Tuesday, 29th September 2020

ಹುಡುಗಾಟವಾಗದಿರಲಿ ಶಾಸನ ರಚನೆ

ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ

ಕ ರ್ನಾಟಕ ಮತ್ತೊಂದು ವಿಧಾನಮಂಡಲ ಅಧಿವೇಶನಕ್ಕೆ ಸಜ್ಜಾಗಿದೆ. ಕರೋನಾ ಆತಂಕದಿಂದ ಅರ್ಧಕ್ಕೆ ನಿಂತಿದ್ದ ಅಧಿವೇಶನ ನಡೆದು ಆರು ತಿಂಗಳು ಕಳೆದರೂ ರಾಜ್ಯದಲ್ಲಿ ಕರೋನಾ ಸಂಖ್ಯೆೆ ಮಾತ್ರ ಇಳಿಕೆಯಾಗಿಲ್ಲ. ದಿನಕ್ಕೆೆ 10 ಸಾವಿರ ಸೋಂಕಿತರು ಕಾಣಿಸಿಕೊಳ್ಳುತ್ತಿರುವ ನಡುವೆಯೇ, ಅಧಿವೇಶನ ನಡೆಸಲು ಸರಕಾರ ಸಜ್ಜಾಗಿದೆ. ಆದರೆ ಈ ಅಧಿವೇಶನದಲ್ಲಿ ಸರಕಾರ ಮಂಡಿ ಸಲು ಉದ್ದೇಶಿರುವ ವಿಧೇಯಕಗಳ ಸಂಖ್ಯೆೆ ಯನ್ನು ನೋಡಿದರೆ ಮಾತ್ರ, ಶಾಸನ ರಚನೆಯ ಮಹತ್ವವೇ ಸರಕಾರ ತಿಳಿಯು ತ್ತಿಲ್ಲವೇ ಎನ್ನುವ ಅನುಮಾನ ಹುಟ್ಟುತ್ತದೆ.

ಹೌದು, ಬರೋಬ್ಬರಿ 32 ವಿಧೇಯಕಗಳನ್ನು ಮಂಡಿಸಲು ಸಿದ್ಧತೆ ನಡೆಸಿಕೊಂಡಿರುವ ಸರಕಾರದ ನಡೆಯನ್ನು ನೋಡಿದರೆ ಈ ಅನುಮಾನ ಹುಟ್ಟುವುದರಲ್ಲಿ ತಪ್ಪಿಲ್ಲ. ಯಾವುದೇ ವಿಧೇಯಕ ಶಾಸನವಾಗುವುದಕ್ಕೆ ಮೊದಲು ಸರಿಯಾದ ರೀತಿಯಲ್ಲಿ ಚರ್ಚೆಯಾಗದೇ ಹೋದರೆ, ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಾಗಬಹುದಾದ ದೊಡ್ಡ ದುರಂತಗಳಲ್ಲಿ ಒಂದು ಎಂದರೆ ತಪ್ಪಾಗುವು ದಿಲ್ಲ.

ಮುಂದಿನ ಸೋಮವಾರದಿಂದ ರಾಜ್ಯದಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದೆ. ಈಗಾಗಲೇ ಸಂಸತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಧಿವೇಶನ ಆರಂಭಗೊಂಡಿದೆ. ಆದ್ದರಿಂದ ಕರ್ನಾಟಕದಲ್ಲಿಯೂ ಅಧಿವೇಶನ ನಡೆಸಲು ಸಿದ್ಧತೆ ನಡೆಸಿ ಕೊಂಡಿದ್ದಾರೆ. ಈ ಬಾರಿ ಕರೋನಾ ಆತಂಕ ಇರುವುದರಿಂದ ಹಲವು ಮುನ್ನೆಚ್ಚರಿಕೆ ವಸಿ ಸದನ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ. ಕರೋನಾ ಆತಂಕದಲ್ಲಿ ಅಧಿವೇಶನ ಕರೆಯುವ ಅಗತ್ಯವೇನಿತ್ತು ಎಂದು ಅನೇಕರು ಪ್ರಶ್ನೆ ಎತ್ತಿದ್ದಾರೆ. ಆದರೆ ಸಂವಿಧಾನದಲ್ಲಿ ಆರು ತಿಂಗಳ ಅಂತರದಲ್ಲಿ ಸದನವನ್ನು ಕರೆಯಬೇಕು ಎನ್ನುವ ಸ್ಪಷ್ಟ ನಿಯಮವಿರುವುದರಿಂದ ಆ ನಿಯಮ ಪಾಲಿಸಬೇಕೆಂಬ ಸಲುವಾಗಿ ಈ ಬಾರಿ ಸದನ ನಡೆಸಲಾಗುತ್ತಿದೆ ಎನ್ನುವ ಮಾತುಗಳು ಆರಂಭದಲ್ಲಿ ಕೇಳಿಬಂದಿತ್ತು. ಆದರೆ ಕೆಲ ದಿನಗಳ ಹಿಂದೆ ವಿಧಾನಸಭಾಧ್ಯಕ್ಷ ಹಾಗೂ ಸರಕಾರದಿಂದ ಈ ಬಾರಿ ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿಧೇಯಕಗಳ ಪಟ್ಟಿಯನ್ನು ನೋಡಿದ ಮೇಲೆ, ‘ಸಮಯವನ್ನು ಬಳಸಿಕೊಂಡು ತಮಗೆ ಬೇಕಾದ ಬಿಲ್ ಪಾಸ್’ ಮಾಡಿಕೊಳ್ಳಲು ಸರಕಾರ ಮುಂದಾಗಿದೆಯೇ ಎನ್ನುವ ಅನುಮಾನಗಳು ಶುರುವಾಗಿದೆ.

ಈ ರೀತಿ ಅನುಮಾನ ಏಕೆ ಶುರುವಾಗಲಿದೆ ಎನ್ನುವುದಕ್ಕೆ ಮೊದಲು ಕೆಲ ಅಂಕಿ – ಅಂಶ ನೀಡಬೇಕಿದೆ. ಸೆ.21ರಿಂದ ಆರಂಭ ವಾಗಲಿರುವ ಅಧಿವೇಶನ 30ರವರೆಗೆ ನಡೆಯಲಿದೆ. ಅಂದರೆ ಹತ್ತು ದಿನ ಅಧಿವೇಶನ ನಡೆಯಲಿದ್ದು, ಇದರಲ್ಲಿ ಶನಿವಾರ ಮತ್ತು ಭಾನುವಾರ ಸರಕಾರಿ ರಜೆಯಿರುವುದರಿಂದ, ಅಧಿವೇಶನ ಇರುವುದಿಲ್ಲ. ಇನ್ನುಳಿದಿರುವುದು ಎಂಟು ದಿನ. ಈ ಎಂಟು ದಿನದಲ್ಲಿ ಶುಕ್ರವಾರ ಅರ್ಧ ದಿನಟ್ಕೆ ಬಹುತೇಕ ಶಾಸಕರು ತಮ್ಮೂರುಗಳಿಗೆ ತೆರಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ‘ಸಂಪ್ರದಾಯ’. ಇದರೊಂದಿಗೆ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ, ಅವರ ಗೌರವಾರ್ಥ ಅರ್ಧದಿನ ಅಥವಾ ಪೂರ್ಣದಿನ ಸದನವನ್ನು ಮುಂದಕ್ಕೆ ಹಾಕುವುದನ್ನು ನಾವೆಲ್ಲ ನೋಡಿದ್ದೇವೆ. ಅಂದರೆ ಯಾವುದೇ ಗದ್ದಲ – ಗಲಾಟೆಯಿಲ್ಲದೇ ಪೂರ್ಣ ಪ್ರಮಾಣದಲ್ಲಿ ಅಧಿವೇಶನ ನಡೆದರೆ, ಐದುವರೆ ದಿನ ಮಾತ್ರ ಅಧಿವೇಶನ ನಡೆಯುತ್ತದೆ.

ಹಲವು ಮಹತ್ವದ ಚರ್ಚೆಗಳಿರುವುದರಿಂದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 10 ಗಂಟೆಗಳ ಮ್ಯಾರಥಾನ್ ಸಭೆ ನಡೆಸಿದರೂ, ಇಡೀ ಸದನ ನಡೆಸಲು ಸರಕಾರಕ್ಕೆ ಸಿಗುವುದು 55ರಿಂದ 60 ಗಂಟೆಗಳು ಮಾತ್ರ. ಇದು ಒಟ್ಟು ಅಧಿವೇಶನ ನಡೆಯುವ ಸಮಯ. ಈ ಸಮಯದಲ್ಲಿ ಸರಕಾರ ಬರೋಬ್ಬರಿ 32 ವಿಧೇಯಕಗಳನ್ನು ಮಂಡಿಸಲು ಸಜ್ಜಾಗಿದೆ. ಈ 32 ವಿಧೇಯಕದಲ್ಲಿ 19 ಸುಗ್ರೀವಾಜ್ಞೆ, 10 ವಿಧೇಯಕ ಹಾಗೂ ಕಳೆದ ಬಾರಿ ಮಂಡನೆಯಾಗಿ ಚರ್ಚೆಯಾಗದೇ ಉಳಿದಿದ್ದ ಮೂರು ವಿಧೇಯಕವನ್ನು ಈ ಬಾರಿ ಚರ್ಚೆ ಮಾಡಿ ಅನುಮೋದನೆ ಪಡೆಯಲು ಸರಕಾರ ನಿರ್ಧರಿಸಿದೆ. ಈ 32 ವಿಧೇಯಕಗಳಲ್ಲಿ ಪ್ರತಿಪಕ್ಷಗಳ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿರುವ, ಎಪಿಎಂಸಿ ತಿದ್ದುಪಡಿ ಕಾಯಿದೆ, ಭೂ ಸುಧಾರಣಾ ಕಾಯಿದೆಯಂತಹ ಪ್ರಮುಖ ಕಾಯಿದೆಗಳೂ ಸೇರಿಕೊಂಡಿವೆ. ಈ ವಿಧೇಯಕಗಳ ಮೇಲೆ ಚರ್ಚಿಸಲು ಪ್ರತಿಪಕ್ಷದ ಶಾಸಕರು ಮಾತ್ರವಲ್ಲದೇ, ಬಿಜೆಪಿಯಲ್ಲಿಯೇ ಇರುವ ಅನೇಕರು ಸಾಧಕ – ಬಾಧಕದ ಬಗ್ಗೆ ಮಾತನಾಡಬೇಕು ಎಂದು ಸಿದ್ಧತೆ ನಡೆಸಿಕೊಂಡಿದ್ದಾರೆ.

ಆದರೆ ಇರುವ 60 ಗಂಟೆಯಲ್ಲಿ ಎಷ್ಟು ಜನರು ಮಾತನಾಡಲು ಸಾಧ್ಯ ಎನ್ನುವುದೇ ಇದೀಗ ಯಕ್ಷಪ್ರಶ್ನೆ. ಈ 60 ಗಂಟೆಯಲ್ಲಿ ಪ್ರಶ್ನೋತ್ತರ, ಶೂನ್ಯ ವೇಳೆಯೆಂದು ಕೆಲ ಗಂಟೆಗಳು ಹೋದರೆ, ಚರ್ಚೆಗೆ ಅವಕಾಶ ಉಳಿಯುವುದೇ ಸುಮಾರು 40 ಗಂಟೆ. ಈ 40 ಗಂಟೆಯಲ್ಲಿ 32 ವಿಧೇಯಕದ ಬಗ್ಗೆ ಮೂರು ಪಕ್ಷದಿಂದ ಮೂವರು ಮಾತನಾಡಿದರೂ ಸಮಯ ಸಾಕಾಗುವುದಿಲ್ಲ. ಆದ್ದರಿಂದ ಯಾವ ರೀತಿ ಈ ಎಲ್ಲವನ್ನು ನಿಭಾಯಿಸಲು ಸಾಧ್ಯ? ಎಲ್ಲ ವಿಧೇಯಕಗಳು ಮಂಡನೆಯಾಗಬೇಕು ಎಂದರೆ, ಶಾಸಕಸಭೆಯಲ್ಲಿಯೇ ಈ ಬಗ್ಗೆೆ ಚರ್ಚೆಯಾಗದೇ ಧ್ವನಿ ಮತದಲ್ಲಿ ಎಲ್ಲರ ಒಪ್ಪಿಗೆಯಿದೆ ಎಂದು ಅನುಮೋದನೆ ಪಡೆಯಬೇಕಾಗುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಇರುವುದೇ, ಶಾಸನಗಳನ್ನು ರಚಿಸಲೆಂದು. ಆಡಳಿತ ಮಾಡುವವರು ಸಿದ್ಧಪಡಿಸುವ ವಿಧೇಯಕಗಳ ಸಾಧಕ – ಬಾಧಕದ ಬಗ್ಗೆ ಪ್ರತಿಪಕ್ಷಗಳು ಮಾತ್ರವಲ್ಲದೇ, ಆಡಳಿತ ಪಕ್ಷದವರು ಟೀಕೆ ಟಿಪ್ಪಣಿ ನೀಡಿ, ಬಳಿಕ ಅನುಮೋದನೆಯಾಗಬೇಕು. ಇದಕ್ಕಾಗಿಯೇ ಸಂವಿಧಾನದಲ್ಲಿ ವಿಧಾನಸಭಾ ಅಥವಾ ಲೋಕಸಭಾ ಅಧಿವೇಶನಗಳಿಗೆ ಅಷ್ಟು ಮಹತ್ವವಿದೆ. ಆದರೆ ಈ ರೀತಿ ಯಾವುದೇ ಚರ್ಚೆಯಾಗದೇ ಶಾಸನ ರಚನೆ ಮಾಡಲು ಸರಕಾರಗಳು ಮುಂದಾದರೆ, ಶಾಸಕಾಂಗ, ಸದನ ಹಾಗೂ ಈ ವ್ಯವಸ್ಥೆಗಿರುವ ಗೌರವ ಎಲ್ಲಿಗೆ ಇಳಿಯುತ್ತದೆ ಎನ್ನುವುದನ್ನು ಯೋಚಿಸಬೇಕಿದೆ.

ಯಾವುದೇ ವಿಧೇಯಕ ಮಂಡನೆಯಾದರೂ, ಕನಿಷ್ಠ 10ರಿಂದ 20 ಶಾಸಕರು ಮಾತನಾಡಬೇಕು. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ಸರಕಾರ ಎಲ್ಲಿ ಎಡವುತ್ತಿದೆ ಎನ್ನುವುದನ್ನು ಪ್ರತಿಪಕ್ಷ ನಾಯಕರು ಹಾಗೂ ಶಾಸಕರು ಎತ್ತಿ ತೋರಿಸಬೇಕು. ಅದಕ್ಕಾಗಿಯೇ ಪ್ರತಿಪಕ್ಷದ ನಾಯಕರನ್ನು “Shadow CM” ಎನ್ನುವುದು. ಆದರೆ ಈ ಬಾರಿಯ ಅಧಿವೇಶನದ ಸಮಯವನ್ನು ನೋಡಿದರೆ, ಪ್ರತಿಪಕ್ಷ ನಾಯಕ ಸಿದ್ದರಾಯಯ್ಯ ಅವರು ಹೋಗಲಿ, ವಿಧೇಯಕ ಮಂಡಿಸುವ ಮುಖ್ಯಮಂತ್ರಿ ಅಥವಾ ಸಚಿವರಿಗೆ ವಿಧೇಯಕದಲ್ಲಿ ಏನಿದೆ ಎನ್ನುವ ಬಗ್ಗೆೆ ಸವಿಸ್ತಾರವಾಗಿ ಮಾತನಾಡಲು ಸಾಧ್ಯವಾಗದ ಸ್ಥಿತಿಯಿದೆ.

ಕರ್ನಾಟಕ ವಿಧಾನಮಂಡಲಕ್ಕೆ ಇಡೀ ದೇಶದಲ್ಲಿ ತನ್ನದೇಯಾದ ಇತಿಹಾಸವಿದೆ. ಉಭಯ ಸದನದಲ್ಲಿ, ನಡೆದಿರುವ ಹಲವು ನಡುವಳಿಕೆಗಳು ಈಗಲೂ ಇತರ ರಾಜ್ಯಗಳ ಅಧಿವೇಶನದ ಮಾದರಿಯಾಗಿದೆ. ಇದರೊಂದಿಗೆ ಕರ್ನಾಟಕದ ವಿಧಾನ ಮಂಡಲ ದಲ್ಲಿ ಹಲವು ಸಂಸದೀಯ ಪಟುಗಳನ್ನು ನಾವೆಲ್ಲ ನೋಡಿದ್ದೇವೆ. ಈ ರೀತಿಯ ಇತಿಹಾಸವಿರುವ ವಿಧಾನಮಂಡಲದಲ್ಲಿ ಪ್ರತಿಯೊಂದು ವಿಧೇಯಕ ಮಂಡನೆಯಾಗುವಾಗ ಹಾಗೂ ಈ ವಿಧೇಯಕಗಳ ಬಗ್ಗೆೆ ದಿನಗಟ್ಟಲೇ ಚರ್ಚೆಗಳು ನಡೆದಿರುವ ನಿರ್ದಶನಗಳು ನಮ್ಮ ಕಣ್ಣ ಮುಂದಿದೆ.

ಒಂದು ಶಾಸನವನ್ನು ರಚಿಸುವುದಕ್ಕೆ ಸುದೀರ್ಘ ಚರ್ಚೆಯಾಗಲು ಕಾರಣವೂ ಇಲ್ಲವೆಂದಲ್ಲ. ಯಾವುದೇ ಒಂದು ಶಾಸನ ಉಭಯ ಸದನದಲ್ಲಿ ಮಂಡನೆಯಾಗಿ ಅನುಮೋದನೆಗೊಂಡರೆ, ಅದು ಕಾನೂನಾಗಿ ಮಾರ್ಪಡುತ್ತದೆ. ಈ ರೀತಿಯ ಕಾನೂನನ್ನು ತಿದ್ದುಪಡಿ ಅಥವಾ ಪ್ರಶ್ನಿಸುವುದಕ್ಕೆ ನ್ಯಾಯಾಂಗ ವ್ಯವಸ್ಥೆಗೂ ಅವಕಾಶವಿಲ್ಲ. ಕೇವಲ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠಕ್ಕೆ ಮಾತ್ರ ಅವಕಾಶವಿರುತ್ತದೆ. ಆದ್ದರಿಂದ ಯಾವುದೇ ಶಾಸನ ರಚನೆಗೆ ಮೊದಲು ಸಾಧಕ – ಬಾಧಕದ ಚರ್ಚೆ ಅಗತ್ಯ. ಆದರೆ
ಇತ್ತೀಚಿನ ದಿನದಲ್ಲಿ ಅನೇಕ ಬಿಲ್‌ಗಳು ಚರ್ಚೆಯಾಗದೇ ಅನುಮೋದನೆಯಾಗುತ್ತಿವೆ. ಪ್ರತಿಪಕ್ಷಗಳ ಗದ್ದಲ, ಗಲಾಟೆ, ಪ್ರತಿಭಟನೆ ವೇಳೆಯೇ ಹಲವು ಶಾಸನಗಳಿಗೆ ಅನುಮೋದನೆ ಪಡೆದಿರುವ ನಿದರ್ಶನ ನಮ್ಮ ಮುಂದಿವೆ.

ಈ ಹಿಂದೆ ಕರ್ನಾಟಕ ವಿಧಾನಮಂಡಲದಲ್ಲಿ ಒಂದು ವಿಷಯವನ್ನಿಟ್ಟುಕೊಂಡು ಗಂಟೆಗಟ್ಟಲೇ ಮಾತನಾಡಿದ ನಿರ್ದಶನವಿದೆ. ಜೆ.ಎಚ್ ಪಟೇಲ್, ರಾಮಕೃಷ್ಣ ಹೆಗಡೆ, ಎಚ್.ಡಿ ದೇವೇಗೌಡರು, ದೇವರಾಜ ಅರಸು, ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸ್ಪೀಕರ್ ಆಗಿದ್ದ ನಾಗರತ್ನಮ್ಮರಂಥ ಸಂಸದೀಯ ಪಟುಗಳನ್ನು ಕಂಡಿದ್ದೇವೆ. ಇವರಷ್ಟೇ ಅಲ್ಲದೇ ಈಗಲೂ ಸದನದ ಭಾಗ ವಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರುಗಳು ಒಂದು ವಿಷಯದ ಮೇಲೆ ಗಂಟೆ ಗಟ್ಟಲೇ ನಿರರ್ಗಳವಾಗಿ ಮಾತನಾಡಿರುವುದಕ್ಕೆ ಸದನ ಸಾಕ್ಷಿಯಾಗಿದೆ. ಆದರೀಗ 32 ವಿಧೇಯಕಗಳನ್ನು ಮಂಡಿಸಲು 60 ಗಂಟೆ ನೀಡಿರುವುದನ್ನು ನೋಡಿದರೆ, ಸಿದ್ದರಾಮಯ್ಯ ಅವರಿಗೆ ಸಮಯ ಸಾಕಾಗುವುದಿಲ್ಲ.

ಈ ಎಲ್ಲವನ್ನು ನೋಡಿಕೊಂಡೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಸದನವನ್ನು 15 ರಿಂದ 20 ದಿನಗಳ ಕಾಲ ವಿಸ್ತರಣೆ ಮಾಡುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಲು ಸಾಲು ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆದ ಕೂಡಲೇ ಸದನವನ್ನು ವಿಸ್ತರಿಸುವುದಿಲ್ಲ ಎನ್ನುವುದು ರಾಜಕೀಯ ಒಳಹೊರ ಅರಿತ ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಆದರೆ ಕೇವಲ ಸಾಂವಿಧಾನಿಕ ಸಮಸ್ಯೆಯಿಂದ ತಪ್ಪಿಸಿ ಕೊಳ್ಳುವುದಕ್ಕೆೆ ಅಧಿವೇಶನ ನಡೆಸಿ, ಇದರಲ್ಲಿ ಪ್ರಮುಖ ಶಾಸನಗಳು ಚರ್ಚೆಯಾಗದೇ ಪಾಸ್ ಆಗುವುದು ಸಹ ಮುಂದಿನ ತಲೆಮಾರಿಗೆ ನೀಡುವ ಉತ್ತಮ ಪಾಠವಲ್ಲ ಎನ್ನುವುದು ಆಡಳಿತ ನಡೆಸುವವರು ತಿಳಿಯಬೇಕಿದೆ.

ಇನ್ನು ಈ ಬಾರಿ ಅಧಿವೇಶನದಲ್ಲಿ ಕಾರ್ಯಕಲಾಪಕ್ಕಿಂತ ಹೆಚ್ಚು ಡ್ರಗ್ ಮಾಫಿಯಾ, ಕರೋನಾ ಅವ್ಯವಹಾರ, ನೆರೆ ಹಾವಳಿ, ಡಿ.ಜೆ ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಸದ್ದು ಜೋರಾಗಿರುತ್ತದೆ ಎನ್ನುವುದು ಅಲಿಖಿತ ನಿಯಮ. ಈ ವಿಷಯಗಳಲ್ಲಿಯೇ ಇರುವ ಐದುವರೆಯಿಂದ ಆರುವರೆ ದಿನದಲ್ಲಿ ಶೇ.50ರಷ್ಟು ವ್ಯರ್ಥವಾಗಲಿದೆ ಎನ್ನುವುದು ಒಪನ್ ಸಿಕ್ರೇಟ್. ಅದರಲ್ಲೂ ಡ್ರಗ್ ಮಾಫಿಯಾದ ಪ್ರಕರಣ ಹಾಗೂ ಡಿ.ಜೆ ಹಳ್ಳಿ, ಕೆ.ಜಿ. ಹಳ್ಳಿ ಪ್ರಕರಣ ಚರ್ಚೆಗಿಂತ ಹೆಚ್ಚು ಆಡಳಿತ-ಪ್ರತಿಪಕ್ಷಗಳ ಆರೋಪ ಪ್ರತ್ಯಾರೋಪದ ವಸ್ತುಗಳಾಗಲಿವೆ ಎನ್ನುವುದು ಸ್ಪಷ್ಟವಾಗಿದೆ. ಇದೇ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರು
ಮೊದಲ ದಿನದಿಂದಲೇ ಸರಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನುವುದು ಈಗಾಗಲೇ ಸ್ಪಷ್ಟ ವಾಗಿದೆ. ಆದ್ದರಿಂದ ಕಾರ್ಯಕಲಾಪ ಪಟ್ಟಿಯಂತೆ ಈ ಬಾರಿ ಸದನ ನಡೆಯುವುದೇ ಅನುಮಾನ ಎನ್ನುವ ಮಾತುಗಳನ್ನು ಅನೇಕರು ಹೇಳುತ್ತಿದ್ದಾರೆ. ಈ ಗದ್ದಲ, ಗಲಾಟೆಯಲ್ಲಿ ಸರಕಾರ 32 ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರೆ ಆ ಶಾಸನಕ್ಕೆ ಮಹತ್ವ ಎಲ್ಲಿರುತ್ತದೆ.

ಪ್ರಮುಖ ಶಾಸನಗಳನ್ನು ಮಂಡಿಸಿದಾಗ, ಹೆಚ್ಚೆಚ್ಚು ಶಾಸಕರಿಗೆ ಮಾತನಾಡಲು ಅವಕಾಶ ನೀಡಿ, ಅವರಿಂದ ಸಲಹೆಗಳನ್ನು ಪಡೆದುಕೊಂಡು ಶಾಸನವನ್ನು ರಚಿಸುವುದರಿಂದ ಮಾತ್ರ, ಭವಿಷ್ಯದಲ್ಲಿ ಜನರಿಗೆ ಸಹಾಯವಾಗುತ್ತದೆ. ಇಲ್ಲದಿದ್ದರೆ, ಹಲವು ಲೋಪಗಳೊಂದಿಗೆ ಆಗುವ ಶಾಸನಕ್ಕೆ ಪುನಃ ತಿದ್ದುಪಡಿ ಎನ್ನುವ ತೇಪೆ ಹಚ್ಚುವ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಯಾವುದೇ ಶಾಸನ ರಚನೆಯನ್ನು ಮಾಡುವ ಮೊದಲು ಸದನದಲ್ಲಿ ದೀರ್ಘ ಚರ್ಚೆಗಳು ಆಗಬೇಕು. ಸಂಸತ್ ಅಥವಾ ವಿಧಾನ ಸಭೆಯಲ್ಲಿ ಹೆಚ್ಚು ಚರ್ಚೆಗಳು ಆದಷ್ಟು ದೇಶದಲ್ಲಿ ಉಪಯೋಗವೆಂದು ಎನ್ನುವುದನ್ನು ಮರೆಯಬಾರದು.

ಹಾಗೇ ನೋಡಿದರೆ ಕರ್ನಾಟಕ ವಿಧಾನಮಂಡಲ ಅಧಿವೇಶನ ಕನಿಷ್ಠ 60 ದಿನಗಳ ಕಾಲ ನಡೆಯಬೇಕು ಎನ್ನುವ ನಿಯಮ ಜಾರಿಗೆ ಬಂದು ಹಲವು ವರ್ಷಗಳೇ ಕಳೆದಿವೆ. ಆದರೆ ಬಹುತೇಕ ವರ್ಷ ಈ ನಿಯಮವನ್ನು ಯಾವ ಸರಕಾರಗಳು ಪಾಲಿಸಿಲ್ಲ. 50ರಿಂದ 52 ದಿನಗಳ ಕಾಲ ಅಧಿವೇಶನ ನಡೆಸುವುದರಲ್ಲಿಯೇ ಸರಕಾರಗಳು ಸುಸ್ತಾಗುತ್ತವೆ ಎನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಕಾಗೇರಿ ಅವರು ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ, 60 ದಿನ ಅಧಿವೇಶನ ನಡೆಸುವ ಸಂಕಲ್ಪವನ್ನು ಹೊತ್ತಿದ್ದರು.

ಇದಕ್ಕಾಗಿ, ಮೊದಲ ಅಧಿವೇಶನದಲ್ಲಿಯೇ 30 ದಿನ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೀಗ ಕರೋನಾದಿಂದ ಗುರಿ
ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಇದೀಗ ಸಾಂವಿಧಾನಿಕ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಮುಂಗಾರು ಅಧಿವೇಶನ ಆರಂಭಿಸಿ ದ್ದಾರೆ. ಈ ಸಮಯದಲ್ಲಿ ಹೆಚ್ಚೇನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶ. ಆದರೆ ಈ ಕಡಿಮೆ ಅವಧಿಯಲ್ಲಿ 32 ವಿಧೇಯಕ, 1500ಕ್ಕೂ ಹೆಚ್ಚು ಪ್ರತಿಪಕ್ಷದ ಪ್ರಶ್ನೆಗೆ ಉತ್ತರ, ವಿವಿಧ ನಿಯಮದಡಿ ಚರ್ಚಿಸಬೇಕಿರುವ ವಿಷಯ ಸಾಧ್ಯವಿಲ್ಲ. ಆದ್ದರಿಂದ ತುರ್ತು ಜಾರಿಯಾಗಬೇಕಿರುವ ವಿಧೇಯಕಗಳನ್ನು ಮಾತ್ರ ಮಂಡಿಸಬಹುದು. ಎಪಿಎಂಸಿ ತಿದ್ದುಪಡಿ ಕಾಯಿದೆ, ಭೂಸುಧಾರಣಾ ಕಾಯಿದೆಯಂಥ ವಿಷಯಗಳನ್ನು ಇನ್ನಷ್ಟು ಚರ್ಚೆಯ ಬಳಿಕ ಅನುಮೋದನೆ ಪಡೆಯುವುದು ಉತ್ತಮ.

ಈ ನಡುವೆ ಪ್ರತಿಪಕ್ಷಗಳು ತಿಂಗಳುಗಟ್ಟಲೇ ಅಧಿವೇಶನ ನಡೆಸಿ ಎನ್ನುವ ವಾದವನ್ನು ಪೂರ್ಣವಾಗಿ ಒಪ್ಪಿಿಕೊಳ್ಳಲು ಈ
ಸಮಯದಲ್ಲಿ ಆಗುವುದಿಲ್ಲ. ಕರೋನಾ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಈ ಆತಂಕದ ಸಮಯದಲ್ಲಿ ತಿಂಗಳು ಗಟ್ಟಲೇ ಅಧಿವೇಶನ ನಡೆಸಿದರೆ, ಸದನದಲ್ಲಿ ಭಾಗವಹಿಸುವ ಕೆಲವರಿಗೆ ಕರೋನಾ ಸೋಂಕು ಹಬ್ಬುವ ಆತಂಕವನ್ನು ಸಾರ ಸಗಟಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ.

ವಿಧಾನಸಭಾಧ್ಯಕ್ಷ ಕಾಗೇರಿ ಅವರು 72 ಗಂಟೆ ಮೊದಲು ಕೋವಿಡ್ ಟೆಸ್ಟ್‌ ಮಾಡಿಸಿಕೊಂಡು ಅಧಿವೇಶನದೊಳಗೆ ಕಾಲಿಡಬೇಕು ಎಂದಿರುವುದು ಸಹ, ಇದೇ ಕಾರಣಕ್ಕೆ. ಕರೋನಾ ಒಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಹಲವು ದಿನಗಳ ಬಳಿಕ ಲಕ್ಷಣ ಶುರು ವಾಗುತ್ತದೆ. ಕೇವಲ 9 ದಿನದ ಮಟ್ಟಿಗೆ ಅಧಿವೇಶನ ನಡೆಸುವುದರಿಂದ, ಸೋಂಕು ಹಬ್ಬುವ ಪ್ರಮಾಣ ತಗ್ಗಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಸರಕಾರವಿದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು, ಬಾಕಿಯಿರುವ ಎಲ್ಲ ಬಿಲ್‌ಗಳನ್ನು ಪಾಸ್ ಮಾಡಿಕೊಳ್ಳು ವುದು ಪ್ರಜಾಪ್ರಭುತ್ವ ಸರಕಾರಗಳು ನಡೆದುಕೊಳ್ಳುವ ನಡೆಯಲ್ಲ ಎನ್ನುವುದನ್ನು ಒಪ್ಪಲೇಬೇಕು.

ಕರೋನಾ ಆತಂಕ, ಸಂವಿಧಾನದ ಬಿಕ್ಕಟ್ಟು ಹಾಗೂ ಸರಕಾರ ನಡೆಸುವ ಬಿಕ್ಕಟ್ಟು ಸೇರಿದಂತೆ ಎಲ್ಲವನ್ನು ಒಟ್ಟುಗೂಡಿಸಿ ಕೊಂಡು ಅಧಿವೇಶನ ನಡೆಸಬೇಕಿರುವುದರಿಂದ, ಎಲ್ಲವಕ್ಕೂ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಸರಕಾರ ಹಾಗೂ ಸಭಾಧ್ಯಕ್ಷ ಕಚೇರಿಯ ವಾದವನ್ನು ಒಪ್ಪಲೇಬೇಕು. ಅಂದಮಾತ್ರಕ್ಕೆ ಈ ಸಮಯದಲ್ಲಿ ತಿಂಗಳುಗಟ್ಟಲೇ ಅಧಿವೇಶನ ನಡೆಸುವುದು ಕಷ್ಟಸಾಧ್ಯ.

ಆದರೆ ಇದೊಂದೆ ನೆಪವಾಗಿಟ್ಟುಕೊಂಡು, ಎಲ್ಲ ವಿಧೇಯಕ ಗಳನ್ನು ಪಾಸ್ ಮಾಡಿಕೊಳ್ಳುವುದು ಸರಿಯಲ್ಲ. ಪ್ರತಿ ಶಾಸನ
ರಚನೆಯೂ ಇತಿಹಾಸದ ಪುಟ ಸೇರುತ್ತವೆ. ಆದ್ದರಿಂದ ಸರಕಾರ, ತುರ್ತು ಅಗತ್ಯವಿರುವ ಹಾಗೂ ಆರ್ಥಿಕ ಅನುಮೋದನೆಯಂಥ ಜರೂರು ವಿಧೇಯಕಗಳನ್ನು ಮಾತ್ರ ಮಂಡಿಸುವುದು ಸೂಕ್ತ. ಈ ಬಗ್ಗೆ ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ.

Leave a Reply

Your email address will not be published. Required fields are marked *