Tuesday, 18th January 2022

ಬಿಸುಪಿದ್ದರೂ ಬಚ್ಚಿಟ್ಟುಕೊಂಡಿರುವ ಬೆನಾಲಿಮ್

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಹಾಲಿಗಿಂತ ಅಲ್ಕೋಹಾಲು ಸಮೃದ್ಧ ಮತ್ತು ಶುದ್ಧ. ಕುಡಿಯುವ ನೀರು, ಬಾವಿಗಳಿಗಿಂತಾ ಹೆಚ್ಚಾಗಿ ಇಲ್ಲಿ ಬಾಟಲ್ ಗಳಲ್ಲಿದೆ. ಹಾಲಿನಷ್ಟೆ ದುಡ್ಡಿಗೆ ಸಿಗುವ ಜಗತ್ತು ಸುಡುವ ಪೆಟ್ರೋಲು ಇಲ್ಲಿ ಸೋವಿ ಮತ್ತು ಸಲೀಸು. ಮನುಷ್ಯರಿಗಿಂತ ವಸ್ತುಗಳಿಗೆ ಕಿಮ್ಮತ್ತು ಜಾಸ್ತಿ ಇಲ್ಲಿ. ಹರಿದ ಜೀನ್ಸಿಗೆ ಇರುವಷ್ಟೆ ಬೆಲೆ ಅದನ್ನು ಸಲೀಸಾಗಿ ಬಿಚ್ಚುವವರಿಗೂ ಸಲ್ಲುತ್ತದೆ.

ಹಾಲಿನ ಪ್ಯಾಕೆಟ್‌ನ ಪ್ಲಾಸ್ಟಿಕ್ಕಿಗಿಂತಾ ರಬ್ಬರಿನ ಕಾಂಡೋಮು ಹೆಚ್ಚಿನ ಸಂಖ್ಯೆಯಲ್ಲಿ ಬಿಕರಿಯಾಗುತ್ತದೆ. ‘..ಇದು ನೋಡು ನಿಮ್ಮದೇ ಚಿಕ್ಕಮಂಗಳೂರಿನ ರಬ್ಬರು, ವಾಪಸ್ಸು ನಮಗೆ ೨೩ ರುಪಾಯಿಗೆ ಮೂರು ಮಾರುತ್ತಾರೆ ಮಾರಾಯಾ..’ ಎನ್ನುವ ಕುಹಕಕ್ಕೆ ಅಲ್ಲಿ ದೊಡ್ಡ ನಗೆಯ ಅಲೆ ಕದಲುತ್ತಿರುತ್ತದೆ. ಹಾಗೆ ಸಮುದ್ರ ದಂಡೆ ಮತ್ತು ಮೀನುಗಾರರ ದೋಣಿಗಳಲ್ಲಿ ರಾತ್ರಿ ಇಳಿಸಿ ಹೋಗುವ ರಬ್ಬರ್ ಚೀಲಗಳಿಗೆ ಬೆಳಗ್ಗೆ ಅವಾಚ್ಯ ಶಬ್ದಗಳ ಉಡುಗೊರೆ ಕಾಯುತ್ತಿರುತ್ತದೆ. ಕೇಳಿಸಿಕೊಳ್ಳಲು ಯಾರ ಕಿವಿ ಆಗಲಿ ಉಪಯೋಗಿಸಿದ ಜೋಡಿಗಳಾಗಲಿ ಅಲ್ಲಿರುವುದೇ ಇಲ್ಲ. ಹಾಗಾಗಿ ದಂಡೆಯ ದೋಣಿಗಳು ಮಾತ್ರ ಫಾಂಟಸ್ಸಿ ಲೈಫಿಗೆ ಈಡಾಗುತ್ತಲೇ ಇರುತ್ತವೆ. ಆಡಲಾಗದ ಅನುಭಸಲಾಗದ ಸುಖ ದೋಣಿಗಳಿಗೆ.

ಅಂಥಾ ಅಪರಿಮಿತ ಬಿಸುಪಿನ ಆದರೆ ಸಾರ್ವಜನಿಕರಿಂದ ಬಚ್ಚಿಟ್ಟುಕೊಂಡಿರುವ ತೀರ ಬೆನಾಲಿಮ್. ದಕ್ಷಿಣ ಗೋವೆಯ ಮಾದಕ ಕಿನಾರೆ. ಮ್ಯಾರಾಥನ್ ಪಟುವೊಬ್ಬ ಓಡಲಾರಂಭಿಸಿದರೆ ಮಧ್ಯಾಹ್ನದ ಹೊತ್ತಿಗೆ ಓಡಿ ಮುಗಿಸಬಹುದಾದಷ್ಟು ಅಂಗೈಯಗಲದ ರಾಜ್ಯದಲ್ಲಿ ಜಗತ್ತಿಗೆ ಹಂಚಿ ಮರುದಿನಕ್ಕಿಷ್ಟು ಮಿಗಿಸಿಟ್ಟು ಕೊಳ್ಳುವ ಅಪರೂಪದ, ಅಪರಿಮಿತ ನಶೆ ಇದೆ. ಅಕ್ಟೋಬರ್‌ನಿಂದ ಜನವರಿಯವರೆಗೆ ನಿಸರ್ಗದ ಹಿಡಿತಕ್ಕೆ ತೆರೆದು ಕೊಳ್ಳುವ ಗೋವೆ ಪ್ರತಿದಿನವೂ ಅಪ್ಪಟ ನವವಧು.

ಥೇಟ್.. ಮೆಹಂದಿ ಕೈಯ್ಯ ವೈಯ್ಯಾರಿ. ಅಷ್ಟಕ್ಕೂ ಗೋವೆ ಎನ್ನುವುದೇ ಜಗತ್ತಿಗೆ ನಶೆ. ಅಲೆಮಾರಿಗಳಿಗೆ ಅಲೆಅಲೆಯಾಗಿ ಆವರಿಸಿಕೊಳ್ಳುವ ಅನಾಹುತಕಾರಿ ಸ್ವರ್ಗ ಇದು. ಕಂಡು ಕೇಳರಿಯದ ದೇಶಗಳಿಂದ ಜನ ಇಲ್ಲಿಗೆ ತಮ್ಮ ಸಂಕಟ, ನೋವು, ಸುಖದ ಸೊಲ್ಲು ಬಸಿದುಕೊಳ್ಳಲು ಬರುತ್ತಾರೆ. ಬೆನಾಲಿಮ್ ನಿತ್ಯರತಿ ಯಂತಹ ಅಲೆಮಾರಿಗಳ ಸುಂದರಿ. ಗೊತ್ತಿದ್ದೋ ಗೊತ್ತಿಲ್ಲದೆಯೋ ಒಟ್ಟಾರೆ ಹಂಚಿಕೊಳ್ಳುವ ಜನರಲ್ಲಿ ಪ್ರೀತಿಯ ಮುಖವಿದೆ. ಮುಖವಾಡವೇ ಆಗಿದ್ದರೂ
ಗೋವೆಯ ನಶೆ ಆ ಹೊತ್ತಿಗೆ ಅದನ್ನೂ ಮರೆಸಿ ಮೈ ಮನಸ್ಸು ಮೆರೆಯುವಂತೆ ಮಾಡುತ್ತದೆ.

ಇದ್ದ ದಿನಗಳಿಗೆ, ಸಮಯಕ್ಕೆ ಮಾತ್ರ ಯಾವತ್ತಿಗೂ ಮೋಸ ಮಾಡದ ಐನಾತಿ ಮಾದಕ ಪ್ರೀತಿ, ಬೆನಾಲಿಮ್‌ನ ಪ್ರತಿ ತಿರುವಿನಲ್ಲೂ ಉಮ್ಮಳಿಸುತ್ತಿರುತ್ತದೆ.
ಗೋವೆ ಎಂದರೆ ಭೂಮಿಯ ಯಾವುದೇ ಮೂಲೆಯ ಜನಕ್ಕೂ ಫಲಕ್ಕನೆ ಎದೆಯೊಳಗೆ ಒಂದು ಬೀಟು ಮಿಸ್ಸಾಗುವ ರಣರಸಿಕ ನೆಲ. ವಯಸ್ಸು ಮರೆತು ಹರೆಯ ಅಡರಿದಂತಾಗಿ ಝಿಲ್ಲೆನ್ನುವ ಜೀವ ಒಮ್ಮೆ ಒಳಗೊಳಗೇ ಮಿಸುಕಾಡುತ್ತದೆ.

ಛೇ ಒಮ್ಮೆ ಗೋವೆಗೆ ಹೋಗಿ ಬರಬೇಕಿತ್ತು ಎಂದು ಹಲುಬಿಕೊಳ್ಳುತ್ತದೆ ಲಂಪಟ ಮನಸ್ಸು. ಎಲ್ಲಿ ಹೋದರೂ ಒಮ್ಮೆ ಥಾಯ್ಲೆಂಡ್‌ಗೆ ಹೋಗಬೇಕಿತ್ತು ಎನ್ನಿಸುವ ಹೊಬೇಹೂಬು ಭಾರತೀಯರ ಲಫಂಗ ಮನಸ್ಸಿನಂತೆ. ಹಾಗಾಗೇ ಜಗತ್ತಿನ ಯಾವ ದೇಶಕ್ಕೂ ಗೋವೆ ಎಂದರೆ ವ್ಯಾಮೋಹ, ಬೆನಾಲಿಮ್ ಎಂದರೆ ಪ್ರೀತಿ. ಅದಕ್ಕೂ ಮಿಗಿಲು ಮುಗಿಯದ ಬದುಕಿನ ಸಂಭ್ರಮ ದುಪ್ಪಟ್ಟು ಮಾಡುವ ಸರಸ ಕನ್ನಿಕೆ. ಭಾರತವೇ ಗೊತ್ತಿಲ್ಲದ, ಅದ್ಯಾವುದೋ ಖಂಡದ, ಭಾಷೆಯ ಹಂಗೇ ಇರದ ಪ್ರತಿಯೊಬ್ಬನಿಗೂ ಗೋವೆ ಮಾತ್ರ ಚೆನ್ನಾಗೇ ಗೊತ್ತು. ಬಂದರೆ ಎಲ್ಲಿರಬೇಕು, ಏನು ಸಿಗುತ್ತದೆ, ಸಿಗುವುದಿಲ್ಲ, ಎಲ್ಲಿ ಕೈ ಹಾಕಬೇಕು, ಹಾಕಬಾರದು, ಯಾವ
ಬೀಚಿನಲ್ಲಿ ಸಂಡಾಸು ಚೆನ್ನಾಗಿದೆ. ಯಾವ ಗೂಡಂಗಡಿಲಿ ಉರಾಕ್ ಸಿಗುತ್ತದೆ..? ಎಲ್ಲಿ ವಾಸನೆಯ ಮೂತ್ರಿ ಇದೆ, ಯಾವೆಲ್ಲ ರಸ್ತೆ ಬದಿ ಪಾಯಖಾನೆಯನ್ನು ಗೋವೆ ಮುನ್ಸಿಪಾಲಿಟಿ ಕೆಟ್ಟಾ ಕೊಳಕಾಗಿ ಗಬ್ಬೆಬ್ಬಿಸಿ ಬಿಟ್ಟಿದೆ, ಖಾಸಗಿ ಸುಖಕ್ಕಾಗಿ ಯಾವ ಬಾರ್‌ನ ಸರ್ವರ್‌ನನ್ನು ಹಿಡಿದರೆ ಕೆಲಸವಾಗುತ್ತದೆ ಎಂಬೆಲ್ಲ ಪಿನ್ ಟು ಪಿನ್ ಮಾಹಿತಿ, ಪ್ರತೀ ಪ್ರವಾಸಿಗನಿಗೆ ಡಿಕ್ಷನರಿಯಲ್ಲೇ ಲಭ್ಯ ಅದೂ ಅವರವರ ಭಾಷೆಯಲ್ಲೇ.

ಆದರೆ ಅದ್ಯಾವುದೂ ನಮ್ಮ ಕೈಗೆ ಮಾತ್ರ ಅಪೂಟು ದಕ್ಕುವುದಿಲ್ಲ. ಕಾರಣ ಭಾರತೀಯರು ಕೇವಲ ನೋಡುವುದು ಜಾಸ್ತಿ, ಚೌಕಾಸಿ ಅದಕ್ಕಿಂತ ಜಾಸ್ತಿ. ಯಾವನು ನಿಮ್ಮನ್ನು ಆದರಿ ಸಿಯಾನು..?ಅದಕ್ಕೆ ಬೆನಾಲಿಮ್ ನಮಗೆ ತೆರೆದುಕೊಂಡೇ ಇಲ್ಲ ಇವತ್ತಿಗೂ. ವಗರು ಬಿಯರ್‌ನಿಂದ, ಪರಮನಶೆಯ ಪುಡಿಗಾಂಜಾದವರೆಗೂ, ಅನಾಹುತಕಾರಿ ಹಾವಿನ ಜೊಲ್ಲಿನ ವೈಪರ್ ಬೈಟ್‌ನಿಂದ ಹಿಡಿದು, ಶ್ರೀಗಂಧದ ಸುವಾಸನೆಯ ಹುಕ್ಕಾದವರೆಗೂ ಆಪ್ತವಾಗಿ ಮಗ್ಗುಲಿಗೆ ಎಳೆದುಕೊಳ್ಳುತ್ತದೆ.
ಅವೆಲ್ಲದರ ಮೇಲೆ ಸ್ಥಳೀಯರ ಜೀವ ಮತ್ತು ಜೀವನ ಎರಡೂ ಜೀಕುತ್ತವೆ, ಬೆಳೆಯುತ್ತವೆ.

ಪ್ರತೀ ಊರು ಸಮುದ್ರದ ಸೊಂಟಕ್ಕೆ ಆತುಕೊಂಡೆ ಬೆಳೆದಿದ್ದರೆ, ಅಲ್ಲಲ್ಲೆ ಕಾಲು ಚಾಚಿ ಕೂರಬಹುದಾದ ಸಪಾಟು ಉರವಣಿಗೆ ಮಣೆಗಳು, ಎತ್ತರದೆದೆಯಂತಹ ಮರಳಿನ ದಿಬ್ಬಕ್ಕೆ ಹಾಕಿದ ಬಣ್ಣದ ಛತ್ರಿಗಳ ಕೆಳಗೆ ಬದುಕು ಬಣ್ಣಗಳ ಸಂತೆ. ಚಿಕ್ಕದಾದ ಗಲ್ಲಿಯಂತಹ ರಸ್ತೆಗಳು, ಪ್ರತಿ ಮನೆಗೂ ಕೆಂಪುಕಲ್ಲಿನ ಕಾಂಪೌಂಡು ಗೋವೆಯ ಶಿಷ್ಟ ಮ್ಯಾನರಿಸಮ್ಮಿಗೆ ಸೈಡ್‌ವಿಂಗಿನಂತೆ ಕೆಲಸ ಮಾಡುತ್ತದೆ. ಆ ಹಸಿರು, ಕಪ್ಪು ರಸ್ತೆ ಮಧ್ಯೆ ಬಿಳಿಬಿಳಿ ತೊಗಲುಗಳ, ಗುಳುಗುಳು ಎನ್ನುತ್ತ ಬಳಕುವ
ಎದೆಗಳ ಚಲನೆ ಗೋವೆಯ ನಶೆಗೆ ಟಕೀಲಾ ಶಾಟ್‌ನಂತೆ.

ರಾತ್ರಿಯಾದರೆ ಸಾಕು ಲೈಟು, ಮ್ಯೂಸಿಕ್ಕು. ಹಗಲಿನ ರಣ ಬಿಸಿಲು ಮರೆತುಹೋಗಿರುತ್ತದೆ. ಪಕ್ಕ ಹಾಯುವ ಯಾವನಿಗೂ ಯಾರ ಸೊಂಟದಲ್ಲಿ ಯಾವ ಕಳವಳಿಕೆಗಳು ಕದಲುತ್ತಿವೆ, ಮನಸ್ಸಿನಲ್ಲಿ ಎಂಥಾ ಪರಮ ವಿಕಾರ ಹುಕಿಗಳ ಉತ್ಪತ್ತಿ ಯಾಗುತ್ತಿವೆ ಉಹೂಂ.. ಬೇಕಾಗಿಲ್ಲ. ಅಷ್ಟಕ್ಕೂ ಗೋವೆಗೇ ಅದರ ಬಗ್ಗೆ ಆಸಕ್ತಿ ಇಲ್ಲ. ಸ್ವತ: ತನ್ನ ಹೆಗಲುಗಳ ಮೇಲೆ ಪರಮ ಹಾದರಗಳೂ, ಅಪರಮಿತ ಪ್ರೀತಿಯ ಸಂಬಂಧಗಳು ಬೆಸೆಯುತ್ತಿದ್ದರೂ ಬೆನಾಲಿಮ್ ಯಾವತ್ತೂ ಯಾರನ್ನೂ
ನೀವ್ಯಾಕೆ ಬಂದೀರೆಂದು ಕೇಳಿದ್ದಿಲ್ಲ. ಹೋಗುವವನಿಗೆ ಯಾಕೆ ವಾಪಸ್ಸು..? ಖಷಿಯಾಗಿಲ್ಲವಾ ಎಂದು ಮರೆತೂ ವಿಚಾರಿಸಿಕೊಳ್ಳುವುದಿಲ್ಲ.

ರಾತ್ರಿರಂಗಿಗೆ ಹೋಲಿಸಿದರೆ, ಹಗಲಿನ ಗೋವೆ ಸಪ್ಪೆ ತೊವ್ವೆಯಂತೆ. ಬೆನಾಲಿಮ್‌ನಲ್ಲಿ ಉಸಿರು ಏರುವುದೇ ಸಂಜೆ ಮಬ್ಬಿನ ನಂತರ. ದಿವೀನಾಗುವುದು ಮಧ್ಯ ರಾತ್ರಿಗೆ. ಮಾತೇ ಬೇಕಿಲ್ಲದೆ ಮನಸ್ಸಿಗೂ ಮೈಗೂ ನಶೆ ಹಚ್ಚಬಲ್ಲ ಐಟಮ್ಮು ಪ್ರತೀ ಗುಡಿಸಲಿನ ತಡಿಕೆಯ ಹಿಂದೆ ಮೀನು ಬುಟ್ಟಿಗಳಲ್ಲಿ ಅತು ಕೂತು ಚಿಪ್ಪಾಗು ತ್ತಿರುತ್ತವೆ. ಪ್ರತೀ ಮಸಾಜು ಮಾಡುವವನಿಗೂ ಇಂಡಿಯನ್, ರಷಿಯನ್, ಬ್ರಾಜಿಲಿಯನ್ ಹುಡುಗಿಯರ ನಂಬರುಗಳು ಸ್ವರ್ಗ ಸೃಷ್ಟಿಸಬಲ್ಲ ವ್ಯವಸ್ಥೆಗೆ ಪಕ್ಕಾಗಿ ರುತ್ತವೆ.

ಸಮುದ್ರ ದಂಡೆಗುಂಟ ಹುಟ್ಟಿ ಅಲ್ಲೇ ಲೀನವಾಗುವ ಸುಖದ ನರಳುವಿಕೆಯಿಂದ ಹಿಡಿದು ಒಲ್ಲದ ಉನ್ಮಾದ ದವರೆಗಿನ ಅಪ್ಪಟ ಖಾಸಗಿ ಶಬ್ಧಗಳಿಗೆ ಯಾರೂ ಕಿವಿಯಾಗುವುದಿಲ್ಲ. ಕತ್ತಲು ಅಡರುವ ಹೊತ್ತಿಗೆ ಸರಿಯಾಗಿ ಉನ್ಮಾದಕ್ಕ ಡರುತ್ತ, ಕಂಡ ಬಂಡೆಗಳ ಅರೆಗೆ ಸ್ಥಳ ಹಿಡಿದು ಕೂಡುವ ಜೋಡಿಗಳಿಗೆ ಕತ್ತಲಿಗೂ ಮೊದಲೇ ಬೆತ್ತಲಾಗುವ ಸಂಭ್ರಮ. ಸುಖದ ಸೊಲ್ಲನ್ನು ಸೂರೆ ಹೊಡೆವ ಅಪರಿಮಿತ ಆಸೆ, ಬದುಕಿನಲ್ಲೂಮ್ಮೆ ಹಿಗೆ ಬದುಕಿ ಬಿಡಬೇಕೆನ್ನುವ ಅಪ್ಪಟ ಖಾಸಗಿ
ವಾಂಛೆಯ -ಂಟಸ್ಸಿಗಳಿಗೆ ತೋರಣ ಕಟ್ಟಬಲ್ಲ ತೀರವೆಂದರೆ ಅದು, ಬೆನಾಲಿಮ್.. ಕಂಡೂ ಕಾಣದಂತೆ ಅವರನ್ನೆಲ್ಲಾ ಕಾಯ್ದು ನಿಡುಸುಯ್ದು ಮನೆಗೋಗುವ ಗೋವೆಯ ಪೋಲಿಸರಿಗೆ ಮಾತ್ರ ಅದೇ ನೌಕರಿ, ಚಾಕರಿ, ಸರಕಾರ ವಿಧಿಸಿದ ಹೊಟ್ಟೆ ಪಾಡು.

ಅದಿಲ್ಲದಿದ್ದರೆ ಟೂರಿಸ್ಟು ಗೋವೆಯನ್ನು ಮೂಸಿಯೂ ನೋಡುವುದಿಲ್ಲ. ತಪ್ಪಿ ಬಿದ್ದು ಹೋಗುವ ಒಂದು ಹೆಣದ ಸುದ್ದಿಯ ಮೊದಲ ಪರಿಣಾಮ ಆರ್ಥಿಕ ಸ್ಥಿತಿಯ ಮೇಲೆ ಬೀಳುತ್ತದೆ. ಹಾಗಾಗುತ್ತಿದ್ದಂತೆ ನೆಲಕಚ್ಚುವ ಪ್ರವಾಸೋದ್ಯಮ ಸಂಪೂರ್ಣ ಗೋವೆಯ ಆಪೋಶನವಾಗಿಸಿಕೊಳ್ಳುತ್ತದೆ. ಹಾಗಾಗಿ ಗೋವೆ ಮತ್ತು ಬೆನಾಲಿಮ್ಮು ಯಾವತ್ತೂ ಜಗತ್ತಿನ ಕಂಡು ಕೇಳರಿಯದ ಜನರಿಗೆ ನಶೆಯ ಸಲಾಮು ಒಪ್ಪಿಸುತ್ತವೆ. ಕ್ರೈಮ್‌ನ್ನಲ್ಲ. ನಶೆ ಇಲ್ಲದೆ, ಪ್ರತೀ ನಜರಿನಲ್ಲೂ ಕಂಡೂ ಕಾಣದ ನಿಮಿರುವಿಕೆ ಇಲ್ಲದೆ ಗೋವೆ ಇಲ್ಲ. ಅಧಿಕೃತವೋ ಅನಧಿಕೃತವೋ ಸುಖಕ್ಕೆ ಹೆಬ್ಬಾಗಿಲು ಬೆನಾಲಿಮ್… ಪ್ರತಿಯೊಬ್ಬರ ಖಾಸಗಿತನ ಗೌರವಿಸುವ, ನಿಮ್ಮ ಸುಖವೇ
ನಮ್ಮ ವ್ಯವಹಾರ ಎನ್ನುವ ಮನಃಸ್ಥಿತಿಯಲ್ಲಿ ಬದುಕು ಬಂಗಾರ. ಇದೆಲ್ಲ ಗೊತ್ತಿದ್ದರೂ, ನಿಮ್ಮ ಕೋಣೆಯಿಂದ ಹೊರಡುವ ಉನ್ಮಾದಕಾರಿ ದನಿ, ಗಲ್ಲಿಗಳ ಆಚೆ ಬರುವ ಚೀತ್ಕಾರ, ಶಬ್ದಗಳಿಗೆ ತಲೆ ಕೆಡಿಸಿಕೊಳ್ಳುವವರು ಇಲ್ಲವೇ ಇಲ್ಲ.

ಇದ್ದವರು ಗೋವೆಯಲ್ಲಿ ಬದುಕುವುದಿಲ್ಲ. ಪಕ್ಕದ ರಾಜ್ಯದ ಸರಹದ್ದಿಗೆ ಜರುಗಿ ಬದುಕು ಕಟ್ಟಿಕೊಳ್ಳುತ್ತಾರೆ. ಕಾರಣ ಅವರಿಗೆ ಬದುಕು ಸಂಭ್ರಮವಲ್ಲ. ಬರೀ ಬದುಕುವುದು ಅಷ್ಟೆ ಆಗಿರುತ್ತದೆ. ಸಂಭ್ರಮವಲ್ಲದವರಿಗೆ ಗೋವೆ ಸಲ್ಲದ ಮನೆ. ಪರಮ ಸೂತಕ ಅನ್ನಿಸುತ್ತದೆ. ಮೈಯ್ಯ ನರನರ ತೀಡುವ ಒತ್ತುಗಾರನಿಂದ, ಕಾರು ನಿಲ್ಲಿಸಿದ್ದಕ್ಕೆ ಕಾಸು ಕೇಳುವವನ ಮುಖದ ಚಹರೆಯಲ್ಲೂ ಒಂದೇ ಭಾವ ಕದಲುತ್ತಿರುತ್ತದೆ. ಇಲ್ಲಿ ಬಂದವನು ಇವತ್ತಿನ ದುಡಿಮೆ ಮತ್ತು ಸದ್ಯಕ್ಕೆ ದೇವರು. ನಶೆ ಇಲ್ಲದೆ ಬದುಕಿಲ್ಲ. ಅದು ಅಮಲಿನ ಪದಾರ್ಥದ್ದೇ ಆಗಬೇಕೆಂದಿಲ್ಲ. ಬದುಕುವ ಕಲೆ ಕೂಡಾ ಒಂದು ನಶೆ. ಗೋವೆಗೆ ಬೇಕಿರುವುದು ಅದು. ಅದಿಲ್ಲದೆ ಸಂಭ್ರಮ
ಒಲ್ಲದು. ಅದಕ್ಕಾಗೇ ಇವತ್ತಿಗೂ ಬೆನಾಲಿಮ್ ಎಂಥೆಂಥಾ ಅಲೆಮಾರಿಗಳಿಗೂ ಪಳಗಿಲ್ಲ. ಬಹುಶಃ ಇಷ್ಟು ಆಳಕ್ಕಿಳದದ್ದು ನಾನೇ ಇರಬೇಕು. ಹಾಗಾಗೇ ಬೇನಾ ಲಿಮ್ ಬರೆಯೋಕೂ ಸಾಧ್ಯವಾಗಿದ್ದು. ಮತ್ತೊಂದು ದಿಸೆಯ ನೀವು ನೋಡಿರದ ಕುಪ್ಪೆಂಕಾಲನಿಯ ಕಮತ್ತು ಬರುವ ವಾರಕ್ಕಿರಲಿ.