Friday, 19th August 2022

ಕಾಡಿನ ನಡುವೆ ಬ್ಯಾಶ್ ಬಿಶ್ ಫಾಲ್ಸ್

ಜಿ.ನಾಗೇಂದ್ರ ಕಾವೂರು

ಅಮೆರಿಕ ಪ್ರವಾಸ ಸಮಯದಲ್ಲಿ ನಯಾಗಾರ ನೋಡಲು ಹೊರಟೆವು. ನಯಾಗಾರ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ ಆಕರ್ಷಕ ‘ಬ್ಯಾಷ್
ಬಿಶ್ ಫಾಲ್ಸ್’ ಅನ್ನು ವೀಕ್ಷಿಸಲು ಗೆಳೆಯರೊಬ್ಬರು ಸಲಹೆ ನೀಡಿದರು. ಅದರಂತೆ ಸುಮಾರು ೨೪೦.ಕಿ.ಮೀ ದೂರದ ಮೌಂಟ್ ವಾಷಿಂಗ್ಟನ್ ಪಟ್ಟಣದ ಬಳಿಯಿರುವ ಬ್ಯಾಷ್ ಬಿಶ್ ಫಾಲ್ಸ್’ಗೆ ನಮ್ಮ ತಂಡ ಹೊರಟಿತು.

ಬ್ಯಾಷ್ ಬಿಶ್ ಫಾಲ್ಸ್ ನೈರುತ್ಯ ಮ್ಯಾಸಾಚೂಸೆಟ್ಸ ರಾಜ್ಯದ ವಾಷಿಂಗ್ಟನ್ ಪರ್ವತಗಳಲ್ಲಿನ ಒಂದು ಪುಟ್ಟ ಜಲಪಾತ. ಮ್ಯಾಸಚೂಸೆಟ್ಸ್ ರಾಜ್ಯದ ಅತಿ ಎತ್ತರದ ಜಲಪಾತವೆಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಸುಮಾರು ಇನ್ನೂರು ಅಡಿ ಎತ್ತರದ ಹಲವು ಜಲಪಾತಗಳ ತಡಸಲು (ಕ್ಯಾಸ್ಕೇಡ) ಇದಾಗಿದ್ದು ಅಂತಿಮವಾಗಿ ಬಾಚುಕಲ್ಲಿನ ಬಳಿ ಇಬ್ಭಾಗವಾಗಿ ೮೦ ಅಡಿ ಎತ್ತರದಿಂದ ಬೀಳುತ್ತದೆ. ಕೆಳಗೆ ಬಿದ್ದ ನೀರು ಕೊಳದಲ್ಲಿ ಸಂಗ್ರಹವಾಗಿ ಮುಂದೆ ಕೋಪಾಕ್ ಮೂಲಕ ನ್ಯೂಯಾರ್ಕ್ ರಾಜ್ಯದ ಮೂಲಕ ಹಡ್ಸನ್ ನದಿಯನ್ನು ಸೇರುತ್ತದೆ.

ಮ್ಯಾಸಚೂಸೆಟ್ಸ್ ರಾಜ್ಯದ ೧೬ ಚದರ ಕಿಲೋಮೀಟರ್ ವಿಸ್ತೀರ್ಣದ ಮೌಂಟ್ ವಾಷಿಂಗ್ಟನ್ ಸ್ಟೇಟ್ ಫಾರೆಸ್ಟ್ ಹಾಗೂ ನ್ಯೂಯಾರ್ಕ್ ರಾಜ್ಯದ ೨೦ ಚದರ ಕಿಲೋಮೀಟರ್ ವಿಸ್ತೀರ್ಣದ ಟಕೋನಿಕ್ ಪಾರ್ಕ್ ನಡುವೆ ಬ್ಯಾಷ್ ಬಿಶ್ ಫಾಲ್ಸ್ ಸ್ಟೇಟ್ ಪಾರ್ಕ್ ಇದೆ.

ಅಪಾಯಕಾರಿ ತಾಣ
ಜಲಪಾತದ ಮೇಲಿರುವ ಮ್ಯಾಸಚೂಸೆಟ್ಸ್ ವಾಹನ ನಿಲುಗಡೆ ಪ್ರದೇಶದಿಂದ ನ್ಯೂಯಾರ್ಕ್ ರಾಜ್ಯದ ವಿಶಾಲ ಪ್ರದೇಶ ಕಾಣಿಸುತ್ತದೆ. ಇಲ್ಲಿ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದ್ದು, ಈ ಪ್ರದೇಶ ಅಮೇರಿಕಾದ ಅತ್ಯಂತ ಅಪಾಯಕಾರಿ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಇಲ್ಲಿ ಆಗಾಗ ಆಕಸ್ಮಿಕ ಮರಣಗಳಾಗು ವುದುಂಟು.

ಜಲಪಾತದ ತಳದವರೆಗೂ ಇಳಿದು ಬರಲು ಸಾಕಷ್ಟು ಅಗಲವಾದ ದಾರಿಯಿದೆ. ಈ ದಾರಿಯ ಮೂಲಕ ನಡೆದು ಬಂದಲ್ಲಿ ಇಡೀ ಬ್ಯಾಷ್ ಬಿಶ್
ಜಲಪಾತದ ಸೌಂದರ್ಯವನ್ನು ಕಣ್ತುಂಬಾ ಸವಿಯಬಹುದು. ಅಲ್ಲಲ್ಲಿ ಮಾರ್ಗಸೂಚಕ ಫಲಕಗಳನ್ನು ಅಳವಡಿಸಿದ್ದಾರೆ. ಜಲಪಾತವನ್ನು ತಲುಪಲು ನಾವು ಆರಿಸಿಕೊಂಡದ್ದು ನ್ಯೂಯಾರ್ಕ್ ಭಾಗದ ದಾರಿ. ಪಾರ್ಕಿಂಗ್ ಪ್ರದೇಶದಿಂದ ಜಲಪಾತದವರೆಗೆ ವಾಹನ ಚಲಾವಣೆ ನಿಷಿದ್ಧವಾದ್ದರಿಂದ, ನಮ್ಮ
ಕಾರನ್ನು ಪಾರ್ಕ್ ಮಾಡಿ ಸುಮಾರು ೨.೪ ಕಿ.ಮೀ ದೂರ ನಡೆದುಕೊಂಡೇ ಹೋದೆವು. ಆ ದಾರಿ ಕಾಡು ಪ್ರದೇಶ. ವಾತಾವರಣ ತಂಪಾಗಿತ್ತು.ಪ್ರವಾಸಿಗರು ನದಿಯಲ್ಲಿರುವ ಕಲ್ಲುಗಳ ಮೇಲೆ ಕುಳಿತುಕೊಂಡು ತಮ್ಮ ಕಾಲುಗಳನ್ನು ನೀರಿನೊಳಗೆ ಇಳಿಬಿಟ್ಟು ಆನಂದದಿಂದ ಹರಟೆ ಹೊಡೆಯುತ್ತಾ, ತಾವು ತಂದ ಆಹಾರ ಸೇವಿಸುತ್ತಿದ್ದರು, ಸುತ್ತಲಿನ ನಿಸರ್ಗವನ್ನು ಸವಿಯುತ್ತಿದ್ದರು.

ಮದ್ಯಪಾನ ನಿಷೇಧ
ಬ್ಯಾಷ್ ಬಿಶ್ ಫಾಲ್ಸ್ ಸ್ಟೇಟ್ ಪಾರ್ಕ್‌ಗೆ ಬಂದ ಪ್ರವಾಸಿಗರು ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಇಲ್ಲಿ ಮದ್ಯಪಾನ ನಿಷೇಧ. ಪರಿಸರವನ್ನು ಹಾಳು ಮಾಡುವಂತಿಲ್ಲ, ರಾಕ್ ಕ್ಲೈಂಬಿಂಗ್ ಮಾಡುವಂತಿಲ್ಲ. ಪಾರ್ಕಿಂಗ್ ಉಚಿತ ಆದರೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಜಲಪಾತದ ಕೊಳ ದಲ್ಲಿ ಈಜು ನಿಷೇಧ. ಅ ಸಣ್ಣದ ರಲ್ಲೂ ಸಂತಸ ಅಮೆರಿಕದ ಜನರಿಗೆ ಸಣ್ಣ ಪುಟ್ಟ ವಿಷಯಗಳೂ ಆನಂದ ನೀಡುತ್ತವೆಂದು ಕೇಳಿದ್ದಾವಾದರೂ,
ನೋಡಿರಲಿಲ್ಲ. ಆ ಮಾತುಗಳು ಈಗ ಸತ್ಯ ಎನಿಸಿತು.

ಜಲಪಾತ ಕೆಲವು ಕೋನದಲ್ಲಿ ಮಹಿಳೆಯ ಆಕೃತಿಯಲ್ಲಿ ಕಾಣುತ್ತಿತ್ತು. ಸ್ವಲ್ಪ ಸಮಯ ಜಲಪಾತ ವನ್ನು ವೀಕ್ಷಿಸುತ್ತಾ, ತೆಗೆದುಕೊಂಡು ಹೋಗಿದ್ದ ಪುಳಿಯೋಗರೆಯನ್ನು ತಿಂದೆವು. ಜಲಪಾತ ಚಿಕ್ಕದಾಗಿದ್ದರೂ, ಅದರ ಇತಿಹಾಸ ಹಾಗೂ ಐತಿಹ್ಯಗಳಿಂದ ಬ್ಯಾಷ್ ಬಿಶ್ ಫಾಲ್ಸ್ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಚಾರಣಿಗರು ಜಲಪಾತದ ಮೇಲ್ಭಾಗದಿಂದ ತಳಭಾಗದವರೆಗೂ ನಡೆದು, ಪ್ರಕೃತಿಯ ಸೊಬಗನ್ನು ಆಸ್ವಾದಿಸಬಹುದು.

ಬುಡಕಟ್ಟು ಮಹಿಳೆಯ ಐತಿಹ್ಯ
ಈ ಜಲಪಾತವನ್ನು ಬ್ಯಾಷ್ ಬಿಶ್ ಫಾಲ್ಸ್ ಎಂದು ಕರೆಯುವುದರ ಹಿಂದೆ ಒಂದು ಕತೆಯಿದೆ. ಶತಮಾನಗಳ ಹಿಂದೆ ಮೋಹಿಕನ್ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳಿಗೆ ವ್ಯಭಿಚಾರದ ಆರೋಪ ಹೊರಿಸಿ ಮರಣದಂಡನೆಯನ್ನು ವಿಧಿಸಲಾಯಿತು. ಸಣ್ಣ ದೋಣಿಯೊಂದರಲ್ಲಿ ಆಕೆಯ ಕೈಕಾಲುಗಳನ್ನು ಕಟ್ಟಿಹಾಕಿ ಜಲಪಾತದ ಮೇಲಿಂದ ಬಿಡಲಾಯಿತು. ಮೇಲಿನಿಂದ ಬಿದ್ದ ಆಕೆ ಸತ್ತಳು. ಆ ಜಲಪಾತ ನೋಡಲು ಮಹಿಳೆಯಂತೆ ಗೋಚರಿಸುತ್ತದೆಂದೂ,
ಅದೇ ರೀತಿ ಆಕೆಗಿದ್ದ ಒಬ್ಬಳೇ ಮಗಳು ಹಂಸರೂಪ ತಳೆದು ನೀರಿನಲ್ಲಿ ಈಜಾಡುತ್ತಿರುತ್ತಾಳೆಂದೂ ಐತಿಹ್ಯವಿದೆ.