Monday, 30th January 2023

ಭಗವದ್ಗೀತೆಯಲ್ಲಿ ಅತೀತ ಶಕ್ತಿಯ ಅನಾವರಣ

ಸ್ವಾಸ್ಥ್ಯ ಸಂಪದ

yoganna55@gmail.com

ಸೃಷ್ಟಿಯಲ್ಲಿ ಜರುಗುವ ಪ್ರತಿಯೊಂದು ಕ್ರಿಯೆಗೂ ಕಾರಣವೊಂದು ಇರಲೇ ಬೇಕು. ಕಾರಣಗಳಿಲ್ಲದೆ ಪರಿಣಾಮಗಳು ಜರುಗುವು ದಿಲ್ಲ ಎಂಬ ಅಂಶ ವೈಜ್ಞಾನಿಕ. ಕೆಲವು ಕ್ರಿಯೆಗಳ ಕಾರಣಗಳನ್ನು ಸಾಕ್ಷ್ಯಾಧಾರಗಳಿಂದ ಗುರುತಿಸಬಹುದು. ಸಂಬಂಧಿಸಿದ ಕ್ರಿಯೆಗೂ ಅದನ್ನುಂಟು ಮಾಡುವ ಕಾರಣಕ್ಕೂ ವೈಜ್ಞಾನಿಕ ಜೋಡಣೆ ಸಾಧ್ಯ.

ಸೃಷ್ಟಿಯಲ್ಲಿ ಜರುಗುವ ಮತ್ತೆ ಕೆಲವು ಕ್ರಿಯೆಗಳು ವೈಜ್ಞಾನಿಕವಾದರೂ ಅವುಗಳಿಗೆ ನಿರ್ದಿಷ್ಟ ಕಾರಣಗಳನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪರೋಕ್ಷವಾಗಿ ಹಿಮ್ಮುಖನಾಗಿ ವ್ಯಾಖ್ಯಾನಿಸಿ ಕಾರಣವನ್ನು ಅರ್ಥಮಾಡಿಕೊಳ್ಳ ಬೇಕಾಗು ತ್ತದೆ. ಹೀಗೆ ಮಾಡುವಾಗ ಕೆಲವು ವೈಜ್ಞಾನಿಕ ಸಿದ್ಧಾಂತಗಳನ್ನು ಪಾಲಿಸಬೇಕಾಗುತ್ತದೆ.

ಕಾರಣಕಾರಕ ಕ್ರಿಯೆಗಳಿಗೆ ನಿರ್ದಿಷ್ಟ ಉದ್ದೇಶಗಳಿರುತ್ತವೆ, ಅನುಕ್ರಮವಾಗಿ ಒಂದಕ್ಕೊಂದು ಪೂರಕವಾಗಿ ಜರುಗುತ್ತವೆ. ಕಾರಣಕಾರಕ ಅಂಶದಿಂದ ನಿಯಂತ್ರಿತವಾಗುತ್ತವೆ. ಈ ಎಲ್ಲ ಅಂಶಗಳನ್ನು ಆಧರಿಸಿ ಅವ್ಯಕ್ತ ಕಾರಣದ ಕ್ರಿಯೆಗೆ ಪರೋಕ್ಷವಾಗಿ ಕಾರಣವನ್ನು ನಿಖರಪ ಡಿಸಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸೃಷ್ಟಿಯಲ್ಲಿ ಜರುಗುವ ಕಾರ್ಯಗಳು ಅದರಲ್ಲೂ ಮನುಷ್ಯನಲ್ಲಿ ಜರುಗುವ ಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಡೀ ಸೃಷ್ಟಿಯನ್ನು ಸೃಷ್ಟಿಸಿದ ಮತ್ತು ನಿರಂತರವಾಗಿ ಅದನ್ನು ನಿಯಂತ್ರಿಸುವ ನಿಯಂತ್ರಕನೊಬ್ಬ ಮಹಾನ್ ಶಕ್ತಿಯ ರೂಪದಲ್ಲಿ ಇರುವುದು ನಿರ್ವಿವಾದ ಎಂಬುದು ಎಲ್ಲರೂ ಒಪ್ಪುವ ವೈಜ್ಞಾನಿಕ ಸಂಗತಿ.

ಸೃಷ್ಟಿಯ ಮೇಲೆ ಅತೀತಶಕ್ತಿಯ ನಿಯಂತ್ರಣ: ಸೃಷ್ಟಿಯ ಉಗಮ ಮತ್ತು ವಿಕಾಸ ಕ್ರಿಯೆಗಳನ್ನು ಸೂಕ್ಷ್ಮವಾಗಿ, ವೈಜ್ಞಾನಿಕವಾಗಿ ವಿಮರ್ಶಿಸಿದಾಗ ಪ್ರಾರಂಭದಿಂದ ಇಂದಿನವರೆವಿಗೂ ಎಲ್ಲಾ ಹಂತಗಳ ಕ್ರಿಯೆಗಳು ಪದೋನ್ನತಿ ಕಡೆಗೆ ಕಂಪ್ಯೂಟರೀಕೃತ ಪೂರ್ವನಿಗದಿತ ಕ್ರಿಯೆಗಳಂತೆ ಜರುಗಿಕೊಂಡು ಬಂದಿರುವಿಕೆ, ಅನುಕ್ರಮವಾಗಿ ಜರಗುತ್ತಿರುವ ಸೂರ್ಯೋದಯ, ಚಂದ್ರೋದಯ, ಭೂಮಿ ಸುತ್ತುವಿಕೆ, ಗ್ರಹಣಗಳು, ಬಾಹ್ಯಾಕಾಶದಲ್ಲಿ ಜರುಗುವ ಅನುಕ್ರಮ ಕ್ರಿಯೆಗಳು, ಕಾಲಾನುಕಾಲಕ್ಕೆ ಜರುಗುವ ಋತುಮಾನಗಳು, ಚಳಿ, ಬೇಸಿಗೆ ಮತ್ತು ಮಳೆಗಾಲ, ನೀರಿನ ಚಕ್ರ, ಸಸ್ಯ ಮತ್ತು ಪ್ರಾಣಿಗಳ ನಡುವೆ ಇರುವ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್‌ಗಳ ವರ್ಗಾವಣೆ, ಬೀಜಗಳಲ್ಲಿ ಅಡಗಿರುವ ನಿರ್ದಿಷ್ಟ ಕಾಲಾವಧಿಯಲ್ಲಾಗುವ ಸಸ್ಯ ಬೆಳವಣಿಗೆ, ಸೃಷ್ಟಿಯಲ್ಲಿನ ಪ್ರತಿಯೊಂದು ಜೀವ ಮತ್ತು ನಿರ್ಜೀವ ವಸ್ತುಗಳಿಗೂ ಹುಟ್ಟಿನಿಂದಲೇ ಇರುವ ಗುಣಲಕ್ಷಣಗಳು,
ಪರಿಸರದಲ್ಲಿರುವ ಸಮತೋಲನ ಕಾಪಾಡುವ ಹಲವಾರು ವೈಜ್ಞಾನಿಕ ಕ್ರಿಯೆಗಳು ಹಾಗೂ ಬ್ರಹ್ಮಾಂಡದಲ್ಲಿ ಜರುಗುವ ಇತ್ಯಾದಿ ಎಲ್ಲ ಕ್ರಿಯೆಗಳು ಅನುಕ್ರಮವಾಗಿ ಒಂದಕ್ಕೊಂದು ಜೋಡಿತ ಕ್ರಿಯೆಗಳಂತೆ ಜರುಗುವ ವೈಜ್ಞಾನಿಕ ದೃಷ್ಟಿಕೋನ ಗಳನ್ನು ಗಮನಿಸಿದಲ್ಲಿ ಇವೆಲ್ಲವೂ ನಿಯಂತ್ರಕನೊಬ್ಬನಿಂದ ನಿಯಂತ್ರಿತವಾಗುತ್ತಿವೆ ಎಂಬುದನ್ನು ಅನುಮಾನ ರಹಿತವಾಗಿ ದೃಢಪಡಿಸುತ್ತವೆ.

ಮನುಷ್ಯನ ಮೇಲೆ ಅತೀತಶಕ್ತಿಯ ನಿಯಂತ್ರಣ: ಮನುಷ್ಯನಿಗೆ ಸಂಬಂಧಿಸಿದ ರಚನೆ ಮತ್ತು ಕ್ರಿಯೆಗಳನ್ನು ಗಮನಿಸಿ
ದಾಗಲೂ ಅತೀತಶಕ್ತಿಯ ನಿಯಂತ್ರಣ ಮನುಷ್ಯನ ಮೇಲೆ ಇರುವುದನ್ನು ಗಮನಿಸಬಹುದಾಗಿದೆ. ಮನುಷ್ಯನ ಸಂತಾ
ನೋತ್ಪತ್ತಿ ಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅತೀತಶಕ್ತಿಯ ಪ್ರಭಾವವನ್ನು ಗುರುತಿಸಬಹುದಾಗಿದೆ. ಜರುಗುವ
ಎಲ್ಲ ಸಂಭೋಗಗಳಲ್ಲೂ ಅಂಡಾಣು ಮತ್ತು ವೀರ್ಯಾಣುವಿನ ಸಂಪರ್ಕವಾಗಿ ಸಂತಾನೋತ್ಪತ್ತಿ ಉಂಟಾಗದೆ ಕೆಲವೊಂದು ಸಂದರ್ಭದ ಸಮ್ಮಿಲನಗಳು ಮಾತ್ರ ಸಂತಾನೋತ್ಪತ್ತಿಗೆ ಕಾರಣವಾಗುತ್ತವೆ.

ಗರ್ಭಧಾರಣೆಯಾದ ದಿನದಿಂದ ಹೆರಿಗೆಯಾಗುವ ದಿನದವರೆವಿಗೂ ಪ್ರತಿನಿತ್ಯ ರೂಪುಗೊಳ್ಳುವ ಗರ್ಭಕೂಸಿನ ರಚನೆ ಪೂರ್ವ
ಭಾವಿಯಾಗಿಯೇ ಯೋಜಿತವಾಗಿದ್ದು, ಆಯಾಯ ಕ್ರಿಯೆಗಳು ಆಯಾಯ ದಿನದಂದೇ ಜರುಗುವಿಕೆ, ಪೂರ್ವಭಾವಿಯಾಗಿ ನಿಗದಿತವಾದ ಹೆರಿಗೆ ದಿನದೊಳಗೆ ಗರ್ಭಕೂಸು ಪೂರ್ಣ ಬೆಳೆದು ಅಂದೇ ಹೆರಿಗೆಯಾಗುವಿಕೆ, ಹುಟ್ಟಿದ ನಂತರ ಆಯಾಯ ಕಾಲಕ್ಕೆ ಮಗುವಿನ ಬೆಳೆವಣಿಗೆಯ ಮೈಲುಗಲ್ಲುಗಳು ಕರಾರುವಕ್ಕಾಗಿ ಜರುಗುವಿಕೆ, ಯೌವ್ವನಾವಸ್ಥೆಯಲ್ಲಿಯೇ ಲೈಂಗಿಕ ಕ್ರಿಯೆಗಳು ಕರಾರುವ ಕ್ಕಾಗಿ ಪ್ರಾರಂಭವಾಗುವಿಕೆ, ವಯೋಮಾನದ ನಿರ್ದಿಷ್ಟ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ನಿರ್ದಿಷ್ಟ ಕಾಲಘಟ್ಟದಲ್ಲಿ ವ್ಯಕ್ತವಾಗುವಿಕೆ, ಪೂರ್ವಭಾವಿಯಾಗಿ ನಿಗದಿತ ದಿನದಂದೇ ಜೀವಕೋಶಗಳ ಸಾಯುವಿಕೆ, ದೇಹದಲ್ಲಿನ ಪೂರ್ವನಿಗದಿತ ಕಾರ್ಯಚಕ್ರಗಳ ಸಮತೋಲಿತ ನಿಯಂತ್ರಣ ಇತ್ಯಾದಿ ಎಲ್ಲ ಕ್ರಿಯೆಗಳು ಕರಾರುವಕ್ಕಾಗಿ ನಿರ್ದಿಷ್ಟ ಕಾಲಘಟ್ಟದಲ್ಲಿ ಜರುಗುವುದನ್ನು ಗಮನಿಸಿದಲ್ಲಿ ಇವೆಲ್ಲವೂ ನಿಯಂತ್ರಕನೊಬ್ಬನಿಂದ ನಿಯಂತ್ರಿತವಾಗುತ್ತಿವೆ ಎಂಬುದನ್ನು ಸೂಚಿಸುತ್ತಿವೆ. ಕಾರಣ ಇವಾವುವುಗಳ ಮೇಲೂ ಮನುಷ್ಯನ ಮನಸ್ಸಿನ ನಿಯಂತ್ರಣವಿಲ್ಲ, ಮತ್ಯಾರ ನಿಯಂತ್ರಣ?

ದೈವಕಣ: ಅತೀತಶಕ್ತಿಯನ್ನು ದೇವರೆಂದು ಸಂಬೋಧಿಸುವ ಪರಿಪಾಠ ಆದಿಕಾಲದಿಂದಲೂ ನಡೆದುಕೊಂಡು ಬಂದಿದೆ.
ಕ್ವಾಂಟಂ ಭೌತಶಾಸದ ಪ್ರಕಾರ ಸೃಷ್ಟಿಯಲ್ಲಿರುವ ಎಲ್ಲವುಗಳೂ ವಸ್ತು ಮತ್ತು ಶಕ್ತಿಗಳ ರೂಪಕಗಳಾಗಿದ್ದು, ಸೃಷ್ಟಿಯ
ಪ್ರತಿಯೊಂದರಲ್ಲೂ ಅತೀತಶಕ್ತಿಯ ಕಣ(ಆತ್ಮ)ವಿದ್ದು, ಅದು ಅತೀತಶಕ್ತಿಯೊಡನೆ ಸಂಪರ್ಕ ಹೊಂದಿರುವುದರಿಂದ ಸೃಷ್ಟಿಯ ಪ್ರತಿಯೊಂದನ್ನೂ ದೈವಕಣವೆಂದು ವ್ಯಾಖ್ಯಾನಿಸುವ ಆಧ್ಯಾತ್ಮಿಕ ಸಿದ್ಧಾಂತ ವೈಜ್ಞಾನಿಕ.

ಹಾಗಾಗಿ ಸೃಷ್ಟಿಯ ಪ್ರತಿಯೊಂದರಲ್ಲೂ ದೇವರನ್ನು ಕಾಣುವ ಮನೋವೃತ್ತಿ ಇದೆ. ಹೀಗಾಗಿ ಅಮೂರ್ತ ಅದೃಶ್ಯ ರೂಪದ ಅತೀತ ಶಕ್ತಿಗೆ ದೃಶ್ಯ ರೂಪದ ಮೂರ್ತಿರೂಪಗಳನ್ನು ನೀಡಿ ಪ್ರತಿಷ್ಠಾಪಿಸಿ ದೇವಾಲಯಗಳನ್ನು ಮಾಡಿ ಪೂಜಿಸಿ ಭಕ್ತಿಯಿಂದ ಕೃತಜ್ಞತೆ ಸಲ್ಲಿಸುವ ಪರಿಪಾಠ ಜನಸಾಮಾನ್ಯರಲ್ಲಿ ಮನೆಮಾಡಿದೆ. ಹೀಗಾಗಿ ಪ್ರಾಣಿ, ಗಿಡ, ಮರ, ನದಿ, ಭೂಮಿ, ಸೂರ್ಯ
ಇತ್ಯಾದಿಗಳನ್ನು ಪೂಜಿಸುವ ಪರಿಪಾಠವಿದೆ. ಆಧ್ಯಾತ್ಮಿಕ ಸಾಧನೆಗಳಿಂದ ದೈವತ್ವವನ್ನು ಮೂಡಿಸಿಕೊಂಡ ಕೆಲವು ಮಾನವರೂ ಸಹ ದೇವಮಾನವರಾಗಿ ಪೂಜಿಸಲ್ಪಡುತ್ತಿದ್ದಾರೆ.

ದೇವಾಲಯಗಳ ಸುತ್ತ ಆಧ್ಯಾತ್ಮಿಕ ಚಿಂತನೆಗಳು ಪ್ರಸರಿಸಿಕೊಂಡಿವೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವೈಜ್ಞಾನಿಕ ಧರ್ಮಾಚರಣೆಗಳನ್ನು ದೇವಾಲಯಗಳ ಸುತ್ತ ಅಂಟಿಸಿ ಪವಿತ್ರ ಆಧ್ಯಾತ್ಮಿಕ ಚಿಂತನೆಗಳನ್ನು ಅಪಮೌಲ್ಯಗೊಳಿಸಿರುವ ಪ್ರಸಂಗಗಳೂ ಇವೆ.

ಭಕ್ತಿಯೋಗ: ಸೃಷ್ಟಿಯ ಇರುವಿಕೆಗೆ ಅತೀತಶಕ್ತಿಯೇ ಕಾರಣವಾಗಿರುವುದರಿಂದ ಅದನ್ನು ಭಕ್ತಿಯಿಂದ ಪೂಜಿಸಿ, ಆರಾಧಿಸಿ, ಕೃತಜ್ಞತೆ ಸಲ್ಲಿಸುವ ಪ್ರಕ್ರಿಯೆಯೇ ಭಕ್ತಿಯೋಗ. ಮನುಷ್ಯನ ಅಸ್ತಿತ್ವ ಮತ್ತು ಎಲ್ಲಾ ಕ್ರಿಯೆಗಳು ಅತೀತಶಕ್ತಿಯ ನಿಯಂತ್ರಣ ದಲ್ಲಿವೆ ಎಂಬ ವೈಜ್ಞಾನಿಕ ಅಂಶವನ್ನು ಅರಿತು ತಾನು ಮಾಡುವ ಎಲ್ಲಾ ಕಾರ್ಯಗಳನ್ನು ದೇವರಿಗೆ ಅರ್ಪಿಸುತ್ತಿದ್ದೇನೆ ಎಂಬ ಕೃತಜ್ಞತಾ ಭಾವನೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ನಕಾರಾತ್ಮಕ ಭಾವಗಳು ಮರೆಯಾಗಿ ಸಕಾರಾತ್ಮಕ ಭಾವಗಳು ಮೇಲುಸ್ತರಕ್ಕೆ ಬಂದು ನಿರಂತರ ನಿರಾಳ ಸ್ಥಿತಿ ಉಂಟಾಗುತ್ತದೆ.

ಅತೀತಶಕ್ತಿ ಇರುವಿಕೆಯ ಬಗ್ಗೆ ಮತ್ತು ಮೇಲೆ ವಿವರಿಸಿದ ವೈಜ್ಞಾನಿಕ ಅಂಶಗಳನ್ನು ಪ್ರಸ್ತುತ ಪಡಿಸುವ ಹಲವಾರು ಶ್ಲೋಕಗಳು ಭಗವದ್ಗೀತೆಯಲ್ಲಿವೆ. ಕೆಲವನ್ನು ಮಾತ್ರ ಇಲ್ಲಿ ಉದಾಹರಿಸಲಾಗಿದೆ.

ಬುದ್ಧಿರ್ಜ್ಞಾನಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ|
ಸುಖಂ ದುಃಖಂ ಭವೋಭಾವೋ ಭಯಂ
ಚಾಭಯಮೇವ ಚ||
ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋಯಶಃ|
ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್‌ವಿಧಾಃ||
(ಅಧ್ಯಾಯ-೧೦, ಶ್ಲೋಕ ೪,೫)

ಪ್ರಪಂಚದಲ್ಲಿ ಬುದ್ಧಿ, ಜ್ಞಾನ, ಭ್ರಾಂತಿಗಳಿಂದ ಬಿಡುಗಡೆ, ಕ್ಷಮೆ, ಸತ್ಯ, ಇಂದ್ರಿಯ ನಿಗ್ರಹ, ಮನೋ ನಿಗ್ರಹ, ಸುಖ ದುಃಖಗಳು, ಹುಟ್ಟು ಸಾವು, ಭಯ ನಿರ್ಭಯ, ತುಷ್ಟಿ, ತಪಸ್ಸು, ದಾನ, ಕೀರ್ತಿ, ಅಪಕೀರ್ತಿ ಜೀವಿಗಳ ಇತ್ಯಾದಿ ಗುಣಗಳನ್ನು ನಾನೇ ಸೃಷ್ಟಿಸಿದ್ದೇನೆ ಎಂಬ ಅಂಶ ಈ ಶ್ಲೋಕದಲ್ಲಿದ್ದು, ಮಾನವನ ರಚನೆ ಮತ್ತು ಕಾರ್ಯಗಳ ಸೃಷ್ಟಿಗೆ ಅತೀತ ಶಕ್ತಿ ಭಗವಂತನೇ ಕಾರಣ ಎಂಬ ವೈಜ್ಞಾನಿಕ ನೋಟವಿದೆ. ಲೋಕದಲ್ಲಿ ಸದ್ಗುಣ ಮತ್ತು ದುರ್ಗುಣಗಳುಳ್ಳ ಮನುಷ್ಯರಿರುವುದು ಇದಕ್ಕೆ ಅನ್ವರ್ಥವಾಗಿದೆ.

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ|
ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ||
(ಅಧ್ಯಾಯ-೧೦, ಶ್ಲೋಕ ೮)

ಭೌತಿಕ ಜಗತ್ತಿನ ಎಲ್ಲವುಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳ ಮೂಲ ನಾನೇ ಆಗಿದ್ದು, ಎಲ್ಲವೂ ನನ್ನಿಂದಲೇ ಪ್ರಸರಿಸುತ್ತವೆ. ಇದನ್ನು ಅರಿತು ನನ್ನ ಭಕ್ತಿ ಸೇವೆಯಲ್ಲಿ ನಿರತರಾದವರು ಹೃದಯ ತುಂಬಿ ನನ್ನಲ್ಲಿ ಭಕ್ತಿಯನ್ನು ಪ್ರದರ್ಶಿಸುತ್ತಾರೆ. ಅಂತಹವ ರಿಗೆ ನನ್ನ ಸ್ಪರ್ಶವಾಗಿ ನಿರಂತರ ಸಂತೋಷದಿಂದಿರುತ್ತಾರೆ ಎಂಬ ಭಗವಂತನ ಹೇಳಿಕೆ ವೈಜ್ಞಾನಿಕವಾಗಿದ್ದು, ಎಲ್ಲರಲ್ಲೂ ದೈವತ್ವದ ಕಣ ಇರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ.

ತೇಷಾಂ ಸತತಯುಕ್ತಾನಾಂ ಭಜತಾಂ
ಪ್ರೀತಿಪೂರ್ವಕರ್ಮ|
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ
ತೇ||(ಅಧ್ಯಾಯ-೧೦, ಶ್ಲೋಕ ೧೦)

ಈ ಶ್ಲೋಕದಲ್ಲಿ ಅತೀತಶಕ್ತಿ ಭಗವಂತನನ್ನು ಸ್ಪರ್ಶಿಸುವ ವಿಧಾನವನ್ನು ವಿವರಿಸಲಾಗಿದೆ. ಪ್ರೀತಿಪೂರ್ವಕ ಸೇವೆಗೆ ಯಾರು ಸದಾ ಮುಡುಪಾಗಿರುವವರೊ ಅವರು ಮಾತ್ರ ನನ್ನ ಸ್ಪರ್ಶಕ್ಕೆ ಬರುತ್ತಾರೆ. ಅಂತಹವರಿಗೆ ಅಗತ್ಯವಾದ ಬುದ್ಧಿಯನ್ನು ನೀಡುತ್ತೇನೆ ಎಂಬ ಅಂಶ ಈ ಶ್ಲೋಕದಲ್ಲಿದೆ. ಮನಸ್ಸನ್ನು ಪ್ರೀತಿ ಭಾವಗಳ ಸೇವೆಯಿಂದ ಕೃಷಿಗೊಳಿಸಿದಲ್ಲಿ ತನ್ನಲ್ಲೇ ಇರುವ ಆತ್ಮ ಸ್ಪರ್ಶವಾಗಿ ತನ್ಮೂಲಕ ಅತೀತಶಕ್ತಿಯ ಅರಿವುಂಟಾಗುತ್ತದೆ ಎಂಬ ವೈಜ್ಞಾನಿಕ ನೋಟ ಈ ಶ್ಲೋಕದಲ್ಲಿದೆ.

ಆಸ್ತಿಕರು ಮತ್ತು ನಾಸ್ತಿಕರಿಬ್ಬರೂ ಸೃಷ್ಟಿಯಲ್ಲಿ ಅತೀತ ಶಕ್ತಿಯ ನಿಯಂತ್ರಣವಿದೆ ಎಂಬುದನ್ನು ಒಪ್ಪುತ್ತಾರೆ. ಆಧ್ಯಾತ್ಮಿಕ ಚಿಂತನೆಯ ಪ್ರಮುಖ ಅರಿವಿದು. ಅತೀತಶಕ್ತಿಯ ಪ್ರಭಾವವು ಅದೃಶ್ಯವಾಗಿದ್ದು, ಅನುಭವೀಯ ಶಕ್ತಿಯಾಗಿರುತ್ತದೆ. ದೈನಂದಿನ ಆಧ್ಯಾತ್ಮಿಕ ಜೀವನಶೈಲಿಯಿಂದ ಮಾತ್ರ ಈ ಅತೀತಶಕ್ತಿಯ ಪ್ರಭಾವವನ್ನು ಗಳಿಸಿಕೊಳ್ಳಲು ಸಾಧ್ಯ. ದೈವತ್ವದ ಅರಿವೊಂದೇ ಮನುಷ್ಯನಲ್ಲಿ ಮೌಲ್ಯಯುತ ಆಧ್ಯಾತ್ಮಿಕ ಚಿಂತನೆಗಳ ಅರಿವನ್ನುಂಟುಮಾಡಿ ಶಾಂತಿಯುತ ಬದುಕಿಗೆ ನಾಂದಿಯಾಗಿ ವಿಶ್ವಶಾಂತಿಗೆ ಬುನಾದಿಯಾಗುತ್ತದೆ.

(ಮುಂದುವರೆಯುತ್ತದೆ)

error: Content is protected !!