ಪ್ರಮುಖವಾಗಿ ರೈತರು ಬೆಳೆಯುತ್ತಾರೆ. ಕೋಲಾರ ಜಿಲ್ಲೆಯಲ್ಲಿ ಮಿಶ್ರ ಬೆಳೆ ಬೆಳೆಯು ತ್ತಾರೆ. ಆದ್ದರಿಂದ, ಕೃಷಿ ಜತೆಗೆ ಹೈನುಗಾರಿಕೆ, ಮೀನುಗಾರಿಕೆ, ತರಕಾರಿ.. ಹೀಗೆ ಮಿಶ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳು ವುದು ಅಗತ್ಯ’ ಎಂದು ಬಿ.ಸಿ.ಪಾಟೀಲ್ ಅವರು ಸಲಹೆ ಮಾಡಿದರು.
ಅರಣ್ಯ ಇದ್ದರೆ ಮಳೆ, ಮಳೆ ಬಂದಲ್ಲಿ ಸಮೃದ್ಧ ಬೆಳೆ, ಬೆಳೆ ಬೆಳೆದಲ್ಲಿ ಉತ್ತಮ ಬದುಕು ಎಂದು ವರ್ಣಿಸಿದರು.
ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುವ ನಿಟ್ಟಿನಲ್ಲಿ ಇಸ್ರೇಲ್ ಮಾದರಿ ಬೇಕಿಲ್ಲ, ಕೋಲಾರ ಜಿಲ್ಲೆಯ ಮಾದರಿ ಅಳವಡಿಸಿಕೊಂಡರೆ ರೈತರ ಆತ್ಮಹತ್ಯೆ ತಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.